Now Reading
ಇರುವೆಗಳು ರೇಷ್ಮೆ ನೂಲುವ ಪರಿ

ಇರುವೆಗಳು ರೇಷ್ಮೆ ನೂಲುವ ಪರಿ

1976 ರ ಸುಮಾರಿನಲ್ಲಿ ಅರಿಜೋನಾದಲ್ಲಿ ಕ್ಷೇತ್ರ ಕಾರ್ಯದಲ್ಲಿ ತೊಡಗಿದ್ದ ಬರ್ಟ್‌ ಹಾಲ್ಡಾಬ್ಲರ್‌. ಚಿತ್ರ: © ಬರ್ಟ್‌ ಹಾಲ್ಡಾಬ್ಲರ್‌

ಸಂಪುಟ 4 ಸಂಚಿಕೆ 333, ಸೆಪ್ಟೆಂಬರ್‌ 04, 2021
&
ಸಂಪುಟ 4 ಸಂಚಿಕೆ 334, ಸೆಪ್ಟೆಂಬರ್‌ 05, 2021

ಜಾಣ ಅರಿಮೆ

ವಿಸ್ಮಯಕ್ಕಿಂತ ವಿಸ್ಮಯ 26

Kannada translation by Kollegala Sharma

§

  • ಈಕೋಫಿಲ್ಲಾ ಕುಲದಲ್ಲಿರುವ ಇರುವೆಗಳು ರೇಷ್ಮೆಯನ್ನು ಉತ್ಪಾದಿಸುತ್ತವೆ ಆದರೆ ಅದರಿಂದ ತಮ್ಮದೇ ಪ್ರತ್ಯೇಕ ಗೂಡನ್ನು ರಚಿಸುವುದಿಲ್ಲ. ಬದಲಾಗಿ, ಅವು ತಮ್ಮ ಎಲ್ಲಾ ರೇಷ್ಮೆಯನ್ನು ತಮ್ಮ ವಸಾಹತುಗಳ ಕೋಮು ಗೂಡುಗಳಿಗಾಗಿ ದಾನ ಮಾಡುತ್ತವೆ. 
  • ವಿಕಸನೀಯ ಸಮಯದ ಮೂಲಕ ಇರುವೆಗಳು ಈ ಮಟ್ಟದ ಪರಿಪೂರ್ಣತೆಯನ್ನು ಹೇಗೆ ಸಾಧಿಸಿದವು? ಮತ್ತು ಲಾರ್ವಾಗಳು ತಮ್ಮ ರೇಷ್ಮೆಯನ್ನು ಏಕೆ ದಾನ ಮಾಡುತ್ತವೆ?
  • ಇಂತಹ ಪರಹಿತಚಿಂತನೆಯ ವಿಕಸನವು ಒಂದು ವಿರೋಧಾಭಾಸವಾಗಿದ್ದು ಅದು ಚಾರ್ಲ್ಸ್ ಡಾರ್ವಿನ್ ಮತ್ತು ಅವನ ಎಲ್ಲಾ ಉತ್ತರಾಧಿಕಾರಿಗಳು ಸೆಣಸಬೇಕಾಗಿದೆ.

ಆಫ್ರಿಕಾ, ಏಶಿಯಾ ಹಾಗೂ ಆಸ್ಟ್ರೇಲಿಯಾಗಳಂತಹ ಉಷ್ಣವಲಯದಲ್ಲಿ ವಾಸಿಸುವ ನಮ್ಮಂತಹವರಿಗೆ ಸಿಂಪಿಗ ಅಥವಾ ದರ್ಜಿ ಇರುವೆಗಳು ಕಟ್ಟುವ ಮರದ ಗೂಡುಗಳು ಗಮನಾರ್ಹ. ಸಮಾಜಜೀವಿ ವಿಜ್ಞಾನಿಗಳಿಗೆ ಇರುವೆಗಳು ಈ ಗೂಡುಗಳನ್ನು ಕಟ್ಟುವ ಪರಿ ವಿಶೇಷವೆನಿಸುತ್ತದೆ. ಬರ್ಟ್‌ ಹಾಲ್ಡಾಬ್ಲರ್‌ ಹಾಗೂ ಇ.ಓ.ವಿಲ್ಸನ್‌ ಒಂದೆಡೆ ಬರೆದಿರುವ ಹಾಗೆ “ಈಕೋಫಿಲಾ ಕುಲದ ಸಿಂಪಿಗ ಇರುವೆಗಳು ತಮ್ಮ ಲಾರ್ವಗಳು ನೇಯ್ದ ರೇಷ್ಮೆಯನ್ನು ಗೂಡು ಕಟ್ಟಲು ಬಳಸುವ ಪರಿ ಪ್ರಾಣಿಲೋಕದಲ್ಲಿಯೇ ವಿಶಿಷ್ಟವಾದಂತಹ ಸಾಮಾಜಿಕ ನಡವಳಿಕೆಗಳಲ್ಲೊಂದು.”  

ಸಿಂಪಿಗ ಇರುವೆಗಳು ಈಕೋಫಿಲಾ ಎನ್ನುವ ಕುಲಕ್ಕೆ ಸೇರಿದವು. ಈ ಕುಲವು ಫಾರ್ಮಿಸಿನೀ ಎನ್ನುವ ಇರುವೆಗಳ ಉಪಕುಟುಂಬಕ್ಕೆ ಸೇರಿದಂಥವು. ತಮ್ಮ ಬೇಟೆಯನ್ನು ಹಿಡಿಯಲೂ, ಬೇಟೆಗಾರರಿಂದ ರಕ್ಷಿಸಿಕೊಳ್ಳಲೂ ಈ ಇರುವೆಗಳು ಫಾರ್ಮಿಕ್‌ ಆಮ್ಲವನ್ನು ಬಳಸುವುದರಿಂದಾಗಿ ಇವಕ್ಕೆ ಈ ಹೆಸರು. ಫಾರ್ಮಿಸಿನೀ ಕುಟುಂಬದಲ್ಲಿರುವ ಎಲ್ಲ ಇರುವೆಗಳ ಲಾರ್ವಾಗಳೂ ರೇಷ್ಟೆಯನ್ನು ನೇಯುತ್ತವೆ. ಪ್ಯೂಪಾವಾಗಿ ಬದಲಾಗುವ ಮುನ್ನ ತಮ್ಮ ಸುತ್ತಲೂ ಒಂದು ರಕ್ಷಣೆಯ ಗೂಡನ್ನು ಕಟ್ಟಿಕೊಳ್ಳುತ್ತವೆ. ಆದರೆ ಈ ಈಕೋಫಿಲಾ ಕುಲದ ಇರುವೆಗಳು ಮಾತ್ರ ತಮ್ಮ ಸುತ್ತಲೂ ಆ ರೇಷ್ಮೆಯಿಂದ ಗೂಡು ಕಟ್ಟುವುದಿಲ್ಲ. ಬದಲಿಗೆ ಅವು ಬೆತ್ತಲಾಗಿಯೇ ಇದ್ದು, ಎಲ್ಲ ರೇಷ್ಮೆಯನ್ನೂ ಗೂಡಿನಲ್ಲಿ ಇರುವ ಇಡೀ ಸಮುದಾಯಕ್ಕೆ ಗೂಡುಕಟ್ಟಿಕೊಳ್ಳಲು ದಾನವಾಗಿ ಕೊಟ್ಟುಬಿಡುತ್ತವೆ. 

ಇಲ್ಲಿರುವ ಮೂರು ಪ್ರಶ್ನೆಗಳು ಸ್ವಾರಸ್ಯಕರವಾದಂತವು. ಮೊದಲನೆಯದಾಗಿ, ಇರುವೆಗಳು ತಮ್ಮ ಗೂಡನ್ನು ಕಟ್ಟಲು ಲಾರ್ವಾಗಳ ನೆರವನ್ನು ಹೇಗೆ ಪಡೆಯುತ್ತವೆ? ಎರಡನೆಯದಾಗಿ, ವಿಕಾಸದ ಹಾದಿಯಲ್ಲಿ ಇವು ಈ ಉತ್ಕೃಷ್ಟ ನಡವಳಿಕೆಯನ್ನು ಸಿದ್ಧಿಸಿಕೊಳ್ಳಲು ಸಾಧ್ಯವಾಗಿದ್ದಾದರೂ ಹೇಗೆ? ಹಾಗೂ ಕೊನೆಯದಾಗಿ ಈ ಲಾರ್ವಾಗಳು ತಾವು ನೇಯ್ದ ರೇಷ್ಮೆಯನ್ನೂ ದಾನ ಮಾಡಿಬಿಡುತ್ತವೇಕೆ? 

ಸಿಂಪಿಗ ಇರುವೆಗಳು ಗೂಡನ್ನು ಹೇಗೆ ಕಟ್ಟುತ್ತವೆ? 

ಇಡೀ ಪ್ರಪಂಚದಲ್ಲಿ ಎರಡೇ ಎರಡು ಈಕೋಫೀಲಾ ಪ್ರಭೇದಗಳಿವೆ. ಈಕೋಫಿಲಾ ಸ್ಮರಾಗ್ಡಿನಾ ಎನ್ನುವ ಪ್ರಭೇದ ದಕ್ಷಿಣ ಏಶಿಯಾದಲ್ಲಿ ಇರುವ ಭಾರತ ಹಾಗೂ ಶ್ರೀಲಂಕಾದಲ್ಲಿ, ಆಗ್ನೇಯ ಏಶಿಯಾದಲ್ಲಿ ಉತ್ತರ ಆಸ್ಟ್ರೇಲಿಯಾ ಹಾಗೂ ಮೆಲನೇಶಿಯಾದಲ್ಲಿ ಎಲ್ಲೆಲ್ಲಿಯೂ ಇವೆ. ಈಕೋಫಿಲಾ ಲೊಂಜಿನೋಡಾ ಎನ್ನುವುದು ಆಫ್ರಿಕಾದ ಉಷ್ಣವಲದಯಲ್ಲಿ ಮಾತ್ರ ಕಾಣಸಿಗುತ್ತದೆ. 

ಲಾರ್ವಾಗಳ ರೇಷ್ಮೆಯಿಂದ ಎಲೆಗಳನ್ನು ಜೋಡಿಸಿ ಹೊಲಿದು, ಗೂಡುಗಳನ್ನು ಕಟ್ಟುವ ಇವುಗಳ ಸ್ವಭಾವವನ್ನು ಮೊತ್ತ ಮೊದಲಿಗೆ ಎಚ್.‌ ಎನ್.‌ ರಿಡ್ಲೆ ಹಾಗೂ ವಿಲಿಯಂ ಸೆವಿಲ್‌-ಕೆಂಟ್‌ ಎನ್ನುವ ಇಬ್ಬರು ಇಂಗ್ಲೀಷು ಪ್ರಕೃತಿವಿಜ್ಞಾನಿಗಳು ಈಕೋಫಿಲಾ ಸ್ಮರಾಗ್ಡಿನಾ ಇರುವೆಯಲ್ಲಿ, ಏಕಕಾಲದಲ್ಲಿ, ಆದರೆ ಒಬ್ಬರಿನ್ನೊಬ್ಬರಿಗೆ ಗೊತ್ತೀಲ್ಲದಂತೆ ಪತ್ತೆ ಮಾಡಿದ್ದರು.  

