Now Reading
ನಮ್ಮ ಹೀರೋಗಳ ಹರ್ಷ ಹಾಗೂ ಹೊರೆ

ನಮ್ಮ ಹೀರೋಗಳ ಹರ್ಷ ಹಾಗೂ ಹೊರೆ

ಬಾತುಗಳ ಜೊತೆಗೆ ಇರುವ ಕೊನ್ರಾಡ್‌ ಲೋರೆಂಜ಼ರ ಸುಪ್ರಸಿದ್ಧ ಚಿತ್ರ. ಚಿತ್ರ: ವಿಲಾಮೆಟ್‌ ಬಯಾಲಜಿ, CC BY-SA 2.0

ಸಂಪುಟ 4 ಸಂಚಿಕೆ 235 ಮೇ, 15, 2021

ಜಾಣ ಅರಿಮೆ

ಸಂಪುಟ 4 ಸಂಚಿಕೆ 236 ಮೇ, 16, 2021

ಜಾಣ ಅರಿಮೆ

ವಿಸ್ಮಯಕ್ಕಿಂತ ವಿಸ್ಮಯ 18

Kannada translation by Kollegala Sharma

§

ನಾನು ಯುವಕನಾಗಿದ್ದಾಗ ಓದಿದ ಎರಡು ಪುಸ್ತಕಗಳು ನನ್ನ ಬದುಕನ್ನೇ ಬದಲಿಸಿಬಿಟ್ಟಿವೆ. ಅವುಗಳಲ್ಲಿ ಮೊದಲನೆಯದು ನೋಬೆಲ್‌ ಪ್ರಶಸ್ತಿ ವಿಜೇತ ಜೇಮ್ಸ್‌ ಡಿ ವಾಟ್ಸನ್ನರ ದಿ ಡಬಲ್‌ ಹೆಲಿಕ್ಸ್. ಹಲವು ರೀತಿಯಲ್ಲಿ ಪ್ರೇರಣೆ ನೀಡಿದ ಇದು ಅಣು ಜೀವಶಾಸ್ತ್ರಕ್ಕೆ ನಾನು ಮಾರುಹೋಗುವಂತೆ ಮಾಡಿತ್ತು. ಕಾನ್ರಾಡ್‌ ಲೋರೆಂಜ಼ರ ಕಿಂಗ್‌ ಸಾಲೊಮನ್ಸ್‌ ರಿಂಗ್‌ ಮತ್ತೊಂದು. ಆಗ ಆತನಿಗೆ ಇನ್ನೇನು ನೋಬೆಲ್‌ ಸಿಗಬೇಕಿತ್ತು ಅಷ್ಟೆ. ಅದರಲ್ಲಿ ಲೋರೆಂಜ್‌ ಯಾರೂ ನೆನಪಿಟ್ಟುಕೊಳ್ಳುವಷ್ಟು ಮೋಹಕವಾಗಿ ಪ್ರಾಣಿಗಳ ನಡವಳಿಕೆಗಳನ್ನು ವಿವರಿಸುವ ರೀತಿ ಆ ವಿಷಯದ ಮೇಲೆ ನನಗೆ ಶಾಶ್ವತವಾಗಿ ಪ್ರೀತಿಯನ್ನುಂಟು ಮಾಡಿತು.

ಈ ಪುಸ್ತಕಗಳನ್ನು ನಾನು ಓದಿದ ಸಂದರ್ಭಗಳೂ ಅಚ್ಚಳಿಯದಂತೆ ನೆನಪಿವೆ. ಆ ಪುಸ್ತಕಗಳು ಹಾಗೂ ಅವುಗಳಲ್ಲಿನ ವಿಷಯಗಳ ಬಗ್ಗೆ ನನಗೆ ಮಹದಾಸಕ್ತಿ ಹುಟ್ಟಲು ಇವು ಕೂಡ ಕಾರಣವಿರಬಹುದು. ಲಂಡನ್ನಿನಲ್ಲಿ ದಿ ಡಬಲ್‌ ಹೆಲಿಕ್ಸ್‌ ಮೊದಲು ಪ್ರಕಟವಾಗಿದ್ದು ೧೯೬೮ರಲ್ಲಿ. ಆಗ ನಾನು ಬೆಂಗಳೂರಿನ ಸೈಂಟ್‌ ಜೋಸೆಫ್ಸ್‌ ಕಾಲೇಜಿನಲ್ಲಿ   ಪಿಯೂಸಿ ವಿದ್ಯಾರ್ಥಿಯಾಗಿದ್ದೆ. ರಾಷ್ಟ್ರಿಯ ಪ್ರತಿಭಾನ್ವೇ಼ಷಣೆಯ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೆ. ಅಷ್ಟರಲ್ಲಾಗಲೇ ಡಿಎನ್‌ಎಯ ರಚನೆ ಜೋಡಿ ಸುರುಳಿಯಂತಿದೆ ಎಂದು ಪತ್ತೆ ಮಾಡಿದ್ದನ್ನೂ, ಅದರ ಮುಂದಿನ ಪರಿಣಾಮಗಳು ಏನೇನಿರಬಹುದು ಎನ್ನುವ ಬಗ್ಗೆಯೂ ಅಷ್ಟಿಷ್ಟು ಕೇಳಿದ್ದೆ. ಈ ಚಾರಿತ್ರಿಕ ಶೋಧವು ೧೯೫೩ರಲ್ಲಿ ಅಂದರೆ ನಾನು ಹುಟ್ಟಿದ ವರ್ಷದಲ್ಲೇ ಆಗಿತ್ತು ಎನ್ನುವುದು ನನಗೆ ಕಚಗುಳಿ ಇಟ್ಟಿತ್ತು.

ವಾಟ್ಸನ್ನರ ಹೊಸ ಪುಸ್ತಕದ ಬಗ್ಗೆ ಒಂದು ಪ್ರಕಟಣೆಯನ್ನು ನಾನು ಆಗಾಗ್ಗೆ ಹೋಗುತ್ತಿದ್ದ ಬ್ರಿಟಿಷ್‌ ಕೌನ್ಸಿಲ್‌ ಲೈಬ್ರರಿಯ ನೋಟೀಸ್‌ ಬೋರ್ಡಿನಲ್ಲಿ ಕಂಡಿದ್ದೆ.  “ಸೃಜನಾತ್ಮಕ ಶೋಧಗಳು ಹೇಗೆ ಆಗುತ್ತವೆ ಎನ್ನುವುದನ್ನು ತಿಳಿಯುವುದು ಸಾಹಿತ್ಯ ಕೊಡುವುದಕ್ಕಿಂತಲೂ ಮೀರಿದ ಖುಷಿಯನ್ನು ಕೊಡುತ್ತದೆ. ವಿಜ್ಙಾನಿಯಲ್ಲದ ಓದುಗನಿಗೆ ಹೊಸ ಪ್ರಪಂಚದ ಬಾಗಿಲನ್ನು ಈ ಪುಸ್ತಕ ತೆರೆಯುತ್ತದೆ,” ಎಂದು ಸಿ. ಪಿ. ಸ್ನೋ ಬರೆದಿದ್ದ ಬೆನ್ನುಡಿಯನ್ನು ಓದಿ ಮಿಂಚು ಬಡಿದಂತೆ ಆಗಿತ್ತು. ಆದರೆ ಆ ಪುಸ್ತಕ ಎಲ್ಲಿಯೂ ಕಾಣಲೇ ಇಲ್ಲ. ಹೊಸ ಪುಸ್ತಕಗಳ ಕಪಾಟಿನಲ್ಲಿಯೂ ಇರಲಿಲ್ಲ. ಹೀಗಾಗಿ ನಾನು ಪ್ರಧಾನ ಗ್ರಂಥಪಾಲಕರ ಬಳಿ ಹೋಗಿ ಈ ಪುಸ್ತಕ ಬೇಕು ಎಂದು ಕೇಳಿದೆ. ಆತ ಸ್ವಲ್ಪ ವಿಚಾರಣೆ ಮಾಡಿ, ಅದರ ಮೊತ್ತ ಮೊದಲ ಪ್ರತಿ ಗ್ರಂಥಾಲಯದ ಮದರಾಸಿನ, ಇಂದಿನ ಚೆನ್ನೈ ನಗರದ ಶಾಖೆಗೆ ಬಂದಿದೆ ಎಂದೂ, ಬೆಂಗಳೂರಿನಲ್ಲಿ ಅದು ಯಾವಾಗ ದೊರೆಯುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಬಿಟ್ಟರು. ನಾನೋ ಅದನ್ನು ನಾನು ಈಗಲೇ ಓದಬೇಕಿತ್ತು ಎಂದು ಬೇಡಿದೆ.

ಆಗಿನ್ನೂ ಹದಿನೈದು ವರ್ಷದ ಪೋರನಾದ ನಾನು ಹೀಗೆ ಹೇಳಿದ್ದು ಅವರನ್ನು ಚಕಿತಗೊಳಿಸಿರಬೇಕು. ಮುಖ್ಯ ಗ್ರಂಥಪಾಲಕರು ಏನಾದರೂ ಮಾಡೋಣ ಎಂದಿದ್ದಲ್ಲದೆ ಅದುವರೆಗೆ ಅವರು ಮಾಡದ ಕೆಲಸವನ್ನೂ ಮಾಡಿಬಿಟ್ಟರು. ಮಾತು ಕೊಟ್ಟಂತೆಯೇ ಅವರು ಮದರಾಸಿನ ಶಾಖೆಯಿಂದ ಆ ಪುಸ್ತಕವನ್ನು ಬೆಂಗಳೂರಿನ ಶಾಖೆಗೆ ವರ್ಗಾವಣೆ ಮಾಡಿಸಿದರು. ಮದರಾಸಿನಲ್ಲಿ ಬೇರೆ ಯಾರೇ ಅದನ್ನು ಓದುವುದಕ್ಕೂ ಮೊದಲು ತರಿಸಿದ್ದರು. ಬಹುಶಃ ಭಾರತದಲ್ಲಿ ಆ ಪುಸ್ತಕವನ್ನು ಓದಿದ ಮೊದಲಿಗ ನಾನೇ ಇರಬೇಕು!

