
ಥಾಮಸ್ ಡಿ. ಸೀಲಿ ಜೇನುಹುಳುಗಳಿಂದ ಕಲಿಯುತ್ತಿರುವುದು. ಚಿತ್ರ: ಥಾಮಸ್ ಸೀಲಿ
ಸಂಪುಟ 4 ಸಂಚಿಕೆ 150, ಫೆಬ್ರವರಿ 18, 2021
ವಿಸ್ಮಯಕ್ಕಿಂತ ವಿಸ್ಮಯ:12
ಕೀಟ ಸಮಾಜದಿಂದ ಪಾಠ ಕಲಿಯೋಣವೇ?
Kannada translation by Kollegala Sharma
ಇರುವೆ, ಜೇನ್ನೊಣ, ಕಣಜ, ಗೆದ್ದಲು ಮೊದಲಾದ ಹಲವು ಕೀಟಗಳು, ವಿವಿಧ ಕಾರ್ಯಗಳನ್ನು ಹಂಚಿಕೊಂಡು, ಸಂವಹನ, ಸಹಕಾರ, ತ್ಯಾಗ ಮತ್ತು ಸಂಘರ್ಷಗಳು ಇರುವಂತಹ ಸಮಾಜಗಳಾಗಿ ಸಂಘಟಿತವಾಗಿರುತ್ತವೆ. ಇಂತಹ ಕೀಟಸಮಾಜಗಳು ಹಲವು ರೀತಿಯಲ್ಲಿ ಮಾನವ ಸಮಾಜವನ್ನು ಹೋಲುವುದಷ್ಟೆ ಅಲ್ಲ, ಕೆಲವು ವಿಷಯಗಳಲ್ಲಿ ಮಾನವ ಸಮಾಜಕ್ಕಿಂತಲೂ ಸಮರ್ಥವಾದಂಥವು. ಇವು ಪರಿಸರದಲ್ಲಿರುವ ಸಂಪನ್ಮೂಲಗಳನ್ನು ಸುಸ್ಥಿರ ರೀತಿಯಲ್ಲಿ ಬಳಸುತ್ತವೆ. ತಮ್ಮ ಗೂಡುಗಳ ಹೊರಗಿನ, ಒಳಗಿನ ಪರಿಸರವನ್ನು ಮಾರ್ಪಡಿಸಿಕೊಳ್ಳುತ್ತವೆ. ಕೃಷಿ ಮಾಡುತ್ತವೆ. ವೈಯಕ್ತಿಕವಾಗಿಯೂ, ಸಾಮಾಜಿಕವಾಗಿಯೂ ಪ್ರತಿರೋಧವನ್ನು ತೋರುತ್ತಾ ರೋಗಗಳ ಜೊತೆಗೆ ಸೆಣಸುತ್ತವೆ. ಗುಂಪು ಗುಂಪಾಗಿ ಬೇಟೆಯ ಹಬ್ಬವನ್ನೂ ಆಚರಿಸುತ್ತವೆ. ನೆಲ ಹಾಗೂ ಆಕಾಶದಲ್ಲಿರುವ ಗುರುತುಗಳನ್ನು ಬಳಸಿಕೊಂಡು ಹಾದಿ ಹುಡುಕುತ್ತವೆ. ಅಷ್ಟೇ ಅಲ್ಲ. ಹೂತಳೆಯುವ ಗಿಡಗಳಂತಹ ಇತರೆ ಜೀವಿಗಳ ವಿಕಾಸದ ಹಾದಿಯನ್ನೂ ಬದಲಿಸಿಬಿಡುತ್ತವೆ.
ಸೂಜಿಮೊನೆಯಷ್ಟು ಪುಟ್ಟ ಮಿದುಳಿರುವ ಅವು ಇವೆಲ್ಲವನ್ನೂ ಯಾವ ಮುಖಂಡನ ನೆರವೂ ಇಲ್ಲದೆ ಸ್ವಸಂಘಟನೆ ಹಾಗೂ ಸಾಮಾಜಿಕ ಬುದ್ಧಿಮತ್ತೆಯ ನೆರವಿನಿಂದ ಸಾಧಿಸುತ್ತವೆ. ಹೀಗೆ “ಅತಿಜೀವಿ” ಅರ್ಥಾತ್ ಸೂಪರ್ ಆರ್ಗಾನಿಸಂ ಎನ್ನುವ ಬಿರುದನ್ನೂ ಪಡೆದಿರುವ ಇವು ಈ ಭೂಮಿಯಲ್ಲಿರುವ ಪರಿಸರದಲ್ಲಿ ಪ್ರಧಾನವಾದ ಜೀವಿಗಳೆಂಬ ಖ್ಯಾತಿಯನ್ನೂ ಪಡೆದಿವೆ.
ಹಾಗಿದ್ದರೆ ನಾವು ಮನುಜರು ಈ ಕೀಟಸಮಾಜಗಳಿಂದ ಕಲಿಯುವುದೇನಾದರೂ ಇದೆಯೇ? ಕಲಿಯಬಾರದೆಂದೇನಿಲ್ಲ. ಆದರೆ ಕೆಲವು ಸಮಸ್ಯೆಗಳಿವೆ. ಸಮಸ್ಯೆಗಳು ಕೀಟಸಮಾಜದ್ದಲ್ಲ, ನಮ್ಮದು ಅಷ್ಟೆ. ನಾವು ಮಾಡಿದ ತಪ್ಪುಗಳನ್ನು ಗ್ರಹಿಸಿ, ಅವನ್ನು ತಿದ್ದಿಕೊಳ್ಳಲು ಪ್ರಯತ್ನಿಸಿದರೆ ಬಹುಶಃ ಈ ಸಮಸ್ಯೆಗಳಿಗೆ ಪರಿಹಾರ ಸಿಕ್ಕೀತು.
ಪ್ರಕೃತಿವಾದವೆನ್ನುವ ಭ್ರಮೆ
ಮನುಷ್ಯನ ಸಾಮಾಜಿಕ ಹಾಗೂ ನೈತಿಕ ನಡವಳಿಕೆಗಳಿಗೆ ನಾವು ನಿಸರ್ಗದಲ್ಲಿ ಕಾಣುವ ವಿದ್ಯಮಾನಗಳನ್ನೇ ಸಮಜಾಯಿಷಿಯಾಗಿ ಕೊಡುತ್ತೇವಷ್ಟೆ. ಇದನ್ನೇ ಪ್ರಕೃತಿವಾದ ಎನ್ನುತ್ತಾರೆ. ಇದೊಂದು ಭ್ರಮೆ ಎಂದು ಹೇಳಲಾಗುತ್ತದೆ. ಏಕೆಂದರೆ ನಿಸರ್ಗದಲ್ಲಿ ಇರುವಂತೆಯೇ ನಾವೂ ನಡೆದುಕೊಳ್ಳಬೇಕು ಎನ್ನುವ ನಂಬಿಕೆಯಲ್ಲಿ ತರ್ಕವೂ ಇಲ್ಲ, ನೈತಿಕವೂ ಆಗಿರಬೇಕಿಲ್ಲ. ನಿಸರ್ಗದಲ್ಲಿ ಒಳ್ಳೆಯದು, ಕೆಟ್ಟದ್ದು, ಎಲ್ಲವೂ ಇರುತ್ತವೆ. ಹೀಗಾಗಿ ನಾವು ನಮ್ಮ ನಡವಳಿಕೆಗಳನ್ನು ಸಮರ್ಥಿಸಲು ಬೇಕಾದ ಉದಾಹರಣೆಗಳನ್ನು ಹೆಕ್ಕಬಹುದು. ಸಾರ್ವಭೌಮತ್ವ, ಗುಲಾಮಗಿರಿ, ಕೊಲೆ, ಮಾತೃಹತ್ಯೆ, ಪಿತೃಹತ್ಯೆ, ಸೋದರಹತ್ಯೆ, ಶಿಶುಹತ್ಯೆ ಅಷ್ಟೇ ಯಾಕೆ ಹುಡುಕಿದರೆ ಪ್ರಜಾಸತ್ತೆ, ಸಮಾಜವಾದ, ತ್ಯಾಗ, ಸ್ವಾರ್ಥ, ಆತ್ಮಾಹುತಿ, ಹೀಗೆ ಯಾವುದನ್ನು ಬೇಕಿದ್ದರೂ ಸಮರ್ಥಿಸಿಕೊಳ್ಳಬಲ್ಲ ಉದಾಹರಣೆಗಳು ಸಿಗಬಹುದು.
