Now Reading
ಕಣಜಗಳ ಬೆನ್ನತ್ತಿ ಬೈಸಿಕಲ್‌ ಸವಾರಿ – ಪಿಎಚ್‌ಡಿ ಪದವಿಗೆ ದಾರಿ

ಕಣಜಗಳ ಬೆನ್ನತ್ತಿ ಬೈಸಿಕಲ್‌ ಸವಾರಿ – ಪಿಎಚ್‌ಡಿ ಪದವಿಗೆ ದಾರಿ

ಕಣಜಗಳು ತಮ್ಮ ಗೂಡಿನ ಹಾದಿಯನ್ನು ಹೇಗೆ ನೆನಪಿಡುತ್ತವೆ ಎನ್ನುವುದನ್ನು ತಿಳಿಯಲು ಬೈಸಿಕಲ್‌ ಹತ್ತಿ ಐಐಎಸ್ಸಿ ಆವರಣದಲ್ಲಿ ಅವುಗಳ ಹಿಂದೆ ಹೋಗುತ್ತಿರುವ ಸೌವಿಕ್‌ ಮಂಡಲ್. ಚಿತ್ರ: ಸೌವಿಕ್‌ ಮಂಡಲ್

ಸಂಪುಟ 4 ಸಂಚಿಕೆ 245, ಮೇ, 29, 2021

ಜಾಣ ಅರಿಮೆ

ವಿಸ್ಮಯಕ್ಕಿಂತ ವಿಸ್ಮಯ 19

Kannada translation by Kollegala Sharma

§

ಕಳೆದ ಐವತ್ತು ವರ್ಷಗಳಿಂದಲೂ ನಾನು ಇಂಡಿಯನ್‌ ಪೇಪರ್‌ ಕಣಜ, ರೋಪಾಲೀಡಿಯ ಮಾರ್ಜಿನೇಟದಿಂದ ಮರುಳಾ ಗಿದ್ದೇನೆ ಎಂದು ಒಪ್ಪಿಕೊಳ್ಳಲೇ ಬೇಕು. ಈ ಐವತ್ತು ವರ್ಷಗಳಲ್ಲಿ ನಲವತ್ತು ವರ್ಷಗಳ ಕಾಲ ಅದುವೇ ನನ್ನ ಸಂಶೋಧನೆಯ ಕೇಂದ್ರವೂ ಆಗಿತ್ತು. ಬಹಳಷ್ಟು ವಿದ್ಯಾರ್ಥಿಗಳ ಜೊತೆಯಲ್ಲಿ ನಾನು ಕೈಗೊಂಡ ಸಂಶೋಧನೆಗಳೆಲ್ಲವೂ ಈ ಕೀಟ ಸಮಾಜದ ಒಳಗುಟ್ಟುಗಳನ್ನು ಅರಿಯುವುದೇ ಆಗಿದ್ದುವು.

ಹೆಣ್ಣು ಕಣಜಗಳು ತಮ್ಮ ಸುತ್ತಲಿರುವ ಗಿಡಮರಗಳಿಂದ ಸೆಲ್ಯುಲೋಸ್‌ ಎಳೆಗಳನ್ನು ಹೆರೆದು ತಂದು, ಜೇನುಗೂಡಿನಂತಹ ಗೂಡುಗಳನ್ನು ಕಟ್ಟುತ್ತವೆ. ಹೆಣ್ಣುಗಳಲ್ಲಿ ಒಂದು ಕಣಜ ಇಡೀ ಗೂಡಿನ ರಾಣಿಯಾಗಿ, ಆ ಆರುಮೂಲೆಯ ಗೂಡುಗಳಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಉಳಿದ ಹೆಣ್ಣುಗಳು ಸಂತಾನಹೀನ ಕೆಲಸಗಾರರ ಹೊಣೆ ನಿಭಾಯಿಸುತ್ತವೆ. ಒಗ್ಗಟ್ಟಾಗಿ ಗೂಡು ಕಟ್ಟಿ, ಶುಚಿಯಾಗಿಟ್ಟು, ಬೇರೆ ಕಣಜಗಳಂತಹ ಪರಜೀವಿಗಳು ಹಾಗೂ ಬೇಟೆಗಾರರಿಂದ ಅದನ್ನು ರಕ್ಷಿಸುತ್ತವೆ. ಸ್ವಲ್ಪ ವಯಸ್ಸಾದ ಕಣಜಗಳು ಗೂಡಿನಿಂದ ಹೊರ ಹೋಗಿ ಜೇಡದಂತಹ ಮೃದು ದೇಹದ ಕೀಟಗಳನ್ನು ಬೇಟೆಯಾಡಿ, ಗೂಡಿಗೆ ತಂದು ತಮ್ಮ ಸಹಚಾರಿಗಳ ಜೊತೆ ಹಂಚಿಕೊಂಡು ತಿನ್ನುತ್ತವೆ. ಬೆಳೆಯುತ್ತಿರುವ ಲಾರ್ವಾಹುಳುಗಳಿಗೆ ತಿನ್ನಿಸುತ್ತವೆ. ಇವನ್ನು ಅನ್ವೇಷಕರು ಎನ್ನುತ್ತೇವೆ.

ಎಲ್ಲ ಕೀಟ ಸಮಾಜದಂತೆಯೇ ಕಣಜಗಳೂ ಕೂಡ ಅದ್ಭುತವಾದ ಸಂವಹನ, ಸಹಕಾರ ಹಾಗೂ ಕೆಲಸಗಳ ವಿಂಗಡಣೆಯ ಸಾಮರ್ಥ್ಯವನ್ನು ತೋರುತ್ತವೆ. ಸಹಕಾರ ಹಾಗೂ ಸಂಘರ್ಷಗಳ ನಡುವೆ ನಾಜೂಕಾದ ಸಮತೋಲವನ್ನು ಕಾಪಾಡಿಕೊಳ್ಳುತ್ತವೆ. ಏಕೆಂದರೆ, ಕೆಲವೊಮ್ಮೆ ಕೆಲಸಗಾರ್ತಿಯರೇ ತಮ್ಮ ರಾಣಿಯರನ್ನು ಪದಚ್ಯುತಿಗೊಳಿಸಿ, ಅದರ ಸ್ಥಾನವನ್ನು ಆಕ್ರಮಿಸಬಲ್ಲವು, ಅಥವಾ ತಮ್ಮ ಕೆಲವು ನಿಷ್ಠಾವಂತ ಹಿಂಬಾಲಕರನ್ನು ಜೊತೆ ಮಾಡಿಕೊಂಡು ಹೋಗಿ ತಮ್ಮದೇ ಆದ ಹೊಸ ಗೂಡು ಕಟ್ಟಬಲ್ಲವು.

ಒಂದೊಂದು ಕಣಜವನ್ನೂ ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಾಗುವಂತೆ ಬಣ್ಣ ಹಚ್ಚಿದ ಕಣಜಗಳನ್ನು ನೋಡುತ್ತಾ ಹೀಗೆ ಈ ಗೂಡುಗಳ ಮುಂದೆ ಗಂಟೆಗಟ್ಟಲೆ ಕೂರುವುದು ಎಡೆಯಿಲ್ಲದ ಮೋಜಿನ ವಿಷಯವಷ್ಟೆ ಅಲ್ಲ, ಈ ಕಣಜಗಳ ನಡವಳಿಕೆಯ ಹಿಂದೆ ಇರುವ ವಿಕಾಸದ ಸ್ವರೂಪವನ್ನು ಅರಿತುಕೊಳ್ಳಲೂ ಅನಂತ ಅವಕಾಶಗಳನ್ನು ಒದಗಿಸುತ್ತದೆ ಎನ್ನುವುದು ಅಚ್ಚರಿಯೇನಲ್ಲ.

A relatively large nest of the Indian paper wasp Ropalidia marginata, with all wasps marked for individual identification. Many larvae and pupae can also be seen as many wasps seem to sit a little away from the nest temporarily.

ರೋಪಾಲೀಡಿಯಾ ಮಾರ್ಜಿನೇಟ ಕಣಜದ ದೊಡ್ಡ ಗೂಡು. ಪ್ರತಿಯೊಂದು ಕಣಜವನ್ನೂ ಗುರುತಿಸಲೆಂದು ಬಣ್ಣ ಹಚ್ಚಲಾಗಿದೆ. ಹಲವು ಲಾರ್ವಗಳನ್ನೂ, ಪ್ಯೂಪಗಳನ್ನೂ ಕಾಣಬಹುದು.   