L-R: R.A. Mashelkar, former director-general of CSIR, James Watson and the author, during Watson’s visit to the Indian Academy of Sciences, Bangalore. Photo: R.G. Lac Collection

ಎಡದಿಂದ ಬಲಕ್ಕೆ.: ಆರ್.‌ ಎ. ಮಶೇಲ್ಕರ್‌, ಸಿಎಸ್‌ಐಆರ್‌ನ ಪೂರ್ವ ಮಹಾನಿರ್ದೇಶಕರು; ವಾಟ್ಸನ್‌ ಹಾಗೂ ಲೇಖಕರು. ಬೆಂಗಳೂರಿನ ಇಂಡಿಯನ್‌ ಅಕಾಡೆಮಿ ಆಫ್‌ ಸೈನ್ಸಸ್‌ಗೆ ವಾಟ್ಸನ್ನರು ಬೇಟಿ ನೀಡಿದ್ದ ಸಂದರ್ಭದಲ್ಲಿ. ಚಿತ್ರ: ಆರ್‌.ಜಿ. ಪ್ರಯೋಗಾಲಯದ ಸಂಗ್ರಹ

ವಾಟ್ಸನ್ನರ ಪುಸ್ತಕ ನನಗೆ ಹುಚ್ಚು ಹಿಡಿಸಿಬಿಟ್ಟಿತು. ಶ್ರೇಣೀಕೃತವಾದ ಸಾಂಪ್ರದಾಯಿಕ ಶಿಸ್ತಿನ ಭಾರತೀಯ ಸಮಾಜದಲ್ಲಿ ಬೆಳದು, ಅದಕ್ಕಿಂತಲೂ ಶ್ರೇಣೀಕೃತವಾದ ಶಿಕ್ಷಣ ವ್ಯವಸ್ಥೆಯೊಳಗೆ ಕಲಿಯುತ್ತಿದ್ದ ನನಗೆ ಭಯಭಕ್ತಿಗಳೇ ಇಲ್ಲದೆ ಹೀಗೆ ಸಂಶೋಧನೆ ನಡೆಸುವುದನ್ನೂ, ಅದರ ಬಗ್ಗೆ ಇಷ್ಟೊಂದು ಮುಕ್ತವಾಗಿ ಬರೆದುಕೊಳ್ಳುವುದನ್ನೂ ಊಹಿಸುವುದು ಕಷ್ಟವಾಗಿತ್ತು.

ದಿ ಡಬಲ್‌ ಹೆಲಿಕ್ಸ್‌ ಹೀಗೆ ನನ್ನನ್ನು ಹಲವಾರು ಗ್ರಂಥಾಲಯಗಳ ಬೇಟೆಗೂ, ಅಣು ಜೀವಶಾಸ್ತ್ರದ ಚರಿತ್ರೆಯ ನ್ನು ಹಿಂಬಾಲಿಸಲೂ ಪ್ರೇರೇಪಿಸಿತು. ಫ್ರೆಡರಿಕ್‌ ಮೀಶರ್‌ ಎಂಬ ಸ್ವಿಸ್‌ ವೈದ್ಯ 1868ರಲ್ಲಿ ಕೀವು ತುಂಬಿದ ಬ್ಯಾಂಡೇಜುಗಳಿಂದ ಡಿಎನ್‌ಎಯನ್ನು ಪ್ರತ್ಯೇಕಿಸಿದ ಬಗ್ಗೆ, 1928ರಲ್ಲಿ ಬ್ರಿಟಿಷ್‌ ಸೂಕ್ಷ್ಮಜೀವಿವಿಜ್ಞಾನಿ ಫ್ರೆಡ್‌ ಗ್ರಿಫಿತ್‌ ಸತ್ತ ನ್ಯೂಮೋಕಾಕಸ್‌ ಬೆಕ್ಟೀರಿಯಾಗಳು ಹೇಗೆ ಜೀವಂತ ಆದರೆ ಸೌಮ್ಯವಾದ ಬ್ಯಾಕ್ಟೀರಿಯಾಗಳನ್ನು ಹೇಗೆ ಉಗ್ರವಾಗಿ ಪರಿವರ್ತಿಸಬಲ್ಲುವು ಎಂದು ತೋರಿಸಿದ್ದನ್ನೂ ಒಂದೇ ಉಸಿರಿನಲ್ಲಿ ಓದಿದೆ.  1944ರಲ್ಲಿ ಅಮೆರಿಕೆಯ ರಾಕ್ ಫೆಲರ್‌ ವಿಶ್ವವಿದ್ಯಾನಿಲಯದ ಮೂವರು ಬ್ಯಾಕ್ಟೀರಿಯಾ ತಜ್ಞರಾದ ಆಸ್ವಾಲ್ಡ್‌ ಎವೆರಿ, ಕಾಲಿನ್‌ ಮ್ಯಾಕ್‌ ಕ್ಲಿಯಾಡ್‌, ಮತ್ತು ಮ್ಯಾಕ್ಲಿನ್‌ ಮ್ಯಾಕ್‌ ಕಾರ್ತಿ, ಸಾಕಷ್ಟು ಅನುಮಾನದಿಂದ ಹಾಗೂ ಸುದೀರ್ಘ ಪ್ರಯೋಗಗಳಿಂದ ಅದು ಹೇಗೆ ಗ್ರಿಫಿತ್‌ ಕಲ್ಪಿಸಿಕೊಂಡಿದ್ದ ಈ ಪರಿವರ್ತನಾ ಘಟಕವು ಡಿಎನ್‌ಎಯೇ ಇರಬೇಕು ಎಂದು ಖಚಿತವಾಗಿ ಪತ್ತೆ ಮಾಡಿದ್ದನ್ನು ಓದಿ ಖುಷಿಪಟ್ಟಿದ್ದೆ.

ಡಿಎನ್‌ಎಯ ರಚನೆ ಜೋಡಿಸುರುಳಿಯಂತೆ ಇದೆ ಎಂದು ವರದಿಮಾಡಿದ ವಾಟ್ಸನ್-ಕ್ರಿಕ್ಕರ ಪ್ರಬಂಧದ ಕೊನೆಯ ವಾಕ್ಯವೋ ಒಂದು ಅದ್ಭುತ ಕಲ್ಪನಾವಿಲಾಸ. “ಇಲ್ಲಿ ಕಲ್ಪಿಸಿರುವ ಈ ನಿರ್ದಿಷ್ಟ ಜೋಡಣೆಯ ಕ್ರಮವು, ತಳಿರಾಸಾಯನಿಕವನ್ನು ಪ್ರತಿ ಮಾಡುವ ವಿಧಾನವನ್ನೂ ಸೂಚಿಸಬಲ್ಲುದು ಎಂಬುದನ್ನೂ ನಾವು ಗಮನಿಸಿದ್ದೇವೆ.” ಎಂದು ಅವರು ಬರೆದಿದ್ದರು. ಸೆಮಿ ಕಂಸರ್ವೇಟಿವ್‌ ರಿಪ್ಲಿಕೇಶನ್‌ ಎನ್ನುವ ಡಿಎನ್‌ಎ ದ್ವಿಪ್ರತಿಯಾಗುವ ಈ ವಿಧಾನವನ್ನು ಅಮೆರಿಕೆಯ ಮ್ಯಾಥ್ಯೂ ಮೆಸೆಲ್ಸನ್‌ ಮತ್ತು ಫ್ರಾಂಕ್ಲಿನ್‌ ಸ್ಟಾಲ್‌ ಎನ್ನುವವರು ವಿಕಿರಣಶೀಲ ಅಣುಗಳನ್ನು ಬಳಸಿದ ಚತುರ ಪ್ರಯೋಗದಿಂದ ನಿರೂಪಿಸಿದ್ದು ಇದಕ್ಕೆಲ್ಲ ಕಿರೀಟ ಪ್ರಾಯವಾದ ಶೋಧ.

ಅದೆಲ್ಲ ಸರಿ. ಆದರೆ ನಾಲ್ಕು ಅಕ್ಷರಗಳಲ್ಲಿ ಬರೆದ ಡಿಎನ್‌ಎ ಭಾಷೆಯನ್ನು ಇಪ್ಪತ್ತು ಅಕ್ಷರಗಳಿರುವ ಪ್ರೊಟೀನು ಭಾಷೆಗೆ ಅನುವಾದಿಸುವುದು ಹೇಗೆ? ಅಂದರೆ ಡಿಎನ್‌ಎಯಲ್ಲಿರುವ ಒಂದೋ ಎರಡೋ ಅಕ್ಷರಗಳು, ಅರ್ಥಾತ್‌ ನ್ಯೂಕ್ಲಿಯೋಟೈಡು ಎನ್ನುವ ರಾಸಾಯನಿಕಗಳು, ಒಂಟಿಯಾಗಿ ಈ ಇಪ್ಪತ್ತು ಪ್ರೊಟೀನು ಅಕ್ಷರಗಳು ಅಥವಾ ಅಮೈನೊ ಆಮ್ಲಗಳನ್ನು ಸೂಚಿಸಲಾರವು ಅಲ್ಲವೇ? ಮೂರು ಅಕ್ಷರಗಳೇ ಈ ಸಂಕೇತಗಳಿರಬೇಕು. ಏಕೆಂದರೆ ನಾಲ್ಕು ಅಕ್ಷರಗಳು ಅವಶ್ಯಕ್ಕಿಂತಲೂ ಹೆಚ್ಚುಆಗಿಬಿಡುತ್ತವೆ. ಮೂರು ಅಕ್ಷರಗಳು ಕೂಡಿದರೆ ಒಟ್ಟು ಅರವತ್ತನಾಲ್ಕು ನ್ಯೂಕ್ಲಿಯೋಟೈಡುಗಳ ಸಂಕೇತಗಳಾಗುವುದು ಸಾಧ್ಯ. ಇವುಗಳಲ್ಲಿ ಇಪ್ಪತ್ತು ಅಮೈನೋ ಆಮ್ಲಗಳನ್ನು ಪ್ರತಿನಿಧಿಸಬಹುದು. ಉಳಿದವು ಅಧಿಕವಾದರೂ, ಪುನರುಕ್ತಿಗಳೋ, ವಿರಾಮ ಚಿಹ್ನೆಗಳೋ ಆಗಿರಬಹುದಲ್ಲವೇ?  ಮಕ್ಕಳಾಟಿಕೆಯಂತಹ ಈ ಲೆಕ್ಕಾಚಾರಗಳು ಜೀವ ಎನ್ನುವುದರ ಮೂಲತತ್ವ ಎನ್ನುವುದನ್ನು ಮಾರ್ಷಲ್‌ ನೀರೆನ್ಬರ್ಗ್‌ ಹಾಗೂ ಹರ್‌ ಗೋಬಿಂದ ಖೊರಾನಾ ಅವರ ಬಲು ಸುಂದರ ಪ್ರಯೋಗಗಳಿಂದ ನಿರೂಪಿಸಿದುವು. ಖೊರಾನಾ ಭಾರತದಲ್ಲಿ ಹುಟ್ಟಿದವರು ಎನ್ನುವುದು ಇನ್ನೂ ದೊಡ್ಡ ಪ್ರೇರಣೆಯಾಯಿತು. ಹೌದೇ? ಇದು ಸತ್ಯವೇ? ಎಂದು ಯೋಚಿಸುತ್ತಿದ್ದ ನನಗೆ ನಿದ್ರೆಯೂ ಹತ್ತಿರ ಸುಳಿಯಲಿಲ್ಲ.