ಹದಿನೆಂಟು ಮತ್ತು ಹತ್ತೊಂಭತ್ತನೆಯ ಶತಮಾನದ ಪ್ರತಿಷ್ಠಿತ ತತ್ವಶಾಸ್ತ್ರಜ್ಞರಾದ ಇಮ್ಯಾನ್ಯುವೆಲ್ ಕಾಂಟ್, ಡೇವಿಡ್ ಹ್ಯೂಮ್, ಜಾನ್ ಸ್ಟುವರ್ಟ್ ಮಿಲ್ ಮೊದಲಾದವರು ಇಂತಹ ಪ್ರಕೃತಿವಾದದ ಸುಳಿಯಲ್ಲಿ ಸಿಲುಕಿಕೊಳ್ಳುವುದರ ಬಗ್ಗೆ ಎಚ್ಚರಿಸಿದ್ದುಂಟು. ಅದೇ ಇಂದಿನ ಕಾಲದ ಹಲವು ತತ್ವವಿಜ್ಞಾನಿಗಳು ನಿಸರ್ಗವನ್ನು ಸಂಪೂರ್ಣವಾಗಿ ಮರೆತು, ಮನುಷ್ಯ ಸ್ವಭಾವಕ್ಕೆ ತಕ್ಕುದಾದವುಗಳಿಗಷ್ಟೆ ಅಂಟಿಕೊಳ್ಳಬೇಕೆನ್ನುತ್ತಾರೆ. ಜೀವನ ಪರ್ಯಂತ ಕೀಟಗಳ ಸಮಾಜವನ್ನೇ ಅಧ್ಯಯನ ಮಾಡಿದ ನನಗೆ ಅವುಗಳೆಂದರೆ ಬೆರಗೆನ್ನುವುದು ನಿಜವೇ. ಅವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು ನಾಚಿಕೆಗೇಡಿನ ವಿಷಯ ಎಂದು ನನಗೆ ಅನಿಸುತ್ತದೆ.
ಎರಡೂ ಬೇಡವೆನ್ನುವ ನಡುವಿನ ಹಾದಿಯನ್ನು ಹಿಡಿಯಬಹುದು. ಪ್ರಕೃತಿವಾದದ ಭ್ರಮೆ ನಮ್ಮನ್ನು ಬಾಧಿಸದಂತೆ ಕೀಟ ಸಮಾಜಗಳಿಂದ ನಾವು ಕಲಿಯಬಹುದು. ಇದಕ್ಕೆ ನನ್ನ ಸಲಹೆ ಇಷ್ಟೆ. ಅದು ನಿಸರ್ಗದಲ್ಲಿ ಇದೆಯೋ ಇಲ್ಲವೋ, ಪ್ರಾಣಿ ಗಳು ಹಾಗೆ ನಡೆದುಕೊಳ್ಳುತ್ತವೆಯೋ ಎನ್ನುವ ಚಿಂತೆ ಬಿಟ್ಟು, ನಮಗೆ ಇಷ್ಟವಾದುದನ್ನು ಮಾಡೋಣ. ಹೀಗೆ ಒಮ್ಮೆ ನಿಶ್ಚಯಿಸಿದ ಮೇಲೆ, ಅದನ್ನು ಎಷ್ಟು ಸಮರ್ಪಕವಾಗಿ ಮಾಡಬಹುದು ಎನ್ನುವುದನ್ನು, ನಿಸರ್ಗವನ್ನು ನೋಡಿ ಕಲಿಯೋಣ. ಮೊದಲಿಗೆ ವಿವಾದವಿಲ್ಲದಂತಹ ವಿಷಯಗಳತ್ತ ಗಮನ ಹರಿಸೋಣ.
ಇರುವೆಗಳ ಗೂಡಿನ ಉತ್ತಮೀಕರಣ
ಇರುವೆಗಳು ಬಲು ಜಾಣ. ಅವು ಗೂಡಿನಿಂದ ಆಹಾರದ ನೆಲೆಯವರೆಗೆ ಇರುವ ಹಲವು ಹಾದಿಗಳಲ್ಲಿ ಅತಿ ಪುಟ್ಟದಾದುದನ್ನೇ ಆಯ್ದುಕೊಳ್ಳುತ್ತವೆ. 1989ರಲ್ಲಿ ಬ್ರಸೆಲ್ಸ್ ವಿಶ್ವವಿದ್ಯಾನಿಲಯದ ನಡವಳಿಕೆ ಪರಿಸರವಿಜ್ಞಾನ ವಿಭಾಗದಲ್ಲಿ ಜೀನ್-ಲೂಯಿಸ್ ಡೆನ್ಯೂಬರ್ಗ್ ಮತ್ತು ಸಂಗಡಿಗರು ಇರುವೆಗಳು ಇದನ್ನು ಹೇಗೆ ಸಾಧಿಸುತ್ತವೆ ಎಂದು ಪತ್ತೆ ಮಾಡಿದರು. ಇವು ಇರುವೆಗಳ ವೈಯಕ್ತಿಕ ಬುದ್ಧಿಮತ್ತೆಯ ಫಲದಿಂದಾಗಿ ಅಲ್ಲ. ಇರುವೆಗಳೆಲ್ಲವೂ ಒಂದಿನ್ನೊಂದರ ಗಂಧದ ಜಾಡನ್ನು ಅನುಸರಿಸುತ್ತಾ, ತಾವು ತಮ್ಮದೊಂದು ಜಾಡನ್ನು ಸೃಷ್ಟಿಸುವ ಮೂಲಕ ಹೀಗೆ ಮಾಡುತ್ತವೆಯಂತೆ. ಹೀಗೆ ನಿರ್ದಿಷ್ಟ ಯೋಜನೆಯೋ, ಗುರಿಯೋ, ಮುಖಂಡರು ಇಲ್ಲದಿದ್ದರೂ, ವಿವಿಧ ಹಾದಿಗಳ ಉದ್ದವೆಷ್ಟು ಎಂದು ತಿಳಿಯದಿದ್ದರೂ ಇವು ಅತಿ ಚಿಕ್ಕದಾದ ಹಾದಿಯನ್ನೇ ಆಯ್ದುಕೊಳ್ಳುತ್ತವೆ. ಇಂತಹ ಸ್ವಸಂಘಟನೆಯಿಂದಾಗಿ ಹುಟ್ಟುವ ನಡವಳಿಕೆಗಳು ಸೂಜಿಮೊನೆ ಗಾತ್ರದ ಮಿದುಳಿರುವ ಜೀವಿಗಳ ಕೀಟಜಗತ್ತಿನಲ್ಲಿ ತೋರ್ಪಡುವ ಹಲವಾರು ಜಟಿಲವಾದ ನಡವಳಿಕೆಗಳಿಗೆ ಕಾರಣ.