ಕಣಜಗಳ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವ ಸಾಹಸಕ್ಕೆ ಕೊನೆಯೇ ಇಲ್ಲ. ಗೂಡಿನಲ್ಲಿ ನಡೆಯುತ್ತಿರುವ ನಾಟಕವನ್ನು ನೋಡುವುದಂತೂ ಮೋಜೇ, ಮೋಜು. ಹೀಗಾಗಿ, ಇತ್ತೀಚಿನವರೆಗೂ ನಾವು ಗೂಡಿನಿಂದ ಹೊರಹೋದ ಕಣಜಗಳ ನಡವಳಿಕೆಗಳನ್ನು ಅಧ್ಯಯನ ಮಾಡುವುದನ್ನು ಅಲಕ್ಷಿಸಿಬಿಟ್ಟಿದ್ದೆವು. ಅದೊಂದು ದೊಡ್ಡ ತಪ್ಪೇ ಸರಿ.

ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸಿನ ಪರಿಸರ ವಿಜ್ಞಾನಗಳ ಕೇಂದ್ರದಲ್ಲಿ ಪಿಎಚ್‌ಡಿ ಪದವಿ ವಿದ್ಯಾರ್ಥಿಗಳ ಆಯ್ಕೆಯ ಒಂದು ಶಾಸ್ತ್ರ ನಡೆಸುತ್ತೇವೆ. ಬೃಹತ್‌ ಪ್ರಮಾಣದಲ್ಲಿ ಬಂದ ಪ್ರತಿಭಾವಂತ ಅರ್ಜಿದಾರರಲ್ಲಿ ಕೆಲವರನ್ನು ಮಾತ್ರ ಆಯ್ದುಕೊಳ್ಳುತ್ತೇವೆ. ಇದು ಲಾಟರಿಯೇ ಸರಿ. ಕೆಲವು ವರ್ಷಗಳ ಹಿಂದೆ ಈ ಲಾಟರಿಯಲ್ಲಿ ನನಗೆ ಅದೃಷ್ಟ ಲಕ್ಷ್ಮಿ ಒಲಿದಿದ್ದಳು. ಸೌವಿಕ್‌ ಮಂಡಲ್‌ ಎನ್ನುವ ಯುವಕ ನನ್ನನ್ನು ತನ್ನ ಮಾರ್ಗದರ್ಶಿಯನ್ನಾಗಿ ಆಯ್ದುಕೊಂಡಿದ್ದ.

ಸೌವಿಕ್‌ ಪ್ರತಿಭಾವಂತ. ಸಹಜವಾಗಿಯೇ ಬುದ್ಧಿವಂತ. ಕಾಲೇಜು ಕಲಿತು ಬುದ್ಧಿವಂತನಾದವನಲ್ಲ. ಆದರೆ ಅಷ್ಟೇ ಆತಂಕ ಹಾಗೂ ಚಡಪಡಿಕೆಯ ಹುಡುಗ. ಕೊಲ್ಕತಾದಿಂದ ಸುಮಾರು ಇನ್ನೂರು ಕಿಲೋಮೀಟರು ದೂರದಲ್ಲಿರುವ ಬರ್ಹಾಂಪುರ್‌ ಎಂಬ ಪುಟ್ಟ ಪಟ್ಟಣದಲ್ಲಿ ಹುಟ್ಟಿ ಬೆಳೆದ ಆತ ಬೆಂಗಳೂರಿನಂತಹ ದೊಡ್ಡ ಪಟ್ಟಣದಲ್ಲಿ ತನ್ನತನವನ್ನು ಕಂಡುಕೊಳ್ಳಲು ಚಡಪಡಿಸುತ್ತಿದ್ದ. ನಮ್ಮ ಪ್ರಯೋಗಾಲಯದ ತಂಡದ ಅತ್ಯಂತ ಕಿರಿಯ ಸದಸ್ಯನಾಗಿ, ಕಣಜಗಳ ಗೂಡಿನ ಮುಂದೆ ಗಂಟೆಗಟ್ಟಲೆ ಸುಮ್ಮನೇ ಕುಳಿತುಕೊಳ್ಳುವುದು ಅವನಿಗೆ ಕಷ್ಟ ಎನ್ನುವುದು ಬೇಗನೆ ನನಗೆ ಅರ್ಥವಾಯಿತು. ಈ ಹಕ್ಕಿಗೆ ಹಾರುವುದು ಬೇಕಿತ್ತು.  ನನಗೂ ಕೂಡ “ಹೊರಪ್ರಪಂಚ”ದಲ್ಲಿ ಕಣಜಗಳ ನಡವಳಿಕೆಯ ಬಗ್ಗೆ ಬಲು ದೀರ್ಘ ಕಾಲದಿಂದಲೇ ಕುತೂಹಲವಿತ್ತು. ಹೀಗಾಗಿ ನಾನು ಗೂಡಿನಿಂದ ಆಚೆಗೆ ಕಣಜಗಳ ನಡವಳಿಕೆ ಹೇಗಿರುತ್ತದೆ ಎಂದು ಅನ್ವೇಷಿಸಬಾರದೇಕೆ ಎಂದ ಕೂಡಲೇ ಸೌವಿಕ್‌ ಮರುಮಾತನಾಡದೇ ಒಪ್ಪಿಕೊಂಡುಬಿಟ್ಟ.

ಅಂದ ಹಾಗೆ ಗೂಡಿನಿಂದ ಹೊರಗೆ ಪಯಣಿಸುವ ಕಣಜಗಳ ನಡತೆಯ ಬಗ್ಗೆ, ನಡತೆಯಿಂದ ಕಲಿಯುವುದು ಬಹಳ ಇದೆ. ಉದಾಹರಣೆಗೆ, ಕಣಜಗಳು ತಮ್ಮ ಹಾದಿಯನ್ನು ಕಂಡುಕೊಳ್ಳುವುದು ಹೇಗೆ? ಸಮೃದ್ಧಿಯಾದ ಆಹಾರದ ಮೂಲ ಸಿಕ್ಕಿದಾಗ ಅದರ ಸ್ಥಾನವನ್ನು ಅವು ಮತ್ತೆ ಹೇಗೆ ಹುಡುಕುತ್ತವೆ? ಹೊರಗೆ ಹೋದ ಕಣಜಗಳು ಗೂಡಿಗೆ ಮರಳುವಾಗ ಹಾದಿಯನ್ನು ಹೇಗೆ ಹುಡುಕುತ್ತವೆ? ಅದರಲ್ಲೂ ಈ ಹಿಂದೆ ಪರಿಚಯವೇ ಇಲ್ಲದ ಬಳಸು ಹಾದಿಯಲ್ಲಿ ಓಡಾಡಿದ ಮೇಲೂ ಗೂಡಿನ ಹಾದಿಯನ್ನು ಹೇಗೆ ಹುಡುಕುತ್ತವೆ? ಈ ವಿಷಯದಲ್ಲಿ ಕಣಜಗಳ ನಡವಳಿಕೆಯನ್ನು ನಿರ್ಲಕ್ಷಿಸಲಾಗಿದೆಯಾದರೂ, ಇರುವೆ ಹಾಗೂ ಜೇನ್ನೊಣಗಳ ವಿಷಯದಲ್ಲಿ ನೂರು ವರ್ಷಗಳಿಂದಲೂ ಇಂತಹ ಶೋಧ ಕಾರ್ಯಗಳು ಸಾಕಷ್ಟು ನಡೆದಿವೆ. ಹೀಗೆ ಸಮೃದ್ಧವಾಗಿ ಶೋಧವಾಗಿರುವ ವಿಷಯದಲ್ಲಿ ಸಂಶೋಧನೆಗೆ ತೊಡಗುವುದು ಸ್ವಲ್ಪ ಕಷ್ಟವೇ.

