Now Reading
Podcast | In Kannada: How Dung Beetles Find Their Way, Without Getting Lost

Podcast | In Kannada: How Dung Beetles Find Their Way, Without Getting Lost

Representative image: Panos Sakalakis/Unsplash.

The following text, in Kannada, was translated from the English original, by Raghavendra Gadagkar, entitled More Fun Than Fun: Dung Beetles, the Milky Way and the Marvels of Animal Navigation and published on The Wire Science on September 30, 2020.

Kollegala Sharma kindly provided the translated version. It has also been rendered as a podcast by J.R. Manjunatha, available to listen below. Sharma and his team will be converting editions of Gadagkar’s column as podcasts, as part of an audio series called ‘JanaArime’. Sharma’s popular ‘Janasuddi’ podcast series is available to listen here.

Sharma is a chief scientist and Manjunatha is a technical officer, both at the CSIR-Central Food Technological Research Institute, Mysuru.

§

ವಿಸ್ಮಯಕ್ಕಿಂತ ವಿಸ್ಮಯ

ಸಗಣಿ ದುಂಬಿಗಳು, ಹಾಲುಹಾದಿ ಹಾಗೂ ಪ್ರಾಣಿಜಗತ್ತಿನ ಪಯಣ ವಿಸ್ಮಯಗಳು

ರಾಘವೇಂದ್ರ ಗದಗ್‌ಕರ್

ನಿಸರ್ಗದಲ್ಲಿ ತ್ಯಾಜ್ಯ ಎನ್ನುವುದು ಇಲ್ಲವೇ ಇಲ್ಲ. ಮಲವೂ ಕೂಡ ತ್ಯಾಜ್ಯವಲ್ಲ. ಈ ಭೂಮಿಯ ಮೇಲಿರುವ ಪ್ರಾಣಿಗಳೆಲ್ಲದರ ಮಲವೆಲ್ಲ ಒಟ್ಟಾಗಿ, ಅಂತಹ ಇನ್ನೆಷ್ಟೋ ಅಸಂಖ್ಯ ಜೀವಿಗಳ ಬದುಕಿಗೆ ಸಂಪನ್ಮೂಲವಾಗುತ್ತದೆ. ಎಷ್ಟೋ ಜೀವಿಗಳು ಬದುಕಲು ಈ ಸಂಪನ್ಮೂಲವೇ ಆಧಾರ.

ಇಂತಹ ಮಲಪ್ರೇಮಿ ಜೀವಿಗಳಲ್ಲಿ ಸುಪ್ರಸಿದ್ಧವಾದದ್ದು ಎಂದರೆ ಸಗಣಿ ದುಂಬಿ. ಆರು ಸಾವಿರ ಪ್ರಬೇಧಗಳಷ್ಟು ಸಗಣಿ ದುಂಬಿಗಳಿವೆ. ಇವೆಲ್ಲವೂ ತಮ್ಮ ಗೂಡಿನಿಂದ ಸಗಣಿಯ ಗುಡ್ಡೆಯವರೆಗೂ ಒಂದು ಸುರಂಗವನ್ನು ಕೊರೆದು, ನೆಲದಡಿಯಲ್ಲಿಯೇ ಅಲ್ಲಿಂದಿಲ್ಲಿಗೆ ಓಡಾಡುತ್ತಿರುತ್ತವೆ. ತಾವು ತಿಂದು, ತಮ್ಮ ಮರಿಗಳಿಗೂ ಆಹಾರವಾಗಿ ಸಗಣಿಯನ್ನೇ ಉಣಿಸುತ್ತವೆ. ಕೆಲವು ದುಂಬಿಗಳು ಸಗಣಿ ಸಿಕ್ಕಾಗ ಅದರಲ್ಲೇ ನೆಲೆಸುತ್ತವೆ. ಕೆಲವು ಅವುಗಳನ್ನು ಅದ್ಭುತವಾದ ಉಂಡೆಗಳನ್ನಾಗಿ ಮಾಡಿ ಗೂಡಿಗೆ ಉರುಳಿಸಿಕೊಂಡು ಹೋಗುತ್ತವೆ.

ಹೀಗೆ ಸಗಣಿಯುಂಡೆಯನ್ನು ಉರುಳಿಸುತ್ತಾ ಹೋಗುವ ದುಂಬಿಗಳು ಹಿಂದಿನಿಂದಲೂ ಜನರನ್ನು ಬೆರಗುಗೊಳಿಸಿವೆ. ನೆಲದ ಮೇಲೆ ಎದ್ದು ಕಾಣುವ ಅವುಗಳ ಓಡಾಟ, ಸಗಣಿಯುಂಡೆಯನ್ನು ಮಾಡುವ ಕೌಶಲ್ಯ ಮತ್ತು ತಮಗಿಂತಲೂ ಹಲವು ಪಟ್ಟು ದೊಡ್ಡದಾದ ಉಂಡೆಗಳನ್ನು, ಅವುಗಳ ಮಟ್ಟಿಗೆ ಸುದೀರ್ಘ ಎನ್ನಿಸುವಷ್ಟು ದೂರ ಉರುಳಿಸಿಕೊಂಡು ಹೋಗುವ ಅದ್ಭುತ ಕಲೆಯೇ ಅವುಗಳ ಜನಪ್ರಿಯತೆಗೆ ಕಾರಣವಿರಬಹುದು. ಅವು ಹೀಗೆ ಮಾಡುವುದನ್ನು ನೋಡುತ್ತಿದ್ದರೆ ಬೆಕ್ಕಸ ಬೆರಗಾಗುವುದರಲ್ಲಿ ಅಚ್ಚರಿಯೇ ಇಲ್ಲ. ಇದು ನನ್ನ ಅನುಭವ ಕೂಡ.

