ಲಾರ್ಡ್ ಹೋವ್ ದ್ವೀಪ. ಎಲಿಜಾ ಪರ್ವತದ ಮೇಲಿಂದ ಕಾಣುವ ಲಿಡ್ಜಬರ್ಡ್ ಹಾಗೂ ಗೋವರ್ ಪರ್ವತಗಳು. ಚಿತ್ರ: Fanny Schertzer/Wikimedia Commons, CC BY-SA 3.0
ಸಂಪುಟ 4 ಸಂಚಿಕೆ 321, ಆಗಸ್ಟ್ 21, 2021
&
ಸಂಪುಟ 4 ಸಂಚಿಕೆ 322, ಆಗಸ್ಟ್ 22, 2021
ಜಾಣ ಅರಿಮೆ
ವಿಸ್ಮಯಕ್ಕಿಂತ ವಿಸ್ಮಯ 25
Kannada translation by Kollegala Sharma
§
ಸಂಶೋಧನಾ ಪ್ರಬಂಧಗಳ ಶೀರ್ಷಿಕೆಗಳು ಸಾಮಾನ್ಯವಾಗಿ ನಮ್ಮನ್ನು ಅಚ್ಚರಿಗೊಳಿಸುವುದಿಲ್ಲ, ಆದರೆ ಈ ಪ್ರಬಂಧ ಅದಕ್ಕೆ ಅಪವಾದ. ನೆಲವಾಸಿ ಸಸ್ಯದಲ್ಲಿ ಅಪ್ಪಟ ಸಮಾಜದ ಆದಿರೂಪವೇ? ಎಂದು ಅದರ ಶೀರ್ಷಿಕೆ ಇತ್ತು. ಇದು ಅಚ್ಚರಿಯ ವಿಷಯ. ಏಕೆಂದರೆ ನಮಗೆ ತಿಳಿದಿರುವ ಹಾಗೆ ಸಮಾಜಜೀವನ ಅಥವಾ ಯೂಸೋಶಿಯಾಲಿಟಿ ಎನ್ನುವುದು ಪ್ರಾಣಿ ಜಗತ್ತಿಗಷ್ಟೆ ಸೀಮಿತವಾಗಿತ್ತು. ಹಲವಾರು ಪ್ರಾಣಿಗಳು ಗುಂಪುಗುಂಪಾಗಿ ಜೀವಿಸುತ್ತವೆ. ಇವುಗಳ ನಡುವಣ ಸಂಬಂಧದ ಜಟಿಲತೆಯೂ ವಿಭಿನ್ನ. ಅತ್ಯಂತ ಜಟಿಲ ಸಂಬಂಧ ಇರುವ ಸಮೂಹವನ್ನೇ ಯೂಸೋಶಿಯಲ್ ಅಥವಾ “ಅಪ್ಪಟ ಸಮಾಜ” ಎನ್ನುತ್ತೇವೆ. ಅಪ್ಪಟ ಸಮಾಜಜೀವಿಗಳ ಸಮೂಹದಲ್ಲಿ ಹಲವಾರು ಸಂತತಿಗಳು ಒಟ್ಟಾಗಿರುತ್ತವೆ; ಸಂತಾನಗಳ ಆರೈಕೆಯಲ್ಲಿ ಸಹಕಾರ ತೋರುತ್ತವೆ. ಕೆಲವೇ ಸದಸ್ಯರಷ್ಟೆ ಸಂತಾನೋತ್ಪತ್ತಿ ಮಾಡುತ್ತವೆ. ಉಳಿದವೆಲ್ಲವೂ ಸಮಾಜದ ಒಳಿತಿಗಾಗಿ ದುಡಿಯುತ್ತವೆ.
ಇದೀಗ ನ್ಯೂಜೀಲ್ಯಾಡಿನ ವೆಲ್ಲಿಂಗ್ಟನ್ನಿನಲ್ಲಿರುವ ವಿಕ್ಟೋರಿಯಾ ವಿಶ್ವವಿದ್ಯಾನಿಲಯದ ಜೀವಿವಿಜ್ಞಾನಿ ಪ್ರೊಫೆಸರ್ ಕೆವಿನ್ ಬರ್ನ್ಸ್ ಮತ್ತು ಅವರ ಸಂಗಡಿಗರು ತಾವು ಒಂದು ಅಪ್ಪಟ ಸಮಾಜಜೀವಿ ಸಸ್ಯವನ್ನು ಪತ್ತೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಅವರ ಸಂಶೋಧನೆ ಬರ್ನ್ಸ್ ಅವರನ್ನು ಲಾರ್ಡ್ ಹೋವ್ ದ್ವೀಪಕ್ಕೆ ಕೊಂಡೊಯ್ದಿತ್ತು. ಇದು ಆಸ್ಟ್ರೇಲಿಯಾ ಮತ್ತು ನ್ಯೂಜೀಲ್ಯಾಂಡ್ ನಡುವೆ ಇರುವ ಜ್ವಾಲಾಮುಖಿಯಿಂದ ಹುಟ್ಟಿದ ಪುಟ್ಟ ದ್ವೀಪ. ಕೇವಲ ಹದಿನಾನಾಲ್ಕು ಚದರ ಕಿಲೋಮೀಟರು ಅಗಲವಿರುವ ಇದನ್ನು ಬ್ರಿಟಿಷರು 1788 ನೇ ಇಸವಿಯಲ್ಲಿ ಪತ್ತೆ ಮಾಡಿ ತಮ್ಮದಾಗಿಸಿಕೊಂಡಿದ್ದರು. ಈಗ ಇದು ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ರಾಜ್ಯದ ಆಡಳಿತದಲ್ಲಿದೆ. ಇಲ್ಲಿ ಕೆಲವು ಕುಬ್ಜವಾದ ಉಷ್ಣವಲಯದ ಕಾಡುಗಳು, ಹವಳದ ದಿಬ್ಬಗಳು ಹಾಗೂ ಕೆಲವು ಪರ್ವತಗಳಿವೆ. ಹಲವಾರು ಸ್ಥಾನಿಕವಾದ ಸಸ್ಯಗಳೂ ಪ್ರಾಣಿಗಳೂ ಇವೆ. ಕೇವಲ ಮುನ್ನೂರ ಇಪ್ಪತ್ತೆಂಟು ನಿವಾಸಿಗಳಿದ್ದು, ಸುಮಾರುನಾಲ್ಕುನೂರರಷ್ಟು ಪ್ರವಾಸಿಗಳು ಬಂದು ಹೋಗುತ್ತಾರೆ.
ಕೆವಿನ್ ಸಿ. ಬರ್ನ್ಸ್. ಪರಿಸರವಿಜ್ಞಾನ, ಸಸ್ಯಗಳು ಮತ್ತು ಪ್ರಾಣಿಗಳ ವಿಕಾಸವೇ ಮೊದಲಾದ ವಿಷಯಗಳ ಬಗ್ಗೆ ಆಸಕ್ತರೂ, ಪ್ರಾಣಿಗಳ ಅಧ್ಯಯನಕ್ಕೆ ಎಂದು ಅಭಿವೃದ್ಧಿಯಾದ ಪರಿಕಲ್ಪನೆಗಳು, ಊಹೆಗಳು ಹಾಗೂ ಅಧ್ಯಯನ ಕ್ರಮಗಳನ್ನು ಸಸ್ಯಗಳಿಗೂ, ಸಸ್ಯಗಳದ್ದನ್ನು ಪ್ರಾಣಿಗಳಿಗೂ ಅನ್ವಯಿಸುವವರು. ಚಿತ್ರ: ಕೆವಿನ್ ಬರ್ನ್ಸ್
ಸಮಾಜಜೀವಿ ಜರೀಗಿಡವೇ?
ಬರ್ನ್ಸ್‌ರವರ ಅಧ್ಯಯನದ ಕೇಂದ್ರಬಿಂದು ಪ್ಲೇಟಿಸೀರಿಯಂ ಬೈಫರ್ಕೇಟಮ್ ಎನ್ನುವ ಒಂದು ಮರಜೀವಿ ಜರೀಗಿಡ. ಮರಜೀವಿಗಳೆಂದರೆ ಸಸ್ಯಗಳ ಮೇಲೆಯೇ ಜೀವಿಸುವ ಸಸ್ಯಗಳು. ಇವು ಪರಜೀವಿಗಳಲ್ಲ. ಆದರೆ ಇತರ ಗಿಡಗಳ ಮೇಲೆ ಮೊಳೆತು, ಬೆಳೆಯುತ್ತವೆಯೇ ಹೊರತು ಪರಜೀವಿಗಳಂತೆ ಅವುಗಳಿಂದ ಪೋಷಕಾಂಶಗಳನ್ನು ಹೀರುವುದಿಲ್ಲ. ಮರಜೀವಿಗಳು ತಮಗೆ ಅವಶ್ಯಕವಾದ ಎಲ್ಲ ಪೋಷಕಾಂಶಗಳನ್ನೂ ಗಾಳಿ ಹಾಗೂ ಮಳೆನೀರಿನಿಂದಲೇ ಪಡೆಯುತ್ತವೆ ಎನ್ನುವುದು ನಿಮಗೆ ಅಚ್ಚರಿ ಎನಿಸಬಹುದು. ಸಂತರಂತಹ ಇಂತಹ ಬದುಕಿಗೆ ಬೇಕಾದ ನಾವೀನ್ಯತೆಯ ಬಗ್ಗೆ ವಿಕಾಸವಿಜ್ಞಾನಿಗಳು ಇನ್ನೂ ಗಮನ ಹರಿಸಬೇಕಿದೆ.
ಜರೀಗಿಡಗಳು ಕೂಡ ನಾಳೀಯ ಸಸ್ಯಗಳೇ. ನೀರು ಮತ್ತು ಆಹಾರವನ್ನು ಕೊಂಡೊಯ್ಯಲು ಇವುಗಳಲ್ಲಿಯೂ ಕ್ಸೈಲಮ್ ಮತ್ತು ಫ್ಲೋಯೆಮ್ ಎನ್ನುವ ನಾಳಗಳಿವೆ. ಆದರೆ ಇವು ಬೀಜ ಹುಟ್ಟಿಸುವುದಿಲ್ಲ. ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ, ಜರೀಗಿಡಗಳನ್ನು ಟೆರಿಡೋಫೈಟುಗಳು ಎಂದು ಕರೆಯುತ್ತಿದ್ದರು. ಆದರೆ ಈಗ ಇದನ್ನು ನಿಕಟ ಸಂಬಂಧಿಗಳು ಎನ್ನಿಸಿದ ಹಲವು ಸಸ್ಯವರ್ಗಳನ್ನು ಬೇಕಾಬಿಟ್ಟಿಯಾಗಿ ಸೇರಿಸಿದ ಗುಂಪು ಎಂದು ಪರಿಗಣಿಸಲಾಗುತ್ತದೆ. ಅಪ್ಪಟ ಜರೀಗಿಡಗಳನ್ನು ಈಗ ಪಾಲಿಪೋಡಿಯೋಫೈಟಾ ಎನ್ನುವ ವಿಚಿತ್ರ ಹೆಸರಿನಿಂದ ಕರೆಯುತ್ತಾರೆ. ಇಂತಹ ಗಿಡಗಳಲ್ಲಿ ಕಾಂಡಗಳೂ, ಎಲೆಗಳೂ ಇರುತ್ತವೆ. ದ್ಯುತಿಸಂಶ್ಲೇ಼ಣೆಯ ಮೂಲಕ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ಆದರೆ ಸ್ಪೋರುಗಳು ಎನ್ನುವುದರ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ.