ಇರುವೆಗಳ ಈ ಸರಳ ನಡವಳಿಕೆಗಳನ್ನೇ ಅನುಕರಿಸಿ ಬ್ರಸೆಲ್ಸ್ ವಿಶ್ವವಿದ್ಯಾನಿಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಶೋಧನಾಲಯದ ಮಾರ್ಕೋ ಡೊರಿಗೋ ಮತ್ತು ಸಂಗಡಿಗರು ಗಣಕ ಯಂತ್ರಗಳಿಗಾಗಿ ಹಲವಾರು ಸಮರ್ಥ ಆಲ್ಗೊರಿದಂಗಳನ್ನು ರೂಪಿಸಿದ್ದಾರೆ. ಆಂಟ್ ಕಾಲೊನಿ ಆಪ್ಟಿಮೈಸೇಶನ್ ಆಲ್ಗೊರಿದಂ ಎನ್ನುವ ಈ ಗಣಕ ತಂತ್ರಜ್ಞಾನದ ಉಪಶಾಖೆ ಕೀಟಜಗತ್ತಿನಿಂದ ಕಲಿತ ಪಾಠಗಳನ್ನು ಬಳಸಿಕೊಂಡು, ಒಂದೇ ಊರಿಗೆ ಮರಳಿ ಬಾರದಂತೆ ಹಲವಾರು ಊರುಗಳಿಗೆ ಅತಿ ಕಡಿಮೆ ಸಮಯದಲ್ಲಿ ಭೇಟಿ ಕೊಡುವ ಟ್ರಾವೆಲಿಂಗ್ ಸೇಲ್ಸ್‌ಮನ್ ಸಮಸ್ಯೆಗಳು, ಸಂವಹನ ಜಾಲಗಳು ತಂತಾವೇ ಸರಳವಾದ ಹಾದಿಯನ್ನು ಹುಡುಕುವ ಅಡಾಪ್ಟಿವ್ ರೂಟಿಂಗ್ ಸಮಸ್ಯೆಗಳು, ದತ್ತಾಂಶಗಳಲ್ಲಿ ಸಮಾನ ಗುಣದವುಗಳನ್ನು ಹುಡುಕಿ ಒಟ್ಟಾಗಿಸುವಂತಹ ಡೇಟ ಕ್ಲಸ್ಟರಿಂಗ್ ಸಮಸ್ಯೆಗಳು, ಸಂಪನ್ಮೂಲಗಳ ಸಮರ್ಪಕ ಹಂಚಿಕೆ, ನಕ್ಷೆಗಳಿಗೆ ಬಣ್ಣ ತುಂಬುವ ಸಮಸ್ಯೆ, ಯಂತ್ರಗಳ ಕಾರ್ಯಗಳ ನಿರ್ವಹಣೆ, ವಾಹನಗಳ ಹಾದಿಯನ್ನು ನಿಶ್ಚಯಿಸುವುದು, ಮೆಶೀನ್ ಲರ್ನಿಂಗ್ ನಂತಹ ತಂತ್ರಜ್ಞಾನಗಳಲ್ಲಿ ಈ ಆಂಟ್ ಕಾಲೊನಿ ಆಪ್ಟಿಮೈಸೇಶನ್ ಪರಿಹಾರಗಳನ್ನು ಅಭಿವೃದ್ಧಿ ಪಡಿಸಲಾಗಿದೆ.
ರೋಬೋಟುಗಳ ಹಾರಾಟ

ಎಡಗಡೆ ಇರುವುದು ಒಂದು ಜೇನುಗೂಡು. ಈ ಗೂಡಿರುವ ಮರದ ತೊಗಟೆಯನ್ನು ಸೀಳಿ, ಒಳಗೆ ಜೇನು ತುಂಬಿದ (ಮೇಲೆ) ಹಾಗೂ ಜೇನುಹುಳು ತುಂಬಿದ (ಕೆಳಗೆ) ಗೂಡುಗಳನ್ನು ಕಾಣಿಸಲಾಗಿದೆ. ಗೂಡಿನ ಮೂರನೇ ಎರಡರಷ್ಟು ಎತ್ತರದಲ್ಲಿ ಇರುವ ಗೂಡಿನ ದ್ವಾರ ಐದು ಸೆಮೀ ಅಗಲ, ಎಂಟು ಸೆಮೀ. ಎತ್ತರವಿದೆ. ಬಲಗಡೆಯಲ್ಲಿ ಇದೇ ಚಿತ್ರವನ್ನೇ ಹಿಗ್ಗಲಿಸಿ ಕೆಲವು ಜೇನ್ನೊಣಗಳನ್ನೂ ತೋರಿಸಲಾಗಿದೆ. ಚಿತ್ರ ಕೃಪೆ: ಥಾಮಸ್ ಸೀಲಿ
ಜೇನ್ನೊಣಗಳ ಅನ್ವೇಷಕ ಗಳು ಗೂಡಿಗೆ ಮರಳಿದ ಮೇಲೆ ತಾವು ಪತ್ತೆ ಮಾಡಿದ ಮಕರಂದ ಹಾಗೂ ಪರಾಗಗಳನ್ನು ಗೂಡಿಗೆ ಹೊತ್ತು ತರಲು ತಮ್ಮ ಇತರೆ ಸೋದರಿಯರ ನೆರವನ್ನು ಪಡೆಯುತ್ತವೆ. ಆಹಾರವಿರುವ ದಿಕ್ಕು ಮತ್ತು ದೂರವನ್ನು ತಿಳಿಸಲು ಅವು ಒಂದು ನೃತ್ಯಭಾಷೆಯನ್ನು ಬಳಸುತ್ತವೆ. ಆದರೆ ಇವು ತಾವೆಷ್ಟು ದೂರ ಹಾರಿದ್ದೇವೆನ್ನುವುದನ್ನು ಹೇಗೆ ಅಂದಾಜಿಸುತ್ತವೆ?
ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿರುವ ಆಸ್ಟ್ರೇಲಿಯಾ ನ್ಯಾಶನಲ್ ಯೂನಿವರ್ಸಿಟಿಯ ಮಂಡ್ಯಂ ಶ್ರೀನಿವಾಸನ್ ಮತ್ತು ಸಂಗಡಿಗರು ಜೇನ್ನೊಣಗಳು ಅದು ಹೇಗೆ ತಾವು ಹಾರಿದ ದೂರವನ್ನು ಅಂದಾಜಿಸುತ್ತಿರಬಹುದು ಎಂದು ಒಂದು ಸರಳ ಪ್ರಯೋಗದ ಮೂಲಕ ನಿರೂಪಿಸಿದ್ದಾರೆ. ತಮ್ಮ ದೃಷ್ಟಿಯ ವ್ಯಾಪ್ತಿಯಲ್ಲಿ ಆಗುವ ಬದಲಾವಣೆ, ಅಂದರೆ ದೃಶ್ಯಕೋನ ಎಷ್ಟು ಹಿಂದೆ ಸರಿಯುತ್ತದೆ ಎನ್ನುವುದನ್ನು ಗುರುತಿಸಿ ಅವು ದೂರವನ್ನು ಗಣಿಸುತ್ತವೆ. ಇವರು ಜೇನ್ನೊಣಗಳನ್ನು ಕಿರಿದಾದ ಸುರಂಗದೊಳಗೆ ಹಾರುವಂತೆ ಮಾಡಿದ್ದಾರೆ. ಇದರಿಂದ ಅವುಗಳ ದೃಷ್ಟಿವ್ಯಾಪ್ತಿ ಸರಿಯುವ ವೇಗ ಹೆಚ್ಚಾಗಿ ಅವು ತಾವು ಕ್ರಮಿಸಿದ ದೂರವನ್ನು ಹೆಚ್ಚು ಎಂದು ಲೆಕ್ಕಿಸುತ್ತವೆ. ಮಾನವರಹಿತ ನೌಕೆಗಳನ್ನು ವಿನ್ಯಾಸ ಮಾಡಿ, ನಿರ್ದೇಶಿಸಿ, ಗುರಿ ಮುಟ್ಟುವಂತೆ ಮಾಡಲು ಇಂದು ಜೇನ್ನೊಣಗಳಿಂದ ಕಲಿತ ಈ ತತ್ವಗಳನ್ನು ಉಪಯೋಗಿಸಲಾಗುತ್ತಿದೆ.