ಮಲದ ಗಾತ್ರ, ಬಣ್ಣ, ಸಂದರ್ಭವೇನೇ ಇರಲಿ, ಈ ಅಚ್ಚರಿಯೇ ಹಲವರಿಗೆ ಮಲದ ಬಗ್ಗೆ ತಮಗಿರುವ ಅಸಹ್ಯ ಭಾವವನ್ನೂ ಮೀರಲು ಕಾರಣವಾಗಿದೆ. ಈ ದುಂಬಿಗಳ ಬಗ್ಗೆ ಆಶ್ಚರ್ಯ ಚಿಕಿತರಾಗಿ, ಅವನ್ನು ದೇವರು ಎಂದವರೂ ಉಂಟು! ಹಲವಾರು ಸಂಸ್ಕೃತಿಗಳ ಪುರಾಣಗಳಲ್ಲಿ ಈ ಸಗಣಿದುಂಬಿಗಳನ್ನು ಕಾಣಬಹುದು. ಕಾಂಗೋದ ಬುಷಾಂಗೋ ಜನಾಂಗ, ಕೊಲಂಬಿಯಾದ ಚಾಚಾ ಇಂಡಿಯನ್ನರು, ಬೊಲಿವಿಯಾದ ರೆಡ್‌ ಇಂಡಿಯನ್ನರು, ಸುಮಾತ್ರಾದ ತೋಬಾ ಪಂಗಡ, ಚೀನಾದ ತಾಓ ಕಥೆಗಳು, ಗ್ರೀಕ್‌ ಪುರಾಣದಲ್ಲಿ ಜಿಯೂಸ್‌ ಮತ್ತು ಒಲಿಂಪಸ್‌ ದೊರೆಗಳ ಕಥೆಗಳಲ್ಲಿ ಈ ಸಗಣಿ ದುಂಬಿಗಳ ಬಗ್ಗೆ ಪ್ರಸ್ತಾಪವಿದೆ.

ಈಜಿಪ್ಟಿನ ಪುರಾಣಗಳಲ್ಲಿಯಂತೂ ಇವಕ್ಕೆ ಅಗ್ರಸ್ಥಾನ. ಏಕೆಂದರೆ ಅಲ್ಲಿ ಇವನ್ನು ಹುಟ್ಟು, ಸಾವು, ಪುನರ್ಜನ್ಮ, ಸೂರ್ಯನ ಶಕ್ತಿ ಮುಂತಾದವುಗಳ ಜೊತೆಗೆ ಜೋಡಿಸಿ, ದೇವರಂತೆ ಪೂಜಿಸಲಾಗುತ್ತದೆ. ಜೊತೆಗೆ ಸಮಾಧಿಗಳಲ್ಲಿ, ಶವಪೆಟ್ಟಿಗೆಗಳಲ್ಲಿ ಇವನ್ನು ಇಟ್ಟು ಹೂಳುವುದೂ ಉಂಟು.

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್‌ ನಲ್ಲಿರುವ ವಿಟ್‌  ವಾಟರ್ಸ್ರ್ಯಾಂಡ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಣಿ, ಸಸ್ಯ ಹಾಗೂ ಪರಿಸರ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್‌ ಆಗಿರುವ ಹಾಗೂ ಈ ಸಗಣಿದುಂಬಿಗಳನ್ನು ಹಲವಾರು ವರ್ಷಗಳಿಂದ ಅಧ್ಯಯನ ಮಾಡುತ್ತಿರುವ ಮಾರ್ಕಸ್‌ ಬಿರ್ನೆ, ಸಂಗೀತಶಾಸ್ತ್ರದಲ್ಲಿ ಡಾಕ್ಟರೇಟು ಮಾಡಿರುವ ಹೆಲೆನ್‌ ಲುನ್‌ ಎನ್ನುವವರ ಜೊತೆಗೆ ಸೇರಿ ದಿ ಡ್ಯಾನ್ಸ್‌ ಅಫ್‌ ದಿ ಡಂಗ್‌ ಬೀಟಲ್ಸ್‌ ಅರ್ಥಾತ್‌ ಸೆಗಣಿದುಂಬಿಗಳ ನೃತ್ಯ ಎನ್ನುವ ಒಂದು ಅದ್ಭುತ ಪುಸ್ತಕವನ್ನು ಬರೆದಿದ್ದಾರೆ. ವೆಸ್ಟರ್ನ್‌ ವಾಷಿಂಗ್ಟನ್‌ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀ ಷ್ ಪ್ರೊಫೆಸರ್‌ ಆಗಿರುವ ಬ್ರೂಸ್‌ ಬೀಸ್ಲಿ ಈ ಪುಸ್ತಕವನ್ನು ಪುರಾಣ, ವಿಕಾಸ ಹಾಗೂ ದಿನನಿತ್ಯದ ವೈಜ್ಞಾನಿಕ ಶೋಧ ಪ್ರಪಂಚದೊಳಗೆ ನಡೆಯುವ ಸ್ವಾರಸ್ಯಕರವಾದ ಹಾಗೂ ತಮಾಷೆಯ ಪಯಣ ಎಂದು ವಿವರಿಸಿದ್ದಾರೆ.

