Now Reading
ನೀರಿನಲ್ಲಿ, ಆಕಾಶದಲ್ಲಿ, ಎಲ್ಲೆಲ್ಲೂ ವಿಕಾಸದ ದ್ವೀಪಗಳು

ನೀರಿನಲ್ಲಿ, ಆಕಾಶದಲ್ಲಿ, ಎಲ್ಲೆಲ್ಲೂ ವಿಕಾಸದ ದ್ವೀಪಗಳು

ಹಿನ್ನೆಲೆಯಲ್ಲಿರುವ ಕಾನನ ಹಾಗೂ ಹುಲ್ಲುಗಾವಲುಗಳ ಜೊತೆಗೆ ಮುನ್ನೆಲೆಯಲ್ಲಿ ಇರುವ ಚಹಾ ತೋಟದಂತಹ ಮನುಷ್ಯ ನಿರ್ಮಿತ ಪರಿವರ್ತಿತ ವನಗಳು ಮೊದಲಾದ ಸಹಜ ಜೀವಿನೆಲೆಗಳೂ ಬೆಸೆದುಕೊಂಡು ಆದ ನಮ್ಮ ಪಶ್ಚಿಮಘಟ್ಟದ ಮುಗಿಲು ಮುಟ್ಟುವ ಕಾಡುಗಳು. ಜೀವಿನೆಲೆಗಳು ಆಕಾಶದ್ವೀಪಗಳು ಎನ್ನುವ ಗಿರಿಶಿಖರಗಳಲ್ಲಿ ಪ್ರತ್ಯೇಕವಾಗಿರುವ ಜೀವಿನೆಲೆ. ಚಿತ್ರ: ಪ್ರಸನ್ನಜಿತ್ಯಾದವ್‌, ಮುನ್ನಾರ್ 

ಸಂಪುಟ 4 ಸಂಚಿಕೆ 308, ಆಗಸ್ಟ್‌ 8, 2021
&
ಸಂಪುಟ 4 ಸಂಚಿಕೆ 309, ಆಗಸ್ಟ್‌ 9, 2021

ಜಾಣ ಅರಿಮೆ

ವಿಸ್ಮಯಕ್ಕಿಂತ ವಿಸ್ಮಯ 24

Kannada translation by Kollegala Sharma

§

ದ್ವೀಪಗಳು ಎಂದರೆ ಪದಶಃ ನೀರಿನಿಂದ ಆವೃತವಾದ ನೆಲ ಹಾಗೂ ಮಾರ್ಮಿಕವಾಗಿ ಯಾವುದರಿಂದಲೋ ಸುತ್ತುವರಿದ ಫಲವಾಗಿ ಬೇರೆಯಾಗಿಬಿಟ್ಟ ಇನ್ನೇನೋ. ಇವೆರಡೂ ವಿಕಾಸ ಎನ್ನುವ ಪ್ರಕ್ರಿಯೆ ಹಾಗೂ ಅದನ್ನು ನಾವು ಅಧ್ಯಯನ ಮಾಡುವ ರೀತಿಯಲ್ಲಿ ಪ್ರಮುಖ ಪಾತ್ರಧಾರಿಗಳು. ಪ್ರತ್ಯೇಕವಾಗಿರುವ ಕಾರಣದಿಂದಲೇ, ದ್ವೀಪಗಳು ವಿಕಾಸವೆಂಬ ಬದಲಾವಣೆ ಹಾಗೂ, ಹೊಸ ಪ್ರಭೇದಗಳ ಹುಟ್ಟು ಬಿರುಸಾಗಿ ಆಗಲು ಹಾದಿ ಮಾಡಿಕೊಟ್ಟು, ದೊಡ್ಡ ಭೂಖಂಡಗಳಲ್ಲಿ ಅಸಾಧ್ಯವೆನ್ನಿಸುವ ವಿಕಾಸದಮಾದರಿಪ್ರಯೋಗಗಳು ನಡೆಯಲು ನೆರವಾಗುತ್ತವೆ. ದ್ವೀಪಗಳ ಪುಟ್ಟ ಗಾತ್ರವೇ ವಿಕಾಸದ ಪ್ರಕ್ರಿಯೆಗಳನ್ನು ಪತ್ತೆ ಮಾಡಿ, ವಿಕಾಸದ ಫಲವನ್ನು ದಾಖಲಿಸಲು ನಮಗೆ ಅನುಕೂಲಿಯಾಗುತ್ತದೆ. ಹೀಗಾಗಿ ವಿಕಾಸದ ಅಧ್ಯಯನದಲ್ಲಿ ದ್ವೀಪಗಳ ಭೌಗೋಳಿಕಜೀವಿವಿಜ್ಞಾನ ಎನ್ನುವುದಕ್ಕೆ ವಿಶೇಷ ಸ್ಥಾನವಿದೆ

ನಿಸರ್ಗದ ಆಯ್ಕೆಯಿಂದ ವಿಕಾಸದ ಪ್ರಕ್ರಿಯೆ ನಡೆಯುತ್ತದೆ ಎನ್ನುವ ತತ್ವವನ್ನು ಪತ್ತೆ ಮಾಡಿದ ಇಬ್ಬರೂ ಸಂಶೋಧಕರಾದ ಚಾರ್ಲ್ಸ್ಡಾರ್ವಿನ್ಮತ್ತು ಆಲ್ಫ್ರೆಡ್ರಸೆಲ್ವ್ಯಾಲೇಸ್‌, ವಿಕಾಸ ವಿಜ್ಞಾನಿಗಳು ಎಂದು ಪ್ರಸಿದ್ಧಿಯಾಗುವುದಕ್ಕೂ ಮುನ್ನ ದ್ವೀಪಗಳ ಭೌಗೋಳಿಕಜೀವ ವಿಜ್ಞಾನಿಗಳಾಗಿದ್ದರು. ಅನುಕ್ರಮವಾಗಿ ಗ್ಯಾಲಪಗೋಸ್ದ್ವೀಪಗಳು ಹಾಗೂ ಮಲಯ ದ್ವೀಪಸಮೂಹಗಳಿಗೆ ಪ್ರವಾಸ ಹೋಗಿ ಬಹಳ ಮುಖ್ಯವಾದ ಸುಳಿವುಗಳನ್ನು ಪಡೆದಿದ್ದರು

ದ್ವೀಪ ಭೌಗೋಳಿಕ ಜೀವಿವಿಜ್ಞಾನದ ತತ್ವಗಳು 

ರಾಬರ್ಟ್ಎಚ್‌. ಮ್ಯಾಕ್ಆರ್ಥರ್ಎನ್ನುವ ಪರಿಸರ ತತ್ವವಿಜ್ಞಾನಿ, ಹಾಗೂ ಎಡ್ವರ್ಡ್ ವಿಲ್ಸನ್ಅನ್ನುವ ಅನುಪಮ ಪ್ರಕೃತಿ ವಿಜ್ಞಾನಿ ಜೊತೆಯಾಗಿ, ೧೯೬೦ರ ದಶಕದಲ್ಲಿ ಈಗ ಜನಪ್ರಿಯವಾಗಿರುವ ದ್ವೀಪಗಳ ಭೌಗೋಳಿಕ ಜೀವಿವಿಜ್ಞಾನ ಎನ್ನುವ ಥಿಯರಿಯನ್ನು ಪ್ರತಿಪಾದಿಸಿದಂದಿನಿಂದ ದ್ವೀಪಗಳ ಭೌಗೋಳಿಕಜೀವಿ ವಿಜ್ಞಾನ ಎನ್ನುವ ಕ್ಷೇತ್ರ ಬೆಳೆಯುತ್ತಲಿದೆಮ್ಯಾಕ್ಆರ್ಥರ್ ಮತ್ತು ವಿಲ್ಸನ್ ಇಬ್ಬರ ಸ್ಫೂರ್ತಿದಾಯಕ ಪರಂಪರೆ ಅವರ ಸಿದ್ಧಾಂತ ವನ್ನೂ ಮೀರಿದೆ.

Left: Robert H. MacArthur (1930-1972). Photo: Wikipedia Commons, fair use. Right: Edward O. Wilson (1929-). Photo: Jim Harrison/PLoS, CC BY 2.5.

ಎಡ: ರಾಬರ್ಡ್ಎಚ್.‌ ಮ್ಯಾಕ್ಆರ್ಥರ್ (1930-1972). ಚಿತ್ರ: ವೀಕಿಪೀಡಿಯಾ ಕಾಮನ್ಸ್. ಬಲ: ಎಡ್ವರ್ಡ್. ವಿಲ್ಸನ್‌ (1929-). ಫೋಟೋ: ಜಿಮ್ಹ್ಯಾರಿಸನ್‌ /PLoS, CC BY 2.5.

ಮ್ಯಾಕ್ಆರ್ಥರ್ಜಿಯಾಗ್ರಾಫಿಕಲ್ಎಕಾಲಜಿ (1972) ಎನ್ನುವ ಉದ್ಗ್ರಂಥವನ್ನು ಬರೆದಿದ್ದ. ವೆರ್ಮಂಟಿನಲ್ಲಿ ಖಾಯಿಲೆಯಿಂದ ನರಳುತ್ತಿರುವಾಗ, ಸಾಯುವುದಕ್ಕೆ ಸ್ವಲ್ಪವೇ ಮುನ್ನ, ಯಾವುದೇ ಪುಸ್ತಕಗಳೂ, ಗ್ರಂಥಾಲಯವೂ ಇಲ್ಲದಾಗ ಕೇವಲ ತನ್ನ ನೆನಪಿನಿಂದಲೇ ಇದನ್ನು ಬರೆದಿದ್ದ. ಪುಸ್ತಕದ ಮುನ್ನುಡಿಯಲ್ಲಿ ಆತ ಬರೆದಿದ್ದ ಕೆಲವು ಮಾತುಗಳು ನನ್ನ ಸ್ಮರಣೆಯಲ್ಲಿ ಅಚ್ಚಳಿಯದೆ ಉಳಿದಿವೆ

ವಿಜ್ಞಾನ ಎಂದರೆ ಎಲ್ಲರೂ ಹೇಳುವಂತ ಭಾವನೆಗಳನ್ನು ಅದುಮಿಡುವಂಥದ್ದೋ, ಮಾನವೀಯತೆಯನ್ನು ಮರೆಸುವಂಥದ್ದೋ ಅಲ್ಲ. ವಿಜ್ಞಾನದ ಅರಿವಿನಿಂದ ನಿಸರ್ಗದ ಸೌಂದರ್ಯ ಕುಗ್ಗುವುದಿಲ್ಲ. ಪ್ರಾಮಾಣಿಕ ವೀಕ್ಷಣೆಗಳೂ ಹಾಗೂ ನಿಖರವಾದ ತರ್ಕಗಳಷ್ಟೆ ವಿಜ್ಞಾನಕ್ಕೆ ಒಪ್ಪುವ ನಿಯಮಗಳು. ವಿವೇಚನೆ ಯಾವುದನ್ನು ಅಧ್ಯಯನ ಮಾಡಬೇಕೆನ್ನುವ ಒಂದು ರೀತಿಯ ಒಳತೋಟಿಯಷ್ಟೆ ಉತ್ತಮ ವಿಜ್ಞಾನ ಏನೆಂಬುದನ್ನು ತೀರ್ಮಾನಿಸುತ್ತದೆ. ಪ್ರಾಮಾಣಿಕತೆ ಹಾಗೂ ನಿಖರವಾದ ಅಧ್ಯಯನಗಳು ರೂಪಿಸಿದ ಕಲ್ಪನೆಗಳೂ ನಿಸರ್ಗದ ಸೌಂದರ್ಯವನ್ನು ಕಸಿದುಕೊಳ್ಳಲಾರವು.”