ಪ್ಲೇಟಿಸೀರಿಯಂ ಬೈಫರ್ಕೇಟಮಿನ ಅಪ್ಪಟ ಸಮಾಜಜೀವನ ಹೊಸ ಶೋಧವೆನ್ನಿಸಿದರೂ, ಸಸ್ಯ ನಮಗೆ ಚಿರಪರಿಚಿತವೇ. ಇದನ್ನು ಇಂಗ್ಲೀಷಿನಲ್ಲಿ ಎಲ್ಕ್ ಹಾರ್ನ್ ಫರ್ನ್ ಅಥವಾ ಸ್ಟಾಗ್ ಹಾರ್ನ್ ಫರ್ನ್ ಎನ್ನುತ್ತಾರೆ. ಏಕೆಂದರೆ ಇದರ ಎಲೆಗಳು ಜಿಂಕೆಯ ಕೊಂಬಿನಂತೆ ಕವಲೊಡೆದಿರುತ್ತದೆ. ಸಾಮಾನ್ಯವಾಗಿ ಇದನ್ನು ಮನೆಗಳಲ್ಲಿ ಇಲ್ಲವೇ ತೋಟಗಳಲ್ಲಿ ಅಲಂಕಾರಿಕ ಸಸ್ಯವನ್ನಾಗಿ ಬೆಳೆಸುವುದುಂಟು. ಇದನ್ನು ಮರದ ಹಲಗೆಗಳ ಮೇಲೂ ಬೆಳೆಸಬಹುದು.. ಆರೈಕೆಯೂ ಸುಲಭ.
ಮುನ್ನೆಲೆಯಲ್ಲಿ ಪ್ಲೇಟಿಸೀರಿಯಂ ಬೈಫರ್ಕೇಟಂ ಜರೀಗಿಡದ ಒಂದು ವಸಾಹತುವನ್ನು ಕಾಣಬಹುದು ಚಿತ್ರ: ಕೆವಿನ್ ಬರ್ನ್ಸ್
ಪ್ಲೇಟಿಸೀರಿಯಂ ಬೈಫರ್ಕೇಟಂ ಜರೀಗಿಡವು ಯಾವಾಗಲೂ ಒಂಟಿಯಾಗಿ ಬೆಳೆಯದೇ, ಆರರಿಂದ ಐವತ್ತೆಂಟು ಗಿಡಗಳಿರುವ ಗುಂಪುಗಳಾಗಿ ಬೆಳೆಯುವುದನ್ನು ಬರ್ನ್ಸ್ ತಂಡ ಗುರುತಿಸಿತು. ಪ್ರತಿ ಗುಂಪೂ ಬೇರೆಯವುಗಳಿಂದ ಸಾಕಷ್ಟು ಅಂತರದಲ್ಲಿ ಇರುತ್ತಿದ್ದುವು.
ಈಗಾಗಲೇ ತಿಳಿದಿರುವ ಹಾಗೆ ಈ ಜರೀಗಿಡವು ಎರಡು ಬಗೆಯ ಎಲೆಗಳನ್ನು ತೊಡುತ್ತದೆ. ಇವನ್ನು ಗರಿ ಎನ್ನುತ್ತಾರೆ. ಇವುಗಳಲ್ಲಿ ಸ್ಟ್ರಾಂಡ್ ಗರಿ ಅಥವಾ ರೋಮಗರಿ ಎನ್ನುವ ಬಗೆಯ ಗರಿ ತೆಳುವಾಗಿ ಉದ್ದವಾಗಿರುತ್ತದೆ. ದ್ಯುತಿಸಂಶ್ಲೇಷಣೆಯನ್ನು ಕೈಗೊಳ್ಳುತ್ತದೆ. ಇವುಗಳಲ್ಲಿ ಕೆಲವು ಸಂತಾನೋತ್ಪತ್ತಿ ಕ್ರಿಯೆಯಲ್ಲಿಯೂ ತೊಡಗಿರುತ್ತವೆ. ಇನ್ನೊಂದು ಬಗೆಯವು ನೆಸ್ಟ್ ಅಥವಾ ಗೂಡುಗರಿಗಳು. ಇವು ಸಂತಾನೋತ್ಪತ್ತಿ ಮಾಡವು. ಇವುಗಳ ಕಾರ್ಯವೇನಿದ್ದರೂ ನೀರು ಮತ್ತು ಪೋಷಕಾಂಶಗಳನ್ನು ಹೀರಿಕೊಂಡು ಸಂತಾನೋತ್ಪತ್ತಿ ಮಾಡುವ ಗರಿಗಳ ಜೊತೆಗೆ ಹಂಚಿಕೊಳ್ಳುವುದಷ್ಟೆ.
ಇಷ್ಟೇ ಅಲ್ಲದೆ, ಅಪ್ಪಟ ಸಮಾಜಜೀವನದ ಸುಳಿವು ನೀಡುವ ಇನ್ನೂ ಎರಡು ಪುರಾವೆಗಳನ್ನೂ ಬರ್ನ್ಸ್ ಮತ್ತು ತಂಡ ಒದಗಿಸಿದೆ. ಮೊದಲಿಗೆ ವಸಾಹತುವಿನ ಗಾತ್ರ ಹೆಚ್ಚಾದಂತೆ ತಲಾವಾರು ಸಂತಾನೋತ್ಪತ್ತಿಯ ಕ್ರಿಯೆಯೂ ಅಧಿಕವಾಗುತ್ತದೆ ಎಂದು ಈ ತಂಡ ಗುರುತಿಸಿತು. ಎರಡನೆಯದಾಗಿ, ಡಿಎನ್‌ಎ ವಿಶ್ಲೇಷಣೆಯ ಮೂಲಕ ಎಂಟು ತದ್ರೂಪಿಯೆನ್ನಿಸುವ ವಸಾಹತುಗಳಲ್ಲಿ ಕನಿಷ್ಟ ಎರಡರಲ್ಲಿ ಸಂಬಂಧಿಗಳಲ್ಲದ ಜರೀಗಿಡಗಳು ಇದ್ದುದನ್ನೂ ಗಮನಿಸಿದರು.
ಒಂದು ವಸಾಹತುವಿನಲ್ಲಿ ಇರುವ ಎಲ್ಲ ಜರೀಗಿಡಗಳೂ ಒಂದಿನ್ನೊಂದರ ತದ್ರೂಪು ಆಗಿದ್ದರೆ, ಇಡೀ ವಸಾಹತುವನ್ನು ಒಂದೇ ಗಿಡ ಎಂದು ಹೇಳಿಬಿಡಬಹುದಿತ್ತು. ಆದರೆ ಅದರಲ್ಲಿ ಕೆಲವು ಸಂಬಂಧಿಗಳೇ ಅಲ್ಲದಿದ್ದಾಗ, ಅವನ್ನು ವಸಾಹತು ಎಂದೇ ಪರಿಗಣಿಸಬೇಕಾಗುತ್ತದೆ. ಇದರಲ್ಲಿರುವ ಸಂತಾನೋತ್ಪತ್ತಿ ಮಾಡದ ಗೂಡುಗರಿಗಳು ಸಂತಾನೋತ್ಪತ್ತಿ ಮಾಡುವ ರೋಮಗರಿಗಳಿಗೆ ನೀರು ಮತ್ತು ಆಹಾರವನ್ನು ಒದಗಿಸುವ ತ್ಯಾಗಜೀವಿಗಳೆನ್ನಬಹುದು.
ಮತ್ತೊಂದು ಶೋಧ ಪ್ರಬಂಧದದಲ್ಲಿ ಬರ್ನ್ಸ್ ಪರಿಸರದ ಅವಶ್ಯಕತೆಗಳಿಂದಾಗಿ ಪ್ಲೇಟಿಸೀರಿಯಂ ಬೈಫರ್ಕೇಟಮಿನಲ್ಲಿ ಹೊಣೆಗಾರಿಕೆಯ ವಿತರಣೆ ಇರುವ ಬಗ್ಗೆ ಹಾಗೂ ಅಪ್ಪಟ ಸಮಾಜಜೀವನ ವಿಕಾಸ ಆಗಿರಬಹುದು ಎಂದು ವಾದಿಸಿದ್ದಾರೆ. ಇವರ ತರ್ಕಗಳು ಪ್ರಾಣಿಗಳ ಗುಂಪುಗಳಲ್ಲಿ ಸಮಾಜಜೀವನ ವಿಕಾಸವಾದ ರೀತಿಯ ಬಗ್ಗೆ ಪ್ರಾಣಿವಿಜ್ಞಾನಿಗಳು ಮಾಡುವ ತರ್ಕಗಳಿಂದ ವಿಭಿನ್ನವೇನಲ್ಲ.
ಸಂಪ್ರದಾಯಸ್ಥ ವಿಜ್ಞಾನಿಗಳು ಈ ಬಗ್ಗೆ ಇನ್ನಷ್ಟು ಪುರಾವೆ ಬೇಕು ಎಂದು ಕೂಗೆಬ್ಬಿಸಬಹುದು. ಸಮಾಜಜೀವನದ ಕುರುಹುಗಳಾದ ಹಲವು ಸಂತತಿಗಳ ಸಹಜೀವನ, ಸಹಕಾರದಿಂದ ಸಂತಾನಗಳ ಆರೈಕೆ ಹಾಗೂ ಸಂತಾನೋತ್ಪತ್ತಿ ಮಾಡುವ ಜೀವಿಗಳ ವರ್ಗವೇ ಬೇರೆಯಾಗಿರುವುದಕ್ಕೆ ಪುರಾವೆ ಬೇಕು ಎನ್ನಬಹುದು. ಬರ್ನ್ಸ್ ಮತ್ತು ಸಂಗಡಿಗರು ತಮ್ಮ ಪ್ರಬಂಧದಲ್ಲಿ ಹೀಗಿರಬಹುದೇ ಎಂಬ ಪ್ರಶ್ನೆಯನ್ನಷ್ಟೆ ಕೇಳಿದ್ದಾರೆ ಎನ್ನುವುದು ಸರಿ. ಓದುಗರೋ ಅಥವಾ ಭವಿಷ್ಯದ ಸಂಶೋಧನೆಗಳೋ ಇದಕ್ಕೆ ಉತ್ತರ ಹೇಳಬೇಕಷ್ಟೆ.
ಅದಕ್ಕೇ ಇರಬೇಕು. ಬರ್ನ್ಸ್ ತಂಡ ತಮ್ಮ ಲೇಖನವನ್ನು ಸಾಕಷ್ಟು ಎಚ್ಚರದಿಂದಲೇ ಬರೆದಿದ್ದಾರೆ. “ನಾವು ಈ ಮೂಲಕ ಸಸ್ಯಗಳಲ್ಲಿಯೂ ಅಪ್ಪಟ ಸಮಾಜಜೀವನವೆನ್ನುವ ಪ್ರಮುಖವಾದೊಂದು ವಿಕಾಸ ಕ್ರಿಯೆ ಜರುಗಿರಬಹುದೇ ಎಂದು ಪರೀಕ್ಷಿಸಿದ್ದೇವೆ…” ಎಂದಿದ್ದಾರೆ. ಅದೇನೇ ಇರಲಿ. ಅಪ್ಪಟ ಸಮಾಜಜೀವನ ಅಥವಾ ಸಮಾಜಜೀವನದಂತೆ ತೋರುವ ಬದುಕಿನ ವ್ಯಾಖ್ಯಾನವನ್ನು ವಿಸ್ತರಿಸುವ ಬೆರಗುಗೊಳಿಸುವ ಶೋಧ. ಅದಕ್ಕಿಂತಲೂ ಮುಖ್ಯವಾಗಿ ಇದು ಸಸ್ಯಪ್ರಪಂಚದೊಳಗೆ ಸಮಾಜಜೀವನವನ್ನು ಕರೆತಂದಿದೆ ಎನ್ನಬಹುದು.
ಇದೇಕೆ ಇಷ್ಟು ಮುಖ್ಯ ಎಂದು ಅರಿಯಲು ಸ್ವಲ್ಪ ಚರಿತ್ರೆಯನ್ನು ನೋಡೋಣ.