Henry Nicholas Ridley (1855-1956). Photo: British Colonial Government of the Straits Settlement of Singapore, public domain

 ಹೆನ್ರಿ ನಿಕೊಲಾಸ್‌ ರಿಡ್ಲೆ (1855-1956). ಫೋಟೋ: ಸಿಂಗಾಪುರದ ಜಲಸಂಧಿ ವಸಾಹತು ಬ್ರಿಟಿಷ್ ವಸಾಹತು ಸರ್ಕಾರ, ಸಾರ್ವಜನಿಕ ಡೊಮೇನ್

ಆಗ್ನೇಯ ಇಂಗ್ಲೆಂಡಿನಲ್ಲಿರುವ ನಾರ್ಫಾಕ್‌ ಪ್ರಾಂತ್ಯದಲ್ಲಿ 1855ರಲ್ಲಿ ಹುಟ್ಟಿದ ರಿಡ್ಲೆ, ಪರಿಣತ ಸಸ್ಯವಿಜ್ಞಾನಿಯಾಗಿ ಬೆಳೆದು, ಸಿಂಗಪೂರಿನಲ್ಲಿರುವ ಸ್ಟ್ರೇಟ್ಸ್‌ ಸೆಟಲ್ಮೆಂಟ್‌ ವನ ಮತ್ತು ಉದ್ಯಾನಗಳ ನಿರ್ದೇಶಕರಾಗಿದ್ದರು. ನೂರಾಒಂದು ವರ್ಷಗಳಷ್ಟು ಸುದೀರ್ಘವಾದ ರಿಡ್ಲೆಯವರ ಬದುಕಿನ ತುಂಬಾ ಅವರು ದಕ್ಷಿಣ ಹಾಗೂ ಆಗ್ನೇಯ ಏಶಿಯಾದಲ್ಲಿ ನಡೆಸಿದ ಸಾಹಸಯಾನಗಳು ಹಾಗೂ ಅನ್ವೇಷಣೆಗಳ ಕಥೆಗಳು ಸಮೃದ್ದಿಯಾಗಿ ತುಂಬಿಕೊಂಡಿವೆ. ರಿಡ್ಲೆ ಕೇವಲ ಸಸ್ಯವಿಜ್ಞಾನದ ಅಧ್ಯಯನವನ್ನಷ್ಟೆ ಕೈಗೊಳ್ಳದೆ ಹಲವು ಬಗೆಯ ಪ್ರಾಣಿಗಳು ಹಾಗೂ ಸಸ್ಯಗಳನ್ನೂ ಸಂಗ್ರಹಿಸಿದ್ದರು. ಈತ ಈಕೋಫಿಲಾದ ಪ್ರಭೇದವನ್ನು ತಪ್ಪಾಗಿ ಗುರುತಿಸಿದ್ದರೂ, ಈಕೋಫಿಲಾ ಸ್ಮರಾಗ್ಡಿನಾ ಗೂಡು ಕಟ್ಟುವ ಬಗೆಯನ್ನು ಮೊತ್ತ ಮೊದಲ ಬಾರಿಗೆ 1890ರಲ್ಲಿಯೇ ಜರ್ನಲ್‌ ಆಫ್‌ ಸ್ಟ್ರೇಟ್ಸ್‌ ಬ್ರಾಂಚ್‌ ಆಫ್ ದಿ ರಾಯಲ್‌ ಏಶಿಯಾಟಿಕ್‌ ಸೊಸೈಟಿ ಪತ್ರಿಕೆಯಲ್ಲಿ ಪ್ರಕಟಿಸಿದ್ದ. 

ರಿಡ್ಲಿಯ ವಿವರಣೆ ಎಷ್ಟು ಹಳೆಯದಾಗಿದೆ ಹಾಗೂ ಸುಂದರವಾಗಿದೆ ಎಂದರೆ ಅದನ್ನು ನನ್ನ ಶಬ್ಧಗಳಲ್ಲಿ ಹೇಳುವ ಬದಲು ಆತನದೇ ಶಬ್ದಗಳನ್ನು ತುಸು ಸಂಕ್ಷಿಪ್ತವಾಗಿ ಹೇಳುತ್ತೇನೆ. 

ಗೂಡು ಕಟ್ಟಬೇಕೆಂದಾಗ, ಹಲವು ಇರುವೆಗಳು ಎಲೆಯ ಒಂದು ಬದಿಯನ್ನು ತಮ್ಮ ದವಡೆಯಲ್ಲಿ ಹಿಡಿದು, ಇನ್ನೊಂದು ಎಲೆಯ ಬದಿಯನ್ನು ತಮ್ಮ ಹಿಂಗಾಲುಗಳ ಪಂಜಗಳಿಂದ ನಿಧಾನವಾಗಿ ಎಳೆದು ಎರಡರ ಅಂಚುಗಳನ್ನೂ ಜೋಡಿಸುತ್ತವೆ. ಎರಡೂ ಎಲೆಗಳ ಅಂಚುಗಳು ಇನ್ನೂ ಹತ್ತಿರ ಬಾರದಿದ್ದರೆ, ಹಾಗೂ ಒಂದು ಇರುವೆಗೆ ಅದನ್ನು ಮುಟ್ಟಲು ಅಸಾಧ್ಯವೆನ್ನಿಸಿದರೆ, ಇರುವೆಗಳ ಸರಪಳಿ ನಿರ್ಮಾಣವಾಗುತ್ತದೆ. ಒಂದು ಇರುವೆ ಎಲೆಯ ಅಂಚನ್ನು ದವಡೆಯಿಂದ ಹಿಡಿದುಕೊಳ್ಳುತ್ತದೆ. ಇನ್ನೊಂದು ಅದರ ಹೊಟ್ಟೆಯನ್ನು ದವಡೆಯಿಂದ ಮೃದುವಾಗಿ ಆದರೆ ಭದ್ರವಾಗಿ ಹಿಡಿದುಕೊಳ್ಳುತ್ತದೆ. ಮೂರನೆಯ ಇರುವೆ ಇದೇ ರೀತಿಯೇ ಎರಡನೆಯದನ್ನು ಹಿಡಿದುಕೊಂಡು, ತನ್ನ ಹಿಂಗಾಲುಗಳಿಂದ ಮತ್ತೊಂದು ಎಲೆಯ ಅಂಚನ್ನು ಹಿಡಿಯುತ್ತದೆ. ಹೀಗೆ ಅವುಗಳ ಅಂಚುಗಳು ಒಂದನ್ನೊಂದು ಮುಟ್ಟುವಷ್ಟು ಹತ್ತಿರವಾಗುವರೆಗೂ ಎಲೆಗಳನ್ನು ಹಿಡಿದು ಎಳೆಯುತ್ತವೆ.  ಇದಾದ ಕೆಲವೇ ಕ್ಷಣಗಳಲ್ಲಿ ಬೇರೆ ಇರುವೆಗಳು ಬಂದು ಎಲೆಗಳನ್ನು ರೇಷ್ಮೆ ನೂಲಿನಿಂದ ಹೊಲಿಯಲು ಆರಂಭಿಸುತ್ತವೆ. ಒಂದೋ, ಎರಡೋ ಇರುವೆಗಳು ಗೂಡಿನಿಂದ ಹೊರಬರುತ್ತವೆ. ಪ್ರತಿಯೊಂದೂ ಒಂದೊಂದು ಲಾರ್ವಾವನ್ನು ಬಾಯಿಯಲ್ಲಿ ಹಿಡಿದಿರುತ್ತದೆ. ಲಾರ್ವಾದ ಬಾಲ ಹೊರಬದಿಗೆ ಚಾಚಿಕೊಂಡಿರುತ್ತದೆ. ಅನಂತರ ಇರುವೆಗಳು ಈ ಲಾರ್ವಾಗಳ ಬಾಲದ ತುದಿಯನ್ನು ಎಲೆಯ ಒಂದು ಅಂಚಿನ ಮೇಲೆ ಇಟ್ಟು, ಕಂಪಿಸುವ ಮೀಸೆಯಿಂದ ಅವುಗಳನ್ನು ತಡವಿ ಕೆಣುಕುತ್ತವೆ. ಲಾರ್ವಾ ಹುಳು ಆಗ ರೇಷ್ಮೆಯ ನೂಲೊಂದನ್ನು ಸ್ರವಿಸುತ್ತದೆ. ಇದನ್ನು ತಮ್ಮ ಮೀಸೆಯಿಂದ ಇರುವೆಗಳು ಎಲೆಯ ಅಂಚಿಗೆ ಅಂಟಿಸುತ್ತವೆ. ಈ ಸಿಂಪಿಗ ಇರುವೆ ಅನಂತರ ರೇಷ್ಮೆ ನೂಲನ್ನು ಎಳೆಯುತ್ತಾ ಇನ್ನೊಂದು ಎಲೆಯ ಅಂಚಿನ ಕಡೆ ಓಡುತ್ತದೆ. ಅದನ್ನು ಅಲ್ಲಿ ಅಂಟಿಸುತ್ತದೆ. ಹೀಗೆ ಅದು ರೇಷ್ಮೆಯ ಭದ್ರವಾದ ಬಲೆಯೊಂದು ಎರಡೂ ಎಲೆಗಳ ನಡುವೆ ರೂಪುಗೊಳ್ಳುವವರೆಗೂ ಹಿಂದೆ ಮುಂದೆ ಓಡಾಡುತ್ತದೆ.” 

ವಿಲಿಯಂ ಸೇವಿಲ್-ಕೆಂಟ್‌ ವಾಯುವ್ಯ ಇಂಗ್ಲೆಂಡಿನಲ್ಲಿರುವ ಕೆಂಟ್‌ ಪ್ರಾಂತ್ಯದಲ್ಲಿ 1845ರಲ್ಲಿ ಹುಟ್ಟಿದರು. ಅನಂತರ ಒಬ್ಬ ಪರಿಣತ ಸಾಗರಜೀವಿ ವಿಜ್ಞಾನಿಯಾದರು. ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಮೀನುಗಾರಿಕೆಯ ಕಮಿಷನರ್‌ ಆಗಿದ್ದರು. ಸೇವಿಲ್‌-ಕೆಂಟ್‌ ಆಸ್ಟ್ರೇಲಿಯಾದ ಗ್ರೇಟ್‌ ಬ್ಯಾರಿಯರ್‌ ರೀಫ್‌ ಎನ್ನುವ ಹವಳ ದಿಬ್ಬಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಕ್ಕಾಗಿ, ಜನಪ್ರಿಯರೂ. ಆದರೆ ಸಾಗರವಿಜ್ಞಾನದ ಬಗೆಗಿನ ಈ ಮೋಹ, ರಿಡ್ಲೆಯ ಸಸ್ಯಗಳ ಮೋಹ ಹೇಗೆ ಆತನನ್ನು ಈಕೊಫಿಲಾ ಸ್ಮಾರಾಗ್ಡಿನಾದ ಸಿಂಪಿಗ ಗುಣವನ್ನು ಪತ್ತೆ ಮಾಡುವುದರಿಂದ ತಡೆಯಲಿಲ್ಲವೋ, ಹಾಗೆಯೇ ಈತನಿಗೂ ಅಡ್ಡಿಯಾಗಲಿಲ್ಲ.