ಪ್ರಪಂಚ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೇನು ಎಂದು ಕೇಳಿದಾಗ . . ವಿಲ್ಸನ್ಹೀಗೆ ಹೇಳಿದ್ದಾರೆ

ಮುಂದೆ ಬರಬಹುದಾದ ಅತಿ ಕೆಟ್ಟ ದುರಂತಗಳೆಂದರೆ ಶಕ್ತಿಯ ಕ್ಷಯವೋ, ಆರ್ಥಿಕ ಕುಸಿತವೋ, ಸಣ್ಣದೊಂದು ಪರಮಾಣು ಯುದ್ಧವೋ, ಅಥವಾ ಸರ್ವಾಧಿಕಾರ ಆಡಳಿತವೋ ಅಲ್ಲ. ಇವು ಬಹಳ ಕೆಟ್ಟ ದುರಂತಗಳೆನ್ನಿಸಿದರೂ ಕೂಡ, ಕೆಲವೇ ಪೀಳಿಗೆಗಳ ಅವಧಿಯಲ್ಲಿ ಸರಿಹೊಂದಿಸಿಕೊಳ್ಳಬಹುದು. ಆದರೆ ೧೯೮೦ರ ದಶಕದಿಂದ ನಡೆಯುತ್ತಿರುವ ಒಂದುಕ್ರಿಯೆ, ನೈಸರ್ಗಿಕ ನೆಲೆಗಳ ನಾಶದಿಂದಾಗಿ ಆಗುತ್ತಿರುವ ಜೀವಿಪ್ರಭೇದಗಳೂ ಹಾಗೂ ತಳಿಗಳಲ್ಲಿನ ವೈವಿಧ್ಯದ ನಷ್ಟವನ್ನು ಸರಿಪಡಿಸಲು ಕೋಟ್ಯಂತರ ವರ್ಷಗಳು ಬೇಕಾಗುತ್ತವೆ. ನಮ್ಮ ಮುಂದಿನ ಪೀಳಿಗೆಯವರು ತಪ್ಪಿಗಾಗಿ ನಮ್ಮನ್ನು ಕ್ಷಮಿಸುವ ಸಾಧ್ಯತೆ ಬಹಳ ಕಡಿಮೆ.”  

ಮ್ಯಾಕ್ಆರ್ಥರ್ಮತ್ತು ವಿಲ್ಸನ್ನರು ಒಟ್ಟಾಗಿದ್ದು ನಮ್ಮ ಅದೃಷ್ಟ. ಅವರಿಬ್ಬರೂ ಕೂಡಿ ಒಂದು ಸರಳವಾದ, ಸುಂದರವಾದ ತರ್ಕವೊಂದನ್ನು ಮಂಡಿಸುವ, ಮೈಲಿಗಲ್ಲೆನ್ನಿಸುವ ಪ್ರಬಂಧವೊಂದನ್ನು  1963ರಲ್ಲಿ ಹಾಗೂ ಪ್ರಭಾವಶಾಲಿ ಪುಸ್ತಕವೊಂದನ್ನು 1967ರಲ್ಲಿ ಪ್ರಕಟಿಸಿದರು

ತಾವು ಗಮನಿಸಿದ ವಿನ್ಯಾಸಗಳು, ಕೆಲವು ಸರಳ ಊಹೆಗಳು, ಹಾಗೂ ಗಣಿತ ಮಾದರಿಗಳ ಫಲಿತಾಂಶಗಳನ್ನು ತಮ್ಮ ಅರಿವಿನೊಂದಿಗೆ ಸೇರಿಸಿ ಮ್ಯಾಕ್ಆರ್ಥರ್ಮತ್ತು ವಿಲ್ಸನ್ದ್ವೀಪವೊಂದರ ಮೇಲೆ ಇರುವ ಜೀವಿ ಪ್ರಭೇದಗಳ ಸಂಖ್ಯೆಯು ಎರಡು ವಿರುದ್ಧ ಬಲಗಳ ಫಲವೆಂದು ವಾದಿಸಿದರು. ದ್ವೀಪದ ಮೇಲೆ ಮೊದಲೇ ಹೆಚ್ಚು ಸಂಖ್ಯೆಯ ಪ್ರಭೇದಗಳು ಇದ್ದಲ್ಲಿ, ಅದಕ್ಕೆ ಬಹಳ ಸಮೀಪದಲ್ಲಿರುವ ಭೂಖಂಡದಿಂದ ವಲಸೆ ಬರುವ ಪ್ರಭೇದಗಳ ಸಂಖ್ಯೆ ಕಡಿಮೆ ಇರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ದ್ವೀಪದಲ್ಲಿ ಹೆಚ್ಚೆಚ್ಚು ಪ್ರಭೇದಗಳು ಇದ್ದಷ್ಟೂ, ಪ್ರಭೇದಗಳು ಅಳಿದು ಹೋಗುವ ಸಾಧ್ಯತೆಗಳು ಹೆಚ್ಚಾಗುತ್ತದೆ. ಹೀಗೆ ವಲಸೆ ಹಾಗೂ ಅಳಿವಿನ ನಡುವಣ ಸಮತೋಲದಿಂದಾಗಿ ದ್ವೀಪದ ಮೇಲಿನ ಪ್ರಭೇದಗಳ ಸಂಖ್ಯೆ ಸ್ಥಿರವಾಗಿರಬೇಕು ಎಂದು ಊಹಿಸಬಹುದು. (ಚಿತ್ರ 1) 

ಇದನ್ನೇ ದ್ವೀಪ ಭೌಗೋಳಿಕ ಜೀವಿವಿಜ್ಞಾನದ ಸಮಸ್ಥಿತಿಯ ಮಾದರಿ ಅಥವಾ ಈಕ್ವಿಲಿಬ್ರಿಯಂ ಮಾಡೆಲ್ಎಂದು ಹೇಳುತ್ತಾರೆ

ಮೂಲ ತತ್ವವನ್ನೇ ಸ್ವಲ್ಪ ವಿಸ್ತರಿಸಿದರೆ, ಪ್ರಧಾನ ಭೂಖಂಡದಿಂದ ದ್ವೀಪಗಳು ದೂರ ದೂರವಿದ್ದಷ್ಟೂ, ವಲಸೆಯ ಗತಿ ನಿಧಾನವಾಗಿರುತ್ತದೆ. ಆದರೆ ಪ್ರಧಾನ ಭೂಖಂಡ ಎಷ್ಟು ದೂರದಲ್ಲಿದೆ ಎನ್ನುವುದು ದ್ವೀಪದಲ್ಲಿ ಆಗುವ ಅಳಿವಿನ ದರವನ್ನು ಬಾಧಿಸುವುದಿಲ್ಲ. ಹೀಗೆ, ಪ್ರಧಾನ ಭೂಖಂಡಕ್ಕೆ ಸಮೀಪವಿರುವ ದ್ವೀಪಗಳಲ್ಲಿ ಜೀವಿಪ್ರಭೇದಗಳ ಸಂಖ್ಯೆ, ದೂರದಲ್ಲಿರುವ ದ್ವೀಪಗಳಿಗಿಂತಲೂ ಹೆಚ್ಚು ಇರುತ್ತದೆ. (ಚಿತ್ರ. 2)

ಇದೇ ತರ್ಕದ ಪ್ರಕಾರ, ದ್ವೀಪಗಳು ಸಣ್ಣದಾಗಿದ್ದಷ್ಟೂ, ಅಳಿವಿನ ದರ ಹೆಚ್ಚಾಗಿರುತ್ತದೆ. ಆದರೆ ವಲಸೆಯ ದರವನ್ನು ದ್ವೀಪದ ಗಾತ್ರ ಬಾಧಿಸುವುದಿಲ್ಲ. ಹೀಗಾಗಿ ದೊಡ್ಡ ದ್ವೀಪಗಳಲ್ಲಿ ಸಣ್ಣ ದ್ವೀಪದಲ್ಲಿ ಇರುವುದಕ್ಕಿಂತಲೂ ಹೆಚ್ಚು ಪ್ರಭೇದಗಳು ಇರುತ್ತವೆ

( ತತ್ವಗಳನ್ನು ಕೆಳಗೆ ಲೇಖನದ ಜೊತೆಗಿರುವ ಗ್ರಾಫ್ಗಳು ವಿವರಿಸುತ್ತವೆ. ಇನ್ನೂ ವಾಸ್ತವಿಕವಾದ ಗ್ರಾಫ್ಗಳನ್ನು ಆಗಲೇ ಹೇಳಿದ ಪ್ರಬಂಧ ಹಾಗೂ ಪುಸ್ತಕದಲ್ಲಿ ನೋಡಬಹುದು.)