ಗೆದ್ದಲು ಮತ್ತು ಇರುವೆ ಕೃಷಿಕರು
ಇರುವೆ ಹಾಗೂ ಗೆದ್ದಲಿನಂತಹ ಕೀಟಗಳ ಸಮಾಜವು ಐದು ಕೋಟಿ ವರ್ಷಗಳಿಂದಲೂ ಕೃಷಿಯಲ್ಲಿ ತೊಡಗಿಕೊಂಡಿದೆ. (ನಾವು ಕೇವಲ ಹತ್ತು ಸಾವಿರ ವರ್ಷದಿಂದ ಆರಂಭಿಸಿದ್ದೇವಷ್ಟೆ.) ಉದಾಹರಣೆಗೆ, ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕದ ಉಷ್ಣವಲಯದ ಎಲೆ ಕಡಿಯುವ ಕೆಂಜಿಗಗಳು ಹರಿದು ತಂದ ಎಲೆಗಳನ್ನು ನಿರ್ದಿಷ್ಟ ಬೂಸು ಜೀವಿಯನ್ನು ಬೆಳೆಸಲು ಉಪಯೋಗಿಸುತ್ತವೆ. ಆ ಗೂಡಿನಲ್ಲಿರುವ ಸಾವಿರಾರು, ಕೆಲವೊಮ್ಮೆ ಲಕ್ಷಾಂತರ ಇರುವೆಗಳು ತಮ್ಮ ಪೋಷಣೆಗೆ ಈ ಕೃಷಿ ಉತ್ಪನ್ನವನ್ನೇ ಅವಲಂಬಿಸಿರುತ್ತವೆ. ನಾವು ಕೃಷಿ ಮಾಡುವಾಗ ಆಗುವಂತೆಯೇ ಭೂಮಿಯ ಫಲವತ್ತತೆಯ ನಷ್ಟ, ರೋಗಗಳ ಸೋಂಕು ಮೊದಲಾದ ತೊಂದರೆಗಳು ಇರುವೆಗಳ ಕೃಷಿಯನ್ನೂ ಕಾಡುತ್ತವೆ. ಈ ಸಮಸ್ಯೆಗಳನ್ನು ಎದುರಿಸಲು ಇರುವೆಗಳು ಹಲವು ಸಮರ್ಥ ತಂತ್ರಗಳನ್ನು ವಿಕಾಸಗೊಳಿಸಿಕೊಂಡಿವೆ.
ಇರುವೆಗಳ ಈ ಕೃಷಿಗಾರಿಕೆಯನ್ನು ದೀರ್ಘ ಕಾಲದಿಂದ ಅಧ್ಯಯನ ಮಾಡುತ್ತಿರುವ ಅಮೆರಿಕೆಯ ಆಸ್ಟಿನ್ನಿನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿರುವ ಉಲ್ರಿಚ್ ಮುಲ್ಲರ್ ಮತ್ತು ಅವರ ಸಂಗಡಿಗರು ಇರುವೆ ಹಾಗೂ ಮಾನವರ ಕೃಷಿ ಕೈಗಾರಿಕೆಗಳಲ್ಲಿ ಹಲವು ಸಾಮ್ಯಗಳನ್ನೂ, ಕೆಲವು ವ್ಯತ್ಯಾಸಗಳನ್ನೂ ಗುರುತಿಸಿದ್ದಾರೆ. ಹೀಗೆ ಇರುವೆಗಳಿಂದ ನಾವು ಕಲಿಯಬಹುದಾದ ಕೆಲವು ಪಾಠಗಳನ್ನೂ ಅರಿತಿದ್ದಾರೆ. ವಿಶೇಷವಾಗಿ ಇರುವೆಗಳಿಂದ ನಾವು ಕಲಿಯಬಹುದಾದ ಮುಖ್ಯವಾದ ಪಾಠವೇನೆಂದರೆ, ಇರುವೆಗಳು ತಾವು ಕೃಷಿ ಮಾಡುವ ಸೂಕ್ಷ್ಮಜೀವಿಗಳನ್ನು ನೈಸರ್ಗಿಕ ಆಯ್ಕೆಯ ಮೂಲಕ ಆಯುವಾಗ ಎಷ್ಟು ಎಚ್ಚರಿಕೆಯಿಂದ ಇರುತ್ತವೆ ಎನ್ನುವುದು. ಇರುವೆಗಳು ಪೌಷ್ಟಿಕಾಂಶಗಳನ್ನು ಹೆಚ್ಚು ಹೀರಿಕೊಳ್ಳುವ ಹಾಗೂ ರೋಗ ಪ್ರತಿರೋಧವೇ ಹೆಚ್ಚಿರುವಂತಹ ಬೂಸುಗಳನ್ನೇ ಆಯ್ದುಕೊಳ್ಳುತ್ತವೆ. ಇರುವೆಗಳ ಈ ಕ್ಷಮತೆಯನ್ನು ನಾವು ಸರಿಗಟ್ಟುವ ಕಾಲ ಇನ್ನೂ ಬಹಳ ದೂರವಿದೆ.
ಈ ಉದಾಹರಣೆಗಳನ್ನು ಒಪ್ಪಿಕೊಳ್ಳುವುದು ಏನೂ ಸಮಸ್ಯೆಯಲ್ಲ ಬಿಡಿ. ಆದರೆ ಸಾಮಾಜಿಕ ಹಾಗೂ ರಾಜಕೀಯ ವಿಷಯಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನೂ ನಾವು ಇರುವೆಗಳಿಂದ ಕಲಿಯ ಬಹುದೇ? ಇದು ವಿಸ್ಪೋಟಕ ವಿವಾದಾಸ್ಪದ ಸಂಗತಿ ಎನ್ನಬಹುದು. ಇಂತಹ ವಿಷಯಗಳಲ್ಲಿ ತೋರ್ಪಡುವ ಪ್ರಕೃತಿವಾದ ಅತ್ಯಂತ ವಿನಾಶಕಾರಿಯಾಗಬಹುದು. ವಿನಾಶಕಾರಿಯಾಗಿದೆ. ಕೀಟಗಳ ಸಮಾಜದಲ್ಲಿ ಸಂಘರ್ಷ ಹಾಗೂ ಸಹಕಾರದ ಕುರಿತು ನಾನು ಅಧ್ಯಯನ ನಡೆಸುತ್ತಿರುವುದರಿಂದ ಆಗಾಗ್ಗೆ “ಯುದ್ಧ ಮತ್ತು ಶಾಂತಿ” ಎನ್ನುವ ವಿಷಯಗಳ ಬಗ್ಗೆ ಜನಪ್ರಿಯ ಭಾಷಣಗಳನ್ನು ಮಾಡಿದ್ದೇನೆ. ಇಂತಹ ಸಂದರ್ಭದಲ್ಲಿ ನಾವು ಕೀಟಗಳಿಂದ ಕಲಿಯಬಹುದಾದದ್ದು ಏನಾದರೂ ಇದೆಯೋ ಎಂದು ಪ್ರಶ್ನೆಗಳು ಎದುರಾಗಿವೆ. ಇದಕ್ಕೆ ಉತ್ತರವನ್ನು ಮಾತ್ರ ಬಹಳ ಎಚ್ಚರದಿಂದ ಕೊಡುತ್ತೇನೆ. “ನಾವು ಕೀಟಗಳ ಸಮಾಜವನ್ನು ಕಣ್ಣು ಮುಚ್ಚಿ ಅಣಕಿಸಬೇಕಿಲ್ಲ” ಎಂದು ಹೇಳಿದ ನಂತರ “ಕೀಟಗಳ ಸಮಾಜವು ನಮ್ಮ ಸಮಾಜದ ನಡವಳಿಕೆಗೊಂದು ಕನ್ನಡಿಯಾಗಿದೆ. ಅದರಿಂದ ನಾವು ನಮ್ಮನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು.” ಎನ್ನುತ್ತೇ ನೆ.
