Representative image: Panos Sakalakis/Unsplash.
The following text, in Kannada, was translated from the English original, by Raghavendra Gadagkar, entitled ‘More Fun Than Fun: The Smart Animals That Helped Scientists Demystify Altruism’ and published on The Wire Science on October 28, 2020.
Kollegala Sharma kindly provided the translated version. It has also been rendered as a podcast by J.R. Manjunatha, available to listen below. Sharma and his team will be converting editions of Gadagkar’s column as podcasts, as part of an ongoing audio series called ‘JanaArime’. Sharma’s popular ‘Janasuddi’ podcast series is available to listen here.
Sharma is a chief scientist and Manjunatha is a technical officer, both at the CSIR-Central Food Technological Research Institute, Mysuru.
§
ವಿಸ್ಮಯಕ್ಕಿಂತ ವಿಸ್ಮಯ
ವಿಜ್ಞಾನಿಗಳನ್ನು ಜಾಣರನ್ನಾಗಿ ಮಾಡುವ ಜಾಣ ಪ್ರಾಣಿಗಳು
ಪ್ರೊ ರಾಘವೇಂದ್ರ ಗದಗಕರ್
ಕೆಲವು ಸಮಯದ ಹಿಂದೆ ನಾನು ಬಹಳ ಪ್ರಚೋದಕ ಶೀರ್ಷಿಕೆ ಇದ್ದ ಪುಸ್ತಕವೊಂದನ್ನು ಓದಿದ್ದೆ: ಆರ್ ವಿ ಸ್ಮಾರ್ಟ್ ಎನಫ್ ಟು ನೋ ಹೌ ಸ್ಮಾರ್ಟ್ ಅನಿಮಲ್ಸ್ ಆರ್? ಅಂದರೆ ಪ್ರಾಣಿಗಳು ಎಷ್ಟು ಬುದ್ಧಿವುಳ್ಳವು ಎನ್ನುವುದನ್ನು ತಿಳಿಯುವಷ್ಟು ನಾವು ಬುದ್ಧಿವಂತರೇ ಎನ್ನುವುದು ಆ ಶೀರ್ಷಿಕೆ. ಬಹುಶಃ ಇಲ್ಲ. ಹೀಗೆಂದಿದ್ದು ಆ ಪುಸ್ತಕವನ್ನು ಬರೆದ ಡಚ್ ಅಮೆರಿಕನ್ ವಾನರತಜ್ಞ ಫ್ರಾನ್ಸ್ ಡೆ ವಾಲ್. ಇದನ್ನು ನಾವು ಒಪ್ಪಿದರೂ, ಪ್ರಯತ್ನಿಸುವುದನ್ನು ಬಿಡಬಾರದು. ಏಕೆಂದರೆ ಮನುಷ್ಯನ ಬುದ್ಧಿವಂತಿಕೆ ಎನ್ನುವುದು ಬಹುಪಾಲು ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದರಿಂದ ಬೆಳೆದದ್ದಷ್ಟೆ.
ಪ್ರಾಣಿಗಳನ್ನು ಅಧ್ಯಯನ ಮಾಡಿ ಅವುಗಳ ನಡವಳಿಕೆಗಳ ಬಗ್ಗೆ ತರ್ಕಗಳನ್ನು ರೂಪಿಸುವ ನಮ್ಮಂತಹ ಪ್ರಾಣಿ- ನಡವಳಿಕೆ-ವಿಜ್ಞಾನಿಗಳಿಗೆ ಪ್ರಾಣಿಗಳು ಎಷ್ಟು ಜಾಣರೆಂದು ತಿಳಿಯಲಾಗದೇ ಇರುವುದು ಬಲು ಗಂಭೀರವಾದ ತೊಡಕೇ ಸರಿ. ನಮ್ಮ ಜಾಣತನಕ್ಕೆ ಹೀಗೊಂದು ಮಿತಿ ಇದ್ದರೆ, ಪ್ರಾಣಿಗಳಿಗೆ ಬುದ್ಧಿ ಇದೆ ಎಂದು ಹೇಳುವ ನಮ್ಮ ತರ್ಕಗಳೆಲ್ಲವೂ ಬಹುಪಾಲು ತಪ್ಪೇ ಆಗುತ್ತವೆ. ಆದರೆ ತಮ್ಮ ಕಲ್ಪನೆಯ ಸೀಮೆಯನ್ನು ಹೀಗೆ ವಿಸ್ತರಿಸುತ್ತಲೇ ಇರಲು ಬಯಸುವ ಕೆಲವು ಮರುಳ ವಿಜ್ಞಾನಿಗಳು ಇದ್ದೇ ಇದ್ದಾರೆ. ಅವರ ಸಂಖ್ಯೆ ಬಹಳ ಕಡಿಮೆ ಎನ್ನುವುದಷ್ಟೆ ವಿಷಾದದ ಸಂಗತಿ.
ಪ್ರಾಣಿಗಳೇಕೆ ಒಂದಿನ್ನೊಂದಕ್ಕೆ ಒಳ್ಳೆಯದನ್ನು ಮಾಡುತ್ತವೆ ಎನ್ನುವುದು ವಿಕಾಸವಾದದಲ್ಲಿ ಒಂದು ವೈಪರೀತ್ಯವೆನ್ನಿಸುತ್ತದೆ. ನನ್ನ ಹಲವು ಮಾನವತಾವಾದಿ ಗೆಳೆಯರು ಹೀಗೆ ಯೋಚಿಸುವ ನಮ್ಮಂತಹ ವಿಜ್ಞಾನಿಗಳು ಪೆದ್ದರೆಂದು ಭಾವಿಸುವುದೂ ಉಂಟು. ಆದರೆ ಒಳ್ಳೆತನವನ್ನು ಒಳಗೊಳ್ಳುವುದರಲ್ಲಿ ನಮ್ಮ ಅತಿ ಉತ್ತಮವಾದ ತತ್ವಗಳಿಗೂ ಕಷ್ಟವಾಗುತ್ತದೆ ಎನ್ನುವುದು ಅವರಿಗೆ ಗೊತ್ತಿಲ್ಲ. ನಿಜ. ಒಳ್ಳೆತನ ಯಾರಿಗೆ ಇಷ್ಟವಿಲ್ಲ. ಆದರೆ ಅದಷ್ಟೇ ಸಾಲದು. ಪ್ರಾಣಿಗಳ ಬಗ್ಗೆ ನಮಗಿರುವ ಅರಿವು, ಹಾಗೂ ವಿಕಾಸವಾದದ ಮೂಲತತ್ವಗಳಿಗೆ ಒಪ್ಪುವ ಲೆಕ್ಕಾಚಾರಗಳು ಒಳ್ಳೆತನ ಇರಬೇಕೆಂದು ತರ್ಕಿಸುತ್ತವೆ. ಆದರೆ ಹೆಚ್ಚಿನ ಮಟ್ಟಿಗೆ ಹಾಗಾಗುವುದಿಲ್ಲ.
