Now Reading
ಡೇವಿಡ್‌ ವೇಕ್‌, ಸಲಮಾಂಡರುಗಳು ಹಾಗೂ ಪ್ರಭೇದಗಳ ಹುಟ್ಟು ಮತ್ತು ನಾಶ

ಡೇವಿಡ್‌ ವೇಕ್‌, ಸಲಮಾಂಡರುಗಳು ಹಾಗೂ ಪ್ರಭೇದಗಳ ಹುಟ್ಟು ಮತ್ತು ನಾಶ

ಎಡದಿಂದ ಬಲಕ್ಕೆ: ಲೇಖಕರು, ಡೇವಿಡ್‌ ವೇಕ್ (1936-2021), ಮರ್ವಾಲೀ ವೇಕ್‌ ಹಾಗೂ ಕೆನಡಾದ ಸಸ್ಯವಿಜ್ಞಾನಿ ಜಾನ್‌ ಮ್ಯಾಕ್ನೀಲ್.‌ ಜುಲೈ-ಆಗಸ್ಟ್‌ 2019ರಲ್ಲಿ ಓಸ್ಲೋದಲ್ಲಿ ನಡೆದ ಅಂತಾರ್ರಾಷ್ಟ್ರೀಯ ಜೀವಿವಿಜ್ಞಾನ ಸಂಘದ ಶತಮಾನೋತ್ಸವದ ಸಂದರ್ಭದಲ್ಲಿ ತೆಗೆದ ಚಿತ್ರ: ಗೀತಾ ಗದಗ್‌ಕರ್

ಸಂಪುಟ 4 ಸಂಚಿಕೆ 285, ಜುಲೈ 11, 2021 

ಜಾಣ ಅರಿಮೆ

ವಿಸ್ಮಯಕ್ಕಿಂತ ವಿಸ್ಮಯ 22

Kannada translation by Kollegala Sharma

§

ಏಪ್ರಿಲ್‌ 29, 2021ರಂದು ಡೇವಿಡ್‌ ವೇಕ್‌ ಇನ್ನಿಲ್ಲ ಎನ್ನುವ ದುಃಖ ಸುದ್ದಿಯನ್ನು ಕೇಳಿದೆ. ಸಾಂಕ್ರಾಮಿಕ ರೋಗ ಉಂಟುಮಾಡುತ್ತಿದ್ದ ಸಾವು ಹಾಗೂ ನಷ್ಟದ ಬಗ್ಗೆ ಅವಿರತವಾಗಿ ಬಂದ ಸುದ್ದಿಗಳನ್ನು ಕೇಳಿ ಜಡ್ಡುಗಟ್ಟಿಬಿಟ್ಟಿದ್ದ ಮನಸ್ಸನ್ನೂ ವೇಕ್‌ ಮರಣದ ಸುದ್ದಿ ಕಲಕಿಬಿಟ್ಟಿತ್ತು. ದುಃಖದ ಅಲೆಗಳು ಉಬ್ಬರಿಸಿ ಬಂದಿದ್ದುವು. ಹಳೆಯ ನೆನಪುಗಳು ನುಗ್ಗಿ ಬಂದುವು.

ಗೆಳೆಯ ಹಾಗೂ ಸಹೋದ್ಯೋಗಿಯಾದ, ಜೇನ್ನೊಣಗಳಲ್ಲಿ ಬಂಧುಗಳ ಪತ್ತೆ, ಆಫ್ರಿಕಾದ ವನ್ಯಜೀವಿಗಳ ಬದುಕು ಮತ್ತು ಸಂರಕ್ಷಣೆಯ ಜೊತೆಗೆ ಗಣಿತೀಯ ಮಾದರಿಗಳ ರಚನೆ ಮೊದಲಾದ ಹಲವು ವಿಷಯಗಳಲ್ಲಿ ಒಟ್ಟಿಗೇ ಕೈಯಾಡಿಸುತ್ತಿರುವ ಬಹುವಿಷಯಕ ತಜ್ಞರಾದ ವೇನ್‌ ಎಂ ಗೆಟ್ಸ್‌ ನೀಡಿದ್ದ ಆಹ್ವಾನದ ಮೇರೆಗೆ ಭಾಷಣವನ್ನು ನೀಡಲು, ಅಕ್ಟೋಬರ್‌ 1994ರಲ್ಲಿ ಬರ್ಕಲಿ ವಿಶ್ವವಿದ್ಯಾನಿಲಯಕ್ಕೆ ಹೋಗಿದ್ದಾಗ ಮೊತ್ತ ಮೊದಲಬಾರಿಗೆ ಡೇವಿಡ್‌ ವೇಕರನ್ನು ಭೇಟಿ ಮಾಡಿದೆ.

ಬೆನ್ನು ಮೂಳೆಯುಳ್ಳ ಪ್ರಾಣಿಗಳ ಸಂಗ್ರಹಾಲಯ

ಭಾಷಣದ ನಂತರ ಡೇವ್‌- ಡೇವಿಡ್ ಅವರನ್ನು ಎಲ್ಲರೂ ಪ್ರೀತಿಯಿಂದ ಡೇವ್‌ ಎಂದೇ ಕರೆಯುತ್ತಿದ್ದರು – ತಾನು ಆಗ ನಿರ್ದೇಶಕನಾಗಿದ್ದ ಸುಪ್ರಸಿದ್ದ ಮ್ಯೂಸಿಯಂ ಆಫ್‌ ವರ್ಟಿಬ್ರೇಟ್‌ ಜೂವಾಲಜಿ ಅಥವಾ ಕಶೇರುಕ ಪ್ರಾಣಿಗಳ ಸಂಗ್ರಹಾಲಯದಲ್ಲಿ ನನ್ನನ್ನು ಸುತ್ತಾಡಿಸಿದರು. ಸಂಗ್ರಹಾಲಯಗಳು ಎಲ್ಲವೂ ಹೆಚ್ಚೂ ಕಡಿಮೆ ಒಂದೇ ರೀತಿ ಇರುವುದರಿಂದ ಕಶೇರುಕ ಸಂಗ್ರಹಾಲಯಕ್ಕಷ್ಟೆ ವಿಶಿಷ್ಟವಾದವುಗಳನ್ನಷ್ಟೆ ನೋಡಲೆಂಧು ನನ್ನನ್ನು ಕರೆದೊಯ್ದರು. ಆತ ಅಚ್ಚುಕಟ್ಟಾಗಿ ಕಟ್ಟು ಹಾಕಿದ ಕ್ಷೇತ್ರಾಧ್ಯಯನದ ವೇಳೆ ಸಂಗ್ರಹಾಲಯದ ಹಲವು ಸುಪ್ರಸಿದ್ಧ ಪ್ರಾಣಿವಿಜ್ಞಾನಿಗಳು ಕೈಬರಹದಲ್ಲಿ ದಾಖಲಿಸಿದ್ದ ಟಿಪ್ಪಣಿಗಳಿದ್ದ ಕಪಾಟಿನತ್ತ ನನ್ನನ್ನು ಕರೆದೊಯ್ದ.

