Now Reading
ಸಂಶೋಧಕರ ಬರವಿಗಾಗಿ ಕಾಯುತ್ತಿರುವ ಹೆಗ್ಗಣಜ: ದಕ್ಷಿಣ ಭಾರತದ ಗ್ರೇಟರ್‌ ಬ್ಯಾಂಡೆಡ್‌ ಹಾರ್ನೆಟ್

ಸಂಶೋಧಕರ ಬರವಿಗಾಗಿ ಕಾಯುತ್ತಿರುವ ಹೆಗ್ಗಣಜ: ದಕ್ಷಿಣ ಭಾರತದ ಗ್ರೇಟರ್‌ ಬ್ಯಾಂಡೆಡ್‌ ಹಾರ್ನೆಟ್

ಜ್ಯೂರಿಕ್‌ ವಿಶ್ವವಿದ್ಯಾನಿಲಯದ ಕಛೇರಿಯಲ್ಲಿ ತನ್ನ ಪ್ರಯೋಗಗಳ ಫಲಿತಾಂಶಗಳ ಗ್ರಾಫ್‌ ಗಳನ್ನು ಪರಿಶೀಲಿಸುತ್ತಿರುವ ಮಿರಿಯಂ ಲೆಹ್ರರ್‌ (1933-2005). ಚಿತ್ರ: ಎಂ.ವಿ. ಶ್ರೀನಿವಾಸನ್

ಸಂಪುಟ 4 ಸಂಚಿಕೆ 296, ಜುಲೈ 27, 2021
&
ಸಂಪುಟ 4 ಸಂಚಿಕೆ 297, ಜುಲೈ 28, 2021

ಜಾಣ ಅರಿಮೆ

ವಿಸ್ಮಯಕ್ಕಿಂತ ವಿಸ್ಮಯ 23

Kannada translation by Kollegala Sharma

§

ಇತ್ತೀಚೆಗೆ “ವಿಷುಯಲ್ ಅಸೋಸಿಯೇಟಿವ್‌ ಲರ್ನಿಂಗ್‌ ಅಂಡ್‌ ಆಲ್ಫಾಕ್ಟರಿ ಪ್ರಿಫರೆನ್ಸಸ್‌ ಆಫ್‌ ದಿ ಗ್ರೇಟರ್‌ ಬ್ಯಾಂಡೆಡ್‌ ಹಾರ್ನೆಟ್, ವೆಸ್ಪಾ ಟ್ರಾಪಿಕಾ” ಎನ್ನುವ ಪ್ರಬಂಧವನ್ನು ಓದಿ ಖುಷಿ ಪಟ್ಟೆ. “ಗ್ರೇಟರ್‌ ಬ್ಯಾಂಡೆಡ್‌ ಹಾರ್ನೆಟ್‌ ಎನ್ನುವ ಹೆಗ್ಗಣಜ ತಾನು ಆಸ್ವಾದಿಸಿದ ಪರಿಮಳಗಳನ್ನು ತಾನು ಕಂಡ ನೋಟಗಳೊಂದಿಗೆ ತಾಳೆ ಹಾಕಲು ಕಲಿಯುತ್ತದೆ” ಎನ್ನುವುದು ಇದರ ಅರ್ಥ. ಇದನ್ನು ತಿರುವನಂತಪುರದಲ್ಲಿರುವ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೇಶನ್‌ ಅಂಡ್‌ ರಸರ್ಚ್‌, ಅಂದರೆ ಐಐಎಸ್‌ಇಆರ್‌ ಸಂಸ್ಥೆಯಲ್ಲಿರುವ ನನ್ನ ಸಹೋದ್ಯೋಗಿ ಹೇಮಾ ಸೋಮನಾಥನ್‌ ಮತ್ತು ಸಂಗಡಿಗರು ಪ್ರಕಟಿಸಿದ್ದರು. ಈ ಶೋಧವು ಕಣಜಗಳು ಬಣ್ಣ, ವಾಸನೆ ಹಾಗೂ ಆಕಾರಗಳನ್ನು ನಾವು ನೀಡಿದ ಆಹಾರದ ಜೊತೆಗೆ ಹೊಂದಿಸಲು ಕಲಿಯುತ್ತದೆ ಎಂದು ತಿಳಿಸುತ್ತದೆ.  

ಈ ಪ್ರಬಂಧ ನನ್ನ ಆಸಕ್ತಿಯನ್ನು ವಿಶೇಷವಾಗಿ ಕೆರಳಿಸಿದ್ದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಅದು ಒಂದು ಸರಳವಾದ, ಜಾಣತನದ ಅಗ್ಗದ ಪ್ರಯೋಗ. ಇಂತಹುವಗಳ ಬಗ್ಗೆ ನನಗೆ ಅತೀವ ಪ್ರೇಮ. ಎರಡನೆಯದಾಗಿ ಈ ಅಧ್ಯಯನವು ನನ್ನ ಇನ್ನಿಬ್ಬರು ಹೀರೋಗಳಾದ ಕಾರ್ಲ್‌ ವಾನ್‌ ಫ್ರಿಶ್‌ ಮತ್ತು ಮಿರಿಯಂ ಲೆಹ್ರರ್‌ ಅವರ ಸಂಶೋಧನೆಗಳಿಗೆ ಇನ್ನಷ್ಟು ಅರಿವನ್ನು ಸೇರಿಸಿತ್ತು. ಮೂರನೆಯದಾಗಿ ಈ ಶೋಧದ ಕರ್ತೃಗಳು, ನಾನು ಮತ್ತು ನನ್ನ ವಿದ್ಯಾರ್ಥಿಗಳು ಮಾಡದೇ ಸೋತದ್ದನ್ನು ಸಾಧಿಸಿದ್ದರು. ಕೊನೆಯದಾಗಿ, ಇವರ ಸಂಶೋಧನೆಯ ವಸ್ತು, ನಾನು ನನ್ನ ಪ್ರಯೋಗಾಲಯದಿಂದ ದೂರ ಇಡಲೇಬೇಕೆಂಬ ಹಠದಿಂದ ಸಾಕಷ್ಟು ಹಣ ಮತ್ತು ಶ್ರಮವನ್ನು ಬಳಸಿದ ಒಂದು ಜೀವಿ! 

ಈ ಪ್ರಬಂಧದಿಂದ ಪ್ರಚೋದಿಸಲ್ಪಟ್ಟ ಬಹು ಭಾವನೆಗಳನ್ನು ಬಿಚ್ಚಿಡಲು ನಾನು ಪ್ರಯತ್ನಿಸುತ್ತೇನೆ ಮತ್ತು ರೇಖೀಯ ನಿರೂಪಿಸಲು ಪ್ರಯತ್ನಿಸುತ್ತೇನೆ.

ಜೇನುಗಳು ಬಣ್ಣವನ್ನು ನೋಡಬಲ್ಲವೇ?  

ನೋಬೆಲ್‌ ಬಹುಮಾನ ಪಡೆದ ಶೋಧವನ್ನು ಮಾಡುವುದಕ್ಕೆ ಬಲು ಹಿಂದೆ, ಯುವಕನಾಗಿದ್ದ ಕಾರ್ಲ್‌ ವಾನ್‌ ಫ್ರಿಶ್‌ ಒಂದು ಸರಳ ಪ್ರಶ್ನೆ ಕೇಳಿದ್ದ: ಹೂಗಳ ಬಣ್ಣವೇಕೆ ಅಷ್ಟೊಂದು ವರ್ಣಮಯ? ಜೇನ್ನೊಣಗಳನ್ನು ಆಕರ್ಷಿಸುವುದಕ್ಕೆ ಇದು ಎಂಬುದು ಥಟ್ಟನೆ ಹೊಳೆಯುವ ಉತ್ತರ. ಆದರೆ ಆಗಿನ ದಿನಗಳಲ್ಲಿ ಪ್ರತಿಷ್ಟಿತ ವಿಜ್ಞಾನಿಯಾಗಿದ್ದ ರಿಚರ್ಡ್‌ ಸಿ ವಾನ್‌ ಹೆಸ್‌ ಎಂಬಾತ ಜೇನ್ನೊಣಗಳಿಗೆ ಬಣ್ಣ ಕಾಣಿಸುವುದಿಲ್ಲ ಎಂದು ನಿರೂಪಿಸಿಬಿಟ್ಟಿದ. 

ಹೀಗೆ ತನ್ನ ಸಂದೇಹದ ಭಾರವನ್ನು ತಡೆಯಲಾದರ ವಾನ್‌ ಫ್ರಿಶ್‌ ತನ್ನ ಪರಿಕಲ್ಪನೆಗಳು ಸರಿಯೋ ಎಂದು ಪರೀಕ್ಷಿಸಲು ತನ್ನದೇ ಪ್ರಯೋಗಗಳನ್ನು ಕೈಗೊಂಡಿದ್ದ. ತೋಟದಲ್ಲಿ ಒಂದು ಬಣ್ಣದ ಕಾಗದದ ಮೇಲಿಟ್ಟಿದ್ದ ಪಾತ್ರೆಯಿಂದ ಸಕ್ಕರೆಯ ಪಾನಕವನ್ನು ಸಂಗ್ರಹಿಸಲು ಜೇನ್ನೊಣಗಳಿಗೆ ಕಲಿಸಿದ. ಜೇನ್ನೊಣಗಳು ಸಕ್ಕರೆಯ ಪಾನಕವನ್ನು ಹೀರಿ, ಅದನ್ನು ಹೊಟ್ಟೆಯಲ್ಲಿ ಕೂಡಿಟ್ಟುಕೊಂಡು, ಮನೆಗೆ ಮರಳುತ್ತಿದ್ದುವು. ಗೂಡಿನಲ್ಲಿ ಸಕ್ಕರೆಯ ಪಾಕವನ್ನು ಪಡೆಯುವುದಕ್ಕೆಂಧು ಕಾಯುತ್ತಿದ್ದ ಜೇನ್ನೊಣಗಳಿಗೆ ಅದನ್ನು ಕೊಟ್ಟು ಮರಳುತ್ತಿದ್ದುವು. ಹೀಗೆ ಜೇನ್ನೊಣಗಳು ಹಲವಾರು ಬಾರಿ ಪಯಣಿಸಿದ ಮೇಲೆ, ಆ ಬಣ್ಣದ ಕಾಗದ ಇದ್ದ ಕಡೆ ಆಹಾರ ಸಿಗುತ್ತದೆಂದು ಹೊಂದಿಸಿಕೊಳ್ಳುತ್ತಿದ್ದುವು. ಆದರೆ ಅವು ಬಣ್ಣವನ್ನು ಕಂಡು, ಪಾಠವನ್ನು ಕಲಿಯುವವರಾಗಿದ್ದರೆ ಮಾತ್ರ ಇದು ಸಾಧ್ಯ. 