ಸಮಾಜಜೀವನದ ಪರಿಕಲ್ಪನೆಯ ಉದಯ
ಸೂಸಾನ್ ಬಾತ್ರಾ, ಇಂಡಿಯನ್ ಜರ್ನಲ್ ಆಫ್ ಎಂಟೊಮೊಲಜಿ ಪತ್ರಿಕೆಯಲ್ಲಿ 1966ರಲ್ಲಿ ಪ್ರಕಟವಾದ “ಭಾರತೀಯ ಹಲಿಕ್ಟೈನ್ ಜೇನ್ನೊಣಗಳಲ್ಲಿ ಗೂಡು ಕಟ್ಟುವ ಹಾಗೂ ಸಾಮಾಜಿಕ ನಡವಳಿಕೆಗಳು” ಎಂಬ ಪ್ರಬಂಧದಲ್ಲಿ ಯೂಸೋಶಿಯಲ್ ಅಥವಾ ಅಪ್ಪಟ ಸಮಾಜಜೀವನ ಎನ್ನುವ ಪದವನ್ನು ಮೊತ್ತ ಮೊದಲಿಗೆ ಬಳಸಿದ್ದಳು. ಕಾನ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪದವಿಗಾಗಿ ಹಲಿಕ್ಟಿಡೇ ಕುಟುಂಬಕ್ಕೆ ಸೇರಿದ ಜೇನ್ನೊಣಗಳ ಬಗ್ಗೆ ಸಂಶೋಧನೆ ಮಾಡುವಾಗ ಆಕೆ, ಭಾರತೀಯ ಸಸ್ಯವಿಜ್ಞಾನಿಯಾದ ಲೇಖ್ ಆರ್ ಬಾತ್ರಾ ಅವರನ್ನು ಮದುವೆಯಾಗಿದ್ದಳು. ಭಾರತಕ್ಕೆ ಬಂದಾಗ ಇಲ್ಲಿನ ಹಲೆಕ್ಟೈನ್ ಜೇನ್ನೊಣಗಳನ್ನು ಅಧ್ಯಯನ ಮಾಡಿದ್ದಳು.
ಈ ಅದ್ಭುತ ಜೇನ್ನೊಣಗಳ ಸಮಾಜವನ್ನು ಎಲ್ಲರೂ “ಆದಿಸಮಾಜ” ಎಂದೂ, ಇನ್ನೂ ಜಟಿಲವಾದ ನಡವಳಿಕೆ ಇರುವ ಜೇನ್ನೊಣ, ಇರುವೆ ಹಾಗೂ ಕಣಜಗಳನ್ನು ಮಾತ್ರ ಸಮಾಜಜೀವಿ ಕೀಟಗಳು ಎಂದು ಕರೆಯುತ್ತಿದ್ದುದನ್ನು ಕಂಡು ಬಾತ್ರಾ ಸಿಟ್ಟಾಗಿದ್ದಳು. ಹೀಗಾಗಿ ಈಕೆ ಯೂಸೋಶಿಯಲ್, ಅಥವಾ ಅಪ್ಪಟ ಸಮಾಜಜೀವಿ ಎಂಬ ಪದವನ್ನು ಸರಳವಾಗಿ ಬದುಕುವ, ಆದರೂ ಬಲು ಬೆರಗಿನ ಲೋಕದ ಹಲೆಕ್ಟೈನ್ ಜೇನ್ನೊಣಗಳ ಬಗ್ಗೆ ಬಳಸಿದ್ದಳು. ಆದರೆ ಈ ಗೆಲುವಿನ ಬಲೆಯಲ್ಲಿ ಕೊನೆಗೆ ತಾನೇ ಸಿಲುಕಿಕೊಂಡಳು.
ಈ ಯೂಸೋಶಿಯಲ್ ಅಥವಾ ಅಪ್ಪಟ ಸಮಾಜ ಇಲ್ಲವೇ ನಿಜಸಮಾಜ ಎನ್ನುವ ಪದವನ್ನು ಜನ ಎಷ್ಟು ಮೆಚ್ಚಿಕೊಂಡರು ಎಂದರೆ ಹಲೆಕ್ಟೈನ್ ಜೇನ್ನೊಣಗಳಿಗಷ್ಟೆ ಅಲ್ಲ, ಇರುವೆ, ಜೇನ್ನೊಣಗಳು, ಕಣಜಗಳು ಹಾಗೂ ಗೆದ್ದಲುಹುಳುಗಳಂತಹ ಎಲ್ಲ ಸಮಾಜಜೀವಿ ಕೀಟಗಳಿಗೂ ಇದನ್ನು ಅನ್ವಯಿಸಲು ಅರಂಬಿಸಿದರು. ಸೂಜಾನ್ನಳ ಪ್ರೊಫೆಸರ್ ಚಾರ್ಲ್ಸ್ ಮಿಶೆನರ್, 1969ರಲ್ಲಿ ಬರೆದ “ಕಂಪೇರಿಟಿವ್ ಸೋಶಿಯಲ್ ಬಿಹೇವಿಯರ್ ಆಫ್ ಬೀಸ್” ಅರ್ಥಾತ್ ಜೇನ್ನೊಣಗಳ ಸಾಮಾಜಿಕ ನಡವಳಿಕೆಗಳ ಹೋಲಿಕೆ ಎನ್ನುವ ಪುಸ್ತಕದಲ್ಲಿಯೂ, ಅನಂತರ ಇ.ಓ. ವಿಲ್ಸನ್ 1971ರಲ್ಲಿ ಬರೆದ “ದಿ ಇನ್ಸೆಕ್ಟ್ ಸೊಸೈಟೀಸ್” ಅಥವಾ ಕೀಟಸಮಾಜಗಳು ಎನ್ನುವ ಬೃಹದ್ಗ್ರಂಥದಲ್ಲಿಯೂ ಇದನ್ನು ಬಳಸಿದ ಪರಿಣಾಮವಾಗಿ ಈ ಪದ ಇನ್ನಷ್ಟು ಜನಪ್ರಿಯವಾಯಿತು.
ಜೇ. ಇವಾನ್ ಸುಜಾನಳ ಕುರಿತು ತೆಗೆದ ಸಾಕ್ಷ್ಯಚಿತ್ರದಿಂದ ಒಂದು ಪಟ. ವೀಡಿಯೋ ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ
ಆದರೆ ಬಾತ್ರಾಳು ಹೇಳಿದ್ದಕ್ಕಿಂತಲೂ ಇರುವೆ, ಜೇನ್ನೊಣಗಳು ಹಾಗೂ ಗೆದ್ದಲುಗಳ ಸಮಾಜಗಳು ಇನ್ನೂ ಜಟಿಲ ರಚನೆಯುಳ್ಳವು. ವಿಪರ್ಯಾಸವೆಂದರೆ, ಆಕೆ ಅಧ್ಯಯನ ಮಾಡಿದ ಹಲೆಕ್ಟೈನ್ ಜೇನ್ನೊಣಗಳು ಹಾಗೂ ನಾವು ನಮ್ಮ ಪ್ರಯೋಗಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಪೇಪರ್ ಕಣಜದಂತಹ ಸರಳ ಸಮಾಜ ಜೀವಿಗಳನ್ನು “ನಿಜಸಮಾಜಜೀವಿಗಳ ಆದಿರೂಪ” ಎಂದು ಹೇಳಲು ಆರಂಭಿಸಿಬಿಟ್ಟರು!
ಈ ಬಗ್ಗೆ ಹಲವರಿಗೆ ಅಸಮಾಧಾನವಿದೆ. ಕೆಲವರು ನಿಜಸಮಾಜಜೀವನ ಎನ್ನುವ ಪದವನ್ನು ಕೇವಲ ಇರುವೆ, ಜೇನ್ನೊಣಗಳು ಹಾಗೂ ಗೆದ್ದಲುಗಳಂತಹ ಜಟಿಲ ಸಮಾಜ ವ್ಯವಸ್ಥೆ ಇರುವ ಜೀವಿಗಳಿಗಷ್ಟೆ ಮೀಸಲಿಡಬೇಕು ಎಂದು ಸೂಚಿಸಿದ್ದಾರೆ. ನನ್ನಂಥ ಕೆಲವರು ಮರಿಗಳ ಆರೈಕೆಯಲ್ಲಿ ಸಹಕಾರ ನೀಡುವ ಹಕ್ಕಿಗಳು, ಸ್ತನಿಗಳನ್ನು ವಿವರಿಸುವಂತೆ ಇದರ ಅರ್ಥವನ್ನು ವಿಸ್ತರಿಸಬೇಕೆನ್ನುತ್ತಾರೆ. ಈ ಪ್ರಾಣಿಗಳ ಸಾಮಾಜಿಕ ಬದುಕು ಜೇನ್ನೊಣಗಳು, ಇರುವೆ ಹಾಗೂ ಗೆದ್ದಲುಗಳಿಗಿಂತಲೂ, ನಿಜಜೀವನದ ಆದಿರೂಪವಾದ ನೊಣಗಳೂ ಹಾಗೂ ಕಣಜಗಳ ಸಮಾಜಗಳನ್ನು ಹೆಚ್ಚು ಹೋಲುತ್ತವೆ.
ನನಗೇಕೋ ಈ ಪದ ಈಗ ಗಟ್ಟಿಯಾಗಿ ದೆ ಎನಿಸುತ್ತದೆ, ಇದರ ಅರ್ಥವನ್ನು ನಾವು ಬದಲಿಸಬಹುದು ಎನ್ನುವುದರಲ್ಲಿ ಸಂದೇಹವಿದೆ. ವೈಜ್ಞಾನಿಕ ಪದಗಳು ಹಲವೊಮ್ಮೆ ಚಾರಿತ್ರಿಕ ಅವಶ್ಯಕತೆಗಳ ಸಂತಾನಗಳಾಗಿರುತ್ತವೆ. ನಿರ್ದುಷ್ಟತೆಗಿಂತಲೂ ಬಳಕೆಯ ಆದ್ಯತೆಯೇ ಪ್ರಥಮವಾಗುತ್ತದೆ.
ನಿಜಸಮಾಜಜೀವಿಗಳ ಅಧ್ಯಯನದ ವಿಕಾಸ.
ಅದು ಏನೇ ಇರಲಿ. ನಿಜಸಮಾಜಜೀವನದ ಅಧ್ಯಯನವೆನ್ನುವುದು ಈಗ ಇರುವೆ, ಜೇನ್ನೊಣಗಳು, ಕಣಜಗಳು ಹಾಗೂ ಗೆದ್ದಲುಗಳನ್ನೂ ಮೀರಿ ಮುನ್ನಡೆದಿದೆ.
1977ರಲ್ಲಿ ಶಿಗೆಯುಕಿ ಆವೋಕಿ ಎನ್ನುವ ಜಪಾನೀ ವಿಜ್ಞಾನಿಯು ಗಿಡಹೇನೊಂದರಲ್ಲಿ ಸಂತಾನಹೀನ ಕಾರ್ಮಿಕ ವರ್ಗದ ಕೀಟಗಳಿರುವುದನ್ನು ಪತ್ತೆ ಮಾಡಿದ್ದು, ನಿಜಸಮಾಜಜೀವನ ಎನ್ನುವುದು ಹೈಮೆನಾಪ್ಟೆರಾ ಹಾಗೂ ಐಸೋಪ್ಟೆರಾ ಶ್ರೇಢಿಗಳಿಗೆ ಸೇರದ ಕೀಟಗಳಲ್ಲಿಯೂ ಇದೆ ಎಂದು ತೋರಿಸಿತು. ಗಿಡಹೇನುಗಳು ಹೆಮಿಪ್ಟೆರಾ ಎನ್ನುವ ಶ್ರೇಢಿಗೆ ಸೇರಿದ ಸಸ್ಯಗಳ ರಸವನ್ನು ಹೀರಿ ಬದುಕುವ ಕೀಟಗಳು.
