Now Reading
Podcast | In Kannada: Experienced Ants Lead and Teach, Naïve Ants Follow and Learn

Podcast | In Kannada: Experienced Ants Lead and Teach, Naïve Ants Follow and Learn

Representative image: Panos Sakalakis/Unsplash.

The following text, in Kannada, was translated from the English original, by Raghavendra Gadagkar, entitled ‘More Fun Than Fun: Experienced Ants Lead and Teach, Naïve Ants Follow and Learn‘ and published on The Wire Science on November 25, 2020. Kollegala Sharma kindly provided the translated version. It has also been rendered as a podcast by J.R. Manjunatha, available to listen below. Sharma and his team will similarly convert future editions of Gadagkar’s column as podcasts, as part of an audio series called ‘JanaArime’. Sharma’s ‘Janasuddi’ podcast series is available to listen here.

Sharma is a chief scientist and Manjunatha is a technical officer, both at the CSIR-Central Food Technological Research Institute, Mysuru.

§

ಜಾಣ ಅರಿಮೆ

ವಿಸ್ಮಯಕ್ಕಿಂತ ವಿಸ್ಮಯ – 6

ಕಲಿಸುವ ಇರುವೆ, ಕಲಿಯುವ ಇರುವೆ

ಮೇಜರ್‌ ರಿಚರ್ಡ್‌ ವಿಲಿಯಂ ಜಾರ್ಜ್‌ ಹಿಂಗ್ಸ್ಟನ್‌ ಸಾವಿರದ ಎಂಟನೂರ ಎಂಬತ್ತೇಳರಲ್ಲಿ ಹುಟ್ಟಿದ್ದ ಒಬ್ಬ ಐರಿಷ್‌ ಡಾಕ್ಟರು. ಈತ ಸಾವಿರದ ಒಂಬೈನೂರ ಹತ್ತರಿಂದ ಸಾವಿರದ ಒಂಬೈನೂರ ಇಪ್ಪತ್ತೇಳವರೆಗೂ ಭಾರತೀಯ ವೈದ್ಯಕೀಯ ಸೇವೆಯಲ್ಲಿ ಇದ್ದವರು. ಅನಂತರ ಮತ್ತೆ ಸಾವಿರದ ಒಂಬೈನೂರ ಮೂವತ್ತೊಂಬತ್ತ​ರಿಂದ ಸಾವಿರದ ಒಂಬೈನೂರ ನಲವತ್ತಾರರವರೆಗೆ ಮಿಲಿಟರಿ ಸೇವೆಗೆಂದು ಭಾರತಕ್ಕೆ ಬಂದಿದ್ದರು. ಬಲು ಗಾಢವಾದ ಪ್ರಕೃತಿ ಪ್ರೇಮಿಯಾಗಿದ್ದ ಮೇಜರ್‌ ಬಿಡುವಿನ ಸಮಯವನ್ನೆಲ್ಲ ಭಾರತದ ಪ್ರಾಣಿಪ್ರಪಂಚವನ್ನು ಅದರಲ್ಲೂ ವಿಶೇಷವಾಗಿ ಕೀಟಗಳು ಮತ್ತು ಜೇಡಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಲು ಮೀಸಲಿಟ್ಟಿದ್ದರು. ಹಿಮಾಲಯಾದಲ್ಲಿರುವ ಇಂದು ಪಾಕಿಸ್ತಾನಕ್ಕೆ ಸೇರಿರುವ ಹಜರಾ ಕಣಿವೆಯಲ್ಲಿ ಹೀಗೆ ನಡೆಸಿದ ಅಧ್ಯಯನಗಳನ್ನೆಲ್ಲ ಒಗ್ಗೂಡಿಸಿ ಹಿಂಗ್ಸ್ಟನ್‌  ಎ ನ್ಯಾಚುರಾಲಿಸ್ಟ್‌ ಇನ್‌ ಹಿಮಾಲಯಾ ಅಂದರೆ ಹಿಮಾಲಯದಲ್ಲಿ ಪ್ರಕೃತಿಶಾಸ್ತ್ರಜ್ಞ ಎಂಬ ಪುಸ್ತಕವನ್ನು ೧೯೨0ರಲ್ಲಿ ಪ್ರಕಟಿಸಿದರು.

ಭಾರತದ ಕ್ಯಾಂಪೊನೋಟಸ್‌ ಸೆರಿಸಿಯಸ್‌ ಎನ್ನುವ ಸಾಮಾನ್ಯವಾದ ಇರುವೆಯ ಬಗೆಗೆ ಈತ ಕಂಡ ಪ್ರಸಿದ್ಧ ಸಂಗತಿ ಈತ ೧೯೨೮ರಲ್ಲಿ ಪ್ರಕಟಿಸಿದ ಪ್ರಾಬ್ಲಮ್ಸ್‌ ಆಫ್‌ ಇಂಸ್ಟಿಂಕ್ಟ್‌ ಅಂಡ್‌ ಇಂಟೆಲಿಜೆನ್ಸ್‌ ಹೀಗೆ ದಾಖಲಾಗಿದೆ.