1897ರಲ್ಲಿ ದಿ ನ್ಯಾಚುರಾಲಿಸ್ಟ್‌ ಇನ್‌ ಆಸ್ಟ್ರೇಲಿಯಾ ಎನ್ನುವ ಪುಸ್ತಕದಲ್ಲಿ ಇರುವೆಗಳು ಗೂಡು ಕಟ್ಟುವ ಬಗೆಯನ್ನು ಕೆಂಟ್‌ ವಿವರಿಸಿದ ರೀತಿ ಹೆಚ್ಚೂ ಕಡಿಮೆ ಇದೇ ರೀತಿ ಇದೆ.  

ಈ ಹಸಿರು ಇರುವೆಗಳು ರೇಷ್ಮೆಯನ್ನು ನೂಲಬಲ್ಲವು ಎನ್ನುವುದೇ ವಿರೋಧಾಭಾಸವಾಗಿತ್ತಾದ್ದರಿಂದ, ಅವುಗಳ ಕಾರ್ಯವಿಧಾನ ಲೇಖಕನ ಗಮನವನ್ನು ಸೆಳೆಯಿತು. ದೇಶದ ಉತ್ತರಕ್ಕೆ ಪ್ರವಾಸ ಹೋದಾಗಲೆಲ್ಲ ಇದು ಆತನ ಗಮನವನ್ನು ಸೆಳೆದಿತ್ತು. ಕೊನೆಗೆ, ಜುಲೈ 1890ರಲ್ಲಿ ಕುಕ್‌ ಟೌನ್‌ ಬಳಿಯ ಕಾಡಿನಲ್ಲಿ ಈ ಇರುವೆಗಳ ಗೂಡನ್ನು ಪರಿಶೀಲಿಸುವಾಗ ಈ ವಿಸ್ಮಯದ ಪ್ರಶ್ನೆ ಬಗೆಹರಿಯಿತು. ಆಗ ಪ್ರೌಢ ಇರುವೆಗಳು ಗೂಡು ಹೊಲಿಯುವುದರಲ್ಲಿ ಯಾವ ಪಾತ್ರವನ್ನೂ ವಹಿಸುತ್ತಿರಲಿಲ್ಲವೆಂಬುದು ತಿಳಿದಯಿತು. ಆದರೆ ಅದೇ ಸಮಯದಲ್ಲಿ ಅವು ಎಳೆಯ ಹುಳುಗಳನ್ನು ಈ ಕೆಲಸ ಮಾಡಲು ಉಪಯೋಗಿಸುತ್ತಿದ್ದುವು.’  

William Saville-Kent (1845-1908). Photo: Waterlow & Sons; negative by Maull & Fox, public domain

ವಿಲಿಯಂ ಸೇವಿಲ್‌-ಕೆಂಟ್‌ (1845-1908). Photo: Waterlow & Sons; negative by Maull & Fox, public domain

ನಮಗೆ ಇಂದು ತಿಳಿದಿರುವ ವಿಷಯಗಳಲ್ಲಿ ಬಹುತೇಕ ಹಾರ್ವರ್ಡ್‌ ವಿಶ್ವವಿದ್ಯಾನಿಲಯದ ಜೀವಿವಿಜ್ಞಾನಿಗಳಾದ ಬರ್ಟ್‌ ಹಾಲ್ಡಾಬ್ಲರ್‌ ಹಾಗೂ ಎಡ್ವರ್ಡ್‌ ಓ ವಿಲ್ಸನ್‌ ಅವರು ಆಫ್ರಿಕಾದಲ್ಲಿ ಈಕೋಫೀಲಾ ಲೊಂಜಿನೋಡಾ ಹಾಗೂ ಆಸ್ಟ್ರೆಲಿಯಾದಲ್ಲಿ ಈಕೋಫಿಲಾ ಸ್ಮಾರಾಗ್ಡಿನಾ ಮೇಲೆ ನಡೆಸಿದ ಅಧ್ಯಯನಗಳ ಫಲ. ಇವರು ಹಾಗೂ ಇತರರೂ ಇರುವೆಗಳು ಗೂಡು ಕಟ್ಟುವ ರೀತಿಯ ಬಗ್ಗೆ ರಿಡ್ಲೆ ಹಾಗೂ ಸೇವಿಲ್‌- ಕೆಂಟ್ ನೀಡಿದ ಅವಿಸ್ಮರಣೀಯ ವಿವರಣೆಗಳಿಗೆ ಇನ್ನಷ್ಟು ವಿವರಗಳನ್ನು ಸೇರಿಸಿದ್ದಾರೆ. ಈ ಅಧಿಕ ವಿವರಗಳಲ್ಲಿ ಹಲವು ಇರುವೆಗಳ ಲಾರ್ವಾಗಳು ತಾವು ನೇಯ್ದ ರೇಷ್ಮೆಯನ್ನು ವಿಕಾಸದ ದೃಷ್ಟಿಯಲ್ಲಿ ಗೂಡಿನ ಒಟ್ಟಾರೆ ಒಳಿತಿಗಾಗಿ “ತ್ಯಾಗ” ಮಾಡುತ್ತಿವೆ ಎನ್ನುವುದು ಇನ್ನಷ್ಟು ಖಚಿತವಾಗಿದೆ.  

ಈ ಸಿಂಪಿಗ ಇರುವೆಗಳಲ್ಲಿ ರೇಷ್ಮೆಯ ಉತ್ಪಾದನೆ ಹಾಗೂ ಬಳಕೆ ಇದೇ ರೀತಿಯ ವಿದ್ಯಮಾನವಿರುವ ಬೇರೆ ಇರುವೆಗಳಿಗಿಂತಲೂ ಭಿನ್ನ. ಅವುಗಳಲ್ಲಿ ಹುಳುಗಳು ಗೂಡು ಕಟ್ಟಿಕೊಂಡು ತಮ್ಮನ್ನು ತಾವೇ ರಕ್ಷಿಸಿಕೊಳ್ಳುವ “ಸ್ವಾರ್ಥ”ಕ್ಕಾಗಿ ರೇಷ್ಮೆ ಉತ್ಪಾದಿಸುತ್ತವೆ.

Nest construction by the weaver ant (Oecophylla longinoda). Clockwise: worker ants seizing the edges of a leaf in their mandibles, attempting to align the edges of two leaves, using a larva to bind the leaves with silk threads, and a completed nest. Photos: © Bert Hölldobler

ಗೂಡು ಕಟ್ಟುತ್ತಿರುವ ಸಿಂಪಿಗ ಇರುವೆಗಳು (ಈಕೋಫಿಲಾ ಲೊಂಜಿನೊಡಾ). ಎಡದಿಂದ: ಕಾರ್ಮಿಕ ಇರುವೆಗಳು ಎಲೆಯ ಅಂಚನ್ನು ತಮ್ಮ ದವಡೆಗಳಲ್ಲಿ ಹಿಡಿದು ಎರಡು ಎಲೆಗಳನ್ನು ಹೊಂದಿಸಲು ಪ್ರಯತ್ನಿಸುತ್ತಿವೆ. ಲಾರ್ವಾವನ್ನು ಬಳಸಿಕೊಂಡು ರೇಷ್ಮೆ ಎಳೆಗಳ ಮೂಲಕ ಎಲೆಗಳನ್ನು ಬಂಧಿಸುತ್ತಿವೆ. ಕೊನೆಯದು ಪೂರ್ಣಗೊಂಡ ಗೂಡು. ಚಿತ್ರಗಳು: © ಬರ್ಟ್‌ ಹಾಲ್ಡಾಬ್ಲರ್

ರೇಷ್ಮೆ ದಾನ ಪಡೆಯಲು ಸಿಂಪಿಗ ಇರುವೆಗಳು ಕೊನೆಯ ಹಂತದ ಬೆಳವಣಿಗೆಯನ್ನು ಆರಂಭಿಸಿರುವ ಲಾರ್ವಗಳನ್ನು ಬಳಸುತ್ತವೆ. ಆದೇ ತಮ್ಮದೇ ಗೂಡನ್ನು ಕಟ್ಟಿಕೊಳ್ಳಲು ರೇಷ್ಮೆಯನ್ನು ಉತ್ಪಾದಿಸುವ ಇರುವೆಗಳಲ್ಲಿ ಕೊನೆಯ ಹಂತದ ಕೊನೆಯ ಚರಣದಲ್ಲಿ ಇರುವ ಲಾರ್ವಾಗಳು ರೇಷ್ಮೆ ಉತ್ಪಾದಿಸುತ್ತವೆ. 

ಆಗಲೇ ಹೇಳಿದ ಹಾಗೆ, ಸಿಂಪಿಗ ಇರುವೆಗಳ ಲಾರ್ವಾಗಳು ತಮಗಾಗಿ ಗೂಡು ಕಟ್ಟಿಕೊಳ್ಳುವುದಿಲ್ಲ. ಅವುಗಳ ರೇಷ್ಮೆ ಸಂಪೂರ್ಣವಾಗಿ ಸಮುದಾಯಕ್ಕಾಗಿ ಬಳಕೆಯಾಗುತ್ತದೆ. ಲಾರ್ವಾಗಳು ಕೇವಲ ರೇಷ್ಮೆ ಸುರಿಯುವ ಸಾಧನಗಳಾಗಿವೆಯಷ್ಟೆ. ರೇಷ್ಮೆಯ ಪರಿಣಾಮಕಾರಿ ಬಳಕೆಗೆ, ಎಲೆಗಳನ್ನು ಜೋಡಿಸುವುದಕ್ಕೆ, ಬೇಕಾದ ಎಲ್ಲ ಚಲನೆಗಳನ್ನೂ ಲಾರ್ವಾವನ್ನು ಹಿಡಿದ ಇರುವೆಗಳು ಮಾಡುತ್ತವೆ. ಲಾರ್ವಾಗಳಲ್ಲ. ಹಾಲ್ಡಾಬ್ಲರ್‌ ಮತ್ತು ವಿಲ್ಸನ್‌ ಇಂತಹ ಲಾರ್ವಾಗಳನ್ನು ಈಕೋಫಿಲ ಸಮಾಜದ ಮತ್ತೊಂದು ಸಹಜಾತಿಗಳೆಂದು ಪರಿಗಣಿಸಿದ್ದಾರೆ.  

ನನಗೆ ಗೊತ್ತಿರುವ ಹಾಗೆ ಜೇನ್ನೊಣ, ಕಣಜಗಳು ಹಾಗೂ ಇರುವೆಗಳಲ್ಲಿ ಇನ್ನೂ ಪ್ರೌಢವಾಗಿಲ್ಲದಂತಹ ಹಂತಗಳು ವಿಶಿಷ್ಟ ಕಾರ್ಮಿಕರಂತೆ ಕಾರ್ಯ ನಿರ್ವಹಿಸುತ್ತಿರುವ ಉದಾಹರಣೆ ಇದೊಂದೇ. ಆದರೆ ಗೆದ್ದಲು ಹುಳುಗಳಲ್ಲಿ ಇಂತಹ ವರ್ಗವಿರುವುದು ತಿಳಿದ ವಿಷಯ. ಇತ್ತೀಚೆಗೆ ಆಂಬ್ರೋಸಿಯ ದುಂಬಿಗಳಲ್ಲಿಯೂ ಇಂತಹ ನಡವಳಿಕೆಯನ್ನು ಪತ್ತೆ ಮಾಡಲಾಗಿದೆ.