ಅನಂತರದ ಸಂಶೋಧನೆಗಳು, ಗಿಡಹೇನುಗಳಲ್ಲಿಯೂ ತ್ಯಾಗಿ ಸೈನಿಕರಲ್ಲದೆ, ಇಡೀ ವಸಾಹತುವಿನ ಒಳಿತಿಗೆ ಅವಶ್ಯಕವಾದಂತಹ ಮನೆಗೆಲಸಗಳನ್ನು ಕೈಗೊಳ್ಳುವ ತ್ಯಾಗಿ ಕಾರ್ಮಿಕರೂ ಇವೆ ಎಂದು ನಿರೂಪಿಸಿದುವು. 1991ರಲ್ಲಿ ಡಬ್ಲ್ಯೂ. ಡಿ. ಹ್ಯಾಮಿಲ್ಟನ್, ಮೇರಿ ಜೇನ್ ವೆಸ್ಟ್-ಎಬರ್ಹಾರ್ಡ್ ಮತ್ತು ಯೋಶಿಯಾಕಿ ಇಟೋ ಜೊತೆಗೂಡಿ ಬಲು ಕುತೂಹಲದಿಂದ ಅವೋಕಿಯವರು ಕಂಡು ಹಿಡಿದ ಗಿಡಹೇನುಗಳ ಸೈನಿಕರನ್ನು ನೋಡಲು ಹೋಗಿದ್ದು ಇನ್ನೂ ನೆನಪಿನಲ್ಲಿದೆ.
ಜಪಾನಿನಲ್ಲಿ ಅವೋಕಿಯವರ ಜೊತೆ ಗಿಡಹೇನುಗಳ ಸೈನಿಕರ ಅನ್ವೇಷಣೆಯಲ್ಲಿ. ಎಡದಿಂದ ಬಲಕ್ಕೆ: ಡಬ್ಲ್ಯೂ.ಡಿ.ಹ್ಯಾಮಿಲ್ಟನ್, ಲೇಖಕರು, ಯೋಸಿಯಾಕಿ ಇಟೋ, ನೋರಿಯೋ ಅರಕಾಕಿ ಹಾಗೂ ಮೇರಿ ಜೇನ್ ವೆಸ್ಟ್-ಎಬರ್ಹಾರ್ಡ್. ಚಿತ್ರ: ಆರ್. ಜಿ. ಲ್ಯಾಬ್ ಸಂಗ್ರಹ
1992ರಲ್ಲಿ ಈ ನಿಜಸಮಾಜಜೀವಿಗಳ ಪಟ್ಟಿಗೆ ಇನ್ನೂ ಎರಡು ಕೀಟಗಳ ಶ್ರೇಢಿಗಳು ಸೇರಿಕೊಂಡವು. ಕೆನಡಾದ ಸೈಮನ್ ಫ್ರೇಸರ್ ವಿಶ್ವವಿದ್ಯಾನಿಲಯದ ಬರ್ನಾರ್ಡ್ ಕ್ರೆಸ್ಪಿ ತೈಸನಾಪ್ಟೆರಾ ಶ್ರೇಢಿಗೆ ಸೇರಿದ ಕೀಟಗಳಾದ ಆಸ್ಟ್ರೇಲಿಯನ್ ಗಾಲ್ ತ್ರಿಪ್ಸ್‌ಗಳಲ್ಲಿ ನಿಜಸಮಾಜಜೀವನದ ಕುರುಹುಗಳನ್ನು ಪತ್ತೆ ಮಾಡಿದರು. ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ನಲ್ಲಿದ್ದ ವನ್ಯ ಪ್ರಾಧಿಕಾರದ ವಿಜ್ಞಾನಿಗಳಾದ ಕೆಂಟ್ ಮತ್ತು ಸಿಂಪ್ಸನ್ ಆಸ್ಟ್ರೊಪ್ಲಾಟಿಪಸ್ ಇಂಕಂಪೆರ್ಟಸ್ ಎನ್ನುವ ಕೋಲಿಯೋಪ್ಟೆರಾ ಶ್ರೇಢಿಗೆ ಸೇರಿದ, ನೀಲಗಿರಿ ಮರಗಳಲ್ಲಿ ವಾಸಿಸುವ ದುಂಬಿಗಳಲ್ಲಿಯೂ ನಿಜಸಮಾಜಜೀವನವಿದೆ ಎಂದು ತೋರಿಸಿದರು.
ನಿಜಸಮಾಜಜೀವನದ ಸಾಮ್ರಾಜ್ಯ ಹೀಗೆ ವಿಸ್ತಾರವಾದುದರ ಹಿಂದೆಯೇ ವರ್ಜಿನೀಯಾದಲ್ಲಿರುವ ವರ್ಜೀನಿಯಾ ಸಾಗರ ಸಂಶೋಧನಾಲಯದ ಜೆ. ಎಮೆಟ್ ಡಫಿ, 1996ರಲ್ಲಿ ಅಲ್ಲಿನ ಹವಳದಿಬ್ಬಗಳಲ್ಲಿ ವಾಸಿಸುವ ಸೀಗಡಿಗಳಲ್ಲಿಯೂ ನಿಜಸಮಾಜಜೀವನವಿದೆ ಎಂದು ತೋರಿಸಿದನು. ಹೀಗೆ ನಿಜಸಮಾಜಜೀವನ ಆರ್ತ್ರೊಪೋಡಾ ಎನ್ನುವ ಸಂಧಿಪದಿಗಳಲ್ಲಿ ಇನ್ಸೆಕ್ಟಾ ಎನ್ನುವ ಕೀಟಗಳ ಕುಟುಂಬದ ಆಚೆಗೆ, ಕಂಟಕಚರ್ಮಿಗಳು ಎನ್ನುವ ಕ್ರಸ್ಠೇಶಿಯಾ ಕುಟುಂಬದ ಜೀವಿಗಳಲ್ಲಿಯೂ ಇದೆ ಎಂದು ತಿಳಿಯಿತು.
ವಿಜ್ಞಾನಿಗಳು ಹೀಗೆ ಹೊಸದಾಗಿ ಪತ್ತೆಯಾದ ಎಲ್ಲ ನಿಜಸಮಾಜಜೀವಿಗಳ ಬದುಕನ್ನೂ ಕೂಲಂಕಷವಾಗಿ ಅಧ್ಯಯನ ಮಾಡಿದ್ದಾರೆ. ಉದಾಹರಣೆಗೆ, ಸೀಗಡಿಗಳಲ್ಲಿನ ನಿಜಸಮಾಜಜೀವನದ ಅಧ್ಯಯನ, ಜೀನೋಮ್ ವಿಕಾಸ ಹಾಗೂ ಜೀನೋಮ್ ವಿನ್ಯಾಸಗಳ ಅಧ್ಯಯನ ದೊರಕಿಸಿದ ಮಾಹಿತಿಗಳ ಹಿನ್ನೆಲೆಯಲ್ಲಿ ಉತ್ಕರ್ಷಕ್ಕೇರಿದೆ ಎನ್ನಬಹುದು. ದುಂಬಿಗಳಲ್ಲಿನ ನಿಜಸಮಾಜಜೀವನದ ಅಧ್ಯಯನವೂ ಕೂಡ ಈ ಕೀಟಗಳ ಬೂಸು ಕೃಷಿಯಂತಹ ಕೃಷಿ ಚಟುವಟಿಕೆಯ ಸೂಕ್ಷ್ಮಗಳನ್ನು ತೆರೆದಿಡುತ್ತಾ ಹೊಸ ಗತಿಯನ್ನು ಪಡೆದುಕೊಂಡಿದೆ.
ಕಶೇರುಕವೆಂಬ ತೊಡರು
ಇವೆಲ್ಲಕ್ಕಿಂತಲೂ ಅಚ್ಚರಿಗೊಳಿಸುವ ಶೋಧವೆಂದರೆ, 1981ರಷ್ಟು ಹಿಂದೆಯೇ ದಕ್ಷಿಣ ಆಫ್ರಿಕಾದಲ್ಲಿ ಜೆನ್ನಿಫರ್ ಜಾರ್ವಿಸ್, ನೇಕೆಡ್ ಮೋಲ್ ರಾಟ್ ಎನ್ನುವ ಹೆಗ್ಗಣದಲ್ಲಿಯೂ ನಿಜಸಮಾಜಜೀವನ ಇದೆ ಎಂದು ತೋರಿಸಿದ್ದು. ಈ ಅಚ್ಚರಿಗೆ ಕಾರಣವೇನೆಂದರೆ, ನಿಜಸಮಾಜಜೀವನದ ಅಧ್ಯಯನ ಕೀಟಗಳನ್ನು ಬಿಟ್ಟು ಕೇವಲ ಕಶೇರುಕಗಳನ್ನಷ್ಟೆ ಅಲ್ಲ, ಅವುಗಳಲ್ಲಿಯೂ ಅತ್ಯಂತ ಉನ್ನತ ಸ್ತರ ಎನ್ನಿಸಿದ ಸ್ತನಿಗಳನ್ನು ತಲುಪಿತು ಎನ್ನುವುದು.
ಮಿಶಿಗನ್ ವಿಶ್ವವಿದ್ಯಾನಿಲಯದಲ್ಲಿ ಜೀವಿವಿಜ್ಞಾನಿ ಆಗಿರುವ ರಿಚರ್ಡ್ ಅಲೆಕ್ಸಾಂಡರ್ ಜೀರುಂಡೆಗಳನ್ನು ಕುರಿತು ಒಂದು ಅನುಪಮ ಊಹೆಯನ್ನು ಮಂಡಿಸಿದ್ದು ಈ ಅಚ್ಚರಿ, ಉತ್ಸಾಹವನ್ನು ಇನ್ನಷು ಹೆಚ್ಚಿಸಿತ್ತು. ಈತ ನಿಜಸಮಾಜಜೀವನವನ್ನು ಪಾಲಿಸುವ ಸ್ತನಿ ಎಂಬುದೊಂದು ಇದ್ದರೆ ಅದು “ಸಂಪೂರ್ಣ ಬೇಟೆಗಾರರಿಗೆ ಯಾರಿಗೂ ಕೈಗೆಟುಕದಂತೆ ಮರುಭೂಮಿಯಂತಹ ಭಾರೀ ಜೇಡಿ ಮಣ್ಣಿನ ನೆಲದ ಅಡಿಯಲ್ಲಿ ವಾಸಿಸುತ್ತಾ, ಗೆಡ್ಡೆಗೆಣಸುಗಳನ್ನು ತಿಂದು ಬದುಕುವ, ದಂಶಕ ವರ್ಗಕ್ಕೆ ಸೇರಿದ ಜೀವಿಯೇ ಆಗಿರುತ್ತದೆ” ಎಂದಿದ್ದ.
ಒಮ್ಮೊಮ್ಮೆ ಜನ ಮನುಷ್ಯರನ್ನೂ ನಿಜಸಮಾಜಜೀವಿಗಳು ಎಂದು ಪರಿಗಣಿಸಬಹುದೇ ಎಂದು ನನ್ನನ್ನು ಕೇಳಿದ್ದುಂಟು. ನಾವು ಮನುಷ್ಯರೂ ಅತ್ಯಂತ ಸುಸಜ್ಜಿತವಾದ ಸಮಾಜದಲ್ಲಿ ಜೀವಿಸುತ್ತಿದ್ದೇವಷ್ಟೆ ಅಲ್ಲ, ಈ ಭೂಮಿಯನ್ನು ಆಳುವ ನಮ್ಮ ನಡವಳಿಕೆಯ ಕೇಂದ್ರವೇ ಈ ಸಮಾಜಜೀವನವಲ್ಲವೇ? ಅಂದ ಹಾಗೆ ನಾವು ಭೂಮಿಯನ್ನು ಆಳುತ್ತಿದ್ದೇವೆ ಎಂದುಕೊಳ್ಳುವುದರ ಬಗ್ಗೆ ನನಗೆ ಖೇದವಿದೆ.