ನಾನು ವಿದ್ಯಾರ್ಥಿಯಾಗಿದ್ದಾಗ ಯಾವುದೇ ಸಂಶೋಧನೆಯನ್ನೂ ಹಮ್ಮಿಕೊಳ್ಳುವುದಕ್ಕೆ ಮೊದಲು ಅದಕ್ಕೆ “ಸಂಬಂಧಿಸಿದ” ಎಲ್ಲ ಲಭ್ಯ ಪ್ರಬಂಧಗಳನ್ನು ಓದುವುದು ನಮಗೆ ಕಡ್ಡಾಯವಾಗಿತ್ತು. ಇದು ಅಷ್ಟೇನೂ ಜಾಣನಡೆಯಲ್ಲ ಎಂದು ನನಗೆ ಆಗಾಗ ಅನ್ನಿಸಿದ್ದಿದೆ. ಇದು ಸ್ಥಾಪಿತ ಚೌಕಕಟ್ಟಿನೊಳಗೇ ಚಿಂತಿಸುವಂತೆ ಮಾಡುತ್ತದೆ, ಅತಿ ಹೆಚ್ಚೆಂದರೆ ಪುಟ್ಟ, ಪುಟ್ಟ ಸುಧಾರಣೆಗಳಿಗೆ ಎಡೆ ಮಾಡುತ್ತದಷ್ಟೆ ಎನ್ನುವುದು ನನ್ನ ಆತಂಕ. ಹೀಗೆ ಹಿಂದಿನ ಸಾಹಿತ್ಯದಲ್ಲಿ ಪಾಂಡಿತ್ಯ ಪಡೆಯದಿದ್ದರೆ, ಈಗಾಗಲೇ ಆಗಿರುವ ಕೆಲಸವನ್ನೇ ಅನವಶ್ಯಕವಾಗಿ ಮರುಕಳಿಸುವಂತೆ ಆಗಬಹುದು ಎನ್ನುವ ಆತಂಕವಿರಬಹುದು. ಈ ಭಯಕ್ಕೆ ಕಾರಣವೇನೆಂದರೆ, ನಾವು ನಮ್ಮ ಸಂಶೋಧನೆಗಳನ್ನು ಜಟಿಲವೂ, ನಿರ್ದಿಷ್ಟವೂ, ಅವಶ್ಯಕತೆಗಿಂತಲೂ ವೆಚ್ಚದ್ದಾಗಿಯೂ ಮಾಡಿಬಿಡುತ್ತೇವೆ.

ನಾವು ನಮ್ಮ ನಿತ್ಯದ ಅರಿವಿನಿಂದ ಹುಟ್ಟಿದ ಕಲ್ಪನೆಗಳ ಬೆನ್ನು ಹತ್ತಿ ಹೋಗಿ, ತಿಳಿದ ವಿಷಯವನ್ನೇ ಆದರೂ ಸಂಶೋಧನೆ ಅತಿ ದುಬಾರಿಯಾಗದಂತೆ, ಮರಳೀ ಯತ್ನವ ಮಾಡುತ್ತ ಮುಂದುವರೆಯಬೇಕು ಎನ್ನುವುದು ನನ್ನ ಅನಿಸಿಕೆ. ಹೀಗೆ ಮಾಡುವುದರಿಂದ ಈ ಹಿಂದಿನ ಶೋಧಗಳ ಸತ್ಯಾಸತ್ಯತೆಯನ್ನು ಮರಳಿ ಸ್ಥಾಪಿಸಿದಂತೆಯೂ ಆಗುತ್ತದೆ. ಅದನ್ನು ಇನ್ನೂ ಹೇಗೆ ಸುಧಾರಿಸಬಹುದು ಅಂತಲೋ, ತಪ್ಪು ಎಂದು ಸಾಧಿಸಲೂ ಸಾಧ್ಯವಾಗುತ್ತದೆ. ಹೀಗೆ ತರ್ಕಿಸಿದ ನಾನೂ, ಸೌವಿಕ್‌ ಮುಂದೇನು ಮಾಡುವುದು ಎಂದು ಚಿಂತಿಸಿದೆವು. ನನಗೆ ಎದುರಾಗಿದ್ದ ಸಮಸ್ಯೆಯೊಂದನ್ನು ಸೌವಿಕನಿಗೆ ತಿಳಿಸಿದೆ.  ಸಾಕಲೆಂದು ನಾನು ಕಣಜಗಳ ಗೂಡನ್ನು ತೆಗೆದು ಪ್ರಯೋಗಾಲಯಕ್ಕೆ ಕೊಂಡೊಯ್ದು ಇಟ್ಟಾಗ ಕೆಲವು ಕಣಜಗಳು ಮೊದಲಿದ್ದ ಸ್ಥಾನಕ್ಕೆ ಮರಳಿ ಹೊಸ ಗೂಡು ಕಟ್ಟುತ್ತಿದ್ದುವು. ಇದರಿಂದ ನಾನು ಬಹಳ ಕಸಿವಿಸಿಗೊಂಡಿದ್ದೆ. ಸೌವಿಕ್‌ ಇತ್ತೀಚೆಗೆ ತನಗೂ ಇದೇ ಅನುಭವವಾಗಿತ್ತೆಂದು ಹೇಳಿದ.

ನಮ್ಮ ಸಂಶೋಧನೆಯ ಮೊದಲ ಪ್ರಶ್ನೆಗಳು ಈಗ ಸ್ಪಷ್ಟವಾದುವು. ಆಹಾರಾನ್ವೇಷಣೆಯ ಕಾಯಕದಲ್ಲಿ ತೊಡಗಿದ ಕಣಜಗಳು ಗೂಡಿನಿಂದ ಎಷ್ಟು ದೂರದವರೆಗೂ ಹಾರುತ್ತವೆ? ಗೂಡಿನ ಸ್ಥಾನ ಬದಲಾದರೂ, ತಮ್ಮ ಮೊದಲಿನ ಸ್ಥಾನಕ್ಕೆ ಮರಳುವಷ್ಟು ಸುತ್ತಮುತ್ತಲಿನ ಪರಿಸರದ ಪರಿಚಯವಾಗುವಷ್ಟಾದರೂ ಹಾರಬೇಕಲ್ಲ? ಹೀಗಾಗಿ ಸೌವಿಕ್‌ ಕಣಜಗಳನ್ನು ಅವುಗಳ ಗೂಡಿನಿಂದ ವ್ಯವಸ್ಥಿತವಾಗಿ ಸ್ಥಳಾಂತರಿಸಿ, ಅವು ಗೂಡಿಗೇ ಮರಳುತ್ತವೆಯೋ ಎಂದು ಗಮನಿಸಲು ತೀರ್ಮಾನಿಸಿದ.

ಯಾವುದೇ ಜೀವಿಯನ್ನು ಅದರ ನೆಲೆಯಿಂದ ಸ್ಥಳಾಂತರಿಸಿ, ಅದರ ಪ್ರತಿಕ್ರಿಯೆಯನ್ನು ಗಮನಿಸುವುದು ಹಳೆಯ ಉಪಾಯ.  ಇದನ್ನು ಫ್ರೆಂಚ್‌ ಪ್ರಕೃತಿ ವಿಜ್ಞಾನಿ, ಕೀಟವಿಜ್ಞಾನಿ ಹಾಗೂ ಬೆಲ್ಲೆಟ್ರಿಸ್ಟ್ ಜೀನ್‌ ಹೆನ್ರಿ ಫೇಬರ್‌ (1823-1915) ಜನಪ್ರಿಯಗೊಳಿಸಿದ. ಈ ಬೆಲ್ಲೆಟ್ರಿಸ್ಟ್ ಎನ್ನುವ ಬಿರುದು ನನಗೆ ಇಷ್ಟವಾದದ್ದು. ನಿಘಂಟಿನ ಪ್ರಕಾರ ಬೆಲ್ಲೆಟ್ರಿಸ್ಟ್ ಎಂದರೆ “ಸಾಹಿತ್ಯ ಹಾಗೂ ಕಲಾವಿಮರ್ಶೆಗಳನ್ನು ಕುರಿತು ಓದಲಿಕ್ಕೆಂದೇ ಬರೆದ ಸರಸ ಪ್ರಬಂಧಗಳ ಲೇಖಕ.” ನಾವೂ ಹೆಚ್ಚೆಚ್ಚು ಅವನಂತೆಯೇ ಬರೆಯಬೇಕೆನ್ನುವುದು ನನ್ನ ಆಸೆ. ಫೇಬರನ ಪ್ರಬಂಧಗಳ ಅನುವಾದಗಳು ಕೂಡ ಈ ವಿವರಣೆಗೆ ಒಪ್ಪುವಷ್ಟು ಸುಂದರವಾಗಿವೆ. ಆದರೆ ಈ ಸೌಂದರ್ಯದ ಹಿಂದೆ ಪಕ್ಕಾ ವಿಜ್ಞಾನವಿದೆ. ಫೇಬರನನ್ನು ಅವನ ಜೀವನ ಚರಿತ್ರಕಾರರು ವಿಜ್ಞಾನದ ಕವಿ ಎಂದಿದ್ದರು. ಚಾರ್ಲ್ಸ್‌ ಡಾರ್ವಿನ್ನನೋ ಅವನನ್ನು ಕೀಟವಿಜ್ಞಾನದ ಹೋಮರ್‌ ಎಂದುಬಿಟ್ಟಿದ್ದ.