MacArthur and Wilson’s equilibrium model of island biogeography. (1) The equilibrium number of species is a compromise between rates of immigration and extinction. (2) Two different equilibria for far and near islands due to different rates of immigration depending on the distance from the mainland. (3) Two different equilibria for small and large islands, depending on different rates of extinction based on the size of the island. Source: Author provided

ಮ್ಯಾಕ್ಆರ್ಥರ್ಮತ್ತು ವಿಲ್ಸನ್ನರು ವಿವರಿಸಿದ ದ್ವೀಪಗಳ ಭೌಗೋಳಿಕ ಜೀವಿವಿಜ್ಞಾನದ ಸಮಸ್ಥಿತಿಯ ಮಾದರಿ. (1) ಸಮಸ್ಥಿತಿಯಲ್ಲಿರುವ ಪ್ರಭೇದಗಳ ಸಂಖ್ಯೆಯು, ವಲಸೆಯ ದರ ಹಾಗೂ ಅಳಿವಿನ ದರಗಳ ನಡುವಿನ ಹೊಂದಾಣಿಕೆ. (2) ಪ್ರಧಾನ ಭೂಖಂಡದಿಂದ ದೂರವಿರುವ ಹಾಗೂ ಹತ್ತಿರವಿರುವ ದ್ವೀಪಗಳಲ್ಲಿನ ಎರಡು ವಿಭಿನ್ನ ಸಮಸ್ಥಿತಿ. (3) ಸಣ್ಣ ಹಾಗೂ ದೊಡ್ಡ ದ್ವೀಪಗಳಲ್ಲಿನ ಎರಡು ಸಮಸ್ಥಿತಿಯ ಸ್ವರೂಪ. ಇವು ದ್ವೀಪದ ಗಾತ್ರವನ್ನು ಅವಲಂಬಿಸಿರುವ ವಿಭಿನ್ನ ಅಳಿವಿನ ದರಗಳಿಂದ ಪ್ರಭಾವಿತ. ಮೂಲ: ಲೇಖಕರು 

ತತ್ವದ ಪ್ರಾಯೋಗಿಕ ಪರೀಕ್ಷೆ

1969ರಲ್ಲಿ . . ವಿಲ್ಸನ್ಹಾಗೂ ಆತನ ಪಿಎಚ್ಡಿ ವಿದ್ಯಾರ್ಥಿ ಡೇನಿಯಲ್ಸಿಂಬರ್ಲಾಫ್ದ್ವೀಪಗಳ ಭೌಗೋಳಿಕ ಜೀವಿವಿಜ್ಞಾನದ ಸಮಸ್ಥಿತಿಯ ಕುರಿತ ಮೊತ್ತ ಮೊದಲ ಕ್ಷೇತ್ರಾಧ್ಯಯನದ ಮೇಲೆ ಒಂದು ಪ್ರಬಂಧವನ್ನು ಪ್ರಕಟಿಸಿದರು ಬಗ್ಗೆ ವಿಲ್ಸನ್ಹೇಳಿದ್ದು ಹೀಗೆ: ಸಿಂಬರ್ಲಾಫನನ್ನು ನನ್ನ ಕೆಳಗೆ ಅಧ್ಯಯನ ಮಾಡಿದ ಎಂದು ಹೇಳಲು ಸಂಕೋಚವಾಗುತ್ತದೆ. ಏಕೆಂದರೆ ನಂತರದ ವರ್ಷಗಳಲ್ಲಿ ನಾನು ನನ್ನಿಂದ ಅವನು ಕಲಿತದ್ದಕ್ಕಿಂತಲೂ ಹೆಚ್ಚು ಅವನಿಂದ ಕಲಿತೆ. ನಮ್ಮಿಬ್ಬರನ್ನೂ ಗುರುಶಿಷ್ಯರೆನ್ನುವುದಕ್ಕಿಂತ, ಸಹಯೋಗಿಗಳು ಎನ್ನುವುದೇ ಸರಿ.”  

ವಿಲ್ಸನ್ಮತ್ತು ಸಿಂಬರ್ಲಾಫ್ಅಟ್ಲಾಂಟಿಕ್ಸಾಗರ ಹಾಗೂ ಮೆಕ್ಸಿಕೋ ಕೊಲ್ಲಿಗಳ ನಡುವೆ, ಫ್ಲಾರಿಡಾ ರಾಜ್ಯದ ದಕ್ಷಿಣ ತುದಿಯಲ್ಲಿ ಇರುವ ಫ್ಲಾರಿಡಾ ಕೀಸ್ಎನ್ನುವ ಹೆಸರಿನ ದ್ವೀಪಸಮೂಹಗಳಲ್ಲಿನ, ಸುಮಾರು ಹನ್ನೊಂದರಿಂದ ಹತ್ತೊಂಬತ್ತು ಮೀಟರಿನಷ್ಟು ಅಗಲವಿರುವ, ಆರು ಕಾಂಡ್ಲ ದ್ವೀಪಗಳಲ್ಲಿ ಪ್ರಯೋಗಗಳನ್ನು ಕೈಗೊಂಡರುಸಾಕಷ್ಟು ಶ್ರಮದಿಂದ ಮೊದಲು ಅವರು ದ್ವೀಪಗಳಲ್ಲಿ ಇದ್ದ ಕೀಟಗಳು, ಜೇಡಗಳು, ಐಸೊಪಾಡುಗಳು, ಚೇಳುಗಳೇ ಮೊದಲಾದ ಎಲ್ಲ ಸಂಧಿಪದಿಗಳನ್ನೂ ಪಟ್ಟಿ ಮಾಡಿದರು. ದ್ವೀಪಗಳಲ್ಲಿ ಇವನ್ನು ಬಿಟ್ಟು ಬೇರೇನೂ ಇಲ್ಲವೂ ಇಲ್ಲ. ಅನಂತರ ದ್ವೀಪಗಳಲ್ಲಿ ಕೀಟನಾಶಕಗಳ ಹೊಗೆಯನ್ನು ಹರಡಿ, ಎಲ್ಲ ಸಂದಿಪದಿಗಳನ್ನೂ ನಾಶ ಮಾಡಿದರು. ಕೊನೆಗೆ, ಒಂದು ವರ್ಷದವರೆಗೂ ದ್ವೀಪಗಳಲ್ಲಿ ಸಂದಿಪದಿಗಳ ಪುನರ್ವಸತಿ ಹೇಗಾಗುತ್ತದೆಂದು ಗಮನಿಸಿದರು

ಆರು ದ್ವೀಪಗಳಲ್ಲಿ ಐದರಲ್ಲಿ ಹೊಸದಾಗಿ ನೆಲೆಗೊಂಡ ಜೀವಿರಾಶಿಯು ಹೆಚ್ಚೂ ಕಡಿಮೆ ಕೀಟನಾಶಕದ ಹೊಗೆ ಹಾಕುವ ಮೊದಲಿದ್ದ ಸಂಖ್ಯೆಯಷ್ಟೇ ಇತ್ತಲ್ಲದೆ, ಅದರಲ್ಲಿನ ವೈವಿಧ್ಯವೂ ಮೊದಲಿನಂತೆಯೇ ಇದ್ದು, ಸ್ಥೂಲವಾಗಿ ಸಮಸ್ಥಿತಿಯ ತತ್ವವನ್ನು ಬೆಂಬಲಿಸುತ್ತಿತ್ತು.  

ಮರಗಳೆಂಬ ದ್ವೀಪಗಳು 

ಮ್ಯಾಕ್ಆರ್ಥರ್ಹಾಗೂ ವಿಲ್ಸನ್ನರ ದ್ವೀಪ ಭೌಗೋಳಿಕ ಜೀವಿವಿಜ್ಞಾನದ ತತ್ವಗಳು ವ್ಯಾಪಕವಾಗಿ ಅನ್ವಯವಾಗುತ್ತದೆ ಎನ್ನುವುದಕ್ಕೆ ಕಾರಣ ಇವು ಭೌತಿಕ ದ್ವೀಪಗಳಷ್ಟೆ ಅಲ್ಲ, ಜೀವಿಗಳಿದ್ದು, ಸುತ್ತಲೂ ಜೀವಿಗಳು ಬದುಕಲನುಕೂಲಿಯಲ್ಲದ ಜಾಗದಿಂದ ಸುತ್ತುವರಿದದ್ದರಿಂದಾಗಿ ದ್ವೀಪದಂತಾಗಿರುವ ಜೀವಿನೆಲೆಗಳಿಗದು ಅನ್ವಯವಾಗುತ್ತದೆ. ಮ್ಯಾಕ್ಆರ್ಥರ್ಹಾಗೂ ವಿಲ್ಸನ್ನರ ಪುಸ್ತಕ ಪ್ರಕಟವಾದ ಒಂದೇ ವರ್ಷದೊಳಗೆ ಡೇನಿಯೆಲ್ಹೆಚ್ಜಾನ್ಜೆನ್‌ , ಸಸ್ಯಗಳು ಅದರಲ್ಲಿಯೂ ಮರಗಳು, ಕೀಟಗಳಿಗೆ ದ್ವೀಪಗಳಂತೆ ಎಂದೂ, ಹೀಗಾಗಿ ಕೀಟಗಳ ವಲಸೆಯ ಅಧ್ಯಯನಗಳಿಗೆ ಮರಗಳನ್ನು ಬಳಸಬಹುದೆಂದು ಸೂಚಿಸಿದ.