ಪ್ರಸಿದ್ಧ ಪ್ರಕೃತಿವಿಜ್ಞಾನಿಗಳ ಕ್ಷೇತ್ರಾಧ್ಯಯನದ ಟಿಪ್ಪಣಿಗಳಷ್ಟು ಅವರ ಜೀವನಚರಿತ್ರೆಯಾಗಲಿ, ಆತ್ಮಚರಿತ್ರೆಯಾಗಲಿ ಅಥವಾ ಚಿತ್ರಗಳಾಗಲಿ ಪ್ರೇರಣೆ ನೀಡವು. ಈ ಟಿಪ್ಪಣಿಗಳು ಓದುಗರನ್ನೂ, ಪ್ರೇಕ್ಷಕರನ್ನೂ ಕಾಲಯಾನದಲ್ಲಿ ಕೊಂಡೊಯ್ದು, ಆ ಶೋಧಗಳಲ್ಲಿ ತಾವೂ ಭಾಗಿಯೇನೋ ಎನ್ನುವಂತೆ ಮಾಡಿಬಿಡುತ್ತವೆ. ಹೀಗಾಗಿ ಈ ಬಗೆಯ ಜ್ಞಾನಸೃಷ್ಟಿಯನ್ನು ಈ ಸಂಗ್ರಹಾಲಯದ ನಿರ್ದೇಶಕರು ಮೆಚ್ಚಿಕೊಂಡದ್ದರಲ್ಲಿ ನನಗೆ ಅಚ್ಚರಿಯೇನೂ ತೋರಿಸಲಿಲ್ಲ. ಡೇವ್‌ರವರ ಬದುಕಿನ ತುಂಬ ಅಪಲೇಶಿಯನ್‌ ಪರ್ವತಗಳು, ಅಮೆರಿಕೆಯ ಶಾಂತಸಾಗರದ ನೈಋತ್ಯ ಕರಾವಳಿ, ಗ್ವಾಟೆಮಾಲಾ, ಮೆಕ್ಸಿಕೋ ಮತ್ತು ಕ್ಯಾಲಿಫೋರ್ನಿಯಾಗಳಂತಹ ಪ್ರದೇಶಗಳಲ್ಲಿ ನಡೆಸಿದ ಉತ್ಕೃಷ್ಟ ಅಧ್ಯಯನಗಳೇ ತುಂಬಿವೆ.

David Wake in his office in the University of California, Berkeley. Photo: Museum of Vertebrate Zoology, UC Berkeley, obtained through the kindness of his student Nancy Staub

ಬರ್ಕಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ತನ್ನ ಕಛೇರಿಯಲ್ಲಿ ಡೇವಿಡ್‌ ವೇಕ್.‌: ಫೋಟೋ: ಮ್ಯೂಸಿಯಂ ಆಫ್‌ ವರ್ಟಿಬ್ರೇಟ್‌ ಜೂವಾಲಜಿ. ಕೃಪೆ ಡೇವಿಡರ ವಿದ್ಯಾರ್ಥಿ ನ್ಯಾನ್ಸಿ ಸ್ಟಾಬ್

ಹಲವು ವರ್ಷಗಳ ಅನಂತರ, 2011ರಲ್ಲಿ,  ಮೈಖೇಲ್‌ ಆರ್‌ ಕ್ಯಾನ್‌ಫೀಲ್ಡ್‌ ಸಂಪಾದಿಸಿದ, ಫೀಲ್ಡ್‌ ನೋಟ್ಸ್‌ ಆನ್‌ ಸೈನ್ಸ್‌ ಅಂಡ್‌ ನೇಚರ್‌, ಅಂದರೆ ವಿಜ್ಞಾನ ಹಾಗೂ ಪ್ರಕೃತಿಯ ಕುರಿತ ಟಿಪ್ಪಣಿಗಳು ಎನ್ನುವ ಸುಂದರ ಪುಸ್ತಕವನ್ನು ಹಾರ್ವರ್ಡ್‌ ವಿಶ್ವವಿದ್ಯಾನಿಲಯ ಪ್ರಕಟಿಸಿತು. ಇದರ ಮುನ್ನುಡಿಯಲ್ಲಿ ಹಾರ್ವರ್ಡಿನ ಜೀವಿವಿಜ್ಞಾನಿ ಎಡ್ವರ್ಡ್‌ ಓ ವಿಲ್ಸನ್‌ ಹೀಗೆ ಬರೆದಿದ್ದಾರೆ.

“ಸ್ವರ್ಗ ಎಂಬುದೊಂದಿದ್ದು, ಅದಕ್ಕೆ ನನಗೆ ಪ್ರವೇಶ ದೊರೆಯುವುದಾದರೆ, ಆಗ ನಾನು ಅನಂತವಾದ ಜೀವಿಲೋಕದೊಳಗೆ ಅಡ್ಡಾಡುತ್ತ ಅಧ್ಯಯನ ಮಾಡುವ ಅವಕಾಶ ಸಿಗಲೆಂದು ಬೇಡಿಕೊಳ್ಳುವೆ. ನನ್ನ ಜೊತೆಗೆ ಮುಗಿಯದಷ್ಟು ನೋಟ್‌ ಪುಸ್ತಕಗಳನ್ನು ಹೊತೊಯ್ದು, ಟಿಪ್ಪಣಿ ಬರೆದ ಅವುಗಳನ್ನು ಕಣಜೀವಿವಿಜ್ಞಾನಿಗಳು ಹಾಗೂ ಕೋಶವಿಜ್ಞಾನಿಗಳು ಎನ್ನುವ ಇದ್ದಲ್ಲೇ ಇರುವ ಸ್ಥಾವರ ಆತ್ಮಗಳಿಗೆ ಕಳಿಸುವೆ. ಜೊತೆಗೇ ಈ ಪುಸ್ತಕದಲ್ಲಿರುವ ಪ್ರಬಂಧಗಳ ಲೇಖಕರಾದಂತಹ ಹಲವು ದಯಾವಂತ ಆತ್ಮಗಳನ್ನೂ ಭೇಟಿ ಮಾಡುವೆ.” ಎಂದು ಬರೆದಿದ್ದಾನೆ.