The German zoologist training bees to collect sugar solution from a place of his choice. Photo: Author not known. Immediate source: https://en.wikipedia.org/w/index.php?curid=50796040, fair use

ತಾನು ಆಯ್ದ ಕಡೆಯಿಂದಲೇ ಜೇನ್ನೊಣಗಳು ಸಕ್ಕರೆ ಪಾನಕವನ್ನು ಸಂಗ್ರಹಿಸುವಂತೆ ತರಬೇತಿ ನೀಡುತ್ತಿರುವ ಜರ್ಮನ್‌ ಪ್ರಾಣಿವಿಜ್ಞಾನಿ ಕಾರ್ಲ್‌ ವಾನ್‌ ಫ್ರಿಶ್. ಫೋಟೋ ಆಕರ:  https://en.wikipedia.org/w/index.php?curid=50796040, fair use

ಜೇನ್ನೊಣಗಳು ಇಲ್ಲದಿದ್ದಾಗ, ಫ್ರಿಶ್‌ ಟೇಬಲ್ಲನ್ನು ಶುಚಿಗೊಳಿಸಿ, ಅಲ್ಲಿ ಎರಡು ಹೊಸ ಕಾಗದದಗಳನ್ನು ಇಟ್ಟ. ಅವುಗಳಲ್ಲಿ ಒಂದು ಜೇನ್ನೊಣಗಳಿಗೆ ಪರಿಚಿತವಾಗಿದ್ದ ಬಣ್ಣದ ಕಾಗದ ಹಾಗೂ ಇನ್ನೊಂದು ಜೇನ್ನೊಣಗಳು ಕಂಡಿಲ್ಲದ ಬಣ್ಣದ ಕಾಗದ. ಜೇನ್ನೊಣಗಳು ಈ ಎರಡು ಬಣ್ಣಗಳನ್ನೂ ಗುರುತಿಸುತ್ತವಾದರೆ, ಅವು ಸಾಮಾನ್ಯವಾಗಿ ಮೊದಲು ಆಹಾರವನ್ನು ಇಟ್ಟಿದ್ದ ಕಾಗದದ ಬಣ್ಣವನ್ನು ನೆನಪಿಸಿಕೊಳ್ಳಬೇಕು. ಹಾಗೂ ಆ ಮೊದಲಿನ ಬಣ್ಣದ ಕಾಗದದ ಮೇಲೆಯೇ ಹೆಚ್ಚು ಇರಬೇಕು. ಜೇನ್ನೊಣಗಳು ಮಾಡಿದ್ದೂ ಅದನ್ನೇ! 

ಜೇನ್ನೊಣಗಳು ಬಣ್ಣವನ್ನು ಕಾಣಲಾಗದಿದ್ದರೂ, ಅವು ಈ ಎರಡು ಬಣ್ಣದ ಕಾಗದಗಳನ್ನು ವಿಭಿನ್ನ ಗಾಢತೆಯ ಕಪ್ಪು ಬಣ್ಣವೆಂದು ಗ್ರಹಿಸುತ್ತಿರಬಹುದು ಎಂದು ಕೂಡ ವಾನ್‌ ಪ್ರಿಶ್‌ ತರ್ಕಿಸಿದ. ಇದನ್ನು ಅಲ್ಲಗಳೆಯಲು ಆತ, ಜೇನ್ನೊಣಗಳಿಗೆ ಬಣ್ಣ ಕಾಣುತ್ತದೆಂದು ಹೇಳುವ ಮುನ್ನ, ವಾನ್‌ ಫ್ರಿಶ್‌ ಜೇನ್ನೊಣಗಳಿಗೆ ಮೊದಲು ತೋರಿಸಿದ ಬಣ್ಣದ ಜೊತೆಗೇ ಬೇರೆ, ಬೇರೆ ಗಾಢತೆಯ ಬೂದ ಬಣ್ಣದ ಕಾಗದಗಳನ್ನೂ ಪ್ರದರ್ಶಿಸಿದ. ಇವು ಯಾವುವನ್ನೂ ಅವು ಬಣ್ಣದ ಕಾಗದವೆಂದು ತಪ್ಪಾಗಿ ತಿಳಿಯವು ಎಂದೂ ನಿರೂಪಿಸಿದ. 

ಆದರೆ ಇದನ್ನು ವಾನ್‌ ಹೆಸ್‌ ಹಠ ತಗ್ಗಿಸಿ ಒಪ್ಪಲಿಲ್ಲ. ವಾನ್‌ ಹೆಸ್‌ ಮತ್ತು ವಾನ್‌ ಫ್ರಿಶ್‌ ನಡುವೆ ನಡೆದ ಈ ಕದನ ಗಂಭೀರವೂ, ಅರಿವು ಮೂಡಿಸುವಂಥದ್ದು. ಇದನ್ನು ಎಷ್ಟು ಬಾರಿ ಹೇಳಿದರೂ ಚೆನ್ನವೇ. ಕೊನೆಗೆ ವಾನ್‌ ಹೆಸ್‌ ತನ್ನ ಅಧಿಕಾರವಾಣಿಯನ್ನು ಉಪಯೋಗಿಸಿ ಹೀಗೆ ಹೇಳಿದ: 

ಜೇನ್ನೊಣಗಳಿಗೆ  ಬಣ್ಣಗಳನ್ನು ಗುರುತಿಸುವಂತೆ ತರಬೇತಿ ನೀಡಬಹುದು ಎನ್ನುವ ವಾನ್‌ ಫ್ರಿಶನ ಹೇಳಿಕೆಗಳು ತಪ್ಪು ಎನ್ನುವುದನ್ನು ತೋರಿಸಬಹುದು. ಜೇನ್ನೊಣಗಳು ಬಣ್ಣವನ್ನು ಕಾಣುವುದು ಸಾಧ್ಯ ಎನ್ನುವ ಬಗ್ಗೆ ಒಂದೇ ಒಂದು ಪುರಾವೆಯೂ ನನ್ನ ಶೋಧಗಳಲ್ಲಿ ಕಂಡಿಲ್ಲವಾದ್ದರಿಂದ, ಈ ತರ್ಕವನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು..” 

ಇದು ಯುವ ವಾನ್‌ ಫ್ರಿಶ್‌ ತನ್ನ ತಾಯಿಗೆ ಹೀಗೊಂದು ಪತ್ರ ಬರೆಯಲು ಪ್ರೇರೇಪಿಸಿತು. 

ನನಗೆ ಈಗ ಈ ಪ್ರಪಂಚದಲ್ಲಿ ಒಬ್ಬ ನಿಜವಾದ ಶತ್ರು ಇದ್ದಾನೆಂದು ಅನಿಸುತ್ತಿದೆ. ಇವನೇ ಮೊದಲ ಶತ್ರು ಹಾಗೂ ನನ್ನನ್ನು ನಾಶಮಾಡಬಲ್ಲ ಮೊದಲ ವೈರಿ.” 

ಇಂದು ನಮಗೆ ಕಾರ್ಲ್‌ ವಾನ್‌ ಫ್ರಿಶನ ತರ್ಕ ಸರಿ ಎಂದು ತಿಳಿದಿದೆ. ಅಲ್ಲದೇ ವಾನ್‌ ಹೆಸ್‌ ಹಾಗೆ ತಪ್ಪು ತೀರ್ಮಾನಕ್ಕೆ ಬರಲು ಕಾರಣಗಳೇನು ಎಂಬುದೂ ತಿಳಿದಿದೆ, ಹಾಗೂ ಈ ಬಗ್ಗೆ ಇನ್ನೂ ಹೆಚ್ಚಿನ ವಿವರಗಳೂ ಗೊತ್ತಿವೆ. ಜೇನ್ನೊಣಗಳಿಗೆ ವರ್ಣದೃಷ್ಟಿ ಇದೆ ಎಂಬುದೂ ನಮಗೆ ಖಚಿತವಾಗಿದೆ. ಅವಕ್ಕೆ ಮನುಷ್ಯರಂತೆಯೇ ತ್ರಿವರ್ಣದೃಷ್ಟಿ ಇದೆ. ಆದರೆ ಅವುಗಳು ಕಾಣುವ ವಿವಿಧ ಬಣ್ಣಗಳ ಸೂಕ್ಷ್ಮತೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಜೇನ್ನೊಣಗಳ ಕಣ್ಣಿನಲ್ಲಿರುವ ಕೋನ್‌ ಕೋಶಗಳು ಅತಿನೇರಳೆ, ನೀಲಿ ಹಾಗೂ ಹಸಿರು ಬಣ್ಣಗಳನ್ನು ನೋಡಬಲ್ಲವು. ನಮ್ಮದರಂತೆ ಕೆಂಪು, ನೀಲಿ, ಹಸಿರು ಬಣ್ಣಗಳನ್ನಲ್ಲ. 

