Now Reading
Kannada Podcast: Chandru’s Inordinate Fondness for Insects

Kannada Podcast: Chandru’s Inordinate Fondness for Insects

Representative image: Panos Sakalakis/Unsplash

The following text, in Kannada, was translated from the English original authored by Raghavendra Gadagkar (The Wire Science, April 28, 2021).

Kollegala Sharma kindly provided the translated version. It has also been rendered as a podcast by J.R. Manjunatha, available to listen below. Sharma and his team have been converting editions of Gadagkar’s column as podcasts, as part of an audio series called ‘JanaArime’.

Sharma is a chief scientist and Manjunatha is a technical officer, both at the CSIR-Central Food Technological Research Institute, Mysuru. His popular ‘Janasuddi’ podcast series is available to listen here.

§

ಸಂಪುಟ 4 ಸಂಚಿಕೆ 218 ಮೇ 1, 2021
ಜಾಣ ಅರಿಮೆ
ವಿಸ್ಮಯಕ್ಕಿಂತ ವಿಸ್ಮಯ 17
ಕೀಟ ಪ್ರೇಮಿ ಚಂದ್ರು

ಕೃಷ್ಣಪ್ಪ ಚಂದ್ರಶೇಖರ್‌ ಐಐಎಸ್ಸಿಯ ಪರಿಸರ ವಿಜ್ಞಾನ ಕೇಂದ್ರದಲ್ಲಿ ಲೇಖಕನ​ ವಿದ್ಯಾರ್ಥಿಗಳು ಆಯೋಜಿಸಿದ್ದ “ಸಮಾಜಜೀವಿಯಾಗು” (ಬಿಯಿಂಗ್‌ ಸೋಶಿಯಲ್)‌ ಎನ್ನುವ ವಿಚಾರ ಸಂಕಿರಣದಲ್ಲಿ ಭಾಷಣ ಮಾಡುತ್ತಿರುವುದು ಚಿತ್ರ: ಆರ್‌ ಜಿ ಲ್ಯಾಬ್‌ ಸಂಗ್ರಹ

“ಪ್ರಪಂಚ ನಾವು ಕಲ್ಪಿಸಿಕೊಂಡದ್ದಕ್ಕಿಂತಲೂ ವಿಚಿತ್ರವಷ್ಟೆ ಅಲ್ಲ​, ನಾವು ಕಲ್ಪಿಸಿಕೊಳ್ಳುವುದಕ್ಕಿಂತಲೂ ವಿಚಿತ್ರ” ಎಂದು ಕ್ರಾಂತಿಕಾರಿ ಜೀವಿವಿಜ್ಞಾನಿ ಹಾಗೂ ಬಹುಭಾಷಾವಿದನಾದ ಜೆ. ಬಿ. ಎಸ್‌ ಹಾಲ್ಡೇನ್‌ ಹೇಳಿದ್ದರಂತೆ. ಈ ಭೂಮಿಯ ಮೇಲೆ ಬೇರೆ ಯಾವುದೇ ಜೀವಿಯಲ್ಲಿ ಇರುವ ಪ್ರಭೇದಗಳಿಗಿಂತಲೂ ಹೆಚ್ಚಿನ ಪ್ರಭೇದಗಳು ದುಂಬಿಗಳಲ್ಲಿ ಇವೆ ಎನ್ನುವುದು ಅಂತಹ ವಿಚಿತ್ರಗಳಲ್ಲಿ ಒಂದು. ಈ ವಿಚಿತ್ರ ಸತ್ಯವೂ ಹಾಲ್ಡೇನರ ಹಾಸ್ಯ ಹಾಗೂ ಗಮನದಿಂದ ತಪ್ಪಿಸಿಕೊಂಡಂತೆ ಇಲ್ಲ. ಏಕೆಂದರೆ ಜೀವಿಗಳಿರುವ ರೀತಿಯನ್ನು ಅಧ್ಯಯನ ಮಾಡಿದಾಗ ಅವನ್ನು ಸೃಷ್ಟಿಸಿದ ಸೃಷ್ಟಿಕರ್ತನ ಬಗ್ಗೆ ಏನೆಂದು ತೀರ್ಮಾನಿಸಬಹುದು ಎಂದು ಕೆಲವು ಧಾರ್ಮಿಕರು ಕೇಳಿದಾಗ, ನಾಸ್ತಿಕರಾದ ಹಾಲ್ಡೇನ್‌ ಹೀಗೆ ಹೇಳಿದ್ದರಂತೆ: “ಅವನಿಗೆ ದುಂಬಿಗಳ ಬಗ್ಗೆ ಅಪಾರ ಪ್ರೇಮ ಇದ್ದಿರಬೇಕು.”

ಹಾಲ್ಡೇನ್‌ ನಿಜಕ್ಕೂ ಹಾಗೆ ಹೇಳಿದ್ದನೋ ಇಲ್ಲವೋ ಎಂಬುದನ್ನು ತೀರ್ಮಾನಿಸುವುದು ಕಷ್ಟ, ಆದರೆ “ಕಥೆಯೇ ಆದರೂ ಇದು ಹಾಲ್ಡೇನನ ಮಾತಿನಂತೆಯೇ ಧ್ವನಿಸುತ್ತದೆ ಎನ್ನುವುದು ನಿಜʼ ಎಂದು “ಎ ಡಾಮಿನೆಂಟ್‌ ಕ್ಯಾರೆಕ್ಟರ್:‌ ದಿ ರೇಡಿಕಲ್‌ ಸೈನ್ಸ್‌ ಅನದ ರೆಸ್ಟ್‌ಲೆಸ್‌ ಪಾಲಿಟಿಕ್ಸ್‌ ಆಫ್‌ ಜೆ. ಬಿ. ಎಸ್.‌ ಹಾಲ್ಡೇನ್‌” ಎನ್ನುವ ಜೆ.ಬಿ.ಎಸ್‌. ಹಾಲ್ಡೇನರ ಇತ್ತೀಚಿನ ಜೀವನಚರಿತ್ರೆಯಲ್ಲಿ ಲೇಖಕ ಸಮಂತ್‌ ಸುಬ್ರಮಣ್ಯನ್ ಹೇಳಿದ್ದಾರೆ.

ಸೃಷ್ಟಿಯೋ, ವಿಕಾಸವೋ! ದುಂಬಿಯ ಬಗೆಗೇಕೆ ಈ ಒಲವು? ಎನ್ನುವ ಹಾಲ್ಡೇನ್‌ ಹೇಳಿದನೆನ್ನಲಾದ ಈ ಮಾತು ಜೀವಿವಿಜ್ಞಾನಿಗಳಿಗೆ ಕಚಗುಳಿ ಇಡುತ್ತಲೇ ಇದೆ ಎನ್ನಬಹುದು. ರಾಬರ್ಟ್‌ ಮೇ ಹೇಳುವ ಪ್ರಕಾರ ನಾವು ಎಲ್ಲ ಕೀಟಗಳನ್ನೂ ಪರಿಗಣಿಸಿದರೆ “ಅಂದಾಜು ಎಲ್ಲ ಜೀವಿಪ್ರಭೇದಗಳೂ ಕೀಟಗಳೇ” ಎನ್ನಿಸಿಬಿಡಬಹುದು. ಹಾಗೆಂದರೂ, ಕೀಟಗಳ ಬಗ್ಗೆಯಷ್ಟೆ ನಿಸರ್ಗಕ್ಕೆ ಏಕೆ ಇಷ್ಟು ಒಲವು? ಈ “ಏಕೆ”ಗಳಿಗೆ ಉತ್ತರ ಹುಡುಕುವ ಮುನ್ನ ನಾವು ವಿವಿಧ ಪ್ರಾಣಿಗಳು ಹಾಗೂ ಸಸ್ಯಗಳಲ್ಲಿರುವ ಪ್ರಭೇದಗಳ ಬಗ್ಗೆ ನಿಖರವಾಗಿ ತಿಳಿಯಬೇಕಾಗುತ್ತದೆ. ಇದು, ಸಣ್ಣಪುಟ್ಟ ಕೆಲಸವಂತೂ ಅಲ್ಲ. ಇದುವರೆವಿಗೂ ಎಷ್ಟು ಪ್ರಭೇದಗಳ ಬಗ್ಗೆ ಅರಿತಿದ್ದೇವೆ, ಇನ್ನೆಷ್ಟನ್ನು ಇನ್ನೂ ದಾಖಲಿಸಬೇಕಿದೆ ಎನ್ನುವುದರ ಬಗ್ಗೆ ಸಾಕಷ್ಟು ಅನಿಶ್ಚಿತತೆ ಇದೆ ಎನ್ನುವುದೇ ಸ್ವಾರಸ್ಯ. ದುಂಬಿಗಳ ವೈವಿಧ್ಯ.

