Representative image: Panos Sakalakis/Unsplash.
The following text, in Kannada, was translated from the English original, by Raghavendra Gadagkar, entitled ‘More Fun Than Fun: Where the Worlds of Science and Magic Collide’ and published on The Wire Science on October 14, 2020.
Kollegala Sharma kindly provided the translated version. It has also been rendered as a podcast by J.R. Manjunatha, available to listen below. Sharma and his team will be converting editions of Gadagkar’s column as podcasts, as part of an audio series called ‘JanaArime’. Sharma’s popular ‘Janasuddi’ podcast series is available to listen here.
Sharma is a chief scientist and Manjunatha is a technical officer, both at the CSIR-Central Food Technological Research Institute, Mysuru.
§
ವಿಸ್ಮಯಕ್ಕಿಂತ ವಿಸ್ಮಯ
ವಿಜ್ಞಾನ ಮತ್ತು ಮ್ಯಾಜಿಕ್ ಮೇಳೈಸಿದಾಗ…?
ರಾಘವೇಂದ್ರ ಗದಗಕರ್
ಇತ್ತೀಚೆಗೆ ೨೦೧೯ರಲ್ಲಿ ಪ್ರಕಟವಾದ ಗುಸ್ತಾಫ್ ಕ್ಯುಹ್ನ್ (Gustav Kuhn) ಬರೆದ ಎಕ್ಸ್ಪೀರಿಯೆಂಸಿಂಗ್ ದಿ ಇಂಪಾಸಿಬಲ್: ದಿ ಸೈನ್ಸ್ ಆಫ್ ಮ್ಯಾಜಿಕ್ (Experiencing the Impossible: The Science of Magic) ಪುಸ್ತಕವನ್ನು ಓದಿ ಖುಷಿ ಪಟ್ಟೆ. ಗುಸ್ತಾಫ್ ಕ್ಯುಹ್ನ್ ಒಬ್ಬ ಅದ್ಭುತ ಮಾಂತ್ರಿಕ ಹಾಗೂ ಅದ್ಭುತ ವಿಜ್ಞಾನಿ ಆಗಿಲ್ಲದಿದ್ದರೆ ಬಹುಶಃ ನಾನು ಈ ಪುಸ್ತಕವನ್ನು ಓದುತ್ತಲೇ ಇರಲಿಲ್ಲ. ಲಂಡನ್ ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾದ ಗೋಲ್ಡ್‌ಸ್ಮಿತ್ ಕಾಲೇಜಿನಲ್ಲಿ ರೀಡರ್ ಆಗಿರುವ ಕ್ಯುಹ್ನ್ ಈ ಪುಸ್ತಕವನ್ನಲ್ಲದೆ ಮ್ಯಾಜಿಕ್ಕಿನ ನರವಿಜ್ಞಾನ ಹಾಗೂ ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ. ಸುಮಾರು ೬೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.
ಮ್ಯಾಜಿಕ್ಕಿನ ಮೋಜನ್ನು ಅನುಭವಿಸುತ್ತಿರುವವರನ್ನು ಎಫೆಂಆರ್‌ಐ ಯಂತ್ರದೊಳಗೆ ಕಳಿಸಿದ ಮೊದಲಿಗರು ಇವರು ಹೀಗೆ ಮ್ಯಾಜಿಕ್ಕನ್ನು ಅನುಭವಿಸುವಾಗ ಇವರ ಮಿದುಳಿನಲ್ಲಿ ವೈರುಧ್ಯಗಳನ್ನು ಗಮನಿಸಿ, ನಿರ್ವಹಿಸುವ ಭಾಗಗಳಷ್ಟೆ ವಿಶೇಷವಾಗಿ ಬೆಳಗಿದ್ದುವು. ಮ್ಯಾಜಿಕ್ ಎಂದರೆ ನಾವು ಸಾಧ್ಯ ಎಂದು ಭಾವಿಸಿದ್ದರ ಹಾಗೂ ನಾವು ಕಂಡ ವಿದ್ಯಮಾನಗಳ ನಡುವಣ ಸಂದಿಗ್ಧತೆ ಎಂದು ಕ್ಯುಹ್ನ್ ತನ್ನ ಪುಸ್ತಕದಲ್ಲಿ ವಿವರಿಸಿದ್ದಾನೆ. ಕಣ್ಣುಗಳ ಚಲನೆಯನ್ನು ಅನುಸರಿಸುವ ತಂತ್ರಜ್ಞಾನವನ್ನು ಬಳಸಿಕೊಂಡು ಮ್ಯಾಜಿಕ್ಕಿನಿಂದ ಪರವಶರಾದ ವ್ಯಕ್ತಿಗಳನ್ನು ಅಧ್ಯಯನ ಮಾಡಿದ್ದಾರೆ. ಒಬ್ಬ ಗಾರುಡಿಗರಾಗಿ ಇವರ ಖ್ಯಾತಿಯೇನೂ ಕಡಿಮೆ ಅಲ್ಲ. ಈತ ಸೈನ್ಸ್ ಆಫ್ ಮ್ಯಾಜಿಕ್ ಅಸೋಸಿಯೇಷನ್ ಎನ್ನುವ ಸಂಘದ ಅಧ್ಯಕ್ಷ, ಪ್ರಾಯೋಗಿಕ ಮಾನಸಿಕ ವಿಜ್ಞಾನ ಸಂಘದ ಹಾಗೂ ಮ್ಯಾಜಿಕ್ ಸರ್ಕಲ್ ಎನ್ನುವ ಸಂಘಟನೆಗಳ ಸದಸ್ಯ. ಗುಸ್ತಾಫ್ ಹದಿಮೂರನೇಯ ವಯಸ್ಸಿನವನಾಗಿದ್ದಾಗಲೇ ಮ್ಯಾಜಿಕ್ಕಿನ ಮೋಹಕ್ಕೆ ಸಿಲುಕಿದನಂತೆ. ಆಗ ಅವನ ಗೆಳೆಯನೊಬ್ಬ ಇವನ ಕಿವಿಯ ಹಿಂಬದಿಯಿಂದ ಮೊಟ್ಟೆಯೊಂದು ಪ್ರತ್ಯಕ್ಷವಾಗುವಂತೆ ಮಾಡಿದ್ದನಂತೆ. ಅಂದಿನಿಂದ ಮ್ಯಾಜಿಕ್ಕಿನಿಂದ ಬೇರೆ ಕಡೆಗೆ ಈತ ಹೊರಳಿಲ್ಲ.