ಹಾಗಿದ್ದರೆ ನಿಮ್ಮ ತತ್ವಗಳೇ ತಪ್ಪಿರಬಾರದೇಕೆ ಎಂದಿರಲ್ಲವೇ? ನಿಜ. ಹಾಗಿದ್ದರೆ ನಾವು ಪ್ರಾಣಿ ಪ್ರಪಂಚದಲ್ಲಿ ಕಾಣುವ ಒಳ್ಳೆತನವನ್ನು, ನಮ್ಮ ವಿಕಾಸವಾದದ ತರ್ಕಕ್ಕೆ ಸರಿಹೊಂದುವಂತೆ ಮಾಡುವುದಾದರೂ ಹೇಗೆ?
ಇದೋ. ಇಲ್ಲಿ ಸಲ್ಲುತ್ತಾರೆ ವಿಜ್ಞಾನಿ ಜಾನ್ ಬರ್ಡನ್ ಸ್ಯಾಂಡರ್ಸನ್ ಹಾಲ್ಡೇನ್. ಅವರ ಶಿಷ್ಯ ಜಾನ್ ಮೇನಾರ್ಡ್ ಸ್ಮಿತ್, ಹಾಲ್ಡೇನರ ಬಗ್ಗೆ ಹೀಗೆ ಹೇಳುತ್ತಾರೆ.
“ಹಾಲ್ಡೇನ್ ವಿಕಾಸವಾದಕ್ಕೆ ನೀಡಿದ ಕೊಡುಗೆಗಾಗಿ ಸ್ಮರಣೀಯನೆನ್ನಿಸಿದರೂ, ಆತ ಯಾವ ತೆರನ ವಿಜ್ಞಾನಿ ಎಂದು ವರ್ಗೀಕರಿಸುವುದು ಕಷ್ಟ. ಮುಕ್ತ ವ್ಯಕ್ತಿತ್ವದ ಪ್ರತಿಪಾದಕನಾದ ಆತ ಒಬ್ಬ ಕಮ್ಯೂನಿಸ್ಟ್ ಮುಖಂಡನೆಂದೇ ಖ್ಯಾತಿ ಪಡೆದವ. ದಿ ಡೈಲಿ ವರ್ಕರ್ ಪತ್ರಿಕೆಯಲ್ಲಿ ವಾರಕ್ಕೊಂದು ಲೇಖನ ಬರೆಯುತ್ತಿದ್ದ ಅಂಕಣಕಾರ. ಆಕ್ಸ್ಫರ್ಡ್ ವಿವಿಯಲ್ಲಿ ಸಾಹಿತ್ಯ ಹಾಗೂ ಗಣಿತವೆರೆಡರಲ್ಲಿಯೂ ಪ್ರಥಮ ಸ್ಥಾನ ಗಳಿಸಿದ್ದ ಈತ, ಹೆಸರು ಮಾಡಿದ್ದು ಜೀವರಸಾಯನಿಕ ವಿಜ್ಞಾನ ಮತ್ತು ತಳಿವಿಜ್ಞಾನದಲ್ಲಿ. ಮೊದಲ ವಿಶ್ವಯುದ್ಧದಲ್ಲಿ ಬ್ಲಾಕ್ ವಾಚ್ ತುಕಡಿಯ ಕ್ಯಾಪ್ಟನ್ ಆಗಿದ್ದವ, ಅನಂತರ ತನ್ನ ಕೊನೆಯ ದಿನಗಳನ್ನು ಅಹಿಂಸೆಯ ಪರವಾಗಿ ವಾದಿಸುತ್ತ ಭಾರತದಲ್ಲಿಯೇ ಕಳೆದವ.”
ಇಂತಹ ಹಾಲ್ಡೇನ್ 1953 ರ ಸುಮಾರಿಗೆ “ನನ್ನ ಸೋದರರಲ್ಲಿ ಒಬ್ಬನೋ, ಇಬ್ಬರೋ ನದಿಯಲ್ಲಿ ಮುಳುಗುತ್ತಿದ್ದರೆ, ಅವರನ್ನು ಕಾಪಾಡಲು ನಾನು ನನ್ನ ಜೀವವನ್ನು ಒತ್ತೆ ಇಡುವುದಿಲ್ಲ. ಆದರೆ ಇಬ್ಬರಿಗಿಂತಹ ಹೆಚ್ಚು ಜನ ಮುಳುಗುತ್ತಿದ್ದರೆ, ಆಗ ನನ್ನ ಪ್ರಾಣವನ್ನು ಕೊಟ್ಟಾದರೂ ಅವರನ್ನು ನಾನು ಬದುಕಿಸಿಯೇನು,” ಎಂದೇನೋ ಹೇಳಿದ್ದರಂತೆ. ಕಿನ್ ಸೆಲೆಕ್ಷನ್ ಅಥವಾ ಬಂಧುಗಳ ಆಯ್ಕೆ ಎನ್ನುವ ಇತ್ತೀಚಿನ ವಿಕಾಸವಾದದ ತತ್ವದ ಹೂರಣವೇ ಇದು. ಹೀಗೆ ಯೋಚನೆ ಮಾಡುವಷ್ಟು ಹುಚ್ಚು ಹಾಲ್ಡೇನರಿಗಿತ್ತು ಎಂದುಕೊಂಡರೂ, ಅದನ್ನು ಅಷ್ಟಕ್ಕೇ, ಅಂದರೆ ಕೇವಲ ಮಾತಿಗಷ್ಟೆ ಹೇಳಿ ಬಿಟ್ಟುಬಿಡುವಷ್ಟು ಹುಚ್ಚತನವೂ ಅವರಿಗಿತ್ತು ಎನ್ನಬೇಕು.