ಈಕೋಫಿಲಾ ಇರುವೆಯ ಲಾರ್ವಾಗಳ ತ್ಯಾಗ ಉತ್ಕೃಷ್ಟ ಮತ್ತು ಪರಿಪೂರ್ಣ

ಈಕೋಫಿಲಾದಲ್ಲಿ ಮಾತ್ರ ಕಾಣಬರುವ ಇಂತಹ ಅದ್ಭುತ ಹಾಗೂ ವಿಶದವಾದ ನಡವಳಿಕೆ ನಿಸರ್ಗದ ಆಯ್ಕೆಯ ಮೂಲಕ ವಿಕಾಸವಾಗಿದ್ದು ಹೇಗೆ? ಹಾಲ್ಡಾಬ್ಲರ್‌ ಹಾಗೂ ವಿಲ್ಸನ್‌ ವಿವರವಾಗಿ ದಾಖಲಿಸಿರುವ ಸಿಂಪಿಗ ಇರುವೆಗಳು ಗೂಡು ಕಟ್ಟುವ ಬಗೆ “ಜಟಿಲವಾದ, ನಿಖರವಾದ ಹಾಗೂ ವಿಶಿಷ್ಟ” ನಡವಳಿಕೆಯಾಗಿದ್ದು, ಪ್ರೌಢ ಇರುವೆಗಳು ಹಾಗೂ ಲಾರ್ವಾಗಳೆರಡೂ ಇದಕ್ಕಾಗಿ ಹಲವಾರು ಹೊಂದಾಣಿಕೆಗಳನ್ನು ಬೆಳೆಸಿಕೊಂಡಿವೆ.  

ಲಾರ್ವಾಗಳು ತಮ್ಮ ರಕ್ಷಣೆಗೆಂದು ಗೂಡು ನೇಯುವ ಸಾಮರ್ಥ್ಯವನ್ನು ಕಳೆದುಕೊಂಡಿವೆ. ಆದರೆ ರೇಷ್ಮೆ ನೂಲುವ ಸಾಮರ್ಥ್ಯವನ್ನು ಕಳೆದುಕೊಂಡಿಲ್ಲ. ಅದೇ ರೀತಿ ಪ್ರೌಢ ಇರುವೆಗಳು ರೇಷ್ಮೆಯನ್ನು ದಾನ ಮಾಡುವ ಹಂತದಲ್ಲಿ ಇರುವ ಲಾರ್ವಾಗಳನ್ನು ಗುರುತಿಸಬೇಕು. ಅವನ್ನು ಉಪಯೋಗಿಸಲು ತಕ್ಕುದಾದಂತೆ, ಅಂದರೆ ಎಲೆಗಳನ್ನು ಜೋಡಿಸುವ ಹಾಗೂ ಲಾರ್ವಾಗಳು ರೇಷ್ಮೆ ತಯಾರಿಸಲು ಪ್ರಚೋದಿಸುವಂತೆ ತಾವು ನಡೆದುಕೊಳ್ಳಬೇಕು. 

ಬೇರೆ ಪ್ರಭೇದಗಳ ಇರುವೆಗಳಲ್ಲಿ ಸಾಮಾನ್ಯವಾಗಿ ಲಾರ್ವಾಗಳು ಗೂಡು ಕಟ್ಟುವ ಬೆಳೆವಣಿಗೆಯ ಹಂತ ಹಾಗೂ ಸಿಂಪಿಗ ಇರುವೆಗಳಲ್ಲಿ ಲಾರ್ವಾಗಳು ರೇಷ್ಮೆ ದಾನ ಮಾಡುವ ಬೆಳೆವಣಿಗೆಯ ಹಂತಗಳು ಒಂದೇ ಅಲ್ಲ. ಅಲ್ಲದೆ ಗೂಡು ಕಟ್ಟುವಾಗ ಲಾರ್ವಾಗಳು ತಮ್ಮದೇ ಗೂಡನ್ನು ಕಟ್ಟುವಾಗ ಮಾಡುವಂತಹ ಯಾವುದೇ ದೇಹ ಚಲನೆಯನ್ನೂ ಮಾಡದೆ ಸುಮ್ಮನಿರಬೇಕು. ಇವೆಲ್ಲವೂ ಹೀಗೆ ಒಟ್ಟಾಗಿದ್ದು ಹೇಗೆ?

ಯಾವುದೇ ವಿಸ್ತೃತವಾದ ಹಾಗೂ ಒಳ್ಳೆಯ ವಿನ್ಯಾಸದ ರಚನೆಯಾಗಲಿ, ನಡವಳಿಕೆಯಾಗಲಿ ಇದೇ ಪ್ರಶ್ನೆಯನ್ನು ಕೇಳುತ್ತದೆ. ಇದಕ್ಕೆ ಅತ್ಯಂತ ಪ್ರಸಿದ್ಧ ಉದಾಹರಣೆ ಎಂದರೆ ಕಶೇರುಕಗಗಳ ಕಣ್ಣು. ಇದು ಎಷ್ಟು ಪರಿಪೂರ್ಣವಾಗಿದೆ ಎಂದರೆ ನಿಸರ್ಗದ ಆಯ್ಕೆ ಎನ್ನುವ ತತ್ವದ ಬಗ್ಗೆಯೇ ಅನುಮಾನ ಹುಟ್ಟುವುದಷ್ಟೆ ಅಲ್ಲ, ಕೆಲವರು ವಿಕಾಸವಾದವನ್ನು ಅಲ್ಲಗಳೆಯುವಂತೆಯೂ ಮಾಡಿದೆ. ನಿಸರ್ಗರ್ ಆಯ್ಕೆ ಎನ್ನುವುದು ಒಂದು ಯಾದೃಚ್ಛಿಕ ವಿದ್ಯಮಾನವೆಂದುಕೊಂಡು, ಪರಿಪೂರ್ಣವಾದ ಫಲವೆನ್ನುವುದು ಇದ್ದಕ್ಕಿದ್ದ ಹಾಗೆ ಪರಿಪೂರ್ಣ ರೂಪದಲ್ಲಿಯೇ ಉತ್ಪನ್ನವಾಗುತ್ತದೆ ಎನ್ನುವ ತಪ್ಪು ತಿಳುವಳಿಕೆಯೇ ಇದಕ್ಕೆ ಮೂಲ.

ನಿಸರ್ಗದ ಆಯ್ಕೆಯು ಕಲ್ಪನೆಗೂ ನಿಲುಕದಂತಹ ಅತ್ಯಂತ ಜಟಿಲವಾದ ರಚನೆಗಳು ಹಾಗೂ ನಡವಳಿಕೆಗಳನ್ನು ಹುಟ್ಟಿಸಬಲ್ಲುದು ಎನ್ನುವ ಬಗ್ಗೆ ರಿಚರ್ಡ್‌ ಡಾಕಿನ್ಸನಿಗಿಂತಲೂ ಬಲವಾಗಿ ವಾದಿಸಿದವರು ಬೇರೊಬ್ಬರಿಲ್ಲ. ಇದಕ್ಕೆ ಈತನ ದಿ ಬ್ಲೈಂಡ್‌ ವಾಚ್‌ ಮೇಕರ್‌ ಹಾಗೂ ಕ್ಲೈಂಬಿಂಗ್‌ ಮೌಂಟ್‌ ಇಂಪ್ರಾಬಬಲ್‌ ಪುಸ್ತಕಗಳನ್ನು ಓದಬಹುದು. ಇದನ್ನು ಸರಿಯಾಗಿ ಹೇಳಬೇಕೆಂದರೆ, ತಳಿಗುಣಗಳಲ್ಲಿ ಕಾಣುವ ವಿಕೃತಿಗಳು ಯಾದೃಚ್ಛಿಕವಾದರೂ, ನಿಸರ್ಗದ ಆಯ್ಕೆ ಯಾದೃಚ್ಛಿಕವಲ್ಲ. ಬದಲಿಗೆ ನಿಸರ್ಗದ ಆಯ್ಕೆ ಎನ್ನುವ ವಿದ್ಯಮಾನವು ನಿಧಾನವಾಗಿ, ಆದರೆ ಅಯಾದೃಚ್ಛಿಕವಾಗಿ, ಸಣ್ಣ, ಸಣ್ಣ ಬದಲಾವಣೆಗಳನ್ನು ಆಯ್ದುಕೊಳ್ಳುತ್ತಾ, ಕೊನೆಗೊಂದು ಫಲವಾಗುತ್ತದೆ. ಅಲ್ಲದೆ, ಪರಿಪೂರ್ಣತೆಯೆಂದು ತೋರಿದರೂ, ಇದು ಬಲು ದೀರ್ಘಾವಧಿಯಲ್ಲಿ, ಹಲವಾರು ಸಂತತಿಗಳ ಅವಧಿಯಲ್ಲಿ, ಒಂದರ ನಂತರ ಇನ್ನೊಂದರಂತೆ ಆಯ್ಕೆಯಾಗುವ ಪ್ರಕ್ರಿಯೆಯ ಮೂಲಕ ಉಂಟಾಗುತ್ತದೆ.  

ಹೀಗೆ ನಿಸರ್ಗದ ಆಯ್ಕೆಯು ಅಸಾಧ್ಯವೆನ್ನುವ ಪರ್ವತವನ್ನೂ ಹತ್ತಬಲ್ಲುದು ಎನ್ನುವ ವಾದ ಪಕ್ಕಾ ಎನಿಸುತ್ತದೆ. ಆದರೆ ಇಲ್ಲೊಂದು ಉಂಟಾಗುವ ಸಮಸ್ಯೆಯ ಪರಿಹಾರಕ್ಕೆ ಸಾಕಷ್ಟು ತಾಳ್ಮೆಯ ಸಂಶೋಧನೆ ಬೇಕು. ಇದು ಈ ಪರಿಪೂರ್ಣತೆಯನ್ನು ಪಡೆಯುವ ಹಾದಿಯಲ್ಲಿ ಬಂದಿರಬಹುದಾದಂತಹ, ಒಂದಕ್ಕಿಂತಲೂ ಇನ್ನೊಂದು ಉತ್ತಮವಾದ ಮಧ್ಯಂತರ ಹಂತಗಳನ್ನು ಗುರುತಿಸುವ ಸಮಸ್ಯೆ. ಹಾಲ್ಡಾಬ್ಲರ್‌ ಮತ್ತು ವಿಲ್ಸನ್‌ ಹಲವಾರು ಇರುವೆಗಳ ಪ್ರಬಂಧಗಳು ಗೂಡು ಕಟ್ಟುವ ವಿಧಾನಗಳನ್ನು ವಿಷದವಾಗಿ ಸಾಕಷ್ಟು ಪರಿಶ್ರಮದಿಂದ ನಡೆಸಿದ ಅಧ್ಯಯನಗಳು ಹೀಗೆಂದು ತಿಳಿಸಿವೆ.  