ವಿಜ್ಞಾನ ಮೋಜೆನ್ನಿಸಬೇಕು ನಿಜ. ಕ್ಯುಹ್ನ್ ಮತ್ತು ಅವನ ವಿದ್ಯಾರ್ಥಿಗಳೋ ಸಾಕಷ್ಟು ಮೋಜು ಮಾಡುತ್ತಿದ್ದಾರೆ ಅನಿಸುತ್ತದೆ. ನಿಜ. ಉದ್ಯೋಗದ ಜೊತೆಗೆ ನಿಮ್ಮ ಹವ್ಯಾಸವನ್ನೂ ಕೂಡಿಸಿದಾಗ ಹೀಗಾಗಲೇಬೇಕು. ಅವರ ವಿದ್ಯಾರ್ಥಿಗಳು ಮಕ್ಕಳಿಗೆ, ಸಹಪಾಠಿಗಳಿಗೆ ಹಾಗೂ ಸಾರ್ವಜನಿಕರಿಗೆ ಮ್ಯಾಜಿಕ್ ಪ್ರದರ್ಶಿಸುವಾಗಲೇ, ತಮ್ಮ ವೈಜ್ಞಾನಿಕ ಪ್ರಬಂಧಗಳಿಗೆ ಮಾಹಿತಿಯನ್ನೂ ಸಂಗ್ರಹಿಸುತ್ತಾರೆ. ಇವರ ಇತ್ತೀಚಿನ ಒಂದು ಸಂಶೋಧನಾ ಪ್ರಬಂಧದಲ್ಲಿ ನಾನು ಓದಿದ್ದನ್ನು ಚುಟುಕಾಗಿ ಹೇಳುತ್ತೇನೆ ಕೇಳಿ. “ಗೋಲ್ಡ್ ಸ್ಮಿತ್ ವಿಶ್ವವಿದ್ಯಾನಿಲಯದ ಕ್ಯಾಂಪಸಿನ ಅರವತ್ತು ಮಂದಿ ಈ ಪರೀಕ್ಷೆಯಲ್ಲಿ ಪಾಲ್ಗೊಂಡರು. ಪರೀಕ್ಷಕ ವಿವಿಯ ಕೆಫೆಟೀರಿಯಾದಲ್ಲಿ ಕುಳಿತಿದ್ದ. ಅವನ ಮುಂದಿದ್ದ ಮೇಜಿನ ಮೇಲೆ ಒಂದು ಕಟ್ಟು ಇಸ್ಪೀಟು ಎಲೆಗಳಿದ್ದುವು. ಪ್ರಯೋಗದಲ್ಲಿ ಭಾಗವಹಿಸಿದವರು ಕಟ್ಟಿನಿಂದ ಒಂದಷ್ಟು ಎಲೆ ಎತ್ತಿ ಪಕ್ಕದಲ್ಲಿದ್ದ ಎಲೆಯ ರಾಶಿಯ ಅಡಿಯಲ್ಲಿ ಇಡಬೇಕಿತ್ತು. ಅಷ್ಟೆ.”