ಇಲ್ಲಿ ಬಂದರು ನೋಡಿ ಇನ್ನೊಬ್ಬ ವಿಜ್ಞಾನಿ. ತನ್ನ ಸಮಾಧಿಯನ್ನು ಹೇಗೆ ಮಾಡಬೇಕು, ಏಕೆ ಎಂದು ಮೈ ಇಂಟೆಂಡೆಡ್ ಬರಿಯಲ್ ಅಂಡ್ ವೈ ಎಂಬ ಪ್ರಬಂಧ ಬರೆದ ವಿಲಿಯಂ ಡೋನಾಲ್ಡ್ ಹ್ಯಾಮಿಲ್ಟನ್. ಈ ಪ್ರಬಂಧದಲ್ಲಿ ಈತ ಹೇಳಿದ್ದು.
“ನನ್ನ ಕಳೇಬರವನ್ನು ಬ್ರೆಜಿಲ್ಲಿನ ಈ ಕಾಡುಗಳಿಗೆ ಕೊಂಡೊಯ್ಯಲು ಉಯಿಲಿನಲ್ಲಿ ಬರೆಯುತ್ತೇನೆ. ಅದನ್ನು ನಾವು ನಮ್ಮ ಕೋಳಿಮರಿಗಳನ್ನು ರಕ್ಷಿಸುವಂತೆಯೇ ರಣಹದ್ದುಗಳು ಹಾಗೂ ಪೋಸಮುಗಳಿಂದ ರಕ್ಷಿಸಿಡಲಾಗುತ್ತದೆ. ಈ ಮಹಾ ಕೋಪ್ರೋಫೇನಿಯಸ್ ಅಥವಾ ಮಲತಿನಿ ದುಂಬಿ ನನ್ನನ್ನು ಸಮಾಧಿ ಮಾಡಲಿದೆ. ಅವು ನನ್ನ ಕಳೇಬರದೊಳ ಹೊಕ್ಕು ನನ್ನ ಮಾಂಸವನ್ನು ತಿನ್ನಲಿವೆ. ನಾನು ಅವುಗಳ ಮರಿಗಳ ರೂಪದಲ್ಲಿ ಸಾವಿನಿಂದ ಹೊರಬಂದು ಮರುಹುಟ್ಟುವೆ… ಕೊನೆಗೆ ಕಲ್ಲಿನಡಿಯಲ್ಲಿ ಅಡಗಿರುವ ಊದಾ ಬಣ್ಣದ ದುಂಬಿಯಂತೆಯೇ ನಾನೂ ಹೊಳೆಯುವೆ.”
ಇಷ್ಟೇ ಅಲ್ಲ. ಅನಂತರ ಆತ ಡೆಮೋಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋವಿಗೆ ಏಡ್ಸ್ ರೋಗಾಣುವಿನ ಮೂಲವನ್ನು ಹುಡುಕಿಕೊಂಡು ಪ್ರವಾಸ ಹೋಗಿದ್ದ. ಇದು ಮೂರ್ಖತನದ ಕೆಲಸ ಎಂದವರೂ ಇದ್ದಾರೆ. ಮಲೇರಿಯಾ ಸೋಂಕು ಹತ್ತಿ ಮಿದುಳುಬೇನೆಯಿಂದ ಅಲ್ಲಿಯೇ ಈತ ಮರಣಿಸಿದ.
ಇದೆಲ್ಲಕ್ಕೂ ಮೊದಲು 1964 ರಲ್ಲಿ ಈತ ಒಂದು ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದ. ಇದಕ್ಕೂ ಹಾಲ್ಡೇನನ ಮಾತಿಗೂ ಸಂಬಂಧವಿರಲಿಕ್ಕಿಲ್ಲ. ಸಂಬಂಧಿಗಳ ಜೊತೆಗಿನ ಸನ್ನಡತೆ ಹಾಗೂ ತ್ಯಾಗ ಎನ್ನುವವು ಚಾರ್ಲ್ಸ್ ಡಾರ್ವಿನ್ನನ ನಿಸರ್ಗದ ಆಯ್ಕೆ ಎನ್ನುವ ತತ್ವಕ್ಕೆ ಸರಿಹೊಂದುವಂಥಹ ನಡವಳಿಕೆಗಳು ಎಂದು ಈತ ಹೇಳಿದ್ದ. ಇದನ್ನು ನಾವು ಇಂದು ಡಾರ್ವಿನ್ನನ ನಿಸರ್ಗದ ಆಯ್ಕೆಯಿಂದ ವಿಕಾಸ ಎನ್ನುವ ತತ್ವ ಕಂಡ ಅತಿ ಮಹತ್ವದ ಬದಲಾವಣೆ ಎಂದು ಪರಿಗಣಿಸಿದ್ದೇವೆ. ಹಾಗೂ ಇದಕ್ಕೆ ಹ್ಯಾಮಿಲ್ಟನ್ನನ ತತ್ವ ಎಂದು ನಾಮಕರಣ ಮಾಡಿದ್ದೇವೆ. ಅನಂತರದ ದಿನಗಳಲ್ಲಿ ಬ್ಯಾಕ್ಟೀರಿಯಾ, ಗಿಡಮರಗಳು, ಕೀಟಗಳು, ಹುಳುಗಳು, ಮೀನು, ಕಪ್ಪೆ, ಹಲ್ಲಿ, ಹಕ್ಕಿ, ಸಸ್ತನಿ ಹಾಗೂ ಇನ್ನೂ ಅನೇಕ ಜೀವಿಗಳಲ್ಲಿ ಅವುಗಳ ಸಂಬಂಧಿಗಳು ಯಾರೆಂಬುದನ್ನು ಪತ್ತೆ ಮಾಡುವ ಜಾಣ ತಂತ್ರಗಳನ್ನು ರೂಪಿಸಿದ್ದೇವೆ.