Staatliches Museum für Naturkunde Karlsruhe, Germany. ಚಿತ್ರ: ಹೆಚ್.‌ ಜೆಲ್‌

ಪ್ರಭೇದಗಳು ಎಷ್ಟಿವೆ?

ಸ್ವೀಡಿಷ್‌ ಪ್ರಕೃತಿಶಾಸ್ತ್ರಜ್ಞ ಕಾರ್ಲ್‌ ಲಿನೇಯಸ್‌ ೧೭೦೦ನೇ ಶತಮಾನದಲ್ಲಿ ದ್ವಿಪದ ನಾಮಕರಣ ಅಥವಾ ಬೈನಾಮಿಯಲ್‌ ನಾಮೆಂಕ್ಲೇಚರ್‌ ಎನ್ನುವ ವರ್ಗೀಕರಣ ವ್ಯವಸ್ಥೆಯನ್ನು ರೂಪಿಸಿದ ದಿನದಿಂದ, ವಿವಿಧ ಬಗೆಯ ಪ್ರಾಣಿಗಳು ಹಾಗೂ ಸಸ್ಯಗಳ ಪ್ರಭೇದಗಳು ಎಷ್ಟಿವೆ ಎನ್ನುವುದನ್ನು ಲೆಕ್ಕ ಮಾಡುವುದೇ ಹಲವು ಜೀವಿವಿಜ್ಞಾನಿಗಳ ಬದುಕಾಗಿ ಬಿಟ್ಟಿದೆ. ಸೂಕ್ಷ್ಮಜೀವಿಗಳ ಕಥೆ ಬೇರೆ ಬಿಡಿ. ಇಂತಹ ಸಾಹಸಕ್ಕೆಳೆಸಿದ ಜೀವಿವಿಜ್ಞಾನಿಗಳಲ್ಲಿ ಜನಪ್ರಿಯ ಹಾಗೂ ಪ್ರಭಾವಿಯಾದವನು ರಾಬರ್ಟ್‌ ಮೇ (1936-2020) ರಾಯಲ್‌ ಸೊಸೈಟಿಯ ಅಧ್ಯಕ್ಷನಾಗಿದ್ದ ಹಾಗೂ ತಾತ್ವಿಕ ಪರಿಸರವಿಜ್ಞಾನಿಯಾಗಿ ಬದಲಾದ ಪ್ರತಿಷ್ಠಿತ ಭೌತವಿಜ್ಞಾನಿಯೊಬ್ಬರಿಗೆ ಈ ಗೊಂದಲ​ದ ಕೆಲಸದಲ್ಲಿ ಆಸಕ್ತಿ ಕುದುರಿದ್ದು ಹೇಗೆಂದು ನಿಮಗೆ ಅಚ್ಚರಿಯಾಗಬಹುದು. ಆದರೆ ಮೇ ಗೆ ಹಾಗೆ ಎನ್ನಿಸಿರಲೇ ಇಲ್ಲ. ದಿ ಡೈಮೆಂಶನ್ಸ್‌ ಆಫ್‌ ಲೈಫ್‌ ಆನ್‌ ಅರ್ತ್‌ ಅಥವಾ ಭೂಮಿಯ ಮೇಲಿರುವ ಜೀವಿಗಳ ಆಯಾಮ ಎನ್ನುವ ಪ್ರಬಂಧದಲ್ಲಿ ಆತ ನಮೂದಿಸಿರುವ, ಅದುವರೆಗೂ ದಾಖಲಿಸಿದ, ಹಾಗೂ ದಾಖಲಾಗದಿದ್ದ, ಜೀವಿಪ್ರಭೇದಗಳ ಸಂಖ್ಯೆಯು ಇಂದಿನವರೆಗೂ ಅತ್ಯುತ್ತಮ ಅಂದಾಜುಗಳೆನ್ನಿಸಿವೆ. ತರ್ಕಬದ್ಧವಾದ ಸಂಖ್ಯೆಗಳಾಗಿ ಉಳಿದಿವೆ.

(L-R) V. Krishnan, Robert May, M.K. Chandrashekaran and Amitabh Joshi, on the occasion of Robert May’s visit to the Jawaharlal Nehru Centre for Advanced Scientific Research, Bengaluru, February 2002. Photo: Raghavendra Gadagkar

ಈಗಾಗಲೇ ಗೊತ್ತಿರುವಂತಹ ಪ್ರಭೇದಗಳ ಸಂಖ್ಯೆಗಳೂ ಅನಿಶ್ಚಿತವೆನ್ನುವುದಕ್ಕೆ ಕಾರಣವಿದೆ. ವಿವಿಧ ದೇಶಗಳು, ಭೂಖಂಡಗಳು ಹಾಗೂ ಭಾಷೆಗಳಲ್ಲಿ ಹಲವಾರು ಶತಮಾನಗಳಿಂದ ದಾಖಲಾದ ಈ ಮಾಹಿತಿಯನ್ನು ಕ್ರಢೀಕರಿಸುವ ಕೆಲಸ ಆಗಬೇಕಾದಷ್ಟು ಆಗಿಲ್ಲ. ಜೊತೆಗೆ ಆಗಾಗ್ಗೆ ತಲೆದೋರುವ ಸಿನಾನಿಮಿ — ಸಮನಾಮಕರಣ- ಈ ಅನಿಶ್ಚಿತತೆಗೆ ಇಂಬು ಕೊಟ್ಟಿದೆ. ಒಂದೇ ಪ್ರಭೇದಕ್ಕೆ ಒಬ್ಬರಿನ್ನೊಬ್ಬರ ಬಗ್ಗೆ ಅರಿವಿಲ್ಲದ ಪರಿಣತರು ಬೇರೆ, ಬೇರೆ, ಹೆಸರುಗಳನ್ನು ಕೊಟ್ಟಿರುವುದನ್ನೇ ಸಮನಾಮಕರಣ ಎನ್ನುತ್ತೇವೆ. ದಾಖಲಾಗಿದೆಯೋ, ಇಲ್ಲವೋ, ಒಟ್ಟಾರೆ ಎಷ್ಟು ಜೀವಿಪ್ರಭೇದಗಳು ಇರಬಹುದು ಎನ್ನುವ ಅಂದಾಜು ಅನಿಶ್ಚಿತವೆನ್ನಿಸಿರುವುದಕ್ಕೆ ಅದನ್ನು ಲೆಕ್ಕ ಹಾಕುವ ವಿಧಾನಗಳಿಗೆ ಸಂಬಂಧಿಸಿದೆ. ಇಂಥದ್ದೊಂದು ವಿವರಣೆಗೆ ಹೋಲುವ ಎಷ್ಟು ಪ್ರಭೇದಗಳ ಹುಳುಗಳು ಈ ಪ್ರಪಂಚದಲ್ಲಿ ಇವೆ ಎನ್ನುವುದನ್ನು ಲೆಕ್ಕ ಹಾಕುವುದಾದರೂ ಹೇಗೆ? ಅಲ್ಲವೇ?