ಆಸ್ಟ್ರೇಲಿಯಾದಲ್ಲಿ ಹಾಲ್ಡಾಬ್ಲರ್‌ ಅಧ್ಯಯನ ಮಾಡಿದ ಪಾಲಿರೇಚಿಸ್‌ ಕುಲದ ಒಂದು ಇರುವೆಯಲ್ಲಿ ಸಾಮೂಹಿಕವಾಗಿ ಗೂಡು ಕಟ್ಟುವಂತಹ ಮಧ್ಯಂತರ ಹಂತವೊಂದಿದೆ ಎನ್ನುವದನ್ನುಕ್ಕೆ ಉತ್ತಮ ಉದಾಹರಣೆ. ಈ ಇರುವೆಗಳೂ ತಮ್ಮ ಲಾರ್ವಾಗಳ ರೇಷ್ಮೆಯಿಂದ ಎಲೆಗಳೂ ಮತ್ತು ಕಡ್ಡಿಗಳನ್ನು ಬಳಸಿಕೊಂಡು ಗೂಡು ಕಟ್ಟುತ್ತವೆ. ಆದರೆ ಇವು ಈಕೋಫಿಲಾ ಮಾಡುವಂತೆ ಇರುವೆಗಳ ಸರಪಳಿಯನ್ನು ಕಟ್ಟುವುದಿಲ್ಲ. ಇವು ಎಲೆಗಳನ್ನು ಬಾಗಿಸುತ್ತವೆಂದೂ ತೋರುವುದಿಲ್ಲ. 

ಇವು ಉಪಯೋಗಿಸುವ ಲಾರ್ವಾಗಳು, ಈಕೋಫಿಲಾದ ಲಾರ್ವಾಗಳಿಗೆ ಹೋಲಿಸಿದಲ್ಲಿ ವ್ಯಕ್ತಿಗತವಾದ ಗೂಡುಗಳನ್ನು ನೇಯುವ ಲಾರ್ವಾ ಹಂತಕ್ಕೆ ಇನ್ನೂ ಹತ್ತಿರವಾದಂತಹ ಬೆಳವಣಿಗೆಯವಾಗಿದ್ದು, ಲಾರ್ವಾಗಳ ದೇಹದ ಚಲನೆಯು ಗೂಡು ಕಟ್ಟುವುದಕ್ಕೆ ಮುಖ್ಯವೆಂದು ತೋರುತ್ತದೆ. ಆದರೆ ಈ ಪಾಲಿರೇಚಿಸ್‌ ಇರುವೆಗಳಲ್ಲಿಯೂ ಲಾರ್ವಾಗಳು ತಮ್ಮೆಲ್ಲ ರೇಷ್ಮೆಯನ್ನೂ, ಸಮುದಾಯ ಗೂಡು ಕಟ್ಟುವುದಕ್ಕೆ ದಾನಮಾಡಿ, ಈಕೋಫಿಲಾದ ಲಾರ್ವಗಳಂತೆಯೇ ಬೆತ್ತಲೆಯಾಗಿರುತ್ತವೆ.

Bert Hölldobler (left) and the author posing in front of a portrait of Edward O. Wilson at the National Portrait Gallery in Washington, D.C., May 2016. Photo: Geetha Gadagkar

ಮೇ 2016ರಂದು ವಾಷಿಂಗ್ಟನ್‌ ಡಿಸಿ ಯಲ್ಲಿ ಇರುವ ನ್ಯಾಶನಲ್‌ ಗ್ಯಾಲರಿ ಆಫ್‌ ಪೋರ್ಟ್ರೇಟ್ಸ್‌ ನಲ್ಲಿ ಇರುವ ಇ. ಓ. ವಿಲ್ಸನ್ನರ ಭಾವಚಿತ್ರದ ಮುಂದೆ ನಿಂತ ಬರ್ಟ್‌ ಹಾಲ್ಡಾಬ್ಲರ್ (ಎಡ) ಹಾಗೂ ಲೇಖಕರು. ಚಿತ್ರ: ಗೀತಾ ಗದಗ್ಕರ್ 

ಕ್ಯಾಂಪೋನೋಟಸ್‌ ಸೆನೆಕ್ಸ್‌ ಎನ್ನುವ ದಕ್ಷಿಣ ಹಾಗೂ ಮಧ್ಯ ಅಮೆರಿಕಯಲ್ಲಿ ಇರುವ ಇನ್ನೊಂದು ಇರುವೆಯ ಪ್ರಭೇದವು ಈ ಗೂಡು ಕಟ್ಟುವ ತಂತ್ರದಲ್ಲಿ ಇನ್ನೂ ಮೊದಲಿನ ಹಂತವನ್ನು ಪ್ರತಿನಿಧಿಸುತ್ತದೆ. ಕ್ಯಾಂಪೊನೋಟಸ್‌ ಸೆನೆಕ್ಸ್‌ ಇರುವೆಗಳು ಪಾಲಿರೇಚಿಸ್‌ ನಂತೆಯೇ ಗೂಡುಗಳನ್ನು ಹೊಲಿಯುತ್ತವೆ. ಆದರೆ ಇದರ ಲಾರ್ವಾಗಳು ತಾವು ತಯಾರಿಸಿದ ರೇಷ್ಮೆಯಲ್ಲಿ ಸ್ವಲ್ಪವನ್ನಷ್ಟೆ ಸಮುದಾಯ ಗೂಡು ಕಟ್ಟಿಕೊಳ್ಳಲು ದಾನ ಮಾಡಿ, ಉಳಿದದ್ದರಿಂದ ತಮ್ಮ ರಕ್ಷಣೆಗಂದು ಗೂಡು ಕಟ್ಟಿಕೊಳ್ಳುತ್ತವೆ.  

ಇದಕ್ಕಿಂತಲೂ ಸರಳವಾದ ಸಮುದಾಯ ಗೂಡು ಕಟ್ಟುವ ವಿಧಾನವನ್ನು ಬ್ರೆಜಿಲ್ಲಿನಲ್ಲಿ ಇರುವ  ಡೆಂಡ್ರೊಮಿರ್ಮೆಕ್ಸ್‌ ಎನ್ನುವ ಇರುವೆಯ ಪ್ರಬೇಧದಲ್ಲಿ ಕಾಣಬಹುದು. ಈ ಪ್ರಭೇದದ ಲಾರ್ವಾಗಳು ಸಮುದಾಯ ಗೂಡು ಕಟ್ಟಲು ರೇಷ್ಮೆಯನ್ನು ನೀಡುತ್ತವೆ. ಆದರೆ ಗೂಡು ಕಟ್ಟುವಾಗ ಪ್ರೌಢ ಇರುವೆಗಳು ಇವನ್ನು ಹಿಡಿದಿರುವುದಿಲ್ಲ. ಲಾರ್ವಾಗಳೇ ಸ್ವತಃ ಎಲೆಗಳನ್ನು ಜೋಡಿಸಿ ಹೆಣೆಯುತ್ತವೆ. 

ಅಂದರೆ ಡೆಂಡ್ರೊಮಿರ್ಮೆಕ್ಸ್‌, ಕ್ಯಾಂಪನೋಟಸ್‌ ಸೆನೆಕ್ಸ್‌, ಪಾಲಿರೇಚಿಸ್‌ ಮತ್ತು ಈಕೋಫಿಲಾಗಳು ಲಾರ್ವಗಳ ನೆರವಿನಿಂದ ಹೆಚ್ಚೆಚ್ಚು ಜಟಿಲವಾದಂತಹ ಸಾಮುದಾಯಿಕ ಗೂಡು ಕಟ್ಟುವ ಕ್ರಿಯೆಯ ಸರಣಿ ಬೆಳೆವಣಿಗೆಯ ಹಂತಗಳು ಎನ್ನಬಹುದು. ಹಾಗೆಂದ ಮಾತ್ರಕ್ಕೆ, ಈ ಎಲ್ಲ ಪ್ರಭೇದಗಳೂ ಒಂದಿನ್ನೊಂದರಿಂದ ವಿಕಾಸವಾದುವು ಎಂದು ನಾವು ಹೇಳುತ್ತಿಲ್ಲ. ನಮ್ಮ ವಾದ ಇಷ್ಟೆ. ಉಪಯುಕ್ತವಾದಂತಹ, ಹೆಚ್ಚೆಚ್ಚು ಹೊಂದಾಣಿಕೆ ಇರುವ ಮಧ್ಯಂತರ ಸ್ಥಿತಿಗಳೂ ಇರಬಹುದು. ಆದ್ದರಿಂದ ಈ ಜಟಿಲ ನಡವಳಿಕೆ ವಿಕಾಸವಾಗುವದಕ್ಕೆ ನಿಸರ್ಗದ ಆಯ್ಕೆ ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.  

ಲಾರ್ವಾಗಳು ರೇಷ್ಮೆಯನ್ನು ದಾನ ಕೊಡುತ್ತವೇಕೆ? 

ವಿಕಾಸ ಜೀವಿವಿಜ್ಞಾನದಲ್ಲಿ ಈ ಏಕೆ ಎನ್ನುವ ಪ್ರಶ್ನೆಗೆ ನಿರ್ದಿಷ್ಟ ಅರ್ಥವಿದೆಯಾದ್ದರಿಂದ ಇಲ್ಲಿ ಅದರ ವಿವರಣೆ ಅವಶ್ಯಕ. 

ಯಾವುದೇ ನಡವಳಿಕೆ ಏಕೆ ಆಗುತ್ತದೆ ಎನ್ನುವುದನ್ನು ತಿಳಿಯಬೇಕಾದಾಗ ನಾವು ಎರಡು ಖಚಿತವಾದ ಪ್ರಶ್ನೆಗಳನ್ನು ಕೇಳುತ್ತೇವೆ. ಪ್ರಾರಂಭಿಕ ಪ್ರಶ್ನೆ ಹಾಗೂ ಅಂತಿಮ ಪ್ರಶ್ನೆ ಎನ್ನಿ. 

ಪ್ರಾರಂಭಿಕ ಪ್ರಶ್ನೆಯನ್ನು ನಾವು ಹೇಗೆ ಎಂಬ ಪ್ರಶ್ನೆ ಎಂದೂ ಹೇಳಬಹುದು. ಇದು ಜೀವಿಗಳು ಯಾವ ರೀತಿಯಲ್ಲಿ ನಿರ್ದಿಷ್ಟ ನಡವಳಿಕೆಗಳನ್ನು ತೋರುತ್ತವೆ ಎನ್ನುವುದಷ್ಟೆ. ನೆಲದಲ್ಲಿ ಗೂಡು ಕಟ್ಟುವ ಕಣಜಗಳು ಬೇರೆ ಕಣಜಗಳ ಗೂಡುಗಳ ನಡುವೆ ತಮ್ಮದನ್ನು ಹೇಗೆ ಗುರುತಿಸುತ್ತವೆ? ತಾವು ಹಾರಿದ ದೂರವನ್ನು ಜೇನ್ನೊಣಗಳು ಹೇಗೆ ಅಂದಾಜಿಸುತ್ತವೆ? ಬೆಚ್ಚಗಿನ ಪರಿಸರಕ್ಕೆ ವಲಸೆ ಹೋಗಬೇಕಾದ ಸಮಯ ಇದು ಎಂದು ಹಕ್ಕಿಗಳಿಗೆ ಹೇಗೆ ಗೊತ್ತಾಗುತ್ತದೆ? ಮೊಳೆಯುತ್ತಿರುವ ಬೀಜಗಳಿಗೆ ತಮ್ಮ ಕಾಂಡಗಳು ನೆಲದ ಮೇಲಕ್ಕೂ, ಬೇರುಗಳು ನೆಲದ ಆಳಕ್ಕೂ ಇಳಿಯಬೇಕೆನ್ನುವುದು ಹೇಗೆ ಗೊತ್ತು? 