ಆದರೆ ಪ್ರಾಣಿಗಳು ಕೆಲವೊಮ್ಮೆ ತಮಗೆ ಸಂಬಂಧವಿಲ್ಲದವುಗಳ ಜೊತೆಗೂ ಒಳ್ಳೆಯದಾಗಿಯೇ ನಡೆದುಕೊಳ್ಳುತ್ತವೆ. ಇದು ಮಾತ್ರ ಹ್ಯಾಮಿಲ್ಟನ್ನನ ತತ್ವಕ್ಕೆ ವಿರೋಧವೆನ್ನಿಸುತ್ತದೆ.
ಇಲ್ಲಿ ಬರುತ್ತಾರೆ ನಮ್ಮ ಮೂರನೆಯ ವಿಜ್ಞಾನಿ ರಾಬರ್ಟ್ ಟ್ರಿವರ್ಸ್. ಟ್ರಿವರ್ಸ್ ಒಬ್ಬ ಅಮೆರಿಕನ್. ಈತನನ್ನು ಇತ್ತೀಚಿನ ದಿನಗಳಲ್ಲಿ ವಿಕಾಸವಾದದ ಬಗ್ಗೆ ವಿಶಿಷ್ಟವಾಗಿ ಚಿಂತಿಸುವ ವಿಜ್ಞಾನಿ ಎಂದು ವಿವರಿಸಲಾಗಿದೆ. ಈತ 1974 ನೇ ಇಸವಿಯಲ್ಲಿ ಪರಸ್ಪರ ತ್ಯಾಗ ಅಂದರೆ ರೆಸಿಪ್ರೋಕಲ್ ಆಲ್ಟ್ರುಯಿಸಂ ಎನ್ನುವ ತತ್ವವೊಂದನ್ನು ವಿವರಿಸಿದ. ಇದೊಂದು ಸರಳ ಪರಿಕಲ್ಪನೆ. ಮುಂದೆಂದೋ ಪ್ರತಿಫಲ ದೊರೆಯದಿದ್ದರೆ ವಿಕಾಸವಾದದ ಮಟ್ಟಿಗೆ ತ್ಯಾಗದ ನಡವಳಿಕೆ ಜೀವಿಗೆ ಅನಾನುಕೂಲಿಯೇ.
ಹೀಗೆ ಈತ ಹೇಳಿದಂದಿನಿಂದ ಹಲವು ಬಗೆಯ ಪರಸ್ಪರ ಲಾಭದ ನಡತೆಗಳನ್ನು ಗುರುತಿಸುವುದರಲ್ಲಿ ವಿಜ್ಞಾನಿಗಳು ಬ್ಯುಸಿಯಾಗಿದ್ದಾರೆ. ಇವುಗಳಲ್ಲಿ ನೇರ ಪರಸ್ಪರತೆ ಅಂದರೆ ಡೈರೆಕ್ಟ್ ರೆಸಿಪ್ರೋಸಿಟಿ ಮೊದಲನೆಯದು. ಇದು ʼನೀ ನನಗಿದ್ದರೆ ನಾ ನಿನಗೆʼ ಎನ್ನುವ ತತ್ವ. ಎರಡನೆಯದು ಪರೋಕ್ಷ ಪರಸ್ಪರತೆ. ಇದು ನೀನು ಯಾರಿಗೋ ನೆರವು ನೀಡಿದ್ದನ್ನು ನೋಡಿದ್ದರಿಂದ ನಿನಗೆ ನಾನು ನೆರವಾಗುತ್ತೇನೆ ಎನ್ನುತ್ತದೆ. ಇನ್ನೊಂದು ಸಾರ್ವತ್ರಿಕ ಪರಸ್ಪರತೆ ಅಥವಾ ಜೆನರಲೈಸ್ಡ್ ರೆಸಿಪ್ರೋಸಿಟಿ. ನನಗೆ ಯಾರೋ ನೆರವಾಗಿದ್ದಾರೆ ಆದ್ದರಿಂದ ನಾನೂ ಎಲ್ಲರಿಗೂ ನೆರವು ನೀಡಬೇಕು ಎನ್ನುತ್ತದೆ ಈ ತತ್ವ.
ವಿಷಾದವೆಂದರೆ, ಅಪರಿಚಿತರಿಗೆ ಒಳಿತು ಮಾಡುವ ನಡವಳಿಕೆಗಳಲ್ಲಿ ಇರುವ ವೈರುಧ್ಯವನ್ನು ವಿವರಿಸುವ ಈ ಪರಸ್ಪರ ತ್ಯಾಗದ ಕಲ್ಪನೆ, ಬಹುಕಾಲ ಧೂಳು ಹಿಡಿಯುತ್ತಾ ಕುಳಿತಿತ್ತು. ಏಕೆಂದರೆ, ಬ್ಯಾಕ್ಟೀರಿಯಾ ಮತ್ತು ಗಿಡಮರಗಳ ವಿಷಯ ಬಿಡಿ, ಪ್ರಾಣಿಗಳು ತಮಗೆ ಯಾರು, ಎಂದು, ಹೇಗೆ, ಎಷ್ಟು ನೆರವು ನೀಡಿದರೆಂದು ಅರಿತು ಅದಕ್ಕೆ ಪ್ರತಿಯಾಗಿ ತಾವೆಷ್ಟು ನೆರವು ನೀಡಬೇಕೆಂದು ಅರಿಯುವಷ್ಟು ಜಾಣರು ಎನ್ನುವುದನ್ನು ತಿಳಿಯುವಂತಹ ಜಾಣರು ನಮ್ಮಲ್ಲಿ ಇರಲಿಲ್ಲ.