ವಾನ್‌ ಫ್ರಿಶ್ಚನ ಈ ಪ್ರಯೋಗಗಳು ಎಷ್ಟು ಸರಳ ಹಾಗೂ ಜಾಣತನದವೆಂದರೆ, ಅಷ್ಟಿಷ್ಟು ಬದಲಾವಣೆಗಳೊಂದಿಗೆ ಈ ಪ್ರಯೋಗಗಳನ್ನು ಮಾಡಲು ನಾನು ಹೈಸ್ಕೂಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ್ದೇನೆ. ವಿದ್ಯಾರ್ಥಿಗಳು ಒಂದು ರಟ್ಟಿನ ಡಬ್ಬದಲ್ಲಿ ಸಕ್ಕರೆ ಪಾನಕವನ್ನು ಇಟ್ಟು ಎರಡು ವಿಭಿನ್ನ ಬಣ್ಣದ ಕಾಗದದ ಚೌಕಟ್ಟು ಇರುವ ಕಿಟಕಿಗಳನ್ನು ಮಾಡಿ ಪ್ರಯೋಗಗಳನ್ನು ಮಾಡಿದ್ದಾರೆ. ಕಿಟಕಿಗಳಲ್ಲಿ ಒಂದನ್ನು ಮುಚ್ಚಿ, ಜೇನ್ನೊಣಗಳು ನಿರ್ದಿಷ್ಟ ಬಣ್ಣದ ಕಿಟಕಿಯಿಂದ ಪ್ರವೇಶಿಸಿದರಷ್ಟೆ ಪಾನಕದ ಲಾಭ ಸಿಗುತ್ತದೆಂದೂ, ಇನ್ನೊಂದರಿಂದ ಪ್ರವೇಶಿಸಿದಾಗಲ್ಲ ಎಂಬ ತರಬೇತಿಯನ್ನು ನೀಡಿದ್ದಾರೆ. 

ಇಂತಹ ಒಂದು ಪ್ರಯೋಗದಲ್ಲಿ ವಿದ್ಯಾರ್ಥಿಗಳು ನೀಲಿ ಬಣ್ಣದ ಕಿಟಕಿಯಿಂದಷ್ಟೆ ಒಳ ಹೋಗಲು ತರಬೇತಿ ಪಡೆದವು. ಹಸಿರು ಬಣ್ಣದ ಕಿಟಿಯನ್ನು ಮುಚ್ಚಲಾಗಿತ್ತು. ಅನಂತರ ಪರೀಕ್ಷಿಸಿದಾಗ, ತರಬೇತಿ ಪಡೆದ ಹಾಗೂ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ಗುರುತಿಸಿದ್ದ ಜೇನ್ನೊಣಗಳು, ೧೦೬ ಪರೀಕ್ಷೆಗಳಲ್ಲಿ ೧೦೪ ಬಾರಿ ಕೇವಲ ನೀಲಿ ಕಿಟಕಿಯಿಂದಷ್ಟೆ ಪ್ರವೇಶಿಸಿದ್ದುವು. ಹಸಿರು ಕಿಟಿಯೊಳಗಿಂದ ಹೋಗಲು ತರಬೇತಿ ನೀಡಿದಾಗ ಅವು ೧೦೩ ಪರೀಕ್ಷೆಗಳಲ್ಲಿ ೧೦೦ ಬಾರಿ ಆ ಕಿಟಕಿಯನ್ನೇ ಆಯ್ದುಕೊಂಡಿದ್ದುವು. 

ಎರಡನೆಯ ಪ್ರಯೋಗವು ಜೇನ್ನಣಗಳಿಗೆ ನೀಲಿಯೋ, ಹಸಿರೋ ಬಣ್ಣ ಮುಖ್ಯವಲ್ಲ, ಆದರೆ ಅವಕ್ಕೆ ಸಿಗುವ ಆಹಾರ ಮುಖ್ಯವೆಂದೂ, ಅದನ್ನು ಪಡೆಯುವುದು ಹೇಗೆಂದು ಅವು ನೆನಪಿಡುತ್ತವೆಂದೂ ತಿಳಿಯಿತು. ಇನ್ನೊಂದು ಪ್ರಮುಖ ಪ್ರಯೋಗದಲ್ಲಿ ವಿದ್ಯಾರ್ಥಿಗಳು ಒಂದೇ ಬಣ್ಣದ ಚೌಕಟ್ಟು ಇರುವ ಕಿಟಕಿಗಳನ್ನು ಜೇನ್ನೊಣಗಳ ಮುಂದಿಟ್ಟಿದ್ದರು. ಈಗ ಜೇನ್ನೊಣಗಳು ಎರಡೂ ಕಿಟಕಿಗಳನ್ನೂ ಸಮಾನವಾಗಿ ಬಳಸಿದ್ದುವು. ಅಂದರೆ ಅವು ಎಡ, ಬಲವೆಂದು ಕಲಿತಿರಲಿಲ್ಲ. ಬದಲಿಗೆ ಕಿಟಕಿಯ ಬಣ್ಣ ಯಾವುದೆಂದು ಕಲಿತಿದ್ದುವು. (ಚಿತ್ರ ನೋಡಿ)

Left: experimental cardboard box with two entrances with different coloured discs. Right: results of training bees, as explained in the text. Source: Author provided

ಎಡ: ವಿಭಿನ್ನ ಬಣ್ಣದ ಕಾಗದ ಅಂಟಿಸಿರುವ ಕಿಟಕಿಗಳಿರುವ ರಟ್ಟಿನ ಪೆಟ್ಟಿಗೆ. ಬಲ: ತರಬೇತಿ ಪಡೆದ ಜೇನ್ನೊಣಗಳ ಪರೀಕ್ಷೆಯ ಫಲಿತಾಂಶ. ಮೂಲ: ಲೇಖಕ

ನೋಬೆಲ್‌ ವಿಜೇತ ವಿಜ್ಞಾನಿ ಎನ್ನುವುದನ್ನೂ ಗಮನಿಸದ ನನ್ನ ವಿದ್ಯಾರ್ಥಿಗಳು ಫ್ರಿಶ್ನ ಪ್ರಯೋಗಗಳನ್ನು ಮರುಕಳಿಸುವುದಕ್ಕಷ್ಟೆ ಸುಮ್ಮನಾಗಲಿಲ್ಲ., ಅವನ ಮೂಲ ಪ್ರಯೋಗಗಳಲ್ಲಿಯೇ ಹಲವು ಬದಲಾವಣೆಗಳನ್ನೂ ಮಾಡಿದ್ದರು. ಬೆಳಗ್ಗಿನ ಹೊತ್ತು ನೀಲಿಯನ್ನು ಆಯ್ದುಕೊಂಡರೆ ಲಾಭವೆಂದೂ, ಸಂಜೆ ಹಸಿರನ್ನು ಆಯ್ದುಕೊಂಡರೆ ಲಾಭವೆಂದೂ ಜೇನ್ನೊಣಗಳಿಗೆ ಕಲಿಸಿದರು.  

ಎಂ. ವಿ. ಶ್ರೀನಿವಾಸನ್ ಹಾಗೂ ಶಾವೊ ವು ಜಾಂಗ್ ನಮ್ಮ ಪ್ರಯೋಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇನ್ನೂ ಒಂದು ಸೃಜನಾತ್ಮಕ ಬದಲಾವಣೆಯನ್ನು ಮಾಡಿದರು. ಈ ಮೂಲಕ ಜೇನ್ನೊಣಗಳು ಡಬ್ಬಿಯಲ್ಲಿ ಆಹಾರ ಸೇವಿಸಲು ಬಂದಾಗ ಒಂದು ಬಣ್ಣದ ಕಿಟಕಿಯನ್ನೂ, ತಮ್ಮ ಗೂಡಿಗೆ ಮರಳುವಾಗ ಬೇರೆ ಬಣ್ಣದ ಕಿಟಕಿಯನ್ನೂ ಆಯುವುದನ್ನು ಕಲಿಸಿದರು. ಕೆಲವೇ ಸೆಕೆಂಡುಗಳ ಅಂತರದಲ್ಲಿ ಅವು ಒಂದು ಬಣ್ಣದಿಂದ ಇನ್ನೊಂದಕ್ಕೆ ಹೋಗುತ್ತಿದ್ದವು. ಈ ಪ್ರಯೋಗಗಳ ಪೂರ್ಣ ವಿವರಗಳನ್ನು ನನ್ನ ಎಕ್ಸ್‌ಪೆರಿಮೆಂಟ್ಸ್‌ ಇನ್‌ ಅನಿಮಲ್‌ ಬಿಹೇವಿಯರ್‌ ಎನ್ನುವ ಉಚಿತ ಇ-ಪುಸ್ತಕದಲ್ಲಿ ಓದಬಹುದು. 

ಮಿರಿಯಂ ಲೆಹ್ರರ್‌

ಜ್ಯೂರಿಕ್‌ ವಿಶ್ವವಿದ್ಯಾನಿಲಯಕ್ಕೆ 1992ರಲ್ಲಿ ಭೇಟಿ ಕೊಟ್ಟಿದ್ದಾಗ ನಾನು ಮೊತ್ತ ಮೊದಲ ಬಾರಿಗೆ ಮಿರಿಯಮ್‌ ಲೆಹ್ರರಳನ್ನು ಭೇಟಿಯಾದೆ. ಆಗ ಮಿರಿಯಂ ನನಗೆ ಜೇನ್ನೊಣಗಳು ಆಕಾರ ಹಾಗೂ ಚಲನೆಯನ್ನು ಗುರುತಿಸುವುದನ್ನು ಕುರಿತ ತನ್ನ ವಿಸ್ಮಯಕಾರಿ ಅಧ್ಯಯನಗಳ ಬಗ್ಗೆ ಒಂದು ಗಂಟೆ ವೈಯಕ್ತಿಕ ಪಾಠ ಮಾಡಿದ್ದಳು. ಈ ಪಾಠದಲ್ಲಿ ಅನಂತರ ಆಕೆಗೆ ಜನಪ್ರಿಯತೆಯನ್ನು ನೀಡಿದ, ಅಂದಿಗೆ ಅತ್ಯಂತ ನವೀನವೆನ್ನಿಸಿದ, ಜೇನ್ನೊಣಗಳ “ಮರಳಿ ಮತ್ತೊಮ್ಮೆ ನೋಡುವ” ನಡವಳಿಕೆಯ ಶೋಧವೂ ಸೇರಿತ್ತು. 