ಜೇನ್ನೊಣಗಳ ಮನೆ ಹುಡುಕಾಟ.
ಹಾಗಿದ್ದರೂ, ಒಂದು ವಿಷಯದಲ್ಲಿ ನಾವು ಪ್ರಕೃತಿವಾದದಿಂದ ಹಾನಿಗೊಳಗಾಗದಂತೆ ಕೀಟಗಳ ಸಮಾಜವನ್ನು ಅನುಕರಿಸುವ, ಅವಕಾಶ ಉತ್ತಮವಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಜೇನ್ನೊಣಗಳ ಗೂಡಿನಲ್ಲಿ ಒಂದೇ ಒಂದು ಫಲವತಿ ಹೆಣ್ಣು, ರಾಣಿಜೇನು ಇರುತ್ತದೆ. ಸಾವಿರಾರು ಬಂಜೆ ಕಾರ್ಮಿಕರಿರುತ್ತವೆ. ಈ ಗೂಡು ಒಡೆದು ಮರಿಗೂಡೊಂದು ಸೃಷ್ಟಿಯಾದಾಗ, ತಾಯಿ ರಾಣಿಜೇನು ಒಂದಿಷ್ಟು ಹಿಂಬಾಲಕರೊಂದಿಗೆ ಗೂಡನ್ನು ತೊರೆದು ಹೊಸ ಗೂಡನ್ನು ಕಟ್ಟಲೆಂದು ಹೊರಡುತ್ತದೆ. ಗೂಡಿನಲ್ಲಿರುವ ಮೊಟ್ಟೆಗಳು, ಜೇನು ಹಾಗೂ ಪರಾಗದ ನಿಧಿಯನ್ನು ತನ್ನ ಮಗಳಿಗೆ ರಾಣಿಜೇನಾಗಿ ಹೊಸಬದುಕು ಕಟ್ಟಿಕೊಳ್ಳಲೆಂದು ಬಿಟ್ಟು ಹೋಗುತ್ತದೆ. ಈ ತಾಯಿ ರಾಣಿಜೇನು ಹಾಗೂ ಅವಳ ಹಿಂಬಾಲಕರ ತಂಡ ಅನಂತರ ಹತ್ತಿರದಲ್ಲಿಯೇ ಎಲ್ಲೋ ಒಂದೆಡೆ ಗಂಟೆಯಿಂದ ದಿನಗಳವರೆಗೆ ನೆಲೆಯಾಗಿರುತ್ತದೆ. ತಾಯಿ ರಾಣಿಯ ಈ ಹಿಂಡಿನಿಂದ ಒಂದೆರಡು ಜೇನ್ನೊಣಗಳು ಹೊಸ ಗೂಡು ಕಟ್ಟಲು ಬೇಕಾದ ನೆಲೆಯನ್ನು ಹುಡುಕಲು ತೆರಳುತ್ತವೆ.

ಪ್ರತ್ಯೇಕ ಗುರುತಿಸುವಿಕೆಗಾಗಿ ಲೇಬಲ್ ಮಾಡಲಾದ ಕೆಲಸಗಾರ ಜೇನುನೊಣಗಳು. ಚಿತ್ರ: ಥಾಮಸ್ ಸೀಲಿ
ಅನ್ವೇಷಣೆಗೆ ಹೊರಟ ಜೇನ್ನೊಣಗಳು ಆಗಾಗ್ಗೆ ಹಿಂಡಿಗೆ ಮರಳುತ್ತವೆ. ಆಹಾರ ಎಲ್ಲಿದೆ ಎಂದು ಸೂಚಿಸಲು ಬಳಸುವ ಅದೇ ನೃತ್ಯಭಾಷೆಯನ್ನೇ ಬಳಸಿಕೊಂಡು ಇವು ತಾವು ಪತ್ತೆ ಮಾಡಿದ, ಹೊಸ ಗೂಡು ಕಟ್ಟಲು ಯೋಗ್ಯವಾದ ತಾವಿನ ದೂರ ಹಾಗೂ ದಿಕ್ಕನ್ನು ಸೂಚಿಸುತ್ತವೆ. ಜರ್ಮನಿಯ ಕಾರ್ಲ್ ವಾನ್ ಫ್ರಿಶ್ ಜೇನ್ನೊಣಗಳ ಈ ಭಾಷೆಯನ್ನು ಪತ್ತೆ ಮಾಡಿದ್ದನಾದರೂ, ಜೇನ್ನೊಣಗಳು ಅದೇ ಭಾಷೆಯನ್ನು ಹೊಸ ನೆಲೆಯನ್ನು ಹುಡುಕಲು ಬಳಸುತ್ತವೆ ಎಂದು ಗುರುತಿಸಿದ್ದು ಅವನ ಶಿಷ್ಟಯನಾದ ಮಾರ್ಟಿನ್ ಲಿಂಡಾವರ್.
ಆಹಾರ ಹುಡುಕಲು ಹೋದ ಹಲವು ಅನ್ವೇಷಕರು ಹೀಗೆ ತಂತಮ್ಮ ಶೋಧವನ್ನು ಪ್ರಕಟಿಸಿದಾಗ, ಜೇನ್ನೊಣಗಳ ವಿಭಿನ್ನ ತಂಡಗಳು ವಿಭಿನ್ನ ಆಹಾರಗಳ ನೆಲೆಗೆ ಹೋಗಿ ಮಕರಂದವನ್ನೋ, ಪರಾಗವನ್ನೋ ಸಂಗ್ರಹಿಸಬಹುದು. ಆದರೆ ಯಾವಾಗಲೂ ಆಗುವಂತೆ, ಹಲವು ಅನ್ವೇಷಕರು ಹೊಸ ಗೂಡಿನ ಹಲವು ನೆಲೆಗಳನ್ನು ಪ್ರಕಟಿಸಿದಾಗ ಒಂದು ಸಮಸ್ಯೆ ಎದುರಾಗುತ್ತದೆ. ಎಲ್ಲ ಜೇನ್ನೊಣಗಳೂ ಕೊನೆಗೆ ಒಂದೇ ಒಂದು ಗೂಡಿಗೆ ಹೋಗಿ ನೆಲೆಸಬೇಕಾಗಿರುವುದರಿಂದ, ಹೀಗೆ ಪತ್ತೆಯಾದ ನೆಲೆಗಳಲ್ಲಿ ಅತ್ಯುತ್ತಮವಾದ ಒಂದನ್ನು ಆಯ್ದುಕೊಳ್ಳಬೇಕಾಗುತ್ತದೆ. ಈ ಗುರುತರ ಕೆಲಸವನ್ನು ಅವು ಹೇಗೆ ನಿಭಾಯಿಸುತ್ತವೆ ಎನ್ನುವುದು ನ್ಯೂಯಾರ್ಕಿನ ಇಥಾಕಾದಲ್ಲಿರುವ ಕಾರ್ನೆಲ್ ವಿಶ್ವವಿದ್ಯಾನಿಲಯದ ನರಜೀವಿವಿಜ್ಞಾನ ಹಾಗೂ ನಡವಳಿಕೆ ತಜ್ಞ ಥಾಮಸ್ ಡಿ. ಸೀಲಿ ಮತ್ತು ಸಂಗಡಿಗರ ಬಲು ದೀರ್ಘ ಕಾಲದ ಅಧ್ಯಯನದ ವಿಷಯ. “ಈ ಅಲೆಮಾರಿ ಕೀಟಗಳು ಅದ್ಭುತ. ಅವು ತಮ್ಮ ಹೊಸ ನೆಲೆಯನ್ನು ಆಯ್ದುಕೊಳ್ಳಲು ಪ್ರಜಾಸತ್ತಾತ್ಮಕವಾದ ಚರ್ಚೆಯನ್ನು ಮಾಡುತ್ತವೆ.” ಎನ್ನುತ್ತಾರೆ ಸೀಲಿ.