ಖುಷಿಯ ವಿಷಯವೆಂದರೆ ಕಳೆದ ಕೆಲವು ದಶಕಗಳಿಂದ ನಾವು ಪ್ರಾಣಿಗಳ ಜಾಣತನವನ್ನು ತಿಳಿದುಕೊಳ್ಳುವಷ್ಟು ಜಾಣರಾಗುತ್ತಿದ್ದೇವೆ.
1984 ಆಗ ಸ್ಯಾನ್ ಡಿಯಾಗೋದಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಇದ್ದ ಜೆರಾಲ್ಡ್ ಎಸ್ ವಿಲ್ಕಿನ್ಸ್ ಪ್ರತ್ಯಕ್ಷ ಪರಸ್ಪರತೆಗೆ ಒಂದು ಸುಸ್ಪಷ್ಟ ಪುರಾವೆಯನ್ನು, ಕೋಸ್ಟಾರಿಕಾದಲ್ಲಿದ್ದ ಡೆಸ್ಮೋಡಸ್ ರೋಟಂಡಸ್ ಎನ್ನುವ ರಕ್ತ ಪಿಪಾಸು ಬಾವಲಿಗಳನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಒದಗಿಸಿದರು. ಈ ಬಾವಲಿಗಳು ಎಂಟು-ಹತ್ತು ಜೀವಿಗಳ ಗುಂಪಿನಲ್ಲಿ, ಎರಡರಿಂದ ಹನ್ನೊಂದು ವರ್ಷಗಳವರೆಗೂ ಗುಂಪಾಗಿ ವಾಸಿಸುತ್ತವೆ. ರಾತ್ರಿ ಎಲ್ಲವೂ ಒಟ್ಟಾಗಿ ದನ, ಕುದುರೆಗಳ ರಕ್ತ ಹೀರಲು ಹೊರಹೋಗುತ್ತವೆ. ಅದೃಷ್ಟವಿದ್ದರೆ, ಅವು ತಮ್ಮ ದೇಹ ತೂಕಕ್ಕೆ ಸಮನಾದಷ್ಟು ರಕ್ತವನ್ನು ಕುಡಿದು ಬರಬಹುದು. ಆದರೆ ಖಾಲಿ ಹೊಟ್ಟೆಯಲ್ಲಿಯೇ ಮರಳುವ ಕೆಲವು ದುರದೃಷ್ಟಶಾಲಿಗಳೂ ಇರುತ್ತವೆ. ಹೀಗೆ ಮೂರು ರಾತ್ರಿಗಳವರೆಗೆ ಅವಿರತವಾಗಿ ಆಹಾರವಿಲ್ಲದೆ ಹೋದಂಥವು ಸಾಯುತ್ತವೆ. ಅಂದರೆ ಅರ್ಥ ಇಷ್ಟೆ. ಹೊಟ್ಟೆ ಬಿರಿಯ ಹೀರಿದ ರಕ್ತ ಮೂರುದಿನಗಳ ಕಾಲ ಕಾಪಾಡುವುದಷ್ಟೆ ಅಲ್ಲ, ಒಂದಿಷ್ಟು ಹೆಚ್ಚೇ. ಒಟ್ಟಿಗಿರುವಾಗ ಈ ಬಾವಲಿಗಳು ಒಂದಿನ್ನೊಂದರ ಹೊಟ್ಟೆ ಸವರುತ್ತಿರುತ್ತವೆ. ಹೀಗಾಗಿ ಹೊಟ್ಟೆ ಬಿರಿಯ ರಕ್ತ ಹೀರಿದವು ಸುಳ್ಳು ಹೇಳಲಾಗುವುದಿಲ್ಲ. ಹೀಗೆ ಇವುಗಳಲ್ಲಿ ಪರಸ್ಪರ ತ್ಯಾಗದ ನಡವಳಿಕೆ ಮೂಡಲು ಬೇಕಾದ ಎಲ್ಲ ಲಕ್ಷಣಗಳೂ ಇವೆ ಎನ್ನಬಹುದು. ಆದರೆ ಈ ರೀತಿಯಲ್ಲಿ ಬಲು ಪ್ರಾಮಾಣಿಕವಾಗಿ ನಡೆದುಕೊಳ್ಳುವಷ್ಟು ಅರಿವು ಅವುಗಳಲ್ಲಿ ಇವೆಯೇ? ಇದು ಪ್ರಶ್ನೆ.