1991ರಲ್ಲಿ ಪ್ರಕಟಿಸಿದ ಪ್ರಬಂಧವೊಂದರಲ್ಲಿ ಆಕೆ ಹೊಸದೊಂದು ಆಹಾರದ ಮೂಲಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದ ಜೇನ್ನೊಣಗಳು ಹೇಗೆ ಹಾದಿಯಲ್ಲಿ ಹಿಂದೆ ಹೊರಳಿ ಆಹಾರವಿರುವ ನೆಲೆಯ ಸುತ್ತಲಿನ ಗುರುತುಗಳನ್ನು ಮತ್ತೊಮ್ಮೆ ಗಮನಿಸುತ್ತವೆಂದು ವಿವರಿಸಿದ್ದಳು. ಅದೇ ಆಹಾರಮೂಲಕ್ಕೆ ಮತ್ತೊಮ್ಮೆ ಮರಳುವುದು ಇದರಿಂದ ಸುಲಭವಾಗುತ್ತಿತ್ತು. ಹೀಗೆ ಹಿಂದಿರುಗಿ ನೋಡುವುದು ಉದ್ದೇಶಪೂರ್ವಕ ನಡೆ. ಇದಕ್ಕಾಗಿ ಜೇನ್ನೊಣಗಳು ಆಹಾರದತ್ತಲೇ ನೋಡಕೊಂಡು, ಅದು ಕಣ್ಮರೆಯಾಗುವವರೆಗೂ, ಮತ್ತೆ, ಮತ್ತೆ, ಹಾದಿಯ ಎಡಕ್ಕೋ, ಬಲಕ್ಕೋ ಹಾರುತ್ತಾ ಹೊರಳ ನೋಡುತ್ತವೆ. 

ಮಿತ್ರ ಎಂ. ವಿ. ಶ್ರೀನಿವಾಸನ್‌ ಕ್ಯಾನ್ಬೆರಾದಲ್ಲಿರುವ ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾನಿಲಯದಲ್ಲಿ ಒಂದು ತಿಂಗಳ ಅಧ್ಯಯನಕ್ಕೆಂದು ನನ್ನನ್ನು ಆಹ್ವಾನಿಸಿದ್ದಾಗ ಇನ್ನೊಮ್ಮೆ ಆಕೆಯನ್ನು ಭೇಟಿಯಾಗುವ ಅದೃಷ್ಟ ಒದಗಿತ್ತು. ಅಲ್ಲಿದ್ದ ಹಲವಾರು ಜನಪ್ರಿಯ ವಿಜ್ಞಾನಿಗಳನ್ನು ಭೇಟಿಯಾಗಿ ಅವರೊಡನೆ ಚರ್ಚಿಸುತ್ತಾ, ಅಲ್ಲಿದ್ದ ಅದ್ಭುತ ಗ್ರಂಥಾಲಯದಲ್ಲಿ ಓದುತ್ತಾ ಕಾಲ ಕಳೆಯವುದರಲ್ಲಿಯೇ ನಾನು ತೃಪ್ತನಾಗಿದ್ದೆ. ಆದರೆ ಅದೇ ಸಮಯದಲ್ಲಿ ಶ್ರೀನಿವಾಸನ್ನರ ಬಳಿ ಬಂದಿದ್ದ ಮಿರಿಯಂ ತಾನು ಕೈಗೊಂಡಿದ್ದ ಸಂಶೋಧನೆಯಲ್ಲಿ ಪಾಲ್ಗೊಳ್ಳಲು ನನ್ನನ್ನು ಆಹ್ವಾನಿಸಿದ್ದಳು. 

ಆಕೆಯ ಪ್ರಯೋಗಗಳ ಉದ್ದೇಶ: ಸ್ವಭಾವತಃ ಜೇನ್ನೊಣಗಳು ಹೂವಿನಂತೆ ಎಲ್ಲ ದಿಕ್ಕುಗಳಲ್ಲಿಯೂ ಸಮನಾಗಿರುವ ಆಕಾರಗಳ ಬಗ್ಗೆ ಒಲವು ತೋರುತ್ತವೆಯೋ? ಇದಕ್ಕಾಗಿ ಆಕೆ ಉಪಯೋಗಿಸಿದ ಅಗ್ಗದ ಸಾಧನವೆಂದರೆ ತೋಟದಲ್ಲಿ ಇಟ್ಟಿದ್ದ ಹನ್ನೆರಡು ಖಾನೆಗಳಿದ್ದ ಒಂದು ಮರದ ಪೆಟ್ಟಿಗೆ.  ಜೇನ್ನೊಣಗಳು ಅದರಲ್ಲಿದ್ದ ಯಾವ ಖಾನೆಯೊಳಗೆ ಬೇಕಿದ್ದರೂ ಒಂದು ಕಿಂಡಿಯ ಮೂಲಕ ಪ್ರವೇಶಿಸಬಹುದಿತ್ತು. ಈ ಸಾಧನವನ್ನು ತಿರುಗುಮಂಚದ ಮೇಲಿಟ್ಟು ಅದನ್ನು ಆಗಾಗ್ಗೆ ನಾವೇ ಕೈಯಿಂದ ತಿರುಗಿಸಿ ಪರೀಕ್ಷಿಸಬೇಕಿತ್ತು. 

ಜೇನ್ನೊಣಗಳು ಈ ಉಪಾಯವನ್ನು ಕಲಿತ ಮೇಲೆ ನಾವು ಪ್ರತಿಯೊಂದು ಖಾನೆಯ ಗೋಡೆಯ ಮೇಲೂ ವಿಭಿನ್ನ ವಿನ್ಯಾಸದ ಚಿತ್ರಗಳನ್ನು ಅಂಟಿಸಿದೆವು. ಸಕ್ಕರೆ ಪಾನಕವನ್ನು ಅಲ್ಲಿಂದ ತೆಗೆದು ಬಿಟ್ಟೆವು. ಜೇನ್ನೊಣಗಳು ಖಾನೆಗಳೊಳಗೆ ಹೋದರೆ ಅಲ್ಲೊಂದು ಕೊಡುಗೆ ಇರುತ್ತದೆ ಎಂದು ಕಲಿತಿದ್ದವಷ್ಟೆ. ಈಗ ಅವು ಆ ಕೊಡುಗೆಯನ್ನು ದಕ್ಕಿಸಿಕೊಳ್ಳಬೇಕಾದರೆ ಯಾವುದಾದರೂ ವಿನ್ಯಾಸದ ಖಾನೆಯಮೂಲಕ   ಹೋಗಬಹುದಿತ್ತು. ಈಗ ಅವು ಈ ಹನ್ನೆರಡು ಖಾನೆಗಳಲ್ಲಿ ತಮ್ಮ ಸಹಜ ಆಯ್ಕೆ ಯಾವುದು ಎನ್ನುವುದನ್ನು ತೋರಲೇಬೇಕಿತ್ತು. 

Top: A simple apparatus to test the innate preferences of bees. Bottom: examples of patterns offered. Reprinted from Lehrer et al., Phil. Trans. R. Soc. London, 347, 123–137, 1995.

ಮೇಲ್ಗಡೆ: ಜೇನ್ನೊಣಗಳ ಸಹಜ ಆಯ್ಕೆಯನ್ನು ತಿಳಿಯಲು ಬಳಸಿದ ಸರಳ ಸಾಧನ. ಕೆಳಗಡೆ: ಜೇನ್ನೊಣಗಳ ಮುಂದಿಟ್ಟ ಖಾನೆಗಳ ವಿತರಣೆಯ ವಿನ್ಯಾಸಗಳು Reprinted from Lehrer et al., Phil. Trans. R. Soc. London, 347, 123–137, 1995.

ಖಾನೆಗಳ ವಿತರಣೆಯಲ್ಲಿ ವಿವಿಧ ವಿನ್ಯಾಸಗಳಿದ್ದಾಗ ಜೇನ್ನೊಣಗಳು ಕಡಿಮೆ ಸಮಮಿತಿ ಇಲ್ಲವೇ ಸಮಮಿತಿಯೇ ಇಲ್ಲದ ವಿನ್ಯಾಸಗಳಿಗಿಂತಲೂ ಬಹುಮಟ್ಟಿಗೆ ಹೂವಿನಂತಹ, ವರ್ತುಲಾಕಾರದ ಸಮಮಿತಿ ಇರುವಂತಹ ವಿನ್ಯಾಸಗಳನ್ನು ಹೆಚ್ಚು ಆಯ್ದುಕೊಂಡಿದ್ದುವು. 

ಪ್ರಬಂಧದ ಪ್ರಕಟಣೆಗೆ ಬೇಕಾದ ಕೆಲಸದಲ್ಲಿನ ಸಿಂಹಪಾಲನ್ನು ಮಿರಿಯಂ ಮಾಡಿದ್ದಳು. ಜೇನ್ನೊಣಗಳು ಹೀಗೆ ಹೂವಿನಂತೆ ವರ್ತುಲಾಕಾರದ ಸಮಮಿತಿ ಇರುವ ವಿನ್ಯಾಸವನ್ನು ಆಯ್ದುಕೊಂಡದ್ದರಲ್ಲಿ ಏನೂ ಅಚ್ಚರಿ ಇಲ್ಲ ಎಂದು ಈಗ ಅನಿಸಬಹುದು. ಏಕೆಂದರೆ ಅವು ಆಹಾರವನ್ನು ಹೂವುಗಳಿಂದಲೇ ಪಡೆಯುತ್ತವಷ್ಟೆ. ಮಿರಿಯಮಿನ ಎರಡು ಸಾಮರ್ಥ್ಯಗಳು ಇಲ್ಲಿ ಗೋಚರಿಸುತ್ತವೆ. ಈ ಅಂಶ ಮುಖ್ಯವಾದೊಂದು ಊಹೆ ಎಂದೂ, ಮೇಲ್ನೋಟಕ್ಕ ಸರಿ ಎನ್ನಿಸುವಂತಹ ಇದನ್ನು ಯಾರೂ ಸರಿಯಾಗಿ ಪರೀಕ್ಷಿಸಿಲ್ಲವೆಂದೂ ಅರ್ಥ ಮಾಡಿಕೊಂಡಿದ್ದಳು. ಎರಡನೆಯದಾಗಿ ಅದನ್ನು ಪರೀಕ್ಷಿಸಲು ಬಲು ಸರಳವಾದ, ಸುಂದರ ವಿಧಾನವೊಂದನ್ನು ರೂಪಿಸಿದಳು.  

