Representative image: Panos Sakalakis/Unsplash
The following text, in Kannada, was translated from the English original authored by Raghavendra Gadagkar (The Wire Science, April 14, 2021).
Kollegala Sharma kindly provided the translated version. It has also been rendered as a podcast by J.R. Manjunatha, available to listen below. Sharma and his team have been converting editions of Gadagkar’s column as podcasts, as part of an audio series called ‘JanaArime’.
Sharma is a chief scientist and Manjunatha is a technical officer, both at the CSIR-Central Food Technological Research Institute, Mysuru. His popular ‘Janasuddi’ podcast series is available to listen here.
§
ಸಂಪುಟ 4 ಸಂಚಿಕೆ 205, ಏಪ್ರಿಲ್ 17, 2021
ಜಾಣ ಅರಿಮೆ
ವಿಸ್ಮಯಕ್ಕಿಂತ ವಿಸ್ಮಯ 16
ನಾ ಮೆಚ್ಚಿದ ಹಲ್ಲಿಗಳ ಕಥೆಗಳು
ಐಐಎಸ್ಸಿಯ ಆವರಣದಲ್ಲಿದ್ದ ಎರಡು ಗಂಡು ಹಲ್ಲಿಗಳಲ್ಲಿ ಯಾವುದು ಹೆಚ್ಚು ಉಗ್ರಹೋರಾಟಗಾರ ಎಂದು ಅವುಗಳ ಮೈಮೇಲಿನ ಗಾಯಗಳಿಂದ ಲೆಕ್ಕ ಹಾಕುತ್ತಿರುವ ಅನುರಾಧಾ ಬಟಾಬೈಲು ಹಾಗೂ ಮಾರಿಯಾ ಥಾಕರ್. ಚಿತ್ರ: ದೇವಿಕಾ ರಾನಡೆ.
ಬ್ಯಾಕ್ಟೀರಿಯಾದ ವೈರಸ್ ಕುರಿತ ಜೈವಿಕ ರಸಾಯನವಿಜ್ಞಾನ ಹಾಗೂ ಕಣಜೀವಿವಿಜ್ಞಾನದ ಡಾಕ್ಟರೇಟು ಪ್ರಬಂದವನ್ನು ಸಲ್ಲಿಸಿದ ನಂತರ ನಾನು ದೊಡ್ಡ ಪ್ರಾಣಿಗಳ ಪರಿಸರವಿಜ್ಞಾನ ಹಾಗೂ ವಿಕಾಸವಿಜ್ಞಾನದತ್ತ ಗಮನವಿಡಲು ತೀರ್ಮಾನಿಸಿದ್ದೆ. ಅಷ್ಟರಲ್ಲಾಗಲೇ ಇಂಡಿಯನ್ ವಾಸ್ಪ್ ಎನ್ನುವ ರೋಪಡೀಲಿಯಾ ಮಾರ್ಜಿನೇಟಾ ಕಣಜ ನನ್ನನ್ನು ಮೋಡಿ ಮಾಡಿಯಾಗಿತ್ತು. ಆದರೆ ಹೆಮಿಡ್ಯಾಕ್ಟೈಲಸ್ ಫ್ರೇನೇಟಸ್ ಎನ್ನುವ ಮನೆಯಲ್ಲಿ ಕಾಣುವ ಹಲ್ಲಿಯೂ ನನ್ನನ್ನು ಆಕರ್ಷಿಸಿತ್ತು. ಆದರೆ ಹಲ್ಲಿಯ ಬಗ್ಗೆ ನನಗೆ ಏನೇನೂ ಗೊತ್ತಿರಲಿಲ್ಲ.
ಹಲ್ಲಿಗಳ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಸ್ವಲ್ಪ ಸಮಯವನ್ನು ಬಾಂಬೇ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್) ಯಲ್ಲಿ ಸ್ವಲ್ಪ ದಿನ ನೀನು ಇದ್ದು ಬರಬೇಕು ಎಂದು ನನ್ನ ಗುರು ಮಾಧವ ಗಾಡಗೀಳರು ಸೂಚಿಸಿದರು. ಬಿಎನ್‌ಎಚ್‌ಎಸ್ಸಿನ ಉರಗಗಳು ಮತ್ತು ಉಭಯಜೀವಿಗಳ ತಜ್ಞ, ಜೆ. ಸಿ. ಡೇನಿಯಲ್ ನನ್ನನ್ನು ಅಲ್ಲಿಗೆ ಆಹ್ವಾನಿಸಿದರು. ಆತ ಅಷ್ಟರಲ್ಲಿಯೇ ಬಿಎನ್‌ಎಚ್‌ಎಸ್ಸಿನ ನಿರ್ದೇಶಕರಾಗಿದ್ದಿರಬೇಕು.
ಹಲ್ಲಿಗಳ ಜೊತೆಗಿನ ನನ್ನ ಬದುಕು
ಹೀಗಾಗಿ ಬೆಂಗಳೂರಿನಿಂದ ಮುಂಬಯಿಯ ರೈಲು ಹತ್ತಿದ ನಾನು ಒಂದು ಸೋಮವಾರ ಬೆಳಗ್ಗೆ ನೇರವಾಗಿ ಡೇನಿಯಲ್ಲರ ಕಛೇರಿಯನ್ನು ತಲುಪಿದೆ. ನನ್ನನ್ನು ಸ್ವಾಗತಿಸಿದ ಆತ ಸಾಲು, ಸಾಲು ಬಡುಗಳ ತುಂಬ ಸಂಗ್ರಹಿಸಿ ಇಟ್ಟಿದ್ದ ಹಲ್ಲಿಗಳ ಮಾದರಿಗಳಿದ್ದ ಗಾಜಿನ ಬಾಟಲಿಗಳನ್ನು ತೋರಿಸಿದರು. ನನಗೆ ಇಷ್ಟ ಬಂದದ್ದನ್ನು ನಾನು ಅಧ್ಯಯನ ಮಾಡಬಹುದು ಎಂದರು. ಅನಂತರ ಕೈಯಲ್ಲಿ ಸೂಟುಕೇಸು ಹಿಡಿದಿದ್ದನ್ನು ಕಂಡು, ಉಳಿದುಕೊಳ್ಳಲು ಜಾಗ ಇದೆಯೋ ಎಂದರು. ನಾನು ಇಲ್ಲ ಎಂದು ಗೊಣಗಿದೆ. ಆತನಿಗೆ ಚಿಂತೆಯಾಯಿತೆನ್ನಿಸುತ್ತದೆ. ಕ್ಷಣ ಹೊತ್ತು ಕಳೆದು, ಪಿಸುಗುಟ್ಟಿದರು. ಈ ಗುಟ್ಟು ನಾನು, ನೀನು ಮತ್ತು ಈ ಸೆಕ್ಯೂರಿಟಿಯವ ಮೂವರ ನಡುವೆಯಷ್ಟೆ ಇರಲಿ. ನೀನು ಇಲ್ಲಿಯೇ ಈ ಹಲ್ಲಿಗಳಿರುವ ಬಡುಗಳ ನಡುವೆ ಇರುವ ನೆಲದಲ್ಲಿ ಮಲಗಬಹುದು ಎಂದರು.
ಮುಂದಿನ ಒಂದು ತಿಂಗಳು ನಾನು ಅದನ್ನೇ ಪಾಲಿಸಿದೆ. ರಾತ್ರಿಯೆಲ್ಲ ಹಲ್ಲಿಗಳಿದ್ದ ಬಡುಗಳ ನಡುವೆಯೇ ನಿದ್ರಿಸಿ, ಬೆಳಗಾದ ಕೂಡಲೇ ಸದ್ದಿಲ್ಲದೆ ಹೊರ ನಡೆಯುತ್ತಿದ್ದೆ. ಹತ್ತು ಗಂಟೆಯ ವೇಳೆಗೆ, ಆಗಷ್ಟೆ ಭೇಟಿ ನೀಡಿದಂತೆ ನಟಿಸುತ್ತಾ ಮರಳುತ್ತಿದ್ದೆ. ಇಡೀ ದಿನ ಹಲ್ಲಿಗಳನ್ನು ಅಧ್ಯಯನ ಮಾಡಿದ ನಂತರ, ಸಂಜೆ ಐದು ಗಂಟೆಗೆ ಎಲ್ಲರಿಗೂ ಗೊತ್ತಾಗುವ ಹಾಗೆ ಹೊರಬೀಳುತ್ತಿದ್ದೆ. ರಾತ್ರಿ ಒಂಭತ್ತು ಗಂಟೆಯ ಹೊತ್ತಿಗೆ ಯಾರಿಗೂ ತಿಳೀಯದ ಹಾಗೆ ಒಳನುಸುಳುತ್ತಿದ್ದೆ. ಕರುಣಾಳು ಆ ಕಾವಲುಗಾರ ಬೆಳಗ್ಗೆ ತನಗೆಂದು ತಂದ ಚಹಾವನ್ನೂ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದ.