ಆಮೇಲೆ ನಾನು ಬ್ಯಾಕ್ಟೀರಿಯೋಫಾಜುಗಳು ಅಥವಾ ಬ್ಯಾಕ್ಟೀರಿಯಾಗಳನ್ನು ಸೋಂಕುವ ವೈರಸ್ಸುಗಳ ಬಗ್ಗೆ ಓದಿದೆ. ಅದರಲ್ಲಿಯೂ ಜೀವಕೋಶಗಳನ್ನು ಒಡೆಯುವಂತಹ ಲ್ಯಾಂಬ್ಡ ಬ್ಯಾಕ್ಟೀರಿಯೋಫಾಜುಗಳು ಬೆರಗು ಮೂಡಿಸಿದುವು. ಇವು ಅವಕಾಶ ದೊರಕಿದಾಗ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡು ತಾವಿರುವ ಬ್ಯಾಕ್ಟೀರಿಯಾಗಳನ್ನೇ ಕೊಂದುಬಿಡುತ್ತಿದ್ದುವು. ಅದೇ ಬ್ಯಾಕ್ಟೀರಿಯಾ ಏನಾದರೂ ತೊಂದರೆಯಲ್ಲಿ ಇದ್ದರೆ, ಅವು ಸರಿಯಾದ ಸಮಯಕ್ಕಾಗಿ ಕಾದು ಕುಳಿತು, ಅನಂತರ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತಿದ್ದುವು.

Maclyn McCarty with Francis Crick and James D. Watson. Photo: Marjorie McCarty, CC BY 3.0

ಮ್ಯಾಕ್ಲಿನ್‌ ಮ್ಯಾಕ್‌ ಕಾರ್ತಿ ಜೊತೆಯಲ್ಲಿ ಜೇಮ್ಸ್‌ ಡಿ ವಾಟ್ಸನ್‌ ಹಾಗೂ ಫ್ರಾನ್ಸಿಸ್‌ ಕ್ರಿಕ್‌ ಚಿತ್ರ: ಮಾರ್ಜೊರಿ ಮ್ಯಾಕ್‌ ಕಾರ್ತಿ, CC BY 3.0

ಪುಸ್ತಕ ಕೈಗೆ ಸಿಕ್ಕಿದ ಕೂಡಲೇ ಈಗಿನ ಮಕ್ಕಳು ಹೇಗೆ ಹ್ಯಾರಿ ಪಾಟರನ ಕಥೆಗಳನ್ನು ಓದುವರೋ ಹಾಗೆ ಒಟ್ಟಿಗೇ ಓದಿ ಮುಂದಿನ ಪುಸ್ತಕಕ್ಕಾಗಿ ಕಾಯುತ್ತಿದ್ದೆ.

1969ರಲ್ಲಿ ನಾನು ಅಂದಿನ ಸೆಂಟ್ರಲ್‌ ಕಾಲೇಜಿನಲ್ಲಿ ಪ್ರಾಣಿವಿಜ್ಞಾನದಲ್ಲಿ ಬಿಎಸ್ಸಿ ಆನರ್ಸ್‌ ಪದವಿಗೆ ಪ್ರವೇಶ ಪಡೆದೆ. ಇದೇ ಇಂದು ಬೆಂಗಳೂರು ವಿವಿ ಆಗಿದೆ. ಅದರಲ್ಲಿ ಏನೇ ಕೊರತೆ ಇದ್ದಿರಬಹುದು. ಆದರೆ ಸೆಂಟ್ರಲ್‌ ಕಾಲೇಜಿನ ಗ್ರಂಥಾಲಯವೂ ಅದ್ಭುತವಾಗಿತ್ತು. ಅದರ ಗ್ರಂಥಪಾಲಕರೂ ಅದ್ಭುತವಾಗಿದ್ದರು. ಹೀಗಾಗಿ ಮುಂದಿನ ಐದು ವರ್ಷಗಳ ಕಾಲ ಲೈಬ್ರರಿಯೇ ನನ್ನ ಮನೆಯಾಗಿತ್ತು. ಗ್ರಂಥಪಾಲಕರೇ ನನ್ನ ಆತ್ಮೀಯ ಗೆಳೆಯರಾಗಿದ್ದರು. ಅಷ್ಟರಲ್ಲೇ ನನಗೆ ಕಾನ್ರಾಡ್‌ ಲೋರೆಂಜರ ಕಿಂಗ್‌ ಸಾಲೋಮನ್ಸ್‌ ರಿಂಗ್‌ ಪುಸ್ತಕ ಸಿಕ್ಕಿತು. ಲೋರೆಂಜರಿಗೆ ಇನ್ನೂ ನೋಬೆಲ್‌ ಸಿಕ್ಕಿರಲಿಲ್ಲ.  ಪುಸ್ತಕದ ಬೆನ್ನುಡಿಯಲ್ಲಿ “ಪ್ರಪಂಚದ ಉತ್ಕೃಷ್ಟ ವಿಜ್ಞಾನಿಯೊಬ್ಬರು ರಚಿಸಿದ ಪ್ರಕೃತಿವಿಜ್ಞಾನದ ಮೇರು ಮಾದರಿ ಪುಸ್ತಕ. ಸುಂದರ, ಮನಸೂರೆಗೊಳ್ಳುವ ಪುಸ್ತಕ” ಎಂದು ಜೂಲಿಯನ್‌ ಹಕ್ಸ್‌ಲಿ ಹೇಳಿದ್ದು ಬರೆದಿತ್ತು.

ನಾನು ಲೈಬ್ರರಿಯಿಂದ ಪುಸ್ತಕವನ್ನು ಪಡೆದು, ಚೀಲದಲ್ಲಿಟ್ಟುಕೊಂಡು, ಬೈಸಿಕಲ್ಲಿನಲ್ಲಿ ಭದ್ರವಾಗಿ ಸಿಕ್ಕಿಸಿ, ಒಳ್ಳೆಯ ಓದಿನ ನಿರೀಕ್ಷೆಯಲ್ಲಿ ಮನೆಗೆ ಬೈಸಿಕಲ್ಲು ತುಳಿದುಕೊಂಡು ಹೋದೆ. ಭದ್ರವಾಗಿ ಸಿಕ್ಕಿಸಿದ್ದೇನೆ ಎನ್ನುವುದು ನನ್ನ ಭ್ರಮೆ ಅಷ್ಟೆ. ಮನೆ ತಲುಪಿದಾಗ ಚೀಲ ಕಾಣೆಯಾಗಿದ್ದನ್ನು ಕಂಡು ನಿರಾಶನಾದೆ. ಎರಡು ದಿನಗಳ ನಂತರ, ಸಾತ್ವಿಕ ವೃದ್ಧರೊಬ್ಬರು ನನ್ನನ್ನು ಹುಡುಕಿಕೊಂಡು ಬಂದರು. ಆತನಿಗೆ ನನ್ನ ಚೀಲ ಸಿಕ್ಕಿತ್ತಂತೆ. ಅದರಲ್ಲಿದ್ದ ವಸ್ತುಗಳನ್ನು ನೋಡಿ, ನನ್ನ ವಿವರಗಳನ್ನು ತಿಳಿದುಕೊಂಡು ಹುಡುಕಿ ಬಂದಿದ್ದರು. ನಾನೋ ಅವರಿಗೆ ಅನಂತ ವಂದನೆಗಳನ್ನು ಸಲ್ಲಿಸಿದೆ. ಆದರೆ ಅದಕ್ಕೂ ಮುನ್ನ ಆ ಚೀಲದಲ್ಲಿ ಕಿಂಗ್‌ ಸಾಲೋಮನ್ಸ ರಿಂಗ್‌ ಇದೆಯೋ ಎಂದು ಖಚಿತಪಡಿಸಿಕೊಂಡಿದ್ದೆ ಎನ್ನಿ. ಹೀಗೆ ಕಳೆದು ಸಿಕ್ಕಿದ ಈ ನಿಧಿಯನ್ನು ಮತ್ತೆ ಓದುವುದು ಇದೆಯಲ್ಲ, ಅದರ ಥ್ರಿಲ್ಲೇ ಬೇರೆ.