French naturalist Jean Henri Fabre. Photo: Félix Nadar (1820-1910), public domain

ಫ್ರೆಂಚ್‌ ಪ್ರಕೃತಿವಿಜ್ಞಾನಿ ಜೀನ್‌ ಹೆನ್ರಿ ಫೇಬರ್. ಚಿತ್ರ: ಫೆಲಿಕ್ಸ್‌ ನಡಾರ್‌ (1820-1910), ಸಾರ್ವಜನಿಕ ಡೊಮೇನ್

ತಾನು ಪ್ರಕೃತಿ ವಿಜ್ಞಾನಿಯಾಗಿದ್ದು ಹೇಗೆ ಎಂದು ಫೇಬರ್‌ ಹೇಳುವ ಕಥೆ ಈ ಸುಂದರ ಪ್ರಬಂಧಗಳಿಗಿಂತಲೂ ಸೊಗಸಾಗಿದೆ.:

“ಚಿಕ್ಕಂದಿನಿಂದಲೂ ನನಗೆ ನಿಸರ್ಗದಲ್ಲಿನ ಸಂಗತಿಗಳ ಬಗ್ಗೆ ಅದೇನೋ ಆಸಕ್ತಿ. ಈ ರೀತಿ ಗಿಡಗಳನ್ನೂ, ಕೀಟಗಳನ್ನೂ ಗಮನಿಸುವ ಈ ವರ ನಮ್ಮ ಪೂರ್ವಜರಿಂದ ಬಂದದ್ದು ಎಂದರೆ ಅದು ತಮಾಷೆಯಷ್ಟೆ. ಏಕೆಂದರೆ ನನ್ನ ಹಿರಿಯರು ಶಿಕ್ಷಣವೇ ಇಲ್ಲದ ಮಣ್ಣಿನ ಮಕ್ಕಳು. ತಾವು ಸಾಕಿದ ಹಸು, ಕುರಿಗಳ ಹೊರತಾಗಿ ಇನ್ನೇನನ್ನೂ ಗಮನಿಸಿದವರಲ್ಲ ಅಥವಾ ಇದು ನನ್ನ ವೈಜ್ಞಾನಿಕ ಶಿಕ್ಷಣದಿಂದ ಬಂದದ್ದೂ ಅಲ್ಲ. ಗುರುಗಳೋ, ಮಾರ್ಗದರ್ಶಕರೋ, ಕೆಲವೊಮ್ಮೆ ಪುಸ್ತಕಗಳೂ ಇಲ್ಲದೆ ನಾನು ಏಕಮನಸ್ಸಿನಿಂದ ನಡೆದಿದ್ದೆ. ಕೀಟಗಳ ಚರಿತ್ರೆಯಲ್ಲಿ ಒಂದು ಹೊಸ ಪುಟ ಸೇರಿಸುವುದಷ್ಟೆ ನನ್ನ ಗುರಿಯಾಗಿತ್ತು.” ಎಂದು ಫೇಬರ್‌ ಬರೆದಿದ್ದಾನೆ.

ವಿಧ್ಯುಕ್ತವಾದ ಶಿಕ್ಷಣದ ಬಗ್ಗೆ ಫೇಬರ್‌ ಹೇಳುವ ಈ ಮಾತುಗಳು ಇಂತಹ ತರಬೇತಿಯ ಬಗ್ಗೆ ಅವನಿಗಿರುವ ಅಸಡ್ಡೆಯನ್ನು ತೆರೆದಿಡುತ್ತವೆ. “ನನ್ನ ಬಾಲ್ಯದಲ್ಲಿ ಹುಡುಗರು ಖುಷಿಯಾಗಿ, ಚಟುವಟಿಕೆಯಿಂದ ಇರುವುದೇ ತಪ್ಪು ಎನ್ನುತ್ತಿದ್ದರು. ಆದ್ದರಿಂದ ನಮ್ಮ ಶಿಕ್ಷಣ ಪದ್ಧತಿಯು ದುಗುಡ, ಖಿನ್ನತೆಗೆ ಒತ್ತು ನೀಡಿತ್ತು. ನಮ್ಮ ಅರಿವಿನ ಮನೆಗಳೆಲ್ಲವೂ ಶಿಕ್ಷೆಯ ಗೂಡುಗಳಾಗಿದ್ದುವು. ನಾಲ್ಕು ಗೋಡೆಗಳ ನಡುವೆ ಇರುವ ಗರಡಿಯಂತಹ ಅಂಗಳದಲ್ಲಿ ಕವಲೊಡೆದು ನಿಂತಿದ್ದ ಮರದ ಅಡಿಯಲ್ಲಿ ಆಟವಾಡಲು ಜಾಗಕ್ಕಾಗಿ ಹುಡುಗರು ಹೊಡೆದಾಡುತ್ತಿದ್ದರು. ಅಂಗಳದ ಸುತ್ತಲೂ ಕುದುರೆ ಲಾಯದಂತಹ ಗಾಳಿ, ಬೆಳಕು ಇಲ್ಲದ ಕೋಣೆಗಳು ನಮ್ಮ ತರಗತಿಗಳಾಗಿದ್ದವು.”

ಸೌವಿಕ್ ನ ನಡತೆಯಲ್ಲಿ ನಾನು ಫೇಬರನ ಈ ಮಾತುಗಳು ಪ್ರತಿಧ್ವನಿಸುವುದನ್ನು ಕಂಡೆನಾದ್ದರಿಂದ ಅವನು ಕೂಡ ಜೀನ್‌ ಹೆನ್ರಿ ಫೇಬರನಂತೆಯೇ ಕಣಜಗಳ ಜೊತೆಗೆ ಆಟವಾಡುವುದೇ ಒಳ್ಳೆಯದು ಎನ್ನಿಸಿತು. ಫೇಬರನ ಅತ್ಯಂತ ಪ್ರಮುಖ ಹಾಗೂ ಪ್ರಧಾನವಾದ ಶೋಧಗಳೆಲ್ಲವೂ ಒಂದು ಪುಟ್ಟ ತುಣಕು ನೆಲದಲ್ಲಿ ಜನಿಸಿದ್ದುವು. “ಖಾಸಗಿತನಕ್ಕೆಂದು ಬೇಲಿ ಹಾಕಿದ, ಬರಡಾದ, ಬಿಸಿಲಿನಲ್ಲಿ ಒಣಗಿದ, ಪೊದೆಗಳಿಂದ ತುಂಬಿದ ಹಾಗೂ ಕಣಜ ಮತ್ತು ಜೇನ್ನೊಣಗಳಿಗೆ ಪ್ರಿಯವಾದ ತುಂಡು ನೆಲ” ಎಂದು ವಿವರಿಸಿದ ಇದನ್ನು ಫೇಬರ್‌ ನಲವತ್ತು ವರ್ಷಗಳ ಹೆಣಗಾಟದ ನಂತರ ತನ್ನದಾಗಿಸಿಕೊಂಡಿದ್ದ. ಇದಕ್ಕೆ ಹೋಲಿಸಿದರೆ ಸೌವಿಕ್‌ ತನ್ನೆಲ್ಲ ಪ್ರಯೋಗಗಳನ್ನು ಕೈಗೊಂಡ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸಿನ ಆವರಣದಲ್ಲಿ ಜೀವಿವೈವಿಧ್ಯವೂ ಜಾಸ್ತಿ, ಹಾಗೂ ಇದು ಸೌವಿಕ್ಕನಿಗೆ ಶ್ರಮವಿಲ್ಲದೇ ಸಿಕ್ಕಿತ್ತು ಎಂದೇ ಹೇಳಬೇಕು.

ಸೌವಿಕ್‌ ಸಂಸ್ಥೆಯ ಆವರಣದಲ್ಲಿ ಸಹಜವಾಗಿಯೇ ಬೆಳೆದಿದ್ದ ರೋಪಾಲೀಡಿಯ ಮಾರ್ಜಿನೇಟಾದ ನಾಲ್ಕು ದೊಡ್ಡ ಗೂಡುಗಳನ್ನು ಹುಡುಕಿದ. ಅದರಲ್ಲಿದ್ದ ಎಲ್ಲ ಕಣಜಗಳನ್ನೂ ಪ್ರತ್ಯೇಕವಾಗಿ ಗುರುತಿಸಲು ಆಗುವಂತೆ ಬಣ್ಣ ಹಚ್ಚಿದ ನಂತರ, ಗೂಡಿನಿಂದ ಹೊರಗೆ ಹೋಗುವ ಅನ್ವೇಷಕ ಕೀಟಗಳನ್ನು ಗುರುತಿಸಿ ಗಮನಿಸಲು ಆರಂಭಿಸಿದ. ಈ ಅನ್ವೇಷಕಗಳಿಗೆ ತಮ್ಮ ಸುತ್ತಲಿನ ಪರಿಸರದ ಅರಿವು ಇದೆ ಎನ್ನುವುದು ಊಹೆ. ಪ್ರತಿದಿನ ಬೆಳಗ್ಗೆ ಆರರಿಂದ ಆರೂವರೆ ಗಂಟೆಯೊಳಗೆ ಇವು ಆಹಾರಾನ್ವೇಷಣೆಗೆ ಗೂಡು ಬಿಟ್ಟು ಹೊರಡುವುದಕ್ಕೂ ಮೊದಲೇ ಅವುಗಳನ್ನು ಹೊರತೆಗೆದು, ಗಾಳಿಯಾಡುತ್ತಿದ್ದ ಗಾಜಿನ ಡಬ್ಬಿಗಳಲ್ಲಿ ಬಂಧಿಸಿದ.