ಈ ಎಲ್ಲ ಅಡೆತಡೆಗಳನ್ನೂ ಎದುರಿಸಿಯೂ ನಮ್ಮ ಜೀವಿವರ್ಗೀಕರಣ ವಿಜ್ಞಾನಿಗಳು ಮತ್ತು ಪರಿಸರತಜ್ಞರು ಅಂದಾಜು ಸಂಖ್ಯೆಯನ್ನು ಪರಿಷ್ಕರಿಸುತ್ತಲೇ ಇದ್ದಾರೆ. ಇವುಗಳ ಇತ್ತೀಚಿನ ಸಂಖ್ಯೆಗಳನ್ನು ರಾಬರ್ಟ್‌ ಮೇ ಪ್ರಸ್ತುತ ಪಡಿಸಿದ್ದರು. ಚುಟುಕಾಗಿ ಹೇಳುವುದಾದರೆ, ಅವರ ಪ್ರಕಾರ ವಿಜ್ಞಾನಿಗಳು ಒಟ್ಟು ಹದಿನೈದು ಲಕ್ಷ ಪ್ರಭೇದಗಳನ್ನು ಗುರುತಿಸಿ ದಾಖಲಿಸಿದ್ದಾರೆ. ಇವುಗಳಲ್ಲಿ ಏಳು ಲಕ್ಷದ ಇಪ್ಪತ್ತು ಸಾವಿರ ಪ್ರಭೇದಗಳು ಕೇವಲ ಕೀಟಗಳು. ಅವರ ಅಂದಾಜಿನ ಪ್ರಕಾರ ಇಂದು ಭೂಮಿಯ ಮೇಲೆ ಅಂದಾಜು ಅರವತ್ತೆಂಟು ಲಕ್ಷ ಬಗೆಯ ಜೀವಿಗಳು ಜೀವಿಸುತ್ತಿವೆ. ಈ ಅಂದಾಜು ಹದಿನೈದು ಲಕ್ಷಕ್ಕೇರಬಹುದು. ಈ ಅರವತ್ತೆಂಟು ಲಕ್ಷದಲ್ಲಿ ನಲವತ್ತು ಲಕ್ಷ ಜೀವಿಗಳು ಕೀಟಗಳಾಗಿರುತ್ತವೆ ಎನ್ನುವ ಊಹೆ ಇದೆ. ಅಂದ ಹಾಗೆ ಈ ಸಂಖ್ಯೆಯಲ್ಲಿ ಸೂಕ್ಷ್ಮ ಜೀವಿಗಳ ಪ್ರಭೇದಗಳನ್ನು ಸೇರಿಸಿಲ್ಲ. ಅದನ್ನು ಅಂದಾಜಿಸುವುದು ಇನ್ನೂ ಕಷ್ಟ.

ಈ ಎಲ್ಲ ಸಂಖ್ಯೆಗಳಲ್ಲಿ ಎದ್ದು ಕಾಣುವ ವಿಶೇಷ ಎಂದರೆ, ಇಪ್ಪತ್ತೊಂದನೆಯ ಶತಮಾನದಲ್ಲಿ ಎರಡು ದಶಕಗಳನ್ನು ಕಳೆದ ಮೇಲೂ ನಾವು ಈ ಭೂಮಿಯ ಮೇಲಿನ ಜೀವಿವೈವಿಧ್ಯದಲ್ಲಿ ಇನ್ನೂ ಶೇಕಡ ೮೦ರಷ್ಟನ್ನು ಕಂಡಿಲ್ಲ. ಗುರುತಿಸಿಲ್ಲ. ಹೆಸರನ್ನೂ ಕೊಟ್ಟಿಲ್ಲ. ದಾಖಲಿಸಿರುವ ಪ್ರಭೇದಗಳು ಹಾಗೂ ಒಟ್ಟಾರೆ ಇರಬಹುದಾದ ಪ್ರಭೇದಗಳ ಸಂಖ್ಯೆಯಲ್ಲಿ ಇರುವ ಈ ಕಂದರ ಎಲ್ಲ ಬಗೆಯ ಗಿಡಗಳು ಹಾಗೂ ಪ್ರಾಣಿಗಳಲ್ಲಿ ಒಂದೇ ತೆರನಾಗಿರುವುದಿಲ್ಲ. ಸಸ್ಯಗಳಲ್ಲಿ ಅಂದಾಜು ಶೇಕಡ ಹದಿನೈದರಷ್ಟು ಹಾಗೂ ಬೆನ್ನುಮೂಳೆ ಇರುವ ಪ್ರಾಣಿಗಳಲ್ಲಿ ಶೇಕಡ ಹತ್ತರಷ್ಟು ಮಾತ್ರ ದಾಖಲಾಗದೆ ಉಳಿದಿವೆ. ಆದರೆ ಕೀಟಗಳಲ್ಲಿ ಶೇಕಡ ಎಂಭತ್ತೆರಡರಷ್ಟು ಹಾಗೂ ಹುಳುಗಳಲ್ಲಿ ಶೇಕಡ ೯೭ರಷ್ಟು ಇನ್ನೂ ದಾಖಲೇ ಆಗಿಲ್ಲ.

ಇದಕ್ಕೆ ಜೀವಿಗಳನ್ನು ಗುರುತಿಸಿ, ಪಟ್ಟಿ ಮಾಡಿ, ವರ್ಗೀಕರಣ ವಿಜ್ಞಾನಿಗಳ ಕೊರತೆಯೇ ಇದಕ್ಕೆ ಕಾರಣವೆಂದು ದೂರಲಾಗುತ್ತದೆ. ಇತ್ತೀಚೆಗಂತು ಈ ಕೊರತೆ ಹೆಚ್ಚೇ ಆಗಿದೆ. ಆದರೆ ರಾಬರ್ಟ್‌ ಮೇ ಇನ್ನೂ ಒಂದು ಸೂಕ್ಷ್ಮ ವಿಷಯವನ್ನು ಬಲು ಮುಕ್ತವಾಗಿ ಚರ್ಚಿಸಿದ್ದಾನೆ. ವಿವಿಧ ಜೀವಿಪ್ರಭೇದಗಳನ್ನು ನಾವು ನೋಡುವುದರಲ್ಲಿ ತೋರುವ ಭೇದನೀತಿಯ ಬಗ್ಗೆ ಹೇಳುತ್ತಾನೆ. “ಪ್ರಭೇದಗಳು ಹಾಗೂ ಅವುಗಳನ್ನು ವರ್ಗೀಕರಿಸುವ ವಿಜ್ಞಾನಿಗಳ ಸಂಖ್ಯೆಯ ಪರಿಮಾಣವನ್ನು ಗಮನಿಸಿದರೆ, ಬೆನ್ನುಮೂಳೆಯ ಪ್ರಾಣಿಗಳ ವರ್ಗೀಕರಣ ಮಾಡುವವರ ಸಂಖ್ಯೆ ಸಸ್ಯಗಳ ವರ್ಗೀಕರಣ ಮಾಡುವವರದ್ದಕ್ಕಿಂತ ಹತ್ತು ಪಟ್ಟು ಹೆಚ್ಚು ಹಾಗೂ ಸಸ್ಯಗಳನ್ನು ವರ್ಗೀಕರಣ ಮಾಡುವವರ ಸಂಖ್ಯೆ ಅಕಶೇರುಕಗಳ ಅಧ್ಯಯನಕಾರರಿಗಿಂತ ಹತ್ತು ಪಟ್ಟು ಹೆಚ್ಚು.” ಎಂದು ಆತ ಟಿಪ್ಪಣಿಸಿದ್ದಾನೆ. ಅಷ್ಟೇ ಅಲ್ಲ, “ಇದು ಹೀಗಾಗಬಾರದು. ಇದು ಫ್ಯಾಶನ್ನೇ ಹೊರತು ವಿಕಾಸದ ದೃಷ್ಟಿಯಲ್ಲಿಯೋ, ಪರಿಸರಕ್ಕೆ ಅವು ನೀಡುವ ಕೊಡುಗೆಯ ದೃಷ್ಟಿಯಲ್ಲಿಯೋ ಆಯಾ ವರ್ಗದ ಜೀವಿಯ ಪ್ರಾಮುಖ್ಯತೆಯನ್ನು ಬಿಂಬಿಸುವುದಿಲ್ಲ.” ಎಂದು ಎಚ್ಚರಿಸಿದ್ದಾನೆ.

“ಆದರೆ ಹೀಗೆ ಈ ನಿಸರ್ಗದ ಬಹುತೇಕ ಸಂಗತಿಗಳನ್ನು ನಡೆಸುವ ಪುಟ್ಟ, ಪುಟ್ಟ ಜೀವಿಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುವತ್ತ ನಮ್ಮ ಆದ್ಯತೆಗಳನ್ನು ಕ್ಷಿಪ್ರವಾಗಿ ಬದಲಾಯಿಸಿಕೊಳ್ಳುವುದು ಸುಲಭವಲ್ಲ. ಹಕ್ಕಿಗಳು ಹಾಗೂ ಪ್ರಾಣಿಗಳ ಬಗ್ಗೆ ನಮಗಿರುವ ಆಸಕ್ತಿ ಆಳವಾದದ್ದು. ಇಂಗ್ಲೆಂಡಿನಲ್ಲಿ, ಪಕ್ಷಿ ಸಂರಕ್ಷಣೆಯ ಸಂಘದಲ್ಲಿ ಹತ್ತು ಲಕ್ಷ ಸದಸ್ಯರಿದ್ದಾರೆ. ಇದೇ ರೀತಿಯ ಸಸ್ಯ ಸಂರಕ್ಷಣೆಯ ಸಂಘ,ಬೊಟಾನಿಕಲ್‌ ಸೊಸೈಟಿ ಆಫ್‌ ಬ್ರಿಟಿಷ್‌ ಐಲ್ಸ್‌ ಸಂಘದಲ್ಲಿ ಹತ್ತು ಸಾವಿರ ಸದಸ್ಯರಿದ್ದಾರೆ. ಆದರೆ ಹುಳುಗಳ ಬಗ್ಗೆ ಆಸಕ್ತಿ ತೋರುವಂತಹ ಇಂತಹ ಯಾವುದೇ ಸಂಘವೂ ಇಲ್ಲವೇ ಇಲ್ಲ.” ಎನ್ನುವ ಮೇ ಮಾತುಗಳು ಇನ್ನೂ ಗಾಭರಿಯುಂಟು ಮಾಡಬೇಕು.