ಇಂದು ಇರುವ ಸುಪ್ರಸಿದ್ಧ ಪರಿಸರ ವಿಜ್ಞಾನಿ ಹಾಗೂ ಸಂರಕ್ಷಣಾ ತಜ್ಞರಲ್ಲಿ ಜಾನ್ಜೆನ್ (೧೯೩೯– ) ಕೂಡ ಒಬ್ಬರು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ಆಗಿರುವ ಈತ
ಕೋಸ್ಟಾರೀಕಾದಲ್ಲಿ ಸಫಲವಾದ ಒಂದು ಜೀವಿಪುನರ್ವಸತಿ ಯೋಜನೆಯನ್ನು ಕೈಗೊಂಡಿದ್ದ

ಅನಂತರ ಮರಗಳಲ್ಲಿರುವ ಕೀಟಗಳು ಆಗಾಗ್ಗೆ ಭೌಗೋಳಿಕ ಜೀವಿದ್ವೀಪಗಳ ತತ್ವಗಳನ್ನು ಆಧರಿಸಿ ಮಾಡಿದ ಊಹೆಗಳಿಗೆ ತಕ್ಕಂತೆ ಇರುವುದಿಲ್ಲವೈಫಲ್ಯ ಅಥವಾ ಗಮನಿಸಿದ ವಿನ್ಯಾಸಗಳನ್ನು ವಿವರಿಸುವುದರಲ್ಲಿ ಅದರ ಅಸಮರ್ಥತೆಯಿಂದ ಕೂಡ ನಾವು ಕಲಿಯಬಹುದೆನ್ನುವುದು ಒಳ್ಳೆಯ ತತ್ವವೊಂದರ ಗುಣವೇ. ಮರಗಳಲ್ಲಿ ನೆಲೆಸಿರುವ ಕೀಟಗಳು, ವಲಸೆ ಹಾಗೂ ಅಳಿವಿನ ಬಗ್ಗೆ ಹಾಗೂ ನೆಲೆಯ ದೂರ ಮತ್ತು ಗಾತ್ರದಂತಹ ಸರಳ ವಿಷಯಗಳನ್ನು ಇವು ಆಧರಿಸಿವೆ ಎನ್ನುವ ನಮ್ಮ ತರ್ಕಗಳಿಗೆ ಅಪವಾದದಂತೆ ತೋರುತ್ತವೆ

ಹಲವು ಕೀಟಗಳು ನಿರ್ದಿಷ್ಟ ನೆಲೆಯುಳ್ಳವು. ಅಂದರೆ ಅವು ಕೇವಲ ಒಂದು ಬಗೆಯ ಮರದ ಮೇಲಷ್ಟೆ ಬದುಕಬಲ್ಲುವು. ಆದ್ದರಿಂದ ಇಂತಹ ಕೀಟಗಳಲ್ಲಿ ವಲಸೆಯ ಪ್ರಮಾಣವು ಕೀಟದ ಉಳಿವೆಗೆ ಮರ ಎಷ್ಟು ತಕ್ಕುದಾಗಿದೆ ಎನ್ನುವುದನ್ನು ಹೆಚ್ಚು ಅವಲಂಬಿಸಿರುತ್ತದೆ. ಅಲ್ಲದೆ ಇಂತಹ ಕೀಟಗಳೂ, ಅವುಗಳು ನೆಲೆಸುವ ಮರಗಳೂ ಕೂಡ ಸಹವಿಕಾಸಿಗಳಾದ್ದರಿಂದ ಕೀಟಗಳ ವಲಸೆ ಹಾಗೂ ಅಳಿವಿನ ದರವನ್ನು ಬದಲಿಸುತ್ತದೆ. ಅಂದರೆ ಕೀಟಗಳು ನೆಲೆಸುವ ಪ್ರಮಾಣವೀಗ ಕೀಟಗಳ ಉಳಿವಿಗೆ ಮರವೆಷ್ಟು ತಕ್ಕುದಾಗಿದೆ ಎನ್ನುವುದನ್ನು ಅವಲಂಬಿಸಿರುತ್ತದೆಯೇ ಹೊರತು, ಮರಗಳ ಗಾತ್ರ ಹಾಗೂ ದೂರದಂತಹ ಸರಳ ಅಂಶಗಳನ್ನಲ್ಲ

ವಲಸೆಯ ದರ ಹಾಗೂ ಅಳಿವಿನ ದರಗಳು, ದ್ವೀಪಗಳ ಗಾತ್ರ ಹಾಗೂ ವಲಸೆಯ ಮೂಲದಿಂದ ಅವುಗಳ ದೂರಗಳನ್ನು ಭೌಗೋಳಿಕ ಜೀವಿದ್ವೀಪಗಳ ತತ್ವ ಆಧರಿಸಿರುವುದನ್ನು ಪರಿಗಣಿಸಿದರೆ, ಪ್ರಕೃತಿ ಸಂರಕ್ಷಣಾ ನೆಲೆಗಳ ವೈಜ್ಞಾನಿಕ ವಿನ್ಯಾಸಗಳಲ್ಲಿ ಇದಕ್ಕೆ ಪ್ರಧಾನ ಪಾತ್ರವಿದೆ ಎನ್ನುವುದು ಅಚ್ಚರಿಯ ವಿಷಯವೇನಲ್ಲ. ನೈಸರ್ಗಿಕ ನೆಲೆಗಳು ಅವಿರತವಾಗಿ ಛಿದ್ರವಾಗುತ್ತಾ ಇರುವುದು ಹಾಗೂ ವಿವಿಧ ಭೂಬಳಕೆಯ ವಿಧಾನಗಳಲ್ಲಿ ಪೈಪೋಟಿ ಹೆಚ್ಚಿರುವುದರಿಂದಾಗಿ, ಪ್ರಾಕೃತಿಕ ಸಂರಕ್ಷಣಾ ನೆಲಗಳನ್ನು ವಿನ್ಯಾಸ ಮಾಡುವುದೆಂದರೆ ಕೆಟ್ಟದ್ದನ್ನು ಸರಿಪಡಿಸುವ ಕೆಲಸ ವಾಗಿದ್ದರಿಂದ ಅದಕ್ಕೆ ಸಾಕಷ್ಟು ತಾತ್ವಿಕ ಅಂಶಗಳ ನೆರವೂ ಅವಶ್ಯಕವಾಗುತ್ತದೆ

ವಿಶೇಷವಾಗಿ, ಭೌಗೋಳಿಕ ಜೀವಿದ್ವೀಪಗಗಳ ತತ್ವವು ಕಳೆದ ಅರ್ಧ ಶತಮಾನದಿಂದಲೂ ವಿವಿಧ ಸಂಶೋಧನೆಗಳಿಗೆ ಪ್ರೇರಣೆಯಾಗಿ ನಿಂತಿದೆ. ಅದರ ಸರಳತೆಯೇ ಇದಕ್ಕೆ ಮೂಲ. ಏಕೆಂದರೆ ಇದನ್ನು ಅರ್ಥ ಮಾಡಿಕೊಳ್ಳುವುದಷ್ಟೆ ಅಲ್ಲ, ಬಳಸುವುದೂ, ಬಳಸಿದಾಗ ಅದು ಏಕೆ ವಿಫಲವಾಯಿತೆಂದು ತಿಳಿಯುವುದೂ ಸುಲಭ. ಇಂದಿಗೂ ಪರಿಸರ ವಿಜ್ಞಾನಿಗಳುಜೀವಿದ್ವೀಪ ವಿಜ್ಞಾನದ ನಾಳಿನ ಹೆಜ್ಜೆಗಳು : ಜೀವಿದ್ವೀಪ ವಿಜ್ಞಾನದ ತತ್ವಗಳು ಪ್ರಕಟವಾದ ಐವತ್ತು ವರ್ಷಗಳ ನಂತರ ಉಳಿದಿರುವ ಐವತ್ತು ಪ್ರಾಥಮಿಕ ಪ್ರಶ್ನೆಗಳುಹಾಗೂಭೌಗೋಳಿಕ ಜೀವಿದ್ವೀಪ ವಿಜ್ಞಾನದಲ್ಲಿ ಹೊಸ ಪಲ್ಲಟಗಳುಎನ್ನುವ ಶೀರ್ಷಿಕೆಯ ಪ್ರಬಂಧಗಳನ್ನೂ ಇನ್ನೂ ಪ್ರಕಟಿಸುತ್ತಿದ್ದಾರೆ ಎನ್ನುವುದು ಮ್ಯಾಕ್ಆರ್ಥರ್ಹಾಗೂ ವಿಲ್ಸನ್ನರು ಪ್ರತಿಪಾದಿಸಿದ, ಪರಿಸರ ವಿಜ್ಞಾನದಲ್ಲಿನ ಸಂಶೋಧನೆಗಳಿಗೆ ಪ್ರೇರಣೆಯಾಗಿರುವ ತತ್ವಗಳ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ

ಹಾಗಿದ್ದೂ ಇದು ವಿಫಲವಾಯಿತು ಎಂದರೆ ಅದು ಹೊಸ ತರ್ಕಗಳು ಹಾಗೂ ಸೈದ್ಧಾಂತಿಕ ಸಂಶೋಧನೆಗಳಿಗೆ ನೆರವಾಗುವುದರಲ್ಲಿ ಸೋತಿರುತ್ತದೆಯಷ್ಟೆ

ಆಕಾಶ ದ್ವೀಪಗಳು 

ಸುತ್ತಲೂ ಬದಕಲು ಆಗದಂತಹ ಶೂನ್ಯತೆ ಆವರಿಸಿಕೊಂಡು ಪರ್ವತ ಶಿಖರಗಳಲ್ಲಿ ಪ್ರತ್ಯೇಕವಾಗಿರುವ, ದ್ವೀಪಗಳಂತೆ ಇರುವ ಜೀವಿನೆಲೆಗಳನ್ನು ಆಕಾಶದ್ವೀಪಗಳು ಎನ್ನುತ್ತಾರೆ. ಅತಿಯಾದ ಉಷ್ಣತೆ, ಅಥವಾ ಇತರೆ ಪರಿಸರದ ಬದಲಾವಣೆಗಳು, ಅಥವಾ ದಾಟಲಾಗದಂತಹ ಕಮರಿಗಳ ನಡುವೆ ಇರುವ ಪರ್ವತ ಶಿಖರಗಳು ಸುತ್ತಲೂ ಇರುವಂತಹ ಜಾಗದಲ್ಲಿ ಬದುಕುಳಿಯುವುದು ಕಷ್ಟವೆನ್ನಿಸುವಂತಹ ಹಲವು ಜೀವಿ ಪ್ರಭೇದಗಳಿಗೆ ವಿಶಿಷ್ಟ ನೆಲೆಯಾಗಿರಬಲ್ಲುವು.   ನೀರಿನಿಂದ ಆವೃತವಾದ ದ್ವೀಪಗಳು ಹೇಗೋ ಹಾಗೆಯೇ ಆಕಾಶದ್ವೀಪಗಳು ವಿಕಾಸದಿಂದಾಗಿ ಆಗುವ ಬದಲಾವಣೆಗಳನ್ನು ಕ್ಷಿಪ್ರವಾಗಿ ಪರೀಕ್ಷಿಸಲು ಅವಕಾಶಗಳನ್ನು ಒದಗಿಸುತ್ತವೆ

ಅಮೆರಿಕೆಯ ಅರಿಜೋನಾ ಹಾಗೂ ನ್ಯೂಮೆಕ್ಸಿಕೋದಲ್ಲಿರುವ ಮಾಡ್ರಿಯನ್ಆಕಾಶದ್ವೀಪಗಳು ಹಾಗೂ ಮೆಕ್ಸಿಕೋದಲ್ಲಿರುವ ಚಿಹುವಾಹುವಾ ಮತ್ತು ಸೊನೊರಾ ಆಕಾಶದ್ವೀಪಗಳು ಇಂತಹ ಅಧ್ಯಯನಗಳಿಗೆ ಉತ್ತಮ ಉದಾಹರಣೆ