ಪುರಾತನ ಕಾಲದಿಂದ ಹಿಡಿದು ಇಂದಿನವರೆಗೂ, ಪುರಾಣಗಳಿಂದ ಹಿಡಿದು ವಿಜ್ಞಾನದವರೆಗೂ ನಮ್ಮನ್ನು ಕಾಡುತ್ತಲೇ ಇರುವ ಸೆಗಣಿ ದುಂಬಿಗಳನ್ನು ವರ್ಣಿಸುವ ಪುಸ್ತಕದಲ್ಲಿರುವ ಕೆಲವು ಮಾತುಗಳು ಹೀಗಿವೆ.

ಈ ಸೆಗಣಿ ದುಂಬಿ ನಮ್ಮ ಜನಪ್ರಜ್ಞೆಯಲ್ಲಿ ಪಡೆದಿರುವ ಎತ್ತರದ ಸ್ಥಾನ ಕಳೆದ ಐದು ಶತಮಾನಗಳಲ್ಲಿ ನಡೆದಿರುವ ವೈಜ್ಞಾನಿಕ ಸಂಶೋಧನೆಗಳನ್ನು ಪ್ರತಿಫಲಿಸುತ್ತಿದೆ. ಬೈಬಲ್ಲಿನಲ್ಲಿ ವಿವರಿಸಿರುವ  ಜೀವಸೃಷ್ಟಿಕ್ರಿಯೆಯನ್ನು ವಿವರಿಸುವುದರಿಂದ ಆರಂಭಿಸಿ, ಚಾರ್ಲ್ಸ್‌ ಡಾರ್ವಿನ್‌ ನಂತಹ ಜ್ಞಾನಾರ್ಜನೆಯಲ್ಲಿ ತೊಡಗಿಕೊಂಡವರ ಹವ್ಯಾಸವಾಗಿ ಬೆಳೆದ ಇದು ಇಂದು ಸವಿವರವಾದ ಮಾಹಿತಿಯನ್ನು ಬಳಸಿಕೊಂ ಡು ಕೀಟಗಳ ಅಭಿವೃದ್ಧಿ ಹಾಗೂ ನಡವಳಿಕೆಯನ್ನು ಅಧ್ಯಯನ ಮಾಡುವ ವಿಜ್ಞಾನಿಗಳ ಸಾಮೂಹಿಕ ಪ್ರಯತ್ನದ  ಕೇಂದ್ರ ಬಿಂದುವಾಗಿ ಬೆಳೆದಿದೆ….

ಈ ದುಂಬಿಗಳು ದೇವರು ಸೃಷ್ಟಿಸಿದ ಈ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವ ಶಕುನ, ಸಂಕೇತಗಳು, ಅಸ್ಪಷ್ಟ ಅವಲೋಕನಗಳನ್ನು ಅರ್ಥೈಸುವುದರಿಂದ ಹಿಡಿದು ದೇವರೇ ಎನ್ನುವುದರವರೆಗೂ ಹೋದ ನಾವು ಅನಂತರ ಈಗ ಧರ್ಮದ ಕಟ್ಟುಪಾಡೇ ಇಲ್ಲದ ಅರಿವಿನ ಪ್ರಪಂಚಕ್ಕೆ ಕೊಂಡೊಯ್ದಿವೆ. “.

ಬಿರ್ನೆ ಮತ್ತು ಸಂಗಡಿಗರು ಸ್ಕೇರಾಬಿಯಸ್‌ ಮತ್ತು ಖೇಪರ್‌ ಎನ್ನುವ ಸೆಗಣಿದುಂಬಿ ಪ್ರಬೇಧಗಳನ್ನು ಅಧ್ಯಯನ ಮಾಡಿ ದ್ದಾ ರೆ. ಖೇಪರ್‌ ಎಂದರೆ ಈಜಿಪ್ಸಿಯನ್ನರ ಸೂರ್ಯದೇವ. ಆತನಿಗೆ ಈ ಹೆಸರು ಬಂದಿದ್ದೂ ಸೆಗಣಿದುಂಬಿಯಿಂದಲೇ.