ಹೀಗೆ ಸರಳ, ಸುಂದರ ಪ್ರಯೋಗಗಳನ್ನು ಮಾಡುವ ಮಿರಿಯಮಳ ಗುಣ ನನಗೂ ಸ್ವಲ್ಪ ಅಂಟಿಕೊಂಡಿದೆ ಎಂದು ಕೊಂಡಿದ್ದೇನೆ. ಮಿರಿಯಂ ಕಣಜಗಳ ಮೇಲೂ ಪ್ರಯೋಗಗಳನ್ನು ನಡೆಸಿದ್ದಳು. 

ಅನಂತರ 1995ರಲ್ಲಿ ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್ನ ನನ್ನ ಪ್ರಯೋಗಾಲಯಕ್ಕೆ ಆಕೆಯನ್ನು ಕರೆತರುವ ಖುಷಿ ಸಿಕ್ಕಿತ್ತು. ಆಕೆಯ ವಿಜ್ಞಾನ ಎಷ್ಟು ಸರಳ ಹಾಗೂ ಸುಂದರವಿತ್ತೋ, ಆಕೆಯ ವ್ಯಕ್ತಿತ್ವವೂ ಹಾಗೆಯೇ ಸರಳವಾಗಿತ್ತು. ಆಕೆಯ ಬಗ್ಗೆ ಹೇಳಲು ಬಹಳ ಇದೆಯಾದರೂ, ಆಕೆ ಹೇಳಿಕೊಳ್ಳುತ್ತಿರಲಿಲ್ಲ. 2005ನೆಯ ಇಸವಿಯಲ್ಲಿ ಆಕೆ ಮರಣಿಸಿದ ಮೇಲೆ ನನಗೆ ಇದು ಅರ್ಥವಾಯಿತು. 

Miriam Lehrer training honey bees at a feeder with sucrose solution in the balcony of her office in the University of Zurich. Photo: M.V. Srinivasan

ಮಿರಿಯಂ ಲೆಹ್ರರ್‌ ತನ್ನ ಜ್ಯೂರಿಕ್ಕಿನ ವಿಶ್ವವಿದ್ಯಾನಿಲಯದಲ್ಲಿದ್ದ ತನ್ನ ಕಛೇರಿಯ ಬಾಲ್ಕನಿಯಲ್ಲಿ ಜೇನ್ನೊಣಗಳಿಗೆ ತರಬೇತಿ ನೀಡುತ್ತಿರುವ ಚಿತ್ರ. ಫೋಟೋ: ಎಂ.ವಿ.ಶ್ರೀನಿವಾಸನ್

ಇಂಟರ್‌ ನ್ಯಾಶನಲ್‌ ಸೊಸೈಟಿ ಫಾರ್‌ ನ್ಯೂರೋ ಎಥಾಲಜಿ ಸಂಘದ ಸುದ್ದಿಪತ್ರದ 2005 ನವೆಂಬರ್‌ ಸಂಚಿಕೆಯಲ್ಲಿ ಆಕೆಯ ಬಗ್ಗೆ ಶ್ರೀನಿವಾಸನ್‌ ಸಲ್ಲಿಸಿದ ನುಡಿನಮನದ ಕೆಲವು ಅಂಶಗಳನ್ನು ಇಲ್ಲಿ ಉಲ್ಲೇಖಿಸಬಹುದು. 

ಜೇನ್ನೊಣಗಳ ನಡವಳಕೆಯ ಕುರಿತು ಅಂದಿನ ಕಾಲಕ್ಕೆ ಅತಿ ಸಾಧನೆಗೈದ ಹಾಗೂ ಕುಶಲಿಯಾದ ಸಂಶೋಧಕಿ ಮಿರಿಯಂ. ಪೋಲ್ಯಾಂಡಿನಲ್ಲಿ ಹುಟ್ಟಿದ ಮಿರಿಯಂ ಇಸ್ರೇಲಿನಲ್ಲಿ ತನ್ನ ಶಾಲಾವ್ಯಾಸಂಗ ಪೂರ್ತಿಗೊಳಿಸಿದ್ದಳು. ಅನಂತರ ಇಸ್ರೇಲಿ ಸೇನೆಯ ಶೈಕ್ಷಣಿಕ ತುಕಡಿಯಲ್ಲಿ ಕೆಲಸ ಮಾಡುತ್ತಲೇ, ಹೆಬ್ರೂ ವಿಶ್ವವಿದ್ಯಾನಿಲಯದಿಂದ ಬ್ಯಾಕ್ಟೀರಿಯಾಲಜಿ, ಸೂಕ್ಷ್ಮಜೀವಿಶಾಸ್ತ್ರದಲ್ಲಿ ಪದವಿ ಗಳಿಸಿದಳು. ಮದುವೆಯಿಂದಾಗಿ ಸ್ವಿಟ್ಸರ್ಲ್ಯಾಂಡಿಗೆ ಹೋಗಬೇಕಾಯಿತು. ಅಲ್ಲಿ, ಜ್ಯೂರಿಕ್ಕಿನಲ್ಲಿ, ಕುಟುಂಬವನ್ನು ಪೋಷಿಸುವುದರಲ್ಲಿಯೇ ಇಪ್ಪತ್ತು ವರ್ಷಗಳನ್ನು ಕಳೆದಳು. 1972ನೇ ಇಸವಿಯಲ್ಲಿ ಇಬ್ಬರು ಮಕ್ಕಳ ಏಕಾಂಗಿ ಪೋಷಕಿಯಾಗಿದ್ದಾಗ ವಿದ್ವತ್‌ ಜಗತ್ತಿಗೆ ಮರಳಲು ತೀರ್ಮಾನಿಸಿದಳು. ಜ್ಯೂರಿಕ್‌ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದು ಪ್ರಾಣಿವಿಜ್ಞಾನದಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿಗಳನ್ನು ಗಳಿಸಿದಳು. ಅಲ್ಲಿಯೇ ಉದ್ಯೋಗಕ್ಕೂ ಸೇರಿದಳು. ಅನಂತರ ಆಕೆಯ ಸಂಶೋಧನೆಯ ಸ್ವರ್ಣಯುಗ ಆರಂಭವಾಗಿದ್ದು, 1998ರಲ್ಲಿ ಆಕೆಯ ಮಗನ ಅಕಾಲ ಮೃತ್ಯುವಿನ ಹೊರತಾಗಿಯೂ, ಆಕೆಯ ಕೊನೆಯ ಕ್ಷಣದವರೆಗೂ ಮುಂದುವರೆಯಿತು.”

ಮಿರಿಯಮ್ಮಳ ಈ ಬದುಕು ಕೊಂಡಾಡಲು ಅರ್ಹವಷ್ಟೆ ಅಲ್ಲ, ಅನುಕರಣೀಯ ಕೂಡ.

ಕೇಂದ್ರೀಕೃತ ಆಹಾರಾನ್ವೇಷಕರು

ಇರುವೆ, ಜೇನ್ನೊಣ ಹಾಗೂ ಕಣಜಗಳನ್ನು ಕೇಂದ್ರೀಕೃತ ಆಹಾರಾನ್ವೇಷಕರು ಎನ್ನುತ್ತಾರೆ. ಏಕೆಂದರೆ ಇವುಗಳಲ್ಲಿ ಕೆಲವು ವಿಶೇಷಜ್ಞ ಕೀಟಗಳು ಮಾತ್ರ ಸುತ್ತಲಿನ ಪರಿಸರದಲ್ಲಿ ಆಹಾರ ಹುಡುಕುತ್ತ ಹೋಗುತ್ತವೆ. ಗಳಿಸಿದ ಆಹಾರವನ್ನು ಗೂಡೆನ್ನುವ ಒಂದು ಕೇಂದ್ರಸ್ಥಾನದತ್ತ ತರುತ್ತವೆ. ಕೆಲವೇ ಕೆಲವೊಮ್ಮೆ ಸಾವಿರಗಟ್ಟಲೆ ಇರುವ ತಮ್ಮೆಲ್ಲ ಬಳಗದವರಿಗೂ ಆಹಾರವನ್ನು ಕೆಲವೇ ಕೆಲವು ಅನ್ವೇಷಕರು ಹುಡುಕಬೇಕಾಗಿರುವುದರಿಂದ ಈ ಅನ್ವೇಷಕ ಕೀಟಗಳಿಗೆ ಬಲವಾದ ಪ್ರೇರಣೆಯೇ ಇರಬೇಕು. 

ಹೀಗಾಗಿ ಪ್ರಾಣಿಗಳು ಆಹಾರ ಮೂಲಗಳಾದ ಪರಾಗ-ಬೀಜ-ಮಕರಂದವನ್ನು ಹೊತ್ತ ಗಿಡಗಳ ಗಾತ್ರ, ಆಕಾರ ಅಥವಾ ಬಣ್ಣದ ಬಗ್ಗೆ ತಿಳಿದುಕೊಂಡು ಹೇಗೆ ಹಾದಿ ಹುಡುಕುತ್ತವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಈ ಸಮಾಜಜೀವಿ ಕೀಟಗಳೇ ಮಾದರಿಯಾಗಿದ್ದು ಅಚ್ಚರಿಯೇನಲ್ಲ. 