ಅದೊಂದು ರೀತಿ ಮಜವಾಗಿತ್ತು. ಮುಂಬಯಿಯನ್ನು ನಾನು ಪ್ರೇಮಿಸಲು ಆರಂಬಿಸಿದೆ. ಬೆಳಗ್ಗಿನ ದೀರ್ಘ ನಡೆ, ಅಗ್ಗದ ರೆಸ್ಟುರಾಗಳು ಹಾಗೂ ಅದಕ್ಕಿಂತಲೂ ಅಗ್ಗದ ಸಿನಿಮಾಗಳು, ಹಾಗೂ ಇವೆಲ್ಲಕ್ಕಿಂತಲೂ ಮಿಗಿಲಾಗಿ ರಸ್ತೆ ಬದಿಯಲ್ಲಿ ಹರಡಿದ್ದ ಬೆರಗುಗೊಳಿಸುವ ಹಳೆ ಪುಸ್ತಕಗಳ ಅಂಗಡಿಗಳನ್ನು ಮರೆಯಲಾಗದು. ಬೆಂಗಳೂರಿಗೆ ಮರಳೀದ ನಾನು ಮನೆಯಲ್ಲಿದ್ದ ಹಲ್ಲಿಗಳು ಹಿಡಿದು ಅವನ್ನು ಸಾಕಲು ಕೆಲವು ಪಂಜರಗಳನ್ನು ಮಾಡಿದೆ. ಹಲ್ಲಿಗಳು ಹೋರಾಡುವುದನ್ನೂ, ಕೂಡುವುದನ್ನ, ಮೊಟ್ಟೆ ಇಡುವುದನ್ನೂ ನೋಡುವುದು, ಊಹಿಸಲೂ ಅಸಾಧ್ಯವಾದಷ್ಟು ಪುಟ್ಟ ಮೊಟ್ಟೆಗಳೊಳಗಿಂದ ಮುದ್ದು, ಮುದ್ದಾದ ಹಲ್ಲಿಮರಿಗಳು ಹುಟ್ಟುವುದನ್ನು ನೋಡುವುದು ಮಜವೆನ್ನಿಸಿತ್ತು.
ಆದರೆ ನಾನು ಹಲ್ಲಿಗಳ ಪರಿಸರ ಅಧ್ಯಯನ ಮಾಡುವುದಕ್ಕೆಂದು ರಾತ್ರಿಯೆಲ್ಲಾ ಅವಳ ಹಾಗೂ ನೆರೆಹೊರೆಯವರ ಅಡುಗೆ ಮನೆಗಳಲ್ಲಿ ಕಳೆಯುತ್ತೇನೆ ಎಂದಿದ್ದು ನನ್ನ ಹೆಂಡತಿಗೆ ಗಾಭರಿಯನ್ನುಂಟು ಮಾಡಿದ್ದೂ ನಿಜ. ಆದರೆ ಅವಳ ಅದೃಷ್ಟ. ಅಷ್ಟರಲ್ಲಾಗಲೇ ಕಣಜದ ಮೋಡಿಯ ಪ್ರಭಾವ ನನ್ನನ್ನು ಸೋಲಿಸಿಬಿಟ್ಟಿತ್ತು. ಹೀಗಾಗಿ ನಾನು ಹಲ್ಲಿಗಳ ಬಗ್ಗೆ ಗಂಭೀರವಾಗಿ ಸಂಶೋಧನೆ ನಡೆಸಲೇ ಇಲ್ಲ. ಆದರೂ ಅವುಗಳ ಬಗ್ಗೆ ನನಗೇನೋ ಒಂದಿಷ್ಟು ಒಲವು ಇದ್ದೇ ಇತ್ತು. ಹೀಗಾಗಿ ನಾನು ಸಾಕಷ್ಟು ಹಲ್ಲಿಗಳ ಕಥೆಗಳನ್ನು ಕೂಡಿಸಿ ಇಟ್ಟಿದ್ದೇನೆ. ಅವುಗಳಲ್ಲಿ ಇದೋ ನನ್ನ ಮೆಚ್ಚಿನ ಕೆಲವು ಇಲ್ಲಿವೆ. ಇವು ಕಾಲ್ಪನಿಕ ಕಥೆಗಳಲ್ಲ, ಸತ್ಯದ ಕಥೆಗಳು. ಆದರೂ ನನ್ನ ಮೆಚ್ಚಿನ ಒಂದು ಕಾದಂಬರಿಯೂ ಇದೆ. ಇದು ಪ್ರಸಿದ್ಧ ಕನ್ನಡ ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರ ಹಲ್ಲಿ ಬೇಟೆಯ ಕಥೆ, ಕಾರ್ವಾಲೋ.
ಕಾಡು ಹಲ್ಲಿಗಳು
ಹಲ್ಲಿಗಳ ಜೊತೆಗೆ ಒಡನಾಡುವಾಗ ನಾನು ಡೋನಾಲ್ಡ್ ಡಬ್ಲ್ಯೂ ಟಿಂಕಲ್ ೧೯೬೮ರಲ್ಲಿ ಪ್ರಕಟಿಸಿದ್ದ ದಿ ಲೈಫ್ ಅಂಡ್ ಡೆಮೋಗ್ರಾಫಿ ಆಫ್ ದಿ ಸೈಡ್ ಬ್ಲಾಚ್ಡ್ ಲಿಜ಼ರ್ಡ್, ಉಟಾ ಸ್ಟಾನ್ಸ್ ಬರಿಯಾನಾ ಎನ್ನುವ ಪುಸ್ತಕವನ್ನು ಓದಿದ್ದೆ. ಆಗ ಪರಿಸರವಿಜ್ಞಾನ ಹಾಗೂ ಜೀವಿಗಳ ವಿತರಣೆಯ ವಿಷಯದಲ್ಲಿ ನಾನಿನ್ನೂ ಮಗುವಾಗಿದ್ದರಿಂದ ಟಿಂಕಲರ ತೀರ್ಮಾನಗಳು ನನಗೆ ಅಷ್ಟು ಅರ್ಥವಾಗಿರಲಿಲ್ಲ. ಆತ ಕೆಲಸ ಮಾಡುತ್ತಿದ್ದುದೇ ಹಾಗೆ ಬಿಡಿ. ಆದರೆ ಆತನ ಕೆಲಸದ ರೀತಿ, ವಿಜ್ಞಾನ ನನ್ನನ್ನು ಮರುಳು ಮಾಡಿಬಿಟ್ಟಿತ್ತು. ಅದು ನನಗೆ ಪರಿಚಯವಿದ್ದ ಸೂಕ್ಷ್ಮಜೀವಿವಿಜ್ಞಾನ ಹಾಗೂ ಕಣಜೀವಿವಿಜ್ಞಾನದ ರೀತಿಗಳಿಗಿಂತ ಭಿನ್ನವಾಗಿತ್ತು. ರಮ್ಯವಾಗಿತ್ತು.
ಡೋನಾಲ್ಡ್ ಟಿಂಕಲ್ (1930-1980) ಒಂಬತ್ತು ವರ್ಷಗಳವರೆಗೆ ಒಂಧೇ ಒಂದು ಹಲ್ಲಿಯ ಪ್ರಭೇದವನ್ನು ಅಧ್ಯಯನ ಮಾಡಿದ್ದ. ಈ ಅವಧಿಯಲ್ಲಿ ಈತ 3,729 ಹಲ್ಲಿಗಳನ್ನು ಹಿಡಿದು ಅವುಗಳನ್ನು ಗುರುತಿಸಿ ಮತ್ತೆ ಬಯಲಿಗೆ ಬಿಟ್ಟಿದ್ದ. ಎರಡು ಸ್ಥಾನಗಳಲ್ಲಿ ಅವುಗಳನ್ನೇ ಮತ್ತೆ, ಮತ್ತೆ ಸೆರೆ ಹಿಡಿದು ಅಧ್ಯಯನ ಮಾಡಿದ. ಹೀಗೆ ಈತ ಒಟ್ಟು 12,927 ಬಾರಿ ಹಲ್ಲಿಗಳನ್ನು ಹಿಡಿದಿದ್ದ. ಅವನೂ, ಅವನ ವಿದ್ಯಾರ್ಥಿಗಳೂ ಈ ಪ್ರದೇಶವನ್ನೆಲ್ಲ ಹಗಲೂ ರಾತ್ರಿ ಎನ್ನದೆ ಹುಡುಕಾಡಿ, ಅಲ್ಲಿದ್ದ ಪ್ರತಿಯೊಂದು ಹಲ್ಲಿಯನ್ನೂ ಗುರುತಿಸಿದ್ದರು. ಮತ್ತೆ, ಮತ್ತೆ ಕಂಡಿದ್ದರು. ಒಮ್ಮೊಮ್ಮೆ ಒಂದು ಹಲ್ಲಿಯನ್ನು ಗುರುತಿಟ್ಟುಕೊಂಡು, ಅದರ ಚಲನವಲನಗಳು, ವಲಸೆಯ ರೀತಿ, ಪ್ರಣಯ ಹಾಗೂ ಸಂಗಾತಿಯ ಜೊತೆ ಕೂಡುವ ರೀತಿಯನ್ನೆಲ್ಲ ಗಮನಿಸಿದರು. ಹಲ್ಲಿಗಳನ್ನು ಹಿಡಿಯಲು, ಅವುಗಳನ್ನು ಅಳೆಯಲು, ತೂಕ ನೋಡಲು ಹಾಗೂ ಮರಳಿ ಕಾಢಿಗೇ ಬಿಡಲು ಹಲವು ಉಪಾಯಗಳನ್ನೂ ರೂಪಿಸಿದರು. ಇದರೊಟ್ಟಿಗೆ ಪ್ರಯೋಗಾಲಯದಲ್ಲಿ ಅಧ್ಯಯನ ಮಾಡಲೂ ಹಲವು ಸಾವಿರ ಹಲ್ಲಿಗಳನ್ನು ಸೆರೆ ಹಿಡಿದಿದ್ದರು.