ಮನುಷ್ಯರು ನಿಜಸಮಾಜಜೀವಿಗಳೋ ಅಲ್ಲವೋ ಎನ್ನುವ ಬಗ್ಗೆ ನಾನಿನ್ನೂ ಖಚಿತ ನಿರ್ಧಾರ ತಳೆದಿಲ್ಲದಿದ್ದಾಗ 2005ರಲ್ಲಿ ಹೊಸದೊಂದು ನಿಜಸಮಾಜಜೀವಿ ಕಶೇರುಕ? ಎನ್ನುವ ಪ್ರಬಂಧವೊಂದು ಓದಲು ಸಿಕ್ಕಿತು. ಇದನ್ನು ರೈಸ್ ವಿಶ್ವವಿದ್ಯಾನಿಲಯದಲ್ಲಿ ಪರಿಸರ ವಿಜ್ಞಾನ ಹಾಗೂ ವಿಕಾಸ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರಾಗಿದ್ದ ಕೆವಿನ್ ಆರ್ ಫಾಸ್ಟರ್ ಮತ್ತು ಶೆಫೀಲ್ಡ್ ವಿಶ್ವವಿದ್ಯಾನಿಲಯದ ಪ್ರಾಣೀವಿಜ್ಞಾನ ಹಾಗೂ ಸಸ್ಯವಿಜ್ಞಾನ ವಿಭಾಗದ ಫ್ರಾನ್ಸಿಸ್ ಎಲ್ ಡಬ್ಲ್ಯೂ ರೇಟ್ನಿಕ್ಸ್ ಬರೆದಿದ್ದರು.
ಅಂದ ಹಾಗೆ ಈ ಪ್ರಬಂಧದ ಶೀರ್ಷಿಕೆಯೂ ಉತ್ತರವಲ್ಲ, ಪ್ರಶ್ನೆಯಾಗಿಯೇ ಇದೆ ಎನ್ನುವುದನ್ನು ಗಮನಿಸಿ. ಹೊಸ ವಾದಗಳನ್ನು ಮಂಡಿಸುವ ಪ್ರಬಂಧಗಳು ಹೀಗಿರುವುದೇ ಸರಿಯಷ್ಟೆ. ಸಂತಾನೋತ್ಪತ್ತಿಯ ಸಾಮರ್ಥ್ಯ ಕುಂದಿದ ನಂತರವೂ ಬಲು ದೀರ್ಘಕಾಲ ಮಹಿಳೆಯರು ಬದುಕಿರುತ್ತಾರೆ ಎನ್ನುವುದು ಮನುಷ್ಯರಲ್ಲಿ ಗೊತ್ತಿರುವ ವಿಷಯ. ಇದನ್ನೇ ಮುಟ್ಟು ನಿಲ್ಲುವುದು ಎಂದು ಹೇಳುತ್ತೇವಷ್ಟೆ.
ಮುಟ್ಟು ನಿಲ್ಲುವುದು ಎಂದರೆ ಇನ್ನೇನಲ್ಲ. ಯಾರೋ ಯೋಜಿಸಿದಂತೆ ತಟಕ್ಕನೆ ಸಂತಾನೋತ್ಪತ್ತಿ ಕ್ರಿಯೆ ನಿಂತು, ಜೊತೆಗೇ ಹಲವು ಜೈವಿಕ ಬದಲಾವಣೆಗಳೂ ಕಾಣಿಸಿಕೊಳ್ಳುತ್ತವೆ. ಈ ಮುಟ್ಟು ನಿಲ್ಲುವುದರಿಂದ ಒಟ್ಟಾರೆ ಮಹಿಳೆಯರ ಸಂತಾನೋತ್ಪತ್ತಿ ಮಾಡುವ ಕ್ಷಮತೆ ಸುಧಾರಿಸುತ್ತದೆ ಎನ್ನುವುದಕ್ಕೆ ಪುರಾವೆಗಳು ಹೆಚ್ಚುತ್ತಿವೆ. ಕೆಲವು ಮಾನವ ಸಮಾಜಗಳಿಂದ ದೊರೆತ ಮಾಹಿತಿಗಳ ಪ್ರಕಾರ ಮುಟ್ಟು ನಿಂತ ಮಹಿಳೆಯರು, ತಮ್ಮ ಸಂತಾನಗಳು ಹೆಚ್ಚು ಮಕ್ಕಳನ್ನು ಹೆರುವಂತೆ ಅವರಿಗೆ ನೆರವಾಗಿ ನಿಲ್ಲುತ್ತಾರೆ. ಇದನ್ನು “ತಾಯಿಪ್ರಭಾವ” ಎಂದೂ, ಸಂತಾನಗಳ ಮಕ್ಕಳ ಉಳಿವು ಹೆಚ್ಚುವುದನ್ನು “ಅಜ್ಜಿಯ ಪ್ರಭಾವ” ಎಂದೂ ಹೇಳಲಾಗುತ್ತದೆ.
ನಿಜಸಮಾಜಜೀವನದ ಮೂರು ಲಕ್ಷಣಗಳಲ್ಲಿ, ಹಲವು ಸಂತತಿಗಳು ಒಟ್ಟಿಗೇ ಜೀವಿಸುವುದು, ಒಟ್ಟಾಗಿ ಸಂತಾನಗಳ ಆರೈಕೆ ಮಾಡುವುದು, ಎನ್ನುವ ಎರಡು ಲಕ್ಷಣಗಳು ಮನುಷ್ಯ ಸಮಾಜದಲ್ಲಿ ಇದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಮುಟ್ಟು ನಿಂತ ನಂತರದ ಮಹಿಳೆಯರನ್ನು ಕೀಟ ಸಮಾಜದ ಸಂತಾನರಹಿತ ಕಾರ್ಮಿಕರಂತೆ ಎಂದುಕೊಂಡರೆ, ಡಾರ್ವಿನ್ ಹೇಳಿದ ಸಂತಾನೋತ್ಪತ್ತಿ ಸಾಮರ್ಥ್ಯದ ಮಾನಕಗಳ ಪ್ರಕಾರ, ಮನುಷ್ಯರು ನಿಜಸಮಾಜಜೀವನದ ಮೂರನೆಯ ಹಾಗೂ ಬಲು ಪ್ರಮುಖವಾದ ಲಕ್ಷಣವಾದ, ಸಂತಾನೋತ್ಪತ್ತಿಯ ವಿತರಣೆಯನ್ನೂ ತೋರುತ್ತಾರೆ ಎನ್ನಬಹುದು.
ನಿಜಸಮಾಜಜೀವನದ ಪಟ್ಟಿಯಲ್ಲಿ ಮನುಷ್ಯರನ್ನು ಸೇರಿಸುವುದು, ಒಂದೇ ತೆರನ ಉಳಿವಿನ ಸಾಮರ್ಥ್ಯ ಹೆಚ್ಚಿಸುವ ನಡವಳಿಕೆಗಳನ್ನು ತೋರುವ ಎಲ್ಲ ಪ್ರಾಣಿಪ್ರಭೇದಗಳನ್ನೂ ಸಮಾನವಾಗಿ ಕಾಣುವ ನೀತಿಗೆ ತಕ್ಕಂತೆ ಸರಿ ಎನ್ನಿಸುತ್ತದೆ.
ಸಸ್ಯಗಳ ರಂಗಪ್ರವೇಶ
ಕೆವಿನ್ ಬರ್ನ್ಸ್ ಮತ್ತು ಅವರ ಸಂಗಡಿಗರು ಪ್ರಾಣಿ ಹಾಗೂ ಸಸ್ಯ ಪ್ರಪಂಚಗಳ ನಡುವೆ ಇರುವ ಸೀಮೆಯನ್ನು ಹರಿದು, ಸಸ್ಯಪ್ರಪಂಚದಲ್ಲಿಯೂ ನಿಜಸಮಾಜಜೀವಿಗಳನ್ನು ಸೇರಿಸಲು ಯತ್ನಿಸಿದ ಬಗ್ಗೆ ತಿಳಿದೆವಷ್ಟೆ. ಇದು ಮನುಷ್ಯರಿಗೆ ನಿಜಸಮಾಜಜೀವಿಗಳೆಂಬ ಪಟ್ಟ ಕಟ್ಟುವುದಕ್ಕಿಂತಲೂ ಅದ್ಭುತವಾದದ್ದು. ಏಕೆ ಗೊತ್ತೇ? ಏಕೆಂದರೆ, ನಾವು ಯಾರೂ ಸಾಮಾನ್ಯವಾಗಿ ಗಿಡಮರಗಳಲ್ಲಿ ನಡವಳಿಕೆ ಎನ್ನುವುದು ಇದೆ ಎಂದು ಯೋಚಿಸುವುದೇ ಇಲ್ಲ. ಇನ್ನು ನಿಜಸಮಾಜಜೀವನ ಹಾಗೂ ತ್ಯಾಗಜೀವನದ ಮಾತು ಬಿಡಿ. ಆದರೆ ಈಗ ಇವೆಲ್ಲ ಕೇವಲ ಶಬ್ದಗಳ ಆಟ ಎನ್ನಿಸಿದೆ.
1980, 1990ರ ದಶಕಗಳಲ್ಲಿ ನಾನು ವಿಕಾಸ ವಿಜ್ಞಾನ ಕುರಿತು, ವಿಶೇಷವಾಗಿ ಸಮಾಜಜೀವಿವಿಜ್ಞಾನ, ಹಾಗೂ ನಡವಳಿಕೆಯ ಪರಿಸರವಿಜ್ಞಾನದಲ್ಲಿ ಅತ್ಯುತ್ಸಾಹವಿದ್ದ ಯುವ ವಿಕಾಸವಿಜ್ಞಾನಿಗಳ ಸಂಘವೊಂದರ ಜೊತೆಗೆ ಒಡನಾಡುತ್ತಿದ್ದೆ. ತ್ಯಾಗ, ಸ್ವಾರ್ಥ, ಪೋಷಕರು-ಸಂತಾನಗಳ ಸಂಘರ್ಷ, ದಾಯಾದಿ ಮತ್ಸರ, ಶಿಶು ಹತ್ಯೆ ಮೊದಲಾದ ಸಾಮಾಜಿಕ ನಡವಳಿಕೆಗಳಿಗೆ ವಿಕಾಸವಿಜ್ಞಾನದ ಬೆಳಕಿನಲ್ಲಿ ವಿವರಣೆಗಳನ್ನು ಕಾಣುವ ಬಗ್ಗೆ ನಮಗೆಲ್ಲ ಉತ್ಸಾಹವಿತ್ತು.
ನಮ್ಮಲ್ಲಿ ಎಲ್ಲರೂ ಒಂದಲ್ಲ ಒಂದು ಪ್ರಾಣಿಯನ್ನು ಅಧ್ಯಯನ ಮಾಡುತ್ತಿದ್ದೆವು. ಜೇನ್ನೊಣಗಳಿಂದ ಕಣಜಗಳವರೆಗೆ, ಜಿಂಕೆಗಳಿಂದ ಆನೆಗಳವರೆಗೆ ಪ್ರಾಣಿಗಳ ಅಧ್ಯಯನ ಮಾಡುತ್ತಿದ್ದೆವು. ನಮ್ಮಲ್ಲಿ ಇಬ್ಬರು, ಅಲ್ಲಲ್ಲ ಒಂದು ಜೋಡಿ ಎನ್ನೋಣ, ಈ ತತ್ವಗಳನ್ನು ಸಸ್ಯ ಪ್ರಪಂಚಕ್ಕೂ ಹೊಂದಿಸವ ಸಾಹಸಕ್ಕೆ ಎಳಸಿದರು. ಇವರೇ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ತಳಿವಿಜ್ಞಾನ ಹಾಗೂ ಸಸ್ಯ ತಳಿ ಅಭಿವೃದ್ಧಿ ವಿಭಾಗದ ಆರ್. ಉಮಾಶಂಕರ್ ಹಾಗೂ ಕೆ.ಎನ್.ಗಣೇಶಯ್ಯ.
