Representative image: Panos Sakalakis/Unsplash.
The following text, in Kannada, was translated from the English original, by Raghavendra Gadagkar, entitled ‘More Fun Than Fun: The Marvellous World of Outsourcing Parenting Duties’ and published on The Wire Science on December 23, 2020.
Kollegala Sharma kindly provided the translated version. It has also been rendered as a podcast by J.R. Manjunatha, available to listen below. Sharma and his team will similarly convert future editions of Gadagkar’s column as podcasts, as part of an audio series called ‘JanaArime’.
Sharma is a chief scientist and Manjunatha is a technical officer, both at the CSIR-Central Food Technological Research Institute, Mysuru. His popular ‘Janasuddi’ podcast series is available to listen here.
§
ಜಾಣ ಅರಿಮೆ
ವಿಸ್ಮಯಕ್ಕಿಂತ ವಿಸ್ಮಯ: ಸಂಚಿಕೆ 8
ಎರವಲು ಪೋಷಕರ ಅದ್ಭುತ ಪ್ರಪಂಚ
ಮೂಲ: ಪ್ರೊ. ರಾಘವೇಂದ್ರ ಗದಗಕರ್ಅ
ನುವಾದ: ಕೊಳ್ಳೇಗಾಲ ಶರ್ಮ
ಮನುಷ್ಯನ ವಿವಿಧ ಸಂಸ್ಕೃತಿಗಳ ಕಲ್ಪನೆಗಳಲ್ಲಿ ಸಾವಿರಾರು ವರ್ಷಗಳಿಂದಲೂ ಕೋಗಿಲೆ ಒಂದು ಪ್ರಧಾನ ಸ್ಥಾನವನ್ನು ಆಕ್ರಮಿಸಿದೆ. ಪ್ರಾಯಶಃ ಎರಡು ವಿಭಿನ್ನ ಹಾಗೂ ವಿಪರ್ಯಾಸದ ಕಾರಣಗಳಿಂದಾಗಿ ನಮ್ಮ ಮನಸ್ಸನ್ನು ಆವರಿಸಿಕೊಂಡಿರುವ ಸಂಗತಿಗಳಲ್ಲಿ ಕೋಗಿಲೆಯ ಸ್ಥಾನ ಅನನ್ಯ. ನಾವು ಗಂಡು ಕೋಗಿಲೆಯ ಸುಶ್ರಾವ್ಯ ಹಾಡನ್ನು ಎಷ್ಟು ಇಷ್ಟ ಪಡುತ್ತೇವೆಂದರೆ ಅದು ಮುದಗೊಳಿಸುವ ಸಂಗೀತಕ್ಕೆ ಒಂದು ರೂಪಕವಾಗಿಬಿಟ್ಟಿದೆ. “ವಸಂತ ಕೋಗಿಲೆ” ಎನ್ನುವ ಬಿರುದು ಅದಕ್ಕೆ ದಕ್ಕಿರುವುದು ಗಂಡು ಕೋಗಿಲೆಯ ಈ ಹಾಡಿಗಾಗಿ.
ಇನ್ನೊಂದೆಡೆ, ಕೋಗಿಲೆ ಒಂದು ಪರಪುಟ್ಟ ಹಕ್ಕಿ. ಅದು ತನಗೆಂದು ಗೂಡನ್ನು ಎಂದೂ ಕಟ್ಟುವುದಿಲ್ಲ. ತನ್ನ ಮರಿಗಳನ್ನು ಆರೈಕೆ ಮಾಡುವುದೂ ಇಲ್ಲ. ಬದಲಿಗೆ ಹೆಣ್ಣು ಕೋಗಿಲೆಯು ಬೇರೆ ಪ್ರಭೇದಗಳ ಹಕ್ಕಿಗಳ ಗೂಡಿನಲ್ಲಿ ಕಳ್ಳತನದಿಂದ ಮೊಟ್ಟೆ ಇಟ್ಟು, ಮೊಟ್ಟೆಗಳನ್ನು ಆ ಹಕ್ಕಿಗಳು ಮರಿಯಾಗುವವರೆಗೂ ರಕ್ಷಿಸಿ, ಆರೈಕೆ ಮಾಡುವಂತೆ ಮೋಸ ಮಾಡುತ್ತದೆ. ಹಾಂ. ಅವುಗಳ ಮರಿಗಳ ಜೊತೆಗೆ ಅಲ್ಲ, ಅವುಗಳ ಮರಿಗಳಲ್ಲಿ ಕೆಲವದರ ಸ್ಥಾನದಲ್ಲಿ ಹೀಗೆ ತನ್ನ ಮೊಟ್ಟೆಗಳನ್ನು ಸೇರಿಸುತ್ತದೆ. ಚಿರಪರಿಚಿತವಾದ ಮಾತೃಪ್ರೇಮದ ಬದಲಿಗೆ ತಾಯಿಯ ಈ ನಿರ್ಲಕ್ಷ್ಯದ ನಡೆಯಿಂದ ಜನಕ್ಕೆ ಎಂತಹ ಆಘಾತವಾಗಿದೆ ಎಂದರೆ ಈ ನಡತೆಯನ್ನೂ ರೂಪಕವನ್ನಾಗಿಸಿ “ಕಪಟತನಕ್ಕೆ”, ಆಂಗ್ಲದಲ್ಲಿ ಕಕೂಲ್ಡ್ ಎಂದು ಹೆಸರಿಸಿಬಿಟ್ಟಿದ್ದಾರೆ..
ಕೋಗಿಲೆಯ ಹಾಡು ಹಾಗೂ ಅದರ ಈ ಕಪಟತನ ಎರಡರ ಬಗ್ಗೆಯೂ ವಿಕಾಸದ ವಿಜ್ಞಾನಿಗಳಿಗೆ ತಮ್ಮದೇ ಆದ ಕುತೂಹಲವಿದೆ. ಮೊದಲನೆಯದಾಗಿ ಈ ಎರಡನೆಯದರ ಬಗ್ಗೆ ತಿಳಿಯೋಣ. ಹೆಣ್ಣು ಕೋಗಿಲೆ ಮೋಸ ಮಾಡಲೆಂದೆ ಹಲವು ಅದ್ಭುತ ಹೊಂದಾಣಿಕೆಗಳ ವರವನ್ನು ಪಡೆದಿದೆ. ಅದು ತನ್ನ ಸೀಮೆಯಲ್ಲಿರುವ ಹಕ್ಕಿಗಳ ಗೂಡುಗಳಲ್ಲಿ ಯಾವುದರಲ್ಲಿ ಮೊಟ್ಟೆ ಇಡಲು ಅವಕಾಶ ಇದೆ ಎಂದು ಬಹಳ ಎಚ್ಚರಿಕೆಯಿಂದ ಸರ್ವೇಕ್ಷಣೆ ನಡೆಸುತ್ತದೆ. ಅನಂತರ ಆ ಹಕ್ಕಿ ಮೊಟ್ಟೆ ಇಡುವ ಬಗ್ಗೆ ನಿಗಾ ಇಡುತ್ತದೆ. ಆತಿಥೇಯ ಹಕ್ಕಿಗಳು ಮೊಟ್ಟೆ ಇಡಲು ಆರಂಭಿಸಿದ ಮೇಲೆ, ಹಾಗೂ ಆಯಾ ಪ್ರಭೇದಗಳಿಗೆ ನಿರ್ದಿಷ್ಟವಾದ ಸಂಖ್ಯೆ ಮೊಟ್ಟೆಗಳಲ್ಲಿ ಕೊನೆಯ ಮೊಟ್ಟೆಯನ್ನು ಇಡುವುದಕ್ಕೂ ಮುನ್ನ ಆ ಗೂಡಿಗೆ ಕೋಗಿಲೆ ಹಾರಿ ಹೋಗಿ, ಅಲ್ಲಿದ್ದ ಒಂದು ಮೊಟ್ಟೆಯನ್ನು ಕದ್ದು ತಿನ್ನುತ್ತದೆ. ಹಾಗೂ ಅದರ ಜಾಗದಲ್ಲಿ ತನ್ನ ಮೊಟ್ಟೆಯನ್ನು ಸೇರಿಸಿಬಿಡುತ್ತದೆ. ಇವೆಲ್ಲ ಕೇವಲ ಹತ್ತೇ ಸೆಕೆಂಡುಗಳಲ್ಲಿ ನಡೆಯುತ್ತವೆ. ಸಾಮಾನ್ಯವಾಗಿ ಹಕ್ಕಿಗಳು ಮೊಟ್ಟೆ ಇಡಲು ಅಂದಾಜು ಇಪ್ಪತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತವೆ ಎನ್ನುವುದಕ್ಕೆ ಇದನ್ನು ಹೋಲಿಸಿ.