ಕಿಂಗ್‌ ಸಾಲೊಮನ್ಸ್‌ ರಿಂಗ್‌ ಪುಸ್ತಕ ಪ್ರಾಣಿ ನಡವಳಿಕೆಯ ಚರಿತ್ರೆಯ ಲೋಕದಲ್ಲಿ ನನ್ನನ್ನು ಓಡಾಡಿಸಿತು. ನನಗೆ ಸಿಕ್ಕದ್ದನ್ನೆಲ್ಲ ಓದಿದೆ. ಜರ್ಮನಿಯ ಜೀವಿವಿಜ್ಞಾನಿ ಜೇಕಬ್‌ ಫಾನ್‌ ಊಕ್ಸ್‌ ಕುಲ್‌ ಹಾಗೂ ಪ್ರತಿ ಪ್ರಾಣಿಯೂ ತನ್ನ ಪರಿಸರವನ್ನು ಅನುಭವಿಸುವ ನಿರ್ದಿಷ್ಟ ಬಗೆಯನ್ನು ವಿವರಿಸಲು ಆತ ರೂಪಿಸಿದ ಉಮ್ವೆಲ್ಟ್‌ ಅಥವಾ “ವ್ಯಕ್ತಿಲೋಕ”ದ ಬಗ್ಗೆಯೂ ತಿಳಿದುಕೊಂಡೆ. ಈ ತತ್ವದ ಮೇಲೆ ಬೆಳಕು ಚೆಲ್ಲಲು ಊಕ್ಸ್‌ ಕುಲ್‌ ಚಿಗಟವೊಂದರ ಜೀವನ ಚರಿತ್ರೆಯನ್ನು ಉದಾಹರಣೆಯನ್ನಾಗಿ ಕೊಟ್ಟಿದ್ದ. ಚಿಗಟವು ಒಂದಾದ ಮೇಲೆ ಒಂದರಂತೆ ಬೆಳಕು, ವಾಸನೆ ಹಾಗೂ ಉಷ್ಣತೆಗೆ ಸ್ಪಂದಿಸುವುದನ್ನು ಬೆಳೆಸಿಕೊಳ್ಳುತ್ತದೆ. ಬೆಳಕಿಗೆ ಸ್ಪಂದಿಸುವುದರಿಂದ ಅದು ನೆಲ ಬಿಟ್ಟು ಹೋಗುವಂತಾಗುತ್ತದೆ. ವಾಸನೆಯಿಂದ ಸ್ತನಿಯೊಂದನ್ನು ಹುಡುಕುವುದು ಸುಲಭವಾಗುತ್ತದೆ. ಕೊನೆಗೆ ಉಷ್ಣತೆಗೆ ಸ್ಪಂದಿಸುವುದರಿಂದ ಅದು ಪ್ರಾಣಿಗಳ ರಕ್ತ ಹೀರಿದ ಮೇಲೆ, ನೆಲಕ್ಕೆ ಬಿದ್ದು, ಅಲ್ಲಿ ಮೊಟ್ಟೆಗಳನ್ನು ಇಟ್ಟು ಸಾಯುತ್ತದೆ. ಹೀಗೆಯೇ ನಾನು ಡೌಗ್ಲಾಸ್‌ ಸ್ಪಾಲ್ಡಿಂಗನ ಬಗ್ಗೆಯೂ ಅಸೂಯೆಗೊಂಡಿದ್ದೆ. ಆತ ಬರ್ಟ್ರಾಂಡ್‌ ರಸೆಲನಿಗೆ ಖಾಸಗಿಯಾಗಿ ಪಾಠ ಹೇಳುತ್ತಿದ್ದ. ಉಳಿದ ಸಮಯದಲ್ಲಿ ಆತ ಕೋಳಿಮರಿಗಳ ಕಣ್ಣಿಗೆ ದೃಷ್ಟಿ ವಿರೂಪಗೊಳಿಸುವ​ ಕಟ್ಟು ಕಟ್ಟಿ, ಹೀಗೆ ಮಾಡಿದ ಮೇಲೂ ಅವು ತಪ್ಪದೆ ಕಾಳುಗಳನ್ನು ಹೆಕ್ಕುವುದನ್ನು ಗಮನಿಸಿದ್ದ. ಅಂದರೆ ಅವು ಕಾಳನ್ನು ಕುಕ್ಕುವುದು ಹುಟ್ಟಾಗುಣ, ತಪ್ಪು-ಒಪ್ಪಿನಿಂದ ಕಲಿತ ಅಭ್ಯಾಸವಲ್ಲ ಎಂದು ನಿರೂಪಿಸಿದ್ದ.

ಟಿನ್ಬರ್ಜೆನ್ನರ ಪ್ರಯೋಗಗಳನ್ನೂ ಇಷ್ಟೇ ಆಸಕ್ತಿಯಿಂದ ನಾನು ಓದಿದ್ದೆ. ಆತ ಕಣಜಗಳ ಗೂಡಿನ ಸುತ್ತಲೂ ಪೈನ್‌ ಮರದ ಹಣ್ಣುಗಳನ್ನು ಇಟ್ಟು, ಸ್ಥಳೀಯವಾದ, ಕಣ್ಣಿಗೆ ತೋರುವ ಹಾದಿಗುರುತುಗಳು ಕಣಜಗಳಿಗೆ ತಮ್ಮ ಗೂಡಿನ ಹಾದಿಯನ್ನು ತೋರಿಸುತ್ತವೆ ಎಂದು ನಿರೂಪಿಸಿದ್ದ. ಕಾರ್ಲ್‌ ಫಾನ್‌ ಫ್ರಿಶ್‌ ಜೇನ್ನೊಣಗಳ ನೃತ್ಯಭಾಷೆಯನ್ನು ಅನಾವರಣಗೊಳಿಸಿದ ರೀತಿಗೆ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನವಿದೆ. ಜೇನ್ನೊಣವೊಂದು ಇನ್ನೊಂದು ಜೇನ್ನೊಣಕ್ಕೆ ಆಹಾರ ಇರುವ ದೂರ ಹಾಗೂ ದಿಕ್ಕನ್ನು ನ ರ್ತನದ ಮೂಲಕ ತಿಳಿಸುತ್ತದೆಯಂತೆ. ಹೌದೇ? ಇದು ನಿಜವೇ? ಲೋರೆಂಜನು ಬಾತುಕೋಳಿಗಳು ಅವನನ್ನೇ ತಾಯಿಯನ್ನಾಗಿ ತಿಳಿದು ಹಿಂಬಾಲಿಸುವಂತೆ ಮಾಡಿ, ಇಂಪ್ರಿಂಟಿಂಗ್‌ ಅಥವಾ ಹುಟ್ಟಾಕಲಿಕೆಯ ಬಗ್ಗೆ ಮಾಡಿದ ಪ್ರಯೋಗಗಳು ಈಗ ಪುರಾಣಕಥೆಗಳಷ್ಟೇ ಅದ್ಭುತವೆನ್ನಿಸಿವೆ. ಆತನಿದ್ದ ಆಸ್ಟ್ರಿಯಾದ ಆಲ್ಟೆನ್‌ ಬರ್ಗನಲ್ಲಿ ಅಷ್ಟೆ ಅಲ್ಲ, ನಮ್ಮ ಬೆಂಗಳೂರಿನಲ್ಲಿಯೂ ಅವು ದಂತಕಥೆಗಳಾಗಿವೆ. ಹುಟ್ಟಾಕಲಿಕೆ ಕುರಿತು ಲೊರೆಂಜರ ಈ ಊಹೆಗಳನ್ನು ಅಮೆರಿಕೆಯ ಮನಶ್ಶಾಸ್ತ್ರಜ್ಞ ಎಕಾರ್ಡ್‌ ಹೆಸ್‌ ಮತ್ತೊಮ್ಮೆ ಸತ್ಯವೆಂದು ಸಾಬೀತು ಪಡಿಸಿದ. ಅದೂ ಹೇಗೆ? ಬಾತುಕೋಳಿಗಳು ಬಾತಿನ ಬೊಂಬೆಯೊಂದನ್ನೇ ತಮ್ಮ ತಾಯಿಯೆಂದು ತಿಳಿಯುವಂತೆ ಮಾಡಿ. ಅಷ್ಟೇ ಅಲ್ಲ. ಪುಟ್ಟ ಆಟದ ರೈಲಿನ ಮೇಲೆ “ಅಮ್ಮ” ಬೊಂಬೆಯನ್ನು ಸವಾರಿ ಮಾಡಿಸಿ, ಬಾತುಮರಿಗಳು ಅದರ ಹಿಂದೆ ಎಷ್ಟು ಹೊತ್ತಿನವರೆಗೆ ಓಡುತ್ತವೆ ಎಂದು ಅಳೆದು ಈ ಹುಟ್ಟಾ ಕಲಿಕೆಯ ಪ್ರಮಾಣವನ್ನು ಅಳತೆ ಮಾಡಿದ. ಇಂತಹ ಪ್ರಯೋಗ ಎಷ್ಟು ಮಜಾ ಅಲ್ಲವಾ?

ಪ್ರಾಣಿಗಳ ನಡವಳಿಕೆಯಲ್ಲಿ ಹೀಗೆ ಕುತೂಹಲವಿದ್ದರೆ, ಪುಸ್ತಕವಿಲ್ಲದಿದ್ದಾಗ ಪ್ರಾಣಿಗಳನ್ನು ಗಮನಿಸಬಹುದು. ಪ್ರಾಣಿಗಳು ಇಲ್ಲದಿದ್ದಾಗ ಪುಸ್ತಕಗಳನ್ನು ಓದಬಹುದು. ಒಟ್ಟಾರೆ ಸದಾ ಮಜಾ.