ಉಮಾಶಂಕರ್ ಮತ್ತು ಗಣೇಶಯ್ಯ ಜೋಡಿ ಹಲವು ವಿಷಯಗಳಲ್ಲಿ ಅಸಾಮಾನ್ಯರೆನ್ನಬೇಕು. ಇವರಿಬ್ಬರೂ ಯಾವಾಗಲೂ ಒಟ್ಟಿಗೇ ಕೆಲಸ ಮಾಡುತ್ತಿದ್ದರು. ಸಸ್ಯಗಳ ವಿಕಾಸದ ಬಗ್ಗೆ ಇವರು ನಡೆಸಿದ ಅಧ್ಯಯನಗಳೆಲ್ಲವೂ ಅವರ ನಿತ್ಯದ ಕೆಲಸಗಳಾಚೆಗಿನ ಹವ್ಯಾಸಗಳಾಗಿದ್ದುವು. ಅವರ ಚುರುಕಾದ ಬುದ್ಧಿ, ವಾದ ಪ್ರವೃತ್ತಿ ಹಾಗೂ ಸಹಜ ಆಕರ್ಷಕ ವ್ಯಕ್ತಿತ್ವದಿಂದಾಗಿ ನಮ್ಮ ಸಂಘದಲ್ಲಿ ಎದ್ದು ತೋರುತ್ತಿದ್ದರು. ಗಣೇಶಯ್ಯ ಒಬ್ಬ ಸುಪ್ರಸಿದ್ಧ ಕನ್ನಡ ಕಾದಂಬರಿಕಾರರೂ, ಸಣ್ಣಕಥೆಗಾರರೂ ಹೌದು. ಸುಮಾರು ಇಪ್ಪತ್ತೈದು ಕಾದಂಬರಿಗಳನ್ನು ಬರೆದಿದ್ದಾರೆ.
ಆರ್. ಉಮಾಶಂಕರ್ (ಎಡ) ಹಾಗೂ ಕೆ. ಎನ್. ಗಣೇಶಯ್ಯ. ಚಿತ್ರಗಳು: ಉಮಾಶಂಕರ್ ಮತ್ತು ಗಣೇಶಯ್ಯ
ಈ ಜೋಡಿ “ಸಸ್ಯಗಳು ಹಾಡಲಾರವು, ಕುಣಿಯಲಾರವು. ಆದರೂ ಅವು ದಾಯಾದಿ ಮತ್ಸರ ತೋರುತ್ತವೆ. ಸಹೋದರ ಹತ್ಯೆ ಮಾಡುತ್ತವೆ. ಪ್ರಾಣಿಗಳಂತೆಯೇ ಸಂಬಂಧಿಗಳಲ್ಲಿ ಸಹಕಾರವಿರುತ್ತದೆ.” ಎಂದು ನಮಗೆ ನಿತ್ಯವೂ ಬೋಧಿಸುತ್ತಿದ್ದರು. ಇಂತಹ ಮಾನವಕೇಂದ್ರಿತ ನಡವಳಕೆಗಳನ್ನು ಸಸ್ಯಗಳಿಗೆ ಅನ್ವಯ ಮಾಡುವುದನ್ನು ತಪ್ಪು ಎನ್ನುವವರೂ ಇದ್ದರೆನ್ನಿ. ಹಾಗೆ ಈಗಲೂ ವಾದಿಸುವವರು ಈಗಲೂ ಇದ್ದಾರೆ.
ದುರದೃಷ್ಟ ಎಂದರೆ ಇದು ಒಂದು ತಪ್ಪು ತಿಳುವಳಿಕೆಯ ಫಲ. ನಾವು ಬೀಜವೊಂದು ತನಗೆ ಅಗತ್ಯವಿರುವುದಕ್ಕಿಂತಲೂ ಹೆಚ್ಚು ಪೋಷಕಾಂಶಗಳನ್ನು ಉಪಯೋಗಿಸುವ ಸ್ವಾರ್ಥ ತೋರುತ್ತದೆ ಎನ್ನುವುದು ಒಂದು ಚುಟುಕು ನುಡಿ ಅಷ್ಟೆ. ಇದರ ವಿಸ್ತಾರವಾದ ವಿವರಣೆ ಹೀಗಿರುತ್ತದೆ: “ಬೀಜದಲ್ಲಿರುವ ಯಾವುದೇ ತಳಿಗುಣ ಅಥವಾ ಜೀನ್ ಬೀಜಕ್ಕೆ ಹೆಚ್ಚು ಪೋಷಕಾಂಶಗಳನ್ನು ಉಪಯೋಗಿಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಕೊಡುತ್ತದೆಯಾದರೆ ಅದರ ಪ್ರಮಾಣ, ಆ ಸಮೂಹದಲ್ಲಿರುವ ಒಟ್ಟಾರೆ ಜೀನ್‌ಗಳಲ್ಲಿ, ಹೀಗೆ ಹೆಚ್ಚು ಪೋಷಕಾಂಶಗಳನ್ನು ಬಳಸಲು ನೆರವಾಗದ ಇತರೆ ಜೀನ್ ಗಳ ಪ್ರಮಾಣಕ್ಕಿಂತಲೂ ಹೆಚ್ಚು ಆಗಬಹುದು.”
ಅಂದರೆ ಇಷ್ಟೆ. ಬೀಜವು ಪ್ರಜ್ಞಾಪೂರ್ವಕಾಗಿ ಸ್ವಾರ್ಥಿಯಾಗಿರಲು ತೀರ್ಮಾನಿಸುತ್ತಿದೆ ಎಂದು ನಾವು ಹೇಳುತ್ತಿಲ್ಲ. ಅಷ್ಟೇ ಯಾಕೆ. ಪ್ರಾಣಿಗಳಲ್ಲಿಯೂ, ಮನುಷ್ಯರಲ್ಲಿಯೂ ಈ ರೀತಿಯ ಸ್ವಾರ್ಥದ ನಡವಳಿಕೆಗಳು ಉದ್ದೇಶ ಪೂರ್ವಕವೋ, ಪ್ರಜ್ಞಾಪೂರ್ವಕವೋ ಎಂದೂ ನಾವು ತಿಳಿಯುವುದಿಲ್ಲ. ಅಂದ ಮೇಲೆ ನಿಸರ್ಗದ ಆಯ್ಕೆ ಎನ್ನುವ ಪ್ರಕ್ರಿಯೆ ಸಸ್ಯಗಳಲ್ಲಿ ಬೇರೆಯಾಗಿರಲಿಕ್ಕಿಲ್ಲ ಅಲ್ಲವೇ?
ಸಸ್ಯಗಳ ನಡವಳಿಕೆಯ ಬಗ್ಗೆ ಬೆರಗುಗೊಳಿಸುವ ಅಧ್ಯಯನಗಳನ್ನು ನಡೆಸಿದ್ದಲ್ಲದೆ, ಉಮಾಶಂಕರ್ ಮತ್ತು ಗಣೇಶಯ್ಯ ಹಲವು ವಿವರಣಾತ್ಮಕ ಪ್ರಬಂಧಗಳನ್ನು ಭಾರತ ಹಾಗೂ ವಿದೇಶಗಳಲ್ಲಿ ಪ್ರಕಟಿಸಿದ್ದಾರೆ. ಇಂತಹ ಇವರ ಲೇಖನಗಳಲ್ಲಿ, ಕೆ.ಎಸ್. ಬಾವಾ ಅವರ ಜೊತೆಗೂಡಿ ಬರೆದಿರುವ ಲೇಖನವೊಂದು ಬಹಳ ಜನಪ್ರಿಯವಾಗಿದೆ. ಪೋಷಕರು-ಸಂತಾನಗಳ ಸಂಘರ್ಷ, ದಾಯಾದಿ ಮತ್ಸರ ಹಾಗೂ ಸಸ್ಯಗಳಲ್ಲಿ ಬೀಜಪ್ರಮಾಣದ ವಿನ್ಯಾಸಗಳು ಎನ್ನುವದು ಇದರ ಶೀರ್ಷಿಕೆ. ಮತ್ತೊಂದರ ಶೀರ್ಷಿಕೆ ಹೀಗಿದೆ. ಸಸ್ಯಗಳಲ್ಲಿ ಪೋಷಕರು ಹಾಗೂ ಸಂತಾನಗಳ ಸಂಘರ್ಷ: ಊಹೆಗಳು, ಪ್ರಕ್ರಿಯೆಗಳು ಹಾಗೂ ವೈಕಾಸಿಕ ಫಲಗಳು. ಅವರು ಸಸ್ಯಗಳಿಗೆ ಅನ್ವಯ ಮಾಡಲಾಗದು ಎನ್ನುವ ಈ “ಮಾನವ ಗುಣಗಳನ್ನು ಆರೋಪಿಸುವ, ಸಮಾಜಜೀವಿ ವಿಜ್ಞಾನಕ್ಕೆ ಸಂಬಂದಿಸಿದ ಪರಿಕಲ್ಪನೆಗಳು,” ಸಸ್ಯಗಳಲ್ಲಿ ವೈವಿಧ್ಯಮಯವಾದ ಸಂತಾನೋತ್ಪತ್ತಿಯ ಪ್ರಕ್ರಿಯೆಗಳು ವಿಕಾಸವಾಗುವುನ್ನು ಅಧ್ಯಯನ ಮಾಡಲು ಹೊಸ ಚೌಕಟ್ಟೊಂದನ್ನು ಒದಗಿಸುತ್ತದೆ” ಎಂದು ವಾದಿಸಿದ್ದಾರೆ.
ಇವರ ಅಧ್ಯಯನಗಳಲ್ಲಿ ಅತ್ಯಂತ ಪ್ರಾಥಮಿಕ ಅಂಶಗಳನ್ನು ಶೋಧಿಸಿದ ಅಧ್ಯಯನವು ಬೆಳೆಯುತ್ತಿರುವ ಹಣ್ಣಿನಲ್ಲಿ ಇರುವ ಬೀಜಗಳ ನಡುವೆ ಸ್ಪರ್ಧೆಯನ್ನು ಕಡಿಮೆ ಮಾಡುವ ಪ್ರಕ್ರಿಯೆಯ ಬಗ್ಗೆ ಇತ್ತು. ಹಲವು ಸಸ್ಯಗಳ ಬೀಜಗಳಲ್ಲಿ ಎಂಡೋಸ್ಪರ್ಮ್ ಎನ್ನುವ ಅಂಗಾಂಶವಿದೆ. ಇದು ಬೆಳೆಯುತ್ತಿರುವ ಬೀಜಗಳಿಗೆ ತಾಯಿಯಿಂದ ಆಹಾರವನ್ನು ತಲುಪಿಸುವ ಮಧ್ಯವರ್ತಿಯಂತೆ. ತಾಯಿಯ ಎರಡು ಜೀನ್ ಗಳು ಹಾಗೂ ತಂದೆಯ ಒಂದು ಜೀನ್ ಪ್ರತಿ ಇರುವ ಎಂಡೋಸ್ಪರ್ಮ್ ಬೀಜಗಳ ನಡುವಣ ಸ್ಪರ್ಧೆಯಲ್ಲಿ ಅಂಪೈರಾಗಿರುತ್ತದೆ.
ಉಮಾಶಂಕರ್ ಮತ್ತು ಗಣೇಶಯ್ಯನವರು, ತಮ್ಮ ವಿದ್ಯಾರ್ಥಿಗಳಾದ ಕೆ.ವಿ.ರವಿಶಂಕರ್ ಹಾಗೂ ಎಸ್.ಜಿ.ಹೆಗ್ಡೆ ಅವರ ಜೊತೆಗೂಡಿ, ಈ ತರ್ಕ ಸರಿಯಾಗಿದ್ದಾರೆ, ಎಂಡೋಸ್ಪರ್ಮ್ ಚೆನ್ನಾಗಿ ಬೆಳೆದಿರುವಂತಹ ಸಸ್ಯಗಳಲ್ಲಿ ಬೀಜಗಳ ನಡುವೆ ಸ್ಪರ್ಧೆಯೇ ಇರಬಾರದು ಎಂದು ವಾದಿಸಿದ್ದರು.