ಆತಿಥೇಯ ಹಕ್ಕಿಯ ಹೆಣ್ಣು ಮೊಟ್ಟೆಯನ್ನು ಮುಂಜಾವಿನಲ್ಲಿ ಇಟ್ಟಿದ್ದರೆ, ಹೆಣ್ಣು ಕೋಗಿಲೆ ಬಹಳ ಜಾಗ್ರತೆಯಿಂದ ತನ್ನ ಮೊಟ್ಟೆಯನ್ನು ನಡು ಮಧ್ಯಾಹ್ನ ಇಡುತ್ತದೆ. ತಮ್ಮ ಮೊಟ್ಟೆಗಳು ಆತಿಥೇಯ ಹಕ್ಕಿಯ ಮೊಟ್ಟೆಗಳ ಗಾತ್ರದಷ್ಟೇ ಇರುವಂತೆ ಈ ಪರಪುಟ್ಟ ಕೋಗಿಲೆಗಳಲ್ಲಿ ಹೊಂದಾಣೀಕೆ ಇರುತ್ತದೆ. ಹಾಗೆಯೇ ಹೀಗೆ ಬೇರೆ ಗೂಡುಗಳಲ್ಲಿ ಮೊಟ್ಟೆ ಇಡದಿದ್ದರೆ ಎಷ್ಟು ಮೊಟ್ಟೆಗಳನ್ನು ಇಡಬೇಕಾಗುತ್ತಿತ್ತೋ, ಅದರ ಮೂರನೇ ಒಂದು ಸಂಖ್ಯೆಯ ಮೊಟ್ಟೆಗಳನ್ನಷ್ಟೆ ಇವು ಇಡುತ್ತವೆ.
ಪ್ರಾಯಶಃ ಅವುಗಳ ಅತ್ಯುತ್ತಮ ಹೊಂದಾಣಿಕೆ ಎಂದರೆ ತಮ್ಮ ಆತಿಥೇಯ ಹಕ್ಕಿಗಳ ಮೊಟ್ಟೆಗಳ ಬಣ್ಣ ಹಾಗೂ ಅವುಗಳ ಮೇಲಿರುವ ಚುಕ್ಕೆಗಳ ವಿನ್ಯಾಸದಂತೆಯೇ ತಮ್ಮ ಮೊಟ್ಟೆಗಳೂ ಇರುವಂತೆ ವಿಕಾಸವಾಗಿರುವುದು. ಇದು ವಿಶೇಷ. ಏಕೆಂದರೆ ಕೋಗಿಲೆಗಳ ವಿವಿಧ ತಳಿಗಳು ವಿಭಿನ್ನ ಆತಿಥೇಯ ಹಕ್ಕಿಗಳ ಗೂಡುಗಳಲ್ಲಿ ಅವಕ್ಕೇ ವಿಶಿಷ್ಟವಾದ ಮೊಟ್ಟೆಗಳನ್ನು ಇಡಬೇಕಾಗುತ್ತದೆ. ಈ ಎಲ್ಲ ಹೊಂದಾಣಿಕೆಗಳೂ ಕೋಗಿಲೆಯ ಸ್ಥಿರವಾದ ಪರಿಸರಕ್ಕೆ ಬೇಕಾದ ಹೊಂದಾ ಣಿಕೆಗಳಲ್ಲ. ಇವು ಜೀವಂತ, ವಿಕಾಸವಾಗುತ್ತಿರುವ ಹಾಗೂ ಆ ಮೂಲಕ ಕೋಗಿಲೆಯ ಈ ನಡತೆಗೆ ಪೆಟ್ಟು ಕೊಡಬಲ್ಲ ಆತಿಥೇಯ ಹಕ್ಕಿಗಳಿಗೆ ತಕ್ಕಂತೆ ಹೊಂದಿಕೊಳ್ಳುವಂತೆ ಬೆಳೆಸಿಕೊಂಡ ಗುಣಗಳು ಎನ್ನುವುದು ವಿಶೇಷ.
ಆತಿಥೇಯ ಹಕ್ಕಿಗಳು ಕೂಡ ತಿರುಗೇಟು ನೀಡುತ್ತವೆ. ಈ ಬಗೆಯಲ್ಲಿ ಪರಜೀವಿಗಳಿಂದ ಬಾಧೆಯನ್ನು ಕಡಿಮೆ ಮಾಡಲು ಅವುಗಳಲ್ಲಿ ಇರುವ ಹೊಂದಾಣಿಕೆಯೂ ಅದ್ಭುತವೇ. ಇದರ ಫಲವೇನೆಂದರೆ ಆತಿಥೇಯರು ಹಾಗೂ ಪರಜೀವಿಗಳ ನಡುವೆ ನಡೆಯುವ ಒಂದು ವಿಕಾಸದೋಟದ ಸ್ಪರ್ಧೆ. ಆತಿಥೇಯರು ಪರಪುಟ್ಟಗಳ ಕೆಲವು ಮೊಟ್ಟೆಗಳನ್ನು ಬಿಸಾಡಿ, ತಮ್ಮ ಸಂತತಿ ನಶಿಸಿಹೋಗದಂತೆ ಕಾಯ್ದುಕೊಳ್ಳುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಪರಪುಟ್ಟಗಳು ಆತಿಥೇಯ ಹಕ್ಕಿಗಳು ತಮ್ಮ ಮೊಟ್ಟೆಗಳಲ್ಲಿ ಸಾಕಷ್ಟನ್ನು ಪೋಷಿಸುವುದನ್ನು ಖಚಿತಪಡಿಸಿಕೊಳ್ಳುತ್ತವೆ. ಹೀಗೆ ಎರಡೂ ಹಕ್ಕಿಗಳೂ ಅಳಿವಿನಿಂದ ತಮ್ಮನ್ನು ಕಾಯ್ದುಕೊಳ್ಳುತ್ತೆ. ಇದುವೇ ನಿಸರ್ಗದಲ್ಲಿ ತೋರುವ ಅದ್ಭುತ ಸಮತೋಲ.
ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ನಿಕೊಲಾಸ್ ಬ್ಯಾರಿ ಡೇವೀಸ್ ಮತ್ತು ಮೈಖೇಲ್ ಬ್ರೂಕ್, ೧೯೮೮ರಲ್ಲಿ ಪ್ರಕಟಿಸಿದ ಅಧ್ಯಯನ ಈ ನಿಟ್ಟಿನಲ್ಲಿ ಒಂದು ಮೈಲುಗಲ್ಲು. ಪರಜೀವಿಗಳು ಮತ್ತು ಅವುಗಳ ಆತಿಥೇಯ ಪ್ರಭೇದಗಳ ನಡುವಿನ ಈ ವಿಕಾಸದ ಸ್ಪರ್ಧೆಯ ಜಾಡಿನಲ್ಲಿ ಅವರು ಒಂದೊಂದೇ ತರ್ಕ ಹಾಗೂ ಪ್ರಯೋಗಗಳ ಮೂಲಕ ಪುಟ್ಟ, ಪುಟ್ಟ ಹೆಜ್ಜೆಗಳನ್ನಿಟ್ಟು ಮುಂದುವರೆದರು. ತಮ್ಮ ವಿವಿಯಿಂದ ಹದಿನೈದು ಕಿಲೋಮೀಟರು ದೂರವಿದ್ದ ಪಾಳುಬೀಡಿನಲ್ಲಿ ಇದ್ದ ಅಕ್ರೊಕೆಫಾಲಸ್ ಸಿರ್ಪೇಸಿಯಸ್ ಎನ್ನುವ ಬೆಳ್ಳಕ್ಕಿಗಳ ಗೂಡುಗಳನ್ನು ಇವರು ಅಧ್ಯಯನ ಮಾಡಿದರು. ಇದು ಸಾಮಾನ್ಯಕೋಗಿಲೆಯ ಆತಿಥೇಯ ಹಕ್ಕಿ. ಇವರು ನಡೆಸಿದ ಪ್ರಯೋಗಗಳು ಅವುಗಳ ಫಲಿತಾಂಶಗಳಷ್ಟೆ ಸ್ವಾರಸ್ಯಕರವಾಗಿತ್ತು ಎನ್ನಿ. ಇವರು ತಾವೇ ಕೋಗಿಲೆಗಳಂತೆ ಆಡಿ ಆತಿಥೇಯ ಹಕ್ಕಿಗಳ ನಿಸರ್ಗ ಸಹಜವಾದ ಗೂಡುಗಳನ್ನು ಅಧ್ಯಯನ ಮಾಡಿದ್ದರು. ಇದಕ್ಕಾಗಿ ಇವರು ಕೋಗಿಲೆಯ ಮೊಟ್ಟೆಗಳ ರೀತಿಯೇ ಇರುವ ಮಾದರಿ ಮೊಟ್ಟೆಗಳನ್ನು ಕೃತಕವಾಗಿ ತಯಾರಿಸಿ, ಅವನ್ನು ಎಷ್ಟು ಸಾಧ್ಯವೋ ಅಷ್ಟೂ ಕಳ್ಳತನದಿಂದ ಬೆಳ್ಳಕ್ಕಿಯ ಗೂಡುಗಳೊಳಗೆ ಇಟ್ಟರು. ಈ ಮಾದರಿ ಮೊಟ್ಟೆಗಳನ್ನು ಬೆಳ್ಳಕ್ಕಿಗಳು ಅವು ನಿಜವಾದ ಕೋಗಿಲೆಯ ಮೊಟ್ಟೆಗಳೇ ಏನೋ ಎಂಬಂತೆ ಒಪ್ಪಿಕೊಂಡವು. ಇದನ್ನು ಅವರು ಮೊದಲು ಕಂಡಾಗ ಎಂತ ಪುಳಕವಾಗಿರಬೇಕು!
ಇವರ ಪ್ರಯೋಗಗಳಲ್ಲಿ ನಿರ್ಣಾಯಕವಾಗಿದ್ದ ಅಂಶವೇನೆಂದರೆ ಇವರೇ ಪೆದ್ದ ಕೋಗಿಲೆಯಂತೆ ವರ್ತಿಸುವುದು. ಬೆಳ್ಳಕ್ಕಿಯ ಗೂಡಿನೊಳಗೆ ಕಳ್ಳತನದಿಂದ ಕೃತಕ ಮೊಟ್ಟೆಗಳನ್ನು ಇಡುವುದಕ್ಕೆ ಮುನ್ನ, ಡೇವೀಸ್ ಮತ್ತು ಬ್ರೂಕ್ ಕೆಲವು ಕೃತಕ ಮೊಟ್ಟೆಗಳ ಬಣ್ಣ ಮತ್ತು ಮೈಮೇಲಿನ ಚುಕ್ಕೆಗಳನ್ನು ಬೇಕೆಂದೇ ಬೆಳ್ಳಕ್ಕಿಗಳ ಮೊಟ್ಟೆಗಿಂತ ಭಿನ್ನವಾಗಿರುವಂತೆ, ಇನ್ನು ಕೆಲವು ಮೊಟ್ಟೆಗಳ ಗಾತ್ರ ದೊಡ್ಡದಾಗಿರುವಂತೆ ಮಾಡಿದರು. ಈ ಮೊಟ್ಟೆಗಳನ್ನು ಆತಿಥೇಯ ಹೆಣ್ಣು ಮೊಟ್ಟೆ ಇಡುವ ಮುನ್ನ ಹಾಗೂ ಮೊಟ್ಟೆ ಇಟ್ಟ ನಂತರ ಮಧ್ಯಾಹ್ನದ ವೇಳೆ ಇಡುವ ಬದಲಿಗೆ ಬೆಳ್ಳಂಬೆಳಗ್ಗೆಯೇ ಗೂಡಿನೊಳಗೆ ಸೇರಿಸಿ ಪರೀಕ್ಷಿಸಿದರು. ಕೋಗಿಲೆಗಳು ಮಾಡುವಂತೆ ಕೃತಕ ಮೊಟ್ಟೆಗಳನ್ನು ಗೂಡಿನೊಳಗೆ ಸೇರಿಸುವ ಮೊದಲು ಅಲ್ಲಿದ್ದ ಮೊಟ್ಟೆಗಳನ್ನು ಒಮ್ಮೊಮ್ಮೆ ತೆಗೆದರು, ಒಮ್ಮೊಮ್ಮೆ ತೆಗೆಯದೆ ಹಾಗೆಯೇ ಬಿಟ್ಟು ಪರೀಕ್ಷಿಸಿದರು. ಉದ್ದೇಶ ಪೂರ್ವಕವಾಗಿ ಮಾಡಿದ ಇಂತಹ “ತಪ್ಪುಗಳು” ಕೋಗಿಲೆಗೆ ಶಿಕ್ಷೆಯಾಗುವುದೇ ಎಂದು ಪರೀಕ್ಷಿಸುವುದೇ ಇವರ ಗುರಿಯಾಗಿತ್ತು.
ಕೋಗಿಲೆಯು ಸಹಜವಾಗಿ ಮಾಡುವುದರಿಂದ ಒಂದಿಷ್ಟು ವ್ಯತ್ಯಾಸವಿದ್ದರೂ, ಹೆಚ್ಚು ಕೃತಕ ಮೊಟ್ಟೆಗಳನ್ನು ಹಕ್ಕಿಗಳು ತ್ಯಜಿಸುತ್ತಿದ್ದವು. ಕೋಗಿಲೆಗಳು ಮಾಡುವುದೇನೆಂಬುದನ್ನು ತಿಳಿಯಲು ಇವರಿಬ್ಬರೂ ಕೋಗಿಲೆಯನ್ನೇ ಅಣಕಿಸಿದರೂ, ಕೆಟ್ಟದಾಗಿ ಅಣಕಿಸಿದಂತೆ ನಟಿಸಿದರು. ಎಂಥಾ ಮಜಾ ಅಲ್ಲವೇ?