ಟಿಂಕಲ್ಲರ ಈ ರೀತಿಯ ಅಧ್ಯಯನ ನನ್ನ ಮೇಲೆ ಗಾಢ ಪರಿಣಾಮ ಬೀರಿತ್ತು. ಆತನ ಸಂಶೋಧನೆಯನ್ನು “ಉರಗಗಳ ಅದರಲ್ಲೂ ವಿಶೇಷವಾಗಿ ಹಲ್ಲಿಗಳ ಜೀವನಶೈಲಿ ಹಾಗೂ ಸಾಮುದಾಯಿಕ ವಿತರಣೆಯ ಅಧ್ಯಯನಗಳ ಬುನಾದಿ” ಯಾದ ಅಪೂರ್ವ ಸಂಶೋಧನೆ ಎಂದು ಪರಿಗಣಿಸಲಾಗಿದೆ.
ಇದನ್ನು ನಾನೂ ಮಾಡಬಹುದಿತ್ತಲ್ಲ ಎಂದು ನನಗೆ ಅನಿಸಿದ್ದು ವಿಶೇಷ. ನಾವುಗಳು ಮಕ್ಕಳಾಗಿದ್ದಾಗ ಇಂತಹ ಎಷ್ಟೋ ಆಟಗಳನ್ನು ಆಡಿದ್ದೆವು. ಆದರೆ ಈಗ ಇದೇ ಒಂದು ಸಂಶೋಧನೆಯ ವಿಧಾನ ಎಂದು ನನಗೆ ಅರಿವಾಯಿತು. ಒಂದಿಷ್ಟು ತರಬೇತಿ ಹಾಗೂ ಶಿಸ್ತು ಇದ್ದರೆ, ಶಾಲಾ ವಿದ್ಯಾರ್ಥಿಗಳೂ ಕೂಡ ಹೀಗೆ ಅಮೂಲ್ಯವಾದ ವೈಜ್ಞಾನಿಕ ಅಂಶಗಳನ್ನು ಗಮನಿಸಬಹುದು. ಅರಿವಿನ ಹರಿಕಾರರೂ ಆಗಬಹುದು. ತಹ ವಿಜ್ಞಾನ ಹಾಗೂ ಸಂಶೋಧನೆಯ ಬಗ್ಗೆ ಅವರಿಗೆ ಒಂದಿಷ್ಟು ವಿಶ್ವಾಸ ಇರಬೇಕು ಅಷ್ಟೆ. ದುರದೃಷ್ಟವಶಾತ್, ನಾವು ಯುವಕರನ್ನು ಅವರ ಬದುಕಿನ ಬಲು ದೀರ್ಘಾವಧಿಗೆ, ಕೇವಲ ಅರಿವಿನ ಗ್ರಾಹಕರೆಂದಷ್ಟೆ ಭಾವಿಸಿ ಬಿಡುತ್ತೇವೆ.
ಟಿಂಕಲ್ ದೀರ್ಘಾವಧಿ ಕ್ಷೇತ್ರಾಧ್ಯಯನಗಳ ಹರಿಕಾರನಾಗಿದ್ದ. ಆದರೆ ಸ್ವತಃ ನಲವತ್ತೊಂಬತ್ತನೆಯ ವಯಸ್ಸಿನಲ್ಲಿಯೇ ಕ್ಯಾನ್ಸರಿನಿಂದ ಮೃತನಾದ. ಭಾರತದಲ್ಲಿ ನಾವೂ ಇನ್ನೂ ಈಗಷ್ಟೆ ಇಂತಹ ಪ್ರಮುಖ ಸಂಶೋಧನೆಗಳತ್ತ ಕಣ್ಣು ಹಾಯಿಲಾರಂಭಿಸಿದ್ದೇವೆ. ನನ್ನ ಸಹೋದ್ಯೋಗಿ ರಾಮನ್ ಸುಕುಮಾರ್ ಹೀಗೆ ದೀರ್ಘಾವಧಿಯ ಪರಿಸರ ವೀಕ್ಷಣೆಯ ಕಾರ್ಯಕ್ರಮ ಗಳನ್ನು ಆಯೋಜಿಸಲು ಪರಿಶ್ರಮಿಸಿದ್ದಾರೆ. ಈ ಕಾರ್ಯಕ್ರಮವ ಆರು ಪ್ರದೇಶಗಳಲ್ಲಿ ನಡೆಯಲಿದೆ. ಇವು ಆರೂ ಪ್ರದೇಶಗಳೂ “ಭಾರತದಲ್ಲಿರುವ ಈಶಾನ್ಯ ಶುಷ್ಕ ಜೀವಿನೆಲೆ, ಪಶ್ಚಿಮ ಹಿಮಾಲಯ, ಪೂರ್ವ ಹಿಮಾಲಯ, ಮಧ್ಯಭಾರತ, ಪಶ್ಚಿಮ ಘಟ್ಟಗಳು ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಗಳೆನ್ನುವ ಆರು ವಿಭಿನ್ನ ಜೀವಿನೆಲೆ ಸ್ವರೂಪ ಅಥವಾ ಬಯೋಮುಗಳನ್ನು ಪ್ರತಿನಿಧಿಸುತ್ತವೆ”.
ಹಲ್ಲಿಗಳ ಆಟಗಳು
ಕಣಜಗಳ ಕೂಟದಲ್ಲಿ ಕಳೆದು ಹೋಗಿದ್ದ ನಾನು, ಯುಟಾ ಸ್ಟಾನ್ಸ್ ಬರಿಯಾನಾ ಎಂಬ ಪುಟ್ಟ ಹಲ್ಲಿಗಳ ಬಗ್ಗೆ ಮರೆತೇ ಬಿಟ್ಟಿದ್ದೆ. ಆದರೆ 1996ನೇ ಇಸವಿಯಲ್ಲಿ ಈ ಹಲ್ಲಿಗಳೂ, ಡೋನಾಲ್ಡ್ ಟ್ರಿಂಕಲ್ ಅವುಗಳ ಹಿಂದೆ ಓಡುತ್ತಿರುವ ಚಿತ್ರವೂ ಮತ್ತೆ ನೆನಪಾಯಿತು. ಆ ವರ್ಷ ಅಮೆರಿಕೆಯ ಸಾಂಟಾಕ್ರೂಜಿನಲ್ಲಿರುವ ಕೆಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಬ್ಯಾರಿ ಸಿನೆರ್ವೋ ಮತ್ತು ಬ್ಲೂಮಿಂಗ್ಟನನ್ನಿನಲ್ಲಿರುವ ಇಂಡಿಯಾನಾ ವಿಶ್ವವಿದ್ಯಾನಿಲಯದ ಕರ್ಟ್ ಲಿವ್ಲೀ ಕೆಲಿಫೋರ್ನಿಯಾದಲ್ಲಿರುವ ಈ ಹಲ್ಲಿಗಳ ಬಗ್ಗೆ ಹೊಸದೊಂದು ಸಂಶೋಧನೆಯನ್ನು ಪ್ರಕಟಿಸಿದ್ದರು. ಈ ಹಲ್ಲಿ ಪ್ರಭೇದದ ಗಂಡುಗಳಲ್ಲಿ ಕಿತ್ತಳೆ, ಹಳದಿ ಹಾಗೂ ನೀಲಿ ಕತ್ತುಗಳಿರುವ ಮೂರು ಬಗೆಯ ಗಂಡುಗಳೇಕೆ ಇವೆ? ಇವುಗಳಲ್ಲಿ ಉತ್ತಮವಾದುದನ್ನಷ್ಟೆ ನಿಸರ್ಗ ಆಯ್ಕೆ ಮಾಡಿ ಉಳಿದೆರಡನ್ನು ಅಳಿಸಿ ಹಾಕಿಲ್ಲವೇಕೆ? ಎನ್ನುವುದು ಅವರ ಕುತೂಹಲವಾಗಿತ್ತು.