Niko Tinbergen painting eggs to test the function of egg colouration. Photo: Willamette Biology, CC BY-SA 2.0

ಮೊಟ್ಟೆಗಳ ಬಣ್ಣದ ಕೆಲಸವೇನು ಎಂದು ತಿಳಿಯಲು ಬಿಳೀ ಮೊಟ್ಟೆಗಳಿಗೆ ಬಣ್ಣ ಹಚ್ಚಿ ಪರೀಕ್ಷಿಸುತ್ತಿರುವ ನಿಕೊ ಟಿನ್ಬರ್ಜೆನ್. ಚಿತ್ರ: ವಿಲ್ಲಾಮೆಟ್‌ ಬಯಾಲಜಿ, CC BY-SA 2.0

ನಾನು 1974ನೇ ಇಸವಿಯಲ್ಲಿ ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸಸನ್ನು ನನ್ನ ಮೆಚ್ಚಿನ ವಿಷಯವಾದ ಲೈಸೊಜೆನಿಕ್‌ ಬ್ಯಾಕ್ಟಿರಿಯೋಫಾಜುಗಳ ಮೇಲೆ ಡಾಕ್ಟರೇಟು ಮಾಡಲು ಸೇರಿಕೊಂಡೆ. ಇವು ಸಂಸ್ಥೆಯ ಸೂಕ್ಷ್ಮವಿಜ್ಞಾನ ಹಾಗೂ ಔಷಧವಿಜ್ಞಾನ ಪ್ರಯೋಗಾಲಯದ ಸಿ.ವಿ. ಸುಂದರರಾಜ್‌ ಪ್ರತ್ಯೇಕಿಸಿದ ನಮ್ಮದೇ ಸ್ವದೇಶೀ ಬ್ಯಾಕ್ಟಿರಿಯೋಫಾಜುಗಳಾಗಿದ್ದುವು. ವಾರ ಪೂರ್ತಿ ಪ್ರಯೋಗಾಲಯದಲ್ಲಿ ಬ್ಯಾಕ್ಟೀರಿಯಾ ಹಾಗೂ ಫಾಜುಗಳನ್ನು ಅಧ್ಯಯನ ಮಾಡಿದ ನಾನು ವಾರಾಂತ್ಯದಲ್ಲಿ ನನ್ನ ಮೆಚ್ಚಿನ ಪೇಪರ್‌ ಕಣಜಗಳನ್ನು ಗಮನವಿಟ್ಟು ನೋಡುವುದನ್ನು ಹವ್ಯಾಸ ಮಾಡಿಕೊಂಡೆ.

ಈ ಬಗ್ಗೆ ನಾನು ಹೀಗೆ ಬರೆದುಕೊಂಡಿದ್ದೇನೆ. “ಪಿಎಚ್‌ಡಿ ಮುಗಿದ ಮೇಲೆ ಒಂದೆಡೆ ಕಣಜೀವಿವಿಜ್ಞಾನದ ಆಕರ್ಷಣೆ ಹಾಗೂ ಇನ್ನೊಂದೆಡೆ ಪ್ರಾಣಿಗಳ ನಡವಳಿಕೆಯ ಮೇಲಿನ ಪ್ರೀತಿಯ ಸಂದಿಗ್ಧದಲ್ಲಿ ಸಿಲುಕಿಕೊಂಡೆ. ಇದು ಬಹುತೇಕ ನನ್ನ ಆರಾಧ್ಯದೈವಗಳಾದ ಜೇಮ್ಸ್‌ ವಾಟ್ಸನ್‌ ಹಾಗೂ ಕಾನ್ರಾಡ್‌ ಲೋರೆಂಜರಿಂದ ಇರಬೇಕು. ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಇರುವ ಪರಿಸ್ಥಿತಿಗಳಲ್ಲಿ ಕಣಜೀವವಿಜ್ಞಾನದಲ್ಲಿ ಮುಂಚೂಣೀ ಸಂಶೋಧನೆಗಳನ್ನೂ ಕೈಗೊಳ್ಳುವುದು ಸಮಸ್ಯೆ, ಅಲ್ಲಲ್ಲ ಅಸಾಧ್ಯ, ಎನ್ನುವ ಭಾವನೆಯನ್ನು ನಾನು ಪಿಎಚ್‌ಡಿ ಮಾಡುತ್ತ ಕಳೆದ ಪ್ರತಿಯೊಂದು ದಿನವೂ ಉಂಟು ಮಾಡಿತ್ತು. ಕಣಜೀವಿವಿಜ್ಞಾನದಲ್ಲಿಯೇ ಮುಂದುವರೆಯಬೇಕಿದ್ದರೆ ಅಮೆರಿಕಾ ಇಲ್ಲವೇ ಅದರಂತಹುದೇ ಮುಂದುವರೆದ ದೇಶದಲ್ಲಿ ಸಂಶೋಧನೆ ಮುಂದುವರೆಸಬೇಕಿತ್ತು. ಅದೇ ನನ್ನ ವೃತ್ತಿಯನ್ನು ಪ್ರಾಣಿ ನಡವಳಿಕೆಯ ಅಧ್ಯಯನವನ್ನಾಗಿಯೂ, ಕಣಜೀವವಿಜ್ಞಾನವನ್ನು ಹವ್ಯಾಸವಾಗಿಯೂ ಮಾಡಿಕೊಂಡರೆ ನಾನು ಭಾರತದಲ್ಲಿಯೇ ಉಳಿಯಬಹುದಿತ್ತು. ಹಾಗೂ ಅಗ್ಗದ ವೆಚ್ಚದಲ್ಲಿ ರೋಪಲೀಡಿಯಾ ಮಾರ್ಜಿನೇಟಾ ಕಣಜವನ್ನು ಅಧ್ಯಯನ ಮಾಡುತ್ತಾ ಇಡೀ ಜೀವನವನ್ನು ಕಳೆಯಬಹುದಿತ್ತು. ಹೀಗಾಗಿ ನಾನು ಎರಡನೆಯದನ್ನೇ ಆಯ್ದುಕೊಂಡೆ. ಈ ತೀರ್ಮಾನದ ಬಗ್ಗೆ ಎಂದಿಗೂ ನಾನು ವಿಷಾದಿಸಲಿಲ್ಲ.”

ಪ್ರಾಣಿಗಳ ನಡವಳಿಕೆಯನ್ನು ಅಧ್ಯಯನ ಮಾಡುತ್ತಾ ಹಲವು ದಶಕಗಳು ಮೋಜು ಮಾಡಿದ್ದೇನೆ. ಹಾಗೆಯೇ ಕಣಜೀವಿವಿಜ್ಞಾನದಲ್ಲಿನ ಅದ್ಭುತವಾದ ಬೆಳೆವಣಿಗೆಗಳ ಮೇಲೂ ಗಮನವಿಟ್ಟಿದ್ದೇನೆ. ಒಮ್ಮೊಮ್ಮೆ ಈ ಖುಷಿಯನ್ನು ಕೆಡಿಸಿ, ಖಿನ್ನತೆಗೆ ದೂಡುವ ವಿಷಯಗಳೂ ಇದ್ದುವಾದರೂ ಅವನ್ನು ನಾನು ಇದುವರೆಗೂ ಎಲ್ಲಿಯೂ ಹೇಳಿಕೊಂಡಿಲ್ಲ.

ಜೇಮ್ಸ್‌ ವಾಟ್ಸನ್ನರ ವರ್ಣಭೇದ

ರೋಸಾಲಿಂಡ್‌ ಫ್ರಾಂಕ್ಲಿನ್ನರ ಕುರಿತು ವಾಟ್ಸನ್ನರ ನಡವಳಿಕೆ ಕೆಟ್ಟದಾಗಿತ್ತಷ್ಟೆ ಅಲ್ಲ, ಇದೇ ರೀತಿಯಲ್ಲಿ ಆತ ಗೊತ್ತಿದ್ದೂ, ಗೊತ್ತಿದ್ದೂ, ಮತ್ತೆ, ಮತ್ತೆ ಅಸಹ್ಯಕರವಾಗಿ ನಡೆದು ಕೊಳ್ಳುತ್ತಿದ್ದಾನೆ ಪಾಶ್ಚಿಮಾತ್ಯರಿಗಿಂತಲೂ ಆಫ್ರಿಕನ್ನರು ಕಡಿಮೆ ಬುದ್ಧಿವಂತರು ಎನ್ನುವ ವರ್ಣಭೇದ ತುಂಬಿದ ಬೇಜವಾಬುದಾರಿಯ, ಸಂವೇದನಾರಹಿತ ಮಾತುಗಳಿಂದ ಆತ ಕೋಲ್ಡ್‌ ಸ್ಪ್ರಿಂಗ್‌ ಹಾರ್ಬರ್‌ ಸಂಶೋಧನಾಲಯದ ಆಡಳಿತದ ಜವಾಬುದಾರಿಯನ್ನು ಕಳೆದುಕೊಳ್ಳಬೇಕಾಯಿತು, ಆತನಿಗೆ ಕೊಟ್ಟಿದ್ದ ಗೌರವ ಪದವಿಗಳನ್ನು ಹಿಂಪಡೆಯಲಾಯಿತು. ಆದರೂ ಆತನ ಅರೆಮನಸ್ಸಿನ ಹಾಗೂ ತಡವಾದ ಕ್ಷಮೆಯ ಬೇಡಿಕೆ, ನನ್ನನ್ನು ಸಂಕೋಚ ಪಡುವಂತೆ ಮಾಡಿದುವು.

ವಾಟ್ಸನ್ನನ ಇತ್ತೀಚಿನ ಇಂತಹ ಇನ್ನೊಂದು ಕಸಿವಿಸಿಯ ನಡವಳಿಕೆಯ ಬಗ್ಗೆ ಇತ್ತೀಚೆಗೆ, 2018ರಲ್ಲಿ, ಡೇವಿಡ್‌ ರೀಚ್‌ ಬರೆದಿದ್ದ ಹೂ ಆರ್‌ ವಿ ಅಂಡ್‌ ಹೌ ವಿ ಗಾಟ್‌ ಹಿಯರ್‌ ಎನ್ನುವ ಪುಸ್ತಕ ಓದುವಾಗ ತಿಳಿಯಿತು.