ಈ ಆಟ ಆಡಲು ಅವರಿಗೆ ಹೆಚ್ಚೇನೂ ಬೇಕಿರಲಿಲ್ಲ. ವಿಶೇಷವಾದ ಪ್ರಯೋಗಾಲಯವಾಗಲಿ, ಸಾಧನಗಳಾಗಲಿ, ಅಥವಾ ಧನವಾಗಲಿ ಬೇಕಿರಲಿಲ್ಲ. ಬೇಕಿದ್ದೆಲ್ಲ ಒಂದು ಬೈಸಿಕಲ್ಲು, ಒಂದು ಬೈನಾಕ್ಯುಲರ್ರು, ಹಾಗೂ ಸುಲಭವಾಗಿ ತಯಾರಿಸಬಹುದಾದ ಮಾದರಿ ಮೊಟ್ಟೆಗಳು ಮತ್ತು ನಿಸರ್ಗದಲ್ಲಿ ಕಾಣುವ ಇಂತಹ ರಹಸ್ಯಗಳನ್ನು ಬಯಲಿಗೆಳೆಯುವ ಅದಮ್ಯ ಹುಮ್ಮಸ್ಸು ಅಷ್ಟೆ. ಯಾರು ಬೇಕಿದ್ದರೂ ಮಾಡಬಹುದಾದಂತಹ ಸಂಶೋಧನೆಗಳೆಂದರೆ ನನಗೂ ಬಲು ಇಷ್ಟ..
ಇವರಿಬ್ಬರೂ ಹೀಗೆ ಆತಿಥೇಯ ಹಕ್ಕಿಗಳ ಗೂಡಿನಲ್ಲಿ ಅತಿ ಹೆಚ್ಚು ಮೊಟ್ಟೆಗಳನ್ನು ಇಡಲು ಬೇಕಾದ ಹೊಂದಾಣಿಕೆ ಕೋಗಿಲೆಗೆ ಇದೆ ಎಂದು ನಿರೂಪಿಸಿದರು. ಹಾಗಿದ್ದರೆ ಆ ಆತಿಥೇಯ ಹಕ್ಕಿಗಳ ಕಥೆ ಏನು ಎಂದಿರಾ? ಅವು ನೈಜವೋ, ಕೃತಕವೋ ಒಟ್ಟಾರೆ ಕೋಗಿಲೆಗಳ ಮೊಟ್ಟೆಗಳೆಲ್ಲವನ್ನೂ ಗೂಡಿನಿಂದ ಹೊರಗೆ ತಳ್ಳುವುದಿಲ್ಲವೇಕೆ? ಇದಕ್ಕೆ ಉತ್ತರ ಇಷ್ಟೆ. ಇದು ಕೆಲವೊಮ್ಮೆ ದುಬಾರಿ ಆಗಬಹುದು. ತಮ್ಮ ಮೊಟ್ಟೆಗಳಿಗಿಂತ ತುಸು ಭಿನ್ನವಾಗಿರುವ ಮೊಟ್ಟೆಗಳನ್ನು ಇಟ್ಟುಕೊಳ್ಳದೆ ಬಿಸಾಡುವುದೇ ಆದರೆ, ಅವು ತಮ್ಮದೇ ಮೊಟ್ಟೆಗಳನ್ನೂ ಬಿಸಾಡಿ ಬಿಡುವ ಸಾಧ್ಯತೆ ಇದೆ. ಹೀಗೆ ಆತಿಥೇಯ ಹಾಗೂ ಪರಜೀವಿಗಳ ನಡುವೆ ಒಂದು ಜಿದ್ದಾಜಿದ್ದಿ ನಡೆಯುತ್ತದೆ. ಇದು ವಿಕಾಸ ನಡೆಯುವ ದೀರ್ಘಾವಧಿಯ ಕಾಲದಲ್ಲಿ ನಡೆಯುವ ಸ್ಪರ್ಧೆ ಅಷ್ಟೆ. ಇದರ ಫಲವಾಗಿ ತಮ್ಮಿಬ್ಬರ ಸಂತತಿಯೂ ಮಿಲಿಯನ್ ಗಟ್ಟಲೆ ವರ್ಷ ಅಳಿಯದೆಯೇ ಉಳಿಯುವಂತಹ ಒಂದು ಸಮತೋಲವನ್ನು ಇವೆರಡೂ ಕಂಡುಕೊಂಡಿವೆ ಎನ್ನಬಹುದು.
ಎಂಥ ಅದ್ಭುತ. ಇದರಿಂದ ಅಚ್ಚರಿಗೊಳ್ಳದೇ ಇರಲು ನನಗೆ ಸಾಧ್ಯವಿಲ್ಲ.
ಆದರೆ ಇಲ್ಲೂ ಒಂದು ನಿಗೂಢವಿದೆ. ಹೆಣ್ಣು ಕೋಗಿಲೆ ಆತಿಥೇಯ ಗೂಡಿನೊಳಗೆ ತನ್ನ ಮೊಟ್ಟೆಯನ್ನು ಸೇರಿಸಲು ಅಲ್ಲಿಂದ ಒಂದೇ ಒಂದು ಮೊಟ್ಟೆಯನ್ನು ತೆಗೆದು ಬಿಸಾಡುತ್ತದೆ. ಅದಕ್ಕಿಂತ ಹೆಚ್ಚನ್ನು ತೆರವುಗೊಳಿಸಿದರೆ ಆತಿಥೇಯ ಹಕ್ಕಿ ಗೂಡನ್ನೇ ತೊರೆದು ಹೋಗುವ ಸಂಭವವೂ ಇದ್ದೀತು. ಆದ್ದರಿಂದ ಒಂದು ಕೋಗಿಲೆಯ ಮೊಟ್ಟೆಯ ಜೊತೆಗೆ ಮೂರು ಆತಿಥೇಯ ಮೊಟ್ಟೆಗಳು ಒಡೆದು ಹಸಿದ ಮರಿಗಳಾಗುತ್ತವೆ. ಅನಂತರ ನಡೆಯುವ ನಾಟಕ ಇನ್ನೂ ವಿಸ್ಮಯಕಾರಿ. ಮೊಟ್ಟೆಯೊಡೆದ ಇಪ್ಪತ್ತನಾಲ್ಕು ಗಂಟೆಗಳೊಳಗೆ , ಇನ್ನೂ ಕಣ್ಣು ಕೂಡ ತೆರೆಯದ, ರೆಕ್ಕೆ ಪುಕ್ಕ ಮೊಳೆಯದ ಬೆತ್ತಲೆ ಮೈಯ ಕೋಗಿಲೆಯ ಮರಿ ಅತ್ಯಂತ ಜಟಿಲವಾದ ನಡೆಗಳಿಂದ, ತನ್ನ ಮೈಯನ್ನೇ ಬಳಸಿಕೊಂಡು ಅಲ್ಲಿ ಉಳಿದ ಇತರೆ ಮೊಟ್ಟೆಗಳು ಅಥವಾ ಮರಿಗಳನ್ನು ಗೂಡಿನಿಂದ ಹೊರಗೆ ತಳ್ಳಿಬಿಟ್ಟು, ತಾನೊಬ್ಬನೇ ಗೂಡಿನ ನಿವಾಸಿಯಾಗುತ್ತದೆ. ಆತಿಥೇಯನೋ ಈ ಮರಿ ಬೆಳೆದು ತನಗಿಂತಲೂ ಐದು ಪಟ್ಟು ದೊಡ್ಡದಾಗಿ, ಇಡೀ ಗೂಡನ್ನೇ ತುಂಬಿಕೊಂಡಾಗಲೂ ಅದಕ್ಕೆ ಉಣಿಸು ತಂದು ನೀಡುತ್ತಿರುತ್ತದೆ. ಡೇವೀಸ್ ಮತ್ತು ಅವರ ವಿದ್ಯಾರ್ಥಿಗಳು ಈ ರೀತಿಯಲ್ಲಿ ಆತಿಥೇಯ ಹಕ್ಕಿ ಮತ್ತೆ ಮೋಸ ಹೋಗುವುದೇಕೆ ಎನ್ನುವ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಲು ಆತಿಥೇಯ ಹಾಗೂ ಕೋಗಿಲೆಯ ಮರಿಗಳ ನಡುವಣ ಸಂಬಂಧಗಳನ್ನು ಅಧ್ಯಯನ ಮಾಡಿದ್ದಾರೆ. ಈ ಕೋಗಿಲೆಯ ಮರಿ ತೋರುವ ನಡೆಗಳು ಹಾಗೂ ಮಾಡುವ ಸದ್ದುಗಳಲ್ಲಿ ಉತ್ಪ್ರೇಕ್ಷೆ ಎಷ್ಟಿರುತ್ತದೆ ಎಂದರೆ ಅವು ನಾಲ್ಕು ಹಸಿದ ಮರಿಗಳದ್ದರಂತೆ ತೋರಿ, ಆತಿಥೇಯ ಹಕ್ಕಿ ಗುಟುಕು ನೀಡುವಂತೆ ಅವನ್ನು ಮರುಳು ಮಾಡುತ್ತವೆ. ಆದರೆ ಈಗಿನ ಸಮಸ್ಯೆ ಏನೆಂದರೆ ಈ ದೊಡ್ಡ ಬಾಯಿಯ ಕೋಗಿಲೆಯ ಮರಿಗೆ ಗುಟುಕು ನೀಡದೇ ಇರುವುದು ತನ್ನ ಮರಿಗಳನ್ನು ಬೆಳೆಸಲು ನೆರವಾಗುವುದಿಲ್ಲ. ಅಲ್ಲದೆ ಹೀಗೆ ಗುಟುಕು ಬೇಡುವ ಕೋಗಿಲೆಯ ಹಕ್ಕಿಯ ಈ ಅಣಕಾಟಗಳು ಆತಿಥೇಯ ಹಕ್ಕಿಯ ತಾಯಿ ಭಾವನೆಯನ್ನು ಮೊಟ್ಟೆಗಳಿಗಿಂತಲೂ ಪ್ರಭಾವಶಾಲಿಯಾಗಿ ಕೆಣಕುತ್ತದೆ. ನಮ್ಮಂತೆಯೇ, ಹಕ್ಕಿಗಳಲ್ಲಿಯೂ ಮರಿಗಳ ಆರೈಕೆಗೆ ಪ್ರೇರೇಪಿಸುವ ಬಲು ಜಟಿಲವಾದ ಹಾರ್ಮೋನುಗಳ ವ್ಯವಸ್ಥೆ ಇದೆ. ಅಳುತ್ತಾ ಗುಟುಕು ಬೇಡುವ ಮರಿಗಳನ್ನು ಕಂಡಾಗ ಆ ವ್ಯವಸ್ಥೆಯನ್ನು ಬೇಕೆಂದರೂ ನಿಲ್ಲಿಸುವುದು ಸುಲಭವಲ್ಲ.
ಇರಲಿ. ನಿಸರ್ಗದಲ್ಲಿ ಕಾಣುವ ಇಂತಹ ವಿದ್ಯಮಾನಗಳ ಬಗ್ಗೆ ನಾವು ಭಾವುಕರಾಗದೆ, ಈ ಹಗ್ಗಜಗ್ಗಾಟದ ಪಾತ್ರಧಾರಿಗಳಲ್ಲಿ ಯಾರ ಪರವಾಗಿಯೂ ವಕಾಲತ್ತು ಮಾಡದೇ ಇರೋಣ. ಈ ಪರಜೀವಿಯ ನಡೆ ಕ್ರೂರ ಹಾಗೂ ಅನ್ಯಾಯದ್ದು ಎನ್ನುವ ಭಾವನೆ ನಮಗೆ ಇರುವುದರಿಂದ ಆತಿಥೇಯ ಹಕ್ಕಿಗೆ ಹೆಚ್ಚು ನಷ್ಟವಾಗಿದೆ ಎಂಬ ಅನಿಸಿಕೆ ಸಹಜವೇ. ಆದರೆ ಆತಿಥೇಯ ಹಕ್ಕಿ ಪರಪುಟ್ಟನ ಮೊಟ್ಟೆಗಳನ್ನು ಬಿಸಾಡಿದರೆ ಪರಪುಟ್ಟನಿಗೂ ನಷ್ಟವಾಗುತ್ತದೆ. ಪರಪುಟ್ಟನ ನಡವಳಿಕೆಗಳಿಂದ ಆತಿಥೇಯ ಹಕ್ಕಿಗಳಿಗೆ ಆಗುವ ಅನ್ಯಾಯ ಹೆಚ್ಚೋ ಅಥವಾ ಆತಿಥೇಯನ ನಡವಳಿಕೆಗಳಿಂದ ಪರಪುಟ್ಟನ ಸಮುದಾಯಕ್ಕೆ ಆಗುವುದು ಹೆಚ್ಚೋ ಎನ್ನುವುದನ್ನು ಗಣಿಸುವುದು ಸುಲಭವಲ್ಲ. ಇದು ಹಕ್ಕಿಗಳ ವಿವಿಧ ಪ್ರಭೇದಗಳಲ್ಲಿ ವಿಭಿನ್ನವಾಗಿರಬಹುದು. ಅವವೇ ಹಕ್ಕಿಗಳಿದ್ದರೂ ವಿವಿಧ ಋತುಗಳಲ್ಲಿಯೂ, ವಿವಿಧ ಸ್ಥಳಗಳಲ್ಲಿಯೂ ಬೇರೆಯಾಗಿರಬಹುದು. ನಿಜ ಹೇಳಬೇಕೆಂದರೆ, ನಿಸರ್ಗದಲ್ಲಿರುವ ಈ ಸೂಕ್ಷ್ಮ ಸಮತೋಲವನ್ನು ಹೊರಗಿನ ಯಾವುದಾದರೂ ಬಲ ಏರುಪೇರು ಮಾಡದಿದ್ದರೆ, ಎರಡೂ ಪಕ್ಷಗಳೂ ಸೋಲುವುದಿಲ್ಲ. ಗೆಲ್ಲುವುದೂ ಇಲ್ಲ.
ಸರ್ಗದಲ್ಲಿ ವಿವಿಧ ಜೀವಿಗಳ ನಡುವಿನ ಇಂತಹ ಸಂಬಂಧಗಳಲ್ಲಿ ಆಗುವ ಏರುಪೇರುಗಳನ್ನು, ಅದರಲ್ಲೂ ನಮ್ಮಿಂದಾಗಿ ಉಂಟಾಗುವವುಗಳನ್ನು ಗುರುತಿಸಿ, ಸಮತೋಲವನ್ನು ಪುನಸ್ಥಾಪಿಸುವುದು ಪ್ರಕೃತಿಯನ್ನು ಅತ್ಯುತ್ತಮವಾಗಿ ಸಂರಕ್ಷಿಸಲು ನೆರವಾಗುತ್ತದೆ. ಇದರ ಅರ್ಥವೇನೆಂದರೆ ಕೆಲವೊಮ್ಮೆ ನಾವು ಈ ಕ್ರೂರ ಪರಪುಟ್ಟಗಳ ಪರವಾಗಿಯೂ ಕಣ್ಣೀರು ಸುರಿಸಬೇಕಾಗಬಹುದು!