ಸಂತತಿ, ಸಂತತಿಗಳಲ್ಲಿ ಈ ಮೂರೂ ಬಗೆಯ ಗಂಡುಗಳೇಕೆ ಉಳಿದುಕೊಂಡು ಬಂದಿವೆ ಎನ್ನುವುದನ್ನು ತಿಳಿಯಬೇಕೆಂದರೆ ನಾವು ಅವುಗಳನ್ನು ಗಮನಿಸಿ, ಅವುಗಳ ನಡವಳಿಕೆಯ ತಂತ್ರಗಳ ಮೌಲ್ಯಮಾಪನ ಮಾಡಬೇಕು. ಕಿತ್ತಳೆ ಬಣ್ಣದ ಕತ್ತಿರುವ ಗಂಡುಗಳು ಬಲು ಉಗ್ರವಾಗಿ ನಡೆದುಕೊಳ್ಳುವುದಲ್ಲದೆ, ಹೆಣ್ಣೂಗಳನ್ನು ಆಕರ್ಷಿಸಲು ದೊಡ್ಡದಾದ ಸಾಮ್ರಾಜ್ಯವನ್ನು ರೂಪಿಸಿಕೊಳ್ಳುತ್ತವೆ. ನೀಲಿ ಕತ್ತಿನ ಗಂಡುಗಳೋ ಮೃದು ಸ್ವಭಾವದವು. ಪುಟ್ಟ, ಪುಟ್ಟ ಸಾಮ್ರಾಜ್ಯಗಳನ್ನು ಕಟ್ಟಿಕೊಂಡು, ಉಳಿದ ನೀಲಿಗಂಡುಗಳ ಜೊತೆಗೆ ಸಹಕಾರ ತೋರುತ್ತಾ ಬಾಳ್ವೆ ನಡೆಸುತ್ತವೆ. ಹಳದಿ ಕತ್ತಿನ ಗಂಡುಗಳು ಅತ್ಯಂತ ದೈನ್ಯದವು. ನೋಡಲು ಹೆಣ್ಣಿನಂತೆಯೇ ತೋರುವ ಇವುಗಳಿಗೆ ಯಾವ ರಾಜ್ಯವೂ ಇಲ್ಲ. ಬದಲಿಗೆ ಇವು ಹೆಣ್ಣಿನಂತೆಯೇ ನಟಿಸುತ್ತಾ, ಇತರೆ ಗಂಡುಗಳ ರಾಜ್ಯದೊಳಗೆ ಪ್ರವೇಶಿಸುತ್ತವೆ. ಅಲ್ಲಿನ ಒಡೆಯರು ಆಕರ್ಷಿಸಿದಂತಹ ಅಲ್ಲಿರುವ ಹೆಣ್ಣುಗಳ ಜೊತೆಗೆ ಕೂಡಿಬಿಡುತ್ತವೆ.
ಹೀಗೆ ವಿಭಿನ್ನ ರೀತಿಯಲ್ಲಿ ಕಾಣುವ ಜೀವಿಗಳು ಒಟ್ಟಾಗಿ ಉಳಿದಿರುವಂತಹ ಹಲವು ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಏಕೆಂದರೆ ಅವೆಲ್ಲವುಗಳ ಸಂತಾನ ಸಾಮರ್ಥ್ಯವೂ ಸಮಾನ ವಾಗಿರುತ್ತದೆ. ಆದರೆ ಈ ಉದಾಹರಣೆಯಲ್ಲಿನ ಮೂರೂ ಗಂಡುಗಳ ಸಂತಾನೋತ್ಪತ್ತಿಯ ಸಾಮರ್ಥ್ಯವೂ ಒಂದೇ ಆಗಿಲ್ಲ. ಆದರೂ ನಿಸರ್ಗದ ಆಯ್ಕೆ ಈ ಮೂರುಬಗೆಗಳಲ್ಲಿ ಅತ್ಯುತ್ತಮವಾದದ್ದನ್ನಷ್ಟೆ ಆಯ್ದು ಉಳೀದೆರಡನ್ನು ಅಳಿಸಿಹಾಕಲಾಗಿಲ್ಲ.
ನಿಸರ್ಗದ ಆಯ್ಕೆ ಎನ್ನುವುದು “ಫ್ರೀಕ್ವೆನ್ಸಿ ಆಧರಿತ,” ಸಂತಾನೋತ್ಪತ್ತಿಯ ಸಾಮರ್ಥ್ಯ ಅಸಮವಾಗಿರುವ ಹಲವು ರೂಪಗಳು ಹೀಗೆ ಒಟ್ಟಿಗೇ ಬದುಕಿರುವುದರ ರಹಸ್ಯ. ಅಂದರೆ ಅರ್ಥ ಇಷ್ಟೆ. ಯಾವುದೇ ಬಗೆಯ ಗಂಡು ಸಫಲವಾಗುವುದು ಉಳಿದ ಬಗೆಯ ಗಂಡುಗಳ ಹೋಲಿಕೆಯಲ್ಲಿ ಅದರ ಪ್ರಮಾಣವೆಷ್ಟಿದೆ ಎನ್ನುವುದನ್ನು ಅವಲಂಬಿಸಿರುತ್ತದೆ. ಅಂದರೆ ಸಂತಾನೋತ್ಪತ್ತಿಯ ಸಾಮರ್ಥ್ಯ ನೆರೆಯವರ ಮೇಲೆ ಅವಲಂಬಿತ.
ಕಿತ್ತಳೆ ಬಣ್ಣದ ಗಂಡುಗಳೇ ಹೆಚ್ಚಿದ್ದಾಗ, ಅವು ನೀಲಿ ಕತ್ತಿನ ಗಂಡುಗಳನ್ನು ಹಿಮ್ಮೆಟ್ಟಿಸುತ್ತವೆ. ಆದರೆ ಹಳದಿ ಗಂಡಿನ ಮೋಸದಿಂದ ರಕ್ಷಿಸಿಕೊಳ್ಳಲಾರವು. ಹೀಗಾಗಿ ಕಿತ್ತಳೆ ಗಂಡುಗಳ ಸಂಖ್ಯೆ ಕಡಿಮೆ ಆಗುತ್ತದೆ. ಹಳದಿ ಗಂಡುಗಳ ಸಮಸ್ಯೆ ಹೆಚ್ಚಾಗುತ್ತದೆ. ಕಿತ್ತಳೆಯ ಸಂಖ್ಯೆ ಕಡಿಮೆ ಆದಾಗ, ನೀಲಿ ಗಂಡುಗಳಿಗೆ ಪ್ರತಿಸ್ಪರ್ಧಿಗಳಿರುವುದಿಲ್ಲ. ಹೀಗಾಗಿ ಅವುಗಳ ಸಂಖ್ಯೆ ಮೇಲಾಗುತ್ತದೆ. ಈಗ ಹಳದಿ ಹಲ್ಲಿಗಳು ನೀಲಿಗಳ ಸಾಮ್ಯಾಜ್ಯದೊಳಗೆ ನುಸುಳಲಾರವು. ಏಕೆಂದರೆ ನೀಲಿ ಗಂಡುಗಳು ಒಂದಿನ್ನೊಂದರ ಜೊತೆಗೆ ಸಹಕರಿಸುತ್ತಾ ಒಟ್ಟಾಗಿ ಈ ಕಪಟಿಗಳು ತಮ್ಮ ಪುಟ್ಟ ರಾಜ್ಯಗಳೊಳಗೆ ನುಸುಳದಂತೆ ಕಾಯುತ್ತವೆ. ಹೀಗೆ ಹಲವು ಗಂಡುಗಳ ಜೊತೆಗೆ ಹೋರಾಡಬೇಕಾದ್ದರಿಂದ ಹಳದಿ ಗಂಡುಗಳ ಸಂಖ್ಯೆ ಕಡಿಮೆ ಆಗುತ್ತದೆ. ಮರಳಿ ಕಿತ್ತಳೆಗಳ ರಾಜ್ಯ ಆರಂಭವಾಗುತ್ತದೆ. ಇದರ ಒಟ್ಟಾರೆ ಪರಿಣಾಮವೇನೆಂದರೆ, ಯಾವುದೇ ಸ್ಥಳದಲ್ಲಿ ಈ ಮೂರು ಗಂಡುಗಳ ಸಂಖ್ಯೆ ಒಂದಾದನಂತರ ಇನ್ನೊಂದರದಂತೆ ಹೆಚ್ಚು, ಕಡಿಮೆ ಆಗುತ್ತಿರುತ್ತದೆ.
ಈ ಹಲ್ಲಿಗಳು ಒಂದು ರೀತಿಯಲ್ಲಿ ವಿಕಾಸದ ಆಟವೊಂದನ್ನು ಆಡುತ್ತಿವೆ ಎನ್ನಬಹುದು. ಇಂತಹ ಆಟಗಳನ್ನು ವಿಶ್ಲೇಷಿಸಲು ವಿವರವಾದ ಗಣಿತ ತಂತ್ರಗಳಿವೆ. ಇವು ಜೀವಿ ವಿಕಾಸವಿಜ್ಞಾನದಲ್ಲಿ ಎಷ್ಟು ಪ್ರಸಿದ್ಧಿಯೂ ಅರ್ಥಶಾಸ್ತ್ರದಲ್ಲಿಯೂ ಅಷ್ಟೇ. ಅರ್ಥಶಾಸ್ತ್ರದಲ್ಲಿ ಹೆಸರು ವಾಸಿಯಾಗಿರುವ ಇಂತಹ ತಂತ್ರ ನ್ಯಾಶ್ ಈಕ್ವಿಲಿಬ್ರಿಯಂ ಹಾಗೂ ಎ ಬ್ಯೂಟಿಫುಲ್ ಮೈಂಡ್ ಎನ್ನುವ ಪುಸ್ತಕಗಳ ಲೇಖಕ ಜಾನ್ ಫೋರ್ಬೆಸ್ ನ್ಯಾಶ್ ರೂಪಿಸಿದ ಅರ್ಥಶಾಸ್ತ್ರದ ಗೇಮ್ ಥಿಯರಿ. ವಿಕಾಸವಿಜ್ಞಾನದಲ್ಲಿ ಇಂತಹ ಆಟದ ತಂತ್ರಗಳಿಗೆ ಹೆಸರುವಾಸಿಯಾಗಿದ್ದವರು ಜಾನ್ ಮೇನಾರ್ಡ್ ಸ್ಮಿತ್.