ಮೂರು ಆಯಾಮದಲ್ಲಿ ದಿಗ್ಗೆಡದೆ ಚಲಿಸುವ ಅಮೋಘ ಸಾಮರ್ಥ್ಯ ಕೀಟಗಳಿಗೆ ಇದೆ. ಹೀಗೆ ಚಲಿಸುವಾಗ ಅವುಗಳ ಸಂವೇದನೆಗಳಿಗೆ ಹಲವು ಸವಾಲುಗಳು ಎದುರಾಗುತ್ತವೆ. ಈ ಸವಾಲುಗಳನ್ನು ಅವುಗಳ ಪುಟ್ಟ ಮಿದುಳು ಅದು ಹೇಗೆ ಎದುರಿಸುತ್ತದೆ ಎನ್ನುವುದು ಅವಿರತ ಅಚ್ಚರಿ. ತಾತ್ಕಾಲಿಕವಾದ ನೆಲೆ ಇರುವ ಕೀಟವೂ ಕೂಡ ಆಹಾರವನ್ನು ಹುಡುಕಿ ಹೊರಟ ಮೇಲೆ, ಮೊದಲಿದ್ದ ಸ್ಥಾನಕ್ಕೆ ಮರಳಬೇಕು.  ಈ ಆಹಾರಕ್ಕಾಗಿ ಹೊರಟ ಅದರ ಹಾರಾಟ ನೇರ ಹಾದಿಯದ್ದಲ್ಲ. ಜೊತೆಗೆ ಅಪರಿಚಿತ ಸ್ಥಳಗಳಿಗೂ ಹೋಗಬಹುದು. ಆದರೆ ಅದು ಆಹಾರವಿದ್ದಲ್ಲಿಂದ ಗೂಡಿಗೆ ಮರಳುವ ಹಾದಿ ಮಾತ್ರ ಬಲು ನೇರವಾದ, ಅತಿ  ಹತ್ತಿರವಾದ ಹಾದಿ.

ಕೀಟಗಳ ಮಿದುಳಿನಲ್ಲಿ ತಮ್ಮ ಪರಿಸರದ ನಕ್ಷೆಯ ಅರಿವು ಇರಬಹುದೇ ಎನ್ನುವ ಚರ್ಚೆ ನಡೆದಿದೆ. ಅದೇನೇ ಇರಲಿ. ಕೀಟಗಳು ನಡೆಯುವಾಗಲೋ ಹಾರುವಾಗಲೋ, ತಮ್ಮ ಪರಿಸರದಲ್ಲಿರುವ ದಾರಿದೀಪಗಳನ್ನು ಅಂದರೆ ವಿಶಿಷ್ಟ ವಸ್ತುಗಳನ್ನೂ, ವಾಸನೆಯನ್ನೂ ಗ್ರಹಿಸಬಲ್ಲುವು ಎನ್ನುವುದು ತಿಳಿದ ವಿಷಯ.  ಇವು ಈ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತವೆ ಎಂದು ಪತ್ತೆ ಮಾಡಲು ಪ್ರಯತ್ನಿಸುತ್ತಿರುವ ನಮಗೆ, ಕೀಟಗಳು ಇದಕ್ಕೆ ಹಲವು ಉಪಾಯಗಳನ್ನು ಬಳಸುತ್ತವೆ ಎನ್ನುವುದು ಗೊತ್ತಾಗಿದೆ. ಒಂದೇ ಸಮಸ್ಯೆಗೆ ಹಲವಾರು  ಪರಿಹಾರಗಳು. ಒಂದು ತಪ್ಪಾದರೆ ಇನ್ನೊಂದು ಎನ್ನುವ ವ್ಯವಸ್ಥೆ ಇದೆ. ಉದಾಹರಣೆಗೆ, ಹಾದಿಯಲ್ಲಿ ಕೈಗಂಬದಂತಹ ಯಾವುದೇ ಸ್ಥಾನಸೂಚಿ ವಸ್ತು ಇಲ್ಲದಿದ್ದಾಗಲೂ ಇವು ನೇರವಾಗಿ ಗೂಡಿಗೆ ಮರಳಬಲ್ಲುವು.