ಜೀವಿವೈವಿಧ್ಯದ ಬಿಸಿದಾಣವೆಂದು ಹೆಸರಾದ ಭಾರತದ ಪಶ್ಚಿಮ ಘಟ್ಟಗಳು ಕೂಡ, ತಮ್ಮ ಸೌಂದರ್ಯ ಹಾಗೂ ಭೌಗೋಳಿಕ ಜೀವಿವಿಜ್ಞಾನದಲ್ಲಿ ಅನನ್ಯವೆನ್ನಿಸಿದ, ಪ್ರಪಂಚದಲ್ಲಿಯೇ ಅಮೋಘವೆನ್ನಿಸಿದ ಹಲವು ಆಕಾಶದ್ವೀಪಗಳ ನೆಲೆಯಾಗಿವೆ. ಪಶ್ಚಿಮಘಟ್ಟಗಳ ಆಕಾಶದ್ವೀಪಗಳು ಸುಮಾರು ಏಳುನೂರು ಚದರ ಕಿಲೋಮೀಟರು ವಿಸ್ತಾರವಾಗಿದ್ದು, ಹಲವು ಬಗೆಯ ಜೀವಿನೆಲೆಗಳು ಮತ್ತು ಸೂಕ್ಷ್ಮನೆಲೆಗಳಿಂದ ಕೂಡಿವೆ. ಬಹುಶಃ ಇವುಗಳಲ್ಲಿ ಅತ್ಯಂತ ವಿಸ್ಮಯಕಾರಿ ಎನ್ನಿಸುವುದು ಶೋಲಾ ಕಾಡುಗಳು ಎಂದು ಪ್ರಸಿದ್ಧವಾದ ಮೋಡಗಳನ್ನು ಚುಂಬಿಸುವ ಕಾಡುಗಳು. . . 

ಆಕಾಶದ್ವೀಪಗಳು ಇದುವರೆವಿಗೂ ಅಧ್ಯಯನದ ಕೊರತೆಯಿಂದ ನರಳಿದ್ದುವು. ಆದರೆ ವಿ. ವಿ ರಾಬಿನ್‌, ಅವರ ಶಿಷ್ಯರು ಹಾಗೂ ಸಹಯೋಗಿಗಳ ಕೃಪೆ. ಪರಿಸ್ಥಿತಿ ಬದಲಾಗಿದೆ

ರಾಬಿನ್ ಆಂಧ್ರ ಪ್ರದೇಶದ ದೇವಳಗಳ ಪಟ್ಟಣ ತಿರುಪತಿಯಲ್ಲಿ ಇರುವ ಇಂಡಿಯನ್ಇನ್ಸ್ಟಿಟ್ಯೂಟ್ಆಫ್ಸೈನ್ಸ್ಎಡುಕೇಶನ್ಅಂಡ್ರೀಸರ್ಚ್ಸಂಸ್ಥೆಯಲ್ಲಿ ಸಹಾಯಕ ಪ್ರೊಫೆಸರ್ಆಗಿದ್ದಾರೆ. ಈತ ಕೆಲವು ಯುವ ಹಾಗೂ ಪ್ರತಿಭಾವಂಥ ವಿದ್ಯಾರ್ಥಿಗಳು ಹಾಗೂ ಡಾಕ್ಟರೇಟು ನಂತರದ ಸಂಶೋಧನೆಗಳಲ್ಲಿ ನಿರತರಾಗಿರುವ ತಂಡದ ನೇತಾರರೂ, ಹಕ್ಕಿಗಳ ಪ್ರಯೋಗಾಲಯದ ಮುಖ್ಯಸ್ಥರೂ ಆಗಿದ್ದಾರೆ. ರಾಬಿನ್‌ ಪರಿಸರವಿಜ್ಞಾನಿಗಳ ವಂಶದಲ್ಲಿ ಎರಡನೆಯ ಪೀಳಿಗೆ. ಭಾರತದಲ್ಲಿ ಇಂತಹದ್ದು ಇನ್ನೂ ಬಹಳ ಅಪರೂಪ. ರಾಬಿನ್ನರ ತಂದೆತಾಯಂದಿರು ಇಬ್ಬರೂ ಬಲು ದೀರ್ಘ ಕಾಲದಿಂದ ನನ್ನ ಗೆಳೆಯರೂ, ಸುಪ್ರಸಿದ್ಧ ಪರಿಸರವಿಜ್ಞಾನಿಗಳೂ ಆಗಿದ್ದಾರೆ.  ರಾಬಿನ್ನನನ್ನು ಬಾಲ್ಯದಿಂದಲೂ ನೋಡಿರುವ ನನಗೆ, ಅವನ ಅದ್ಭುತ ಕೆಲಸಗಳನ್ನು ಅಧ್ಯಯನ ಮಾಡಿ ಅವುಗಳ ಬಗ್ಗೆ ಬರೆಯುವುದು ಖುಷಿ ಕೊಡುತ್ತದೆ. 

V.V. Robin, with a black-and-orange flycatcher (Ficedula nigrorufa), endemic to the Shola sky islands. Photo: Prasenjeet Yadav

ವಿವಿ ರಾಬಿನ್.‌ ಶೋಲ ಆಕಾಶದ್ವೀಪಗಳಿಗಷ್ಟೆ ಸೀಮಿತವಾದ ಕಪ್ಪು-ಕಿತ್ತಳೆ ನೊಣಹಿಡುಕ (ಫಿಸೆಡ್ಯೂಲಾ ನೈಗ್ರೊರೂಫಾ) ದ ಜೊತೆಗೆ: ಚಿತ್ರ: ಪ್ರಸನ್ನಜೀತ್‌ ಯಾದವ್

ರಾಬಿನ್‌, ಸಿಕೆ ವಿಷ್ಣುದಾಸ್‌, ಪೂಜಾ ಗುಪ್ತ ಮತ್ತು ಉಮಾ ರಾಮಕೃಷ್ಣನ್‌ ಪಶ್ಚಿಮಘಟ್ಟದ ಶೋಲಾ ಕಾಡುಗಳಲ್ಲಿ ಇರುವ ಪಕ್ಷಿ ಸಮುದಾಯದ ವಿಸ್ತಾರವಾದ ವಿಶ್ಲೇಷಣೆಯೊಂದನ್ನು 2015ರಲ್ಲಿ ಪ್ರಕಟಿಸಿದರು. ನ್ಯಾಶನಲ್‌ ಜಿಯೋಗ್ರಾಫಿಕ್‌ ಯೋಜನೆಯೊಂದರಲ್ಲಿ ರಾಬಿನ್ನನ ಸಹಯೋಗಿಯಾಗಿದ್ದ ವಿ಼ಷ್ಣುದಾಸ್‌ ಪಶ್ಚಿಮ ಘಟ್ಟಗಳಲ್ಲಿರುವ ಪಕ್ಷಿ ಸಮುದಾಯಗಳ ಕುರಿತು ವಿಸ್ತಾರವಾದ ಸಮೀಕ್ಷೆಯನ್ನು ನಡೆಸಿರುವ ಕಟ್ಟಾಸೆಯ ಪ್ರಕೃತಿ ವಿಜ್ಞಾನಿ ಹಾಗೂ ಪಕ್ಷಿತಜ್ಞ. ಭಾರತದ ಸುಪ್ರಸಿದ್ಧ ಪಕ್ಷಿತಜ್ಞರಾದ ಸಲೀಮ್‌ ಅಲಿಯವರು ಪಯಣಿಸಿದ್ದ ಹಾದಿಯಲ್ಲಿಯೇ, ಅವರು ಪಯಣಿಸಿದ್ದ ವರ್ಷದ ಸಮಯದಲ್ಲಿಯೇ ಸಾಗಿ ಆ ಮಹಾತ್ಮ ದಾಖಲಿಸಿದ್ದ ಜೀವಿವಿಧಗಳನ್ನು ಮರುವೀಕ್ಷಿಸುವ ಮಹತ್ತರವಾದೊಂದು ಯೋಜನೆಯನ್ನೂ ವಿಷ್ಣುದಾಸ್‌ ಕೈಗೊಂಡಿದ್ದರು.

ಈ ಅಧ್ಯಯನದ ಸಮಯದಲ್ಲಿ ಪೂಜಾ ಗುಪ್ತ ಕಣಜೀವಿವಿಜ್ಞಾನದಲ್ಲಿ ಅಧ್ಯಯನ ನಡೆಸುತ್ತಿದ್ದ ವಿದ್ಯಾರ್ಥಿನಿಯಾಗಿದ್ದರು. ಈಗ ಆಕೆ ಜಾರ್ಜಿಯಾ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟು ಮಾಡಲು ತೆರಳಿ, ಅಲ್ಲಿನ ಆಕಾಶದ್ವೀಪಗಳಲ್ಲಿ ಹಕ್ಕಿಗಳಲ್ಲಿ ಮಲೇರಿಯಾ ಹರಡುವ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಉಮಾ ರಾಮಕೃಷ್ಣನ್‌ ಈ ಎಲ್ಲ ವಿಜ್ಞಾನಿಗಳಿಗೂ ಸೂರಿತ್ತ ಬೆಂಗಳೂರಿನ ನ್ಯಾಶನಲ್‌ ಸೆಂಟರ್‌ ಫಾರ್‌ ಬಯಾಲಾಜಿಕಲ್‌ ಸೈನ್ಸಸ್‌ ಸಂಸ್ಥೆಯಲ್ಲಿ ಕಣಜೀವಿವಿಜ್ಞಾನಿಯಾಗಿದ್ದು, ಹೊಸ ಹಾದಿಯನ್ನು ಮೆಟ್ಟಿದ ಯುವ ಸಂಶೋಧಕಿಯಾಗಿದ್ದಾರೆ.  