ಕಲ್ಲು, ಕಾಗದ, ಕತ್ತರಿ
ಈ ಹಲ್ಲಿಗಳ ಆಟವನ್ನು ಮಕ್ಕಳಲ್ಲಿ ಜನಪ್ರಿಯವಾಗಿರುವ ಕಲ್ಲು, ಕಾಗದ, ಕತ್ತರಿ ಆಟಕ್ಕೆ ಹೋಲಿಸಬಹುದು. ಇಬ್ಬರು ಮಕ್ಕಳು ಒಟ್ಟಿಗೇ ತಮ್ಮ ಅಂಗೈಯನ್ನು ಮೇಲೋ, ಕೆಳಗೋ ಇಟ್ಟು, ಸರಿ ಯಾರು, ಬೆಸ ಯಾರು ಎಂದು ಹೇಳುವುದಿಲ್ಲವೇ ಹಾಗೆಯೇ ಈ ಆಟ ಕೂಡ. ಈ ಆಟದ ನಿಯಮಗಳು ಇಷ್ಟೆ. ಕಲ್ಲು ಕತ್ತರಿಯನ್ನು ಸವೆಸುತ್ತದೆ. ಕತ್ತರಿ ಕಾಗದವನ್ನು ತುಂಡರಿಸುತ್ತದೆ. ಕಾಗದ ಕಲ್ಲನ್ನು ಮುಚ್ಚುವುದರಿಂದ ಮೇಲು. ಇದು ಕಿತ್ತಳೆ ಗಂಡುಗಳು ನೀಲಿಗಿಂತ ಮೇಲೆ, ನೀಲಿ ಗಂಡುಗಳು ಹಳದಿಗಿಂತ ಮೇಲು, ಹಳದಿ ಗಂಡುಗಳು ಕಿತ್ತಳೆಯನ್ನು ಸೋಲಿಸುತ್ತವೆ ಎನ್ನುವಂತೆ ಇದೆಯಲ್ಲವೇ? ಹೀಗೆ ಮೂರು ತಂತ್ರಗಳಿರುವ ಯಾವುದೇ ಆಟಕ್ಕೂ ಕಲ್ಲು, ಕತ್ತರಿ, ಕಾಗದದ ಆಟ ಸಾಮಾನ್ಯ ಉದಾಹರಣೆ.
ಸಿನೆರ್ವೋ ಮತ್ತು ಲಿವ್ಲೀ ಕೆಲಿಫೋರ್ನಿಯಾದ ಕರಾವಳಿಯ ಒಳನಾಡಿನಲ್ಲಿರುವ ಈ ಮೂರೂ ಬಗೆಯ ಗಂಡು ಹಲ್ಲಿಗಳ ಸಂತಾನಸಫಲತೆಯನ್ನು 1990ರಿಂದ 1995ರವರೆಗೆ ಅಧ್ಯಯನ ಮಾಡಿದರು. ನಿರೀಕ್ಷಿಸಿದಂತೆ ಯಾವುದೇ ಒಂದು ಗಂಡುಬಗೆಯೂ ಗೆಲುವಿನ ಸರದಾರನಾಗಿರಲಿಲ್ಲ. 1991ರಲ್ಲಿ ನೀಲಿ ಗಂಡುಗಳು 1992ರಲ್ಲಿ ಕಿತ್ತಳೆ ಗಂಡುಗಳು ಹಾಗೂ 1993-94ರಲ್ಲಿ ಹಳದಿ ಗಂಡುಗಳು ಉಚ್ಛ್ರಾಯ ಸ್ಥಿತಿ ಕಂಡವು. ಅವರ ಗಣಿತೀಯ ಮಾದರಿ ನಿರೀಕ್ಷಿಸಿದ್ದೂ ಇಂತಹುದೇ ಪಲ್ಲಟವನ್ನು ಹಾಗೂ ಹಲ್ಲಿಗಳು ಒದಗಿಸಿದ ಮಾಹಿತಿ ಈ ಕಲ್ಲು-ಕಾಗದ-ಕತ್ತರಿಯಾಟದ ಮಾದರಿಗೆ ಚಾಚೂ ತಪ್ಪದೆ ಹೊಂದಿಕೊಂಡಿತ್ತು. ಸರಳವಾದೊಂದು ಮಕ್ಕಳಾಟದ ನಿಯಮಗಳೇ ನಿಯಂತ್ರಿಸುವಂತಹ ವಿಕಾಸ ಕ್ರಿಯೆಗಳಿಗೆ ಈ ಸೈಡ್ ಬ್ಲಾಚ್ಡ್ ಹಲ್ಲಿಗಳು ಇಂದಿಗೂ ಅತ್ಯುತ್ತಮ ಉದಾಹರಣೆಗಳಾಗಿ ಉಳಿದಿವೆ. .
ಕರ್ನಾಟಕದಲ್ಲಿ ಹದಿನಾಲ್ಕನೆಯ ಶತಮಾನದಲ್ಲಿ ವಿಜೃಂಭಿಸಿದ್ದ ಜಯನಗರ ಸಾಮ್ರಾಜ್ಯದ ಅವಶೇಷಗಳಿರುವ ಹಂಪಿ ನಗರ, ಅಲ್ಲಿರುವ ಮಂದಿರಗಳ ಕೆತ್ತನೆ ಹಾಗೂ ಪುರಾತನ ಅವಶೇಷಗಳಿಗೆ ಜನಪ್ರಿಯ. ಇದು ಅಲ್ಲಿರುವ ವಿರೂಪಾಕ್ಷನ ದೇವಾಲಯದಿಂದಾಗಿ ಹಿಂದೂಗಳಿಗೆ ಪವಿತ್ರ ಯಾತ್ರಾಸ್ಥಳವೂ ಹೌದು. ಹಂಪಿಗೆ ಬೇರಾವುದೇ ಪ್ರವಾಸಿಗಿಂತಲೂ, ತೀರ್ಥಯಾತ್ರಿಗಿಂತಲೂ ಹೆಚ್ಚು ಬಾರಿ ಭೇಟಿ ನೀಡಿದ ರಾಜಕುಮಾರ್ ರಾಡರ್ ಎನ್ನುವ ಯುವಕ ನನಗೆ ಪರಿಚಯ.
ನಮಗೆಲ್ಲ ರಾಜು ಎಂದೇ ಪರಿಚಿತನಾದ ಆತ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ನನ್ನ ಸಹೋದ್ಯೋಗಿಗಳಾದ ಶ್ರೀನಿವಾಸ ಸೈದಾಪೂರ್ ಹಾಗೂ ಭಾಗ್ಯಶ್ರೀ ಶಾನುಭಾಗರ ಮಾರ್ಗದರ್ಶನದಲ್ಲಿ ಡಾಕ್ಟರೇಟು ಪದವಿಗೆಂದು ಹಲ್ಲಿಗಳನ್ನು ಅಧ್ಯಯನ ಮಾಡುತ್ತಿದ್ದ. ರಾಜು ನಮ್ಮ ಹಿತ್ತಲಲ್ಲಿ ಕಾಣುವ ಹೆಂಟೇಗೊದ್ದ ಎನ್ನುವ ಕೆಲೋಟಿಸ್ ವರ್ಸಿಕಲರ್ ಎನ್ನುವ ಹಲ್ಲಿಯ ಸಂತಾನೋತ್ಪತ್ತಿಯ ಬಗ್ಗೆ ಹಾಗೂ ಬಾಸಿಸಯಾನಾ ಡುಪೆರೆಯಿ ಎನ್ನುವ ಆಸ್ಟ್ರೇಲಿಯನ್ ಹಲ್ಲಿ ಎನ್ನುವ ಇನ್ನೊಂದರ ಸಂತಾನೋತ್ಪತ್ತಿಯ ಬಗ್ಗೆಯೂ ಮೊದಲ ಸಂಶೋಧನೆಗಳನ್ನು ಮಾಡಿದವ.
ರಾಜುವಿಗೆ ಸಾಮೋಫೈಲಸ್ ಡಾರ್ಸಾಲಿಸ್ ಎನ್ನುವ ಇಂಡಿಯನ್ ರಾಕ್ ಅಗಾಮಾ ಎನ್ನುವ ಹಲ್ಲಿಯ ಮೇಲೂ ಆಸಕ್ತಿ. ಹಾವುರಾಣಿ ಎಂದೂ ಕರೆಯುವ ಈ ಹಲ್ಲಿಯ ದೇಹ ಹತ್ತರಿಂದ ಹನ್ನೆರಡು ಸೆಂಟಿಮೀಟರು ಉದ್ದವಿದ್ದು, ಇಪ್ಪತ್ತು ಸೆಂಟಿಮೀಟರು ಉದ್ದದ ಬಾಲವಿರುತ್ತದೆ. ಇದರ ಗಂಡುಗಳು ಹೆಣ್ಣಿಗಿಂತಲೂ ದೊಡ್ಡವು. ಬೆದೆಯ ಕಾಲದಲ್ಲಿ ಗಂಡುಗಳ ಬಣ್ಣ ಗಾಢವಾಗುತ್ತದೆ. ಹೆಣ್ಣುಗಳ ದೇಹ ಚುಕ್ಕೆ, ಚುಕ್ಕೆಯ ಬಣ್ಣವಾಗಿದ್ದು, ಕಲ್ಲಿನ ಹಿನ್ನೆಲೆಯಲ್ಲಿ ಮರೆಮಾಚಿಕೊಳ್ಳುವಂತಿದೆ.