ಇಂತಹ ಪ್ರಯೋಗ ಮೋಜಿನದಲ್ಲ ಗಂಭೀರ ಸಂಶೋಧನೆ ಎಂದರೆ ನಂಬಲಾದೀತೇ? ಆದರೆ ಇಂತಹ ಪರೀಕ್ಷೆಗಳ ಮೂಲಕ ಕ್ಯುಹ್ನ್ ಮತ್ತು ಅವರ ವಿದ್ಯಾರ್ಥಿಗಳು ಮ್ಯಾಜಿಕ್ಕಿನ ಮನೋವಿಜ್ಞಾನ ಹಾಗೂ ಮನೋವಿಜ್ಞಾನದ ಮ್ಯಾಜಿಕ್ಕುಗಳ ಕುರಿತು ಹಲವು ಸಂಗತಿಗಳನ್ನು ಪತ್ತೆ ಮಾಡಿದ್ದಾರೆ. ಇಂತಹ ಸಂಶೋಧನೆಗಳು, ಗಾರುಡಿಗರು ತಮ್ಮ ಮ್ಯಾಜಿಕ್ ತಂತ್ರಗಳನ್ನು ಇನ್ನಷ್ಟು ಸುಧಾರಿಸಲು ನೆರವಾಗುವುದಲ್ಲದೆ, ಈ ತಂತ್ರಗಳು ಇನ್ನಷ್ಟು ನಂಬಲರ್ಹವಾಗುವಂತೆ ಮಾಡಿ ಹೆಚ್ಚೆಚ್ಚು ಜನರನ್ನು ತಲುಪುತ್ತವೆ. ಇನ್ನೊಂದು ಕಡೆ, ಈ ಸಂಶೋಧನೆಗಳು ನಮ್ಮ ಗ್ರಹಿಕೆ ಹಾಗೂ ಸಂವೇನದೆಗಳ ದೋಷಗಳನ್ನೂ, ಅವುಗಳಿಗೆ ಇರುವ ಮಿತಿಗಳನ್ನೂ ತಿಳಿಯಲು ನೆರವಾಗುತ್ತವೆ. ಇದು ನಮ್ಮ, ಅಂದರೆ ಮನುಷ್ಯರ ಮನಸ್ಸಿನ ವಿಕಾಸ ಹೇಗೆ ಆಯಿತು ಎನ್ನುವುದನ್ನು ಅರಿಯಲು ಹಾದಿ
ಮಾಡಿಕೊಡುತ್ತದೆ. ಈ ರೀತಿಯ ವಿಜ್ಞಾನ ಹಾಗೂ, ಮನರಂಜನೆಯ ಉದ್ಯಮಗಳ ನಡುವಿನ ಈ ಕೊಡು-ಕೊಳ್ಳುವಿಕೆ, ವಿಜ್ಞಾನದ ಪರಿಧಿಯನ್ನು ವಿಸ್ತರಿಸುವುದಷ್ಟೆ ಅಲ್ಲ, ಸರ್ವೇ ಜನಾಃ ಸಂತುಷ್ಟೋ ಭವತು ಎನ್ನುತ್ತಿದೆ ಎನ್ನೋಣವೇ?
ಇಂತಹ ಅಧ್ಯಯನಗಳು ಕೇವಲ ಮನುಷ್ಯರಿಗಷ್ಟೆ ಸೀಮಿತವಾಗಬಾರದು. ಮ್ಯಾಜಿಕ್ಕನ್ನು ಅರಿತುಕೊಳ್ಳುವಲ್ಲಿ ನರವಿಜ್ಞಾನ ಹಾಗೂ ಮನೋವಿಜ್ಞಾನಗಳ ಪಾತ್ರವೇನು ಎಂಬುದನ್ನು ಕ್ಯುಹ್ನ್ ಪುಸ್ತಕದಲ್ಲಿ ಅದ್ಭುತವಾಗಿ ವಿವರಿಸಿಲಾಗಿದೆ. ಇದು ಮ್ಯಾಜಿಕ್ ಎನ್ನುವುದು ಕೇವಲ ಮನುಷ್ಯರಿಗಷ್ಟೆ ಅಲ್ಲ ಎನ್ನುವುದನ್ನೂ ಸ್ಪಷ್ಟಪಡಿಸುತ್ತದೆ. ಅಷ್ಟೇ ಅಲ್ಲ. ಪ್ರಾಣಿಗಳ ಗ್ರಹಿಕೆ ಹಾಗೂ ಸಂವೇದನೆಗಳ ದೋಷಗಳನ್ನೂ, ಮಿತಿಗಳನ್ನೂ ಅರಿತುಕೊಳ್ಳಲು ಮ್ಯಾಜಿಕ್ಕನ್ನು ಬಳಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದನ್ನು ತಿಳಿದು ಇನ್ನೂ ಖುಷಿ ಆಗುತ್ತಿದೆ.
ಜೋಸ್ ಅಹೋನೆನ್ ಚಿತ್ರಿಸಿರುವ ಮ್ಯಾಜಿಕ್ ಫಾರ್ ಡಾಗ್ಸ್ ಎನ್ನುವ ವೀಡಿಯೋ ಇದೆ. ಇಂಟರ್ನೆಟ್ಟಿನಲ್ಲಿ ಸಿಗುವ ಇದು ಮನರಂಜನೆಯ ದೃಷ್ಟಿಯಿಂದ ನೋಡಿದಾಗ ಮ್ಯಾಜಿಕ್ ಎನ್ನುವುದು ಕೇವಲ ನೀರೊಳಗೆ ಮುಳುಗಿದ ಮಂಜಿನ ತುದಿಯಷ್ಟೆ ಕಾಣುವಂತೆ ತೋರುತ್ತದೆ. ಆದರೆ ವಿಜ್ಞಾನದ ದೃಷ್ಟಿಯಿಂದ, ನಾವು ಮ್ಯಾಜಿಕ್ಕನ್ನು ನೋಡಿ ಖುಷಿ ಪಡುವಂತೆಯೇ ಅವು ಕೂಡ ಖುಷಿ ಪಡುತ್ತವೆಯೋ ಎಂದು ತಿಳಿಯಲು ಸಂಶೋಧಕರು ಈಗ ಹಕ್ಕಿಗಳು, ನಾಯಿಗಳು ಮತ್ತು ಚಿಂಪಾಂಜಿಗಳಿಗೂ ಮ್ಯಾಜಿಕ್ ಮಾಡಿ ತೋರಿಸುತ್ತಿದ್ದಾರೆ. ಪ್ರಾಣಿಗಳ ಈ ಮೂಕ ಸಂವೇದನೆಗಳನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ… ಆದರೆ ಪ್ರಾಣಿನಡವಳಿಕೆ ಅಧ್ಯಯನಗಳಲ್ಲಿ ತರಬೇತಿ ಪಡೆದ ವಿಜ್ಞಾನಿಗಳಿಗೆ ಇದು ದೊಡ್ಡ ಸವಾಲೇನಲ್ಲ!
ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನಿಗಳ ತಂಡವೊಂದು ಪ್ರಾಣಿಗಳ ನಡವಳಿಕೆಯ ಅಧ್ಯಯನಗಳಲ್ಲಿ ಮ್ಯಾಜಿಕ್ ಎಷ್ಟು ಉಪಯೋಗಿ ಎನ್ನುವುದರತ್ತ ಎಲ್ಲರ ಗಮನ ಸೆಳೆದಿದೆ. ವಾಸ್ತವವಾಗಿ, ಪ್ರಾಣಿಗಳ ಮನಸ್ಸನ್ನು ವೈಜ್ಞಾನಿಕವಾಗಿ ಅರಿತುಕೊಳ್ಳಲು ಮ್ಯಾಜಿಕ್ಕಿನಂತೆಯೇ ಕಣ್ಕಟ್ಟು ಮಾಡುವುದು ಎಥಾಲಜಿ ಅಥವಾ ಪ್ರಾಣಿನಡವಳಿಕೆ ವಿಜ್ಙಾನ ಆರಂಭವಾದಾಗಿನಿಂದಲೂ ನಡೆದು ಬಂದ ಅಭ್ಯಾಸ. ಚಾರ್ಲ್ಸ್ ಡಾರ್ವಿನ್ “ಅಪ್ರತಿಮ ಅವಲೋಕನ” ಮಾಡುತ್ತಾನೆಂದು ಹೇಳಿದ ಫ್ರೆಂಚ್ ಪ್ರಕೃತಿ ವಿಜ್ಞಾನಿ ಜೀನ್ ಹೆನ್ರಿ ಫೇಬರ್ (1823-1915) ಇದಕ್ಕೆ ಮೊತ್ತ ಮೊದಲ ಉದಾಹರಣೆ.
ಫೇಬರ್ ಅಧ್ಯಯನ ಮಾಡಿದ ಹಲವಾರು ಕೀಟಗಳಲ್ಲಿ ಮೇಸನ್ ವಾಸ್ಪ್ ಎನ್ನುವ ಕಣಜವೂ ಒಂದು. ಇದು ತಾನು, ಮಣ್ಣಿನಿಂದ ಕಟ್ಟಿದ ಗೂಡಿನೊಳಗೆ ಮರಿಗಳಿಗಳಿಗೆ ಆಹಾರವಾಗಲೆಂದು, ತಾನೇ ಕುಟುಕಿ ನಿಶ್ಚೇತನಗೊಳಿಸಿದ ಜೇಡಗಳನ್ನು ತುಂಬಿ, ಮೊಟ್ಟೆಯಿಟ್ಟು ಹಾರಿ ಹೋಗುತ್ತದೆ. ಫೇಬರ್ ಈ ಕಣಜಕ್ಕೆ ಒಂದು ಮೋಸ ಮಾಡಿದ. ಕಣಜ ಗೂಡಿನೊಳಗೆ ಜೇಡವನ್ನು ತಂದಿಟ್ಟಂತೆಲ್ಲ, ಒಂದೊಂದೇ ಜೇಡವನ್ನು ಹೊರಗೆ ತೆಗೆದು ಹಾಕಿದ. ಅಚ್ಚರಿ ಎಂದರೆ ಆ ಕಣಜಕ್ಕೆ ಇದು ಗೊತ್ತಾಗಲೇ ಇಲ್ಲ! ಬದಲಿಗೆ, ಅದು ಗೂಡಿಗೆ ಜೇಡಗಳನ್ನು ಹೊತ್ತು ತರುತ್ತಲೇ ಇತ್ತು. ಹೀಗೆ ಎರಡು ದಿನಗಳ ಪರಿಶ್ರಮದ ನಂತರ ಅದು ಖಾಲಿ ಗೂಡನ್ನು ಭದ್ರವಾಗಿ ಮುಚ್ಚಿಬಿಟ್ಟಿತು! ಕೀಟಗಳಿಗೆ ಕೆಲವು ನಡವಳಿಕೆಗಳು ಹುಟ್ಟುಗುಣ. ಇನ್ನು ಕೆಲವನ್ನು ಅವು ಕಲಿತು ಬೇಕೆಂದಾಗ ಬದಲಾಯಿಸಿಕೊಳ್ಳಬಲ್ಲವು. ಕೀಟಗಳ ಯಾವ ನಡತೆ ಎಂತಹದ್ದು ಎನ್ನುವುದನ್ನು ಇಂತಹ ಸರಳ ಅಧ್ಯಯನಗಳು ತಿಳಿಸಬಲ್ಲವು.