ಅನಂತರ ನಾನು ಡೇವರನ್ನು ಭೇಟಿಯಾಗಿದ್ದು 2007ರಲ್ಲಿ ಅಮೆರಿಕೆಯ ವಾಷಿಂಗ್ಟನ್‌ ಡಿಸಿಯಲ್ಲಿ ನಡೆದ ನ್ಯಾಶನಲ್‌ ಅಕಾಡೆಮಿ ಆಫ್‌ ಸೈನ್ಸಸಿನ ಸಭೆಯಲ್ಲಿ. ಸಭೆ ಮುಗಿದ ನಂತರ, ಸದಾ ಸರಳ, ಸದಾ ಸಜ್ಜನನಾದ ಡೇವ್‌ ನನ್ನನ್ನು ಒಂದು ಪಕ್ಕ ಕರೆದುಕೊಂಡು ಹೋಗಿ, “ನಿಮಗೆ ನನ್ನ ನೆನಪು ಇಲ್ಲದಿರಬಹುದು. ಆದರೆ ನನಗೆ ನೀವು ಹಲವು ವರ್ಷಗಳ ಹಿಂದೆ ಬರ್ಕಲಿಗೆ ಬಂದಿದ್ದು, ಬಾಷಣ ಮಾಡಿದ್ದು ನೆನಪಿದೆ.” ಎಂದರು. ಡೇವಿಡ್‌ ವೇಕ್‌ನನ್ನು ಮರೆಯಲು ಸಾಧ್ಯವೇ? ಅಷ್ಟರ ವೇಳೆಗೆ ಸಲಮಾಂಡರುಗಳ ಬಗ್ಗೆ ಆತ ನಡೆಸಿದ ಅಧ್ಯಯನಗಳ ಪರಿಚಯವೂ ನನಗೆ ಆಗಿತ್ತು.

ಡೇವ್‌ 1971 ರಿಂದ 1998ವರೆಗೆ ಮ್ಯೂಸಿಯಮಿನ ನಿರ್ದೇಶಕರಾಗಿದ್ದರು. ಆತನಿಗೆ “ಸಂಗ್ರಹಾಲಯವೆನ್ನುವುದು ಪ್ರಾಣಿವರ್ಗೀಕರಣ ತಜ್ಞರು ಇದು ಎ ಪ್ರಭೇದ, ಇದು ಬಿ ಎಂದು ವಿಂಗಡಿಸುವ ಸ್ಥಳವಾಗಿರಲಿಲ್ಲ. ಅಲ್ಲಿದ್ದ ಪ್ರಾಣಿ ಅವಶೇಷಗಳ ಸಂಗ್ರಹವನ್ನು ಈತ ವಿಕಾಸ ಹೇಗೆ ಆಗುತ್ತದೆ ಎಂಬುದನ್ನು ಹಾಗೂ ಕಾಲಾಂತರದಲ್ಲಿ ಜೈವಿಕ ವೈವಿಧ್ಯ ಹೇಗೆ ಬೆಳೆಯುತ್ತದೆ” ಎನ್ನುವುದನ್ನು ತಿಳಿಯುವ ಸ್ಥಾನವಾಗಿತ್ತು ಎಂದು ಮ್ಯೂಸಿಯಮಿನ ಇಂದಿನ ನಿರ್ದೇಶಕರಾದ ಮೈಖೇಲ್‌ ನಾಕ್ಮನ್‌ ಹೇಳಿದ್ದಾಗಿ ನ್ಯೂಯಾರ್ಕ್‌ ಟೈಂಸ್‌ ಪತ್ರಿಕೆಯಲ್ಲಿ ಪ್ರಕಟಿಸಿದ ಶ್ರದ್ಧಾಂಜಲಿಯಲ್ಲಿ ರಿಚರ್ಡ್‌ ಸ್ಯಾಂಡೋಮೀರ್‌ ಬರೆದಿದ್ದಾರೆ.

ಪ್ರಭೇದಗಳ ಮೂಲ/ಹುಟ್ಟು

ಡೇವ್‌ ನೂರಾನಲವತ್ತನಾಲ್ಕು ಹೊಸ ಸಲಮಾಂಡರ್‌ ಪ್ರಭೇದಗಳನ್ನು ಗುರುತಿಸಿ, ಹೆಸರಿಟ್ಟಿದ್ದಾರೆ. ಹಲ್ಲಿಗಳಂತೆಯೇ ಕಾಣುವ ಸಲಮ್ಯಾಂಡರುಗಳು ಉಭಯಜೀವಿಗಳು. ಇವುಗಳನ್ನು ದಾಖಲಿಸಿ, ಲೆಕ್ಕ ಹಾಕಿ, ಮಾದರಿಗಳನ್ನು ಸಂಗ್ರಹಿಸಲು ಡೇವರಿಗೆ ಪ್ರೇರಣೆ ಅವುಗಳ ತೋರುರೂಪ ಅಥವಾ ಅಂಗರಚನೆ ಅಲ್ಲ. ಅವುಗಳ ಚಲನಶೀಲ ವಿಕಾಸ. ಡೇವ್‌ ವಿಕಾಸ ವಿಜ್ಞಾನದಲ್ಲಿ ಅತ್ಯಂತ ಕ್ಲಿಷ್ಟವಾದ ಪ್ರಭೇದಗಳ ಹುಟ್ಟು ಎನ್ನುವ ಸಮಸ್ಯೆಯನ್ನೇ ಅಧ್ಯಯನಕ್ಕೆ ಆರಿಸಿಕೊಂಡಿದ್ದರು. ಪ್ರಭೇದಗಳೆಂದರೇನು? ಅವು ಹೇಗೆ ಉಂಟಾಗುತ್ತವೆ?

ಸ್ಪೀಶಿಯೇಶನ್‌ ಅಥವಾ ಪ್ರಭೇದೀಕರಣ ಎಂದು ವಿಜ್ಞಾನಿಗಳು ತಾಂತ್ರಿಕವಾಗಿ ಹೆಸರಿಸುವ ಪ್ರಭೇದಗಳ ಸೃಷ್ಟಿ ಹೇಗೆ ಆಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಡೇವ್‌ ಮತ್ತು ಸಂಗಡಿಗರು ಎಂಸ್ಯಾಟಿನಾ ಸಂಕೀರ್ಣ ಎನ್ನುವ ಸಲಮಾಂಡರಿನ ಗುಂಪನ್ನು ಅಧ್ಯಯನ ಮಾಡುವ ಮೂಲಕ ತಿಳಿಯಲು ಪ್ರಯತ್ನಿಸುತ್ತಿದ್ದರು. ಸಂಕೀರ್ಣ ಎನ್ನುವ ಪದವನ್ನು ಬಳಸುವುದೇಕೆಂದರೆ ಈ ಗುಂಪು ಒಂದೇ ಪ್ರಭೇದವೋ ಅಥವಾ ಹಲವಾರು ಪ್ರಭೇದಗಳೋ ಎನ್ನುವುದು ಸ್ಪಷ್ಟವಾಗಿಲ್ಲ.

ಪ್ರಭೇಧ ಎನ್ನುವುದನ್ನು ಹಲವು ಬಗೆಯಲ್ಲಿ ವಿವರಿಸಬಹುದು. ವಿಕಾಸವಿಜ್ಞಾನಿಗೆ ಒಪ್ಪುವ ಅತ್ಯುತ್ತಮ ವಿವರಣೆ ಎಂದರೆ “ಜೈವಿಕ ಪ್ರಭೇದ”ದ ಪರಿಕಲ್ಪನೆ. ಸರಳವಾಗಿ ಹೇಳುವುದಾದರೆ ಎರಡು ಜೀವಿಗಳು ತಮ್ಮೊಳಗೆ ಸಂತಾನಾಭಿವೃದ್ಧಿ ಮಾಡಿ, ಫಲವತ್ತಾದ ಸಂತಾನಗಳನ್ನು ಹುಟ್ಟಿಸಿದರೆ ಅವನ್ನು ಒಂದೇ ಪ್ರಭೇದದ ಜೀವಿಗಳು ಎಂದು ಹೇಳಬಹುದು. ಇದಕ್ಕೆ ವ್ಯತಿರಿಕ್ತವಾಗಿ ಎರಡು ಜೀವಿಗಳು ತಮ್ಮೊಳಗೆ ಕೂಡಿ ಫಲವತ್ತಾದ ಸಂತಾನಗಳನ್ನು ಉತ್ಪತ್ತಿ ಮಾಡದೇ ಇದ್ದರೆ ಅವನ್ನು ಬೇರೆ, ಬೇರೆ ಪ್ರಭೇದಗಳಿಗೆ ಸೇರಿದವು ಎಂದು ಪರಿಗಣಿಸಬಹುದು. ದುರದೃಷ್ಟವಶಾತ್‌, ವಿಕಾಸವಾದದ ದೃಷ್ಟಿಯಲ್ಲಿ ಉತ್ತಮವೆನ್ನಿಸಿದ ಈ ವಿವರಣೆಯನ್ನು ಪ್ರಾಯೋಗಿಕವಾಗಿ ಬಳಸುವುದು ಕಷ್ಟ.

ಅದೃಷ್ಟವಶಾತ್‌, ತಂತಮ್ಮೊಳಗೆ ಸಂತಾನಾಭಿವೃದ್ಧಿ ಮಾಡುವ ಜೀವಿಗಳು ಸಾಮಾನ್ಯವಾಗಿ ಒಂದೇ ತೆರನಾಗಿ ಕಾಣುತ್ತವೆ. ಹಾಗೆಯೇ ತಮ್ಮೊಳಗೆ ಕೂಡಿ ಸಂತಾನಾಭಿವೃದ್ಧಿ ಮಾಡಲಾಗದವು ಸ್ವಲ್ಪ ಬೇರೆ, ಬೇರೆಯಾಗಿಯೇ ಕಾಣುತ್ತವೆ. ಹೀಗಾಗಿ ಪ್ರಾಣಿವರ್ಗೀಕರಣ ತಜ್ಞರು ಪ್ರಭೇದಗಳ ಜೈವಿಕ ವಿವರಣೆಯನ್ನು ಕೈಬಿಟ್ಟು, ಜೀವಿಗಳನ್ನು ಅವುಗಳು ಕಾಣುವ ಬಗೆಗೆ ಅನುಗುಣವಾಗಿ ವಿಂಗಡಿಸಿಬಿಡುತ್ತಾರೆ.

ಹೀಗೆ ಪ್ರಭೇದಗಳನ್ನು ಅವುಗಳ ದೇಹದಾಕಾರವನ್ನು ಅನುಸರಿಸಿ ವಿಂಗಡಿಸುವುದರಲ್ಲಿ ಎರಡು ಸಮಸ್ಯೆಗಳು ತೋರುತ್ತವೆ. ಮೊದಲನೆಯದಾಗಿ, ಈ ತೋರುರೂಪದ ವಿವರಣೆ ಜೈವಿಕ ವಿವರಣೆಯೊಂದಿಗೆ ಹೊಂದುವುದಿಲ್ಲ. ಅಂದರೆ ಒಂದೇ ತೆರನಾಗಿ ಕಾಣುವ ಜೀವಿಗಳು ಕೆಲವೊಮ್ಮೆ ತಂತಮ್ಮೊಳಗೆ ಸಂತಾನಾಭಿವೃದ್ಧಿ ಮಾಡದೇ ಹೋಗಬಹುದು. ಹಾಗೆಯೇ ವಿಭಿನ್ನವಾಗಿ ಕಾಣುವ ಜೀವಿಗಳು ಕೆಲವೊಮ್ಮೆ ತಂತಮ್ಮೊಳಗೆ ಸಂತಾನ ಹುಟ್ಟಿಸಬಹುದು.