ನೆಲದಲ್ಲಿ ಗೂಡು ಕಟ್ಟುವ ಈ ಇರುವೆ ಆಹಾರವನ್ನು ಹುಡುಕಿಕೊಂಡು ಮರವೇರುತ್ತದೆ. ಇದರ ಸಂವಹನ ಬಲು ಸರಳ. ಸರಳವಾಗಿರುವುದರಿಂದಲೇ ಬಲು ಮಾಹಿತಿಪೂರ್ಣವೂ ಕೂಡ. ಯಾವುದಾರೂ ಒಂದು ಇರುವೆ ಆಹಾರ ನಿಧಿ ಇರುವೆಡೆಗೆ ಬೇರೆಯವಕ್ಕೆ ಮಾರ್ಗದರ್ಶನ ಮಾಡುತ್ತದೆ. ಹೀಗೆ ಆಹಾರವನ್ನು ಕಂಡ ಇರುವೆ ಗೂಡಿಗೆ ಮರಳುತ್ತದೆ. ಅಲ್ಲಿ ತನ್ನ ಸಹವಾಸಿಯೊಂದನ್ನು ಹಿಡಿದು ಬೇಕಿದ್ದ ಸ್ಥಳಕ್ಕೆ ಕೊಂಡೊಯ್ಯುತ್ತದೆ. ಇವೆರಡೂ ನೆಲದಲ್ಲಿ ಸಾಗುವಾಗ ಒಂದು ಮುಂದೆ ಸಾಗುತ್ತದೆ. ಎರಡನೆಯದೂ ಮೊದಲನೆಯದರ ಹೆಜ್ಜೆಯ ಜಾಡಿನಲ್ಲಿಯೇ ಸಾಗುತ್ತಾ, ಮೊದಲನೆಯದರ ಹಿಂಭಾಗವನ್ನು ಆಗಾಗ ಮುಟ್ಟುತ್ತದೆ. ಮುಂದಿರುವ ಇರುವೆ ಹಿಂದೆ ಇರುವುದರ ಜಾಡು ತಪ್ಪದಿರಲಿ ಎಂದು ಬಲು ನಿಧಾನವಾಗಿ ನಡೆಯುತ್ತದೆ. ಆಕಸ್ಮಿಕವಾಗಿ ಎರಡನೆಯದರ ಸ್ಪರ್ಶ ತಪ್ಪಿತೋ, ಮುಂದಿರುವ ಇರುವೆ ಅಲ್ಲಿಯೇ ನಿಂತು, ಎರಡನೆಯದು ಬರುವರೆಗೂ ಕಾದು ಮುಂದುವರೆಯುತ್ತದೆ.

ಹಾರ್ವರ್ಡ್‌ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ ಹಾಗೂ ಪ್ರಪಂಚದಲ್ಲಿ ಅತ್ಯಂತ ಸುಪ್ರಸಿದ್ಧ ಇರುವೆ ತಜ್ಞನಾದ ಎಡ್ವರ್ಡ್‌ ಓ ವಿಲ್ಸನ್‌ ೧೯೫೯ರಲ್ಲಿ ಪೋರ್ಟೋ ರಿಕೋದಲ್ಲಿ ಕಾರ್ಡಿಯೋಕಾಂಡೈಲಾ ವೆನುಸ್ಟುಲಾ ಎನ್ನುವ ಇರುವೆಯನ್ನು ಅಧ್ಯಯನಮಾಡುವಾಗ ಇದೇ ನಡವಳಿಕೆಯನ್ನು ಮರಳಿ ಕಂಡ. ವಿಲ್ಸನ್‌ ಈ ನಡವಳಿಕೆಗೆ ಸರಣಿನಡೆ ಅಥವಾ ಟ್ಯಾಂಡೆಮ್‌ ರನಿಂಗ್‌ ಎಂದು ಹೆಸರಿಸಿದರು. ಇದು ಟ್ಯಾಂಡೆಮ್‌ ಸೈಕಲ್ಲು ಅಥವಾ ಜೋಡಿ ಬೈಸಿಕಲ್ಲುಗಳು ಚಲಿಸಿದಂತೆ ಕಾಣುವುದರಿಂದ ಈ ಹೆಸರು.