ಹಕ್ಕಿಗಳಲ್ಲಿ ನಡವಳಿಕೆಗಳು ಅಚ್ಚೊತ್ತುವ ಇಂಪ್ರಿಂಟಿಂಗ್ ಎನ್ನುವ ವಿದ್ಯಮಾನವನ್ನು ಜರ್ಮನ್ ನಡವಳಿಕೆ ವಿಜ್ಞಾನಿ ಕಾನ್ರಾಡ್ ಲೋರೆಂಜ್ ಪತ್ತೆ ಮಾಡಿದ್ದು ಹೀಗೆ. ಆತ ಬಾತುಕೋಳಿ ಮರಿಗಳಿಗೆ ಅಮ್ಮನಂತೆ ನಟಿಸಿದ್ದ!. ಅವು ಬೆಳೆಯುವ ಹಂತದಲ್ಲಿ ಒಂದು ನಿರ್ದಿಷ್ಟ ಕ್ಷಣದಲ್ಲಿ ಅಮ್ಮನ ಬದಲಿಗೆ ಲೋರೆಂಜನೇ ಎದುರಿಗೆ ಕಂಡದ್ದರಿಂದ ಅವು ಅವನೇ ಅಮ್ಮನೆಂಬ ಭಾವ ಅವುಗಳಲ್ಲಿ ಅಚ್ಚಾಗಿಬಿಟ್ಟಿತ್ತು. ಅನಂತರ ಬೆಳೆದ ಮೇಲೆ ಅವನನ್ನು ತಮ್ಮದೇ ಬಳಗದವನೆಂದುಕೊಂಡು ಪ್ರೇಮಿಸಲೂ ಪ್ರಯತ್ನಿಸಿದ್ದುವು. ಇಲ್ಲಿ ಬಾತುಮರಿಗಳು ಅವನನ್ನು ತಮ್ಮವನೆಂದು ಗುರುತಿಸಿದ್ದು ಕಲಿಕೆ. ಹುಟ್ಟು ಗುಣವಲ್ಲ. ಡಚ್ ವಿಜ್ಞಾನಿ ನಿಕೊ ಟಿಂಬರ್ಗನ್ ಕೂಡ ಹಕ್ಕಿಗಳ ಜೊತೆಗೆ ಹೀಗೆ ಆಟವಾಡಿದ್ದ. ಈತ ಮೊಟ್ಟೆಗೆ ಕಾವು ಕೊಡುತ್ತಿದ್ದ ಬಾತುಕೋಳಿಗೆ ಎರಡು ಮೊಟ್ಟೆಗಳನ್ನು ಕೊಟ್ಟ. ಒಂದು ಅದರದ್ದೇ ಮೊಟ್ಟೆ, ಇನ್ನೊಂದು ಮರದಿಂದ ಮಾಡಿದ ಮೊಟ್ಟೆಯ ಆಕಾರ. ಅಚ್ಚರಿ ಎಂದರೆ ಅದು ದೊಡ್ಡದಾದ ಮರದ ಮೊಟ್ಟೆ ಯನ್ನೇ ಆಯ್ದುಕೊಂಡಿತ್ತು!.
ಪ್ರಾಣಿಗಳ ನಡವಳಿಕೆ ಕೆಲವೊಮ್ಮೆ ಯಾಂತ್ರಿವಾಗಿಯೂ, ಪೆದ್ದುಪೆದ್ದಾಗಿಯೂ ಇರುತ್ತದೆ ಎಂದೂ, ಕೆಲವೊಮ್ಮೆ ಬಲು ಚತುರವಾಗಿಯೂ ಕಾಣುತ್ತವೆಂದು ನಮಗೆ ಈಗ ಅರ್ಥವಾಗಿದೆ. ಯಾವ ನಡವಳಿಕೆಗಳು ಯಾವಾಗ ತೋರುತ್ತವೆಂಬುದು ಪ್ರಾಣಿಗಳ ಅವಶ್ಯಕತೆಗಳನ್ನು ಅವಲಂಬಿಸಿದೆ. ಸುದೀರ್ಘವಾದ ಅವುಗಳ ವಿಕಾಸದ ಅವಧಿಯಲ್ಲಿ ಈ ಕಣಜಗಳಾಗಲಿ, ಬಾತುಗಳಾಗಲಿ ಫೇಬರ್, ಕಾನ್ರಾಡ್ ಲೋರೆಂಜ್ ಅಥವಾ ನಿಕೋ ಟಿಂಬರ್ಗನ್ನರಂತಹ ಮೋಸಗಾರರನ್ನು ಕಂಡಿರಲಿಕ್ಕಿಲ್ಲ! ಹೀಗಾಗಿಯೇ ಬಹುಶಃ ಅವು ಇಂತಹ ಮೋಸಗಳಿಂದ ತಪ್ಪಿಸಿಕೊಳ್ಳುವ ಉಪಾಯಗಳನ್ನೂ ಕಲಿಯಲಿಲ್ಲ!