ಈ ಪುಸ್ತಕದಲ್ಲಿಯೇ ಇನ್ನೊಂದು ಗಹನವಾದ ಪ್ಯಾರಾವೊಂದರಲ್ಲಿ ರಾಬರ್ಟ್‌ ಮೇ ಹೀಗೆ ಹೇಳಿದ್ದಾರೆ:

“ಭೌತವಿಜ್ಞಾನದ ಕೆಲವು ಬುದ್ಧಿಗೇಡಿ ಸಹೋದ್ಯೋಗಿಗಳು ಈ ರೀತಿ ಪಟ್ಟಿ ಮಾಡುವುದನ್ನು “ಅಂಚೆ ಚೀಟಿ” ಸಂಗ್ರಹದಂತೆ ಎಂದು ತಪ್ಪು ತಿಳಿದಿದ್ದಾರೆ. ಆದರೆ ವಿಕಾಸ ಹಾಗೂ ಪರಿಸರಕ್ಕೆ ಕುರಿತಂತೆ ಯುಕ್ತವಾದ ಪ್ರಶ್ನೆಗಳನ್ನು ಕೇಳುವುದಕ್ಕೂ, ಪ್ರಾಣಿಸಂರಕ್ಷಣೆಯಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕು ಎಂದು ವೈಜ್ಞಾನಿಕವಾಗಿ ತೀರ್ಮಾನ ಕೈಗೊಳ್ಳಲೂ ಇಂತಹ ಮಾಹಿತಿ ಇರಬೇಕಾಗುತ್ತದೆ. ಹಾಗೊಮ್ಮೆ ಬೇರೆ ಗ್ರಹಗಳಲ್ಲಿ ಜೀವಿಗಳು ಇವೆಯಾದರೆ, ಅವುಗಳದ್ದೂ ಕೂಡ ನಮ್ಮಂತೆಯೇ, ತಮ್ಮೊಂದಿಗೇ ಬದುಕುತ್ತಿರುವ ಜೀವಿಗಳ ಬಗ್ಗೆ ತಿಳಿಯುವುದರ ಬದಲಿಗೆ ಪರಮಾಣುಗಳ ರಚನೆಯ ಬಗ್ಗೆ, ವಿಶ್ವದ ಗತಿ-ಸ್ಥಿತಿಯ ಬಗ್ಗೆ ಹೆಚ್ಚು ಆಸಕ್ತಿ ತೋರುವಂತಹ ಬುದ್ಧಿಗೇಡಿತನ ಇರಬಹುದೋ ಎಂಬುದು ಸ್ವಾರಸ್ಯಕರ ಪ್ರಶ್ನೆ.” ಒಬ್ಬ ಭೌತವಿಜ್ಞಾನಿ ಈ ಮಾತನ್ನು ಹೇಳಿರುವುದು ಅದ್ಭುತ​ !

ಉಷ್ಣವಲಯದಲ್ಲಿ ಕೀಟ ವೈವಿಧ್ಯ

ಇಂತಹ ಪ್ರಶ್ನೆಗಳು ನನ್ನನ್ನೂ ಧೀರ್ಘಕಾಲದಿಂದ ಕಾಡಿವೆ. ಉಷ್ಣವಲಯದ ಪ್ರದೇಶಗಳಲ್ಲಿ ಜೀವಿವೈವಿಧ್ಯ ಹೆಚ್ಚು ಹಾಗೂ ಇಲ್ಲಿ ಅದು ಅಷ್ಟೇ ಶೀಘ್ರವಾಗಿ ಮರೆಯಾಗುತ್ತಿದೆ ಎಂಬುದರ ಅರಿವು ಇರುವ ನನಗೆ ಪ್ರಪಂಚದಲ್ಲಿ ಇರುವ ಜೀವಿವೈವಿಧ್ಯ ಹಾಗೂ ಜೀವಿವಿಜ್ಞಾನಿಗಳ ವಿತರಣೆಯಲ್ಲಿ ಋಣಾತ್ಮಕ ಸಂಬಂಧವಿದೆ ಎನ್ನುವ ಸ್ಮಿತ್ಸೋನಿಯನ್‌ ಟ್ರಾಪಿಕಲ್‌ ರಿಸರ್ಚ್‌ ಇನ್ಸ್‌ಟಿಟ್ಯೂಟಿನ ನಿರ್ದೇಶಕರಾದ ಮೈಖೇಲ್‌ ಎಚ್ ರಾಬಿನ್ಸನ್‌ ಅವರ ಕುಟುಕು ನುಡಿ ನನ್ನ ಮನಸ್ಸಿನಲ್ಲಿ ನಾಟಿಬಿಟ್ಟಿತ್ತು. ಪೇಪರ್‌ ಕಣಜದ ಕಥೆ ಎಷ್ಟೇ ಸ್ವಾರಸ್ಯಕರ ಎನ್ನಿಸಿದರೂ ಅದೊಂದೇ ಜೀವಿಯನ್ನು ಅಧ್ಯಯನ ಮಾಡುವುದ ರ ಜೊತೆ ಜೀವಿವೈವಿಧ್ಯದ ಬಗ್ಗೆ ಸಂಶೋಧನೆ ಮತ್ತು ಸಂರಕ್ಷಣೆಗೆ ಉಪಯೋಗವಾಗುವಂತಹ​ ಕೆಲಸವನ್ನು ಮಾಡಬೇಕೆಂಬ ತುಡಿತ ಉಂಟಾಯಿತು. ದೇಶಕ್ಕೆ ಸಂಕಟ ಎದುರಾದಾಗ ಇಲ್ಲವೇ ಯುದ್ಧ ಸಮಯದಲ್ಲಿ ತಾವೂ ಏನನ್ನಾದರೂ ಮಾಡಬೇಕು ಎಂದು ಮೂಲವಿಜ್ಞಾನದ ಸಂಶೋಧಕರು ಅಂದು ಕೊಳ್ಳುವ ರೀತಿಯಲ್ಲಿಯೇ ಇದುವೂ ಇತ್ತು.

ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ಸಂಸ್ಥೆಯಲ್ಲಿ ಹೊಸದಾಗಿ ಸ್ಥಾಪನೆಗೊಂಡಿದ್ದ ಪರಿಸರವಿಜ್ಞಾನ ಕೇಂದ್ರದಲ್ಲಿ 1984ರಲ್ಲಿ ಅಧ್ಯಾಪಕನಾಗಿ ನೇಮಕಗೊಂಡಾಗ, ಇದಕ್ಕೊಂದು ಅವಕಾಶ ನನಗೆ ಒದಗಿತು. ಕೀಟಗಳು ನನಗೆ ಬಲು ಮೆಚ್ಚು. ಆದರೆ ಅವುಗಳ ವೈವಿಧ್ಯವನ್ನು ಕಲಿಯುವ ಕೌಶಲ್ಯ ನನಗೆ ಇರಲಿಲ್ಲ. ಆಧರೆ ಅದೃಷ್ಟ ಒಲಿದು ಬಂತು. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೀಟವಿಜ್ಞಾನದಲ್ಲಿ ಎಂಎಸ್ಸಿ ಪದವಿ ಪಡೆದ ಕೃಷ್ಣಪ್ಪ ಚಂದ್ರಶೇಖರ ನನ್ನ ಮೊದಲ ಪಿಎಚ್‌ಡಿ ವಿದ್ಯಾರ್ಥಿಯಾಗಿ ಜೊತೆಗೂಡಿದ. ನಾವು ಪ್ರೀತಿಯಿಂದ ಚಂದ್ರು ಎನ್ನುತ್ತಿದ್ದ ಆತ ಕೀಟಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದನಲ್ಲದೆ, ಕೀಟಗಳ ಬಗೆ ಅಸಾಮಾನ್ಯ ಎನ್ನುವಷ್ಟ ಪ್ರೇಮವೂ ಇತ್ತು. ಹೀಗೆ ಆರಂಭವಾದ ಒಂದು ಪ್ರೇಮಕಥೆ ಕೆಲವು ವಾರಗಳ ಹಿಂದೆ ಚಂದ್ರು ಕೋವಿಡ್‌ ಖಾಯಿಲೆಗೆ ಬಲಿಯಾಗುವ ದುರಂತ ಸಂಭವಿಸುವವರೆಗೂ ಧಾರಾವಾಹಿಯಾಗಿತ್ತು.