ಇಂತಹ ಪ್ರಾರಂಭಿಕ ಪ್ರಶ್ನೆಗಳಗೆ ಉತ್ತರಗಳು ಸಾಮಾನ್ಯವಾಗಿ ಹೀಗಿರುತ್ತವೆ. ನೆಲದಲ್ಲಿ ಗೂಡು ಕಟ್ಟುವ ಕಣಜಗಳು ತಮ್ಮ ಗೂಡಿನ ಸುತ್ತಲೂ ಇರುವ ಹಾದಿಗುರುತುಗಳ ವಿನ್ಯಾಸವನ್ನು ಗುರುತಿಟ್ಟುಕೊಂಡು ಗೂಡನ್ನು ಗುರುತಿಸುತ್ತವೆ. ಜೇನ್ನೊಣಗಳು ತಮ್ಮ ಕಣ್ಣಿನಲ್ಲಿ ತೋರುವ ಬಿಂಬಗಳಲ್ಲಿನ ವ್ಯತ್ಯಾಸವನ್ನು ಗುರುತಿಸಿ ಹಾರಿದ ದೂರವನ್ನು ಅಂದಾಜಿಸುತ್ತವೆ. ಅನೇಕ ಪ್ರಾಣಿಗಳು  ತಮ್ಮ ಬಂಧುತ್ವವನ್ನು ಗುರುತಿಸಲು ಹಿಂದಿನ ಪರಿಚಯವನ್ನೇ ಅಳತೆಗೋಲನ್ನಾಗಿ ಇಟ್ಟುಕೊಂಡಿರುತ್ತವೆ. ಹಕ್ಕಿಗಳು ಅವುಗಳ ಮಿದುಳಿನಲ್ಲಿ ಇರುವ ಪೀನಿಯಲ್‌ ಗ್ರಂಥಿಗಳು ಸ್ರವಿಸಿದ ಹಾರ್ಮೋನುಗಳನ್ನು ಹಗಲಿನ ಉದ್ದವನ್ನು ಅಳೆಯಲು ಬಳಸುತ್ತವೆ. ಬಿಸಿಲು ಬೀಳುತ್ತಿರುವ  ದಿಕ್ಕಿಗೆ ಪ್ರತಿಕ್ರಿಯೆಯಾಗಿ ಹುಟ್ಟುವ ಆಕ್ಸಿನ್‌  ಹಾರ್ಮೋನಿನ ಸಾಂಧ್ರತೆಯ ವ್ಯತ್ಯಾಸಕ್ಕೆ ಮೊಳೆಯುತ್ತಿರುವ ಬೀಜಗಳ ಕಾಂಡ ಮತ್ತು ಬೇರಿನಲ್ಲಿ ನಡೆಯುವ ಜೀವ ಕೋಶಗಳ ವಿಭಜನೆ ಹಾಗೂ ಅಂಗಾಂಶದ ಬೆಳೆವಣಿಗೆ ವಿಭಿನ್ನವಾಗಿ ಪ್ರತಿಕ್ರಯಿಸುತ್ತವೆ. 

ಆದರೆ ಅಂತಿಮ ಪ್ರಶ್ನೆ ಎನ್ನುವುದು ಏಕೆ ಎನ್ನುವ ಸಂದೇಹ. ಇದು ಚಟುವಟಿಕೆಗಳನ್ನು ಪೂರ್ಣಗೊಳಿಸುವುದರಿಂದ ವಿಕಾಸದ ಅವಧಿಯಲ್ಲಿ ದೊರೆತಿರುವ ಅನುಕೂಲತೆಗಳಿಗೆ ಸಂಬಂಧಿಸಿದ ಪ್ರಶ್ನೆ. ಇವುಗಳಿಗೆ ಉತ್ತರಗಳು ಹೀಗಿರಬಹುದು. ತಮ್ಮ ಗೂಡುಗಳನ್ನು ಗುರುತಿಟ್ಟುಕೊಳ್ಳುವ ಮೂಲಕ ಹಾಗೂ ಸುತ್ತಲೂ ಯಾವ್ಯಾವ ಹಾದಿಗುರುತುಗಳು ಇವೆ ಎಂಬುದನ್ನು ಗಮನಿಸಿ, ನೆನಪಿಟ್ಟುಕೊಳ್ಳುವ ಮೂಲಕ ಕಣಜಗಳು ಬೇರೆ ಕಣಜಗಳ ಗೂಡು ಸೇರದಂತೆ ಕಾಪಾಡಿಕೊಳ್ಳುತ್ತವೆ. ಬಿಂಬಗಳ ಚಲನೆಯ ಗತಿಯನ್ನು ಅಳತೆ ಮಾಡುವ ಮೂಲಕ ಹಾರಿದ ದೂರವನ್ನು ನಿಖರವಾಗಿ ಅಳೆಯುವ ಜೇನ್ನೊಣಗಳು ಲಾಭದಾಯಕವಾದ ಆಹಾರದ ಮೂಲವನ್ನು ಮರಳಿ ತಲುಪಬಲ್ಲವು ಹಾಗೂ ಈ ಮಾಹಿತಿಯನ್ನು ಇತರೆ ಜೇನ್ನೊಣಗಳಿಗೆ ತಲುಪಿಸಬಲ್ಲವು. 

ಪರಿಚಯವನ್ನೇ ಸಂಬಂಧದ ಅಳತೆಗೋಲನ್ನಾಗಿಟ್ಟುಕೊಳ್ಳುವುದರಿಂದ ಹಲವು ಪ್ರಾಣಿಗಳಿಗೆ ತಮ್ಮೊಳಗೇ ನಡೆಯಬಹುದಾದ ಅಂತರಸಂಕರವನ್ನು ತಡೆಗಟ್ಟುವುದು ಸಾಧ್ಯವಾಗುತ್ತದೆ. ಬೆಚ್ಚಗಿನ ತಾಣಗಳಿಗೆ ವಲಸೆ ಹೋಗುವುದರಿಂದ ಹಕ್ಕಿಗಳು ತಮಗೂ, ತಮ್ಮ ಮರಿಗಳಿಗೂ ಚಳಿ ಪ್ರದೇಶದಲ್ಲಿ ಒದಗಬಹುದಾದ ಸಾವಿನಿಂದ ತಪ್ಪಿಸಿಕೊಳ್ಳಬಹುದು.  ದ್ಯುತಿಸಂಶ್ಲೇಷಣೆ ನಡೆಸುವ ಕಾಂಡ ಭಾಗವನ್ನು ಬಿಸಿಲಿನತ್ತಲೂ, ನೀರನ್ನು ಹಿಡಿದಿಡುವ ಬೇರನ್ನು ನೆಲದತ್ತಲೂ ಬೆಳೆಯುವಂತೆ ಮಾಡುವ ಮೂಲಕ ಗಿಡಗಳು ನೀರು ಮತ್ತು ಬಿಸಿಲಿನಿಂದ ಇನ್ನೂ ಪರಿಣಾಮಕಾರಿಯಾದ ಲಾಭ ಪಡೆಯಬಲ್ಲವು.

ಈ ರೀತಿ ಏಕೆ ಮತ್ತು ಹೇಗೆ ಎಂದು ಕೇಳುವುದು ಸ್ವಲ್ಪ ದಿಕ್ಕು ತಪ್ಪಿಸಬಹುದಾದ ಪ್ರಶ್ನೆಗಳು. ಇದು ಸಸ್ಯಗಳಾಗಲಿ, ಪ್ರಾಣಿಗಳಾಗಲಿ ಪ್ರಜ್ಞಾಪೂರ್ವಕವಾಗಿ ನಿಶ್ಚಯಿಸುತ್ತಿವೆ ಎಂದಲ್ಲ. ಅಂತರಸಂಕರವಾಗುವುದನ್ನು ಪ್ರಾಣಿಗಳೂ ತಪ್ಪಿಸಿಕೊಳ್ಳುತ್ತವೆ ಎಂದರೆ ಅವು ಹೀಗೆ ಪ್ರಜ್ಞಾಪೂರ್ವಕವಾಗಿ ಮಾಡುತ್ತಿವೆ ಎಂದಲ್ಲ. ಹಾಗೆಯೇ ಹಕ್ಕಿಗಳು ಸಾವಿನ ಪ್ರಮಾಣ ಕಡಿಮೆಯಾಗಲೆಂದು ಚಳಿಗಾಲ ಬರುತ್ತಿದ್ದಂತೆ ಬೆಚ್ಚಗಿನ ಪ್ರದೇಶಕ್ಕೆ ವಲಸೆ ಹೋಗುತ್ತಿವೆ ಎಂದರೆ ಹೀಗೆ ವಲಸೆ ಹೋಗುವುದರ ಲಾಭ ನಷ್ಟಗಳನ್ನು ಹಕ್ಕಿಗಳು ಲೆಕ್ಕ ಹಾಕಿವೆ ಅಂತಲ್ಲ. ಇದು “ಚಳಿಗಾಲದಲ್ಲಿ ತಾನಿದ್ದ ಜಾಗವನ್ನು ಬಿಟ್ಟು ಬೆಚ್ಚಗಿನ ಪ್ರದೇಶಕ್ಕೆ ವಲಸೆ ಹೋಗುವಂತಹ ವಿಕೃತಿ ಇದ್ದಂತಹ ಹಕ್ಕಿಯೊಂದು, ಇಂತಹ ವಿಕೃತಿಗಳಿಲ್ಲದ, ಚಳಿಗಾಲದಲ್ಲಿಯೂ ಇದ್ದಲ್ಲಿಯೇ ಉಳಿದು ಸಂತಾನೋತ್ಪತ್ತಿ ಮಾಡಲು ಪ್ರಯತ್ನಿಸುವ  ಹಕ್ಕಿಗಳಿಗಿಂತಲೂ ಹೆಚ್ಚು ಸಂತಾನಗಳನ್ನು ಉಳಿಸಿಹೋಗುತ್ತದೆ” ಎನ್ನುವ ದೀರ್ಘ ವಿವರಣೆಯ ಸಂಕ್ಷಿಪ್ತ ರೂಪ.”

ಅವು ಇದನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತಿಲ್ಲ ಎನ್ನುವುದನ್ನು ತಿಳಿದಿದ್ದೂ, ಹೀಗೆ ಹಕ್ಕಿಗಳು ಏಕೆ ವಲಸೆ ಹೋಗುತ್ತವೆ ಎನ್ನುವ ಸಂಕ್ಷಿಪ್ತ ಪ್ರಶ್ನೆಯನ್ನು ಕೇಳುವುದು ವಿಕಾಸ ಜೀವಿವಿಜ್ಞಾನಿಗಳಿಗೆ ಅಭ್ಯಾಸವಾಗಿಬಿಟ್ಟಿದೆ. ಪರಿಚಿತವಲ್ಲದ ಮಂದಿ ತಪ್ಪು ತಿಳಿಯಬಾರದೆನ್ನುವ ಹೊಣೆಗಾರಿಕೆಯೂ ಇರುವ ನಾವು ಇಲ್ಲಿ ನಾನು ಮಾಡುತ್ತಿರುವಂತೆ ಈ ಏಕೆ, ಹೇಗೆ ಎನ್ನುವ ಪ್ರಶ್ನೆಗಳು ಎಂದರೇನೆಂದು ಇನ್ನಷ್ಟು ಸ್ಪಷ್ಟವಾಗಿಸಬೇಕು.  