ನಾನೂ ಮತ್ತು ನನ್ನ ವಿದ್ಯಾರ್ಥಿಗಳೂ ಭಾರತೀಯ ಕಾಗದದ ಕಣಜ ರೋಪಲೀಡಿಯಾ ಮಾರ್ಜಿನೇಟಾ ಕುರಿತು ನಾಲ್ಕು ದಶಕಗಳಿಂದ ಅಧ್ಯಯನ ಮಾಡುತ್ತ, ಅವುಗಳ ಬಗ್ಗೆ ಎಲ್ಲವನ್ನೂ ತಿಳಿದೇ ಬಿಡಬೇಕೆಂದು ಹಠ ಹಿಡಿದಿದ್ದೇವಾದರೂ, ಈ ಕಣಜಗಳನ್ನು ಆಹಾರದ ಆಸೆ ತೋರಿಸಿ ತರಬೇತಿ ನೀಡುವುದರಲ್ಲಿ ವಿಫಲರಾಗಿದ್ದೇವೆ ಎನ್ನಲೇಬೇಕು. ಈ ಕಣಜಗಳು ನಾವು ಕೊಟ್ಟ ಆಹಾರವನ್ನೆಲ್ಲ ತಿನ್ನಲು ಆಸೆ ಪಡುವುದಿಲ್ಲ ಎನ್ನುವುದು ಈ ಸಮಸ್ಯೆಗೆ ಒಂದು ಕಾರಣ. ಅದು ಹೇಗೋ ಅವು ಸ್ವತಃ ಇನ್ನೂ ಉತ್ತಮವಾದ ಆಹಾರವನ್ನು ಪಡೆಯುತ್ತಿರಬೇಕು. ಅಲ್ಲದೆ, ಇವುಗಳ ಗೂಡು ಕೂಡ ಬಲು ಚಿಕ್ಕದು. ಆಹಾರವೋ ಪ್ರಧಾನವಾಗಿ ಇತರೆ ಕೀಟಗಳು ಇಲ್ಲವೇ ಜೇಢಗಳು. ಕಣಜಗಳ ಕಲಿಕೆಯ ಸಾಮರ್ಥ್ಯದ ಕುರಿತು ನಾನು ಆಗಲೇ ತಿಳಿಸಿದ ಸಂಶೋಧನೆ ನನ್ನ ಕುತೂಹಲವನ್ನು ಕೆರಳಿಸಿಲು ಈ ನಮ್ಮ ಸೋಲು ಇನ್ನೊಂದು ಕಾರಣ.

ವೆಸ್ಪಾ ಟ್ರಾಪಿಕಾದ ಉಲ್ಲೇಖವಿದ್ದದ್ದು ಇನ್ನೂ ಒಂದು ಕಾರಣ ಎಂದು ಒಪ್ಪಿಕೊಳ್ಳುತ್ತೇನೆ. 

ಹೆಗ್ಗಣಜ

ದಕ್ಷಣ ಏಶಿಯಾದ ಪಟಾಪಟಿ ಹೆಗ್ಗಣಜ, ಗ್ರೇಟ್‌ ಬ್ಯಾಂಡೆಡ್‌ ಹಾರ್ನೆಟ್‌ ಅಥವಾ ವೆಸ್ಪಾ ಟ್ರಾಪಿಕಾ, ನಾನು ನಮ್ಮ ಪ್ರಯೋಗಾಲಯದಲ್ಲಿ ಪ್ರಧಾನವಾಗಿ ಅಧ್ಯಯನ ಮಾಡುವ ಭಾರತೀಯ ಕಾಗದದ ಕಣಜದಂತಲ್ಲ. ವೆಸ್ಪಾ ಟ್ರಾಪಿಕಾ ಎನ್ನುವುದು ಪ್ರಪಂಚದ ಹಲವೆಡೆ ಬೇರೆಡೆಯಿಂದ ವಲಸೆ ಬಂದು ನೆಲೆಸಿದ ಕೀಟ. ಜೇನುಗೂಡಿನಂತಹ ರಚನೆಯ ಪದರಗಳೂ ಒಂದಿನ್ನೊಂದನ್ನು ಆವರಿಸಿಕೊಂಡು ಇರುವ ದೊಡ್ಡ ಗೂಡನ್ನು ಇದು ಕಟ್ಟುತ್ತದೆ. ಗೂಡಿನಲ್ಲಿ ಒಂದೇ ರಾಣಿ. ಸಾವಿರಾರು ಕಾರ್ಮಿಕರಿರುತ್ತವೆ. ಇವುಗಳ ಆಹಾರ ಪ್ರಧಾನವಾಗಿ ಜೇನ್ನೊಣಗಳು ಹಾಗೂ ರೋಪಲೀಡಿಯಾ ಮಾರ್ಜಿನೇಟಾ ಕಣಜದ ಲಾರ್ವಾಗಳು ಮತ್ತು ಪ್ಯೂಪೆ. ಹೀಗಾಗಿ ಈ ಕಣಜಗಳು ನಮ್ಮ ಸಂಶೋಧನೆಗೂ, ಜೇನ್ನೊಣಗಳ ಸಂಶೋಧಕರಿಗೂ ದೊಡ್ಡ ಕೋಟಲೆ. ವೆಸ್ಪಾ ಟ್ರಾಪಿಕಾದ ಆಹಾರಾನ್ವೇಷಕರು ರೋಪಲೀಡಿಯ ಮಾರ್ಜಿನೇಟಾದ ಗೂಡುಗಳ ಮೇಲೆ ದಾಳಿ ಮಾಡಿ, ಅಸ್ತವ್ಯಸ್ತವಾಗಿಸಿಬಿಡುತ್ತವೆ. ರೋಪಲೀಡಿಯ ಮಾರ್ಜಿನೇಟಾದ ಜನಸಂಖ್ಯೆಯನ್ನು ನಿಯಂತ್ರಿಸುವುದಕ್ಕೆ ವೆಸ್ಪಾ ಟ್ರಾಪಿಕಾವೇ ಕಾರಣ ಎನ್ನುವುದು ನನ್ನ ಊಹೆ.  

Images of a nest of the hornet Vespa tropica that I collected from the IISc campus, showing the intact nest (before collection) (left), the multiple layers of comb visible after removing the envelope (middle) and the fact of the combs studded with pupae (all adult wasps have been removed). Photo: R. Gadagkar lab

ವೆಸ್ಪಾ ಟ್ರಾಪಿಕಾ ಕಣಜದ ಗೂಡಿನ ಚಿತ್ರಗಳು. ಐಐಎಸ್ಸಿ ಆವರಣದಲ್ಲಿ ಸಂಗ್ರಹಣೆಗೆ ಮುನ್ನ ಇದ್ದ ಗೂಡು (ಎಡ), ಗೂಡಿನಲ್ಲಿರುವ ಪದರಗಳ ರಚನೆ (ಮಧ್ಯ) ಹಾಗೂ ಹೊರಗಿನ ಕವಚವನ್ನು ತೆಗೆದ ಮೇಲೆ ಕಾಣುವ ಬಹು ಪದರಗಳ ಗೂಡು (ಬಲ) ಚಿತ್ರ: ಆರ್.‌ ಗದಗ್ಕರ್ ಸಂಶೋಧನಾಲಯ.‌ 

ರೋಪಲೀಡಿಯಾ ಮಾರ್ಜಿನೇಟ ಕುರಿತ ನಮ್ಮ ಸಂಶೋಧನೆ ಸಫಲವಾಗುವುದಕ್ಕೆ ಈ ವೆಸ್ಪಾ ಟ್ರಾಪಿಕಾವನ್ನು ನಾವು ಹೆಚ್ಚೂ, ಕಡಿಮೆ ನಮ್ಮ ಪ್ರಯೋಗಾಲಯದಿಂದ ದೂರವೇ ಇಟ್ಟಿರುವುದು ಕಾರಣ. ವೆಸ್ಪಾ ಟ್ರಾಪಿಕಾ ನುಸುಳಿ ಬರದಷ್ಟು ಸಣ್ಣದಾದ, ಆದರೆ ರೋಪಲೀಡಿಯಾ ಮಾರ್ಜಿನೇಟಾ ಸರಾಗವಾಗಿ ಹೋಗಿಬರಲು ಅನುವಾಗುವಂತಹ ಗಾತ್ರದ ರಂಧ್ರಗಳಿರುವ ಪರದೆಗಳನ್ನು ಸುತ್ತಲೂ ಕಟ್ಟಿ ನಿರ್ಮಿಸಿದ ಕಣಜದ ತೋಟ ಅಥವಾ ವೆಸ್ಪಿಯರಿ ಇದನ್ನು ಸಾಧ್ಯವಾಗಿಸಿದೆ.  ರೋಪಲೀಡಿಯಾ ಮಾರ್ಜಿನೇಟಾದ ಸಂಬಂಧಿ ರೋಪಲೀಡಿಯಾ ಸಯಾಥಿಫಾರ್ಮಿಸ್‌ ಕಣಜ ಇಂತಹ ವೆಸ್ಪಿಯರಿಯಲ್ಲಿ ಬದುಕಲು ಒಪ್ಪದೇ ಇರುವುದೇ, ಮಾರ್ಜಿನೇಟಾಗೆ ಹೋಲಿಸಿದಾಗ ಅದರ ಬಗ್ಗೆ ನಮಗೆ ಇರುವ ಅರಿವಿನ ಕೊರತೆಗೆ ಕಾರಣ. ವೆಸ್ಪಿಯರಿಯಿಂದ ಒಮ್ಮೆ ಹೊರಗೆ ಹೋದರೆ ಅವು ಮರಳುವುದೇ ಇಲ್ಲ. 

ಬಹುಶಃ ಹೀಗೆ ವೆಸ್ಪಾ ಟ್ರಾಪಿಕಾವನ್ನು ದೂರ ಇಡುವುದರಲ್ಲಿಯೇ ಮಗ್ನರಾಗಿ, ಅದನ್ನು ದ್ವೇಷಿಸಲು ಆರಂಭಿಸಿದ್ದರಿಂದಲೋ ಏನೋ ನಾವು ಅದನ್ನು ಜತನವಾಗಿ ಅಧ್ಯಯನ ಮಾಡಲು ಪ್ರಯತ್ನಿಸಲೇ ಇಲ್ಲ!