“ನಾನು ವಾಟ್ಸನ್ನನನ್ನು ಕೋಲ್ಡ್‌ ಸ್ಪ್ರಿಂಗ್‌ ಹಾರ್ಬರ್‌ ಸಂಶೋಧನಾಲಯದಲ್ಲಿ ಭೇಟಿ ಮಾಡಿದ್ದೆ. ಆಗ ನನ್ನ ಪಕ್ಕದಲ್ಲಿ ಕುಳಿತಿದ್ದ ತಳಿವಿಜ್ಞಾನಿ ಬೆತ್ ಶಪಿರೊ ಹಾಗೂ ನನ್ನ ಬಳಿ ಬಾಗಿ – ಅಲ್ಲ ನೀವು ಯಹೂದಿಗಳು ಉಳಿದವರಿಗಿಂತಲೂ ಇಷ್ಟೊಂದು ಬುದ್ಧಿವಂತರು ಯಾಕೆ ಎನ್ನುವುದನ್ನು ನೀವು ಯಾವಾಗ ಅರ್ಥ ಮಾಡಿಕೊಳ್ಳುತ್ತೀರಿ? – ಎಂದೇನೋ ಪಿಸುಗುಟ್ಟಿದ್ದ. ಅನಂತರ ಆತ ಯಹೂದಿಯರು ಹಾಗೂ ಭಾರತೀಯ ಬ್ರಾಹ್ಮಣರು ಉನ್ನತ ಸಾಧಕರಾಗುವುದಕ್ಕೆ ಕಾರಣ ಅದು ವಂಶಪಾರಂಪರ್ಯವಾಗಿ ಬಂದ ವಿದ್ವತ್ತು.  ಸಾವಿರಾರು ವರ್ಷಗಳಿಂದ ವಿದ್ವಾಂಸರಾಗಿದ್ದರಿಂದ ಅದು ನಿಸರ್ಗ ಆಯ್ಕೆ ಮಾಡಿಬಿಟ್ಟಿದೆ ಎಂದು ಹೇಳಿದ್ದ.  ಅಷ್ಟೇ ಅಲ್ಲ. ಭಾರತೀಯರಲ್ಲಿ ಗುಲಾಮರ ಗುಣವೂ ಇದೆ.  ಬ್ರಿಟಿಷರ ಕೈಯಾಳುಗಳಾಗಿದ್ದರಿಂದ ಆ ಗುಣ ಅವರಿಗೆ ಹಾಗೆಯೇ ಬಂದು ಬಿಟ್ಟಿದೆ. ಇದಕ್ಕೆ ಭಾರತೀಯರಲ್ಲಿ ಇರುವ ಜಾತಿಪದ್ಧತಿಯಿಂದಾಗಿ ಈ ರೀತಿ ಆಯ್ಕೆಯಾಗಿರಬೇಕು ಎಂದೂ ತರ್ಕಿಸಿದ್ದ. ಅವನ ಪ್ರಕಾರ ಪೂರ್ವ​ ಏಶಿಯನ್‌ ವಿದ್ಯಾರ್ಥಿಗಳು ಸಾಂಪ್ರದಾಯಿಕ ಮನೋಭಾವದವರು. ಏಕೆಂದರೆ ಪುರಾತನ ಚೀನೀ ಸಮಾಜವೂ ಹಾಗೇ ಇತ್ತು”.

“ಸಿದ್ಧ ತರ್ಕಗಳಿಗೆ ಸವಾಲೊಡ್ಡುವುದರಲ್ಲಿ ವಾಟ್ಸನ್‌ ಖುಷಿ ಪಡುತ್ತಾನೆ ಎಂಬುದು ಎಲ್ಲರಿಗೂ ತಿಳಿದದ್ದೇ. ವಿಜ್ಞಾನಿಯಾಗಿ ಆತನ ಸಾಧನೆಗೆ ಈ ಧಾರ್ಷ್ಟ್ಯ ಅವಶ್ಯಕವಾಗಿತ್ತು. ಆದರೆ ಈಗ ಎಂಭತ್ತೆರಡು ವರ್ಷದ ವೃದ್ಧಾಪ್ಯದಲ್ಲಿ ಅವನ ಈ ಬೌದ್ಧಿಕತೆ ಕಾಣೆಯಾಗಿದೆ. ಉಳಿದಿರುವುದೆಲ್ಲವೂ ಆತನ ನಂಬುಗೆಗಳಷ್ಟೆ. ಆತ ಡಿಎನ್‌ಎಯ ವಿಷಯದಲ್ಲಿ ಮಾಡಿದ ಹಾಗೆ ಇಂಥಹ ತನ್ನ ನಂಬಿಕೆಗಳನ್ನು ಕಠಿಣ ಪರೀಕ್ಷೆಗೆ ಒಡ್ಡಿಲ್ಲ.” ಎಂಬ ಮಾತುಗಳನ್ನೂ ರೀಚ್‌ ಸೇರಿಸಿದ್ದಾನೆ.

ಇದನ್ನು ಕೇಳಿ ಸಂಕಟ ಪಡದಿರಲು ಸಾಧ್ಯವೇ?

ಕಾನ್ರಾಡ್‌ ಲೋರೆಂಜರ ನಾಟ್ಜೀ ಬಾಂಧವ್ಯ

ಇತ್ತೀಚೆಗೆ ಕಾನ್ರಾಡ್‌ ಲೋರೆಂಜರ ನಾಟ್ಜೀ ಚರಿತ್ರೆ ಹೆಚ್ಚೆಚ್ಚು ಬೆಳಕಿಗೆ ಬರುತ್ತಿದೆ. ಅಥವಾ ಈ ವ್ಯಕ್ತಿತ್ವ ತಿಳಿಯುತ್ತಾ ಇದ್ದ ಹಾಗೆ ಆತನ ಜನಪ್ರಿಯತೆ ಹಾಗೂ ಆಕರ್ಷಣೆಯ ಮಸುಕಾಗುತ್ತಿದೆ. ನೋಬೆಲ್‌ ಪಾರಿತೋಷಕ ಪಡೆದ ಸಂದರ್ಭದಲ್ಲಿ ಲೋರೆಂಜ್‌ ಹೀಗೆ ಬರೆದಿದ್ದ:

“ನನಗೆ ಭಯವಾಗಿತ್ತು. ಈಗಲೂ ಆಗುತ್ತಿದೆ. ಮಾನವ ಸಮಾಜದ ನಾಗರೀಕತೆಯನ್ನು ಕುಗ್ಗಿಸುವ ತಳಿ ವಿದ್ಯಮಾನಗಳು ಜರುಗುತ್ತಿದೆ ಎನಿಸುತ್ತಿದೆ. ಈ ಭಯದಿಂದಾಗಿ ಜರ್ಮನ್ನರು ಆಸ್ಟ್ರಿಯಾವನ್ನು ಆಕ್ರಮಿಸಿದ ಆರಂಭದಲ್ಲಿ ನಾನೊಂದು ಸಲಹೆಯನ್ನೂ ನೀಡಿದ್ದೆ. ನಾನು ಸ್ಥಳೀಯರನ್ನು ಒಗ್ಗಿಸಿಕೊಳ್ಳುವ ಅಪಾಯಗಳ ಬಗ್ಗೆ ಬರೆದೆ. ಅದು ಅರ್ಥವಾಗಲಿ ಎಂದು ನಾಟ್ಜೀಗಳು ಬಳಸುವ ಭಾಷೆಯನ್ನೇ ಬಳಸಿದ್ದೆ. ನನ್ನ ಈ ಕ್ರಮವನ್ನು ಲಘುವಾಗಿ ನಾನು ಪರಿಗಣಿಸಿಲ್ಲ. ವಾಸ್ತವವಾಗಿ ಹೊಸ ಆಡಳಿತದಿಂದ ಒಳ್ಳೆಯದಾಗಬಹುದೆಂದು ನಾನು ನಂಬಿದ್ದೆ. ಆಸ್ಟ್ರಿಯಾದಲ್ಲಿ ಹಿಂದೆ ಇದ್ದ ಸಂಕುಚಿತ ಮನೋಭಾವದ ಕ್ಯಾತೋಲಿಕ್‌ ಆಡಳಿತಕ್ಕಿಂತ​ ನಾಟ್ಜೀಯರು ಒಳ್ಳೆಯ, ಉತ್ತಮ ಬುದ್ಧಿವಂತಿಕೆಯ ಜನರು ಆಗಿರಬಹುದೆಂದು ನಾನು ಮುಗ್ಧವಾಗಿ ನಂಬಿದ್ದಕೊಂಡಿದ್ದೆ. ನನ್ನ ಎಲ್ಲ ಮಿತ್ರರೂ ಹೀಗೆಯೇ ನಂಬಿದ್ದರು, ದಯಾಳುವಾಗಿದ್ದ ನನ್ನ ಅಪ್ಪ ಕೂಡ ಹೀಗೇ ನಂಬಿದ್ದ. ಅಧಿಕಾರದಲ್ಲಿ ಇದ್ದವರು “ಆಯ್ಕೆ” ಎಂಬ ಪದವನ್ನು ಬಳಸಿದಾಗ, ಅದರ ಅರ್ಥ ಕೊಲೆ ಆಗಿರಬಹುದು ಎಂದು ನಾವು ಯಾರೂ ಅಂದುಕೊಂಡಿರಲಿಲ್ಲ. ನನಗೆ ಅಪಕೀರ್ತಿ ತಂದಿತು ಎಂಬ ಕಾರಣಕ್ಕಿಂತಲೂ ಇಂತಹ ಸ್ಥಳೀಯರ ಸುಧಾರಣೆಯಿಂದ ಮುಂದೆ ಆಗಬಹುದಾದ ಅಪಾಯಗಳನ್ನು ಪತ್ತೆ ಮಾಡಲು ಅಡ್ಡಿಯಾಗಬಹುದು ಎನ್ನುವ ಕಾರಣಕ್ಕೆ ವಿಷಾದಿಸುತ್ತೇನೆ.” ಎಂದಿದ್ದ.

ಆದರೆ ಪ್ರತಿಷ್ಟೆಯ ಬಗ್ಗೆ ತನಗೇನೂ ಮೋಹ ಇಲ್ಲವೆಂದೂ, ಎಲ್ಲವೂ ವಿಜ್ಞಾನದ ಒಳಿತಿಗಾಗಿ ಎಂದು ಲೋರೆಂಜ್‌ ಹೇಳಿದ್ದರೂ, ಲೊರೆಂಜನ ಪ್ರಕಾರ “ವಸ್ತುನಿಷ್ಠ” ಎನ್ನಿಸಿದ ಪ್ರಾಣಿ ನಡವಳಿಕೆಯ ಅಧ್ಯಯನಗಳ ಚರಿತ್ರಕಾರರು, ಪ್ರಾಣಿನಡವಳಿಕೆಯ ಚರಿತ್ರಕಾರರು ಲೊರೆಂಜ್‌ ಗೊತ್ತಿದ್ದೇ, ಉದ್ದೇಶಪೂರ್ವಕವಾಗಿಯೇ ಹೀಗೆ ಅಂದಿನ ರಾಷ್ಟ್ರವಾದಿ ಸಮಾಜವಾದಿಗಳ ಜೊತೆಗೆ ಕೈಗೂಡಿಸಿ, ನಾಟ್ಜೀ ರೂಪದ ವರ್ಣಭೇದವನ್ನು ಆಚರಿಸಲು ವೈಜ್ಞಾನಿಕವಾಗಿ ಒತ್ತಾಸೆಯನ್ನು ಕೊಟ್ಟಿದ್ದನೆನ್ನುವ ಬಗ್ಗೆ  ಪುರಾವೆಗಳನ್ನು ಗುಡ್ಡೆ ಹಾಕಿದ್ದಾರೆ.