ಈ ಹಲ್ಲಿಗಳು ಹಲವಾರು ಹಾವಭಾವಗಳನ್ನು ಏಕೆ ತೋರುತ್ತವೆನ್ನುವುದನ್ನು ಅರ್ಥ ಮಾಡಿಕೊಳ್ಳುವುದು ರಾಜುವಿನ ಆಸಕ್ತಿಯಾಗಿತ್ತು. ಇದನ್ನು ಆತ ಹಲ್ಲಿಗಳ ಭಾಷೆ ಎಂದೇ ಕರೆದಿದ್ದಾನೆ. ಗೋಣು ಹಾಕುವುದು, ಎದೆ ಉಬ್ಬಿಸುವುದು ಹಾಗೂ ಬಾಲವನ್ನು ಮೇಲೆತ್ತುವುದು, ಕತ್ತಿನ ತಳಭಾಗದಲ್ಲಿರುವ ಗುಲಾರ್ ತೇಪೆ ಎನ್ನುವ ಪ್ರಖರ ಬಣ್ಣದ ಚರ್ಮವನ್ನು ಅಗಲಿಸುವುದು, ಕಾಲುಗಳನ್ನು ಚಾಚುವುದು, ಬೆನ್ನು ಬಾಗಿಸುವುದು ಹಾಗೂ ಬೆನ್ನನ್ನು ಚಪ್ಪಟೆಯಾಗಿಸಿಕೊಳ್ಳುವುದು ಮೊದಲಾದ ಅವುಗಳ ಹಾವಭಾವಗಳನ್ನು ಎಚ್ಚರದಿಂದ ಗಮನಿಸಿ ದಾಖಲಿಸಿದ್ದಾನೆ. ದುರದೃಷ್ಟವಶಾತ್, ರಾಜು ಮೂವತ್ತೈದನೆಯ ವಯಸ್ಸಿನ ಹರೆಯದಲ್ಲಿಯೇ ಸಾವಿಗೀಡಾಗಿಬಿಟ್ಟ. ದಕ್ಷಿಣ ಭಾರತದ ಈ ಸ್ವಾರಸ್ಯಕರ ಹಲ್ಲಿಗಳ ಸಂಶೋಧನೆಯೂ ಅವನ ಸಾವಿನೊಂದಿಗೆ ತಾತ್ಕಾಲಿಕವಾಗಿ ಕೊನೆಗೊಂಡಿತು. .
(ರಾಜುವಿನ ಸಂಸ್ಮರಣ ವೀಡಿಯೋ ಇಲ್ಲಿದೆ.)
ಬಣ್ಣ ಬಣ್ಣದ ಸಂಕೇತ
ಈ ಭಾರತೀಯ ರಾಕ್ ಅಗಾಮ ಬಗ್ಗೆ ಸುದೀರ್ಘವಾದ ಅಧ್ಯಯನವನ್ನು ನನ್ನ ಸಹೋದ್ಯೋಗಿ ಮಾರಿಯಾ ಥಾಕರ್ ಹಾಗೂ ಅಕೆಯ ಶಿಷ್ಯಂದಿರು ಕೈಘೋಂಡಿದ್ದಾರೆಂದು ಹೇಳಲು ಖುಷಿಯಾಗುತ್ತದೆ. ಅವರು ಹಲವು ಹೊಸ ವಿಷಯಗಳನ್ನು ಪತ್ತೆ ಮಾಡಿದ್ದಾರೆ. ಅವುಗಳಲ್ಲಿ ನನ್ನ ಮೆಚ್ಚಿನ ಎರಡು ಸಂಗತಿಗಳನ್ನು ನಿಮಗೆ ತಿಳಿಸಲು ಬಯಸುತ್ತೇನೆ.
ತನ್ನ ಹಿನ್ನೆಲೆಗೆ ತಕ್ಕಂತೆ ಬಣ್ಣ ಬದಲಿಸಿಕೊಳ್ಳುವ ಗೋಸುಂಬೆಯ ಸಾಮರ್ಥ್ಯ ಎಲ್ಲರಿಗೂ ಗೊತ್ತಿದೆ. ಈ ಸಾಮರ್ಥ್ಯ ಇನ್ನೂ ಹಲವು ಪ್ರಾಣಿಗಳಿಗೆ ಉಂಟು.. ಕಠಿಣಚರ್ಮಿಗಳು, ಶಿರೋಪಾದಿಗಳು, ಮೀನುಗಳು, ಉಭಯಜೀವಿಗಳು ಹಾಗೂ ಉರಗಗಳಲ್ಲಿ ಇಂತಹ ಹಲವು ಜೀವಿಗಳಿವೆ. ತಮ್ಮ ಹಿನ್ನೆಲೆಗೆ ತಕ್ಕಂತೆ ಬಣ್ಣವನ್ನು ಬದಲಿಸಿಕೊಳ್ಳುವ ಪ್ರಾಣಿಗಳಿಗಿಂತಲೂ ಬಣ್ಣದಿಂದಲೇ ತಮ್ಮ ವೈರಿ ಹಾಗೂ ಪ್ರಿಯತಮೆಗೋ, ಪ್ರಿಯತಮನಿಗೋ ಸಂದೇಶ ಕಳಿಸುವ ಪ್ರಾಣಿಗಳು ಇನ್ನೂ ಅದ್ಭುತ. ಏಕೆಂದರೆ ಹೀಗೆ ಬಣ್ಣಗಳಿಂದಲೇ ಸಂದೇಶ ಕಳಿಸುವುದು ತಕ್ಷಣವೇ ಆಗಬೇಕಾದ, ಚಲನಶೀಲ ನಡೆ.
ಇಂತಹ ಒಂದು ಬಗೆಯ ಅಧ್ಯಯನಗಳಲ್ಲಿ ಅನುರಾಧಾ ಬಟಾಬೈಲು ಮತ್ತು ಮಾರಿಯಾ ಥಾಕರ್ ಇಂಡಿಯನ್ ರಾಕ್ ಅಗಾಮಾದಲ್ಲಿ ಉಂಟಾಗುವ ಬಣ್ಣದ ಬದಲಾವಣೆಯ ಸಾಮರ್ಥ್ಯದ ಮೇಲೆ ಗಮನವಿಟ್ಟರು. ಸೆರೆ ಹಿಡಿದ ಗಂಡು ಮತ್ತು ಹೆಣ್ಣು ಹಲ್ಲಿಗಳನ್ನು ಪ್ರಯೋಗಾಲಯಕ್ಕೆ ತಂದು, ಅಲ್ಲಿ, ಅದೇ ಲಿಂಗ ಅಥವಾ ವಿರುದ್ಧ ಲಿಂಗದ ಹಲ್ಲಿಗಳ ಜೊತೆಗೆ ಸೆಣಸಾಟಕ್ಕೆ ಬಿಟ್ಟರು. ಈ ಹಲ್ಲಿಗಳ ಮೇಲೆ ಫೈಬರ್ ಆಪ್ಟಿಕ್ ಎಳೆಗೆ ಜೋಡಿಸಿದ್ದ ರೋಹಿತದರ್ಶಕವೊಂದು ಕಣ್ಣಿಟ್ಟಿತ್ತು. ಹೀಗೆ ಅವುಗಳ ದೇಹದ ಬಣ್ಣದಲ್ಲಾಗುವ ಬದಲಾವಣೆಗಳ ಪ್ರಮಾಣ ಹಾಗೂ ವೇಗವನ್ನು ಆಯಾ ಕ್ಷಣದಲ್ಲಿಯೇ ಅಳತೆ ಮಾಡಿದರು.