ವಿಚಿತ್ರ ಎಂದರೆ ಜೇನ್ನೊಣಗಳ ಬಗ್ಗೆ ಈ ಕಣಜಗಳಿಗೆ ಇರುವ ಆಕ್ರಮಣಕಾರಿ ಸ್ವಭಾವವೇ ಹೇಮ ಸೋಮನಾಥನ್‌ ಹಾಗೂ ಅವರ ವಿದ್ಯಾರ್ಥಿಗಳು ಅದನ್ನು ಅಧ್ಯಯನ ಮಾಡಲು ಪ್ರೇರಣೆಯಾಯಿತು. ಅವರು ನಾವು ಮಾಡಿದಂತೆ ಇವನ್ನು ದೂರ ಓಡಿಸದೆ, ಅದನ್ನೇ ಅಧ್ಯಯನ ಮಾಡಲು ನಿರ್ಧರಿಸಿದರು. ಈ ಕಥೆಯನ್ನು ಹೇಮ ನೆನಪಿಸಿಕೊಂಡಿದ್ದು ಹೀಗೆ:

ನನ್ನ ವಿದ್ಯಾರ್ಥಿಗಳಾದ ರೇಶ್ನು ರಾಜ್, ಜ್ಯುವಲ್‌ ಜಾನ್ಸನ್‌ ಮತ್ತು ಬಾಲಮುರಳಿ, ಜೇನ್ನೊಣಗಳಲ್ಲಿ ಬಣ್ಣಗಳ ಕಲಿಕೆಯ ಪ್ರಯೋಗಗಳನ್ನು ನಡೆಸುತ್ತಿದ್ದರು. ಪ್ರಯೋಗಾಲಯದ ಸೂರಿನ ಮೇಲೆ ಈ ಪರೀಕ್ಷೆಗಳು ನಡೆದಿದ್ದುವು. 

ಜೇನ್ನೊಣಗಳನ್ನು ಆಕರ್ಷಿಸಲು ಅವುಗಳ ಗೂಡಿಗೆ ಸಮೀಪದಲ್ಲಿ ಒಂದು ಫೀಡರ್‌ ಅಂದರೆ ಆಹಾರದ ತಟ್ಟೆಯನ್ನೋ, ಬಟ್ಟಲನ್ನೋ ಇಡುತ್ತೇವೆ. ಇಂದಲ್ಲ ನಾಳೆ ಎನ್ನುವ ಹಾಗೆ ಜೇನ್ನೊಣಗಳು ಇದನ್ನು ಗುರುತಿಸುತ್ತವೆ. ಅನಂತರ ಈ ತಟ್ಟೆಯನ್ನು ಹಂತ, ಹಂತವಾಗಿ ಪ್ರಯೋಗ ನಡೆಸುವ ಸ್ಥಳದತ್ತ ಜರುಗಿಸುತ್ತಾ ಹೋಗುತ್ತೇವೆ. ಹೀಗೆ ಮಾಡುವಾಗ ಜೇನುಗೂಡಿನ ಸಮೀಪದಲ್ಲಿ ಹೆಗ್ಗಣಜಗಳೂ ಹಾರಿ ಬರುತ್ತಿದ್ದುವು. ಅವು ಜೇನ್ನೊಣಗಳನ್ನು– ಅದರಲ್ಲಿಯೂ ಆಹಾರವನ್ನು ಹೊತ್ತು ಗೂಡಿಗೆ ಮರಳುತ್ತಿದ್ದುವನ್ನು ಬೇಟೆಯಾಡುತ್ತಿದ್ದುದನ್ನು ನಾವು ಕಂಡಿದ್ದೆವಾದ್ದರಿಂದ ಹಾಗೆಯೇ ಮಾಡುತ್ತವೆ ಎನ್ನುವ ನಿರೀಕ್ಷೆ ಇತ್ತು. 

ಹೀಗಾಗಿ ನಮ್ಮ ತಂಡದವರು ಕಣಜಗಳು ಬಂದಾಗಲೆಲ್ಲಾ ಅವನ್ನು ಉಶ್‌, ಉಶ್‌ ಎಂದು ಓಡಿಸಲು ಪ್ರಯತ್ನಿಸುತ್ತಿದ್ದರು. ಎಷ್ಟೇ ಓಡಿಸಿದರೂ ಅವು ಮತ್ತೆ, ಮತ್ತೆ ಮರಳಿ ಬಂದು ತಟ್ಟೆಯಲ್ಲಿದ್ದ ಸಕ್ಕರೆ ಪಾನಕವನ್ನು ಚಪ್ಪರಿಸುತ್ತಿದ್ದುವು. ಜೇನ್ನೊಣಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಹೀಗೆ ಸಕ್ಕರೆ ಪಾನಕವನ್ನು ಅವು ಕುಡಿಯುತ್ತಿದ್ದುದು ತಮಾಷೆ ಎನಿಸಿತ್ತು. ಒಮ್ಮೊಮ್ಮೆ ಬೇಟೆ ಮತ್ತು ಬಲಿ ಎರಡೂ ಅಕ್ಕಪಕ್ಕ ಕುಳಿತು ರಸ ಹೀರುತ್ತಿದ್ದುವು. ಆದರೆ ನಮಗೆ ತಾಳ್ಮೆ ಇರಲಿಲ್ಲ. ಕೆಲವು ಧೈರ್ಯವಂತ ಜೇನ್ನೊಣಗಳಿದ್ದರೂ, ಕಣಜಗಳಿಂದಾಗಿ ಜೇನ್ನೊಣಗಳ ಸಂಖ್ಯೆ ಕ್ರಮೇಣ ಕಡಿಮೆ ಆಗುತ್ತಿತ್ತು. ಈ ಕಣಜಗಳನ್ನು ದೂರವಿಡಲು ಆಗುತ್ತಲೇ ಇರಲಿಲ್ಲ. 

ಆಗ ನಾವು ಹೀಗೆ ಚಿಂತಿಸಿದೆವು. ಹಾಳಾಗಿ ಹೋಗಲಿ. ಜೇನ್ನೊಣಗಳಿಗೆ ಕಾಯುವ ಸಮಯದಲ್ಲಿ ಇವನ್ನೇ ನಾವು ಅಧ್ಯಯನ ಮಾಡಿಬಿಡೋಣ. ಹೀಗೆ ಅಧ್ಯಯನಕ್ಕೆ ಆರಂಭಿಸಿದೆವು. ಕಣಜಗಳೂ ಬಹಳ ಜಾಣರಾಗಿ ನಡೆದುಕೊಂಡವು. ಗುರುತು ಮಾಡಿದ ಕಣಜಗಳು ತಪ್ಪದೆ ವಾಪಸು ಬರುತ್ತಿದ್ದುವು. ಒಂದೆರಡು ಪ್ರಯತ್ನಗಳಲ್ಲಿಯೇ ಬಣ್ಣಗಳನ್ನೂ, ಸಕ್ಕರೆ ಪಾಕದ ಕೊಡುಗೆಯನ್ನೂ ತಾಳೆ ಹಾಕಲು ಕಲಿತವು. 

ಜೇನ್ನೊಣಗಳಿಗೆ ಹೋಲಿಸಿದರೆ ಕಣಜಗಳ ಅಧ್ಯಯನ ಇನ್ನೂ ಸುಲಭ ಎನಿಸಿತು. ಹೀಗಾಗಿ ನಾವು ಕಣಜಗಳ ಬಗ್ಗೆ ದೂರುವುದನ್ನು ನಿಲ್ಲಿಸಿದೆವು.”  

Vespa tropica wasps stealing the sugar solution kept for honey bees in the experiments of Hema Somanathan and her students, by themselves (left) and alongside honey bees (right). Photo: Hema Somanathan

ಹೇಮಾ ಸೋಮನಾಥನ್‌ ಮತ್ತು ವಿದ್ಯಾರ್ಥಿಗಳು ನಡೆಸಿದ ಪ್ರಯೋಗಗಳಲ್ಲಿ ಜೇನ್ನೊಣಗಳಿಗಾಗಿ ಇಟ್ಟ ಸಕ್ಕರೆ ಪಾನಕವನ್ನು ಕದಿಯುತ್ತಿರುವ ವೆಸ್ಪಾ ಟ್ರಾಪಿಕಾ ಕಣಜಗಳು. (ಎಡ) ಕಣಜಗಳು ಮಾತ್ರ (ಬಲ) ಜೇನ್ನೊಣಗಳ ಒಟ್ಟಿಗೇ ಇರುವ ಕಣಜಗಳು. ಫೋಟೋ: ಹೇಮಾ ಸೋಮನಾಥನ್‌

ಹೀಗೆ ನಿರ್ದಿಷ್ಟ ಪರಿಸರದಲ್ಲಿ ಆಹಾರವನ್ನು ಸೇವಿಸುವಂತೆ ಕಣಜಗಳಿಗೆ ತರಬೇತಿ ನೀಡಿದ ಹೇಮ ಮತ್ತು ಸಂಗಡಿಗರು, ಕೇವಲ ಆರೇ ಆರು ಪ್ರಯೋಗಗಳ ನಂತರ ಕಣಜಗಳು ಆಹಾರದ ಕೊಡುಗೆಯನ್ನು ಹಸಿರು ಅಥವಾ ನೀಲಿ ಎನ್ನುವ ನಿರ್ದಿಷ್ಟ ಬಣ್ಣದ ಜೊತೆಗೆ ಅಥವಾ ವರ್ತುಲ ಇಲ್ಲವೇ ಚೌಕಾಕಾರ ಎನ್ನುವ ಆಕಾರಗಳ ಜೊತೆಗೆ ತಾಳೆ ಹಾಕಲು ಕಲಿತವು. ಇವರ ಪ್ರಯೋಗಗಳು ಬಣ್ಣಗಳ ಸಾಮಾನ್ಯೀಕರಣ ಎನ್ನುವ ಇನ್ನೂ ಒಂದು ವಿದ್ಯಮಾನವನ್ನೂ ಬಯಲಾಗಿಸಿದವು. ಕಣಜಗಳು ಬಣ್ಣಗಳನ್ನು ಗುರುತಿಸುವುದರಲ್ಲಿ ತಪ್ಪು ಮಾಡಿದಂತೆ ತೋರಿದಾಗಲೂ ಅವು ಬೇಕಾಬಿಟ್ಟಿ ಬಣ್ಣಗಳನ್ನು ಆಯುತ್ತಿರಲಿಲ್ಲ. ಅವುಗಳು ಗುರುತಿಸಲು ಕಲಿತ ಬಣ್ಣದಂತೆಯೇ ಕಾಣುತ್ತಿದ್ದ ಬಣ್ಣಗಳನ್ನೇ ಆಯುವ ಸಾಧ್ಯತೆ ಹೆಚ್ಚು ಇತ್ತು. 