ಈ ಲೇಖನದ ಜೊತೆಗೆ ಇರುವ ಸುಂದರ ಚಿತ್ರಗಳನ್ನು ತೆಗೆದ ಪ್ರಸನ್ನಜೀತ್‌ ಯಾದವ್‌ ವಿಜ್ಞಾನ ಹಾಗೂ ಛಾಯಾಗ್ರಾಹಕರ ಸಂಕರ. ಈತ ಶೋಲ ಆಕಾಶದ್ವೀಪಗಳ ಬಗ್ಗೆ ನಡೆದ ಅಧ್ಯಯನಗಳು ಹಾಗೂ ರಾಬಿನ್ನರ ಕೆಲಸವನ್ನು ಕುರಿತು ಸಾಕ್ಷ್ಯಚಿತ್ರವೊಂದನ್ನು ತಯಾರಿಸುವುದಕ್ಕಾಗಿ ಸುಪ್ರಸಿದ್ಧ ನ್ಯಾಶನಲ್‌ ಜಿಯೋಗ್ರಫಿಕ್‌ ಸೊಸೈಟಿಗೆ ಬರೆದು ಯಂಗ್‌ ಎಕ್ಸ್‌ಪ್ಲೋರರ್‌ ಪ್ರಶಸ್ತಿಯನ್ನು ಗಳಿಸಿದ್ದರು. ಈತನ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದು ಬಾಂಫ್‌ ಫಿಲಂ ಪ್ರಶಸ್ತಿಯೇ ಮೊದಲಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿವೆ. ಯಾದವ್‌ ಈಗ ನ್ಯಾಶನಲ್‌ ಜಿಯೋಗ್ರಾಫಿಕ್‌ ಸೊಸೈಟಿಯ ಅಧಿಕೃತ ಛಾಯಾಗ್ರಾಹಕರಾಗಿದ್ದು, ಪ್ರಪಂಚದ ವಿವಿಧೆಡೆಗಳ ಕಥೆಗಳನ್ನು ತಮ್ಮ ವೀಡಿಯೋಗಳಲ್ಲಿ ದಾಖಲಿಸಿದ್ದಾರೆ.

ರಾಬಿನ್‌ ಮತ್ತು ಪ್ರಸೇನ್‌ಜೀತ್‌ ಯಾದವ್‌ ನ್ಯೂಯಾರ್ಕಿನ ಸಂಗೀತಗಾರರೊಬ್ಬರೊಟ್ಟಿಗೆ ಕೈ ಜೋಡಿಸಿ, ಹಕ್ಕಿಗಳ ಹಾಡುಗಳಿಂದ ಕೂಡಿದ ಸ್ಕೈ ಐಲ್ಯಾಂಡ್‌ ಬೀಟ್‌ ಬಾಕ್ಸ್‌ ಎನ್ನುವ ಸಂಗೀತವನ್ನು ಸೃಷ್ಟಿಸುವುದರಲ್ಲಿ ನಿರತರಾಗಿದ್ದಾರೆ. ಇವರ ತಂಡಗಳು ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳಿಗೆ ಪರಿಸರವನ್ನು ಅಧ್ಯಯನ ಮಾಡುವುದರಲ್ಲಿ ಇರುವ ಖುಷಿ ಹಾಗೂ ಪ್ರಕೃತಿ ವಿಜ್ಞಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. 

Left: V.V. Robin and C.K. Vishnudas examining museum specimens at the Bombay Natural History Society. Right: C.K. Vishnudas and Uma Ramakrishnan collecting samples in the field for later DNA analysis in the lab. Photos: Prasenjeet Yadav

ಎಡ: ವಿವಿ ರಾಬಿನ್‌ ಮತ್ತು ವಿಷ್ಣುದಾಸ್‌ ಬಾಂಬೇ ನ್ಯಾಚುರಲ್‌ ಹಿಸ್ಟರಿ ಸೊಸೈಟಿಯಲ್ಲಿರುವ ಹಕ್ಕಿಗಳ ಮಾದರಿಗಳನ್ನು ಅಧ್ಯಯನ ಮಾಡುತ್ತಿರುವುದು. ಬಲ: ಸಿಕೆ ವಿಷ್ಣುದಾಸ್‌ ಮತ್ತು ಉಮಾ ರಾಮಕೃಷ್ಣನ್‌ ಅನಂತರ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡುವುದಕ್ಕಾಗಿ ಕಾಡಿನ ಜೀವಿಗಳಿಂದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುತ್ತಿರುವುದು. ಚಿತ್ರ: ಪ್ರಸೇನ್ಜೀತ್‌ ಯಾದವ್‌ 

ರಾಬಿನ್‌ ಮತ್ತು ಅವರ ತಂಡ ಪಶ್ಚಿಮ ಘಟ್ಟಗಳ ಆಕಾಶದ್ವೀಪಗಳಾದ ಶೋಲಾ ಕಾಡುಗಳಲ್ಲಿ ಇರುವ ಓಸೈನ್‌ ಎಂದು ವಿಜ್ಞಾನಿಗಳು ಕರೆಯುವ ಹಾಡುಹಕ್ಕಿಗಳ ಇಡೀ ಸಮುದಾಯವನ್ನು ಅಧ್ಯಯನ ಮಾಡಿದೆ. ಈ ಹಾಡುಹಕ್ಕಿಗಳು ಪ್ಯಾಸೆರಿಫಾರ್ಮೀಸ್‌ ಶ್ರೇಣಿಗೆ ಸೇರಿದ, ಸಾಮಾನ್ಯವಾಗಿ ನೆಲದ ಮೇಲೆ ಕುಪ್ಪಳಿಸುವ ಪ್ಯಾಸರೈನ್‌ ಇಲ್ಲವೇ ರೆಂಬೆಗಳ ಮೇಲೆ ಕುಳಿತಿರುವ ಪರ್ಚಿಂಗ್‌ ಹಕ್ಕಿಗಳ ಜಾತಿಯವು. ಈ ಸಮುದಾಯವನ್ನು ಪ್ರತಿನಿಧಿಸುವ ಇಪ್ಪತ್ತೈದು ಪ್ರಭೇದಗಳಲ್ಲಿ ಇಪ್ಪತ್ತಮೂರು ಪ್ರಭೇದಗಳ ಹಕ್ಕಿಗಳನ್ನು ಬಲೆ ಬೀಸಿ ಹಿಡಿದರು. ಮುನ್ನೂರ ಐವತ್ತಾರು ಹಕ್ಕಿಗಳ ರಕ್ತದ ಮಾದರಿಗಳನ್ನೂ ಸಂಗ್ರಹಿಸಿದರು. ಹಕ್ಕಿಗಳ ಜೀವಕೋಶಗಳ ನ್ಯೂಕ್ಲಿಯಸ್ಸಿನ ಎರಡು ಜೀನ್‌ ಗಳ ಅಂಶಗಳನ್ನೂ, ಜೀವಕೋಶಗಳೊಳಗೆ ಇರುವ ಮೈಟೊಕಾಂಡ್ರಿಯಾದಲ್ಲಿನ ಎರಡು ಜೀನ್‌ ಗಳ ಅಂಶಗಳನ್ನೂ ಬಿಡಿಸಿ, ಹೋಲಿಸಿ ನೋಡಿ, ಇಡೀ ಹಕ್ಕಿ ಸಮುದಾಯದ ವಂಶವೃಕ್ಷವನ್ನು ತಯಾರಿಸಿದರು.

ಇವರ ಅಧ್ಯಯನದ ಉದ್ದೇಶವಿಷ್ಟೆ. ವಿವಿಧ ಸಮುದಾಯಗಳ ನಡುವೆ ಜೀನ್‌ ಗಳ ಹರಿದಾಟಕ್ಕೆ ಅಡ್ಡಿ, ಆಕಾಶದ್ವೀಪಗಳಲ್ಲಿ ಇರುವ ಹಕ್ಕಿಗಳನ್ನು ವಲಸೆ, ಅಳಿವು ಹಾಗೂ ಸಂಕರಣಗಳು ಹೇಗೆ ಬಾಧಿಸಿವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಾಗಿತ್ತು. ಆಳವಾದ ಕಣಿವೆಗಳು ಹಲವಾರು ಪ್ರಭೇದಗಳ ವಲಸೆಗೆ ಸದಾಕಾಲ ಅಡ್ಡಿಯಾಗಬಹುದು. ಆದರೆ ಈ ಅಡೆತಡೆಯ ಸಾಮರ್ಥ್ಯ ಕೂಡ ಪರಿಸರದ ಬದಲಾವಣೆಗಳಿಂದ ವ್ಯತ್ಯಾಸವಾಗುತ್ತದೆ. ಇತರೆ ಹಲವು ಪ್ರಭೇದಗಳಿಗೆ ಕಣಿವೆಗಳು ಅಡ್ಡಿಯೆನ್ನಿಸದೆಯೇ ಹೋಗಬಹುದು.

ಇವರ ಅಧ್ಯಯನದ ಕ್ಷೇತ್ರದಲ್ಲಿ ಮೂರು ಮುಖ್ಯ ಕಣಿವೆಗಳಿವೆ. ವಯನಾಡು ಹಾಗೂ ನೀಲಗಿರಿ ಬೆಟ್ಟಗಳನ್ನು ಬೇರ್ಪಡಿಸುವ ಚಾಳಿಯಾರ್‌ ಕಣಿವೆ; ನೀಲಗಿರಿ ಬೆಟ್ಟಗಳು ಹಾಗೂ ಆನೈಮಲೈ ಬೆಟ್ಟಗಳನ್ನು ಬೇರ್ಪಡಿಸುವ ಪಾಲ್ಘಾಟ್‌ ಸಂಧಿ ಹಾಗೂ ಆನೈಮಲೈ ಮತ್ತು ಅಗಸ್ತ್ಯಮಲೈ ಬೆಟ್ಟಗಳನ್ನು ಪ್ರತ್ಯೇಕಿಸುವ ಸೆಂಗೋಟ್ಟೈ ಸಂಧಿ.