ಅನಂತರ ಬೆಳಗ್ಗೆ ಒಂಭತ್ತು ಗಂಟೆಯಿಂದ ಹತ್ತೂವರೆ ಗಂಟೆಯೊಳಗೆ, ಬೈಸಿಕಲ್ಲು ಹತ್ತಿ ಈ ಡಬ್ಬಿಗಳನ್ನು ಪಾರದರ್ಶಕವಾದ ಪ್ಲಾಸ್ಟಿಕ್‌ ಚೀಲದಲ್ಲಿಟ್ಟುಕೊಂಡು ಹೊರಡುತ್ತಿದ್ದ. ಪಾರದರ್ಶಕವಾಗಿದ್ದರಿಂದ ಚೀಲಗಳೊಳಗಿದ್ದರೂ ಸುತ್ತಲಿನ ಪರಿಸರವನ್ನು ಕಾಣಬಹುದಿತ್ತು. ಅನಂತರ ಗೂಡಿನಿಂದ ನೂರು, ನೂರು ಮೀಟರುಗಳ ಅಂತರದಲ್ಲಿ ನಾಲ್ಕೂ ದಿಕ್ಕಿನಲ್ಲಿಯೂ ಗೊತ್ತಾದ ಜಾಗಗಳಲ್ಲಿ ಈ ಕಣಜಗಳನ್ನು ಹೊರಬಿಟ್ಟ. ಮರಳಿ ಬೈಸಿಕಲ್ಲು ಹತ್ತಿ ಗೂಡಿನ ಬಳಿಗೆ ಬಂದು ಅವುಗಳು ಮರಳುವುದನ್ನೇ ಕಾದು ಕುಳಿತ. ಈ ರೀತಿಯಲ್ಲಿ ಇನ್ನೂರ ನಲವತ್ತೊಂಭತ್ತು ಅನ್ವೇಷಕ ಕಣಜಗಳನ್ನು ಒಂದಲ್ಲ ಹಲವು ಬಾರಿ, ಒಟ್ಟು ನಾಲ್ಕು ನೂರಾ ಎಂಭತ್ತಾರು ಬಾರಿ ದೂರ ಕೊಂಡೊಯ್ದು ಬಿಟ್ಟಿದ್ದ.

ಪ್ರತಿದಿನ ರಾತ್ರಿ ಒಂಭತ್ತು ಗಂಟೆಯಿಂದ ಹತ್ತು ಗಂಟೆಯೊಳಗೆ ಪ್ರತಿ ಗೂಡಿನೊಳಗೂ ಇದ್ದ ಕಣಜಗಳನ್ನು ಪಟ್ಟಿ ಮಾಡಿದ. ಹೀಗೆ ಗೂಡುಗಳಿಗೆ ಯಾವ ಕಣಜಗಳು ವಾಪಸು ಬಂದಿದ್ದವೆಂಬುದನ್ನು ತಿಳಿದುಕೊಂಡ. ಹೊಸ ಜಾಗದಲ್ಲಿ ಬಿಟ್ಟ ನಂತರದ ಮೂರು ರಾತ್ರಿಗಳು ಸತತವಾಗಿ ಕಣಜ ಗೂಡಿನಲ್ಲಿ ಕಾಣದೇ ಹೋದರೆ ಅದು ಹಾದಿ ತಪ್ಪಿಸಿಕೊಂಡಿದೆ ಎಂದು ತೀರ್ಮಾನಿಸಿದ.  ಕೆಲವು ಜಾಗಗಳಲ್ಲಿ ಹೊರಬಿಟ್ಟ ಕಣಜಗಳು ಎಲ್ಲವೂ ಅದೇ ದಿನದೊಳಗೆ ಗೂಡಿಗೆ ಮರಳಿದ್ದುವು. ಇನ್ನು ಕೆಲವೆಡೆಗಳಲ್ಲಿ ಬಿಟ್ಟ ಕಣಜಗಳು ಅದೇ ದಿನ ಇಲ್ಲವೇ ಮೂರು ದಿನಗಳಲ್ಲಿ ಯಾವಾಗಲಾದರೂ ಗೂಡಿಗೆ ಮರಳಿದ್ದುವು. ಕೆಲವು ಜಾಗಗಳಲ್ಲಿ ಬಿಟ್ಟಂತಹ ಕಣಜಗಳು ಯಾವುವೂ ಮೂರು ದಿನಗಳಾದರೂ ಗೂಡಿಗೆ ಮರಳಿರಲೇ ಇಲ್ಲ.

ಈ ಮಾಹಿತಿಗಳಿಂದ ಸೌವಿಕ್‌ ಗೂಡುಗಳ ಸುತ್ತಲೂ ಎರಡು ಕಾಲ್ಪನಿಕ ಸೀಮೆಗಳನ್ನು ಗುರುತಿಸಿದ. ಮೊದಲನೆಯ ಸೀಮೆಯೊಳಗೆ ಯಾವ್ಯಾವ ಕಣಜಗಳು ಗೂಡಿಗೆ ಮರಳಿದ್ದುವೋ, ಅವುಗಳೆಲ್ಲವನ್ನೂ ಬಿಟ್ಟ ಜಾಗಗಳಿದ್ದುವು. ಈ ಸೀಮೆಯೊಳಗಿನ ಪ್ರದೇಶವನ್ನು ಸೌವಿಕ್‌ ಕನಿಷ್ಟತಮ ಹೋಮಿಂಗ್‌ ಪ್ರದೇಶ ಎಂದು ಕರೆದ. ಹೋಮಿಂಗ್‌ ಎಂದರೆ ಕಣಜಗಳು ಗೂಡಿಗೆ ಮರಳುವ ಸಾಮರ್ಥ್ಯವನ್ನು ಸೂಚಿಸುತ್ತದೆ. ರೋಪಾಲೀಡಿಯಾ ಮಾರ್ಜಿನೇಟಾ ಕಣಜಗಳ ಕನಿಷ್ಟತಮ ಹೋಮಿಂಗ್‌ ಕ್ಷೇತ್ರ ಗೂಡಿನಿಂದ ಸುಮಾರು 0.73 ± 0.25 ಚದರ ಕಿಲೋಮೀಟರಿನಷ್ಟು ಇತ್ತು. ಎರಡನೆಯ ಸೀಮೆಯೊಳಗೆ ಮೂರು ದಿನಗಳೊಳಗೆ ಮರಳಿ ಬಂದ ಕಣಜಗಳನ್ನು ಬಿಟ್ಟ ಜಾಗಗಳಿದ್ದುವು. ಇದನ್ನು ಸೌವಿಕ್‌ ಗರಿಷ್ಟತಮ ಹೋಮಿಂಗ್‌ ಕ್ಷೇತ್ರ ಅಥವಾ ಪ್ರದೇಶವೆಂದು ಹೆಸರಿಸಿದ. ಇದು ಗೂಡಿನಿಂದ ಸುಮಾರು 6.22 ± 0.66 ಚದರ ಕಿಲೋಮೀಟರು ವ್ಯಾಪ್ತಿಯ ಪ್ರದೇಶವಾಗಿತ್ತು.