ಉಷ್ಣವಲಯದಲ್ಲಿ ಕೀಟವೈವಿಧ್ಯದ ಬಗ್ಗೆ ಅಧ್ಯಯನಗಳ ಕೊರತೆ ಇರುವುದಕ್ಕೆ ಇಲ್ಲಿನ ಪರಿಸ್ಥಿತಿಗಳಿಗೆ ಹೊಂದುವಂತಹ ಅಧ್ಯಯನ ತಂತ್ರಗಳು ಇಲ್ಲದಿರುವುದೇ ಕಾರಣ ಎಂಬುದು ನಮಗೆ ಬಲುಬೇಗ ಅರ್ಥವಾಯಿತು. ಕೀಟವೈವಿಧ್ಯವನ್ನು ದೀರ್ಘಾವಧಿಯಲ್ಲಿ ಗಮನಿಸುವ ಬಹುತೇಕ ಸಂಶೋಧನೆಗಳೆಲ್ಲವೂ ಸುಸಜ್ಜಿತವಾದಂತಹ ಇಂಗ್ಲೆಂಡಿನ ರೋಥಾಮ್ಸ್ಟೆಡ್‌ ಸಂಶೋಧನಾಲಯ ದಲ್ಲೋ, ಪನಾಮಾದಲ್ಲಿದ್ದ ಸ್ಮಿತ್ಸೋನಿಯನ್‌ ಟ್ರಾಪಿಕಲ್‌ ರಿಸರ್ಚ್‌ ಇನ್ಸ್‌ಟಿಟ್ಯೂಟಿನಲ್ಲಿಯೋ ನಡೆಯುತ್ತಿದ್ದುವು. ಅದಕ್ಕಿಂತಲೂ ಮುಖ್ಯವಾಗಿ ಈ ಎಲ್ಲ ಅಧ್ಯಯನಗಳೂ ದಟ್ಟ ಕಾಡಿನ ನಡುವೆ ವರ್ಷಗಳ ಕಾಲ ವಿದ್ಯತ್ ದೀಪಗಳ​ ಬೆಳಕಿನ ಆಕರ್ಷಣೆಯಿಂದ ಸೆಳೆದು ಹಿಡಿದ ಕೀಟಗಳ ಮೇಲಾಗಿದ್ದುವು. ಎಡೆಬಿಡದೆ ವಿದ್ಯುತ್‌ ಪೂರೈಕೆ ನಮ್ಮ ಪಟ್ಟಣಗಳಲ್ಲಿಯೇ ಆಗುತ್ತಿಲ್ಲ, ಇನ್ನು ಕಾಡಿನ ಮಧ್ಯೆ ಸಿಗುವುದಿಲ್ಲವೆಂದು ಹೇಳಬೇಕಿಲ್ಲವಷ್ಟೆ.

ಜೊತೆಗೆ ಪಾಶ್ಚಿಮಾತ್ಯ ವಿಜ್ಞಾನಿಗಳು ಬಳಸುವ ಈ ರೀತಿಯ ಬೆಳಕಿನ ಖೆಡ್ಡಾಗಳ ಬಗ್ಗೆ ನನಗೊಂದು ಸಂದೇಹವೂ ಇತ್ತು. ದಿನದ ಇಪ್ಪತ್ತನಾಲ್ಕೂ ಗಂಟೆಗಳು, ವಾರದ ಎಲ್ಲ ದಿನಗಳಲ್ಲಿಯೂ ಹೀಗೆ ದೀಪದ ಪಂಜರಗಳನ್ನು (ದೀಪದ ಸೆರೆಗಳನ್ನು) ಇಟ್ಟು ಕೀಟಗಳನ್ನು ಹಿಡಿಯುವಾಗ, ಬೇಕೋ ಬೇಡವೋ ಸಂಶೋಧನೆಗೆ ಅವಶ್ಯವಾಗಿದ್ದಕ್ಕಿಂತಲೂ ಹೆಚ್ಚು ಕೀಟಗಳನ್ನು ಹಿಡಿಯಲಾಗುತ್ತಿತ್ತು. ಹಲವಾರು ಕಿಲೋಗ್ರಾಂಗಳಷ್ಟು ಕೀಟಗಳು ನಾಶವಾಗುತ್ತಿದ್ದುವು. ಇದು ಅಪಾರ ನಷ್ಟವಲ್ಲದೆ, ನಮ್ಮ ಅಧ್ಯಯನಗಳು ಕೀಟಜಗತ್ತಿಗೆ ನೀಡಬಹುದಾದ ಲಾಭಕ್ಕಿಂತಲೂ ಇದರಿಂದಾಗುವ ಹಾನಿಯೇ ಹೆಚ್ಚಿರಬಹುದು ಎಂದು ನನಗೆ ಅನಿಸಿತ್ತು. ಈ ಎರಡೂ ಸಮಸ್ಯೆಗಳಿಗೆ ಒಂದು ಸರಳ ಪರಿಹಾರವೂ ಇತ್ತು.

Left: A locally fabricated, low efficiency, battery-operated light trap to catch insects: insects are attracted to the light from the battery, bounce off the aluminium baffles and fall through the funnel into the plastic bottle. Right: A scented trap: insects are attracted to the fermenting liquid in the bottle and fly in to be trapped. Photos: RG Lab Collection

ನಾವು ಇದಕ್ಕಾಗಿ ಒಂದು ಸರಳವಾದ, ಬ್ಯಾಟರಿ ಚಾಲಿತ ದೀಪದ ಪಂಜರವನ್ನು ರಚಿಸಿದೆವು. ಇದನ್ನು ಬೇಕೆಂದಾಗ ಬಿಚ್ಚಿ, ಬೇಕೆಂದಲ್ಲಿಗೆ ಕೊಂಡೊಯ್ಯಬಹುದಾಗಿತ್ತು. ಕಾಡಿನ ನಡುವೆ ಇವು ಬ್ಯಾಟರಿಯಿಂದ ಕೆಲಸ ಮಾಡಿ, ಒಂದಿಷ್ಟು ಕೀಟಗಳನ್ನು ಹಿಡಿಯುತ್ತಿದ್ದುವು. ಉದ್ದೇಶಪೂರ್ವಕವಾಗಿ ಹೀಗೆ ವಿನ್ಯಾಸ ಮಾಡಿದ ಕಡಿಮೆ ಸಾಮರ್ಥ್ಯದ ದೀಪದ ಪಂಜರಗಳ ಜೊತೆ, ಜೊತೆಗೇ ಸ್ವಲ್ಪ ಪರಿಶ್ರಮದ ಹಲವು ತಂತ್ರ ಗಳನ್ನೂ ಬಳಸಿದೆವು. ಇವುಗಳನ್ನು ಎಲ್ಲಿ ಬೇಕಿದ್ದರೂ ಬಳಸಬಹುದಿತ್ತು. ನಾವು ಇದಕ್ಕಾಗಿ ವಾಸನೆ ಪಂಜರಗಳನ್ನು ರೂಪಿಸಿದೆವು. ಒಂದು ಪ್ಲಾಸ್ಟಿಕ್‌ ಬಾಟಲಿ ಹಾಗೂ ವೆನಿಲಾ ಪರಿಮಳ ಬೆರೆಸಿದ ಹುಳೀ ಬೆಲ್ಲಕ್ಕೆ ಒಂದು ಹನಿ ಕೀಟನಾಶಕವನ್ನು ಸೇರಿಸಿ ಇದನ್ನು ತಯಾರಿಸಿದ್ದೆವು. ಇದು ಇನ್ನೊಂದು ಸ್ವಲ್ಪ ಕೀಟಗಳನ್ನು ಸೆಳೆಯುತ್ತಿದ್ದುವು. ಬಾಟಲಿಯೊಳಗೆ ಬೀಳುವಂತೆ ಮಾಡುತ್ತಿದ್ದುವು. ಇದಲ್ಲದೆ ನಾವು ಕೀಟಗಳಿಗಾಗಿ ಖೆಡ್ಡಾಗಳನ್ನೂ ರೂಪಿಸಿದ್ದೆವು. ಇವು ಇನ್ನೇನಲ್ಲ, ಒಂದಿಷ್ಟು ಕೀಟನಾಶಕವಿದ್ದ ಬಾಟಲಿಯನ್ನು ನೆಲದಲ್ಲಿ ಹುಗಿದು, ಮಳೆ ಬೀಳದಂತೆ ಮೇಲೊಂದು ಟೊಪ್ಪಿ ಕೂರಿಸುತ್ತಿದ್ದೆವು. ಇದಲ್ಲದೆ ಕಾಡಿನ ಪೊದೆಗಳನ್ನು ಒಂದು ಬಲೆಯಿಂದ ಗುಡಿಸುವ ವಿಧಾನದಿಂದಲೂ, ನೆಲದಲ್ಲಿ ಜೀವಿಸುವ ಕೀಟಗಳನ್ನು ಕೈಗೆ ಸಿಕ್ಕಷ್ಟು ಹಿಡಿಯುತ್ತಿದ್ದೆವು.