ಜೇನ್ನೊಣಗಳಲ್ಲಿ ಈಗಾಗಲೇ ಸಾಬೀತಾಗಿರುವ ಇಂತಹ ಸಾಮಾನ್ಯೀಕರಿಸುವ ಸಾಮರ್ಥ್ಯ, ಆಹಾರದ ವರವನ್ನು ನೀಡುತ್ತವೆ ಎಂದು ಅವು ಅರ್ಥ ಮಾಡಿಕೊಂಡ ಹೂವುಗಳಲ್ಲಿ ಸಹಜವಾಗಿಯೇ ಇರಬಹುದಾದ ಬಣ್ಣಗಳಲ್ಲಿನ ವ್ಯತ್ಯಾಸಗಳನ್ನು ನಿಭಾಯಿಸಲು ನೆರವಾಗುತ್ತದೆ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ.  

From left: PhD student Balamurali, Hema Somanathan and integrated BSMS students Jewel Johnson (top) and Reshnu Raj. Photos: Hema Somanathan

 

ಎಡದಿಂದ: ಪಿಎಚ್‌ಡಿ ವಿದ್ಯಾರ್ಥಿ ಬಾಲಮುರಳಿ, ಹೇಮಾ ಸೋಮನಾಥನ್ ಮತ್ತು ಸಂಯೋಜಿತ ಬಿಎಸ್‌ಎಂಎಸ್ ವಿದ್ಯಾರ್ಥಿಗಳಾದ ಜ್ಯುವೆಲ್ ಜಾನ್ಸನ್ (ಮೇಲೆ) ಮತ್ತು ರೇಷ್ಣು ರಾಜ್. ಚಿತ್ರಗಳು: ಹೇಮಾ ಸೋಮನಾಥನ್

ಹೊಸತೆನ್ನುವುದು ತರುವ ನೋವು

ಜೇನ್ನೊಣಗಳ ಅಧ್ಯಯನಗಳಲ್ಲಿ ನಡೆಯುವ ಪ್ರಯೋಗಗಳಿಗೆ ಹೋಲಿಸಿದರೆ, ತಿರುವನಂತಪುರಂನ ಐಐಎಸ್‌ಇಆರ್‌ ತಂಡ ನಡೆಸಿರುವ ಬಲು ಪ್ರಾಥಮಿಕ ಎನ್ನಬಹುದಾದ ಈ ಪ್ರಯೋಗಗಳು ವೆಸ್ಪಾ ಟ್ರಾಪಿಕಾ ಕಣಜಗಳು ಮತ್ತೊಂದು ಸಮಾಜಜೀವಿ ಕೀಟದಲ್ಲಿ ಕಲಿಕೆ ಹಾಗೂ ಗ್ರಹಿಕೆಯ ಅಧ್ಯಯನಗಳನ್ನು ಕೈಗೊಳ್ಳುವ ಮಾದರಿಯಾಗಬಹುದು ಎಂದೂ, ಜೇನ್ನೊಣಗಳಿಂದ ಪಡೆದ ಅರಿವಿನ ಜೊತೆಗೆ ಹೋಲಿಸಲು ನೆರವಾಗುತ್ತವೆಂದೂ ಸೂಚಿಸುತ್ತಿವೆ. ಇದು ನನಗೆ ಖುಷಿಯ ವಿಷಯ. 

ಜೀವಿವಿಜ್ಞಾನಿಗಳು ತಮ್ಮ ಸಂಶೋದನೆಗಳನ್ನು ಜೇನ್ನೊಣಗಳಂತಹ ಕೆಲವೇ ಕೆಲವು ಮಾದರಿ ಜೀವಿಗಳ ಮೇಲೆ ಮಾಡುವುದರಲ್ಲೇ ಗಮನ ಹರಿಸಿರುತ್ತಾರೆ ಎನ್ನುವುದು ನನ್ನ ಭಾವನೆ. ಇದಕ್ಕೆ ಒಂದು ಕಾರಣವೇನೆಂದರೆ, ಈ ಹಿಂದಿನ ಸಂಶೋಧನೆಗಳು ಈಗಾಗಲೇ ಸಿದ್ಧ ಪಡಿಸಿದ್ದ ಅರಿವನ್ನು ಸಣ್ಣ, ಪುಟ್ಟ ಹೆಜ್ಜೆಗಳಿಂದ ಮುನ್ನಡೆಸುವುದು ಸುಲಭ. ಅದೇ, ಅಷ್ಟೊಂದು ಪರಿಚಯವಿಲ್ಲದ ಹೊಸದೊಂದು ಜೀವಿಯ ಜೊತೆಗೆ ಕೆಲಸ ಮಾಡುವುದೆಂದರೆ ಅಕಾರದಿಂದ ಆರಂಭಿಸಬೇಕಾಗುತ್ತದೆ. ಇದಕ್ಕೆ ಧೈರ್ಯವಿರಬೇಕು. ಆದರೆ ಈ ಹೊಸ ಪ್ರಭೇದದ ಅಧ್ಯಯನವೂ ನಿರೀಕ್ಷಿಸದೇ ಇರುವ ಅರಿವನ್ನು ತೆರೆದಿಟ್ಟು ನಮ್ಮ ಜ್ಞಾನನಿಧಿಯನ್ನು ದೀರ್ಘಾವಧಿಯಲ್ಲಿ ಮುನ್ನಡೆಸಬಹುದು. ಆರಂಭದಲ್ಲಿ ಮಾತ್ರ ಹೊಸ ಪ್ರಭೇದಗಳ ಮೇಲಿನ ಇಂತಹ ಸಂಶೋಧನೆಗಳು ಮಾದರಿ ಪ್ರಭೇದಗಳಲ್ಲಿ ನಡೆಸುವ ಅತ್ಯಂತ ನವೀನ ಸಂಶೋಧನೆಗಳಷ್ಟು ಅದ್ಭುತವೆಂದು ತೋರದಿರುವುದೂ ಕಾರಣ.

ಮಾದರಿ ಪ್ರಭೇದದ ಜೊತೆಗೆ ಫಲ ದೊರೆಯುವ ಭರವಸೆಯ ಕೆಲಸಗಳು ಹಾಗೂ ಮಾದರಿಯಲ್ಲದ ಪ್ರಭೇದಗಳ ಜೊತೆಗೆ ಫಲಿತಾಂಶ ಅನಿಶ್ಚಿತವೆನ್ನಿಸುವ ಕೆಲಸಗಳ ನಡುವೆ ಒಂದು ಸಮತೋಲನ ಅನಿವಾರ್ಯ. ತಮ್ಮ ಹಂಬಲ ಹಾಗೂ ಪರಿಸರಕ್ಕೆ ತಕ್ಕಂತೆ ಆಯ್ದುಕೊಳ್ಳುವ ಸ್ವಾತಂತ್ರ್ಯ ಸಂಶೋಧಕರಿಗೆ ಇರಬೇಕು. ಇಂತಹ ಮಾದರಿಯಲ್ಲದ ಜೀವಿಗಳ ಮೇಲೆ ನಡೆದ ಪ್ರಾಥಮಿಕ ಅಧ್ಯಯನಗಳ ಫಲಿತಾಂಶಗಳನ್ನು, ಅವುಗಳಲ್ಲಿ ಹೊಸತೇನಿಲ್ಲ ಎಂತಲೋ, ಅಥವಾ ಮಾದರಿ ಜೀವಿಗಳಲ್ಲಿ ಕೈಗೊಳ್ಳುವಷ್ಟು ಸುಸಜ್ಜಿತ ಪ್ರಯೋಗಗಳು ಅಲ್ಲ ಎನ್ನುವ ಕಾರಣದಿಂದಲೋ ಅವಗಣಿಸುವುದು ಸರಿಯಲ್ಲ. 

ಹೊಸದೊಂದು, ಮಾದರಿಯಲ್ಲದ ಪ್ರಭೇದದ ಅಧ್ಯಯನಕ್ಕೆ ತೊಡಗುವ ಧೈರ್ಯ ಮಾಡಿದ ಹೇಮಾ ಸೋಮನಾಥನ್‌ ಮತ್ತು ಅವರ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ನನಗೆ ಬಹಳ ಪ್ರಿಯವಾದ
ಇನ್ಸೆಕ್ಟ್ಸ್ ಸೋಶಿಯೋ ಪತ್ರಿಕೆಗೆ ಇವರ ಈ ಪ್ರಾಥಮಿಕ ಫಲಿತಾಂಶಗಳನ್ನು ಪ್ರಕಟಿಸುವಷ್ಟು ವಿವೇಕ ಇತ್ತು ಎನ್ನುವುದು ಇನ್ನೂ ಖುಷಿಯ ವಿಷಯ.


ಇದು ಜಾಣ ಅರಿಮೆ. ಆಂಗ್ಲ ಮೂಲ: ಪ್ರೊಫೆಸರ್‌ ರಾಘವೇಂದ್ರ ಗದಗ್ಕರ್, ಕನ್ನಡಾನುವಾದ: ಕೊಳ್ಳೇಗಾಲ ಶರ್ಮ; ಮೂಲ ಆಂಗ್ಲ ಪಾಠವನ್ನು ದಿ ವೈರ್‌ ಸೈನ್ಸ್‌ ಪತ್ರಿಕೆ ಪ್ರಕಟಿಸಿತ್ತು.

Scroll To Top