A satellite image of the study site showing the position of one of the study nests. The inner broken line encompasses the minimal homing area and the solid outer solid line encompasses the maximal homing areas, of the wasps of this nest. Image: Souvik Mandal

ಅಧ್ಯಯನಕ್ಕೊಳಗಾಗಿದ್ದ ಗೂಡೊಂದರ ಸ್ಥಾನವನ್ನು ಈ ಉಪಗ್ರಹ ಚಿತ್ರ ತೋರಿಸುತ್ತಿದೆ.  ಒಳಭಾಗದಲ್ಲಿರುವ ಒಡಕು ರೇಖೆಯು ಗೂಡಿನಲ್ಲಿರುವ ಕಣಜಗಳ ಕನಿಷ್ಠತಮ ಹೋಮಿಂಗ್‌ ಪ್ರದೇಶವನ್ನೂ, ಹೊರಗಿನ ದಪ್ಪಗಿನ ರೇಖೆಯು ಗರಿಷ್ಠತಮ ಹೋಮಿಂಗ್‌ ಪ್ರದೇಶವನ್ನೂ ಸೂಚಿಸುತ್ತವೆ. ಚಿತ್ರ: ಸೌವಿಕ್‌ ಮಂಡಲ್

ಅಂದರೆ ಈ ಕಣಜಗಳು ಸಾಮಾನ್ಯವಾಗಿ ಕನಿಷ್ಠತಮ ಹೋಮಿಂಗ್‌ ಪ್ರದೇಶದೊಳಗಷ್ಟೆ ಆಹಾರಾನ್ವೇಷಣೆಗೆ ಹೋಗುತ್ತವೆ. ಆದ್ದರಿಂದ ಈ ಪ್ರದೇಶದೊಳಗಿರುವಾಗ ತಮ್ಮ ಗೂಡಿಗೆ ಮರಳುವ ಹಾದಿಯನ್ನು ಹುಡುಕುವುದು ಕಷ್ಟವಾಗುವುದಿಲ್ಲ ಎಂದು ನಾವು ತೀರ್ಮಾನಿಸಬಹುದು. ಅಲ್ಲದೆ ಕನಿಷ್ಠತಮ ಹೋಮಿಂಗ್‌ ಪ್ರದೇಶದಿಂದ ಹೊರಗಿದ್ದೂ, ಗರಿಷ್ಠತಮ ಹೋಮಿಂಗ್‌ ಪ್ರದೇಶದಲ್ಲಿ ಇರುವಾಗ, ಈ ಪ್ರದೇಶ ತಮಗೆ ಪರಿಚಿತವಲ್ಲದಿದ್ದರೂ ಕೆಲವು ಕಣಜಗಳು ಗೂಡಿಗೆ ಮರಳ ಬಲ್ಲವು ಎಂದೂ ನಾವು ಅರ್ಥ ಮಾಡಿಕೊಳ್ಳಬಹುದು. ಈ ಕಣಜಗಳು ತಮ್ಮ ಗೂಡನ್ನು ಹುಡುಕಲು ಬೇರೆ ಉಪಾಯಗಳನ್ನು ಬಳಸಿರಬೇಕು. ಉದಾಹರಣೆಗೆ, ಹಂತಹಂತವಾಗಿ ಹುಡುಕಾಟ ನಡೆಸಿರಬಹುದು.

ಗರಿಷ್ಠತಮ ಹೋಮಿಂಗ್‌ ಪ್ರದೇಶದಿಂದ ಆಚೆಗೆ ಹೋದ ಕಣಜಗಳು ಗೂಡಿಗೆ ಏಕೆ ಮರಳಲಿಲ್ಲ ಎನ್ನುವುದು ಗೊತ್ತಿಲ್ಲ. ಬಹುಶಃ ಇಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹಂತ, ಹಂತವಾಗಿ ಹುಡುಕಿ ಬರುವುದು ಕಷ್ಟವಿರಬೇಕು ಅಥವಾ ಅವು ಈ ಹುಡುಕಾಟವನ್ನೇ ಬಿಟ್ಟು, ತಮ್ಮದೇ ಆದ ಹೊಸ ಗೂಡೊಂದನ್ನು ಕಟ್ಟಿಕೊಂಡೂ ಇರಬಹುದು ಅಥವಾ ಇನ್ನೂ ತಡವಾಗಿ ಹಿಂದಿರುಗಿದಾಗ, ಗೂಡಿನಲ್ಲಿ ಅವುಗಳ ಸ್ಥಾನವನ್ನು ಕಳೆದುಕೊಂಡಿರಬಹುದು ಅಥವಾ ತಮ್ಮ ಗುರುತನ್ನೇ ಅಂದರೆ ವಾಸನೆಯನ್ನೇ ಕಳೆದುಕೊಂಡಿರಬಹುದು.

ಕನಿಷ್ಠತಮ ಹೋಮಿಂಗ್‌ ಪ್ರದೇಶದ ಸೀಮೆ ಗೂಡಿನಲ್ಲಿರುವ ಕಣಜಗಳು ಹಾಗೂ ಲಾರ್ವಗಳಿಗೆ ಬೇಕಾದಷ್ಟು ಆಹಾರ ಎಷ್ಟು ಹತ್ತಿರದಲ್ಲಿ ಸಿಗುತ್ತದೆ ಎನ್ನುವುದನ್ನು ಅವಲಂಬಿಸಿರಬೇಕು ಎಂದು ನಾವು ತರ್ಕಿಸಬಹುದು. ಅದೇ, ಗರಿಷ್ಠತಮ ಹೋಮಿಂಗ್‌ ಪ್ರದೇಶದ ಸೀಮೆಗೂ ಗೂಡಿನ ಸ್ಥಾನಕ್ಕೂ ಯಾವುದೇ ಸಂಬಂಧವೂ ಇರಲಿಕ್ಕಿಲ್ಲ. ಅದು ಆಯಾ ಕಣಜ ಪ್ರಭೇದದ ಸಹಜ ಸಾಮರ್ಥ್ಯ ಎಂದೂ ತರ್ಕಿಸಬಹುದು. ಇದೇ ತರ್ಕದ ಪ್ರಕಾರ, ಕನಿಷ್ಠತಮ ಹೋಮಿಂಗ್‌ ಪ್ರದೇಶದ ವಿಸ್ತೀರ್ಣವು ಗೂಡಿನಿಂದ ಗೂಡಿಗೆ ಭಿನ್ನವಾಗಿದ್ದವು ಆದರೆ ಗರಿಷ್ಠತಮ ಹೋಮಿಂಗ್‌ ಪ್ರದೇಶವು ಹೀಗೆ ಭಿನ್ನವಾಗಿರಲಿಲ್ಲ ಎಂದು ನಾವು ಕಂಡೆವು.

ನನ್ನ ಇನ್ನೊಬ್ಬ ಪಿಎಚ್‌ಡಿ ವಿದ್ಯಾರ್ಥಿನಿ, ಅನಿಂದಿತಾ ಬ್ರಹ್ಮಾಳ ಜೊತೆಗೆ ಸೇರಿಕೊಂಡು ಸೌವಿಕ್‌ ಇನ್ನೂ ಹಲವು ಕುತೂಹಲಕರವಾದ ಪ್ರಯೋಗಗಳನ್ನು ಮಾಡಿದ. ಇವುಗಳಿಗೆ ಬೈಸಿಕಲ್ಲು, ದಿಕ್ಸೂಚಿ ಮತ್ತು ವೀಡಿಯೋ ಕ್ಯಾಮೆರಾವಲ್ಲದೆ ಇತರೆ ಸಾಧನಗಳನ್ನೂ ಬಳಸಿದ.

ಇಂತಹ ಒಂದು ಅಧ್ಯಯನದಲ್ಲಿ ಸೌವಿಕ್‌ ಹಾಗೂ ಅನಿಂದಿತಾ ತಾವು ಬಿಡುಗಡೆ ಮಾಡಿದ ಕಣಜಗಳಲ್ಲಿ ಕೆಲವು ಗಮನಾರ್ಹ ನಡವಳಿಕೆಗಳನ್ನು ಕಂಡರು. ಕಣಜಗಳನ್ನು ಹಾರಲು ಬಿಟ್ಟಾಗ ಮೊದಲು ಅವು ಯಾವ ಕಡೆಯಲ್ಲಿ ಹಾರಿ ಕಣ್ಮರೆಯಾಗುತ್ತವೆ ಎನ್ನುವುದನ್ನು ದಿಕ್ಸೂಚಿಯ ನೆರವಿನಿಂದ ಗುರುತಿಸಿದರೆ, ಅವು ಯಾವ ದಿಕ್ಕಿನಲ್ಲಿ ಹಾರಾಟ ಆರಂಭಿಸಿದವು ಎನ್ನುವುದನ್ನು ದಾಖಲಿಸಬಹುದು. ಇದನ್ನು ಯಥಾವತ್ತಾಗಿ ಕಣ್ಮರೆಯ ದಿಕ್ಕು ಎನ್ನಬಹುದು.