ಪ್ರಪಾತಕ್ಕೆ ಬಿದ್ದ  ಹೀರೋಗಳು

ಈ ಲೇಖನ ಬರೆಯುವ ಮುನ್ನ ನಾನು ದಿ ಡಬಲ್‌ ಹೆಲಿಕ್ಸ್‌ ಹಾಗೂ ಕಿಂಗ್‌ ಸಾಲೋಮನ್ಸ್‌ ರಿಂಗ್‌ ಪುಸ್ತಕಗಳನ್ನು ಇನ್ನೊಮ್ಮೆ ತಿರುವಿ ಹಾಕಿದೆ. ಎರಡನ್ನು ಓದುವಾಗಲೂ ಮೊದಲು ಓದಿದಾಗ ಆದ ಖುಷಿಯನ್ನೇ ಈಗಲೂ ಅನುಭವಿಸಿದೆ. ಈ ಪುಸ್ತಕಗಳಲ್ಲಿ ಇಂಥಹ ಸಾಮರ್ಥ್ಯ​ ಇದೆ.  ಹಿಂತಿರುಗಿ ನೋಡಿದರೆ ಈ ಪುಸ್ತಕಗಳು ನನ್ನ ಬದುಕನ್ನು ಬದಲಿಸಿಬಿಟ್ಟಿದ್ದು ಅಚ್ಚರಿಯ ವಿಷಯವೇನಲ್ಲ ಅನಿಸುತ್ತದೆ. ನನ್ನಂತಹ ಇನ್ನೆಷ್ಟೋ ಜನರ ಬದುಕನ್ನು ಬದಲಿಸಬಲ್ಲ ಶಕ್ತಿ ಅವುಗಳಲ್ಲಿ ಇದೆ. ಆದರೂ ಈ ನನ್ನ ಇಬ್ಬರು ಆರಾಧ್ಯ ದೈವಗಳ ನಡವಳಿಕೆ ಅಸಹನೀಯವೇ. ಹೀಗೆ ನನ್ನ ಪ್ರಜ್ಞೆಯನ್ನು ಕಾಡುವ ಈ ಸಂಕಟವನ್ನು ಹೇಗೆ ನಿಭಾಯಿಸಬಹುದು? ಅವರನ್ನು ದೂರವಿಡಬಹುದೇ? ಆದೀತೇ?

ಲೋರೆಂಜರ ಜೊತೆಗೇ ನೋಬೆಲ್‌ ಪ್ರಶಸ್ತಿ ಹಂಚಿಕೊಂಡ ಹಾಗೂ ಸೀಮೆಯ ಇನ್ನೊಂದು ಬದಿಯಲ್ಲಿ ಸೈನಿಕನಾಗಿ ಹೋರಾಡಿದ್ದ ನಿಕೋ ಟಿನ್ಬರ್ಜೆನ್   ಲೊರೆಂಜರನ್ನು ಕ್ಷಮಿಸಿ, “ಯುದ್ಧಕಾಲದಲ್ಲಿ ನಡೆದ ಅನುಭವಗಳನ್ನು ಮರೆತು, ಯುದ್ಧ ತಡೆದಿದ್ದ ವೈಜ್ಞಾನಿಕ ಶೋಧಗಳನ್ನು ಮುಂದುವರೆಸಲಿ” ಎಂದು ಹೇಳಿದ್ದನೆಂದರೆ ಬೇಡ ಎನ್ನಲು ನಾನು ಯಾರು? ಆರ್‌ ವಿ ಸ್ಮಾರ್ಟ್‌ ಎನಫ್‌ ಟು ನೋ ಹೌ ಸ್ಮಾರ್ಟ್‌ ಅನಿಮಲ್ಸ್‌ ಆರ್? ಪ್ರಾಣಿಗಳೆಷ್ಟು ಬುದ್ಧಿವಂತರೆಂದು ತಿಳಿಯುವಷ್ಟು ಬುದ್ಧಿವಂ‌ತರೇ ನಾವು ಎನ್ನುವ ಪುಸ್ತಕದಲ್ಲಿ ಫ್ರಾನ್ಸ್‌ ಡೆ ವಾಲ್‌ ಲೊರೆಂಜರ ಬಗ್ಗೆ ಇನ್ನಿಲ್ಲವೆಂದರೂಮೂವತ್ತು ಬಾರಿ ಹೊಗಳಿಕೆಯ ಮಾತುಗಳನ್ನು ಹೇಳಿರುವಾಗ, ನಾನು ಹೇಗೆ ಬೇರೆಯಾಗಿ ನಡೆದುಕೊಳ್ಳಲಿ?

Niko Tinbergen and Konrad Lorenz after the war. Photo: Max Planck Gesellschaft, CC BY-SA 3.0

ಯುದ್ಧಾನಂತರ ನಿಕೋ ಟಿನ್ಬರ್ಜೆನ್ ಹಾಗೂ ಕಾನ್ರಾಡ್‌ ಲೋರೆಂಜ್‌ ಫೋಟೋ: ಮ್ಯಾಕ್ಸ್‌ ಪ್ಲಾಂಕ್‌ ಗೆಸೆಲ್ಶಾಫ್ಟ್‌ , CC BY-SA 3.0 

ಆದರೂ ಇದು ನನ್ನನ್ನು ಕಾಡುತ್ತಿದೆ. ಹೊಸ ಹೀರೋಗಳನ್ನು ಹುಡುಕುವ ವಯಸ್ಸು ಕಳೆದಿದೆ. ನಾನು ಹಳೆಯ ಹೀರೋಗಳ ಜೊತೆಗೇ ಬದುಕಬೇಕು, ಇಲ್ಲವೇ ಒಂಟಿಯಾಗಬೇಕು. ಇಂತಹ ಸಂದಿಗ್ಧದ ಬಗ್ಗೆ ನೋಬೆಲ್‌ ವಿಜೇತ ಕಜುವೋ ಇಶಿಗುರೋ ಹೇಳಿರುವಷ್ಟು ಹೃದಯಸ್ಪರ್ಶಿಯಾಗಿ ಯಾರೂ ಬರೆದಿಲ್ಲ. ದಿ ರೀಮೇನ್ಸ್‌ ಆಫ್‌ ದಿ ಡೇ ಎನ್ನುವ ಅವನ ಪುಸ್ತಕದಲ್ಲಿ ಸ್ಟೀವೆನ್‌ ಎನ್ನುವ ಪರಿಚಾರಕನೊಬ್ಬ ತಾನು ಗೊತ್ತಿಲ್ಲದೇ ಒಬ್ಬ ನಾಟ್ಜೀ ಸಹಾನುಭೂತಿಯೊಬ್ಬನಿಗೆ ಜೀವನ ಪರ್ಯಂತ ಉಣಬಡಿಸುತ್ತಿದ್ದುದಕ್ಕೆ ಹೀಗೆ ವಿಷಾದಿಸುತ್ತಾನೆ. “ನಾನು ಲಾರ್ಡ್‌ ಡಾರ್ಲಿಂಗ್ಟನ್ನನಿಗೆ ನನ್ನಿಂದ ಸಾಧ್ಯವಾದದ್ದನ್ನೆಲ್ಲ ಮಾಡಿದೆ. ಎಷ್ಟು ಉತ್ತಮವಾಗಿ ಕೊಡಬಹುದಿತ್ತೋ ಅಷ್ಟೂ ಉತ್ತಮವಾಗಿ ಸೇವೆ ಸಲ್ಲಿಸಿದೆ. ಆದರೆ ಈಗ, ಕೊಡಬೇಕೆಂದರೆ ನನ್ನ ಹತ್ತಿರ ಏನೂ ಇಲ್ಲವೇ ಇಲ್ಲ ಎನಿಸುತ್ತಿದೆ.”

ಟಿ. ಎಸ್.‌ ಎಲಿಯಟ್

ನಿಕೋ ಟಿನ್ಬರ್ಜೆನ್, ಫ್ರಾನ್ಸ್‌ ಡೆ ವಾಲ್‌ ಮತ್ತು ಕಜುವೋ ಇಶಿಗುರೋ, ನನ್ನ ಚಿಂತನೆಗಳು ಹದವಾಗುವುದಕ್ಕೆ ನೆರವಾಗಿದ್ದರೆ, ಈ ನನ್ನ ಸಂದಿಗ್ಧಕ್ಕೆ ಪರಿಹಾರವನ್ನು ಒದಗಿಸಿದ್ದು ಟಿ.ಎಸ್‌. ಎಲಿಯಟ್‌ ಎನ್ನಬಹುದು. ಒಬ್ಬ ಮಹಾನ್‌ ಕವಿಯ ಕಾವ್ಯವೊಂದು ನನಗೆ ಸ್ಪೂರ್ತಿ ನೀಡಿರಬಹುದೆಂದು ನೀವು ಅಂದುಕೊಂಡರೆ ಅಚ್ಚರಿಯೇನಿಲ್ಲ​. ಏಕೆಂದರೆ ​ಕಾವ್ಯ ಗದ್ಯಕ್ಕಿಂತಲೂ ಖಚಿತವಾಗಿ  ಉನ್ನತ ಕಲಾರೂಪ. ಗಂಭೀರ ಸಾಹಿತ್ಯ ಬರೆಯುವವರನ್ನು ಆಕೆ ಒಳ್ಳೆ ಕವಿತೆ ಬರೆದಂತಿದೆ ಎನ್ನುತ್ತೇ ವಲ್ಲವೆ? ಆದರೆ ನಿಜ ಹೇಳಬೇಕೆಂದರೆ ಈ ಕವಿ ಬರೆದ ಒಂದು ಗದ್ಯ ವೇ ನನಗೆ ಪ್ರೇರಣೆ ನೀಡಿದೆ.