ಗಂಡುಗಳಿಗೆ ಹೆಣ್ಣುಗಳು ಎದುರಾದಾಗ ಅವುಗಳ ಬೆನ್ನ ಮೇಲಿನ ಬಣ್ಣ ಹಳದಿಯಿಂದ ಕಿತ್ತಳೆಯಾಗಿಯೋ, ಕೆಂಪಾಗಿಯೋ ಬದಲಾಗುತ್ತಿತ್ತು. ಅದೇ ದೇಹದ ಬದಿಯಲ್ಲಿದ್ದ ಕೆಂಬಣ್ಣದ ರೇಖೆಗಳು ಕಪ್ಪಾಗುತ್ತಿದ್ದುವು. ಅದೇ ಗಂಡುಗಳು ಬೇರೆ ಗಂಡುಗಳಿಗೆ ಎದುರಾದಾಗ, ಬಣ್ಣಗಳಲ್ಲಿನ ಬದಲಾವಣೆ ಬೇರೆಯ ರೀತಿಯೇ ಇರುತ್ತಿತ್ತು. ಬೆನ್ನ ಮೇಲಿನ ಬಣ್ಣದ ಗೀರು ಇನ್ನಷ್ಟು ಹಳದಿಯಾಗುತ್ತಿತ್ತು. ಬದಿಯಲ್ಲಿನ ಬಣ್ಣದ ಗೀರುಗಳು ಇನ್ನಷ್ಟು ಕೆಂಪಾಗಿ ಹೊಳೆಯುತ್ತಿದ್ದುವು. ಈ ರೀತಿಯಲ್ಲಿ ಗಂಡು, ಹೆಣ್ಣು ಯಾವುದನ್ನೂ ಎದುರಿಸದ ಗಂಡುಗಳಲ್ಲಿ ತನ್ನಂತಾನೇ ಕಾಣುತ್ತಿದ್ದ ಬಣ್ಣದ ಬದಲಾವಣೆಗೆ ಹೋಲಿಸಿದರೆ ಇವುಗಳ ಬಣ್ಣ ನಾಲ್ಕು ಪಟ್ಟು ಪ್ರಖರವಾಗಿರುತ್ತಿತ್ತು. ಜೊತೆಗೆ, ಇಂತಹ ಬಣ್ಣದ ಬದಲಾವಣೆಗಳು ಗಂಡು, ಗಂಡು ಎದುರಾದಾಗ ಗಂಡು-ಹೆಣ್ಣು ಎದುರಾದಾಗ ಅಗುವುದಕ್ಕಿಂತಲೂ ಕ್ಷಿಪ್ರಗತಿಯಲ್ಲಿ ಆಗುತ್ತಿದ್ದುವು.
ಕ್ಷಣಾರ್ಧದೊಳಗೆ ಗಂಡುಗಳು ತಮ್ಮ ದೇಹದ ವಿವಿಧ ಭಾಗಗಳಲ್ಲಿನ ಬಣ್ಣಗಳನ್ನು, ಪ್ರಣಯದ ಸಂದರ್ಭದಲ್ಲಿ ಹಾಗೂ ಉಗ್ರ ಸನ್ನಿವೇಶಗಳಲ್ಲಿ ಬೇರೆ, ಬೇರೆ ರೀತಿಯಲ್ಲಿ ಬದಲಿಸಬಲ್ಲುವು ಎನ್ನುವುದು ಈವರೆಗೂ ತಿಳಿದಿರದ ಸ್ವಾರಸ್ಯಕರ ಸಂಗತಿ. ಇಂತಹ ಬದಲಾವಣೆಗಳಿಗೆ ಕಾರಣವಾದ ಚಯಾಪಚಯ ಹಾಗೂ ತಳಿಬದಲಾವಣೆಗಳ ಬಗ್ಗೆ ಹೆಚ್ಚಿನ ಅಧ್ಯಯನಗಳಿಗೆ ಹಾಗೂ, ವಿಕಾಸದ ಮಟ್ಟಿಗೆ ಈ ಸಾಮರ್ಥ್ಯದ ಪ್ರಾಮುಖ್ಯತೆ ಏನಿರಬಹುದು ಎನ್ನುವ ಬಗ್ಗೆ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. , ಹೀಗೆ ಕ್ಷಣಾರ್ಧದಲ್ಲಿ ದೇಹದ ಬಣ್ಣವನ್ನು ಸಂದರ್ಭಕ್ಕೆ ತಕ್ಕಂತೆ ನಿರ್ದಿಷ್ಟ ರೀತಿಯಲ್ಲಿ ಬದಲಿಸುವ ಸಾಮರ್ಥ್ಯದಿಂದ ಈ ಗಂಡುಗಳ ಸಂತಾನೋತ್ಪತ್ತಿಯ ಸಾಮರ್ಥ್ಯಕ್ಕೇನಾಗುತ್ತದೆ? ಇದರಿಂದ ಹೆಣ್ಣಿಗೆ ಗಂಡು ಇನ್ನಷ್ಟು ಆಕರ್ಷಕವೆನ್ನಿಸುತ್ತದೆಯೋ, ಅಥವಾ ಬೇರೆ ಗಂಡುಗಳಿಗೆ ಹೆಚು ರೌದ್ರವಾಗಿ ತೋರುತ್ತದೆಯೋ? ಈ ನಿಟ್ಟಿನಲ್ಲಿ ಸಂಶೋಧನೆಗೆ ಸಾಕಷ್ಟು ಅವಕಾಶಗಳಿವೆ.
ಹಳ್ಳಿ ಮುಕ್ಕ ಪಟ್ಟಣಕ್ಕೆ ಬಂದ
ಪರಿಸರ ವಿಜ್ಞಾನಿಗಳು ಸಾಮಾನ್ಯವಾಗಿ ದಟ್ಟ ಕಾಡುಗಳೇ ಮೊದಲಾದ ಸಮೃದ್ಧ ಪರಿಸರವನ್ನು ಅಧ್ಯಯನ ಮಾಡುವುದರಲ್ಲಿ ಹೆಗ್ಗಳಿಕೆ ತೋರುತ್ತಾರೆ. ಅವು ಪ್ರಾಚೀನವೂ, ಶುದ್ಧವೂ ಆಗಿದ್ದಷ್ಟೂ ಉತ್ತಮ ಎನ್ನುತ್ತಾರೆ. ಹಿತ್ತಲಲ್ಲಿಯೋ, ರಸ್ತೆ ಬದಿಯ ಗಿಡಮರಗಳನ್ನೋ ಅಥವಾ ತಮ್ಮ ಸುತ್ತ ಓಡಾಡುವ ಹಲ್ಲಿಗಳನ್ನೋ ಅಧ್ಯಯನ ಮಾಡುವವರು ಅಪರೂಪ. ಗಂಭೀರ ವಿಜ್ಞಾನಿಗಳಿಗೆ ತಹ ಅಧ್ಯಯನಗಳು ಯಾಕೋ ಕೀಳೆಂದು ಭಾವಿಸುತ್ತಾರೆ.
ಅನುರಾಧಾ ಹಾಗೂ ಮಾರಿಯಾ ಹಾವುರಾಣಿಗಳ ಮೇಲೆ ಕೈಗೊಂಡಿರುವ ಬಹುತೇಕ ಅಧ್ಯಯನಗಳೆಲ್ಲವೂ ಇಂತಹ ಸ್ಟೀರಿಯೋಟೈಪನ್ನು ಮೀರಿದಂತವು. ಇವು ಪಟ್ಟಣದ ಪರಿಸರದಲ್ಲಿರುವ ಜೀವಿಗಳನ್ನು ಅಧ್ಯಯನ ಮಾಡಿ, ಅವುಗಳ ಗ್ರಾಮೀಣ ಅಥವಾ ಕಾಡಿನ ಬಂಧುಗಳ ಜೊತೆಗೆ ಹೋಲಿಸಿ ನೋಡಿ, ಬಲು ಕ್ಲಿಷ್ಟವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತದೆ. ಪ್ರಾಣೀಗಳು ಕಾಡಿನಿಂದ ನಗರಪ್ರದೇಶಗಳಿಗೆ ವಲಸೆ ಬಂದಾಗ ಹಳ್ಳಿಗಳಿಂದ ನಗರಕ್ಕೆ ಬಂದಾಗ ನಮಗೆ ಎದುರಾಗುವ ಸಮಸ್ಯೆಗಳಂತೆಯೇ ಹಲವು ಸಮಸ್ಯೆಗಳನ್ನು ಎದುರಿಸುತ್ತವೆ. ಹೊಸ ವೈರಿಗಳು, ಹೊಸ ಸಂಪನ್ಮೂಲಗಳನ್ನು ಎದುರಿಡುವ ಸಮಸ್ಯೆಗಳಲ್ಲದೆ, ತಾವಿರುವ ತಾಣದಲ್ಲಿ ಹಾಗೂ ಪರಿಸರದಲ್ಲಿ ಕ್ಷಿಪ್ರಗತಿಯಲ್ಲಿ ಆಗುವ ಬದಲಾವಣೆಗಳಿಂದಾಗಿ ಬದುಕುಳಿಯಲು ಹೊಸ ತಂತ್ರಸಾಧನಗಳೂ ಬೇಕಾಗುತ್ತವೆ. ಇಂತಹ ಸಮಸ್ಯೆಗಳನ್ನು ಹಲ್ಲಿಗಳು ಹೇಗೆ ನಿಭಾಯಿಸುತ್ತಿರಬಹುದು?
ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಅನುರಾಧ ಮತ್ತು ಮಾರಿಯಾ ಹಲ್ಲಿಗಳನ್ನೇ ಆಶ್ರಯಿಸಿದ್ದಾರೆ. ಇದಕ್ಕಾಗಿ ಅವರು ಕರ್ನಾಟಕದ ಕೋಲಾರ ಜಿಲ್ಲೆಯ ಅಂತರಗಂಗೆ ಕಾಡಿನಂತಹ ಅಷ್ಟೇನೂ ಹದಗೆಡದ ಪರಿಸರಗಳಲ್ಲಿ ಅಡ್ಡಾಡಿದ್ದಲ್ಲದೆ, ಬೆಂಗಳೂರಿನಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿರುವಂತಹ ಸಾಕಷ್ಟು ಬದಲಾವಣೆಗಳನ್ನು ಕಂಡ ಪರಿಸರಗಳಲ್ಲಿಯೂ ಓಡಾಡಿದ್ದಾರೆ. ಎರಡೂ ತಾಣಗಳಲ್ಲಿ ಇರುವ ಹಲ್ಲಿಗಳನ್ನು ಕುಣೀಕೆ ಹಾಕಿ ಹಿಡಿದು, ತಮ್ಮ ಪ್ರಯೋಗಾಲಯದಲ್ಲಿ ಕಟ್ಟಿರುವ ಪ್ರತ್ಯೇಕ ತಾಣಗಳಲ್ಲಿ ಇರಿಸುತ್ತಾರೆ. ಪ್ರಯೋಗಗಳ ನಂತರ ಅವುಗಳನ್ನು ಮತ್ತೆ ತಂದಲ್ಲಿಗೇ ಕೊಂಡೊಯ್ದು ಬಿಟ್ಟು ಬಿಡುತ್ತಾರೆ.