ಕಡಿಮೆ ಸಾಮರ್ಥ್ಯದ ದೀಪದ ಪಂಜರದ ಇಳುವರಿಗೆ ಸೇರಿಸುವುದರ ಜೊತೆಗೆ ಹೀಗೆ ವಿಭಿನ್ನ ವಿಧಾನಗಳನ್ನು ಉಪಯೋಗಿಸುವುದರಿಂದ ಹೆಚ್ಚು ವೈವಿಧ್ಯಮಯವಾದ ಕೀಟಗಳನ್ನು ಸಂಗ್ರಹಿಸಬಹುದು ಎನ್ನುವುದು ನಮ್ಮ ಆಶಯವಾಗಿತ್ತು. ವಿಭಿನ್ನ ನೆಲೆಗಳಲ್ಲಿ ಇರುವ ವಿವಿಧ ಕೀಟಗಳ ದಟ್ಟಣೆಯನ್ನು ಲೆಕ್ಕ ಹಾಕುವುದಕ್ಕೆ ಬೇಕಾದ ಶಿಷ್ಟ ವಿಧಾನವೊಂದನ್ನು ರೂಪಿಸುವುದು ನಮ್ಮ ಗುರಿಯಾಗಿತ್ತು. ಇದಕ್ಕಾಗಿ ನಾವು ಒಂದು ಹೆಕ್ಟೇರ್ ವಿಸ್ತೀರ್ಣದ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಈ ಸೆರೆಗಳನ್ನು ಇಟ್ಟೆವು. ಇವು ಗಳಲ್ಲಿ ಮಧ್ಯದಲ್ಲಿ ಇಟ್ಟ ಒಂದು ದೀಪದ ಪಂಜರ ಸಂಜೆ ಏಳು ಗಂಟೆಯಿಂದ ನಡುರಾತ್ರಿ ಎರಡು ಗಂಟೆಯವರೆಗೆ ಚಾಲನೆಯಲ್ಲಿ ಇರುತ್ತಿತ್ತು. ಪ್ರತಿ ಜಾಗದಲ್ಲಿಯೂ ನಾವು ಐದು ಕೀಟಖೆಡ್ಡಾಗಳನ್ನೂ ಮತ್ತು ಐದು ಸುವಾಸಿತ ಬಲೆಗಳನ್ನು ಇಟ್ಟು, ಹತ್ತು ಮೀಟರು ಉದ್ದ, ಹಾಗೂ ಹತ್ತು ಮೀಟರು ಅಗಲದ ಆರು ಪ್ರದೇಶದಲ್ಲಿದ್ದ ಪೊದೆಗಳನ್ನು ಬಲೆಗಳಿಂದ ಗುಡಿಸುತ್ತಿದ್ದೆವು.

Left: A pitfall trap that captures insects walking on the ground. Right: Chandru performing a systematic sweep of the vegetation to collect insects in a standardised manner. Photo: RG Lab Collection

ನಾವು ಹನ್ನೆರಡು ವಿಭಿನ್ನ ಸ್ವರೂಪದ ನೆಲೆಗಳಲ್ಲಿ ಇಂತಹ ಮೂರು, ಮೂರು ಒಂದು ಹೆಕ್ಟೇರ್ ಜಾಗವನ್ನು ಗುರುತಿಸಿಟ್ಟಿದ್ದೆವು. ಇವುಗಳಲ್ಲಿ ನಾಲ್ಕು ಸ್ವಲ್ಪ ಮಟ್ಟಿಗೆ ಕಿರು ಅರಣ್ಯಗಳು ಎನ್ನುವಂತಹ ಸ್ವಲ್ಪ ಕೆಟ್ಟ ಅರಣ್ಯಗಳು. ಇನ್ನು ನಾಲಕ್ಕು ಒಂದಿಷ್ಟೂ ಕೆಡದ ಸುರಕ್ಷಿತ ವನಗಳಲ್ಲಿ ಇದ್ದವು. ಎರಡು ಕಿರು ಅರಣ್ಯಗಳೂ, ಎರಡು ಸುರಕ್ಷಿತ ವನಗಳ ತಾಣಗಳೂ ಕರಾವಳಿಯಲ್ಲಿ, ಸಮುದ್ರಮಟ್ಟದಲ್ಲಿ ಇದ್ದುವು. ಇನ್ನು ಎರಡು ಕಿರುಅರಣ್ಯಗಳೂ, ಸುರಕ್ಷಿತ ವನಗಳೂ ಸಮುದ್ರ ಮಟ್ಟದಿಂದ ಸುಮಾರು ಆರು ನೂರು ಮೀಟರು ಎತ್ತರದಲ್ಲಿ ಇದ್ದುವು. ಎಲ್ಲವೂ ಕರ್ನಾಕದ ಪಶ್ಚಿಮಘಟ್ಟಗಳಲ್ಲಿಯೇ ಇದ್ದ ತಾಣಗಳು. ಇದಲ್ಲದೆ ನಾವು ಮೂರು ಏಕರೀತಿಯ ಮರಗಳನ್ನು ಬೆಳೆಸಿದ್ದ ತೋಟಗಳಿಂದಲೂ, ತರಗೆಲೆ ಗೊಬ್ಬರಗಳ ಕಾಡಿನಿಂದಲೂ ಕೀಟಗಳನ್ನು ಸಂಗ್ರಹಿಸಿದೆವು. ಹೀಗೆ ವ್ಯವಸ್ಥಿತವಾಗಿ ಒಟ್ಟು ಮೂವತ್ತಾರು ತಾಣಗಳಿಂದ ಕೀಟಗಳನ್ನು ಸಂಗ್ರಹಿಸಿದ್ದೆವು. ಒಂದು ಪ್ರದೇಶದಲ್ಲಿದ್ದ ಮೂರು ತಾಣಗಳಲ್ಲಿನ ಕೀಟಗಳ ವೈವಿಧ್ಯವನ್ನು, ಒಂದೇ ಮಟ್ಟದಲ್ಲಿ ಪ್ರಕ್ಷುಬ್ಧವಾಗಿದ್ದ ವಿವಿಧ ಪ್ರದೇಶಗಳ ನಡುವಣ ವೈವಿಧ್ಯವನ್ನೂ, ವಿವಿಧ ಎತ್ತರದ ಪ್ರದೇಶಗಳ ನಡುವಣ ವ್ಯತ್ಯಾಸಗಳು ಏನಿರಬಹುದು ಎಂದು ತಿಳಿಯವುದು ನಮ್ಮ ಉದ್ದೇಶವಾಗಿತ್ತು.