ಇಂತಹ ಪರ್ಯಾಯ ವ್ಯವಸ್ಥೆ ಕೂಡ ಬಲು ಅದ್ಭುತ.  ಇದನ್ನು “ಪಾತ್‌ ಇಂಟಿಗ್ರೇಷನ್‌” ಅಥವಾ “ಪಥ ಸಂಕಲನ” ಎನ್ನಬಹುದು. ಇದೊಂದು ರೀತಿ ನಾವಿಕರು ಸಮುದ್ರದಲ್ಲಿ ತಾವು ಸಾಗಿದ ದೂರವನ್ನು ಲೆಕ್ಕ ಹಾಕಿದ ಹಾಗೆ ಎನ್ನಿ. ಇದನ್ನು ಮಾಡಲು ಕೀಟಗಳು ಹೇಗೋ ತಾವು ಹಾರಿದ ದಿಕ್ಕು, ತಿರುಗಿದ ತಿರುವುಗಳು, ಮುಂದಿನ ತಿರುವಿನವರೆಗೂ ಪ್ರತಿ ತಿರುವಿನಲ್ಲಿಯೂ ಸಾಗಿದ ದೂರ ಇವೆಲ್ಲವನ್ನೂ ತಿಳಿದಿರಬೇಕಾಗುತ್ತದೆ. ನಂಬಲಾಗದ ವಿಷಯ ಅಲ್ಲವೇ? ಇಷ್ಟೆಲ್ಲ ಆದ ಮೇಲೆ ಹಿಂದೆ ಮರಳಲು ಅದು ಹೇಗೋ ಅತಿ  ಹತ್ತಿರವಾದ, ನೇರವಾದ ಹಾದಿಯನ್ನು ಲೆಕ್ಕ ಹಾಕಬೇಕು. ಇದೊಂದು ರೀತಿಯ ಟ್ರಿಗನಾಮೆಟ್ರಿ ಎನ್ನಿ.  ವಿಶೇಷ ಎಂದರೆ ಅವು ಈ ಲೆಕ್ಕಾಚಾರವನ್ನು ಪಯಣದ ಕೊನೆಯಲ್ಲಿ ಮಾಡುವುದಿಲ್ಲ. ಪಯಣದ ಉದ್ದಕ್ಕೂ ಈ ಗಣಿತ ನಡೆದೇ ಇರುತ್ತದೆ. ಆದ್ದರಿಂದ ಪಯಣದ ಯಾವುದೇ ಹಂತದಲ್ಲಿಯೂ ತಮ್ಮ ಗೂಡಿಗೆ ನೇರವಾಗಿ ಮರಳುವ ಅರಿವು ಅವಕ್ಕೆ ಇರುತ್ತದೆ.

ಕೀಟಗಳು ಈ ಟ್ರಿಗನಾಮೆಟ್ರಿಯನ್ನು ಹೇಗೆ ಮಾಡುತ್ತವೆ ಎನ್ನುವುದನ್ನು ಊಹಿಸಲೂ ನಮ್ಮಿಂದ ಆಗಿಲ್ಲ. ಆದರೆ ಅವು ದೂರವನ್ನು ಹೇಗೆ ಅಳೆಯುತ್ತವೆ ಮತ್ತು ತಮ್ಮ ಹಾರಾಟದ ಕೋನವನ್ನು ಹೇಗೆ ತಿಳಿಯುತ್ತವೆ ಎನ್ನುವ ಬಗ್ಗೆ ನಮಗೆ ಸಾಕಷ್ಟು ಗೊತ್ತಾಗಿದೆ.  ತಮ್ಮ ಕಣ್ಣಿನಲ್ಲಿ ಬದಲಾಗುತ್ತಿರುವ ಬಿಂಬಗಳ ಗಾತ್ರದಿಂದ ಅವು ದೂರವನ್ನು ಅಳೆಯಬಲ್ಲವು. ಇದನ್ನು ಆಪ್ಟಿಕ್‌ ಫ್ಲೋ ಎನ್ನುತ್ತಾರೆ. ಶೆರ್ಲಾಕ್‌ ಹೋಮ್ಸ್‌ ಸಿಲ್ವರ್‌ ಬ್ಲೇಸ್‌ ಎನ್ನುವ ಕಥೆಯಲ್ಲಿ ರೈಲಿನಲ್ಲಿ ಪಯಣಿಸುವಾಗ ಬದಿಯಲ್ಲಿದ್ದ ದೀಪದ ಕಂಬಗಳು ಎಷ್ಟು  ಬೇಗನೆ ಹಿಂದೆ ಸರಿಯುತ್ತಿವೆ ಎನ್ನುವುದನ್ನು ಗಮನಿಸಿ, ರೈಲು ಎಷ್ಟು ವೇಗವಾಗಿ ಚಲಿಸುತ್ತಿದೆ ಎಂದು ಲೆಕ್ಕ ಹಾಕುತ್ತಾನಲ್ಲ, ಹಾಗೆಯೇ ಇದು.

ಆಸ್ಟ್ರೇಲಿಯಾದ ನ್ಯಾಶನಲ್‌ ವಿಶ್ವವಿದ್ಯಾನಿಲಯದ ಮಂಡ್ಯಂ ಶ್ರೀನಿವಾಸನ್‌ ಇದನ್ನೊಂದು ಚತುರ ಪ್ರಯೋಗದಿಂದ ನಿರೂಪಿಸಿದ್ದಾರೆ. ಇವರು ಜೇನ್ನೊಣಗಳನ್ನು ಒಂದು ಕಿರಿದಾದ ಕೊಳವೆಯೊಳಗೆ ಹಾರಲು ಬಿಟ್ಟರು. ಇದು ಅವುಗಳಲ್ಲಿ ಆಪ್ಟಿಕ್‌ ಫ್ಲೋವನ್ನು ಹೆಚ್ಚಿಸುತ್ತದೆ. ಪರಿಣಾಮ: ಈ ಜೇನ್ನೊಣಗಳು ತಾವು ಹಾರಿದ ದೂರವನ್ನು ಹೆಚ್ಚಾಗಿ ಅಂದಾಜಿಸಿದುವು. ಸುತ್ತಲೂ ಏಕರೂಪದಲ್ಲಿರುವ ಮರಳುಗಾಡಿನಂತಹ ಪರಿಸರದಲ್ಲಿ ನಡೆಯುವ ಇರುವೆಗಳು ತಾವು ಇಟ್ಟ ಹೆಜ್ಜೆಗಳನ್ನು ಲೆಕ್ಕ ಹಾಕಿ ಸಾಗಿದ ದೂರವನ್ನು ಅಳೆಯುತ್ತವೆಯಂತೆ.