ಪ್ರಯೋಗಾಲಯಗಳಲ್ಲಿ ಹಾಗೂ ಕ್ಷೇತ್ರಾಧ್ಯಯನಗಳ ಮೂಲಕ ವಿಲ್ಕಿನ್ಸನ್ ರವರು ಈ ರೀತಿಯ ಪರಸ್ಪರ ತ್ಯಾಗ ನಡವಳಿಕೆಗೆ ಬೇಕಾದ ಎಲ್ಲ ಲಕ್ಷಣಗಳೂ ಈ ಬಾವಲಿಗಳಲ್ಲಿ ಇವೆ ಎಂದು ನಿರೂಪಿಸಿದ್ದಾರೆ. ಮೊದಲನೆಯದಾಗಿ, ರಕ್ತ ವಿನಿಮಯ ಅದದೇ ಬಾವಲಿಗಳ ನಡುವೆ ಆಗುತ್ತದೆ. ಎರಡನೆಯದಾಗಿ, ರಕ್ತ ದಾನ ಮಾಡುವುದರಿಂದ ದೊರೆಯುವ ಲಾಭ ದಾನ ಕೊಡುವುದರ ಶ್ರಮಕ್ಕಿಂತಲೂ ಹೆಚ್ಚು, ಹಾಗೂ ಮೂರನೆಯದಾಗಿ, ಮತ್ತು ಬಲು ಮುಖ್ಯವಾಗಿ, ಬಾವಲಿಗಳು ತಮಗೆ ಆ ಹಿಂದೆ ರಕ್ತ ದಾನ ಮಾಡಿದ್ದ ಬಾವಲಿಗಳನ್ನು ಗುರುತಿಸಿ, ಆದ್ಯತೆಯ ಮೇರೆಗೆ ಅವಕ್ಕೆ ರಕ್ತವನ್ನು ಕೊಡುತ್ತಿದ್ದುವು. ಇದಕ್ಕೆ ಸಂಬಂಧಿಗಳೇ ಆಗಬೇಕಿರಲಿಲ್ಲ. ಹಾಗೆಯೇ ತಮಗೆ ಹಿಂದೆ ರಕ್ತ ಕೊಡಲು ನಿರಾಕರಿಸಿದ್ದುವಕ್ಕೆ ರಕ್ತ ದಾನ ಮಾಡಲೂ ನಿರಾಕರಿಸಿದ್ದುವು. ವಿಲ್ಕಿನ್ಸನ್ನನ ವಿದ್ಯಾರ್ಥಿ ಹಾಗೂ ಈಗ ಕೊಲಂಬಸಿನಲ್ಲಿರುವ ಓಹಿಯೋ ವಿಶ್ವವಿದ್ಯಾನಿಲಯದ ವಿಜ್ಞಾನಿ ಜೆರಾಲ್ಡ್ ಕಾರ್ಟರ್ಇನ್ನಷ್ಟು ವಿಸ್ತೃತವಾದ ಹಾಗೂ ನಿಖರವಾದ ಅಧ್ಯಯನಗಳ ಮೂಲಕ, ಇದು ಸತ್ಯ ಎಂದು ಮರಳಿ ನಿರೂಪಿಸಿದ್ದಾರೆ.
ಪರೋಕ್ಷ ಪರಸ್ಪರತೆ ಎಂದರೆ ಪ್ರಾಣಿಗಳು ಬೇರೆಯವರು ತಮಗೇನು ಮಾಡಿವೆ ಎನ್ನುವುದನ್ನಷ್ಟೆ ಅಲ್ಲ, ಬೇರೆ ಜೀವಿಗಳು ಇತರರಿಗೆ ಏನು ಮಾಡಿವೆ ಎನ್ನುವುದನ್ನೂ ಲೆಕ್ಕಿಸಬೇಕಾಗುತ್ತದೆ. ಪ್ರಾಣಿಗಳಲ್ಲಿ ಹೀಗಾಗುತ್ತದೆ ಎನ್ನುವುದನ್ನು ಊಹಿಸಲೂ ಆಗದು. ಆದರೂ ಕೆಲವರು ಇದರ ಬೆನ್ನು ಬಿದ್ದಿರುವುದಲ್ಲದೆ, ಇಂತಹ ನಡವಳಿಕೆ ಕೆಲವು ಪ್ರಾಣಿಗಳಲ್ಲಿ ಅಸಾಧ್ಯವೇನಲ್ಲ ಎಂದು ಪತ್ತೆ ಮಾಡಿದ್ದಾರೆ.
ಉಷ್ಣವಲಯದ ಸಮುದ್ರಗಳಲ್ಲಿರುವ ಹಲವು ದೊಡ್ಡ ಮೀನುಗಳು ತಮ್ಮ ಬಾಯಂಗುಳಗಳನ್ನು ಸಣ್ಣ ಮೀನುಗಳಿಂದ ಶುಚಿಗೊಳಿಸಿಕೊಳ್ಳುತ್ತವೆ. ಈ ಸಣ್ಣ ಮೀನುಗಳು ದೊಡ್ಡವುಗಳ ಬಾಯಿಯಲ್ಲಿ ಇರುವ ಪರಜೀವಿಗಳು ಹಾಗೂ ಚರ್ಮದ ಉಳಿಕೆಗಳನ್ನು ತಿಂದು ಬದುಕುತ್ತವೆ. ಶುಚಿಮಾಡುವ ಹಾಗೂ ಗ್ರಾಹಕ ಮೀನುಗಳ ನಡುವಣ ಈ ಸಂಬಂಧ ಬಲು ಸೂಕ್ಷ್ಮತಮವಾದದ್ದು ಎನ್ನಬಹುದು. ಎರಡೂ ಒಂದಿನ್ನೊಂದಕ್ಕೆ ಮೋಸ ಮಾಡಬಹುದು. ಶುಚಿ ಮಾಡುವ ಮೀನುಗಳು ಶುಚಿಮಾಡುವಾಗ ಗ್ರಾಹಕರ ಸ್ವಲ್ಪ ಒಳ್ಳೆಯ ಅಂಗಾಂಶವನ್ನೂ ಕಿತ್ತು ತಿಂದುಬಿ ಡಬಹುದು. ಹಾಗೆಯೇ ಗ್ರಾಹಕ ಮೀನುಗಳು ಕೆಲವೊಮ್ಮೆ ಶುಚಿ ಮಾಡಲು ಬಂದವನ್ನು ನುಂಗಿಬಿಡಬಹುದು. ಆದರೂ ಅವುಗಳ ನಡುವೆ ಏನೋ ವಿಶ್ವಾಸ ಇದೆ. ಕೆಲವೊಮ್ಮೆ ಪೂರೈಕೆಗಿಂತ ಅವಶ್ಯಕತೆಯೇ ಹೆಚ್ಚಿರಬಹುದು. ಉದಾಹರಣೆಗೆ, ಶುಚಿಕಾರರಿಗಾಗಿ ಕಾಯುವ ಮೀನುಗಳ ಸರದಿಯೇ ಇರಬಹುದು. ಅಥವಾ ಶುಚಿಮಾಡಲು ಸಿದ್ಧವಾದವುಗಳದ್ದೇ ಸರದಿಯೂ ಇರಬಹುದು. ಇಂತಹ ಸಂದರ್ಭಗಳು, ಸರದಿಯಲ್ಲಿರುವ ಪ್ರಾಣಿಗಳು ಉಳಿದವುಗಳು ಏನು ಮಾಡುತ್ತಿವೆ ಎಂಬುದನ್ನು ಗಮನಿಸಿ, ಅವುಗಳೆಷ್ಟು ಸಫಲವಾದವು ಎಂದು ತಿಳಿಯಲು ನೆರವಾಗುತ್ತದೆ.