ಸರಣಿ ನಡೆ ನಡೆಯುತ್ತಿರುವ ಇರುವೆಗಳ ಚಿತ್ರ: ಲೇಖಕರು ಒದಗಿಸಿದ್ದು

ಬಹುತೇಕ ಇರುವೆಗಳಲ್ಲಿ ಪರಿಣತ ಇರುವೆಗಳು ತಮ್ಮ ಮುಗ್ಧ ಸಹೋದರಿಯರನ್ನು ಹೊಸ ವಾಸಸ್ಥಳಕ್ಕೋ, ಆಹಾರವಿರುವ ಸ್ಥಳಕ್ಕೋ ಕರೆದೊಯ್ಯುವಾಗ ಫೆರೋಮೋನುಗಳು ಎನ್ನುವ ತಮ್ಮ ದೇಹದಲ್ಲಿರುವ ಗ್ರಂಥಿಗಳಿಂದ ಪರಿಮಳ ಅಥವಾ ರಸವಸ್ತುಗಳನ್ನು ಚೆಲ್ಲಿ ಹಾದಿಯನ್ನು ಗುರುತಿಸುತ್ತವೆ. ಆದರೆ ಸಣ್ಣ, ಸಣ್ಣ ಗೂಡಿನಲ್ಲಿ ವಾಸಿಸುವ ಕೆಲವು ಇರುವೆಗಳು ಫೆರೋಮೋನುಗಳನ್ನು ಬಳಸದೆಯೇ ಸಂವಹಿಸುತ್ತವೆ. ತಮ್ಮ ಸಹೋದರಿಯರಿಗೆ ಹೊಸ ಜಾಗವನ್ನು ತೋರಿಸುವಾಗ ಕೈಹಿಡಿದು, ಸರಣಿ ನಡೆಯಲ್ಲಿ ಕರೆದೊಯ್ಯುತ್ತವೆ.

ಈ ಬಗೆಯ ನಡವಳಿಕೆಗೆ ಚಾತುರ್ಯ ಅಂದರೆ ಸಂದರ್ಭಾನುಸಾರ ಬದಲಾವಣೆಗಳು ಮತ್ತು ಸಾಕಷ್ಟು ಬುದ್ಧಿವಂತಿಕೆಯೂ ಬೇಕು. ಹೀಗಾಗಿ ರಸವಸ್ತುಗಳನ್ನು ಸುರಿಸುವ ಇರುವೆಗಳ ನಡೆಗಿಂತ ಈ ರೀತಿಯಲ್ಲಿ ಸರಣಿನಡೆ ನಡೆಯುವ ಇರುವೆಗಳ ಬಗ್ಗೆ ನನಗೆ ವಿಶೇಷ ಕುತೂಹಲ. ಅಥವಾ ಇದು ನನ್ನ ಪೂರ್ವಾಗ್ರಹವೂ ಇರಬಹುದೆನ್ನಿ. ಇದು ನನ್ನೊಬ್ಬನದೇ ಚಿಂತನೆಯಲ್ಲ!. ಬ್ರಿಸ್ಟಲ್‌ ವಿಶ್ವವಿದ್ಯಾನಿಲಯದ ಎಲಿಜಬೆತ್‌ ಎಲ್.‌ ಫ್ರಾಂಕ್ಕ್ಲಿನ್‌  ನೈಗೆಲ್‌ ಫ್ರಾಂಕ್ಸ್‌ ಮತ್ತು ಸಂಗಡಿಗರು ಸರಣಿನಡೆಯ ವೇಳೆ ಸಂವಹನ ಹೇಗಾಗುತ್ತದೆ, ಇರುವೆಗಳು ಒಗ್ಗಟ್ಟಾಗಿ ಹೇಗೆ ತೀರ್ಮಾನ ಕೈಗೊಳ್ಳುತ್ತವೆ, ಹೇಗೆ ಕಲಿಯುತ್ತವೆ ಮತ್ತು ಕಲಿಸುತ್ತವೆ ಎನ್ನುವುದನ್ನು ತಿಳಿಯಲು ಟೆಮ್ನೊಥೊರಾಕ್ಸ್‌ ಆಲ್ಬಿಪೆನ್ನಿಸ್‌ ಎನ್ನುವ ಇರುವೆಯ ಓಡಾಟವನ್ನು ಅಧ್ಯಯನಗಳ ಸಾಧನವನ್ನಾಗಿ ಬಳಸಿಕೊಂಡಿದ್ದಾರೆ. ಇರುವೆಗಳು ಹೇಗೆ ಕಲಿಸುತ್ತವೆ ಎನ್ನುವ ಬಗ್ಗೆ ಇನ್ನೊಮ್ಮೆ ಹೇಳುವೆ.