ಜ್ಯೂರಿಕ್‌ ವಿಶ್ವವಿದ್ಯಾನಿಲಯದ ರೂಡಿಗರ್‌ ವೆಹನರ್‌ ಮತ್ತು ಸಂಗಡಿಗರು ಇನ್ನೂ ಸ್ವಾರಸ್ಯಕರವಾದ ಪ್ರಯೋಗವನ್ನು ಮಾಡಿ ದ್ದಾರೆ. ಇವರು ಇರುವೆಗಳು ಊರುಗಾಲುಗಳ ಮೇಲೆ ನಡೆಯುವಂತೆ ಮಾಡಿದ್ದಾರೆ. ಹೀಗೆ ಮಾಡಿದಾಗ ಅವು ತಾವು ನಡೆದ ಹಾದಿಯ ದೂರವನ್ನು ನಿರೀಕ್ಷಿಸಿದಂತೆಯೇ ಹೆಚ್ಚೋ, ಕಡಿಮೆಯೋ ಲೆಕ್ಕ ಹಾಕಿದುವು.

ಸೂರ್ಯ ಇಲ್ಲವೇ ಚಂದ್ರನಂತಹ ಆಗಸದಲ್ಲಿರುವ ಕುರುಹುಗಳನ್ನು ಬಳಸಿಕೊಂಡು ತಾವು ತಿರುಗಿದ ಕೋನಗಳನ್ನು ಕೀಟಗಳು ಅಂದಾಜಿಸುತ್ತವೆ. ಇವುಗಳು ಕಾಣದಿದ್ದಾಗ, ಆಕಾಶದಿಂದ ಬರುವ ಬೆಳಕು ಧೃವೀಕರಣವಾಗಿರುವ ರೀತಿಯನ್ನು ಗಮನಿಸಿ ಸೂರ್ಯ ಚಂದ್ರರ ಸ್ಥಾನವನ್ನು ಊಹಿಸುತ್ತವೆ.

ಇದು ನಿಜಕ್ಕೂ ಬೆರಗಿನ ವಿಷಯವಾದರೂ, ಪಥ ಸಂಕಲನವೊಂದರಿಂದಲೇ ಕೀಟಗಳಂತೆ ಕರಾರುವಾಕ್ಕಾಗಿ ಹಾದಿಯನ್ನು ಅಂದಾಜಿಸಲಾಗುವುದಿಲ್ಲ. ಹೀಗಾಗಿ ಕೀಟಗಳು ಪಥಸಂಕಲನದೊಂದಿಗೆ ಸ್ಥಾನಸೂಚಿ ವಸ್ತುಗಳನ್ನೂ ಉಪಯೋಗಿಸಿಕೊಳ್ಳುತ್ತವೆ. ಆದರೆ ತುರ್ತು ಸಮಯದಲ್ಲಿ ಇವು ಯಾವುದೊಂದನ್ನೂ ಅವು ಅವಲಂಬಿಸಲಾಗದು.

ಬಿರ್ನೆ ಮತ್ತು ಸಂಗಡಿಗರು ನಿಶಾಚರಿ ಸೆಗಣಿದುಂಬಿಗಳ ಮೇಲೆ ಪ್ರಯೋಗಗಳನ್ನು ನಡೆಸಿ, ಅವು ಚಂದ್ರನನ್ನೇ ದಿಕ್ಸೂಚಿಯನ್ನಾಗಿ ಬಳಸುತ್ತವೆ ಎಂದು ಪತ್ತೆ ಮಾಡಿದ್ದಾರೆ. ಆದರೆ ಚಂದ್ರನಿಲ್ಲದಿದ್ದಾಗಲೂ ಇವುಗಳಿಗೆ ತಮ್ಮ ಹಾದಿ ಹಿಡಿಯುವುದು ಕಷ್ಟವೇ ಆಗಲಿಲ್ಲ ಎನ್ನುವುದು ಅಚ್ಚರಿ ತಂದಿತು. ಜೇನ್ನೊಣಗಳು ಸೂರ್ಯನಿಲ್ಲದ ಮೋಡ ಕವಿದ ದಿನಗಳಲ್ಲಿ ಮಾಡುವಂತೆ ಇವು ನೆಲದಲ್ಲಿನ ಸ್ಥಾನಸೂಚಿಗಳನ್ನು ಬಳಸಲು ಸಾಧ್ಯವಿರಲಿಲ್ಲ. ಆಗ ಕತ್ತಲಿತ್ತು. ಆದ್ದರಿಂದ ಚಂದ್ರನಿಲ್ಲದ ರಾತ್ರಿಗಳಲ್ಲಿ ತಾರೆಗಳನ್ನೇ ದಿಕ್ಸೂಚಿಯನ್ನಾಗಿ ಬಳಸುತ್ತಿರಬಹುದೋ ಎಂದು ಇವರು ಊಹಿಸಿದರು. ಅದು ನಿಜವೆಂದೂ ನಿರೂಪಿಸಿದರು. ಈ ತೀರ್ಮಾನಗಳೆಷ್ಟು ಬೆರಗುಗೊಳಿಸುತ್ತದೆಯೋ, ಅಷ್ಟೇ ಬೆರಗು ಮೂಡಿಸುವಂತಿವೆ ಇವರ ಪ್ರಯೋಗಗಳು.