ಈ ವಾದ ಸರಿಯೋ ತಪ್ಪೋ ಎಂದು ಪರೀಕ್ಷಿಸಲು ಅವರು ‘ಫ್ಲೋರಾ ಆಫ್ ದಿ ಪ್ರೆಸಿಡೆನ್ಸಿ ಆಫ್ ಮದ್ರಾಸ್’ ಎನ್ನುವ ಸಾಕಷ್ಟು ಜನಪ್ರಿಯವಾದ, 1915 ರಿಂದ 1934 ನೇ ಇಸವಿಯ ಅವಧಿಯಲ್ಲಿ ಭಾರತದಲ್ಲಿದ್ದ ಜೆ. ಎಸ್. ಗ್ಯಾಂಬಲ್ ಎನ್ನುವ ಬ್ರಿಟಿಷ್ ಸಸ್ಯವಿಜ್ಞಾನಿ ಬರೆದ ಪುಸ್ತಕವನ್ನು ಬಳಸಿದರು. ಇದರಲ್ಲಿನ ಮಾಹಿತಿಯನ್ನು ಬಳಸಿಕೊಂಡು, ಹಣ್ಣುಗಳಲ್ಲಿ ತಲಾವಾರು ಮೊಳೆಯುವ ಬೀಜಗಳು ಹೆಚ್ಚು ಇರುವಂತಹ ಹಣ್ಣುಗಳ ಬೀಜಗಳಲ್ಲಿನ ಎಂಡೋಸ್ಪರ್ಮ್ ಬೆಳೆವಣಿಗೆ ಚೆನ್ನಾಗಿರುತ್ತದೆಂದು ನಿರೂಪಿಸಿದರು. ಇದು ಬೀಜಗಳ ನಡುವಣ ಸ್ಪರ್ಧೆಯನ್ನು ನಿಯಂತ್ರಿಸುವ ಬಗೆ. ಇದಕ್ಕೆ ವ್ಯತಿರಿಕ್ತವಾಗಿ ಅಲ್ಪಾಯುಷಿಯಾದ ಹಾಗೂ ಪ್ರತಿ ಹಣ್ಣಿನಲ್ಲಿಯೂ ಒಂದೇ ಬೀಜ ಇರುವಂತಹ ಸಸ್ಯಗಳಲ್ಲಿ ಬೀಜಗಳ ನಡುವೆ ಸ್ಪರ್ಧೆಗೆ ಅವಕಾಶವೇ ಇರುವುದಿಲ್ಲವಾದ್ದರಿಂದ ಅಂತಹವುಗಳಲ್ಲಿ ಎಂಡೋಸ್ಪರ್ಮ್ ಒಂದೋ ಇರುವುದೇ ಇಲ್ಲ. ಇದ್ದರೂ ಬಹಳ ಕಡಿಮೆ ಇರುತ್ತದೆ ಎಂದು ನಿರೂಪಿಸಿದರು.
ಪ್ರತಿಹಣ್ಣಿನಲ್ಲಿಯೂ ಹಲವಾರು ಬೀಜಗಳಿರುವಂತಹ ಸಸ್ಯಪ್ರಭೇದಗಳಲ್ಲಿ, ಎಂಡೋಸ್ಪರ್ಮ್ ಇದ್ದಂತಹ ಸಂದರ್ಭಗಳಲ್ಲಿ ಬೀಜಗಳು ಮೊಳೆಯದೇ ಇದ್ದಂತಹ ಸಂದರ್ಭಗಳು ಕಡಿಮೆ. ಅಂದರೆ ಬೀಜಗಳ ನಡುವೆ ಪೈಪೋಟಿ ಇರುವಂತಹ ಸಂದರ್ಭಗಳಲ್ಲಿ ಎಂಡೋಸ್ಪರ್ಮ್ ಇರುವ ಸಾಧ್ಯತೆ ಹೆಚ್ಚು. ಅರ್ಥಾತ್, ಈ ಪೈಪೋಟಿಯನ್ನು ಎಂಡೋಸ್ಪರ್ಮ್ ತಹಬಂದಿಗೆ ತರುತ್ತದೆ.
ಈ ಲೇಖನವನ್ನು ಓದಿ ಬೆರಗಾಗಿದ್ದೆ. ನಿಜ. ಇದು ಒಂದು ಸ್ವಾರಸ್ಯಕರವಾದ ತರ್ಕವೊಂದರ ಪರೀಕ್ಷೆಯಷ್ಟೆ ಅಲ್ಲ ಅದಕ್ಕೂ ಮಿಗಿಲಾದದ್ದು. ಈ ಅಧ್ಯಯನ ಮಾಡುವಾಗ ಉಮಾಶಂಕರ್ ಹಾಗೂ ಗಣೇಶಯ್ಯ ಅವರಿಗೆ ಇದ್ದ ಅನುಕೂಲಗಳಾದರೂ ಯಾವುವು? ಪ್ರಖರವಾದೊಂದು ಐಡಿಯಾ, ತಪ್ಪಿಲ್ಲದ ತರ್ಕ, ಉತ್ಸಾಹಿ ವಿದ್ಯಾರ್ಥಿಗಳು ಹಾಗೂ ಎಲ್ಲೆಡೆ ಸಿಗುತ್ತಿದ್ದ ಪುಸ್ತಕ ಅಷ್ಟೆ. ಇಷ್ಟೆಲ್ಲ ಆದ ಮೇಲೂ, ನಾವು ಇನ್ನೂ ಹಣದ ಇಲ್ಲವೇ ಉಪಕರಣಗಳ ಕೊರತೆಯಿಂದ ನಾವು ಹೊಸ ಶೋಧಗಳನ್ನು ಮಾಡಲಾಗುತ್ತಿಲ್ಲ ಎಂದು ದೂರುವುದು ಏಕೋ ಅರ್ಥವಾಗುತ್ತಿಲ್ಲ.
ಉಮಾಶಂಕರ್ ಹಾಗೂ ಗಣೇಶಯ್ಯನವರು ನಮ್ಮ ತಂಡದ ಮತ್ತೊಬ್ಬ ಸದಸ್ಯರಾದ ಎನ್.ವಿ.ಜೋಷಿಯವರಿಗೆ ಬೀಜಗಳಲ್ಲಿ ಇರುವ ದಾಯಾದಿ ಮತ್ಸರ ವನ್ನು ಅಧ್ಯಯನ ಮಾಡುವ ಸಮೂಹ ತಳಿವಿಜ್ಞಾನದ ಮಾದರಿಗಳನ್ನು ರಚಿಸಲು ಪ್ರೇರಣೆಯಾದರು. ಜೋಷಿಯವರ ಈ ಮಾದರಿಯ ಪ್ರಕಾರ ಎರಡು ಬೀಜಗಳಿರುವ ಫಲಗಳಲ್ಲಿ ಬೀಜಗಳ ನಡುವಣ ಪೈಪೋಟಿ ಅತಿ ಹೆಚ್ಚಾಗಿದ್ದು, ತಲಾವಾರು ಬೀಜಗಳ ಸಂಖ್ಯೆ ಹೆಚ್ಚಿದಂತೆಲ್ಲ ಕಡಿಮೆಯಾಗುತ್ತದೆ. ಇದು ಪ್ರಕೃತಿಯಲ್ಲಿ ಒಂದು ಹಾಗೂ ಹಲವು ಬೀಜಗಳಿರುವ ಫಲಗಳು ಸಾಮಾನ್ಯವೆಂದೂ, ಎರಡೇ ಬೀಜಗಳಿರುವ ಫಲಗಳು ಅಪರೂಪ ಎಂದು ನಾವು ಗಮನಿಸಿರುವ ವಾಸ್ತವಾಂಶಕ್ಕೆ ತಾಳೆಯಾಗುತ್ತದೆ.
ಎಂಡೋಸ್ಪರ್ಮಿನ ಈ ಕಥೆಗೆ ಇನ್ನೊಂದು ಸ್ವಾರಸ್ಯಕರವಾದ ತಿರುವನ್ನು ಇತ್ತೀಚೆಗೆ ನನ್ನ ಮಿತ್ರರಾದ ಅಮೆರಿಕೆಯ ಸೈಂಟ್ ಲೂಯಿಯಲ್ಲಿರುವ ವಾಷಿಂಗ್ಟನ್ ಯೂನಿವರ್ಸಿಟಿಯಲ್ಲಿ ಜೀವಿವಿಜ್ಞಾನಿಗಳಾಗಿರುವ ಡೇವಿಡ್ ಕ್ವೆಲ್ಲರ್ ಹಾಗೂ ಜೋನ್ ಸ್ಟ್ರಾಸ್ಮನ್ ಅವರು ನೀಡಿದ್ದಾರೆ. ಕಣಜಗಳು ಹಾಗೂ ಸ್ಲೈಮ್ ಮೋಲ್ಡ್ ಎನ್ನುವ ಜೀವಿಗಳ ಕುರಿತು ನಡೆಸಿದ ಸಮಾಜಜೀವಿವಿಜ್ಞಾನದ ಅಧ್ಯಯನಗಳಿಂದಾಗಿ ಕ್ವೆಲ್ಲರ್ ಮತ್ತು ಸ್ಟ್ರಾಸ್ಮನ್ ಪ್ರಸಿದ್ಧರು. ಆದರೆ ಕ್ವೆಲ್ಲರ್ ತಮ್ಮ ಸಂಶೋಧನೆಯ ವೃತ್ತಿಯನ್ನು ಆರಂಬಿಸಿದ್ದೇ ಸಸ್ಯಗಳನ್ನು ಕುರಿತು ಮಾಡಿದ ಸಂಶೋಧನೆಗಳಿಂದ. 1980ರಲ್ಲಿ ಸಸ್ಯಗಳಲ್ಲಿ ನೆಂಟರ ಆಯ್ಕೆ ಹಾಗೂ ಬೆಳೆಯುತ್ತಿರುವ ಬೀಜಗಳ ನಡುವಣ ಸಂಘರ್ಷದ ಬಗ್ಗೆ ಸಂಶೋಧನೆಗಳನ್ನು ನಡೆಸಿದ್ದರು.
ಕ್ಯಾಥರೀನ್ ಎಸ್ ಗೀಸ್ಟ್ ತನ್ನ ಗುರುಗಳಾದ ಡೇವಿಡ್ ಕ್ವೆಲ್ಲರ್ (ಎಡ) ಹಾಗೂ ಜೋನ್ ಸ್ಟ್ರಾಸ್ಮನ್ (ಬಲ) ಜೊತೆಗೆ :ಚಿತ್ರ: ಜೋನ್ ಸ್ಟ್ರಾಸ್ಮನ್
ಬೀಜಗಳ ಸಂಸಾರದಲ್ಲಿನ ಕಲಹಗಳು ಹಾಗೂ ಅರಾಬಿಡೋಪ್ಸಿಸ್ ಸಸ್ಯದಲ್ಲಿ ವೈವಿಧ್ಯತೆಯ ಕ್ಷಿಪ್ರ ವಿಕಾಸ ಎನ್ನುವ ಪ್ರಬಂಧದಲ್ಲಿ ಕ್ವೆಲ್ಲರ್ ಹಾಗೂ ಸ್ಟ್ರಾಸ್ಮನ್, ಈಗ ಅಯೋವ ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿ ಇರುವ ತಮ್ಮ ವಿದ್ಯಾರ್ಥಿನಿ ಕ್ಯಾಥರೀನ್ ಎಸ್ ಗೀಸ್ಟ್ ಜೊತೆಗೆ ನಡೆಸಿದ ಸಂಶೋಧನೆಯಲ್ಲಿ ಎಂಡೋಸ್ಪರ್ಮ್ ಇದ್ದರೂ ಕೂಡ ಈ ಕಲಹಗಳು, ಪೈಪೋಟಿಗಳು ಸ್ವಲ್ಪ ಸಣ್ಣ ಮಟ್ಟದಲ್ಲಿ ನಡೆದೇ ಇರುತ್ತವೆ ಎಂದು ಬಹಳ ಜಾಣತನದಿಂದ ನಿರೂಪಿಸಿದ್ದಾರೆ.