ಸಾಮೂಹಿಕ ನಿಶ್ಚಯಗಳು
ಹಲವಾರು ಅನ್ವೇಷಕ ಜೇನ್ನೊಣಗಳು ಕುಣಿದಾಡಿ ತಾವು ಗುರುತಿಸಿದ ನೆಲೆಗಳನ್ನುಜಗಜ್ಜಾಹೀರು ಮಾಡಿದರೂ, ಅವುಗಳ ಕುಣಿತದ ರಭಸ, ಅಂದರೆ ಅವು ಎಷ್ಟು ಬಾರಿ ಕುಣಿಯುತ್ತವೆ ಎನ್ನುವುದು, ಪತ್ತೆ ಮಾಡಿದ ನೆಲೆಗಳ ಗುಣಮಟ್ಟದ ಮೌಲ್ಯಮಾಪನಕ್ಕೆ ಅನುಗುಣವಾಗಿ ಇರುತ್ತದೆ. ಒಳ್ಳೆಯ ನೆಲೆ ಬಲು ಬಲವಾದ ನೃತ್ಯವನ್ನು ಪ್ರೇರೇಪಿಸುತ್ತದೆ. ಅದನ್ನು ಕಂಡು ಆ ನೆಲೆಗೆ ಹೋಗಿ ಮರಳುವ ಜೇನ್ನೊಣಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ. ದುರ್ಬಲ ನೆಲೆಯನ್ನು ಸೂಚಿಸುವ ನೃತ್ಯ ಕ್ಷೀಣವಾಗಿರುವುದಲ್ಲದೆ, ಅದನ್ನು ಅನುಕರಿಸಿ ನೆಲೆ ನೋಡಿ ಬಂದ ಜೇನ್ನೊಣಗಳ ಸಂಖ್ಯೆಯೂ ಕಡಿಮೆ ಇರುತ್ತದೆ. ಆದ್ದರಿಂದ, ಒಳ್ಳೆಯ ನೆಲೆಯ ಪರವಾಗಿ ಕುಣಿದಾಡುವ ಜೇನ್ನೊಣಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ದುರ್ಬಲ ನೆಲೆಯ ಪರವಾಗಿ ಕುಣಿಯವ ಜೇನ್ನೊಣಗಳ ಸಂಖ್ಯೆ ಕುಗ್ಗುತ್ತದೆ.

ಜೇನ್ನೊಣಗಳು ಒಮ್ಮತಕ್ಕೆ ಹೇಗೆ ಬರುತ್ತವೆ ಎನ್ನುವುದನ್ನು ತೋರುವ ಚಿತ್ರ. ವಿವರಗಳಿಗೆ ಪಾಠವನ್ನು ಓದಿ. ಕೃಪೆ: ಥಾಮಸ್ ಸೀಲಿ
ಜೇನ್ನೊಣಗಳ ಈ ಚರ್ಚೆ ಬಲು ಗಾಢವಾಗಿಯೂ, ತೀವ್ರವಾಗಿಯೂ ಇರುತ್ತವೆ. ವಿವಿಧ ನೆಲೆಗಳ ಜನಪ್ರಿಯೆತೆಯೂ ಹಲವು ದಿನಗಳ ಅವಧಿಯಲ್ಲಿ ಏರಿ ಇಳಿದು ಮಾಡುತ್ತದೆ. ಅಷ್ಟಾದಮೇಲೂ, ಅವೆಲ್ಲವೂ ಯಾವಾಗಲೂ ಒಂದೇ ಒಂದು ನೆಲೆಯ ಮೇಲೆ ಒಮ್ಮತ ತೋರುತ್ತವೆ. ಆ ನೆಲೆಯೂ ಅಷ್ಟೆ. ಇದ್ದವುಗಳಲ್ಲಿ ಅತ್ಯುತ್ತಮ ನೆಲೆಯಾಗಿರುತ್ತದೆ. ಹೀಗೆ ಒಮ್ಮತಕ್ಕೆ ಬಂದ ಕೂಡಲೇ, ಆ ನೆಲೆಯ ಪರಿಚಯ ಚೆನ್ನಾಗಿ ಇರುವ ಅನ್ವೇಷಕ ಜೇನ್ನೊಣಗಳು ಇಡೀ ಹಿಂಡನ್ನು ಹೊಸ ನೆಲೆಗೆ ಕೊಂಡೊಯ್ಯುತ್ತವೆ. ಸಾಗುವಾಗ ಪೀಪಿಯ ಸದ್ದು ಮಾಡುತ್ತಾ ಹೋಗಿ, ಆ ಹೊಸ ನೆಲೆಯ ಮೇಲೆ ತಮ್ಮ ದೇಹದಿಂದ ಫೆರೋಮೋನನ್ನು ಸಿಂಪಡಿಸುತ್ತವೆ.
ಜೇನ್ನೊಣಗಳ ಎರಡು ಗುಣಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿವೆ. ಮೊದಲನೆಯದಾಗಿ ಅವುಗಳ ತೀರ್ಪು ಒಮ್ಮತದಿಂದಲ್ಲ, ಬಹುಮತದ ಮೇಲೆ ಆಧಾರಿಸುತ್ತದೆ. ಇದರ ಅರ್ಥ ಇಷ್ಟೆ. ಒಬ್ಬ ಹಠಮಾರಿ, ತೀರ್ಮಾನ ತೆಗೆದುಕೊಳ್ಳುವುದನ್ನು ನಿಧಾನಿಸಿ ಇಡೀ ಸಮುದಾಯದ ಒಳಿತಿಗೆ ಅಡ್ಡಯಾಗದು. ಎರಡನೆಯದಾಗಿ, ತಾವು ಪತ್ತೆ ಮಾಡಿದ್ದ ನೆಲೆಗಳ ಜನಪ್ರಿಯತೆ ಕಡಿಮೆಯಾದಂತೆಲ್ಲ, ಆ ಅನ್ವೇಷಕಗಳು ತಮ್ಮ ನೆಲೆಯ ಬಗ್ಗೆ ಪ್ರಚಾರ ಮಾಡುತ್ತಲೇ ಇರುವುದನ್ನು ನಿಲ್ಲಿಸಿ, ಉಳಿದವುಗಳು ತೀರ್ಮಾನ ಕೈಗೊಳ್ಳಲು ನೆರವಾಗುತ್ತವೆ. “ನಿಮಗೆ ಇಷ್ಟವಿಲ್ಲದಿದ್ದರೆ, ಬೇಡ,” ಎನ್ನುತ್ತವೆ. ಈ ಎರಡೂ ತಂತ್ರಗಳೂ ನಿರ್ದಿಷ್ಟವಾದ ಹಾಗೂ ನಿಶ್ಚಿತ ತೀರ್ಮಾನವನ್ನು ಶೀಘ್ರವಾಗಿ ಕೈಗೊಳ್ಳಲು ಹೇಗೆ ನೆರವಾಗುತ್ತವೆ ಎಂದು ತಿಳಿಯುವುದು ಕಷ್ಟವಲ್ಲ. ಇಂತಹ ತಂತ್ರಗಳು ಇಲ್ಲದೆಯೇ ಸುಸ್ಪಷ್ಟವಾದ ತೀರ್ಮಾನವನ್ನು ಕೈಗೊಳ್ಳಲು ನಮಗೆ ಕಷ್ಟವಾದ ಸಂದರ್ಭಗಳೂ ಅಷ್ಟೇ ಸುಲಭವಾಗಿ ನೆನಪಾಗುತ್ತವೆ! ಅಲ್ಲವೇ?! “ಜಿ” ಎನ್ನುವ ತಾಣಕ್ಕೆ ಹೋಗಬೇಕೆಂದು ಜೇನ್ನೊಣಗಳು ಒಮ್ಮತಕ್ಕೆ ಬಂದ ಬಗೆ. ಒಟ್ಟು ಹನ್ನೊಂದು ಹೊಸ ನೆಲೆಗಳ ಬಗ್ಗೆ ಎರಡು ದಿನಗಳ ಕಾಲ (ಎ ಯಿಂದ ಕೆ ವರೆಗೆ) ಚರ್ಚೆ ನಡೆದು, ಬಿ ಮತ್ತು ಜಿ ನೆಲೆಗಳ ನಡುವೆ ಸುದೀರ್ಘ ಸ್ಪರ್ಧೆಯೂ ನಡೆದಿತ್ತು. ಚಿತ್ರಕೃಪೆ: ಥಾಮಸ್ ಸೀಲಿ.