ಅಧ್ಯಯನ ಮಾಡಿದ ಇಪ್ಪತ್ತಮೂರು ಪ್ರಭೇದಗಳಲ್ಲಿ ಹದಿಮೂರು ಪ್ರಭೇದಗಳು ಈ ಯಾವ ಕಣಿವೆಯಿಂದಲೂ ಬಾಧಿತವಾಗಿರಲಿಲ್ಲ. ಅವುಗಳನ್ನು ಸರಾಗವಾಗಿ ದಾಟುವ ಸಾಮರ್ಥ್ಯ ಇದ್ದಂತೆ ತೋರುತ್ತಿತ್ತು. ಬಹುತೇಕ ಇವು ಪರಿಸರವು ವಲಸೆಗೆ ಅನುಕೂಲಿಯಾಗಿದ್ದಾಗ ಕಣಿವೆಗಳನ್ನು ದಾಟಿದ್ದಿರಬಹುದು. ಆದರೆ ಕೆಲವು ಸ್ಥಳಗಳಲ್ಲಿ ಇದ್ದ ಹತ್ತು ಪ್ರಭೇದಗಳಲ್ಲಿ ಅನುವಂಶೀಯ ಮಾರ್ಪಾಟುಗಳು ಇದ್ದುವು. ಕಣಿವೆಗಳು ಅಡ್ಡಿಯಾಗಿದ್ದಲ್ಲಿ ಇಂತಹ ಅನುವಂಶೀಯ ಬದಲಾವಣೆಗಳು ಆಗುತ್ತವೆಂದು ನಿರೀಕ್ಷಿಸಬಹುದು. ಈ ಎಲ್ಲ ಹತ್ತೂ ಪ್ರಭೇದಗಳೂ ಕೂಡ ಮೂರು ಕಣಿವೆಗಳಲ್ಲಿ ಅತ್ಯಂತ ಆಳದ ಕಣಿವೆಯಾದ ಪಾಲ್ಘಾಟ್‌ ಸಂಧಿಯಿಂದ ಬಾಧಿತವಾಗಿದ್ದುವು. 

ಲಾಫಿಂಗ್‌ ತ್ರಷ್‌ ನಂತಹ ಕೆಲವು ಪ್ರಭೇದಗಳು ಎಲ್ಲ ಮೂರೂ ಕಣಿವೆಗಳಿಂದ ಬಾಧಿತವಾಗಿದ್ದುವು. ಕೆಲವು ಪಾಲ್ಘಾಟ್‌ ಸಂಧಿ ಹಾಗೂ ಅದರ ಪಕ್ಕದ ಸ್ವಲ್ಪ ಕಡಿಮೆ ಆಳದ ಸೆಂಗೋಟ್ಟೈ ಸಂಧಿಯಿಂದ ಬಾಧಿತವಾಗಿದ್ದವು, ಆದರೆ ಎಲ್ಲಕ್ಕಿಂತಲೂ ಆಳ ಕಡಿಮೆ ಇರುವ ಚಾಳಿಯಾರ್‌ ಕಣಿವೆಯಿಂದ ಬಾಧಿತವಾಗಿರಲಿಲ್ಲ.  

ಈ ಅಧ್ಯಯನಗಳ ಸಾಫಲ್ಯಕ್ಕೆ ಹಲವು ಮೂಲಗಳಿವೆ.

Two of the 23 bird species studied by Robin and his colleagues on the sky islands of Western Ghats – left: grey-breasted Chilappan (Kerala laughing-thrush); right: Nilgiri Sholakilli (shortwing). Photos: Prasenjeet Yadav

ಪಶ್ಚಿಮ ಘಟ್ಟದ ಆಕಾಶದ್ವೀಪಗಳಲ್ಲಿ ರಾಬಿನ್‌ ಮತ್ತು ಸಂಗಡಿಗರು ಅಧ್ಯಯನ ಮಾಡಿದ ಇಪ್ಪತ್ತಮೂರು ಪ್ರಭೇದದ ಹಕ್ಕಿಗಳಲ್ಲಿನ ಎರಡು ಹಕ್ಕಿಗಳು. ಎಡ: ಬೂದು ಎದೆಯ ಚಿಲಪ್ಪನ್‌ ಅಥವಾ ಕೇರಳದ ಲಾಫಿಂಗ್‌ ತ್ರಶ್‌, ಬಲ: ನೀಲಗಿರಿ ಶೋಲಕ್ಕಿಳಿ. ಚಿತ್ರಗಳು: ಪ್ರಸೇನ್‌ ಜೀತ್‌ ಯಾದವ್

ಮೊದಲನೆಯದಾಗಿ, ಸಂಶೋಧಕರು ವಿಸ್ತೃತವಾದ ಕ್ಷೇತ್ರಾಧ್ಯಯನದ ಜೊತೆಗೆ ಕಣಜೀವಿವಿಜ್ಞಾನದ ನವನವೀನ ವಿಶ್ಲೇಷಣೆಗಳು ಜೊತೆಯಾಗಿದ್ದು. 

ಎರಡನೆಯದು, ಇದೊಂದು ಬಲು ಮಹತ್ವಾಕಾಂಕ್ಷೆಯ ಅಧ್ಯಯನ. ಏಕೆಂದರೆ ಇದು ಈ ಆಕಾಶದ್ವೀಪಗಳಲ್ಲಿ ಇದ್ದ ಹಾಡುಹಕ್ಕಿಗಳೆಲ್ಲದರ ಸಮುದಾಯವನ್ನು ಒಳಗೊಂಡಿತ್ತು. 

ಮೂರನೆಯದಾಗಿ ಇದು ಮೊಂಟನ್‌ ಕಾಡುಗಳಲ್ಲಿನ ಹಕ್ಕಿಗಳ ಗೀಳು ಹಿಡಿದ ರಾಬಿನ್ನನ ಎರಡು ದಶಕಗಳ ಅಧ್ಯಯನದ ಸಾಧನೆ. ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್ ನಲ್ಲಿ ನನ್ನ ಸಹೋದ್ಯೋಗಿ ರಾಮನ್ ಸುಕುಮಾರ್ ರ ಬಳಿ 2002ರಲ್ಲಿ ಭೇಟಿಗೆ ಬಂದಿದ್ದಾಗ ರಾಬಿನ್‌ ಈ ಹಕ್ಕಿಗಳಲ್ಲಿ ಒಂದಾದ ವೈಟ್‌ ಬೆಲ್ಲೀಡ್‌ ಶಾರ್ಟ್‌ವಿಂಗ್‌ ಎನ್ನುವ ಬಿಳಿಹೊಟ್ಟೆ ಪುಟ್ಟರೆಕ್ಕೆಯ ಹಕ್ಕಿಯೊಂದು ನೆಲೆಯನ್ನು ಹೇಗೆ ಆಯ್ಕೆ ಮಾಡುತ್ತದೆ ಎನ್ನುವುದರ ಬಗ್ಗೆ ಒಂದು ಸಮೀಕ್ಷೆಯನ್ನು ತಮಿಳುನಾಡು ಹಾಗೂ ಕೇರಳದ ಕಾಡುಗಳಲ್ಲಿ ಕೈಗೊಂಡಿದ್ದ.  

ನಾಲ್ಕನೆಯದಾಗಿ, 2015ರ ಈ ಅಧ್ಯಯನಕ್ಕೂ ಮುನ್ನ 2010ರಲ್ಲಿ ಇನ್ನೊಂದು ಅಧ್ಯಯನ ನಡೆದಿತ್ತು. ಬೆಂಗಳೂರಿನ ನ್ಯಾಶನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ಡ್‌ ಸ್ಟಡೀಸ್‌ ಸಂಸ್ಥೆಯ ಅನಿಂದ್ಯ ಸಿನ್ಹಾ ಅವರ ಅಡಿಯಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾಗ, ರಾಬಿನ್‌ ಎನ್‌ಸಿಬಿಎಸ್ಸಿನ ಉಮಾ ರಾಮಕೃಷ್ಣನ್‌ ಜೊತೆಗೆ ಕೂಡಿ, ಒಂದು ಹಕ್ಕಿಯ ವಿತರಣೆಯ ಮೇಲೆ ಕಣಿವೆಗಳು ಹಾಗೂ ಪರಿಸರದ ಹವಾಮಾನ ಯಾವ ರೀತಿ ಪ್ರಭಾವ ಬೀರುತ್ತವೆ ಎಂದು ಅಧ್ಯಯನ ಮಾಡಿದ್ದರು. ಈ ಬಿಳಿಹೊಟ್ಟೆಯ ಪುಟ್ಟರೆಕ್ಕೆಯ ಹಕ್ಕಿಯನ್ನು ಎರಡು ವಿಭಿನ್ನ ಪ್ರಭೇದಗಳನ್ನಾಗಿ ಪಾಲ್ಘಾಟ್‌ ಸಂಧಿ ಬೇರ್ಪಡಿಸಿರುವುದನ್ನು ಇವರು ನಿರೂಪಿಸಿದರು. ಈ ಎರಡೂ ಪ್ರಭೇದಗಳು ಹಾಡುವ ಹಾಡುಗಳೂ ವಿಭಿನ್ನವಾಗಿದ್ದುವು. ಈ ಅಧ್ಯಯನವು ದೊರಕಿಸಿದ ಪುರಾವೆಯೇ ಮುಂದೆ 2015ರಲ್ಲಿ ಇನ್ನೂ ಮಹತ್ವಾಕಾಂಕ್ಷೆಯ ಅಧ್ಯಯನವನ್ನು ಮಾಡಲು ರಾಬಿನ್ನರಿಗೆ ಪ್ರೇರಣೆಯಾಯಿತು. 

ಐದನೆಯ ಹಾಗೂ ಕೊನೆಯ ಮಹತ್ವದ ಅಂಶವೇನೆಂದರೆ, 2015ರಲ್ಲಿ ನಡೆದ ಈ ಅಧ್ಯಯನ ಇನ್ನೂ ಸಾಹಸದ ಹಲವು ಸಂಶೋಧನೆಗಳಿಗೆ ಹುಟ್ಟು ನೀಡಿತು.  2017ರಲ್ಲಿ ರಾಬಿನ್‌ ಮತ್ತು ಸಂಗಡಿಗರು, ಸಿಂಗಾಪೂರ್‌ ಮತ್ತು ಅಮೆರಿಕೆಯ ವಿಜ್ಞಾನಿಗಳ ಜೊತೆಗೆ ಸೇರಿಕೊಂಡು ಒಂದು ಹೊಸ ಕ್ರಾಂತಿಕಾರಿ ಅಧ್ಯಯನವನ್ನು ಪ್ರಕಟಿಸಿದರು. ಅನುವಂಶೀಯ, ಹೊರರೂಪ, ಹಾಡು ಹಾಗೂ ರೆಕ್ಕೆಪುಕ್ಕಗಳ ಮಾಹಿತಿಗಳನ್ನೆಲ್ಲ ಒಳಗೊಂಡು, ಆ ಪ್ರದೇಶದ ಹಕ್ಕಿಗಳನ್ನು ಮತ್ತೊಮ್ಮೆ ವರ್ಗೀಕರಿಸಿದರು. ಆಕಾಶದ್ವೀಪಗಳಲ್ಲಿ ಇರುವ ಲಾಫಿಂಗ್‌ ತ್ರಶ್ಗಳು ಹಾಗೂ ಪುಟ್ಟರೆಕ್ಕೆಯ ಹಕ್ಕಿಗಳು ಎರಡು ಹಾಡುಹಕ್ಕಿಗಳ ಪ್ರಭೇದಗಳು ಹಿಮಾಲಯದಲ್ಲಿರುವ ಇದೇ ಬಗೆಯ ಹಕ್ಕಿಗಳ ಸಂಬಂಧಿಗಳು ಎನ್ನುವ ಸಾಂಪ್ರದಾಯಿಕ ನಿಲುವನ್ನು ಈ ಅಧ್ಯಯನಗಳು ಪ್ರಶ್ನಿಸಿವೆ. 