ಜೀವಿಯ ಜೀನ್ ಗಳನ್ನು ಹೋಲಿಸಿ, ಅವುಗಳಲ್ಲಿ ಇರುವ ಬದಲಾವಣೆಗಳಿಂದಾಗಿ ಆಯಾ ಜೀನ್‌ಗೆ ತಾಳೆ ಹೊಂದುವ ಪ್ರೊಟೀನುಗಳ ಅಮೈನೋ ಆಮ್ಲಗಳಲ್ಲಿನ ಬದಲಾವಣೆಗಳ ಪ್ರಮಾಣವನ್ನು ಅಥವಾ ನಾನ್ ಸಿನಾನಿಮಸ್ ವ್ಯತ್ಯಾಸಗಳನ್ನು, ಹಾಗೆ ತಾಳೆಯಾಗದ ಅಮೈನೋ ಆಮ್ಲಗಳಲ್ಲಿನ ವ್ಯತ್ಯಾಸಗಳೊಟ್ಟಿಗೆ ಅಂದರೆ ಸಿನಾನಿಮಸ್ ವ್ಯತ್ಯಾಸಗಳೊಟ್ಟಿಗೆ ಹೋಲಿಸುವ ಮೂಲಕ ವೈವಿಧ್ಯದ ವಿಕಾಸ ಅಥವಾ ಅಡಾಪ್ಟಿವ್ ಎವೊಲ್ಯೂಷನ್ ಎನ್ನುವ ಪ್ರಕ್ರಿಯೆಯನ್ನು ಗಣಿಸಬಹುದು. ಅವಶ್ಯಕತೆಗಿಂತ ಅಧಿಕ ತಳಿ ಸಂಕೇತಗಳಿರುವುದರಿಂದ ಒಮ್ಮೊಮ್ಮೆ ಜೀನ್ಗಳಲ್ಲಿ ಬದಲಾವಣಿಯಾದರೂ ಪ್ರೋಟೀನ್ ನಲ್ಲಿರುವ ಅಮೈನೋ ಆಮ್ಲಗಳಲ್ಲಿ ಬದಲಾವಣೆ ಆಗುವುದಿಲ್ಲ. ಅಂದರೆ ಒಂದು ಅಮೈನೋ ಆಮ್ಲವನ್ನು ಒಂದಕ್ಕಿಂತ ಹೆಚ್ಚು ಸಂಕೇತಗಳು ಪ್ರತಿನಿಧಿಸುವುದರಿಂದ ಹೀಗಾಗುತ್ತದೆ. ಆದರೆ ನಾನ್ ಸಿನಾನಿಮಸ್ ವ್ಯತ್ಯಾಸಗಳು ಉಂಟಾಯಿತು ಎಂದರೆ ವಿಕಾಸ, ಹೆಚ್ಚು ವೈವಿಧ್ಯವಾಯಿತು ಎಂದರ್ಥ.
ಇವರ ಅಧ್ಯಯನಗಳು ಬೀಜಗಳಲ್ಲಿ ಕ್ರಿಯಾಶೀಲವಾಗಿರುವಂತಹ ಜೀನ್ ಗಳಲ್ಲಿ ಸಸ್ಯಗಳ ಬೇರೆ ಅಂಗಗಳಲ್ಲಿ ಆಗುವುದಕ್ಕಿಂತಲೂ ಹೆಚ್ಚು ವ್ಯತ್ಯಾಸಗಳು ಆಗಿವೆ ಎಂದು ಪತ್ತೆ ಮಾಡಿದೆ. ಮುಖ್ಯವಾಗಿ, ತಾಯಿಯ ಅಂಗಾಂಶಗಳು ಹಾಗೂ ಎಂಡೋಸ್ಪರ್ಮಿಗೆ ಸಂಬಂಧಿಸಿದ ಅಂಗಾಂಶಗಳಲ್ಲಿ ಸಕ್ರಿಯವಾಗಿರುವ ಜೀನ್ ಗಳಲ್ಲಿ ಈ ವ್ಯತ್ಯಾಸಗಳೂ ಹೆಚ್ಚು ಎಂದು ಗುರುತಿಸಿದ್ದಾರೆ. ಈ ಶೋಧವು ಸಸ್ಯ ಎನ್ನುವ ಪೋಷಕ ಹಾಗೂ ಬೀಜ ಎನ್ನುವ ಸಂತಾನದ ನಡುವೆ ಎಂಡೋಸ್ಪರ್ಮ್ ಮಧ್ಯವರ್ತಿಯಾಗಿ ವರ್ತಿಸುತ್ತದೆ ಎನ್ನುವ ಊಹೆಗೆ ತಕ್ಕಂತೆ ಇದೆ.
ಈ ಪ್ರಬಂಧದ ಲೇಖಕರ ಮಾತಿನಲ್ಲಿಯೇ ಹೇಳುವುದಾದರೆ, “ಸಂಘರ್ಷವನ್ನು ಕಡಿಮೆ ಮಾಡುವ ನೆಂಟಸ್ತನ ಹಾಗೂ ಎಂಡೋಸ್ಪರ್ಮ ಮಧ್ಯವರ್ತಿಯಾಗಿದ್ದಾಗ್ಯೂ, ಸಸ್ಯಗಳು ಆಮೆಯ ನಡಿಗೆಯಂತೆ ನಿಧಾನವಾದ ಆಯುಧಗಳ ಪೈಪೋಟಿಯಲ್ಲಿ ಇರುತ್ತವೆ.”
ಮೊದಲಿಗೆ, ಈ ಸಂಶೋಧನೆಗೆ ಸಾಕಷ್ಟು ವೆಚ್ಚ ಆಗಿರಬೇಕು ಎನ್ನಿಸಬಹುದು. ಸತ್ಯವೇನೆಂದರೆ ಇದಕ್ಕೆ ಏನೂ ಖರ್ಚೇ ಆಗಿಲ್ಲ. ಉಮಾಶಂಕರ್ ಹಾಗೂ ಗಣೇಶಯ್ಯನವರು ಮಾಡಿದ ಹಾಗೆಯೇ, ಇವರು ಈಗಾಗಲೇ ಪ್ರಕಟವಾಗಿರುವ ಜೀನೋಮ್ ಮಾಹಿತಿಗಳನ್ನೇ ಬಳಸಿ, ವಿಶ್ಲೇಷಿಸಿದ್ದಾರೆ! ಈ ಬಗ್ಗೆ ಕ್ವೆಲ್ಲರ್ ನನಗೆ ಇಮೇಲ್ ನಲ್ಲಿ ತಿಳಿಸಿದ್ದು ಹೀಗೆ.
“ಡ್ಯಾನ್‌ಫೋರ್ತ್ ಸಸ್ಯ ಸಂಶೋಧನಾ ಕೇಂದ್ರದಲ್ಲಿ ಜಾನ್ ಹರಾಡಾ ಭಾಷಣ ನೀಡುತ್ತಾರೆಂಬ ಜಾಹೀರಾತನ್ನು ಕಂಡಾಗಿನಿಂದ ನಮ್ಮ ಅಧ್ಯಯನ ಶುರುವಾಯಿತು ಈ ಭಾಷಣ ಸ್ವಾರಸ್ಯಕರ ವಾಗಿರಬಹು ಎಂದು ನನಗೆ ಅನಿಸಿತು. ಆದರೆ ಜಾಹೀರಾತಿನಲ್ಲಿ ಅದು ಸ್ಪಷ್ಟವಾಗಿರಲಿಲ್ಲ. ಆದದ್ದಾಗಲಿ ಎಂದು ನಾನು ಭಾಷಣ ಕೇಳಲು ಹೋದೆ. ಆತ ಈ ಅದ್ಭುತ ಜೀನೋಮ್ ಮಾಹಿತಿಯ ಬಗ್ಗೆ ಮಾತನಾಡಿದ್ದ. ಅನಂತರ ನಾನು ಆತನ ಜೊತೆಗೂಡಿ ಕೆಲಸ ಮಾಡಬಹುದಾದ ಸಾಧ್ಯತೆಗಳ ಬಗ್ಗೆ ಚರ್ಚಿಸಿದೆ. ಅದಕ್ಕೆ ಆತ, ಈ ಜೀನೋಮ್ ಮಾಹಿತಿ ಈಗಾಗಲೇ ಪ್ರಕಟವಾಗಿಯಾಗಿದೆ. ಏನು ಬೇಕಾದರೂ ಮಾಡಿಕೋ ಎಂದುಬಿಟ್ಟರು.”
ಹೀಗೆ ಈಗಾಗಲೇ ಇರುವ ಮಾಹಿತಿಯನ್ನೇ ಬಳಸಿಕೊಂಡು ಹೊಸ ಶೋಧ ಮಾಡುವುದಕ್ಕೂ ಒಂದು ಪ್ರಶಸ್ತಿ ಕೊಡಬೇಕು. ಸ್ವಲ್ಪ ಯೋಚಿಸಿ. ಈಗಾಗಲೇ ಪ್ರಕಟವಾಗಿರುವ ಅಷ್ಟೊಂದು ಮಾಹಿತಿಗಳಲ್ಲಿ ಯಾರಾದರೂ ಹೊಸ ಪರಿಕಲ್ಪನೆಗಳು ಹಾಗೂ ಹೊಸ ಪ್ರಶ್ನೆಗಳನ್ನು ಕೇಳಿ ಹೆಕ್ಕಬಹುದಾದ ಎಂತೆಂತಹ ಅರಿವು ಬಚ್ಚಿಟ್ಟುಕೊಂಡಿವೆಯೋ? ಇದಲ್ಲವೇ ಅಗ್ಗದಲ್ಲಿ ಅತ್ಯುನ್ನತ ಸಂಶೋಧನೆಯನ್ನು ಮಾಡುವ ಚತುರ ವಿಧಾನ?
ವಿಕಾಸ ವಿಜ್ಞಾನ ಹಾಗೂ ಸಮಾಜಜೀವಿ ವಿಜ್ಞಾನದ ಚೌಕಟ್ಟಿನಲ್ಲಿ ಸಸ್ಯಗಳಲ್ಲಿ ಅತೀ ಕಡಿಮೆ ಅಧ್ಯಯನಗಳು ನಡೆದಿವೆ. ಅವುಗಳ ನಡುವಣ ಸ್ವಾರ್ಥಿ ಕಲಹಗಳು, ಹಾಗೂ ತ್ಯಾಗಗಳ ಕಥೆ ಬಯಲಾಗಿಲ್ಲ. ಇವು ಕೇವಲ ಸಸ್ಯಗಳಲ್ಲಿ ಅಡಗಿಲ್ಲ, ಬಹುಶಃ ಈಗಾಗಲೇ ನಾವು ಸಂಗ್ರಹಿಸಿರುವ ಮಾಹಿತಿಯಲ್ಲಿಯೂ ಅಡಗಿರಬಹುದು. ಭಾರತದಲ್ಲಿ ಈ ಕೊರತೆಯನ್ನು ತುಂಬುವವರು ಯಾರೂ ಇಲ್ಲವೇಕೆ? ಇದಕ್ಕೆ ಕಾರಣ ಮಾನವನ ಗುಣಗಳನ್ನು ಸಸ್ಯಗಳಲ್ಲಿ ಆರೋಪಿಸುವುದು ತಪ್ಪು ಎನ್ನುವ ಭಯವಾಗಿದದ್ದರೆ ಇದು ದೌರ್ಭಾಗ್ಯಕರ. ಅದಕ್ಕಿಂತಲೂ ದೌರ್ಭಾಗ್ಯಕರ ನಮ್ಮಲ್ಲಿ ಉತ್ತಮ ಸಂಶೋಧನೆಗೆ ಸಾಕಷ್ಟು ಹಣವಿಲ್ಲ, ಸಲಕರಣೆಗಳಿಲ್ಲ ಎನ್ನುವ ತಪ್ಪು ಕಲ್ಪನೆ.
ಇದು ಜಾಣ ಅರಿಮೆ. ಆಂಗ್ಲ ಮೂಲ. ಪ್ರೊಫೆಸರ್ ರಾಘವೇಂದ್ರ ಗದಗ್‌ಕರ್, ಕನ್ನಡಾನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್. ಮಂಜುನಾಥ. ಮೂಲಲೇಖನವನ್ನು ದಿ ವೈರ್ ಸೈನ್ಸ್ ಪತ್ರಿಕೆ ಮೊದಲು ಪ್ರಕಟಿಸಿತ್ತು.