ಸ್ವಿಟ್ಜರ್ಲೆಂಡಿನ ನ್ಯೂಶಾಟೆಲ್ ವಿಶ್ವವಿದ್ಯಾನಿಲಯದ ರೆಡುವಾನ್ ಬಶಾರಿ ಮತ್ತು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾನಿಲಯದ ಅಲೆಕ್ಸಾಂಡ್ರಾ ಎಸ್ ಗ್ರುಟರ್ ಜೊತೆಗೂಡಿ, ಶುಚಿಗೊಳಿಸಿಕೊಳ್ಳಲು ಕಾಯುತ್ತಿರುವ ಗ್ರಾಹಕ ಮೀನುಗಳು ಶುಚಿಕಾರರಲ್ಲಿ “ನೈತಿಕತೆ” ಇದೆಯೋ ಎಂದು ಗಮನಿಸಿ, ಅತಿ ಪ್ರಾಮಾಣಿಕವಾದವುಗಳಿಂದ ಮಾತ್ರ ಶುಚಿ ಮಾಡಿಸಿಕೊಳ್ಳುತ್ತವೆ ಎಂದು ಪತ್ತೆ ಮಾಡಿದ್ದಾರೆ. ಇದೇ ರೀತಿಯಲ್ಲಿ ಶುಚಿಕಾರರೂ, ಗ್ರಾಹಕರ ಮೇಲೊಂದು ಕಣ್ಣಿಟ್ಟು, ಅವುಗಳೆಷ್ಟು ಜಾಗರೂಕರೆಂದು ಗುರುತಿಸುತ್ತವೆ. ಹಾಗೆಯೇ ಶುಚಿಕಾರರ ಚಲನವಲನಗಳನ್ನು ಕದ್ದು ನೋಡುವ ಗ್ರಾಹಕರನ್ನು ಶುಚಿಗೊಳಿಸುವಾಗ ಬಲು ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತವೆ ಎಂದು ತೋರಿಸಿದ್ದಾರೆ.
ಇನ್ನು ಸಾರ್ವತ್ರಿಕ ಪರಸ್ಪರತೆ ಎಂದರೆ ಪ್ರಾಣಿಗಳು ತಮಗೆ ಯಾರಾದರೂ ನೆರವಾದಾಗಷ್ಟೆ ಒಳ್ಳೆತನ ತೋರುವುದಷ್ಟೆ ಅಲ್ಲ, ಅಪರಿಚಿತರಿಗೂ ಆಗಾಗ್ಗೆ ಒಳ್ಳೆತನವನ್ನು ತೋರಬೇಕಾಗುತ್ತದೆ. ಬರ್ನ್ ವಿಶ್ವವಿದ್ಯಾನಿಲಯದ ಕ್ಲಾಡಿಯಾ ರುಟೆ ಮತ್ತು ಮೈಖೇಲ್ ತಾಬೋರ್ಸ್ಕಿ ಇದನ್ನು ಕೇವಲ ಮಾನವಕೇಂದ್ರಿತ ಭಾವವಷ್ಟೆ ಎನ್ನದೆ, ಪ್ರಾಣಗಳಲ್ಲಿಯೂ ಇರಬಹುದೇ ಎಂದು ಪರೀಕ್ಷಿಸಿದ್ದಾರೆ. ರೇಟಸ್ ನಾರ್ವೇಜಿಕಸ್ ಇಲಿಗಳಿಗೆ ತರಬೇತಿ ನೀಡಿದ್ದಾರೆ. ಇಲಿಗಳು ಒಂದು ಬೆತ್ತವನ್ನು ಎಳೆದಾಗ, ಇನ್ನೊಂದು ಇಲಿಗೆ ಆಹಾರ ದೊರಕುತ್ತದೆ. ಸ್ವತಃ ಅವಕ್ಕೆ ಏನೂ ಸಿಗುವುದಿಲ್ಲ. ಇಂತಹ ಪರೀಕ್ಷೆಗಳ ಮೂಲಕ ಇಲಿಗಳು ತಮಗೆ ಈ ಹಿಂದೆ ನೆರವಾಗಿದ್ದ ಅಪರಿಚಿತ ಇಲಿಗಳಿಗೆ ನೆರವು ನೀಡುತ್ತವೆ ಎಂದು ಪತ್ತೆ ಮಾಡಿದ್ದಾರೆ.
ಪ್ರಾಣಿಗಳು ಹೀಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹಾಗೂ ಸಾರ್ವತ್ರಿಕವಾಗಿ ಪರಸ್ಪರ ತ್ಯಾಗಮಯಿಗಳೆನ್ನಿಸುವಷ್ಟು ಜಾಣರು. ಈ ಅರಿವಿನಿಂದಾಗಿ ಪ್ರಾಣಿಗಳ ಕಲಿಕೆ, ಗ್ರಹಿಕೆ ಮತ್ತು ಸ್ಮರಣ ಶಕ್ತಿಯ ಸೀಮೆಗಳೇನೇನು ಎಂದು ಪರೀಕ್ಷಿಸಲು ಮತ್ತಷ್ಟು ಉತ್ಸಾಹ, ಹುರುಪಿನಿಂದ ವಿಜ್ಞಾನಿಗಳು ಮುಂದಾಗಿದ್ದಾರೆ. ಕಾಗೆಗಳ ಮೇಲೆ ಕೆಲವು ಚತುರ ಹಾಗೂ ಜಾಣ ಪ್ರಯೋಗಗಳೂ ಈ ದಿಕ್ಕಿನಲ್ಲಿ ನಡೆಯುತ್ತಿವೆ.