ನಿಜ ಹೇಳಬೇಕೆಂದರೆ ಕೋಗಿಲೆಗೇ ನಮ್ಮ ನೆರವು ಬೇಕು. “ವಸಂತದ ರಾಜ ಕೋಗಿಲೆಗಳ ಸಂಖ್ಯೆಯಲ್ಲಿ ಇತ್ತೀಚೆಗೆ ಕಂಡಿರುವ ಇಳಿಮುಖವಾಗಿರುವುದು ನಿಸರ್ಗದಲ್ಲಿನ ಈ ಸಮತೋಲ ಕಡಿಮೆಯಾಗುತ್ತಿರುವುದರ ಸ್ಪಷ್ಟ ಸೂಚನೆ. 1980ರಿಂದ ಈಚೆಗೆ ಇಂಗ್ಲೆಂಡಿನಲ್ಲಿ ಕೋಗಿಲೆಗಳ ಸಂಖ್ಯೆ ಶೇಕಡ 65ರಷ್ಟು ಕಡಿಮೆ ಆಗಿದೆ. ಗಾಭರಿಗೊಳಿಸುವ ಈ ಕುಸಿತದಿಂದಾಗಿ ಅವನ್ನು ಸಂರಕ್ಷಿಸಬೇಕಾದ ಹಕ್ಕಿಗಳ ಪಟ್ಟಿಯಲ್ಲಿ ಅಳಿವಿನ ಅಂಚಿನಲ್ಲಿರುವ ಹಕ್ಕಿ ಎಂದು ಕೆಂಪುಪಟ್ಟಿಯಲ್ಲಿ ನಮೂದಿಸಲಾಗಿದೆ.” ಎನ್ನುತ್ತಾರೆ ಡೇವೀಸ್. ಭಾರತದ ಕೋಗಿಲೆಗಳ ಬಗ್ಗೆಯೂ ನಮಗೆ ಇಂತಹುದೇ ಮಾಹಿತಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅನಿಸುತ್ತಿದೆ.
ನಿಸರ್ಗದಲ್ಲಿನ ಈ ಸಮತೋಲ ಎಷ್ಟು ಸೂಕ್ಷ್ಮವಾಗಿದ್ದು ಎನ್ನುವುದಕ್ಕೆ ಒಂದು ಉದಾಹರಣೆಯನ್ನು ನಾನು ಇತ್ತೀಚೆಗೆ ಗಮನಿಸಿದ, ಅರ್ಜೆಂಟೀನಾದ ಬ್ಯುನೋಸ್ ಐರೀಸಿನಲ್ಲಿ ನಡೆದ ಮತ್ತೊಂದು ಅಧ್ಯಯನ ಸಾದರಪಡಿಸುತ್ತದೆ. ಈ ಅಧ್ಯಯನದಲ್ಲಿ ಆತಿಥೇಯ ಹಕ್ಕಿಗಳು ತಮ್ಮ ಗೂಡಿನಲ್ಲಿರುವ ಪರಪುಟ್ಟ ಮೊಟ್ಟೆಗಳನ್ನು ಹೆಚ್ಚೆಚ್ಚು ಹೊರಹಾಕಿದ್ದರಿಂದಾಗಿ ಪರಪುಟ್ಟಗಳ ಸಮುದಾಯವೇ ಅಳಿವಿನ ಅಂಚಿಗೆ ಬಂದು ನಿಂತಿತೆಂಬುದು ನನ್ನನ್ನು ಚಕಿತಗೊಳಿಸಿತು. ಇದಕ್ಕೆ ಪರಿಸರದ ಮೇಲೆ ಹೊರಗಿನಿಂದ ಬಂದ ಇನ್ಯಾವುದೋ ಪ್ರಭಾವ ಕಾರಣ. ಹೆಟೆರೋನೆಟ್ಟಾ ಏಟ್ರಿಕ್ಯಾಪಿಲಾ (Heteronetta atricapilla) ಎನ್ನುವ ಕರಿತಲೆಯ ಬಾತು ಇಲ್ಲಿ ಪರಪುಟ್ಟ. ಇದು ಎರಡು ವಿಭಿನ್ನ ಪ್ರಭೇಧಗಳ ಬೊಕ್ಕಬಾತುಗಳ ಗೂಡಿನಲ್ಲಿ ಮೊಟ್ಟೆ ಇಡುತ್ತದೆ. ಫ್ಯೂಲಿಕಾ ಆರ್ಮಿಲೇಟಾ (Fulica armillata) ಅಥವಾ ಕೆಂಪುಪಾದದ ಬಾತು ಹಾಗೂ ಫ್ಯೂಲಿಕಾ ರಫಿಫ್ರಾನ್ಸ್ (Fulica rufifrons) ಅಥವಾ ಕೆಂಪು ಅಂಗಿಯ ಬಾತು ಎನ್ನುವುವೇ ಈ ಬಾತುಗಳು.
ತಮ್ಮ ಮರಿಗಳ ಆರೈಕೆಯನ್ನು ಬೇರೆ ಹಕ್ಕಿಗಳ ತಲೆಗೇ ಕಟ್ಟಿಬಿಡುವಂತಹ ಪರಪುಟ್ಟ ಹಕ್ಕಿಗಳಲ್ಲಿ ಈ ಕರಿತಲೆಯ ಬಾತು ಸ್ವಲ್ಪ ವಿಶಿಷ್ಟವೇ. ಕೋಗಿಲೆ ಹಾಗೂ ಬೆಳ್ಳಕ್ಕಿಗಳ ಕಥೆಯಂತೆ ಬಹುತೇಕ ಪಕ್ಷಿಗಳಲ್ಲಿ ಮೊಟ್ಟೆ ಒಡೆದು ಬಂದ ಮರಿಗಳು ಬಹುತೇಕ ರೆಕ್ಕೆ, ಪುಕ್ಕಗಳು ಇಲ್ಲದ ಬೆತ್ತಲೆ ಮರಿಗಳು. ಕಣ್ಣು ಬಿಡದ ಅವು ಬಲು ಅಸಹಾಯಕ ಜೀವಿಗಳು. ಆದ್ದರಿಂದ ಆರೈಕೆಯೂ ಚೆನ್ನಾಗಿರಬೇಕು. ಇಂತಹ ಅಸಹಾಯಕ ಮರಿಗಳನ್ನು ಆಲ್ಟ್ರಿಶಿಯಲ್ ಅಥವಾ ಅಪಕ್ವ ಮರಿಗಳು ಎಂದು ಕರೆಯುತ್ತೇವೆ. ಬಹುತೇಕ ಪರಪುಟ್ಟಗಳ ಮರಿಗಳು ಅಪಕ್ವ ಸಂತಾನಗಳು. ತಮ್ಮ ಮರಿಗಳ ಆರೈಕೆಯನ್ನು ಬೇರೆ ಹಕ್ಕಿಗಳ ಹೆಗಲಿಗೇರಿಸುವುದರಿಂದಾಗಿ ಈ ಪರಪುಟ್ಟ ಹಕ್ಕಿಗಳು ತಮ್ಮ ಸಮಯ ಹಾಗೂ ಶಕ್ತಿಯನ್ನು ಉಳಿಸಿಕೊಂಡು, ಹೆಚ್ಚೆಚ್ಚು ಮೊಟ್ಟೆಗಳನ್ನು ಇಡುತ್ತವೆ ಎನ್ನುವುದನ್ನು ಮನಗಾಣಬಹುದು.
ಆದರೆ ಸಾಕು ಕೋಳಿಯಂತಹ ಹಲವು ಪಕ್ಷಿಗಳಲ್ಲಿ ಮೊಟ್ಟೆಯೊಡೆದು ಹುಟ್ಟುವ ಮರಿಗಳು ಅದಾಗಲೇ ಕಣ್ಣು ತೆರೆದಿರುತ್ತವೆ. ಪುಟ್ಟಪುಟ್ಟ ಉಣ್ಣೆಯಂತಹ ಮೃದು ತುಪ್ಪಳ ಮೈಯನ್ನು ಆವರಿಸಿರುತ್ತದೆ. ಹಾಗೂ ಅವು ಆ ಕೂಡಲೇ ಓಡಾಡುತ್ತ ಕಾಳನ್ನು ತಾವೇ ಹೆಕ್ಕಿಕೊಂಡು ತಿನ್ನಬಲ್ಲವು. ಇಂತಹ ಪಕ್ವ ಸಂತಾನ ಇರುವಂತಹ ಪರಪುಟ್ಟಗಳು ಬಲು ಅಪರೂಪ. ಏಕೆಂದರೆ ಇಂತಹ ಮರಿಗಳನ್ನು ಬೇರೆಯದರ ಗೂಡಿನಲ್ಲಿ ಇಟ್ಟಾಗ ದೊರೆಯುವ ಲಾಭ ಕಡಿಮೆಯೇ. ಆದರೆ ಕರಿತಲೆಯ ಬಾತು ಈ ನಿಯಮಕ್ಕೆ ಅಪವಾದ. ಅದರ ಮರಿಗಳು ಪಕ್ವವಷ್ಟೇ ಅಲ್ಲ ಬೇರೆಯದರ ಗೂಡಿನಲ್ಲಿಯೇ ಬೆಳೆಯುವ ಕಟ್ಟಾ ಪರಜೀವಿಗಳು.