ಬದಲಿಗೆ, ಈ ಮಾಹಿತಿಗಳು ಈ ಎರಡೂ “ಪ್ರಭೇದಗಳೂ” ಕೂಡ ಎರಡು ವಿಭಿನ್ನ ಕುಲವೆಂದೂ, ಇವು ಸುಮಾರು ಐವತ್ತು ಲಕ್ಷ ವರ್ಷಗಳ ಹಿಂದೆಯೇ ಹಿಮಾಲಯದ ಸಂಬಂಧಿಗಳಿಂದ ಪ್ರತ್ಯೇಕವಾಗಿ ಪಶ್ಚಿಮಘಟ್ಟದ ಆಕಾಶದ್ವೀಪಗಳಲ್ಲಿಯೇ ವಿಕಾಸವಾಗಿವೆ ಎಂದು ತಿಳಿಸಿದೆ. ಈ ಎರಡೂ ಗುಂಪುಗಳೂ ಕೂಡ ಒಂದೇ ಕಾಲಘಟ್ಟದಲ್ಲಿ ಹೀಗೆ ವಿಕಾಸವಾಗಿವೆ ಎನ್ನುವುದು ಭೌಗೋಳಿಕ ಅಂಶಗಳ ಮೇಲೆ ಹವಾಮಾನದ ಅಂಶಗಳೂ ಸೇರಿವೆ ಎನ್ನುವುದನ್ನು ಒತ್ತಿ ಹೇಳುತ್ತವೆ. 

ಪಶ್ಚಿಮಘಟ್ಟದ ಲಾಫಿಂಗ್‌ ತ್ರಶ್‌ ಗಳು ಈಗ ಮಾಂಟೆಸಿಂಕ್ಲಾ ಎನ್ನುವ, ನಾಲ್ಕು ಪ್ರಭೇದಗಳಿರುವ ಹೊಸ ಕುಲದ ಹೆಮ್ಮೆಯ ಪ್ರತಿನಿಧಿಗಳಾಗಿವೆ. ಇದೇ ರೀತಿಯಲ್ಲಿ ಪಶ್ಚಿಮಘಟ್ಟದ ಪುಟ್ಟರೆಕ್ಕೆಯ ಹಕ್ಕಿಗಳು ಶೋಲಿಕೋಲಾ ಎನ್ನುವ ಮೂರು ಪ್ರಭೇದಗಳಿರುವ ಹೊಸ ಕುಲದವಾಗಿವೆ. 

Two newly minted genera of songbirds of the Western Ghats Sky Islands. Ranges (a) and phylogenetic relationships of Montecincla (b) and Sholicola (c) species. Inset: map of the Western Ghats shows sampling localities (stars) and divisions of the sky islands based on differentiated taxa. b & c ML bootstrap values are shown at nodes. Bird illustrations by Maya Ramaswamy. Reprinted from Robin et al. 2017, BMC Evolutionary Biology, CC BY 4.0

ಪಶ್ಚಿಮಘಟ್ಟದ ಆಕಾಶದ್ವೀಪಗಳು ಎರಡು ಹೊಚ್ಚ ಹೊಸ ಪ್ರಭೇದಗಳನ್ನು ಹುಟ್ಟು ಹಾಕಿವೆ.  (a) ಮೊಂಟೆಸಿಂಕ್ಲಾ ದ ವ್ಯಾಪ್ತಿ ಹಾಗೂ (b) ಅನುವಂಶೀಯ ಸಂಬಂಧಗಳು ಹಾಗೂ (c) ಶೋಲಿಕೋಲ ಪ್ರಭೇದಗಳು. ಒಳಚಿತ್ರ: ನಕ್ಷತ್ರಗಳು ಪಶ್ಚಿಮಘಟ್ಟದಲ್ಲಿ ಈ ಹಕ್ಕಿಗಳನ್ನು ಅವುಗಳ ವಂಶವೃಕ್ಷಕ್ಕೆ ಅನುಗುಣವಾಗಿ ಬೇರ್ಪಡಿಸಿದ ನಕ್ಷೆಯನ್ನು ತೋರುತ್ತದೆ. ಹಕ್ಕಿಗಳ ಚಿತ್ರಗಳು: ಮಾಯಾ ರಾಮಸ್ವಾಮಿ. Reprinted from Robin et al. 2017, BMC Evolutionary Biology, CC BY 4.0

ರಾಬಿನ್‌ ನನಗೆ ಕಳಿಸಿದ ಇಮೇಲ್ ನಲ್ಲಿ ಹೀಗೆ ಹೇಳಿದ್ದಾನೆ:

ಈ ಗಮನಾರ್ಹವಾದ ಶೋಧವೆನ್ನುವುದು ಎರಡು ಕಾರಣಗಳಿಗೆ ಹೊಸ ಹೆಜ್ಜೆ ಎನಿಸಿದೆ. ಮೊದಲನೆಯದಾಗಿ, ಪಶ್ಚಿಮಘಟ್ಟಗಳನ್ನು ಭಾರತದಲ್ಲಿಯೇ ಅತಿ ವ್ಯಾಪಕವಾಗಿ ಅಧ್ಯಯನ ಮಾಡಿದ ಜೀವಿನೆಲೆ ಎಂದು ಹೇಳಲಾಗುತ್ತಿತ್ತು. ಈ ಶತಮಾನದಲ್ಲಿಯೇ ಮೊತ್ತ ಮೊದಲ ಬಾರಿಗೆ ಪತ್ತೆಯಾದ ಎರಡು ಹೊಸ ಪಕ್ಷಿಕುಲಗಳು ಇಲ್ಲಿನವು ಎನ್ನುವ ಅಂಶ ಪಶ್ಚಿಮಘಟ್ಟದ ಬಗ್ಗೆ ನಾವು ತಿಳಿಯಬೇಕಾದಿದ್ದು ಇನ್ನೂ ಇದೆ ಎನ್ನುತ್ತದೆ. ಎರಡನೆಯದಾಗಿ, ಹಾಗೂ ಬಹುಶಃ ನನ್ನ ಮಟ್ಟಿಗೆ ಬಹಳ ಪ್ರಮುಖವಾಗಿದ್ದು ಎಂದರೆ, ಈ ಅಧ್ಯಯನವು ಹೀಗೆ ದ್ವೀಪಗಳಂತೆ ಪ್ರತ್ಯೇಕವಾಗಿರುವ ನೆಲೆಗಳು ಕೆಲವು ಪ್ರಭೇದಗಳ ವಿಕಾಸದ ಮಟ್ಟಿಗೆ ಸಾಗರದ್ವೀಪಗಳನ್ನೇ ಹೋಲುತ್ತವೆಯೆಂದೂ, ಪಕ್ಷಿಗಳಂತಹ ಚುರುಕಾದ ಜೀವಿಗಳಲ್ಲಿಯೂ ಕೂಡ ವಿಕಾಸದ ಕವಲುಗಳೊಡೆಯುವಂತೆ ಮಾಡಬಲ್ಲವು ಎನ್ನುವುದನ್ನು ನಿರೂಪಿಸಿವೆ.”

ನಿಜ. ತಿಳಿಯದೇ ಇರುವುದು ಬಹಳವಿದೆ. ಆದರೆ ರಾಬಿನ್ನರಂತೆ ಗಾಢಾನುರಾಗದಿಂದ, ಬದ್ಧತೆಯಿಂದ ಸಂಶೋಧನೆ ನಡೆಸುವ ಯುವಕರು ಈ ಕ್ಷೇತ್ರದಲ್ಲಿ ಇದ್ದಾರೆ ಎನ್ನುವುದು ಭರವಸೆಯನ್ನು ಮೂಡಿಸುತ್ತದೆ. 

ಆದರೆ, ಇಂತಹ ಸಂಶೋಧನೆಗಳಿಗೆ ಸಾಕಷ್ಟು ದೀರ್ಘ ಕಾಲಾವಧಿಯಲ್ಲಿ ಸಾಂಸ್ಥಿಕ ಹಾಗೂ ಆರ್ಥಿಕ ಬೆಂಬಲ ಅವಶ್ಯಕ ಎನ್ನುವುದನ್ನೂ ನಾವು ಮನಗಾಣಬೇಕು. ಭಾರತೀಯ ವಿಜ್ಞಾನಿಗಳು ಕೇವಲ ಹಿಂಬಾಲಕರಾಗದೆಯೇ, ಪ್ರಪಂಚದಲ್ಲಿ ಮುಖಂಡರಾಗಿ, ಪಠ್ಯಪುಸ್ತಕಗಳಲ್ಲಿರುವ ವಿಷಯಗಳನ್ನು ತಿದ್ದುವ ಅವಕಾಶವನ್ನು ಒದಗಿಸುತ್ತದೆ. ಈ ಸವಾಲನ್ನು ಯುವ ವಿಜ್ಞಾನಿಗಳು ಎದುರಿಸಬಲ್ಲರೆನ್ನುವುದು ನನಗೆ ಗೊತ್ತು. ಆದರೆ ನಿಧಾನದ್ರೋಹಿ, ಸಾಂಪ್ರದಾಯಿಕ ಆಡಳಿತ ವ್ಯವಸ್ಥೆ ಈ ಸವಾಲನ್ನು ಎದುರಿಸಬಲ್ಲುದೇ? 


ಇದು ಜಾಣ ಅರಿಮೆ. ಆಂಗ್ಲ ಮೂಲ: ಪ್ರೊಫೆಸರ್‌. ರಾಘವೇಂದ್ರ ಗದಗ್ಕರ್, ಕನ್ನಡಾನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್.‌ ಮಂಜುನಾಥ; ಈ ಲೇಖನ ಮೊದಲಿಗೆ ದಿ ವೈರ್‌ ಸೈನ್ಸ್‌ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. 

Scroll To Top