ಇದಕ್ಕಿಂತಲೂ ಗಂಭೀರವಾದ ಸಮಸ್ಯೆ ಏನೆಂದರೆ ದೈಹಿಕ ರೂಪವನ್ನು ಆಧರಿಸಿ ಮಾಡಿದ ಪ್ರಭೇದದ ವಿವರಣೆ ವಿಕಾಸವೆನ್ನುವುದು ವಿರತ ವಾಗಿ ಒಂದು ಪ್ರಭೇದ ಇನ್ನೊಂದು ಪ್ರಭೇದವಾಗುತ್ತದೆ ಎನ್ನುವ ಭಾವನೆ ಕೊಡುತ್ತದೆ.  ವಾಸ್ತವದಲ್ಲಿ ಚಾರ್ಲ್ಸ್‌ ಡಾರ್ವಿನ್ನನಿಗೇ ಅರಿವಾಗಿದ್ದಂತೆ ವಿಕಾಸ ಎನ್ನುವುದು ನಿಧಾನವಾಗಿ, ಅವಿರತವಾಗಿ ನಡೆಯುವ ಪ್ರಕ್ರಿಯೆ. ಎರಡು ಪ್ರಭೇದಗಳ ನಡುವೆ ಇರುವ ತೋರುರೂಪಗಳು ಸಾಮಾನ್ಯವಾಗಿ ಅಳಿದು ಹೋಗಿ, ವಿಕಾಸದ ಆರಂಭ ಹಾಗೂ ಕೊನೆಯಲ್ಲಿ ಕಾಣಿಸುವ ಜೀವಿಗಳಷ್ಟೆ ಉಳಿದುಕೊಳ್ಳುವದರಿಂದ ವಿಕಾಸವು ವಿರತವೆನ್ನಿಸುತ್ತದೆ. ವಿಕಾಸವು ಹೀಗೆ ವಿರತವಾಗಿರುವುದೂ, ಮಧ್ಯಮರೂಪಗಳು ಕಾಣೆಯಾಗಿರುವುದರಿಂದಲೂ ಸಾಕಷ್ಟು ತಪ್ಪುತಿಳುವಳಿಕೆಗಳಿಗೂ, ವಿಕಾಸವೆನ್ನುವ ಕ್ರಿಯೆಯ ಬಗ್ಗೆ ಕೆಲವರ ನೈಜವಾದ ಹಾಗೂ ಹಲವರ ಕುತ್ಸಿತವಾದ ಅಪನಂಬಿಕೆಗೆ ಕಾರಣವಾಗಿವೆ.

ಪಳೆಯುಳಿಕೆಗಳಲ್ಲಿ ಮಧ್ಯಮರೂಪಗಳ ಕೊರತೆ ಅಥವಾ ನಾವು ‘ಮಿಸ್ಸಿಂಗ್‌ ಲಿಂಕ್ಸ್’ ಎನ್ನುವವನ್ನು ವಾನರಗಳಂತಹ ಪೂರ್ವಜರಿಂದ ಮನುಷ್ಯರು ವಿಕಾಸವಾದರು ಎನ್ನುವ ಡಾರ್ವಿನ್ನನ ವಾದವನ್ನು ಹಳಿಯಲು ಬಳಸಲಾಗಿದೆ. ಸದ್ಯ, ಈಗ ಆ ಬಗೆಯ ವಿರೋಧ ಕಾಣೆಯಾಗಿದೆ. ಇವತ್ತು ನಾವು ಪುರಾತನ ಆಸ್ಟ್ರಾಲೋಪಿಥೆಕಸ್‌ ಜೀವಿಯಿಂದ ಹೋಮೋ ಹ್ಯಾಬಿಲಿಸ್‌ ಜೀವಿಗೆ, ಅಲ್ಲಿಂದ ಪುರಾತನ ಮಾನವನಿಗೂ, ತದನಂತರ ಇಂದಿನ ಆಧುನಿಕ ಮಾನವ ಎನ್ನುವ ಪ್ರಭೇದದವರೆಗೂ ನಡೆದ ಮಾರ್ಪಾಟುಗಳು ಅನುಕ್ರಮವಾಗಿ ನಡೆದದ್ದೆಂದು ಅರ್ಥ ಮಾಡಿಕೊಂಡಿದ್ದೇವೆ. ಎಷ್ಟು ಸರಾಗವಾಗಿ ಈ ಬದಲಾವಣೆ ಆಗಿದೆ ಎಂದರೆ ಫಾಸಿಲು ತಜ್ಞರುಗಳು ತಮಗೆ ದೊರೆಯುತ್ತಿರುವ ಹೊಸ ಫಾಸಿಲುಗಳನ್ನು ವರ್ಗೀಕರಿಸುವ ಬಗ್ಗೆ, ಹೆಸರಿಡುವ ಬಗ್ಗೆ ಗೊಂದಲಗೊಂಡಿದ್ದಾರೆ ಎನ್ನುತ್ತಾನೆ ಸೈನ್ಸ್‌ ಇನ್‌ ದಿ ಸೌಲ್‌ ಪುಸ್ತಕದಲ್ಲಿ ರಿಚರ್ಡ್‌ ಡಾಕಿನ್ಸ್.‌