ಪಟ್ಟಣ ಪಂಚಾಯತ್ತು.
ಜೇನ್ನೊಣಗಳ ಪ್ರಜಾಸತ್ತೆ ಎನ್ನುವ ಪುಸ್ತಕದಲ್ಲಿ ಸೀಲಿ, ಜೇನ್ನೊಣಗಳ ಈ ಪ್ರಜಾಸತ್ತಾತ್ಮಕ ತೀರ್ಮಾನ ಕ್ರಿಯೆಯನ್ನು ಸವಿವರವಾಗಿ ನೀಡಿರುವುದಲ್ಲದೆ, ಅದನ್ನು ನಮ್ಮ ಪ್ರಜಾಸತ್ತಾತ್ಮಕ ತೀರ್ಮಾನಗಳ ಜೊತೆಗೆ ಹೋಲಿಸಿದ್ದಾರೆ. ಈತ ನ್ಯೂ ಇಂಗ್ಲೆಂಡ್ ಪ್ರಾಂತ್ಯದಲ್ಲಿ ನಡೆಯುವ ಟೌನ್ ಮೀಟಿಂಗ್ ಎನ್ನುವ ಪಟ್ಟಣ ಸಭೆಗಳನ್ನು ಮಾನವ ಸಮಾಜವನ್ನಾಗಿ ಪರಿಗಣಿಸಿದ್ದ. “ವರ್ಷಕ್ಕೊಮ್ಮೆ, ಸಾಮಾನ್ಯವಾಗಿ ಮಾರ್ಚ್ ಮಾಸದ ಮೊದಲ ಸೋಮವಾರದ ನಂತರದ ಮಂಗಳವಾರದಂದು ನಡೆಯುವ ಪಟ್ಟಣ ಸಭೆಯಲ್ಲಿ ಪಟ್ಟಣದ ನಾಗರೀಕರೆಲ್ಲರೂ ಬಹಿರಂಗ ಸಭೆಯಲ್ಲಿ ಒಟ್ಟಾಗಿ, ತಮ್ಮ ಪಟ್ಟಣದ ಪ್ರತಿಯೊಬ್ಬರನ್ನೂ ನಿಯಂತ್ರಿಸುವಂತಹ ಕಾನೂನು, ನಿಯಮಗಳನ್ನು ತೀರ್ಮಾನಿಸುತ್ತಾರೆ.”ಎನ್ನುವ ಸೀಲಿ, ಈ ಪಟ್ಟಣ ಸಭೆಯನ್ನು ಜೇನ್ನೋಣಗಳ ಹಿಂಡಿನ ಸಭೆಯೊಂದಿಗೆ ಹೋಲಿಸಿ, ಐದು ಪಾಠಗಳನ್ನು ಕಲಿಯಬಹುದು ಎಂದು ತೋರಿದ್ದಾನೆ. ಇದೋ ಆತ ಹೇಳಿದ್ದು ಹೀಗೆ:
- ಸಮಾನ ಮನಸ್ಕರೂ, ಒಬ್ಬರಿನ್ನೊಬ್ಬರ ಮೇಲೆ ಗೌರವವೂ ಇರುವ ವ್ಯಕ್ತಿಗಳ ತಂಡವೊಂದನ್ನು ರಚಿಸುವುದು.
- ಈ ಗುಂಪಿನ ವಿಚಾರಗಳ ಮೇಲೆ ಮುಖಂಡನ ಪ್ರಭಾವ ಕನಿಷ್ಟವಾಗುವಂತೆ ಮಾಡುವುದು.
- ಸಮಸ್ಯೆಗೆ ವೈವಿಧ್ಯಮಯವಾದ ಪರಿಹಾರಗಳನ್ನು ಸೂಚಿಸುವುದು.
- ಚರ್ಚೆಯ ಮೂಲಕ ತಂಡದ ವಿಚಾರಗಳನ್ನು ಒಗ್ಗೂಡಿಸುವುದು.
- ಶೀಘ್ರವಾಗಿ ಹಾಗೂ ಸ್ಪಷ್ಟವಾಗಿ, ಒಗ್ಗಟ್ಟಿನ ತೀರ್ಮಾನ ಸಾಧ್ಯವಾಗಲು ಬಹುಮತವನ್ನು ಬೆಂಬಲಿಸುವುದು.
ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಈ ಐದು ನಿಯಮಗಳನ್ನು ಪಟ್ಟಣವೂ, ಜೇನ್ನೊಣಗಳೂ ಹೇಗೆ ಪಾಲಿಸುತ್ತವೆನ್ನುವುದನ್ನೂ, ಅವು ಎಷ್ಟು ಫಲಕಾರಿ ಎನ್ನುವುದನ್ನೂ ಸೀಲಿ ವಿವರಿಸಿದ್ದಾನೆ.