ಮೊದಲು ಇವರು ಈ ಸೆಗಣಿದುಂಬಿಗಳ ತಲೆಯ ಮೇಲೆ ಒಂದು ಪುಟ್ಟ ಟೊಪ್ಪಿಯನ್ನು ಹಾಕಿ ಅವಕ್ಕೆ ಆಕಾಶ ಕಾಣದಂತೆ ಮಾಡಿದರು. ಅನಂತರ ಜೋಹಾನ್ಸ್‌ ಬರ್ಗ್‌ ನಲ್ಲಿದ್ದ ತಾರಾಲಯದಲ್ಲಿ ಇವುಗಳನ್ನು ಪರೀಕ್ಷಿಸಿದರು. ರಾತ್ರಿ ಆಕಾಶದ ಚಿತ್ರಗಳ ದಿಕ್ಕನ್ನು ಬೇಕೆಂದ ಕಡೆಗೆ ಬದಲಿಸಬಹುದಿತ್ತು. ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಈ ಸೆಗಣಿದುಂಬಿಗಳು ಹಾಲುಹಾದಿಯನ್ನೇ ದಿಕ್ಸೂಚಿಯನ್ನಾಗಿ ಬಳಸಿಕೊಂಡವು.

‌ಇನ್ನೊಂದು ಪ್ರಯೋಗದಲ್ಲಿ ಇವರು ಸೆಗಣಿಯ ಮುದ್ದೆ ಮತ್ತು ಗೂಡಿನ ನಡುವೆ ಓಡಾಡುತ್ತಾ, ಸ್ವಲ್ಪ ಸ್ವಲ್ಪವೇ ಸೆಗಣಿಯನ್ನು ಹೊತ್ತು ತರುತ್ತಿದ್ದ ಸೆಗಣಿದುಂಬಿಯೊಂದನ್ನು ಅಧ್ಯಯನ ಮಾಡಿದರು. ಈ ದುಂಬಿಯದೊಂದು ವಿಶೇಷ ಸಮಸ್ಯೆ ಇತ್ತು. ಸಾಮಾನ್ಯವಾಗಿ ಕೆಲವು ಸೆಗಣಿದುಂಬಿಗಳು ಮಾಡುವಂತೆ ಇದು ತನ್ನ ಹಿಂಗಾಲುಗಳಿಂದ ಸೆಗಣಿಯ ಉಂಡೆಯನ್ನು ಎಳೆದುಕೊಂಡು ಸಾಗುತ್ತಿರಲಿಲ್ಲ. ಬದಲಿಗೆ ಹಿಂಗಾಲನ್ನು ಮೇಲೆತ್ತಿ, ಸೆಗಣಿಯ ಉಂಡೆಯನ್ನು ಅದರಿಂದ ದೂಡುತ್ತಾ ಹಿಮ್ಮುಖವಾಗಿ ನಡೆಯುತ್ತಿತ್ತು. ಅಂದರೆ ಇದು ಗೂಡಿನಿಂದ ಆಹಾರ ಹುಡುಕಿ ಹೊರಟಾಗಲೂ, ಗೂಡಿಗೆ ಮರಳುವಾಗಲೂ ಗೂಡಿಗೆ ವಿರುದ್ಧ ದಿಕ್ಕಿನಲ್ಲಿಯೇ ಮುಖ ಮಾಡಿಕೊಂಡಿರುತ್ತಿತ್ತು

ದೊಡ್ಡ ಹೊರೆಯನ್ನು ಹೊರುವಾಗ ಇರುವೆಗಳೂ ಕೆಲವೊಮ್ಮೆ ಹೀಗೆಯೇ ಹಿಮ್ಮುಖವಾಗಿ ನಡೆಯಬೇಕಾಗುತ್ತದೆ. ಆದರೆ ಆಗ ಅವು ಅಲ್ಲಲ್ಲಿ ನಿಂತು, ಗೂಡಿನ ದಿಕ್ಕಿಗೆ ತಿರುಗಿ ನೋಡಿ, ದಿಕ್ಕು ಗುರುತಿಸಿ ಮತ್ತೆ ನಡೆಯಲು ಆರಂಭಿಸುತ್ತವೆ.