ಆಸ್ಟ್ರಿಯಾದಲ್ಲಿನ ವಿಜ್ಞಾನಿಗಳ ತಂಡವೊಂದು ಕಾರ್ವಸ್ ಕೋರಾಕ್ಸ್ ಎನ್ನುವ ಕಾಡುಕಾಗೆಗಳನ್ನು ದೊಡ್ಡ ಪಂಜರಗಳಲ್ಲಿಟ್ಟು ಪರೀಕ್ಷೆ ಮಾಡುತ್ತಿದೆ. ಈ ಕಾಗೆಗಳು ಬ್ರೆಡ್ಡಿಗಿಂತಲೂ ಬೆಣ್ಣೆಯನ್ನು ಇಷ್ಟ ಪಡುತ್ತವೆಯಂತೆ. ಹೀಗಾಗಿ ಒಬ್ಬ ಕಾಗೆಗೆ ಬ್ರೆಡ್ಡು ನೀಡಿದರೆ, ಮತ್ತೊಬ್ಬ ಆ ಬ್ರೆಡ್ಡನ್ನು ಪಡೆದು ಬದಲಿಗೆ ಬೆಣ್ಣೆ ನೀಡುತ್ತಾನೆ. ಕಾಗೆಗಳಿಗೆ ಇದು ಎಷ್ಟು ಇಷ್ಟವಾಗುತ್ತದೆ ಎಂದರೆ ಈ ಬೆಣ್ಣೆ ನೀಡುವ ಒಳ್ಳೆಯವನ ಬಳಿ ಹೋಗಿ ತಮ್ಮ ಬ್ರೆಡ್ಡನ್ನು ಬೆಣ್ಣೆಗೆ ವಿನಿಮಯ ಮಾಡಿಕೊಳ್ಳುತ್ತವೆ. ಆದರೆ ಇನ್ನು ಕೆಲವು ಪರೀಕ್ಷಕರು “ಅನ್ಯಾಯ” ಮಾಡುತ್ತಾರೆ. ಅವರು ಬ್ರೆಡ್ಡು ಪಡೆದುಕೊಂಡರೂ, ಬೆಣ್ಣೆಗಾಗಿ ಕಾಯುತ್ತ ನಿಂತ ಕಾಗೆಯ ಕಣ್ಣೆದುರೇ ಬೆಣ್ಣೆಯನ್ನು ತಿಂದು ಬಿಡುತ್ತಾರೆ. ಈ ಒಂದೇ ಒಂದು ಬಾರಿ ಈ ಅನುಭವ ಸಿಕ್ಕರೂ ಸಾಕು, ಕಾಗೆಗಳು ಹೀಗೆ ನ್ಯಾಯವಂತರನ್ನೂ ಅನ್ಯಾಯವಂತರನ್ನೂ ಒಂದು ತಿಂಗಳವರೆಗೆ ನೆನಪಿಟ್ಟುಕೊಂಡಿರುತ್ತವೆಯಂತೆ. ಅನಂತರ ಅವು “ಅನ್ಯಾಯಿ”ಗಳನ್ನು ದೂರವಿಟ್ಟು ಬ್ರೆಡ್ಡನ್ನು ಕೇವಲ ನ್ಯಾಯವಂತರ ಬಳಿಗೇ ವಿನಿಮಯಕ್ಕೆ ಕೊಂಡೊಯ್ಯುತ್ತವೆ.
ಹೀಗೆ ನಮ್ಮ ನಿರೀಕ್ಷೆಯನ್ನೂ ಮೀರಿದ, ಹಾಗೂ ನಮ್ಮ ಅಳವಿಗೂ ಸಿಗದಂತಹ ಗ್ರಹಿಕೆ ಪ್ರಾಣಿಗಳಲ್ಲಿ ಇರಬಹುದು ಎನ್ನುವ ಹೊಸ ವಿಚಾರಕ್ಕೆ ವಿಜ್ಞಾನಿಗಳ ಮನಸ್ಸು ತೆರೆದುಕೊಳ್ಳುತ್ತಿದೆ. ಇದು ಪ್ರಾಣಿಗಳ ತರ್ಕಬದ್ಧ ನಡವಳಿಕೆಗಳನ್ನು ಅರಿಯುವ ಬಗ್ಗೆ ಹೊಸ ಮಾರ್ಗಗಳನ್ನು ಸೂಚಿಸಿದೆ. ಒಂದು ರೀತಿಯಲ್ಲಿ ಪ್ರಾಣಿಗಳು ನಾವು ಜಾಣರಾಗುವಂತೆ ಮಾಡುತ್ತಿವೆ ಎನ್ನೋಣ! ಮರುಳರೋ, ಜಾಣರೋ, ನಾವೂ ಇಂತಹ ವಿಜ್ಞಾನಿಗಳನ್ನು ಸೃಷ್ಟಿಸಿ, ಪಾಲಿಸುವಂತೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನೂ, ಸಾಮಾಜಿಕ ಕಟ್ಟುಪಾಡುಗಳನ್ನು ತಿದ್ದಬೇಕಾಗಿದೆ ಅಷ್ಟೆ.
ಇದು ಇಂದಿನ ಜಾಣ ಅರಿಮೆ. ಆಂಗ್ಲ ಮೂಲ: ಪ್ರೊಫೆಸರ್ ರಾಘವೇಂದ್ರ ಗದಗಕರ್, ಅನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್. ಮಂಜುನಾಥ. ಈ ಲೇಖನದ ಆಂಗ್ಲಮೂಲವನ್ನು ದಿ ವೈರ್ ಸೈನ್ಸ್ ಪತ್ರಿಕೆ ಪ್ರಕಟಿಸಿದೆ.