ಪರಿಚಿತವಾದ ಪ್ರದೇಶದಲ್ಲಿ ಬಿಟ್ಟ ಕಣಜಗಳು ತಮ್ಮ ಗೂಡಿಗೆ ಅದೇ ದಿನ ಮರಳಿದುವು, ಆದರೆ ಅವುಗಳ ಕಣ್ಮರೆಯ ದಿಕ್ಕು ಮಾತ್ರ ಗೂಡಿನ ಕಡೆಗೆ ಇರಲಿಲ್ಲ. ಬಹುಶಃ, ತಮಗೆ ಪರಿಚಿತವಾದ ಸ್ಥಳದಲ್ಲಿಯೇ ಇದ್ದುದರಿಂದ ಅವಕ್ಕೆ ಗೂಡಿಗೆ ಮರಳುವ ಆತುರವಿರಲಿಕ್ಕಿಲ್ಲ. ಸ್ವಲ್ಪ ಆಹಾರ ಸಂಗ್ರಹಿಸಿ ಆಮೇಲೆ ಮರಳಬಹುದಲ್ಲ! ಈ ಊಹೆ ನಿಜವೋ ಎನ್ನುವುದನ್ನು ತಿಳಿಯಲು ಕಣಜಗಳನ್ನು ಹಾರಲು ಬಿಡುವ ಮುನ್ನ ಸೌವಿಕ್‌ ಮತ್ತು ಅನಿಂದಿತಾ ಅವಕ್ಕೆ ತಿನಿಸು ಕೊಟ್ಟರು. ಹೀಗೆ ಮಾಡಿದಾಗ ಈ ಕಣಜಗಳು ಹಾರಿದ ಕೂಡಲೇ ಗೂಡಿನ ಕಡೆಗೇ ಮುಖ ಮಾಡಿದವು, ಹೀಗೆ ತಿನಿಸು ತಿನ್ನದ ಕಣಜಗಳಿಗಿಂತಲೂ ಮೊದಲೇ ಗೂಡಿಗೆ ಮರಳಿದ್ದುವು. ಪರಿಚಿತ ಪ್ರದೇಶದ ಆಚೆಗೆ ಬಿಟ್ಟಾಗ ಕೆಲವು ಕಣಜಗಳು ಮೊದಲಿಗೆ ತಮ್ಮ ಗೂಡಿನ ದಿಕ್ಕಿನತ್ತ ಮುಖ ಮಾಡಿ ಕಣ್ಮರೆಯಾದವು, ಮತ್ತು ಅದೇ ದಿನ ಗೂಡಿಗೆ ಮರಳಿದವು. ಉಳಿದವು ಬೇಕಾಬಿಟ್ಟಿ ದಿಕ್ಕುಗಳಲ್ಲಿ ಹಾರಿದುವು. ಗೂಡಿಗೆ ಒಂದೋ, ಎರಡೋ ದಿನಗಳನ್ನು ಕಳೆದು ಮರಳಿದುವು. ಕೆಲವು ಮರಳಲೇ ಇಲ್ಲ.

ಇನ್ನೂ ಒಂದು ಆಕರ್ಷಕವಾದ ಪ್ರಯೋಗದಲ್ಲಿ ಸೌವಿಕ್‌ ಮತ್ತು ಅನಿಂದಿತಾ ಕಣಜಗಳಿಗೆ ತಮ್ಮ ಪರಿಸರದ ಪರಿಚಯ ಸಿಗದಂತೆ ನೋಡಿಕೊಂಡರು. ಗೂಡುಗಳನ್ನು ಆವರಿಸುವಂತೆ ದೊಡ್ಡ ಸೊಳ್ಳೆ ಪರದೆಗಳ ಟೆಂಟುಗಳನ್ನು ನಿರ್ಮಿಸಿ ಹುಟ್ಟಿದಾಗಿನಿಂದಲೂ ಅದರೊಳಗೇ ಇರುವಂತೆ ಕಣಜಗಳಿಗೆ ನೀರು, ಆಹಾರ ಕೊಟ್ಟು ನೋಡಿಕೊಂಡರು. ಪರದೆಯ ಆಚೆಗೆ ಇದ್ದ ಕಣಜಗಳು ಸುಲಭವಾಗಿ ಮರಳುತ್ತಿದ್ದಷ್ಟು ದೂರದಿಂದಲೂ ತಮ್ಮ ಗೂಡಿಗೆ ಮರಳಿ ಬರಲು ಇವುಗಳಿಗೆ ಕಷ್ಟವೆನ್ನಿಸಿತ್ತು. ಆಹಾರವನ್ನು ಕೊಟ್ಟಾಗ ಯಾವ ಯಾವುದೋ ದಿಕ್ಕಿಗೆ ಹಾರುತ್ತಿದ್ದುವು. ಸ್ವಲ್ಪ ವಯಸ್ಸಾದುವುಗಳಷ್ಟೆ ತಡವಾಗಿ ಗೂಡಿಗೆ ಮರಳುತ್ತಿದ್ದುವು. ಅಪರಿಚಿತವಾದ ಆದರೆ ಗೂಡಿಗೆ ಬಹಳ ಹತ್ತಿರವಿದ್ದ ಪ್ರದೇಶದಲ್ಲಿ ಬಿಟ್ಟಾಗಲೂ ಗೂಡಿಗೆ ಮರಳಲು ಇವು ಬೇರೆ ಉಪಾಯಗಳನ್ನು ಬಳಸುತ್ತಿದ್ದಿರಬೇಕು. ಈ ಉಪಾಯಗಳೂ ಕೂಡ ವಯಸ್ಸಾದಂತೆ ಬರುತ್ತಿದ್ದಿರಬೇಕು.

Souvik Mandal proudly posing in front of his mosquito net contraption, enclosing an experimental wasp nest. Photo: Souvik Mandal

ಕಣಜದ ಗೂಡನ್ನು ಆವರಿಸಿ ಕಟ್ಟಿರುವ ಸೊಳ್ಳೆ ಪರದೆಯ ಟೆಂಟಿನ ಮುಂದೆ ನಿಂತ ಸೌವಿಕ್‌ ಮಂಡಲ್. ಚಿತ್ರ: ಸೌವಿಕ್‌ ಮಂಡಲ್

ಈ ಸೊಳ್ಳೆ ಪರದೆಯ ಪ್ರಯೋಗದ ಬಗ್ಗೆ ಸೌವಿಕ್‌ ಹೇಳಿದ ಈ ಕಥೆ ಕೇಳಿ. ಹೀಗೆ ಪರದೆಯ ಟೆಂಟು ಆವರಿಸಿದ ಕಣಜದ ಗೂಡೊಂದು ಆಡಳಿತ ಕಛೇರಿ ಕಟ್ಟಡದ ಮುಂದೆ ಇತ್ತು. ಹೀಗಾಗಿ ಸಂಸ್ಥೆಯ ನಿರ್ದೇಶಕರು ಆತನನ್ನು ಕರೆದು ಕೇಳಿದರಂತೆ. ಆದರೆ ಸೌವಿಕನ ಈ ಚಟುವಟಿಕೆಗಳಿಗೆ ಅಡ್ಡಿ ಮಾಡುವ ಬದಲಿಗೆ, ಇದೆಂತಹ ಪ್ರಯೋಗ ಎಂದು ಕುತೂಹಲ ತೋರಿಸಿದರಂತೆ. ಸೌವಿಕನ ಕಥೆಯನ್ನು ಆಸಕ್ತಿಯಿಂದ ಕೇಳಿಸಿಕೊಂಡರಂತೆ.

ಇನ್ನೊಂದು ತುಸು ಪರಿಶ್ರಮದ ಪ್ರಯೋಗದಲ್ಲಿ ಸೌವಿಕ್‌ ಮತ್ತು ಅನಿಂದಿತಾ ಮೂರು ಗೂಡುಗಳಲ್ಲಿ ಇದ್ದ ವಿಭಿನ್ನ ವಯಸ್ಸಿನ ಕಣಜಗಳ ಬರವು, ನಿರ್ಗಮನ, ಗೂಡಿನಿಂದ ಹೊರಗಿದ್ದ ಅವಧಿ, ಮರಳಿ ಬಂದ ಸಮಯವೆಲ್ಲವನ್ನೂ ಮೂರು ದಿನಗಳ ಕಾಲ ದಾಖಲಿಸಿದರು. ಈ ಮಾಹಿತಿಯಿಂದ ಕಣಜಗಳು ತಮ್ಮ ಹಾದಿಯನ್ನು ಹೇಗೆ ಹುಡುಕಿಕೊಳ್ಳುತ್ತವೆ ಎನ್ನುವ ಬಗ್ಗೆ ಅಮೋಘವಾದ ಅರಿವನ್ನು ಪಡೆದಿದ್ದಾರೆ. ಕಣಜಗಳಿಗೆ ವಯಸ್ಸಾದಂತೆ ಅನುಭವ ಪಡೆದು ನಿರ್ದಿಷ್ಟ ದಿಕ್ಕನ್ನು ಹುಡುಕಿ ಹಾರುತ್ತವೆ. ಬಹುಶಃ ಲಾಭ ನೀಡುವ ಜಾಗಗಳನ್ನು ಅವು ನೆನಪಿನಲ್ಲಿಟ್ಟಿರಬೇಕು. ಇದಕ್ಕೊಂದು ಅದ್ಭುತ ಪುರಾವೆ ಎಂದರೆ ಅನುಭವವಿಲ್ಲದ ಯುವ ಕಣಜಗಳು ಹೊರಹೋದ ನಂತರ ಹೆಚ್ಚೂ ಕಡಿಮೆ ತಾವು ಹೋದ ದಿಕ್ಕಿನಲ್ಲಿಯೇ ಮರಳಿದ್ದುವು. ಆದರೆ ತುಸು ಅನುಭವಿ ಕಣಜಗಳು ಒಂದು ದಿಕ್ಕಿನಿಂದ ಹೋದಂಥವು ಬೇರೆ ದಿಕ್ಕಿನಿಂದ ಮರಳಿದ್ದುವು. ವಯಸ್ಸು ಹಾಗೂ ಅನುಭವದಿಂದಾಗಿ ಅವುಗಳಿಗೆ ತಮ್ಮ ಪರಿಸರದ ಪರಿಚಯ ಸಾಕಷ್ಟು ದೊರೆತು, ಹೊಸ ಹಾದಿಗಳನ್ನು ಹಿಡಿದು ಗೂಡಿಗೆ ಮರಳಲು ಸಾಧ್ಯವಾಗುತ್ತಿದೆ.