ವರ್ತುಲ ಅಥವಾ ಬಳೆ ಪ್ರಭೇದಗಳು 

ಕಾಣೆಯಾದ ಮಧ್ಯಂತರ ರೂಪಗಳ ಸಮಸ್ಯೆಯನ್ನು ವರ್ತುಲ ಪ್ರಭೇದ ಅಥವಾ ಬಳೆ ಪ್ರಭೇದಗಳೆನ್ನುವ ಪರಿಕಲ್ಪನೆ ಪರಿಹರಿಸುತ್ತದೆ. ಆದರೆ ಇದು ಪ್ರಭೇದಗಳನ್ನು ಗುರುತಿಸಲು ಕೇವಲ ದೇಹದ ಆಕಾರವನ್ನಷ್ಟೆ ಬಳಸಿ ಪ್ರಾಣಿಗಳನ್ನು ವರ್ಗೀಕರಿಸುವ ತಜ್ಞರಿಗೆ ಇದು ಸಂಕಟವನ್ನು ತರುತ್ತದೆ. ಲಿಯೊನಾರ್ಡ್ ಸ್ಟೆಜ್ನೆಗರ್‌ ಎಂಬಾತ ಈ ವರ್ತುಲ ಪ್ರಭೇದಗಳ ಕಲ್ಪನೆಯನ್ನು ಮೊತ್ತ ಮೊದಲ ಬಾರಿಗೆ 1905ರಲ್ಲಿ ತರ್ಕಿಸಿದ್ದ. ಹಕ್ಕಿಗಳಲ್ಲಿ ಇಂತಹುದೊಂದು ವಿದ್ಯಮಾನವನ್ನು ಅರ್ನಸ್ಟ್‌ ಮೇಯರ್‌ ಎಂಬಾತ 1942ರಲ್ಲಿ ಗುರುತಿಸಿದನಾದರೂ ಇದಕ್ಕೆ 1954ರಲ್ಲಷ್ಷ್ಟೇ  ಆರ್ಥರ್‌ ಜೆ ಕೇನ್‌ ಈ ಹೆಸರನ್ನು  ಕೊಟ್ಟ. ಇಂತಹ ಪ್ರಭೇದಗಳು ಜೈವಿಕ ಪ್ರಭೇದಗಳ ಹುಟ್ಟನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.

ಪರ್ವತಗಳು, ಕಣವೆಗಳಂತಹ ಅಡ್ಡಿಗಳು ಎದುರಾದಾಗ ಪ್ರಭೇದಗಳು ಅವುಗಳನ್ನು ಬಳಸಿ ಹೋಗಿಯಷ್ಟೆ ಹೊಸ ಜಾಗವನ್ನು ಆವರಿಸಬೇಕು. ನೇರವಾಗಿ ದಾಟಿ ಹೋಗುವುದು ಅಸಾಧ್ಯ. ಹೀಗೆ ಅಡ್ಡಿಯನ್ನು ಬಳಸಿಕೊಂಡು ಹೋಗಿ ವಿಸ್ತರಿಸುವ ಸಂದರ್ಭದಲ್ಲಿ ಪ್ರಭೇದದ ಜೀವಿಗಳು ಕ್ರಮೇಣ ಬದಲಾಗಬಹುದು. ಆದರೆ ಈ ಬದಲಾವಣೆಯು ಎಷ್ಟು ನಿಧಾನವಾಗಿರುತ್ತದೆ ಎಂದರೆ ಅವು ತಮ್ಮ ಸಮೀಪದ ಸಂಬಂಧಿಗಳ ಜೊತೆ ಸೇರಿ ಸಂತಾನಾಭಿವೃದ್ಧಿಯಾಗದಂತೆ ಇರಲಾರದು. ಹೀಗೆ ವಿಸ್ತರಿಸುತ್ತಾ ಹೋದ ಪ್ರಭೇದದ ಜೀವಿಗಳು ಅಡ್ಡಿಯ ಇನ್ನೊಂದು ತುದಿಯನ್ನು ಮುಟ್ಟುವಷ್ಟರಲ್ಲಿ ಎಷ್ಟೊಂದು ಬದಲಾಗಿರುತ್ತವೆಂದರೆ, ಒಂದಿನ್ನೊಂದರ ಜೊತೆಗೆ ಬಹುಶಃ ಅವು ಕೂಡಲಾರವು. ಅಂತರಸಂತಾನ ಹುಟ್ಟಲಾರದು.

ಹೀಗಾಗಿ, ಈ ವಿಸ್ತರಣೆಯ ಆರಂಭದಲ್ಲಿ ಪ್ರಾಣಿವರ್ಗೀಕರಣ ತಜ್ಞರಿಗೆ ಒಂದು ಪ್ರಭೇದವು ಸುಸ್ಪಷ್ಟವಾಗಿ ಕಾಣುತ್ತದೆ. ಹಾಗೆಯೇ ಕೊನೆಯಲ್ಲಿಯೂ ಇನ್ನೊಂದು ಪ್ರಭೇದವಿದೆ ಎಂದು ಗುರುತಿಸಬಲ್ಲರು. ಆದರೆ ಈ ವಿಸ್ತರಣೆಯ ಹಾದಿಯ ಉದ್ದಕ್ಕೂ, ಒಂದೇ ಒಂದು ಪ್ರಭೇದವಿದೆ ಎಂದು ಕಂಡರೂ, ಇವೆರಡರಲ್ಲಿ ಅದು ಯಾವುದೆಂದು ಹೇಳುವುದು ಕಷ್ಟವಾಗುತ್ತದೆ. ಏಕೆಂದರೆ ಅವುಗಳಲ್ಲಿ ಎರಡರ ಗುಣಗಳೂ ಇಷ್ಟಿಷ್ಟು ಇರುತ್ತವೆ. ಹೀಗೆ ವಿಕಾಸದ ಕ್ರಿಯೆ ಅನುಕ್ರಮವಾಗಿರುತ್ತದೆ.

ಇಂತಹ ವರ್ತುಲ ಪ್ರಭೇದಗಳ ಹುಟ್ಟಿಗೆ ಎನ್ಸ್ಯಾಟಿನಾ ಸಲಮಾಂಡರು ಪ್ರಸಿದ್ಧ ಉದಾಹರಣೆ. ಸ್ವಲ್ಪ ವಿವಾದಾಸ್ಪದ ಉದಾಹರಣೆಯೂ ಹೌದು. ಸಂಗ್ರಹಾಲಯದಲ್ಲಿ ವೇಕ್‌ ರವರಿಗಿಂತ ಹಿಂದೆ ಇದ್ದ ರಾಬರ್ಟ್‌ ಸ್ಟೆಬ್ಬಿನ್ಸ್‌ ಈ ಎನ್ಸ್ಯಾಟಿನಾ (Ensatina)ದ ವಿತರಣೆ ಹಾಗೂ ಅವುಗಳ ದೇಹರಚನೆಯಲ್ಲಿನ ವ್ಯತ್ಯಾಸಗಳ ಅಧ್ಯಯನದ ಮೇಲೆ ಅದನ್ನು ಒಂದು ವರ್ತುಲ ಪ್ರಭೇದವೆಂದು ಪರಿಗಣಿಸಬೇಕೆಂದು ಹೇಳಿದ್ದರು. ಇದು ವಿವಾದವನ್ನು ಉಂಟು ಮಾಡಿತ್ತು. ಕೇವಲ ಎನ್ಸ್ಯಾಟಿನಾ ಮಾತ್ರವಲ್ಲ, ಯಾವುದೇ ವರ್ತುಲ ಪ್ರಭೇದದಲ್ಲಿಯೂ ನಿಜಜೀವನದಲ್ಲಿ ಕಾಣುವ ಬದಲಾವಣೆಗಳ ಸ್ವರೂಪ, ವರ್ತುಲ ಪ್ರಭೇದವೆಂದು ನಾವು ಊಹಿಸಿಕೊಂಡು ವಿವರಿಸುವಷ್ಟು ಸ್ಪಷ್ಟವಾಗಿಯೂ, ಸರಳವಾಗಿ ಇರುವುದಿಲ್ಲ.