ಅವಿರತವಾಗಿ ಬದಲಾಗುವ ಪರಿಸರದಲ್ಲಿ ಬಾಳುವಾಗ ಇವು ಕೂಡ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುವುದನ್ನು ಕಲಿಯುತ್ತವೆ. ಅಂತಹ ಸಂದರ್ಭಗಳಲ್ಲಿ ಅವು ಬುದ್ಧಿವಂತವೆಂದು ತೋರಬಹುದು. ಉದಾಹರಣೆಗೆ, ಜೇನ್ನೊಣಗಳು ಸೂರ್ಯನ ಸ್ಥಾನವನ್ನು ಗಮನಿಸಿ ತಾವಿರುವ ನೆಲೆಯನ್ನು ಗುರುತಿಸಿಬಲ್ಲವು. ಮೋಡ ಕವಿದ ದಿನಗಳಲ್ಲಿ ಆಗುವಂತೆ ಸೂರ್ಯ ಕಾಣದಂತೆ ಮರೆಯಾದರೆ, ಅವು ಬೆಳಕಿನ ಧ್ರುವೀಕರಣದ ದಿಕ್ಕನ್ನು ಬಳಸಿ ಸೂರ್ಯನೆಲ್ಲಿದ್ದಾನೆಂದು ತಿಳಿಯುತ್ತವೆ. ಇದೂ ಅಸಾಧ್ಯವಾದಲ್ಲಿ ಅವು ಸ್ಥಾನಸೂಚಿ ವಸ್ತುಗಳನ್ನು ದಿಕ್ಸೂಚಿಯನ್ನಾಗಿಸಿಕೊಂಡು, ಆ ಕ್ಷಣದಲ್ಲಿ ಸೂರ್ಯನೆಲ್ಲಿರಬಹುದೆಂದು ಗಣಿಸುತ್ತವೆ.
ಜೇನ್ನೊಣಗಳ ನೃತ್ಯ ಭಾಷೆಯನ್ನು ಪತ್ತೆ ಮಾಡಿದ ಮತ್ತೊಬ್ಬ ಜರ್ಮನ್ ಪ್ರಾಣಿವಿಜ್ಞಾನಿ ಕಾರ್ಲ್ ಫಾನ್ ಫ್ರಿಶ್ ಸೂರ್ಯನಿದ್ದರೂ, ಅದರ ಸ್ಥಾನ ಯಾವ ದಿಕ್ಕನ್ನೂ ಸೂಚಿಸದಿದ್ದಾಗ ಜೇನ್ನೊಣಗಳು ಏನು ಮಾಡುತ್ತವೆ? ಏನಾಗಬಹುದು? ಎನ್ನುವುದು ಇವನ ಕುತೂಹಲವಾಗಿತ್ತು. ಉಷ್ಣವಲಯದಲ್ಲಿ ಸೂರ್ಯ ನಡು ನೆತ್ತಿಯ ಮೇಲೆ ಇರುವಾಗ ಹೀಗಾಗುತ್ತದೆ. ಹೀಗಾಗಿ ಇವನು ತನ್ನ ವಿದ್ಯಾರ್ಥಿ ಮಾರ್ಟಿನ್ ಲಿಂಡಾಯರ ನನ್ನು ಪ್ರಯೋಗ ಮಾಡಲೆಂದೇ ಶ್ರೀಲಂಕಾಗೆ ಕಳಿಸಿದ. ಲಿಂಡಾಯರ್ ಅಲ್ಲಿ ಪತ್ತೆ ಮಾಡಿದ್ದನ್ನು ಅವನ ಮಾತಿನಲ್ಲಿಯೇ ಕೇಳಿ.
“ಸೂರ್ಯ ನೆತ್ತಿಯ ಮೇಲೆ ಏರುತ್ತಿದ್ದಂತೆಯೇ, ಅದುವರೆಗೂ ಹಾರಾಡುತ್ತಿದ್ದ ಜೇನ್ನೊಣಗಳು ಇದ್ದಕ್ಕಿದ್ದ ಹಾಗೆ ಗೂಡಿನಲ್ಲಿಯೇ ಉಳಿದುವು. ಇದು ನನಗೆ ಅಚ್ಚರಿಯ ವಿಷಯ. ಹಾದಿ ತಪ್ಪುವಂತಹ ಕಸಿವಿಸಿಯಿಂದ ತಪ್ಪಿಸಿಕೊಳ್ಳಲು ಅವುಗಳಿಗೆ ಇದು ಬಲು ಸರಳ ಉಪಾಯವಾಗಿತ್ತು.”
ಹಾಂ. ಲೋರೆಂಜ್, ಫ್ರಿಶ್ ಮತ್ತು ಟಿಂಬರ್ಗನ್ ಮೂವರೂ ೧೯೭೩ ರಲ್ಲಿ ತಮ್ಮ ಶೋಧಗಳಿಗಾಗಿ ನೋಬೆಲ್ ಬಹುಮಾನವನ್ನು ಗಳಿಸಿದರು ಎನ್ನುವುದನ್ನು ಇಲ್ಲಿ ಹೇಳಲೇ ಬೇಕು.
ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ಜೇಮ್ಸ್ ಎಲ್ ಗೋಲ್ಡ್ ಕೂಡ ಜೇನ್ನೊಣಗಳಿಗೆ ಮಂಕುಬೂದಿ ಎರಚಿದ್ದಾರೆ. ಸೂರ್ಯ ಕಾಣದಂತೆ ತಡೆಯೊಡ್ಡಿದ್ದಲ್ಲದೆ, ಪರ್ಯಾಯ ಸೂರ್ಯನೊಂದು ಕಾಣುವಂತೆ ಮಾಡಿದ್ದಾರೆ. ಇವರು ಜೇನುಗೂಡಿನ ಸಮೀಪದಲ್ಲಿ ಬಲು ಪ್ರಖರವಾದ ದೀಪವೊಂದನ್ನು ಇಟ್ಟು, ಜೇನ್ನೊಣಗಳು ಅದನ್ನು ಸೂರ್ಯನೆಂದು ತಿಳಿಯಬಹುದೇ ಎಂದು ಪರೀಕ್ಷಿಸಿದರು. ಜೇನ್ನೊಣಗಳಿಗಿರುವ ನೂರಾರು ಕಣ್ಣುಗಳ ಪೈಕಿ, ಕೆಲವೇ ಕೆಲವು ಜೇನ್ನೊಣಗಳಿಗೆ ಈ ಎಲ್ಲಾ ಕಣ್ಣುಗಳನ್ನು ಮುಚ್ಚಿ ಈ ಪರೀಕ್ಷೆಗೊಂದು ಹೊಸ ತಿರುವು ನೀಡಿದರು. ಸಾಮಾನ್ಯ ಜೇನ್ನೊಣಗಳು ಹೊಸ ದೀಪವನ್ನೇ ಸೂರ್ಯ ಎಂದು ಭಾವಿಸಿದವು. ಆದರೆ ಆಯ್ದ ಕಣ್ಣುಗಳನ್ನಷ್ಟೆ ಮುಚ್ಚಿದ್ದ ನೊಣಗಳು ಈ ಹೊಸ ಬೆಳಕನ್ನು ನೋಡಲೇ ಇಲ್ಲ. ಬದಲಿಗೆ ಅವು ಬೆಳಕಿನ ಧೃವೀಕರಣ ಗುಣವನ್ನು ಬಳಸಿಕೊಂಡವು. ಹೀಗಾಗಿ, ಎರಡು ವಿಭಿನ್ನ ಜೇನ್ನೊಣಗಳ ಗುಂಪು ಎರಡು ವಿಭಿನ್ನ ಸೂರ್ಯನನ್ನು ಕಂಡವು. ಅವೆರಡೂ ಗುಂಪುಗಳು ಸೂರ್ಯನ ಸ್ಥಾನದ ಬಗ್ಗೆ ಬೇರೆ, ಬೇರೆ ರೀತಿಯಲ್ಲಿ ಹೇಳಿದುವು. ಇದನ್ನೇ ಇನ್ನೊಂದು ರೀತಿ ಹೇಳುವುದಾದರೆ, ಅವು ಸೂರ್ಯನ ಸ್ಥಾನವನ್ನು ಕುರಿತು ಉಳಿದವುಗಳಿಗೆ ಸುಳ್ಳು ಹೇಳಿದವು ಎನ್ನಬಹುದು. ಆಹಾರವನ್ನು ಹುಡುಕಿ ಗೂಡಿಗೆ ಮರಳುತ್ತಿರುವ ಇರುವೆ, ದುಂಬಿಗಳನ್ನು ಹಾದಿಯಿಂದ ಬೇರೆಡೆ ಎತ್ತಿಟ್ಟು ಮೋಸ ಮಾಡಿ, ಅವು ತಮ್ಮ ಮನೆಯ ಹಾದಿಯನ್ನು ಹೇಗೆ ಪತ್ತೆ ಮಾಡುತ್ತವೆನ್ನುವುದನ್ನು ನಾವು ಕಳೆದ ಬಾರಿಯ ವಿಸ್ಮಯಕ್ಕಿಂತ ವಿಸ್ಮಯ ಸಂಚಿಕೆಯಲ್ಲಿ ತಿಳಿದಿದ್ದೆವು.
ನಾವೂ ಅಧ್ಯಯನಕ್ಕಾಗಿ ಕಣಜಗಳಿಗೆ ಹೀಗೆ ಮೋಸ ಮಾಡಿದ್ದೇವೆ. ಕಣಜಗಳು ಕೂಡ ಇರುವೆ, ದುಂಬಿಗಳ ಹಾಗೆಯೇ ಕೇವಲ ತಮ್ಮ ಸಂಬಂಧಿಗಳನ್ನಷ್ಟೆ ಗೂಡಿನೊಳಗೆ ಸೇರಿಸುತ್ತವೆ. ಸಂಬಂಧಿಗಳಲ್ಲದವುಗಳನ್ನು ಅಟ್ಟಿ ಓಡಿಸುತ್ತವೆ. ನಾವು ಇನ್ನೂ ತಾವಾರೆಂದು ಅರಿಯುವಷ್ಟು ಬೆಳೆಯದ ಕಣಜಗಳನ್ನು ಮೈಸೂರಿನಿಂದ ತಂದು, ಬೆಂಗಳೂರಿನ ಕಣಜಗಳ ಗೂಡಿನೊಳಗೆ ಬಿಟ್ಟೆವು. ಹೀಗೆ ಬೆಂಗಳೂರು, ಮೈಸೂರಿನ ಕಣಜಗಳೆರಡೂ ಮೋಸ ಹೋದವು. ಮೈಸೂರು ಕಣಜಗಳಲ್ಲಿ ಕೆಲವು ಬೆಂಗಳೂರು ಕಣಜಗಳ ಕಾಲೋನಿಗಳನ್ನು ಆಳುವ ರಾಣಿಗಳೂ ಆದವು. ತಮ್ಮ ಸಂಬಂಧಿಗಳನ್ನು ಪತ್ತೆ ಮಾಡುವುದಕ್ಕೆ ಬಹಳ ಸರಳ ನಿಯಮವನ್ನು ಬಳಸುತ್ತವೆ: ನನ್ನ ಗೂಡಿನಲ್ಲಿ ಇದ್ದರೆ ಅದು ನನ್ನ ಸಂಬಂಧಿ ಎಂದುಕೊಳ್ಳುತ್ತವೆ.