ಅಮೆರಿಕೆಯ ಡೇವೀಸಿನಲ್ಲಿರುವ ಕೆಲಿಫೋರ್ನಿಯಾ ವಿಶ್ವವಿದ್ಯಾನಿಲಯದ ವನ್ಯಜೀವಿ, ಮೀನು ಹಾಗೂ ಸಂರಕ್ಷಣಾ ಜೀವಿವಿಜ್ಞಾನ ವಿಭಾಗದ ತಜ್ಞ ಜಾನ್ ಎಂ ಈಡೀ ಮತ್ತು ಸಾಂತಾಕ್ರೂಜಿನಲ್ಲಿರುವ ಕೆಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನ ಹಾಗೂ ಜೀವಿವಿಕಾಸ ವಿಜ್ಞಾನ ವಿಭಾಗದ ಬ್ರೂಸ್ ಇ ಲಿಯಾನ್ ಈ ಬಾತು ಹಾಗೂ ಬೊಕ್ಕ ಬಾತುಗಳ ನಡುವಣ ಸಂಬಂಧಗಳನ್ನು ಕೆಲವು ವರ್ಷಗಳಿಂದಲೂ ಅಧ್ಯಯನ ಮಾಡುತ್ತಾ ಬಂದಿದ್ದಾರೆ. ಕೋಗಿಲೆಗಳ ವಿಷಯದಲ್ಲಿ ಡೇವೀಸ್ ಮತ್ತು ಬ್ರೂಕಕ್ ಮಾಡಿದಂತೆಯೇ, ಇವರೂ ಕೂಡ ಬೊಕ್ಕಬಾತುಗಳ ಗೂಡಿನಲ್ಲಿ ಕೃತಕ ಮೊಟ್ಟೆಗಳನ್ನು ಇಟ್ಟು ಇವನ್ನು ಆತಿಥೇಯ ಹಕ್ಕಿಗಳು ಎಷ್ಟರ ಮಟ್ಟಿಗೆ ಬಿಸಾಡಬಹುದು ಎಂಬುದನ್ನು ನಿಶ್ಚಯಿಸಿದ್ದಾರೆ.
ಬೊಕ್ಕಬಾತು, ಬಾತು ಹಾಗೂ ಸಾಕುಕೋಳಿಯ ಮೊಟ್ಟೆಗಳೆಲ್ಲದರ ಆಕಾರ ಹಾಗೂ ಗಾತ್ರ ಒಂದೇ ಇದ್ದದ್ದರಿಂದ ಅವರು ಸಾಕುಕೋಳಿಯ ಮೊಟ್ಟೆಗಳಿಗೇ ಬಣ್ಣ ಬಳಿದು ಬಾತಿನ ಮೊಟ್ಟೆಗಳಂತೆಯೇ ಕಾಣುವ ಕೃತಕ ಮಾದರಿಗಳನ್ನು ರೂಪಿಸಿದರು.
ಸಾಧಾರಣವಾಗಿ ಬೊಕ್ಕಬಾತುಗಳು ತಮ್ಮ ಗೂಡಿನಲ್ಲಿರುವ ಬಾತಿನ ಮೊಟ್ಟೆಗಳಲ್ಲಿ ಶೇಕಡ 35-65 ರಷ್ಟನ್ನು ಬಿಸಾಡಿ ಬಿಡುತ್ತವೆ. ಇವು ತಮ್ಮ ಸಂಖ್ಯೆಯನ್ನು ಸುಸ್ಥಿರವಾಗಿರಿಸಲು ಅವಕ್ಕೆ ನೆರವಾಗುತ್ತದೆ. ಆದರೆ ಪ್ರವಾಹಗಳು ಬಂದಾಗ ಅಥವಾ ಅಲ್ಲಿನ ಸಸ್ಯರಾಶಿ ಕಡಿಮೆ ಆದಾಗ ಈ ಬೊಕ್ಕಬಾತುಗಳು ಶೇಕಡ 85-95ರಷ್ಟು ಬಾತುಗಳ ಮೊಟ್ಟೆಗಳನ್ನು ಬಿಸಾಡುತ್ತವೆ ಎಂದು ಈಡೀ ಮತ್ತು ಲಿಯಾನ್ ಕಂಡುಕೊಂಡಿದ್ದಾರೆ. ಇದು ಬಾತುಕೋಳಿಗಳಿಗೆ ಶುಭಸುದ್ದಿಯೇನಲ್ಲ. ಸರಳ ಗಣಿತೀಯ ಮಾದರಿಗಳನ್ನು ಬಳಸಿಕೊಂಡು ಇದನ್ನು ಲೆಕ್ಕ ಹಾಕಿರುವ ಈಡೀ ಮತ್ತು ಲಿಯಾನ್, ಅತ್ಯಂತ ಸಮೃದ್ಧಿಯ ಕಾಲದಲ್ಲಿಯೂ ಕರಿತಲೆಯ ಬಾತುಕೋಳಿಗಳ ಬದುಕು ಬಲು ದುಸ್ತರವಾದದ್ದು ಎನ್ನುತ್ತಾರೆ. ಪರಿಸರದಲ್ಲಿ ಆಗಾಗ್ಗೆ ಉಂಟಾಗುವ ಪ್ರವಾಹ ಹಾಗೂ ಸಸ್ಯರಾಶಿಯ ನಷ್ಟಗಳು ದೀರ್ಘಾವಧಿಯಲ್ಲಿ ಇವುಗಳ ಉಳಿವಿಗೆ ಸಂಚಕಾರವನ್ನು ತರಬಹುದು ಎಂದು ಲೆಕ್ಕ ಹಾಕಿದ್ದಾರೆ. ಆತಿಥೇಯ ಹಕ್ಕಿಗಳು ಆರಾಮವಾಗಿದ್ದು, ಈ ಪರಪುಟ್ಟ ಜೀವಿಗೇ ಅಳಿವಿನ ಅಪಾಯ ಹೆಚ್ಚು. ಇವನ್ನು ಸಂರಕ್ಷಿಸುವ ಪ್ರಯತ್ನಗಳು ಆಗಬೇಕಿದೆಯಷ್ಟೆ..