ಕಾರ್ಮಿಕ ಜೇನ್ನೊಣವೊಂದು ತನ್ನ ಗಂಧಾಂಗವನ್ನು ಬಾಗಿಸಿ, ಅದರಲ್ಲಿರುವ ಫೆರೋಮೋನನ್ನು ಸುರಿದು, ಹಿಂಡಿನಲ್ಲಿರುವ ಇತರೆ ಹೆಣ್ಣುಗಳು ಹೊಸ ಗೂಡಿನತ್ತ ಚಲಿಸುವಂತೆ ಮಾಡುತ್ತಿದೆ. ಚಿತ್ರ: ಥಾಮಸ್ ಸೀಲಿ
ವಿಭಾಗೀಯ ಸಭೆಗಳು
ಎಷ್ಟು ಚೆನ್ನ! ಸೀಲಿ “ಸಮರ್ಥ ತಂಡದ ಐದು ಅಭ್ಯಾಸಗಳು” ಎಂದು ಈ ಐದು ನಿಯಮಗಳನ್ನು ಹೆಸರಿಸಿ, ಸ್ವತಃ ತನ್ನ ವಿಭಾಗದಲ್ಲಿ ಸಭೆ ನಡೆಯುವಾಗ ಇವನ್ನು ಪಾಲಿಸಿದ ಬಗೆಯನ್ನೂ ನಿರೂಪಿಸಿದ್ದಾನೆ. ಈ ಪುಸ್ತಕದಲ್ಲಿ ಸೀಲಿ ಹೇಳಿದ ಅತ್ಯಂತ ಗಂಭೀರ ಚಿಂತನೆಗೀಡು ಮಾಡುವ ಮಾತು ಎಂದರೆ, ” ಈ ಜೇನ್ನೊಣಗಳು, ವೆರಮಾಂಟಿನ ಬ್ರಾಡ್ ಫರ್ಡ್ ಪಟ್ಟಣದ ಸಭೆಗಳನ್ನು ನಾಲ್ಕು ದಶಕಗಳ ಕಾಲ ನಿಭಾಯಿಸಿದ ಸಜ್ಜನನಾದ ಮಿಸ್ಟರ್ ಲ್ಯಾರಿ ಕಾಫಿನ್ ಹಾಗೂ ನಾನು ಯಾವುದೇ ಸಂಘರ್ಷವಿಲ್ಲದ ತೀರ್ಮಾನಗಳನ್ನು ಕೈಗೊಳ್ಳಲು ಈ ಐದು ನಿಯಮಗಳನ್ನೇ ಬಳಸುತ್ತೇವೆ.”
ನೆಗಡಿಯಾಯಿತೆಂದು ಮೂಗು ಕತ್ತರಿಸುವುದೇ?
ಒಟ್ಟು ಒಂದು ಕೋಟಿ ಜೀವಿ ಪ್ರಭೇದಗಳಿವೆ. ಇವು ಪ್ರತಿಯೊಂದೂ ಒಂದೊಂದು ಪಾಠವನ್ನು ಕಲಿಸಬಲ್ಲವು. ಜೊತೆಗೆ ಸಾವಿರದ ಎಂಟುನೂರು ಕೋಟಿ ವರ್ಷಗಳವರೆಗೂ ಅವಿರತವಾಗಿ ಶ್ರಮಿಸಿದ ನಿಸರ್ಗ ಇವುಗಳನ್ನು ಆಯ್ದು, ಈ ವೈವಿಧ್ಯಮಯ ಗುಣಗಳನ್ನು ವರವಾಗಿತ್ತಿದೆ. ಜೀವ ಹಾಗೂ ಜೈವಿಕ ಕ್ರಿಯೆಗಳಂತಹವುಗಳ ಪ್ರಕ್ರಿಯೆಗಳ ಮೇಲೆ ನಮ್ಮ ಅತೀವ ಆಸಕ್ತಿಯನ್ನು ವಿವರಿಸಲು ಹಾರ್ವರ್ಡಿನ ಜೀವಿವಿಜ್ಞಾನಿ ಇ. ಓ. ವಿಲ್ಸನ್ ಬಯೋಫೀಲಿಯಾ ಅರ್ಥಾತ್ ʼಜೀವಿಪ್ರಿಯ” ಎಂಬ ಪದವೊಂದನ್ನೇ ಕಟ್ಟಿಬಿಟ್ಟಿದ್ದಾನೆ. ಈ ಒಂದೇ ಪದ ಶೀರ್ಷಿಕೆಯಾಗಿರುವ ಆತನ ಪುಸ್ತಕ ಇಂತಹ ಹಲವು ಗಹನವಾದ ವಿಚಾರಗಳ ಮೂಲ. “ಜೆರೂಸಲೇಮಿನ ಕೋಟಿ ವರ್ಷಗಳ ಇತಿಹಾಸ, ಅದರ ಮೂರು ಸಾವಿರ ವರ್ಷಗಳ ಚರಿತ್ರೆಯಷ್ಟೆ ಪ್ರಭಾವಶಾಲಿ. ಮಾನವತೆ ಇಂದು ಉತ್ಕೃಷ್ಟವೆನ್ನಿಸುವುದಕ್ಕೆ ಕಾರಣ ನಾವು ಉಳಿದ ಜೀವಿಗಳಿಗಿಂತಲೂ ಮೇಲು ಎಂಬುದಲ್ಲ, ಅವುಗಳನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ ಎನ್ನುವುದೇ ನಮ್ಮ ಜೀವದ ಪರಿಕಲ್ಪನೆಯನ್ನು ಸುಧಾರಿಸಿದೆ.” ಎಂದು ಹೇಳಿದ್ದಾನೆ.
ಹಾಗಿದ್ದರೆ, ಯಾರಾದರೂ ಇಂತಹ ಅರಿವು ಹಾಗೂ ವಿವೇಚನೆಯನ್ನು ದುರ್ಬಳಕೆ ಮಾಡಿಕೊಂಡು, ಉಳಿದ ಮನುಷ್ಯರಿಗೆ ತೊಂದರೆ ತರಬಹುದು ಎನ್ನುವ ಭಯದಿಂದ ಈ ಅರಿವು ಹಾಗೂ ವಿವೇಚನೆಯ ಮೂಲಗಳಾದ ಇತರೆ ಎಲ್ಲ ಜೀವಿಗಳನ್ನೂ ಮೂಲೆಗುಂಪು ಮಾಡಬೇಕೆ? ಖಂಡಿತವಾಗಿಯೂ ಇದು ಸಾಧ್ಯವಿಲ್ಲ. ಏಕೆಂದರೆ ನಿಸರ್ಗದಲ್ಲಿ ಯಾರಿಗೂ ಪ್ರತ್ಯೇಕ ಸ್ಥಾನವಿಲ್ಲ. ನಾವೂ ಕೂಡ ನಿಸರ್ಗದ ಅಂಶವೇ. ಜೊತೆಗೆ, ಹೀಗೆ ತನ್ನ ಸಹಜೀವಿಗಳ ಬಗ್ಗೆ ಇನ್ನೇನೇನು ಕೆಟ್ಟದು ತಿಳಿದುಬರುತ್ತದೆಯೋ ಎಂದು ಭಯಪಡುವುದು ಈ ಭೂಮಿಯಲ್ಲಿರುವ ಅತ್ಯಂತ ಬುದ್ಧಿವಂತ ಪ್ರಾಣಿ ಎನ್ನಿಸಿಕೊಂಡವರಿಗೆ ಒಪ್ಪುವುದಿಲ್ಲ. ನಾವು ನಮ್ಮ ಸಹವರ್ತಿಗಳನ್ನು ಹಾಗೆಯೇ ಅಷ್ಟೇ ಪ್ರೀತಿಯಿಂದ ನಮ್ಮ ಸಹಜೀವಿಗಳನ್ನೂ ಕಾಣುವಂತೆ , ಒಳ್ಳೆಯದನ್ನು ಕೆಟ್ಟದ್ದರಿಂದ ಹೆಕ್ಕುವ ಬುದ್ಧಿ ಬರುವಂತೆ ನಮ್ಮ ಮಕ್ಕಳನ್ನು ಬೆಳೆಸೋಣ.
ಇದು ಇಂದಿನ ಜಾಣ ಅರಿಮೆ. ಆಂಗ್ಲ ಮೂಲ: ಪ್ರೊಫೆಸರ್ ರಾಘವೇಂದ್ರ ಗದಗ್‌ಕರ್, ಅನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್. ಮಂಜುನಾಥ. ಮೂಲ ಆಂಗ್ಲ ಪಾಠ ದಿ ವೈರ್ ಸೈನ್ಸ್ ಜಾಲತಾಣದಲ್ಲಿ ಪ್ರಕಟವಾಗಿತ್ತು.