ಇತ್ತೀಚೆಗೆ ಕೊಲ್ಕತ್ತಾದ ಇಂಡಿಯನ್‌ ಇನ್ಸಟಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೇಶನ್‌ ಅಂಡ್‌ ರೀಸರ್ಚ್‌ ಸಂಸ್ಥೆಯಲ್ಲಿ ಅಣ್ಣಗಿರಿ ಸುಮನಾ ಮತ್ತು ಆಕೆಯ ವಿದ್ಯಾರ್ಥಿಗಳು ಡಯಕಾಮಾ ಇಂಡಿಕಮ್‌ ಎನ್ನುವ ಇರುವೆಗಳನ್ನು ಅಧ್ಯಯನ ಮಾಡಿ  ಬಹಳ ಖುಷಿಪಟ್ಟಿದ್ದಾರೆ. ಇವು ರಾಣಿಗಳೇ ಇಲ್ಲದ ವಿಶೇಷ ಗುಂಪಿನ ಇರುವೆಗಳು. ವಿಕಾಸದ ಹಾದಿಯಲ್ಲಿ ಇದರ ಕಾರ್ಮಿಕ ಇರುವೆಗಳು ಕೆಲವನ್ನು ಮುಂದೆ ರಾಣಿಯಾಗಿ ಬೆಳೆಸುವುದನ್ನು ನಿಲ್ಲಿಸಿಬಿಟ್ಟಿವೆ. ಬದಲಿಗೆ, ಈ ಕಾರ್ಮಿಕ ಇರುವೆಗ ಳು ತಮ್ಮೆಲ್ಲ ವ್ಯವಹಾರಗಳನ್ನೂ ತಾವೇ ಮಾಡಲು ಕಲಿತುಬಿಟ್ಟಿವೆ.

ಕಾರ್ಮಿಕ ಇರುವೆಗಳಲ್ಲಿ ಒಂದು, ಇಡೀ ಗೂಡಿನಲ್ಲಿ ಮೊಟ್ಟೆ ಇಡುವ ಏಕೈಕ ಹೆಣ್ಣಾಗುತ್ತದೆ. ಇದನ್ನು ವಿಜ್ಞಾನಿಗಳು ಗೇಮರ್ಗೇಟ್‌ ಅಂದರೆ ಮುತ್ತೈದೆ ಕಾರ್ಮಿಕ ಎಂದು ಕರೆಯುತ್ತಾರೆ. ನನ್ನ ಜೊತೆ ಒಮ್ಮೆ ಕೈಗೂಡಿಸಿದ್ದ ಕ್ರಿಶ್ಚಿಯನ್‌ ಪೀಟರ್ಸ್‌ ಮತ್ತು ಎಸ್‌ ಹಿಗಾಶಿ, ಈ ಗೇಮರ್‌ ಗೇಟ್‌ ಇರುವೆಗಳು ಸಂತಾನೋತ್ಪತ್ತಿಯ ಮೇಲೆ ತಮ್ಮ ಆಧಿಪತ್ಯವನ್ನು ಸ್ಥಾಪಿಸುವ ರೀತಿಯೇ ವಿಚಿತ್ರ. ಇದು ಹೆಣ್ಣು ಇರುವೆಗಳು ಮೊಟ್ಟೆಯೊಡೆದು ಬಂದ ಕೂಡಲೇ ಅವುಗಳ ಹಿಂಭಾಗದಲ್ಲಿರುವ ಗೆಮ್ಮೇ ಎನ್ನುವ ಅಂಗವನ್ನು ಕಡಿದು ತುಂಡರಿಸಿಬಿಡುತ್ತದೆ. ಗೆಮ್ಮೇ ಇಲ್ಲದಿದ್ದರೆ ಅವು ಗಂಡುಗಳನ್ನು ಆಕರ್ಷಿಸುವ ಫೆರೋಮೋನುಗಳು ಸ್ರವಿಸಲಾರವು. ಹೀಗೆ ಅವುಗಳ ಸಂತಾನಹರಣವಾಗಿಬಿಡುತ್ತದೆ. ಹೀಗೆ ಕನ್ಯೆಗಳಾಗಿಯೇ ಉಳಿಯುವ ಅವು ಸಂತಾನೋತ್ಪತ್ತಿಯಲ್ಲಿ ಈ ಹೆಣ್ಣಿನ ಏಕಾಧಿಪತ್ಯಕ್ಕೆ ಅಡ್ಡಿಯಾಗಲಾರವು. ಈ ಮುತ್ತೈದೆ ಸಾವನ್ನಪ್ಪಿದಾಗ ಗೆಮ್ಮೇಗಳನ್ನು ತುಂಡರಿಸುವವರು ಯಾರೂ ಇಲ್ಲದ್ದರಿಂದ, ಅನಂತರ ಹುಟ್ಟುವ ಮರಿ, ಮುಂದಿನ ಮುತ್ತೈದೆಯಾಗುತ್ತದೆ. ತನ್ನ ನಂತರ ಹುಟ್ಟಿದವುಗಳೆಲ್ಲದರ ಸಂತಾನ ಹರಣ ಮಾಡಿಬಿಡುತ್ತದೆ.

Scroll To Top