ವನ್ಯಜೀವಿ ಸಂರಕ್ಷಣೆಯಲ್ಲದೆ, ಈ ಶೋಧಗಳು ಹಲವು ಸ್ವಾರಸ್ಯಕರ ವೈಜ್ಞಾನಿಕ ಪ್ರಶ್ನೆಗಳನ್ನೂ ಮುಂದಿಟ್ಟಿವೆ. ನಿಸರ್ಗದ ಗುಟ್ಟುಗಳನ್ನು ಪತ್ತೆ ಮಾಡಲು ಹೊಸ ಅವಕಾಶಗಳನ್ನು ಮಾಡಿಕೊಟ್ಟಿವೆ. ಪ್ರವಾಹ ಬಂದಾಗಲಷ್ಟೆ ಬೊಕ್ಕಬಾತುಗಳು ಬಾತುಗಳ ಮೊಟ್ಟೆಗಳನ್ನು ಹೆಚ್ಚೆಚ್ಚು ಬಿಸಾಡುತ್ತವೆ ಎಂದರೆ ಅವು ಬಾತಿನ ಮೊಟ್ಟೆಗಳು ಯಾವುವು ಎಂದು ಗುರುತಿಸಿ ಅವನ್ನಷ್ಟೆ ಬಿಸಾಡುತ್ತವೆ ಎಂದಾಯಿತು. ಹಾಗಿದ್ದರೂ ಅವು ಪ್ರವಾಹ ಇಲ್ಲದಾಗಲೂ ಹೆಚ್ಚು ಬಾತುಮೊಟ್ಟೆಗಳನ್ನು ಬಿಸಾಡಬಹುದಲ್ಲ. ಹಾಗೆ ಮಾಡುವುದಿಲ್ಲವೇಕೆ? ಬ್ರೂಸ್ ಲಿಯಾನರಂತಹ ವಿಜ್ಞಾನಿಗಳ ತಂಡಗಳು ನಡೆಸುತ್ತಿರುವ ಸಂಶೋಧನೆಗಳು ಇಂತಹ ಹಲವು ಅನಿರೀಕ್ಷಿತ ಫಲಿತಾಂಶಗಳನ್ನು ತೋರಿದ್ದು, ಈ ಬಾತು-ಬೊಕ್ಕಬಾತುಗಳ ನಡುವಣ ಸಂಬಂಧ, ಕೋಗಿಲೆ-ಬೆಳ್ಳಕ್ಕಿಗಳ ನಡುವೆ ಇರುವುದಕ್ಕಿಂತಲೂ ಬೇರೆಯೇ ಎಂದು ತೋರಿಸಿವೆ.
ಮೊದಲಿಗೆ ಬೊಕ್ಕಬಾತುಗಳು ಬಾತಿನ ಮೊಟ್ಟೆಗಳು ಯಾವುವೆಂದು ಗುರುತಿಸಿದ್ದರೂ, ಯಾವಾಗೆಂದರೆ ಆವಾಗ ಗೂಡಿನಿಂದ ಹೊರ ಬಿಸುಡುವುದಿಲ್ಲ. ಅವುಗಳ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನೇ ತೋರುತ್ತವೆ. ಈ ದಿವ್ಯ ನಿರ್ಲಕ್ಷ್ಯ ಏಕೆಂದರೆ ಬಾತುಗಳ ಮರಿಗಳಿಗೆ ಇವು ಗುಟುಕು ನೀಡಬೇಕಿಲ್ಲ. ಬಾತು ಹಾಗೂ ಬೊಕ್ಕಬಾತುಗಳೆರಡರ ಮರಿಗಳೂ ಪಕ್ವ ಸಂತಾನಗಳೇ ಆದ್ದರಿಂದ ಅವು ತಮ್ಮ ಆರೈಕೆಯನ್ನು ತಾವೇ ಮಾಡಿಕೊಳ್ಳಬಲ್ಲವು. ಆದ್ದರಿಂದ ಈ ಮರಿಗಳನ್ನು ಗೂಡಿನಿಂದ ಹೊರಗೆ ತಳ್ಳುವುದರಿಂದ ಅಂತಹ ದೊಡ್ಡ ಲಾಭವೇನೂ ಆಗದು.
ಅದೇ ಪ್ರವಾಹ ಬಂದಾಗಲೋ, ಸಾಕಷ್ಟು ಸಸ್ಯರಾಶಿ ಇಲ್ಲದಾಗಲೋ, ಅವು ತಮ್ಮ ಗೂಡಿನ ಎತ್ತರವನ್ನು ಹೆಚ್ಚಿಸಿ ತಮ್ಮ ಮೊಟ್ಟೆಗಳನ್ನಷ್ಟೆ ಎತ್ತರಕ್ಕೆ ದೂಡುತ್ತವೆ. ಬಾತಿನ ಮೊಟ್ಟೆಗಳನ್ನು ಇದ್ದಲ್ಲಿಯೇ ಬಿಡುತ್ತವೆ. ತಂದೆತಾಯಿಯ ಹೊಣೆಯನ್ನು ಹೀಗೆ ಬೇರೆಯವರ ಹೆಗಲಿಗೇರಿಸುವುದು ಇಂತಹ ಪಕ್ವಸಂತಾನಗಳನ್ನು ಹುಟ್ಟಿಸುವ ಹಕ್ಕಿಗಳಿಗೆ ಲಾಭದಾಯಕವಾಗಲಿಕ್ಕಿಲ್ಲ. ಪಾಲಕರ ಹೊಣೆ ಬಲು ಹಗುರವಿರುವಂತಹ ಈ ಸಂದರ್ಭದಲ್ಲಿಯೇ ಪಾಲನೆಯನ್ನು ಗುತ್ತಿಗೆ ನೀಡುವುದು ಲಾಭದಾಯಕವಲ್ಲ ಎನ್ನುವ ಈ ಸಂಗತಿ ವಿಪರ್ಯಾಸವೇ ಸರಿ.
ಇಂತಹ ಅಧ್ಯಯನಗಳು ಜೀವಿಗಳ ನಡವಳಿಕೆಗಳನ್ನು ಅವುಗಳ ಸಹಜ ನೆಲೆಯಲ್ಲಿಯೇ ಅಧ್ಯಯನ ಮಾಡಬೇಕೆನ್ನುವುದು ಸಂರಕ್ಷಣೆಯ ದೃಷ್ಟಿಯಿಂದ ಎಷ್ಟು ಅವಶ್ಯಕ ಎಂದು ತೋರಿಸಿವೆ. ಜೊತೆಗೆ ಸಂರಕ್ಷಣಾ ನಡವಳಿಕೆ ವಿಜ್ಞಾನ ಎನ್ನುವ ಹೊಸ ಶಾಸ್ತ್ರ ಶಾಖೆಯನ್ನೂ ಹುಟ್ಟುಹಾಕಿವೆ.
ಈ ಜಗತ್ತಿನಲ್ಲಿ ನಡೆಯುವ ನಾಟಕಗಳು ಎಷ್ಟೋ? ಅವುಗಳಲ್ಲಿನ ಗುಟ್ಟುಗಳನ್ನು ನಾವು ಅರಿಯುವುದು ಸಾಧ್ಯವಾದರೆ ನಮ್ಮ ಬದುಕು ಇನ್ನಷ್ಟು ಸೊಗಸಾದೀತು. ಇದು ಆಗಬೇಕಾದರೆ ನಾವು ನಿಸರ್ಗದಲ್ಲಿರುವ ಸಮತೋಲವನ್ನು ಕಾಪಾಡಿಕೊಳ್ಳಬೇಕು. ಪ್ರಜ್ಞಾವಂತ ಜೀವಿಗಳಾಗಿ ನಾವು ಇದನ್ನು ಮಾಡಲು ಸಮರ್ಥರು ಎಂಬುದು ನನ್ನ ವಿಶ್ವಾಸ. ಕನಿಷ್ಟ ನಮ್ಮ ಬದುಕನ್ನೇ ಇನ್ನಷ್ಟು ಹಸನುಗೊಳಿಸಿಕೊಳ್ಳೂವ ಸ್ವಾರ್ಥದಿಂದಲಾದರೂ ಇದನ್ನು ಮಾಡಬೇಕು.
ಆಂಗ್ಲಮೂಲ: ಪ್ರೊ. ರಾಘವೇಂದ್ರ ಗದಗಕರ್; ಕನ್ನಡಾನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್. ಮಂಜುನಾಥ. ಮೂಲ ಲೇಖನ ದಿ ವೈರ್ ಸೈನ್ಸ್ ಜಾಲಪತ್ರಿಕೆಯಲ್ಲಿ ಪ್ರಕಟವಾಗಿತ್ತು.