ನಾನು ಮೇಲೆ ತಿಳಿಸಿದಂತಹ ಬಣ್ಣದ ಬದಲಾವಣೆಗಳನ್ನು ಇವರೂ ತಮ್ಮ ಅಧ್ಯಯನಗಳ ವೇಳೆ ಗುರುತಿಸಿದರು. ಪಟ್ಟಣದ ಗಂಡುಗಳು ಹಠಾತ್ತಾಗಿ ಅಲ್ಲದೆ ನಿಧಾನವಾಗಿ ಬಣ್ಣ ಬದಲಿಸಿಕೊಂಡವು. ಇನ್ನೊಂದು ಅಧ್ಯಯನದಲ್ಲಿ, ಸುರಕ್ಷಿತ ನೆಲೆಗಳನ್ನು ಆಯ್ದುಕೊಳ್ಳುವ ವಿಷಯದಲ್ಲಿ ಪಟ್ಟಣದ ಗಂಡುಗಳು ಹಳ್ಳಿಯ ಗಂಡುಗಳಿಗಿಂತಲೂ ಬೇಗನೆ ಕಲಿಯುತ್ತವೆ ಎಂದು ಕಂಡಿದ್ದಾರೆ. ಮೂರನೆಯ ಇನ್ನೊಂದು ಅಧ್ಯಯನದಲ್ಲಿ, ಪಟ್ಟಣದ ಹಲ್ಲಿಗಳು ತಮ್ಮ ಹೊಸ ಪರಿಸರಕ್ಕೆ ಹೊಂದಿಕೊಳ್ಳುವಂತೆ ನಡವಳೀಕೆಯನ್ನು ಬೇಗನೆ ಬದಲಿಸಿಕೊ ಳ್ಳುತ್ತವೆ ಎಂದು ತೋರಿಸಿಕೊಟ್ಟಿದ್ದಾರೆ. ಅವು ಹೆಚ್ಚೆಚ್ಚು ಅಪಾಯಗಳನ್ನು ಎದುರಿಸಬಲ್ಲವು. ಮನುಷ್ಯರಿಗೆ ಹೆದರುವುದಿಲ್ಲ. ಹಳ್ಳಿಗಳ ಹಲ್ಲಿಗಳು ಆಯುವುದಕ್ಕಿಂತಲೂ ಹೆಚ್ಚು ಸುರಕ್ಷಿತವಾದ ತಾಣಗಳಲ್ಲಿ ಏರಿ ನಿಲ್ಲುತ್ತವೆ. ಈ ಫಲಿತಾಂಶಗಳು ಇನ್ನಷ್ಟು ಹೊಸ ಪ್ರಶ್ನೆಗಳನ್ನು ಮುಂದಿಟ್ಟಿವೆ. ನಗರೀಕರಣದಿಂದ ಈ ಬದಲಾವಣೆಗಳು ಉಂಟಾದವೇ? ಇವು ನಿಜಕ್ಕೂ ಅನುಕೂಲಿಯಾದ ಹೊಂದಾಣಿಕೆಯೇ? ಈ ನಡವಳಿಕೆಗಳು ಮರಳಿ ಮೊದಲಿನಂತಾಗಬಲ್ಲುವೇ? ಇತ್ಯಾದಿ.
ನಗರಗಳು ಬೆಳೆಯುತ್ತಿರುವ ವೇಗದಿಂದಾಗಿ ಪ್ರಪಂಚದೆಲ್ಲೆಡೆ ಪರಿಸರಗಳು ಛಿದ್ರವಾಗಿ, ನಾಶವಾಗುತ್ತಿರುವುದನ್ನು ಗಮನಿಸಿದರೆ, ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ವಲಸೆ ಬಂದಿರುವ ಹಲವಾರು ಜೀವಿಗಳಲ್ಲಿನ ಪರಿವರ್ತನೆಗಳನ್ನು ಅಧ್ಯಯನ ಮಾಡಬೇಕಾಗಿದೆ ಎಂಬ ಸುಳಿವನ್ನು ಅನುರಾಧಾ ಹಾಗೂ ಮಾರಿಯಾ ಅವರ ಅಧ್ಯಯನಗಳು ಕೊಡುತ್ತಿವೆ. ಇಂತಹ ಅಧ್ಯಯನಗಳಿಂದ ಪಡದ ಅರಿವು ಈ ಪ್ರಾಣಿಗಳ ಒಳಿತಿಗಷ್ಟೆ ಅಲ್ಲ ಬಹುಶಃ ನಮ್ಮ ಒಳಿತಿಗೂ ಅವಶ್ಯಕವಾಗಬಹುದು.
“ನಾವು ಹೇಳುವ ಕಥೆಗಳೆಲ್ಲವೂ, ಈ ಹಲ್ಲಿಗಳನ್ನು ನಾವು ದಶಕಗಳ ಕಾಲ ಅಧ್ಯಯನ ಮಾಡಿದ್ದರೂ, ಹಿಡಿಯಲು ಹೋದಾಗ ಎಷ್ಟು ಸರಾಗವಾಗಿ ನಮ್ಮಿಂದ ತಪ್ಪಿಸಿಕೊಂಡು ಓಡಿಬಿಡುತ್ತವೆ ಎನ್ನುವುದರ ಸುತ್ತಲೇ ಇರುತ್ತದೆ. ಈಗಲೂ ನಾವು ಒಂದಿಷ್ಟು ಅಲುಗಿದರೂ ಸಾಕು, ಅವು ನಮ್ಮನ್ನು ಸೋಲಿಸಿಬಿಡುತ್ತವೆ. ಈ ಗಂಡುಗಳ ಕಡಿತ ನಿಮ್ಮ ಸ್ಥಾನ ಏನೆಂದು ತೋರಿಸುವಷ್ಟು ಹರಿತ.” ಎನ್ನುತ್ತಾರೆ ಮಾರಿಯಾ ಥಾಕರ್.
“ಇಷ್ಟೆಲ್ಲ ಸವಾಲುಗಳು ಇದ್ದರೂ, ಕಾಡಿನ ಪ್ರೇಮ ಹಾಗೂ ವನ್ಯಜೀವಿಗಳ ನಡವಳೀಕೆಗಳನ್ನು ಅರ್ಥ ಮಾಡಿಕೊಳ್ಳುವ ಹಂಬಲ ನನಗೆ ಡಾಕ್ಟರೇಟು ಅಧ್ಯಯನದಲ್ಲಿ ನೆರವಾಗಿದೆ. ಸಾಮೋಫೈಲಸ್ ಹಲ್ಲಿಯ ಸುಂದರ ಬಣ್ಣದಿಂದಾಗಿ ಅದರ ಬಗ್ಗೆ ನನಗೆ ಸ್ವಲ್ಪ ಒಲವು ಜಾಸ್ತಿಯೇ. ಚಿತ್ರಕಲೆ ನನ್ನ ಹವ್ಯಾಸವ ಆಗಿರುವುದರಿಂದ ಬಣ್ಣಗಳು ಸಾಕಷ್ಟು ಪ್ರೇರಣೆ ನೀಡುತ್ತವೆ. ಬೆರಗುಗೊಳಿಸುತ್ತವೆ.” ಎನ್ನುತ್ತಾರೆ ಅನುರಾಧ.
ವಿಜ್ಞಾನಿ ಎಂದರೆ ನರೆತಗೂದಲಿನ, ಗಡ್ಡಧಾರಿ, ಬಿಳೀ ದಿರಿಸಿನ ಪುರುಷನ ಚಿತ್ರವನ್ನು ಮರೆತು ಕಾಡಿನಲ್ಲಿ ಚಿಗರೆಯಂತೆ ಓಡುವ ಯುವತಿಯ ಚಿತ್ರವನ್ನು ಕಲ್ಪಿಸಿಕೊಳ್ಳಬೇಕಾದ ಸಮಯ ಬಂದಿದೆ.
ಇದು ಇಂದಿನ ಜಾಣ ಅರಿಮೆ. ಆಂಗ್ಲಮೂಲ: ಪ್ರೊಫೆಸರ್ ರಾಘವೇಂದ್ರ ಗದಗಕರ್. ಕನ್ನಡಾನುವಾಧ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್. ಮಂಜುನಾಥ. ಮೂಲ ಪಾಠವನ್ನು ದಿ ವೈರ್ ಸೈನ್ಸ್ ಪತ್ರಿಕೆ ಪ್ರಕಟಿಸಿತ್ತು.