ಮೂವತ್ತು ವರ್ಷದವನಾಗಿದ್ದಾಗ, ಲಂಡನ್ನಿನ ಲಾಯ್ಡ್ಸ್‌ ಬ್ಯಾಂಕಿನಲ್ಲಿ ಗುಮಾಸ್ತನಾಗಿದ್ದ ಟಿ. ಎಸ್.‌ ಎಲಿಯಟ್‌ ಟ್ರೆಡಿಶನ್ಸ್‌ ಅಂಡ್‌ ಇಂಡಿವಿಜುವಲ್‌ ಟೇಲೆಂಟ್‌, ಪರಂಪರೆ ಹಾಗೂ ವ್ಯಕ್ತಿಗತ ಪ್ರತಿಭೆ ಎನ್ನುವ ಸುಪ್ರಸಿದ್ಧ ಪ್ರಬಂಧವನ್ನು ಬರೆದಿದ್ದ. ಅದನ್ನು ಒಂದು ಪ್ರಣಾಳಿಕೆ ಎಂದೇ ಕರೆದಿದ್ದರು. ಈ ಪ್ರಬಂಧದಲ್ಲಿ ಆತ ಸಂಕಟ ಪಡುವ ಮನುಷ್ಯ​ ಹಾಗೂ ಸೃಜನಶೀಲ ಮನಸ್ಸುಗಳಲ್ಲಿ   ಭೇದ ಇದೆ ಎಂದುಗುರುತಿಸಿದ್ದ. ತದನಂತರ ವಾಟ್‌ ಈಸ್‌ ಎನ್ ಆಥರ್?‌ ಎಂಬ ಪ್ರಬಂಧ ಬರೆದ ಮಿಶೆಲ್ ಫುಕೊ  ನಂತಹ ನವ್ಯೋತ್ತರವಾದಿಗಳು, ಅದರಲ್ಲೂ ದಿ ಡೆತ್‌ ಆಫ್‌ ದಿ ಆಥರ್‌ ಎಂಬ ಪುಸ್ತಕ​ ಬರೆದ ರೋಲ್ಯಾಂಡ್‌ ಬಾರ್ತ್ಸ್ ಈ ವಾದವನ್ನು ಅವಿಚಾರವೆನ್ನಿಸುವಷ್ಟು ಉತ್ಪ್ರೇಕ್ಷೆಗೆ ಕೊಂಡೊಯ್ದಿದ್ದಾರೆ. ಆದರೆ ಎಲಿಯಟ್‌ ಹೇಳುವ ಕರ್ತೃ ಹಾಗೂ ಕೃತಿಯ ನಡುವಣ ವ್ಯತ್ಯಾಸ ಬಲು ಸೂಕ್ಷ್ಮವಾದದ್ದರಿಂದ ಮನವಿ ಮಾಡುವಂತಹುದು.  ಕ್ಯಾಲಿಫೋರ್ನಿಯಾದ ಪೊಮೊನಾ ಕಾಲೇಜಿನ ಹ್ಯುಮಾನಿಟೀಸ್‌ ಸ್ಟುಡಿಯೋಸಿನ ನಿರ್ದೇಶಕರೂ, ಇಂಗ್ಲೀಷ್‌ ಪ್ರೊಫೆಸರೂ ಆದ ಕೆವಿನ್‌ ಡೆಟ್ಮಾರ್‌ ಹೇಳುವಂತೆ  ಎಲಿಯಟ್ಟನ ನಂತರ ವಿಕಾಸವಾದ “ಓದುವ ಚೌಕಟ್ಟು” ಎಂಬುವ ಶಿಕ್ಷಣ ತಂತ್ರಗಳು ವಿದ್ಯಾರ್ಥಿಗಳು ಪಾಠದಲ್ಲಿರುವ ಪದಗಳ ಮೇಲೆ ಗಮನವಿಡುವಂತೆ ಹೇಳುತ್ತವೆ. ಅಂದರೆ ನಾನು ಮೋಡದಲ್ಲಿ ಏಕಾಂಗಿ ಎನ್ನುವ ವರ್ಡ್ಸ್‌ ವರ್ತನ ವಾಕ್ಯದಲ್ಲಿ ನಾನು ಎಂಬುದು ಕರ್ತೃವಿನ ಸೂಚಕವಲ್ಲ, ಅದು ಆ ಪಾತ್ರದ ಸೂಚಕ ಎನ್ನುವುದು ಇಂದಿನ ಪ್ರತಿಯೊಂದು ಸಾಹಿತ್ಯ ವಿಮರ್ಶೆಯದೂ ಮೊದಲ ಹೆಜ್ಜೆಯಾಗಿರುತ್ತದೆ.”

T.S. Eliot photographed by Lady Ottoline Morrell in 1923. Photo: Public domain

ಮಹಾಕವಿ ಟಿ. ಎಸ್. ಎಲಿಯಟ್. ೧೯೨೩ ರಲ್ಲಿ ಲೇಡಿ ಒಟ್ಟೊಲಿನ್ ಮೊರೆಲ್ ತೆಗೆದ ಫೋಟೋ. ಫೋಟೋ: ಸಾರ್ವಜನಿಕ ಡೊಮೇನ್.

ಕಲಾವಿದರು ಹಾಗೂ ಅವರ ಕಲೆಯ ನಡುವೆ ಇಂತಹ ಒಂದು ಭಿನ್ನತೆಯನ್ನು ನಾವು ಗುರುತಿಸು ವುದಾದರೆ, ವೈಜ್ಞಾನಿಕ ಸತ್ಯ ಹಾಗೂ ಅದನ್ನು ಪತ್ತೆ ಮಾಡಿದವನ ನೀತಿ-ನಡತೆಗಳೆರಡೂ ಬೇರೆ, ಬೇರೆಯೆಂದು ಕಾಣಬಾರದೇಕೆ? ಕವನವೋ, ಚಿತ್ರದ್ದೋ ಸೌಂದರ್ಯವನ್ನು ಆ ಕಲೆಗಾರನ ವ್ಯಕ್ತಿತ್ವವನ್ನು ಬದಿಗೊತ್ತಿ ಆಸ್ವಾದಿಸುತ್ತೇವೆಂದರೆ, ವಾಟ್ಸನ್ನರ ವರ್ಣಭೇದ ನೀತಿ ಹಾಗೂ ಲೊರೆಂಜರ ನಾಟ್ಜೀ ಪ್ರೇಮವನ್ನು ದ್ವೇಷಿಸುತ್ತಲೇ ನಾವು ಡಿಎನ್‌ಎಯ ಜೋಡಿಸುರುಳಿ ರಚನೆಯನ್ನೂ, ಹಕ್ಕಿಗಳಲ್ಲಿರುವ ಹುಟ್ಟಾನಡವಳಿಕೆಯ ಗುಣದ ಪತ್ತೆಯನ್ನೂ ಆಸ್ವಾದಿಸಬಾರದೇಕೆ?

ಟಿ.ಎಸ್.‌ ಎಲಿಯಟ್‌ ಕೂಡ​ ಏನೂ ಮುಗ್ಧನಾಗಿರಲಿಲ್ಲ. ಅವನ ಆಂಟಿ ಸೆಮಿಟಿಸ್ಮ್‌ ಹಾಗೂ ಅದಕ್ಕಾಗಿ ಆತ ತಡವಾಗಿ ವಿಷಾದಿಸಿದ್ದು ಎಲ್ಲರಿಗೂ ತಿಳಿದದ್ದೆ. ಅಂತಹವನು ಕಲ್ಪಿಸಿದ ಸಂಕಟಿಸುವ ಮನುಷ್ಯ  ಮತ್ತು ಸೃಜನಶೀಲ ಮನಸ್ಸುಗಳು ಬೇರೆ, ಬೇರೆ ಎಂಬ ಪರಿಕಲ್ಪನೆಯ ಚಿಕಿತ್ಸಕ ಸಾಮರ್ಥ್ಯವೇ ಈಗ ನೆರವಿಗೆ ಬೇಕಾಯಿತು ಎನ್ನುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಈ ಸಂದಿಗ್ಧಗಳಿಗೆ ನನ್ನ ಬಳಿ ಕಡೆಯ ಉತ್ತರವಿಲ್ಲ. ಕೊನೆಯ ಪರಿಹಾರವೂ ನನಗೆ ಸಿಕ್ಕಿಲ್ಲ. ಈ ಬಗ್ಗೆ ನನ್ನ ಚಿಂತನೆಗಳು ಮುಂದುವರೆದಿವೆ. ಯಾವುದೇ ವಿಷಯದ ಕುರಿತ ಚಿಂತನೆಗಳೂ ಹೀಗೆಯೇ ಇರಬೇಕಲ್ಲವೇ? ಮೀಟೂ ಚಳುವಳಿಯಂತಹ ಸಾಮಾಜಿಕ ನ್ಯಾಯದ ಪುನಸ್ಥಾಪನೆಯ ಒತ್ತಾಯಗಳು ಬಿರುಸಾದಂತೆ, ಹೆಚ್ಚೆಚ್ಚು ಹೀರೋಗಳು ಬೀದಿಗೆ ಬೀಳುತ್ತಿದ್ದಂತೆ, ಇಂತಹ ವಿಷಯದಲ್ಲಿ ನಾವೆಲ್ಲರೂ ಆಲೋಚಿಸುತ್ತ​ ನಮ್ಮ ತೀರ್ಮಾನಗಳನ್ನು ನಾವೇ ಕೈಗೊಳ್ಳಬೇಕಾಗುತ್ತದೆ.

ಇದು ಜಾಣ ಅರಿಮೆ. ಆಂಗ್ಲ ಮೂಲ. ಪ್ರೊಫೆಸರ್‌ ರಾಘವೇಂದ್ರ ಗದಗ್‌ಕರ್, ಕನ್ನಡಾನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್‌. ಮಂಜುನಾಥ. ಈ ಲೇಖನ ಮೊದಲು ದಿ ವೈರ್‌ ಸೈನ್ಸ್‌ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. 

 

Scroll To Top