ಪ್ರಭೇದವು ವಿಸ್ತರಿಸುತ್ತಿರುವ ಪ್ರದೇಶದಲ್ಲಿ ಕೆಲವೆಡೆಯಲ್ಲಿ ಮಾತ್ರವೇ ಅದು ಅಳಿದು ಹೋಗಿರಬಹುದು. ಕೆಲವು ಜೀವಿಗಳು ಮುಂದೆ ವಿಸ್ತರಿಸುವ ಬದಲಿಗೆ ಮರಳಿ ಹಿಂದೆ ಬಂದಿರಲೂ ಬಹುದು. ಇನ್ನೂ ಕೆಲವು ಅಪರೂಪದ ಸಂದರ್ಭಗಳಲ್ಲಿ ಕೆಲವು ಜೀವಿಗಳು ಅಡ್ಡಿಗಳನ್ನು ನೇರವಾಗಿ ದಾಟಿ ಹೋದ ಉದಾಹರಣೆಗಳೂ ಇವೆ. ಆದ್ದರಿಂದ ಯಾವುದೇ ಪ್ರಭೇದವನ್ನೂ ವರ್ತುಲ ಪ್ರಭೇದವೆಂದು ಘೋಷಿಸುವ ಮುನ್ನ ದೊರೆತ ಪುರಾವೆಗಳನ್ನೆಲ್ಲ ಸಾಕಷ್ಟು ವಿವೇಚನೆ ಹಾಗೂ ಅರಿವಿನಿಂದ ವಿಶ್ಲೇಷಿಸಬೇಕಾಗುತ್ತದೆ. ಡೇವಿಡ್‌ ವೇಕ್‌ರವರ ಶ್ರೇಯ ಇದುವೇ. ಅವರ ಸಲಮ್ಯಾಂಡರುಗಳು ಈ ಎಲ್ಲ ಕೋಟಲೆಗಳನ್ನೂ ಎದುರಿಟ್ಟಿದ್ದುವು.

A schematic illustration of the formation of a ring species. Starting from a single source species A, individuals disperse around a barrier (a mountain or a valley for example) because they cannot cross over it. They gradually change (shown as A+1, A+2 … on one side and A-1, A-2, … on the other side) as they evolve to adapt to their local habitats but are always capable of interbreeding with their immediate neighbours. By the time they meet up on the other side of the barrier,  they are so different from each other (A+4 and A-4) that they can no longer interbreed. Voila! They are two new species.

ವರ್ತುಲ ಪ್ರಭೇದಗಳ ಹುಟ್ಟು ಹೇಗಾಗುತ್ತದೆ ಎಂಬುದರ ಚಿತ್ರಣ. ಎ ಎಂಬೊಂದು ಪ್ರಭೇದದ ಜೀವಿಗಳು, ನೇರವಾಗಿ ದಾಟಲು ಅಸಾಧ್ಯವಾದ ಬೆಟ್ಟ ಅಥವಾ ಕಣಿವೆಯಂತಹ ಅಡ್ಡಿಯ ಸುತ್ತಲೂ ಹರಡಲು ಆರಂಭಿಸುತ್ತವೆ.  ಇವು ಒಂದು ಬದಿಯಲ್ಲಿ ಕ್ರಮೇಣ ಎ+೧, ಎ+೨ ಎಂದು ತೋರಿಸಿರುವ ಹಾಗೆ ಸ್ಥಳೀಯ ಪರಿಸರಕ್ಕೆ ಹೊಂದಿಕೊಂಡು ವಿಕಾಸವಾಗುತ್ತವೆ. ಇನ್ನೊಂದು ಬದಿಯಲ್ಲಿ ಇದೇ ರೀತಿಯಲ್ಲಿ ಆಗುವ ವಿಕಾಸವನ್ನು ಎ-೧, ಎ-೨ ಎಂದು ತೋರಿಸಿದೆ. ಆದರೆ ಇವು ತಮ್ಮ ನೆರೆಯಲ್ಲಿರುವ ಜೀವಿಗಳ ಜೊತೆಗೆ ಸಂತಾನಾಭಿವೃದ್ಧಿ ಮಾಡಬಲ್ಲುವು. ಅಡ್ಡಿಯ ಕೊನೆ ತಲುಪುವ ವೇಳೆಗೆ ಇವು ಒಂದರಿಂದ ಇನ್ನೊಂದು ಎಷ್ಟೊಂದು ವಿಭಿನ್ನವಾಗಿರುತ್ತದೆಂದರೆ ಅವು ಒಂದಿನ್ನೊಂದರ ಜೊತೆಗೂಡಿ ಸಂತಾನಾಭಿವೃದ್ಧಿ ಮಾಡಲಾರವು. ವಾವ್.‌ ಇಲ್ಲೀಗ ಎರಡು ಪ್ರಭೇದಗಳಿವೆ. 