ಈ ಪಂಜರಗಳನ್ನು ರೂಪಿಸುವುದು, ಈ ವಿಧಾನಗಳನ್ನು ಹದಗೊಳಿಸುವುದು ಹಾಗೂ ಕ್ಷೇತ್ರಕಾರ್ಯವೆಲ್ಲವೂ ಮೋಜಿನ ವಿಷಯಗಳಾಗಿದ್ದುವು ಎಂದು ಹೇಳಬೇಕಿಲ್ಲವಷ್ಟೆ. ಇವು ನಮಗೆ ಸಾಕಷ್ಟು ಖುಷಿ ಕೊಟ್ಟವು. ನಾನು, ಚಂದ್ರುವಲ್ಲದೆ, ನಮ್ಮ ತಂಡದಲ್ಲಿ ಅದ್ಭುತ ಪಕ್ಷಿವಿಜ್ಞಾನಿಯಾದ ರಂಜಿತ್‌ ಡೇನಿಯೆಲ್ಸ್‌, ಅಮೋಘ ಸಸ್ಯವಿಜ್ಞಾನಿ ಡಿ. ಎಂ. ಭಟ್‌, ಹಾಗೂ ಡ್ರೈವರು,ಸಹಾಯಕ ಹಾಗೂ ನಮ್ಮ ಪಾಲಕನೂ ಆಗಿದ್ದ ರೋಜಾರಿಯೊ ಫರ್ಟಾಡೋ ನಮ್ಮ ತಂಡದಲ್ಲಿದ್ದರು. ಎತ್ತರದಲ್ಲಿದ್ದ ಪ್ರದೇಶಗಳಲ್ಲಿ ಕೀಟಗಳನ್ನು ಹಿಡಿಯಲು ನಾವು ಸಿರಸಿ ಪಟ್ಟಣದಲ್ಲಿ ಕ್ಯಾಂಪು ಹೂಡುತ್ತಿದ್ದೆವು ಕರಾವಳಿಯಲ್ಲಿ ಹಿಡಿಯಬೇಕಾದಾಗ ಕುಮಟಾ ನಮ್ಮ ಕ್ಯಾಂಪು ಆಗಿರುತ್ತಿತ್ತು. ಬೆಂಗಳೂರಿನಿಂದ ಬಸ್ಸಿನಲ್ಲಿ ರಾತ್ರಿ ಪ್ರಯಾಣ ಮಾಡಿ, ಒಂದೊಂದು ವಾರವನ್ನೂ ಶಿರಸಿ ಹಾಗೂ ಕುಮಟಾದಲ್ಲಿ ಕಳೆಯುತ್ತಿದ್ದ್ದು ಮರೆಯಲಾಗದ ಅನುಭವ.

ಕೀಟಗಳನ್ನು ಹಿಡಿಯದಿದ್ದಾಗ ನಾವು ಈ ಎರಡೂ ಪಟ್ಟಣಗಳ ಬದುಕನ್ನು ಸವಿದೆವು. ಆರ್ಥಿಕವಾಗಿ, ಸಾಮಾಜಿಕವಾಗಿ, ಭಾಷೆ, ಸಂಸ್ಕೃತಿ ಹಾಗೂ ಅಭ್ಯಾಸಗಳಲ್ಲಿ ಈ ಎರಡೂ ಪಟ್ಟಣಗಳ ಜನರಲ್ಲಿ ಆಕರ್ಷಕ ವ್ಯತ್ಯಾಸಗಳು ನಮಗೆ ಕಂಡು ಬಂದವು.. ಆದರೆ ಈ ಎರಡು ಪಟ್ಟಣಗಳಲ್ಲಿರುವ ಪಾಕಪದ್ಧತಿಯ ವ್ಯತ್ಯಾಸ ನಮಗೆ ಇನ್ನೂ ವಿಶೇಷವೆನಿಸಿತು.. ಶಿರಸಿಯಲ್ಲಿ ತುಪ್ಪ ಭರಿತ, ಅಪ್ಪಟ ಸಸ್ಯಾಹಾರಿ, ಹವ್ಯಕ ಭೋಜನ. ಕುಮಟಾದಲ್ಲೋ ಪ್ರೊಟೀನು ಭರಿತ ಮೀನು ಹಾಗೂ ಮಾಂಸದ ಭೋಜನ. ಇವುಗಳ ರುಚಿ ಮರೆಯಲಾಗಿಲ್ಲ. ಇವೆರಡರಲ್ಲಿ ನಾವು ಯಾವುದು ನಮಗೆ ಹೆಚ್ಚು ಖುಷಿ ಕೊಟ್ಟಿತು ಎಂದು ಹೇಳುವುದು ಕಷ್ಟ. ವಿದ್ಯಾರ್ಥಿಗಳು ಹಾಗೂ ಸಹಾಯಕರ ಜೊತೆಗೆ ಪಯಣಿಸುತ್ತಾ, ಊಟ ಮಾಡುತ್ತಾ ಕ್ಷೇತ್ರ ಕಾರ್ಯದಲ್ಲಿ ವಾರಗಟ್ಟಲೆ ತೊಡಗಿಕೊಂಡಾಗ ಹುಟ್ಟುವ ಬೌದ್ಧಿಕ ಹಾಗೂ ಸಾಮಾಜಿಕ ಸ್ನೇಹವಿದೆಯಲ್ಲ, ಅದು ಪ್ರಯೋಗಾಲಯದಲ್ಲಿ ಬೆಳಗ್ಗೆ ಒಂಬತ್ತರಿಂದ ಸಂಜೆ ಐದರವರೆಗೆ ಒಟ್ಟಿಗೇ ಕಳೆದರೂ ಸಿಗದಂತಹುದು.

ಸಂಗ್ರಹಿಸಿದ ಕೀಟಗಳನ್ನು ಆಲ್ಕೊಹಾಲಿನಲ್ಲಿ ಕಾದಿಟ್ಟು ಅವನ್ನು ಬೆಂಗಳೂರಿಗೆ ತಂದೆವು. ಆ ಕೀಟಗಳನ್ನು ಸಂಸ್ಕರಿಸುವ ಮಹಾಕಾರ್ಯದಲ್ಲಿ ಪದ್ಮಿನಿ ನಾಯರ್‌ ಮತ್ತು ವಿಜಯಲಕ್ಷ್ಮಿ ಕಂದುಲಾ ಜೊತೆಸೇರಿದರು. ಸಂಗ್ರಹಿಸಿದ ಪ್ರತಿಯೊಂದು ಕೀಟವನ್ನೂ ಅದು ಯಾವ ಕುಟುಂಬದ್ದು ಎಂದು ಗುರುತಿಸಿ, ಅವಕ್ಕೊಂದು ವರ್ಗಸಂಖ್ಯೆ ಅಥವಾ ರೆಕಗ್ನೈಸಬಲ್‌ ಟ್ಯಾಕ್ಸಾನಾಮಿಕ್‌ ಯೂನಿಟ್‌ ಅಂಕೆ ನೀಡಿದೆವು. ಒಟ್ಟು ನಾವು ಹದಿನಾರು ಸಾವಿರದ ಎಂಟನೂರ ಐವತ್ತೆರಡು ಕೀಟಗಳನ್ನು ಹಿಡಿದಿದ್ದೆವು. ಇವು ಒಟ್ಟು ಸಾವಿರದ ಏಳುನೂರ ಎಂಭತ್ತೊಂಬತ್ತು ವರ್ಗಸಂಖ್ಯೆಗಳಿಗೆ, ಇನ್ನೂರ ಹತ್ತೊಂಬತ್ತು ಕುಟುಂಬಕ್ಕೆ ಹಾಗೂ ಹತ್ತೊಂಬತ್ತು ಕೀಟ ಶ್ರೇಣಿ ಗಳಿಗೆ ಸೇರಿದ್ದುವು.

ಒಂದೇ ಪ್ರದೇಶದಲ್ಲಿದ್ದ ವಿವಿಧ ತಾಣಗಳಲ್ಲಿಂದ ಸೆರೆ ಹಿಡಿದ ಕೀಟಗಳ ಸಂಖ್ಯೆ ಹಾಗೂ ವೈವಿಧ್ಯತೆ, ಸಮಾನವಾಗಿದ್ದುವೆಂದು ತೋರಿಸುವ ಮೂಲಕ ಈ ವಿಧಾನಗಳೆಷ್ಟು ಸಮರ್ಥವಾದವು ಎಂದು ನಿರೂಪಿಸಿದೆವು. ಅಷ್ಟೇ ಅಲ್ಲ. ಕರಾವಳಿ ಹಾಗೂ ಎತ್ತರದ ಪ್ರದೇಶಗಳಲ್ಲಿನ ತಾಣಗಳಲ್ಲಿದ್ದ ಕೀಟಗಳ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ ಇರುವುದನ್ನೂ ನಿರೂಪಿಸಿದೆವು. ವಿಭಿನ್ನ ತಂತ್ರಗಳಿಂದ ಹಿಡಿದ ಕೀಟಗಳ ಸಂಖ್ಯೆ ಹಾಗೂ ವೈವಿಧ್ಯದಲ್ಲಿ ಇರುವ ವ್ಯತ್ಯಾಸಗಳು ಕೀಟಗಳನ್ನು ಹಿಡಿಯಲು ಹಲವು ತಂತ್ರಗಳನ್ನು ಬಳಸುವುದು ಒಳ್ಳೆಯದು ಎನ್ನುವ ನಮ್ಮ ತೀರ್ಮಾನ ಸರಿ ಎಂದು ತಿಳಿಸಿದುವು.