ಲಾರ್ವಾದ ರೇಷ್ಮೆಯಿಂದ ಗೂಡನ್ನು ಕಟ್ಟುವ ವಿಷಯದಲ್ಲಿ ಹಾಲ್ಡಾಬ್ಲೆರ್ ಮತ್ತು ವಿಲ್ಸನ್‌ ಇದೇ ರೀತಿಯಲ್ಲಿ ಏಕೆ ಎನ್ನುವ ಪ್ರಶ್ನೆಯನ್ನು ಕೇಳಿದ್ದರು. ಲಾರ್ವಾಗಳೇಕೆ ರೇಷ್ಮೆಯನ್ನು ಸಮುದಾಯಕ್ಕೆ ದಾನ ಕೊಡಬೇಕು? ತಾವೇ ಅದನ್ನು ಇಟ್ಟುಕೊಂಡು ಗೂಡು ಕಟ್ಟಿಕೊಳ್ಳಬಾರದೇ? ಈ ಪ್ರಶ್ನೆಯ ವಿವರಣಾತ್ಮಕ ರೂಪ ನಿಮಗೂ ಅರ್ಥವಾಗಿರಬೇಕು. ಹೀಗೆ ತನ್ನೆಲ್ಲ ರೇಷ್ಮೆಯನ್ನೂ ಸಮುದಾಯದ ಗೂಡು ಕಟ್ಟಲು ದಾನ ಕೊಟ್ಟು ಬಿಟ್ಟ ವಿಕೃತಿ ಇರುವ ಲಾರ್ವಾ ಇರುವ ಇರುವೆ, ರೇಷ್ಮೆಯನ್ನಲ್ಲ ತಾನೇ ಬಳಸುವ ಲಾರ್ವಾ ಇರುವ ಇರುವೆಗಿಂತಲೂ ಹೆಚ್ಚು ಸಂತತಿಗಳನ್ನು ಹುಟ್ಟಿಸುತ್ತದೆಯೇ? ಅದರ ಡಾರ್ವಿನೀಯ ಸಾಮರ್ಥ್ಯ ಹೆಚ್ಚುತ್ತದೆಯೇ? 

ವಿಕಾಸ ವಾದದ ದೃಷ್ಟಿಯಲ್ಲಿ ಪ್ರಜ್ಞಾ ಪೂರ್ವಕವಾದ ತೀರ್ಮಾನ ಅಥವಾ ಆಯ್ಕೆ ಇಲ್ಲದ ಲಾರ್ವಾ ಎಲ್ಲ ರೇಷ್ಮೆಯನ್ನೂ ತನಗಾಗಿಯೇ ಉಳಿಸಿಕೊಳ್ಳುವುದನ್ನು ಸ್ವಾರ್ಥ ನಡವಳಿಕೆ ಎಂದು ಹೇಳಬಹುದು. ಇದಕ್ಕೆ ವ್ಯತಿರಿಕ್ತವಾಗಿ, ತನ್ನೆಲ್ಲ ರೇಷ್ಮೆಯನ್ನೂ ಸಮುದಾಯದ ಒಳಿತಿಗಾಗಿ ದಾನ ಕೊಟ್ಟು, ತನ್ನ ರಕ್ಷಣೆಗೆಂದು ಗೂಡು ಕಟ್ಟಿಕೊಳ್ಳುವ ಅವಕಾಶವನ್ನು ಕಳೆದುಕೊಳ್ಳುವ ಪ್ರಕ್ರಿಯೆ “ತ್ಯಾಗ” ಎನ್ನಿಸಿಕೊಳ್ಳುತ್ತದೆ.

ಲಾರ್ವಾದ ಈ ಸ್ವಾರ್ಥ ನಿಸರ್ಗದ ಆಯ್ಕೆಯ ಮೂಲಕ ವಿಕಾಸವಾಯಿತಾದರೂ ಹೇಗೆ?

ಡಾರ್ವಿನ್‌ ಹಾಗೂ ಅವನ ನಂತರದ ವಿಜ್ಞಾನಿಗಳೆಲ್ಲರೂ ತ್ಯಾಗದ ಈ ನಡವಳಿಕೆಯ ವಿರೋಧಾಭಾಸವನ್ನು ಎದುರಿಸಿದ್ದರು. ಏಕೆಂದರೆ ಇಂತಹ ತ್ಯಾಗವು ತ್ಯಾಗಿಯ ಉಳಿವಿನ ಸಾಮರ್ಥ್ಯವನ್ನು ಕುಗ್ಗಿಸಿ, ತ್ಯಾಗದ ಲಾಭ ಪಡೆದವರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹಾಗಿದ್ದರೆ, ಇಂತಹ ತಾನಿರುವ ಜೀವಿಯ ಉಳಿವಿನ ಸಾಮರ್ಥ್ಯವನ್ನು ಕುಗ್ಗಿಸುವ ಜೀನ್‌ ಆ ಸಮುದಾಯದಲ್ಲಿ ಹೇಗೆ ಹರಡಲು ಸಾಧ್ಯ?

ಈ ವಿರೋಧಾಭಾಸಕ್ಕೆ ಇಂಗ್ಲೀಷ್‌ ಜೀವಿವಿಜ್ಞಾನಿ ಡಬ್ಲ್ಯೂ. ಡಿ ಹ್ಯಾಮಿಲ್ಟನ್‌ ಒಂದು ಸೊಗಸಾದ ಪರಿಹಾರವನ್ನು ಸೂಚಿಸಿದ್ದ. ಈ ಪರಿಹಾರವೇ ಈಗ ಹಲವಾರು ಗಂಭೀರ ಅಧ್ಯಯನಗಳಿಗೂ, ಕೆಲವು ವಿವಾದಗಳಿಗೂ ಕಾರಣವಾಗಿದೆ. ತಳಿಸಂಬಂಧಿಗಳ ಉಳಿವನ್ನು ಸಂತಾನಗಳ ನಷ್ಟಕ್ಕಿಂತಲೂ ಹೆಚ್ಚು ಮಾಡುವ ಮೂಲಕ ತ್ಯಾಗವೆನ್ನುವ ಸ್ವಭಾವವೂ ಕೂಡ ನಿಸರ್ಗದ ಆಯ್ಕೆಯ ಫಲವೇ ಆಗಬಲ್ಲುದು ಎಂದು ಹ್ಯಾಮಿಲ್ಟನ್‌ ವಾದಿಸಿದ್ದ. 

ಇದೇಕೆಂದರೆ, ನಾವು ಸಂತಾನಗಳ ಜೊತೆಗಷ್ಟೆ ಅಲ್ಲದೆ ಸಂಬಂಧಿಗಳ ಜೊತೆಗೂ ನಮ್ಮ ಜೀನ್‌ ಗಳನ್ನು ಹಂಚಿಕೊಂಡಿರುತ್ತೇವೆ. ಈ ಬಗೆಯ ನಿಸರ್ಗದ ಆಯ್ಕೆಯನ್ನು ಬಂಧುಗಳ ಆಯ್ಕೆ ಎಂದು ಕರೆಯುತ್ತಾರೆ. ಹೀಗೆ ನಿಕಟ ಸಂಬಂಧಿಗಳ ಪರವಾಗಿ ಮಾಡುವ ತ್ಯಾಗವನ್ನು, ದೂರ ಸಂಬಂಧಿಗಳ ಪರವಾಗಿ ಮಾಡುವ ತ್ಯಾಗಕ್ಕಿಂತಲೂ ಹೆಚ್ಚು ನಿಸರ್ಗ ಆಯ್ದುಕೊಳ್ಳಬೇಕಷ್ಟೆ.

ಇಂತಹ ತರ್ಕವನ್ನು ಪರೀಕ್ಷಿಸುವುದು ಸಾಮಾನ್ಯವಾಗಿ ಕಷ್ಟವೇ. ಆದರೆ ಇದಕ್ಕೆ ಈ ಸಿಂಪಿಗ ಇರುವೆಗಳು ಒಂದು ವಿಶಿಷ್ಟ ಅವಕಾಶವನ್ನು ಒದಗಿಸುತ್ತವೆ.

ಕೀಟಗಳಲ್ಲಿ ಹೈಮೆನಾಪ್ಟೆರಾ ಶ್ರೇಢಿಗೆ ಸೇರಿದ ಇರುವೆಗಳು, ಜೇನ್ನೊಣಗಳು ಹಾಗೂ ಕಣಜಗಳ ಸಂತಾನೋತ್ಪತ್ತಿ ವಿಧಾನ ವಿಚಿತ್ರವಾಗಿದೆ. ಇವುಗಳ ಗಂಡುಗಳು ಸಾಮಾನ್ಯವಾಗಿ ಫಲಿತವಾಗದ ಮೊಟ್ಟೆಗಳಿಂದ ಅಮೈಥುನ ಜನನ ಅಥವಾ ಪಾರ್ಥೇನೋಜೆನೆಸಿಸ್‌ ಎನ್ನುವ ಕ್ರಿಯೆಯಿಂದ ಹುಟ್ಟುತ್ತವೆ. ಹೀಗಾಗಿ ಇವುಗಳಲ್ಲಿ ತಾಯಿಯಿಂದ ಬಂದ ಒಂದೇ ಒಂದು ಜೀನ್‌ ತಂಡವಿರುತ್ತದೆ. ಬೇರೆಲ್ಲ ಪ್ರಾಣಿಗಳಂತೆ, ಹೆಣ್ಣಗಳು ಫಲಿತ ಅಂಡಗಳಿಂದ ಹುಟ್ಟಿದಂತವು. ಹೀಗಾಗಿ ಇವುಗಳಲ್ಲಿ ಜೀನ್‌ ಗಳ ಜೋಡಿ ತಂಡ ಇರುತ್ತದೆ. ತಂದೆಯಿಂದ ಬಂದದ್ದೊಂದು, ತಾಯಿಯಿಂದ ಬಂದದ್ದೊಂದು. ಇಂತಹ ಅರೆ-ಜೋಡಿ ತಳಿಗುಣ ಫಲವಾಗಿ, ಸಹೋದರಿಯರಲ್ಲಿ ಒಬ್ಬರಿನ್ನೊಬ್ಬರ ಮುಕ್ಕಾಲು ಪಾಲು ಜೀನ್ ಹಂಚಿಕೆಯಾಗಿರುತ್ತದೆ.  ಇದು ಮನುಷ್ಯರಲ್ಲಿ ಇರುವ ಅರ್ಧ ಪಾಲಿಗಿಂತ ಹೆಚ್ಚು. ಆದರೆ ಗಂಡುಗಳು ತಮ್ಮ ಸಹೋದರಿಯರ ಜತೆಗೆ ಕೇವಲ ಕಾಲು ಭಾಗವಷ್ಟೆ ಜೀನ್‌ ಗಳನ್ನು ಹಂಚಿಕೊಂಡಿರುತ್ತಾರೆ.  ಇದು ಮನುಷ್ಯರಲ್ಲಿ ಇರುವ ಅರ್ಧ ಭಾಗಕ್ಕಿಂತಲೂ ಕಡಿಮೆ. 