A schematic representation of the set-up to record all outbound and return trips of all wasps. The experimental colonies were naturally found within electric boxes attached to roadside lampposts. A motion-sensitive video camera placed 30 cm away began recording automatically whenever a wasp came out or went inside the box. The timing of departure and arrival of every wasp as well as the foraged material could be retrieved from the video, stored in a laptop computer connected to the camera and placed at least 5 m away from the lamppost. Souvik, clad in camouflage attire, sat near the laptop and manually recorded the vanishing direction of the outbound and inbound foraging trips. Photo: Souvik Mandal

ಗೂಡಿನಿಂದ ಹೊರ ಹೋಗಿ ಮರಳಿ ಬರುವ ಎಲ್ಲ ಕಣಜಗಳನ್ನೂ ಗಮನಿಸುವ ಪರಿಯ ಚಿತ್ರ. ಪ್ರಯೋಗದಲ್ಲಿ ಒಳಗೊಂಡ ಕಣಜದ ಗೂಡುಗಳೆಲ್ಲವೂ ರಸ್ತೆ ಬದಿಯಲ್ಲಿದ್ದ ದೀಪಗಳ ಡಬ್ಬಿಗಳಲ್ಲಿ ಸಹಜವಾಗಿಯೇ ಕಟ್ಟಿದಂಥವು. ಇವುಗಳಿಂದ ಮೂವತ್ತು ಸೆಂಮೀ ದೂರದಲ್ಲಿ ಚಲನೆಗೆ ಸಂವೇದಿಸುವ ಕ್ಯಾಮೆರಾವನ್ನು ಇಡಲಾಗಿತ್ತು. ಅದು ಕಣಜಗಳು ಗೂಡಿನ ಒಳಗೆ ಹೋದಾಗ, ಅಥವಾ ಹೊರಬಂದಾಗ ಸ್ವಯಂ ಚಾಲಿತವಾಗಿ ಚಿತ್ರ ತೆಗೆಯುತ್ತಿತ್ತು.  ವೀಡಿಯೋಗಳನ್ನು ಗೂಡಿನಿಂದ ಐದು ಮೀಟರು ದೂರದಲ್ಲಿ ಇಟ್ಟಿದ್ದ ಕಂಪ್ಯೂಟರಿನಲ್ಲಿ ಸಂಗ್ರಹಿಸಿ, ಅದರ ಮೂಲಕ ಕಣಜಗಳು ಹೊರಟ ವೇಳೆ, ವಾಪಸು ಬಂದ ಸಮಯವನ್ನೆಲ್ಲ ವೀಡಿಯೋದಿಂದ ಪಡೆಯಬಹುದಿತ್ತು.  ಕಣಜಗಳು ಬೆದರದಂತೆ ಹಸಿರು ಮರೆಮಾಚುವ ವೇಷವನ್ನು ಧರಿಸಿದ ಸೌವಿಕ್‌, ಗಣಕಯಂತ್ರದ ಬಳಿ ಕುಳಿತು ಕಣಜಗಳು ಹೊರಹೋಗುವಾಗ ಕಣ್ಮರೆಯಾಗುವ ದಿಕ್ಕನ್ನೂ, ಒಳಬರುವಾಗಿನ ದಿಕ್ಕನ್ನೂ ದಾಖಲಿಸುತ್ತಿದ್ದ. ಚಿತ್ರ: ಸೌವಿಕ್‌ ಮಂಡಲ್‌

ವಿಶೇಷವಾದ ಫ್ಯಾನ್ಸಿ ಎನ್ನಿಸುವ ತಂತ್ರಜ್ಞಾನಗಳಿಲ್ಲದೆಯೇ, ಕುತೂಹಲ ಕಲ್ಪನೆಗಳೇ ಪ್ರೇರಣೆಯಾದ ಕೆಲವು ಸರಳ ಪ್ರಯೋಗಗಳ ಮೂಲಕ ನಾವು ಎಷ್ಟೊಂದೆಲ್ಲಾ ಅರಿತುಕೊಳ್ಳಬಹುದು.

ಸೌವಿಕ್‌ ಲಭ್ಯ ಪ್ರಬಂಧಗಳನ್ನು ಓದುವುದನ್ನೇ ನಿರ್ಲಕ್ಷಿಸಿಬಿಟ್ಟ ಎಂದು ನಿಮಗೆ ಅನಿಸಿದ್ದರೆ ಕ್ಷಮಿಸಿ. ಹಾಗೇನಿಲ್ಲ. ಒಂದಿಷ್ಟು ಓದು, ಸ್ವಲ್ಪ ಪ್ರಯೋಗಗಳು, ಇನ್ನಷ್ಟು ಓದುವುದು, ಇನ್ನಷ್ಟು ಪ್ರಯೋಗಗಳು, ಮತ್ತಷ್ಟು ಓದು ಹೀಗೆ ನಿರಂತರ ಚಕ್ರದ ರೀತಿಯಲ್ಲಿ ಕೆಲಸ ಮಾಡುವ ಜಾಣತನವನ್ನು ಆತ ತೋರಿದ್ದ. ಹೀಗೆ ತನ್ನ ಪಿಎಚ್‌ಡಿ ಪ್ರಬಂಧವನ್ನು ಬರೆಯುವಷ್ಟರಲ್ಲಿ ಈ ವಿಷಯದ ಸಾಹಿತ್ಯದಲ್ಲೆಷ್ಟು ಪರಿಣತನಾಗಿದ್ದನೆಂದರೆ, ಆತನ ಪ್ರಬಂದದ ಮುನ್ನುಡಿಯನ್ನು ಸಂಶೋಧನಾ ಪತ್ರಿಕೆಯೊಂದು ಆಹ್ವಾನಿತ ಪರಾಮರ್ಶನ ಪ್ರಬಂಧದ ರೂಪದಲ್ಲಿ ಪ್ರಕಟಿಸಿದೆ .

ಬೈಸಿಕಲ್ಲಿನ ಮೇಲೆ ಕಣಜಗಳನ್ನು ಬೆನ್ನಟ್ಟಿದ ಅನುಭವವನ್ನು ಸೌವಿಕ್‌ ಈಗ ಹಾರ್ವರ್ಡ್‌ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯುಟೇಶನಲ್‌ ಇಥಾಲಜಿ ಅಥವಾ ಗಣಿಕೀಯ ನಡವಳಿಕೆವಿಜ್ಞಾನ ಕಲಿಸುವುದರಲ್ಲಿ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾನೆ. ಅವನ ಗುರುವಾಗಿದ್ದುದು ನನ್ನ ಅದೃಷ್ಟವಷ್ಟೆ.

ಇದು ಇಂದಿನ ಜಾಣ ಅರಿಮೆ. ಆಂಗ್ಲ ಮೂಲ: ಪ್ರೊಫೆಸರ್‌ ರಾಘವೇಂದ್ರ ಗದಗ್‌ಕರ್, ಕನ್ನಡಾನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್‌. ಮಂಜುನಾಥ. ಆಂಗ್ಲ ಮೂಲವನ್ನು ದಿ ವೈರ್‌ ಸೈನ್ಸ್‌ ಪತ್ರಿಕೆ ಮೊದಲು ಪ್ರಕಟಿಸಿತ್ತು.

Scroll To Top