ಹೀಗೆ ನಾವು ಉಷ್ಣವಲಯದ ಕೀಟ ಪ್ರಭೇದಗಳ ವೈವಿಧ್ಯತೆಯನ್ನು ಅಳೆಯುವಂತಹ, ಬಲು ದೂರದ, ಅತ್ಯಲ್ಪ ವ್ಯವಸ್ಥೆ ಇರುವಂತಹ ತಾಣಗಳಲ್ಲಿಯೂ ಬಳಸಬಹುದಾದ ಹಾಗೂ ನಿಖರವಾದ ಫಲಿತಾಂಶಗಳನ್ನು ನೀಡುವ ಹಲವಾರು ತಂತ್ರಗಳ ಪ್ಯಾಕೇಜನ್ನು ರೂಪಿಸಿದೆವು. ನಮ್ಮ ಈ ವಿಧಾನಗಳು ಕೆಲವು ಉಷ್ಣವಲಯದ ಪರಿಸರವಿಜ್ಞಾನಿಗಳ ಗಮನ ಸೆಳೆದಿರುವುದೂ, ಹಲವರು ಅದನ್ನು ಬಳಸುತ್ತಿರುವದೂ ಖುಷಿ ತಂದಿದೆ. ಆದರೆ ಇಷ್ಟೇ ಆದರೆ ಸಾಕೆ?

ಕೀಟಗಳ ಪರಮವಿನಾಶ?

ಗ್ರೆಚ್ಚೆನ್‌ ವೋಗೆಲ್‌ ಮೇ 12, 2017ರ ಸೈನ್ಸ್‌ ಪತ್ರಿಕೆಯಲ್ಲಿ ವೇರ್‌ ಹ್ಯಾವ್‌ ಆಲ್‌ ದಿ ಇನ್ಸೆಕ್ಟ್ಸ್‌ ಗಾನ್?‌, ಕೀಟಗಳೆಲ್ಲ ಎಲ್ಲಿ ಮರೆಯಾದುವು? ಎಂದು ಬರೆದ ಪ್ರಬಂಧ, ಹಾಗೂ ನವೆಂಬರ್‌ 27, 2018ರಲ್ಲಿ ನ್ಯೂಯಾರ್ಕ್‌ ಟೈಂಸ್‌ ಪತ್ರಿಕೆಯಲ್ಲಿ ಬ್ರೂಕ್‌ ಜಾರ್ವಿಸ್‌ ಬರೆದ ದಿ ಇನ್ಸೆಕ್ಟ್‌ ಅಪೋಕೇಲಿಪ್ಸ್‌ ಈಸ್‌ ಹಿಯರ್‌, ಕೀಟಗಳ ಪರಮ ವಿನಾಶದ ಘಳಿಗೆ ಬಂದಿದೆ ಎನ್ನುವ ಲೇಖನಗಳು ಈಗ ಆಗುತ್ತಿರುವ ಘೋರ ಜೈವಿಕ ವೈವಿಧ್ಯದ, ಅದರಲ್ಲಿಯೂ ಕೀಟವೈವಿಧ್ಯದ ನಾಶದ ಪ್ರಮಾಣವನ್ನು ಜನರೆದುರಿಗೆ ತೆರೆದಿಟ್ಟಿವೆ. ಅಮೆರಿಕೆಯ ಕೀಟವಿಜ್ಞಾನಿಗಳ ಸಂಘವೂ ನವೆಂಬರ್‌ 2019ರಲ್ಲಿ ಮಾನುಷಯುಗ ಅಥವಾ ಆಂತ್ರೊಪೋಸೀನ್‌ ಕಾಲದಲ್ಲಿ ಕೀಟಗಳ ನಾಶ ಎನ್ನುವ ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ಅಮೆರಿಕೆಯ ಪ್ರೊಸೀಡಿಂಗ್ಸ್‌ ಆಫ್‌ ನ್ಯಾಶನಲ್‌ ಅಕಾಡೆಮಿ ಆಫ್‌ ಸೈನ್ಸಸ್‌ ಪತ್ರಿಕೆ “ಆಂತ್ರೊಪೋಸೀನಿನಲ್ಲಿ ಕೀಟಗಳ ಸಂಖ್ಯೆಯಲ್ಲಿ ಜಾಗತಿಕವಾಗಿ ಇಳಿಮುಖ” ಎಂಬ ವಿಷಯದ ಬಗ್ಗೆ ಜನವರಿ 12, 2021ರಂದು ಒಂದು ವಿಶೇಷ ಸಂಚಿಕೆಯನ್ನು ಪ್ರಕಟಿಸಿತ್ತು. ಇನ್ನಾದರೂ ನಾವು ಭಾರತೀಯರು ಎಚ್ಚೆತ್ತುಕೊಂಡು ನಮ್ಮಲ್ಲಿ ಆಗಿರುವ ಕೀಟನಾಶವನ್ನು ಅಳೆಯಬೇಕು. ಪರಿಹಾರದ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ನಾವು ಹಾಲ್ಡೇನನ ಆ ಪ್ರಶ್ನೆಗೆ ಉತ್ತರ ಹೇಳುವ ಅವಕಾಶವನ್ನೇ ಕಳೆದುಕೊಳ್ಳುತ್ತೇವೆ. ಕೆಲವೊಮ್ಮೆ ಅಜ್ಞಾನ ಸುಖವೇ ಅಲ್ಲ.

K. Chandrashekara, showing me around a public exhibition of insects that he had organised along with his colleagues and students in Bengaluru. Photo: H.M. Yeshwanth

ಕೀಟಗಳ ವೈವಿಧ್ಯ ಕುರಿತ ಈ ಯೋಜನೆಯು ಪೂರ್ಣಗೊಂಡ ಮೇಲೆ ಚಂದ್ರು ಇಂಡಿಯನ್‌ ಪೇಪರ್‌ ಕಣಜ, ರೋಪಲೀಡಿಯಾ ಮಾರ್ಜಿನೇಟಾದ ಸಾಮಾಜಿಕ ಸಂಘಟನೆಯ ಬಗ್ಗೆ ಅದ್ಭುತವಾದೊಂದು ಪಿಎಚ್‌ಡಿ ಪ್ರಬಂಧವನ್ನು ಬರೆದರು. ಅನಂತರ ಇಡೀ ಬದುಕನ್ನು ಕೀಟವಿಜ್ಞಾನವನ್ನು ಕಲಿಸುತ್ತಾ ತಮ್ಮ ವಿದ್ಯಾರ್ಥಿಗಳಿಗೂ, ಸಹೋದ್ಯೋಗಿಗಳಿಗೂ ಪ್ರೇರಕರಾಗಿ ಕಳೆದರು. ಪ್ರತಿಯೊಂದು ಕೀಟದ ಸೌಂದರ್ಯವೂ, ಸಂಕಟವೂ ನನಗೆ ಚಂದ್ರುವನ್ನು ನೆನಪಿಸುತ್ತವೆ. ಶಿಕ್ಷಣ ಹಾಗೂ ವಿಸ್ತರಣೆಯ ಮೂಲಕ ತಮ್ಮ ಕೀಟ ಪ್ರೇಮವನ್ನು ಎಲ್ಲರಿಗೂ ಹರಡಿದ ಅವರ ಶ್ರಮದಿಂದ ನಾವು ಲಾಭ ಪಡೆಯಬೇಕು. ಚಂದ್ರುವಿಗೆ ನಾವು ಅದಕ್ಕಿಂತಲೂ ಹೆಚ್ಚಿನ ಶ್ರದ್ಧಾಂಜಲಿ ನೀಡಲಾರೆವು.

ಇದು ಇಂದಿನ ಜಾಣ ಅರಿಮೆ. ಆಂಗ್ಲಮೂಲ: ಪ್ರೊಫೆಸರ್ ರಾಘವೇಂದ್ರ ಗದಗಕರ್.‌ ಕನ್ನಡಾನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್‌ ಮಂಜುನಾಥ. ಆಂಗ್ಲ ಮೂಲ ಮೊದಲು ದಿ ವೈರ್‌ ಸೈನ್ಸ್‌ ಜಾಲಪತ್ರಿಕೆಯಲ್ಲಿ ಪ್ರಕಟವಾಗಿತ್ತು.

Scroll To Top