ಹೀಗೆ, ಈಕೋಫಿಲಾದ ಹೆಣ್ಣು ಲಾರ್ವೆಗಳು ತಮ್ಮ ಗೂಡಿನ ಇತರೆ ಸದಸ್ಯರ ಜೊತೆಗೆ ಗಂಡುಗಳಿಗಿಂತಲೂ ಹೆಚ್ಚು ಸಂಬಂಧ ಇರುವಂಥವು. ಬಂಧುಗಳ ಆಯ್ಕೆಯ ತರ್ಕವು ಗಂಡು ಲಾರ್ವಾಗಳಿಗಿಂತ ಹೆಣ್ಣು ಲಾರ್ವಾಗಳು ಹೀಗೆ ತಮ್ಮ ಸಮುದಾಯದ ಒಳಿತಿಗೆ ರೇಷ್ಮೆಯನ್ನು ದಾನ ಮಾಡುವ ಸಾಧ್ಯತೆಗಳು ಹೆಚ್ಚು ಎನ್ನುತ್ತದೆ. ತಮ್ಮೊಂದು ಅಧ್ಯಯನದಲ್ಲಿ ವಿಲ್ಸನ್‌ ಹಾಗೂ ಹಾಲ್ಡಾಬ್ಲರ್‌ ಈ ಊಹೆ ನಿಜವೇ ಎಂದು ಪರೀಕ್ಷಿಸಿದರು. ಅದರ ಫಲ ಅವರದ್ದೇ ಮಾತುಗಳಲ್ಲಿ ಕೇಳಿ: 

ಗೂಡು ನೇಯುವುದರಿಂದ ಗೂಡು ಕಟ್ಟುವ ಹಾದಿಯಲ್ಲಿ, ವೈಯಕ್ತಿಕ ಸಂತತಿ ಹಾಗೂ ಬಂಧುಗಳ ಆಯ್ಕೆಯ ನಡುವೆ ಸಂಘರ್ಷ ಉಂಟಾಗುವುದು ಅನಿವಾರ್ಯ. ರೇಷ್ಮೆಯಾಗಿ ಪರಿವರ್ತನೆಗೊಂಡ, ಹಾಗೂ ಗೂಡು ಕಟ್ಟಲೆಂದು ಬಳಕೆಯಾದ ಪ್ರತಿ ಪ್ರೊಟೀನ್‌ ಅಣುವೂ ಕೂಡ ವೈಯಕ್ತಿಕ ಬೆಳೆವಣಿಗೆಯಿಂದ ಹಿಂತೆಗೆದುಕೊಂಡ ಒಂದು ಅಂಶ. ಈ ತರ್ಕದ ಪ್ರಕಾರ ಗಂಡು ಹಾಗೂ ಕಾರ್ಮಿಕ ಲಾರ್ವಾಗಳೆರಡೂ ಒಟ್ಟಾಗಿ ಇರುವ ಸಂದರ್ಭಗಳಲ್ಲಿ ಮೋಸ ಮಾಡಿದ ಗಂಡುಗಳಿಗೆ ಲಾಭದ ಸಾಧ್ಯತೆ ಹೆಚ್ಚು. ಅಂದರೆ ತಮ್ಮ ರೇಷ್ಮೆಯನ್ನು ತಾವೇ ಉಳಿಸಿಕೊಂಡು ಜವಾಬುದಾರಿಯ ತಲಾವಾರು ಹೊರೆಯನ್ನು ಹೆಣ್ಣು ಲಾರ್ವಾಗಳ ಮೇಲೆ ದಾಟಿಸಿಬಿಡುತ್ತವೆ. ಏಕೆಂದರೆ ಹೆಣ್ಣುಗಳು ತೀವ್ರವಾದ ಬಂಧುಗಳ ಆಯ್ಕೆಯ ಒತ್ತಡಕ್ಕೆ ಒಳಗಾಗಿರುತ್ತವೆ.

ಗಂಡು ಹಾಗೂ ಹೆಣ್ಣು ಲಾರ್ವಗಳು ತ್ಯಾಗ ಮಾಡುವ ರೇಷ್ಮೆಯ ಪ್ರಮಾಣವನ್ನು ಅಳೆಯಲು ವಿಲ್ಸನ್‌ ಮತ್ತು ಹಾಲ್ಡಾಬ್ಲರ್‌ ಬೆರಗುಗೊಳಿಸುವಷ್ಟು ಸರಳ ಪ್ರಯೋಗಗಳನ್ನು ನಡೆಸಿದರು. ಬಂಧುಗಳ ಆಯ್ಕೆ ತರ್ಕಿಸಿದಂತೆಯೇ, ಹೆಣ್ಣು ಲಾರ್ವಾಗಳ ರೇಷ್ಮೆ ಗ್ರಂಥಿಗಳು ಗಂಡುಗಳಲ್ಲಿ ಇರುವುದಕ್ಕಿಂತಲೂ ಮೂರು ಪಟ್ಟು ದೊಡ್ಡದಾಗಿದ್ದುವು. ಹೆಣ್ಣು ಲಾರ್ವಾಗಳು ಗಂಡಿಗಿಂತಲೂ ೪.೩ ಪಟ್ಟು ರೇಷ್ಮೆಯನ್ನು ದಾನ ಮಾಡುವ ಸಾಧ್ಯತೆಯನ್ನು ಕಂಡರು. 

ಇದರ ತೀರ್ಮಾನವಿಷ್ಟೆ. ಸಮುದಾಯದ ಗೂಡಿಗಾಗಿ ರೇಷ್ಮೆಯನ್ನು ದಾನ ಮಾಡುವುದರಲ್ಲಿ ಹೆಣ್ಣುಗಳ ತ್ಯಾಗ ಗಂಡುಗಳಿಗಿಂತಲೂ ಹೆಚ್ಚು. ಅಂದರೆ, ಲಾರ್ವಾಗಳು ರೇಷ್ಮೆಯನ್ನು ದಾನ ಮಾಡುತ್ತವೇಕೆ ಎನ್ನುವ ಪ್ರಶ್ನೆಗೆ ಉತ್ತರವೇನೆಂದರೆ ಈ ತ್ಯಾಗದ ಕ್ರಿಯೆಯಿಂದ ಅವುಗಳಿಗಾಗುವ ವೈಯಕ್ತಿಕ ನಷ್ಟವನ್ನು ಗೂಡಿನ ಇತರೆ ಸದಸ್ಯರ ಜೊತೆಗೆ ಅವುಗಳಿಗೆ ಹೆಚ್ಚು ಸಂಬಂಧ ಇರುವುದು ಸರಿದೂಗುತ್ತದೆ. 

“ಗೂಡುಗಳನ್ನು ಕಟ್ಟಲು ಲಾರ್ವಾಗಳ ರೇಷ್ಮೆಯನ್ನು ಬಳಸುವ ಈಕೋಫಿಲಾಗಳ ನಡವಳಿಕೆ, ಪ್ರಾಣಿಗಳಲ್ಲಿ ಕಾಣುವ ಒಂದು ಅದ್ಭುತ ಸಾಮಾಜಿಕ ವಿದ್ಯಮಾನ” ಎನ್ನುವುದು ನಿಜ. ಆದರೆ ಈಕೋಫಿಲಾದಿಂದ ನಮಗೆ ದೊರೆಯುವ ಲಾಭ ಇಷ್ಟೇ ಅಲ್ಲ. ಅದು ನಡವಳಿಕೆ ಹಾಗೂ ವಿಕಾಸಗಳ ನಡುವಣ ಸಂಬಂಧವನ್ನು ಅಧ್ಯಯನ ಮಾಡಲು ಒಂದು ಅಸಾಧಾರಣ ಮಾದರಿಯೂ ಹೌದು. ಇದರಲ್ಲಿ ಎರಡೇ ಎರಡು ಪ್ರಭೇದಗಳಿವೆ. ಎರಡೂ ವ್ಯಾಪಕವಾಗಿವೆ. ಎಲ್ಲೆಲ್ಲೂ ಕಾಣಸಿಗುತ್ತವೆ. ಬೃಹತ್‌ ಭೂಪ್ರದೇಶದಲ್ಲಿ ಹರಡಿಕೊಂಡಿವೆ. ಒಂದು ಕೋಟಿ ವರ್ಷಗಳ ಹಿಂದೆ ಎರಡು ಪ್ರಭೇದವಾಗಿ ಬೇರೆಯಾದ ಇವುಗಳು ನೋಡಲು ಒಂದೇ ತೆರನಾಗಿದ್ದರೂ, ವಿಕಾಸದಿಂದಾಗುವ ವ್ಯತ್ಯಾಸಗಳನ್ನು ಗಮನಿಸಲು ಅದ್ಭುತ ಅವಕಾಶಗಳನ್ನು ಒದಗಿಸುತ್ತವೆ. 

ಈಕೋಫಿಲಾ ಕೆಲವು ಕೀಟಪೀಡೆಗಳನ್ನು ಜೈವಿಕವಾಗಿ ನಿಯಂತ್ರಿಸಲೂ ಉಪಯುಕ್ತವೆಂದು ಗೊತ್ತಾಗಿದೆ. ಕೆಲವು ಪ್ರದೇಶಗಳಲ್ಲಿ ಇದನ್ನು ಆಹಾರವನ್ನಾಗಿಯೂ ಉಪಯೋಗಿಸುತ್ತಾರೆ. ಹಾಲ್ಡಾಬ್ಲರ್‌ ಮತ್ತು ವಿಲ್ಸನ್ನರ ಈ ಅಧ್ಯಯನಗಳು, ಮಹಾನ್‌ ಎನಿಸಿದರೂ, ನಮ್ಮ ಅರಿವಿನ ಹಸಿವಿಗೆ ರಾವಣನ ಹೊಟ್ಟೆಗೆ ಬಿದ್ದ ಮೂರು ಕಾಸಿನಂತೆ ಅಷ್ಟೆ. 

ನಾನೇನಾದರೂ ಮತ್ತೆ ಮೊದಲಿನಿಂದ ಸಂಶೋಧನೆಯನ್ನ ಅರಂಭಿಸಬೇಕಾದರೆ, ರೋಪಾಲೀಡಿಯಾ ಮಾರ್ಜಿನೇಟಾದ ಬದಲಿಗೆ ಈಕೋಫಿಲ ಸ್ಮಾರಾಗ್ಡಿನಾ ವನ್ನು ಆಯ್ಕೆ ಮಾಡುತ್ತಿದ್ದೆನೋ ಏನೋ.  ಆದರೆ ವಾರಣಾಸಿಯ ಬನಾರಸ್‌ ಹಿಂದೂ ವಿಶ್ವವಿದ್ಯಾನಿಲಯದ ನೀಲ್ಕಮಲ್‌ ರಸ್ತೋಗಿ ಹಾಗೂ ಪಾಟಿಯಾಲದಲ್ಲಿರುವ ಪಂಜಾಬಿ ವಿಶ್ವವಿದ್ಯಾನಿಲಯದ ಹಿಮೇಂದರ್‌ ಭಾರತಿ ಪ್ರತ್ಯೇಕವಾಗಿ ಈಕೋಫಿಲಾ ಸ್ಮಾರಾಗ್ದಿನಾದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವುದು ನನಗೆ ಖುಷಿಯ ವಿಷಯ. ಅವರ ಈ ಸಂಶೋಧನೆಗಳು ನಡೆಯುತ್ತಿರಲಿ ಎಂದು ಆಶಿಸುತ್ತೇನೆ.  

ಇದು ಜಾಣ ಅರಿಮೆ. ಆಂಗ್ಲ ಮೂಲ ಪ್ರೊಫೆಸರ್.‌ ರಾಘವೇಂದ್ರ ಗದಗ್ಕರ್, ಕನ್ನಡಾನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್.‌ ಮಂಜುನಾಥ. ಇದರ ಮೂಲ ಪಾಠ ದಿ ವೈರ್‌ ಸೈನ್ಸ್‌ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. 

Scroll To Top