ಈ ಕಥೆ ಇನ್ನೂ ಇದೆ. ಹೀಗೆ ಪ್ರಾಣಿಗಳ ಕಣ್ಣಿಗೆ ಮಣ್ಣೆರೆಚುವುದು ಇಂದು ನಿನ್ನೆಯದಲ್ಲ. ಲಕ್ಷಾಂತರ ವರ್ಷಗಳಷ್ಟು ಪುರಾತನ. ಈ ರೀತಿಯ ಮೋಸದಾಟಗಳನ್ನು ಪ್ರಾಣಿಗಳು ಒಂದಿನ್ನೊಂದರ ಜೊತೆ ಆಡುತ್ತಲೇ ಬಂದಿವೆ. ಇದಕ್ಕೆ ಅತ್ಯುತ್ತಮ ಉದಾಹರಣೆಯನ್ನು ಕೆಲವು ಹಕ್ಕಿಗಳಲ್ಲಿ, ಅದರಲ್ಲೂ ಕಾಗೆಯ ಕುಟುಂಬಕ್ಕೆ ಸೇರಿದವುಗಳಲ್ಲಿ ಕಾಣಬಹುದು. ಇವು ನಾಳೆಗೆಂದು ಆಹಾರವನ್ನು ಬಚ್ಚಿಡುತ್ತವೆ. ಬೇರೆ, ಬೇರೆ ಆಹಾರವನ್ನು ಬೇರೆ, ಬೇರೆ ಸ್ಥಳಗಳಲ್ಲಿ ಬಚ್ಚಿಡುವುದಷ್ಟೆ ಅಲ್ಲ, ಅವು ಬಚ್ಚಿಡುವುದನ್ನು ಯಾರಾದರೂ ನೋಡುತ್ತಿದ್ದರೆ, ಅಥವಾ ಕಳ್ಳರಿದ್ದರೆ, ಅವರಿಗೆ ಮೋಸ ಮಾಡಲು ಒಂದೆಡೆ ಬಚ್ಚಿಡುವಂತೆ ಆಟವಾಡಿ, ಅನಂತರ ಬೇರೊಂದು ಸ್ಥಾನದಲ್ಲಿ ಆಹಾರವನ್ನು ಕೂಡಿಡುತ್ತವೆ. ಜೊತೆಗೆ ಆಗಾಗ್ಗೆ ಆಹಾರದ ಜಾಗ ಬದಲಿಸುತ್ತವೆ. ಹಕ್ಕಿಗಳಲ್ಲಿ ಕಾಣುವ ಈ ರೀತಿಯ ವಿಶಿಷ್ಟ ಕಲಿಕೆ ಹಾಗೂ ಗ್ರಹಿಕೆಯನ್ನು ಅರ್ಥ ಮಾಡಿಕೊಳ್ಳಲು ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನ ವಿಭಾಗದ ಪ್ರೊಫೆಸರ್ ನಿಕೋಲಾ ಕ್ಲೇಟನ್, ಕ್ಲೈವ್ ವಿಲ್ಕಿನ್ಸ್ ಎನ್ನುವ ಕಲಾವಿದ ಹಾಗೂ ಮಾಂತ್ರಿಕನ ಜೊತೆಗೆ ಕೈಗೂಡಿಸಿದ್ದಾರೆ
ಈ ಬಗೆಯ ಅಧ್ಯಯನಗಳಿಗೆ ಮಗುವಿನಂತಹ ಕುತೂಹಲದ ಜೊತೆಗೆ ಒಂದಿಷ್ಟು ತುಂಟತನವೂ ವಿಜ್ಞಾನಿಗಳಿಗೆ ಇರಬೇಕಷ್ಟೆ. ಅರಿವು ಮತ್ತು ಮೋಜು ಎರಡೂ ಇದರಿಂದ ದೊರಕುತ್ತವೆ. ಇಮ್ಮಡಿ ಮೋಜು ಅಲ್ಲವೇ?
ಆಂಗ್ಲಮೂಲ: ಪ್ರೊಫೆಸರ್ ರಾಘವೇಂದ್ರ ಗದಗಕರ್, ಅನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್. ಮಂಜುನಾಥ; ಈ ಲೇಖನದ ಆಂಗ್ಲ ಮೂಲ ದಿ ವೈರ್ ಸೈನ್ಸ್ ಜಾಲಪತ್ರಿಕೆಯಲ್ಲಿ ಮೊದಲು ಪ್ರಕಟವಾಗಿತ್ತು.