ಹೀಗಾಗಿ ಬಿರ್ನೆ ಮತ್ತು ಸಂಗಡಿಗರು ಹಿಮ್ಮುಖವಾಗಿ ನಡೆಯುವ ಈ ದುಂಬಿಯನ್ನು ಹಲವು ರೀತಿಯಲ್ಲಿ ಪರೀಕ್ಷಿಸಿದರು. ಇನ್ನೇನು ಮನೆ ತಲುಪುತ್ತವೆ ಎಂದಿದ್ದ ದುಂಬಿಗಳನ್ನು ಸ್ಥಳಾಂತರಿಸಿ ನೋಡಿದರು. ಅವು ದಿಕ್ಕು ತಪ್ಪಿದವು. ಪಥಸಂಕಲನವನ್ನು ಬಳಸಿ ಅವು ಗೂಡಿನಿಂದ ತಾವಿದ್ದ ದೂರದಷ್ಟೆ ದೂರ ನಡೆದರೂ, ದಿಕ್ಕು ತಪ್ಪುತ್ತಿದ್ದುವು. ಅಂದರೆ ಅವು ಕೇವಲ ಪಥಸಂಕಲನವನ್ನಷ್ಟೆ ಅನುಸರಿಸಿದ್ದವು. ಸ್ಥಾನಸೂಚಿಗಳನ್ನಲ್ಲ. ದುಂಬಿಗಳ ರೀತಿಯಲ್ಲಿ ತಲೆಕೆಳಗಾಗಿ ನೋಡಿದಾಗ ಸ್ಥಾನಸೂಚಿಗಳು ಗೊಂದಲವನ್ನುಂಟು ಮಾಡುತ್ತವೆಯೋ?

“2009 ನೇ ಇಸವಿಯ ಬೇಸಗೆಯಲ್ಲಿ ನಮ್ಮಲ್ಲೊಬ್ಬರು ಕಾಡಿನಲ್ಲಿ ಪೊದೆಗಳ ನಡುವೆ ಗೆಳೆಯರ ಜೊತೆಗೂಡಿ ಈ ಸೆಗಣಿದುಂಬಿಗಳ ಜೊತೆಗೆ ಆಡುತ್ತಾ ಮೋಜು ಮಾಡುತ್ತಿದ್ದರು. ಸ್ವೀಡನ್‌, ಆಸ್ಟ್ರೇಲಿಯಾ, ಜರ್ಮನಿ ಮತ್ತು ದಕ್ಷಿಣ ಆಫ್ರಿಕಾದಿಂದ ಬಂದ ಈ ಗೆಳೆಯರು 2003 ನೇ ಇಸವಿಯಿಂದ ಪ್ರತಿವರ್ಷ ಹೀಗೆ ಜೊತೆಗೂಡುತ್ತಾರೆ.” ಎಂದು ಲನ್‌ ಮತ್ತು ಬಿರ್ನೆ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಬಹುಶಃ ಆ ಸೆಗಣಿ ದುಂಬಿಗಳೂ ಆಫ್ರಿಕಾದ ಆ ನೆಲದ ಉಬ್ಬು ತಗ್ಗುಗಳ ಮೇಲೆ ಸೆಗಣಿಯುಂಡೆಯನ್ನು ಉರುಳಿಸುತ್ತಾ ಮೋಜು ಮಾಡುತ್ತಿರಬಹುದು. ನಾವಿಲ್ಲಿ ಚರ್ಚಿಸಿದ ಈ ಪ್ರಯೋಗಗಳ ವಿಶೇಷವೇನೆಂದರೆ ಒಂದಿಷ್ಟು ಕುತೂಹಲ, ಸಾಹಸೀ ಮನಸ್ಸಿರುವ ಯಾರು ಬೇಕಾದರೂ ಮಾಡಬಹುದಾದ ಪ್ರಯೋಗಗಳು ಇವು. ಅದಕ್ಕೇ ವಿಜ್ಞಾನ ಎಂದರೆ ಮೋಜಿಗಿಂತಲೂ ಮೋಜು. ಆದರೆ ಹೀಗೆ ಮೋಜು ಮಾಡಬೇಕೆಂದರೆ ಈ ಸೆಗಣಿದುಂಬಿಗಳ ಜೊತೆಗೆ, ಅಷ್ಟೇ ಯಾಕೆ, ಈ ಭೂಮಿಯಲ್ಲಿರುವ ಎಲ್ಲ ಜೀವಿಗಳ ಜೊತೆಗೂ  ಸಹಬಾಳ್ವೆ ಮಾಡುವುದನ್ನು ನಾವು ಕಲಿಯಬೇಕು.

ಆಂಗ್ಲ ಮೂಲ: ಪ್ರೊ. ರಾಘವೇಂದ್ರ ಗದಗಕರ್‌; ಕನ್ನಡಾನುವಾದ: ಕೊಳ್ಳೇಗಾಲ ಶರ್ಮ. ಇಂಗ್ಲೀಷ್‌ ಮೂಲವನ್ನು ದಿನಾಂಕ 30.9.2020 ರ ದಿ ವೈರ್‌ ಸೈನ್ಸ್‌ ಜಾಲಪತ್ರಿಕೆಯಲ್ಲಿ ಓದಬಹುದು.

Scroll To Top