ಎನ್ಸ್ಯಾಟಿನಾ ಕುಲಕ್ಕೆ ಸೇರಿದ ಈ ಸಲಮ್ಯಾಂಡರುಗಳು ಕ್ಯಾಲಿಫೋರ್ನಿಯಾದಲ್ಲಿರುವ ಸೆಂಟ್ರಲ್‌ ವ್ಯಾಲಿ ಎನ್ನುವ ಕಣಿವೆಯ ಸುತ್ತಲೂ ಹರಡಿಕೊಂಡಿವೆ. ವೊಲಾಹಿ ಎಂದು ಕರೆಯುವ ಒಂದು ಸ್ಥಳದಲ್ಲಿ ದೇಹದ ಆಕಾರದಲ್ಲಿ ಸುಸ್ಪಷ್ಟವಾದ ವ್ಯತ್ಯಾಸಗಳಿರುವ ಇದರ ಎರಡು ಪ್ರಭೇದಗಳನ್ನು ನೋಡಬಹುದು. ಇವನ್ನು ಎನ್ಸ್ಯಾಟಿನಾ ಎಶ್ಚೋಲ್ಸೈ ಮತ್ತು ಎನ್ಸ್ಯಾಟಿನಾ ಕ್ಲಾಬೆರಿ ಎಂದು ಗುರುತಿಸಿದ್ದಾರೆ. ಎರಡೂ ಒಂದೇ ಕಡೆ ಇದ್ದರೂ, ಇವು ಒಂದಿನ್ನೊಂದರ ಜೊತೆ ಕೂಡಿ ಸಂತಾನಾಭಿವೃದ್ಧಿ ಮಾಡುವುದಿಲ್ಲ. ಆದರೆ ಕುದುರೆಯ ಲಾಳದಂತಹ ಅರೆ ವರ್ತುಲಾಕಾರದ ಹಾದಿಗುಂಟ ಹಲವು ಮಧ್ಯಮ ದೇಹದ ಆಕಾರ ಇರುವ ಜೀವಿಗಳನ್ನು ಕಾಣಬಹುದು. ಇವು ತಂತಂಮೊಳಗೇ ಸಂತಾನಾಭಿವೃದ್ಧಿಯನ್ನೂ ಮಾಡುತ್ತವೆ.

ಎನ್ಸ್ಯಾಟಿನಾ ಸಂಕೀರ್ಣದಲ್ಲಿ “ಭೌಗೋಳಿಕವಾಗಿ ಹಾಗೂ ಅನುವಂಶೀಯವಾಗಿ ವಿಶಿಷ್ಟವಾದ ಹಲವಾರು ಅಂಶಗಳನ್ನು ಪ್ರಭೇದದ ಸ್ತರದಲ್ಲಿ ಕಾಣಬಹುದು. ಈ ಸಂಕೀರ್ಣವು ಪುರಾತನ ಕುಲವಾಗಿದ್ದು, ನೆಲೆಗಳ ಸಂಕೋಚನ, ಪ್ರತ್ಯೇಕತೆ, ವೈವಿಧ್ಯತೆ ಹಾಗೂ ಪುನಃಸಂಪರ್ಕದ ಜೊತೆಗೇ ವಿಸ್ತರಣೆ” ಆಗಿವೆಯೆನ್ನುವುದನ್ನು ತೋರಿಸುವ ಮಾಹಿತಿಯನ್ನು ಡೇವ್‌ ಕಲೆ ಹಾಕಿದ್ದರು. ಈ ಮಾಹಿತಿಯಿಂದಾಗಿ ಹಲವರು ಇದನ್ನು “ವರ್ತುಲ ಪ್ರಭೇದ” ಎನ್ನುವುದನ್ನು ಬಿಟ್ಟು, ಎನ್ಸ್ಯಾಟಿನಾದ ಹಲವು ವಿಶಿಷ್ಟ ಪ್ರಭೇದಗಳಿವೆ ಎಂದೇ ಪರಿಗಣಿಸಿಬಿಡುವಂತಾಯಿತು.

“ಆರಂಭದಲ್ಲಿ ಕೈಗೊಂಡ ತೀರ್ಮಾನಗಳನ್ನು ವಿರೋಧಿಸುವಂತಹ ಹೊಸ ಮಾಹಿತಿ ಸಿಕ್ಕಾಗ ಅದನ್ನು ಒಪ್ಪಿಕೊಂಡ ಡೇವ್‌, ಅದರಿಂದ ಹೊಸತನ್ನು ಕಲಿಯಲು ಪ್ರಯತ್ನಿಸುತ್ತಿದ್ದರು,” ಎಂದು ಅವರ ವಿದ್ಯಾರ್ಥಿಗಳು ನೆನಪಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಒಂದು ಪರಿಕಲ್ಪನೆಗೆ ಅಂಟಿಕೊಂಡು, ಮಾಹಿತಿ ಅಥವಾ ದತ್ತಾಂಶಗಳ ಬೆಲೆಯನ್ನು ಮರೆಯಬಾರದು ಎನ್ನುವುದಕ್ಕೆ ಆತ ಸ್ವಯಂ ಮಾದರಿಯಾಗಿದ್ದರು. ಡೇವ್‌ ಯಾವಾಗಲೂ, “ಕಲ್ಪನೆಗಳು ಅಗ್ಗ. ದತ್ತಾಂಶಗಳು ಬೆಲೆಯುಳ್ಳವು.” ಎನ್ನುತ್ತಿದ್ದರು.

The salamader Ensatina complex. Top: The un-blotched Ensatina eschscholtyzii. Bottom: The blotched Ensatina klauberi. Photos by Chris Brown/Public domain

ಎನ್ಸ್ಯಾಟಿನಾ ಸಲಮಾಂಡರ್‌ ಸಂಕೀರ್ಣ: ಮೇಲೆ: ಬಣ್ಣದ ತೇಪೆಗಳಿಲ್ಲದ ಮೈಯ ಎನ್ಸ್ಯಾಟಿನಾ ಎಶ್ಚೋಲ್ಟ್ಸೈ. ಕೆಳಗಡೆ: ತೇಪೆ ಬಣ್ಣದ ಎನ್ಸ್ಯಾಟಿನಾ ಕ್ಲಾಬೇರಿ. ಚಿತ್ರಗಳು: ಕ್ರಿಸ್‌ ಬ್ರೌನ್‌ 

ವೇರ್‌ಫೋರ್‌ ಅಂಡ್‌ ವಿದರ್‌ ದಿ ರಿಂಗ್‌ ಸ್ಪೀಶೀಸ್‌, ವರ್ತುಲ ಪ್ರಭೇಧ ಎಂದರೇನು, ಎಲ್ಲಿವೆ? ಎನ್ನುವ ಪ್ರಬಂಧದಲ್ಲಿ ಡೇವಿಡ್‌ ವೇಕ್‌ ಮತ್ತು ಅವರ ಪಿಎಚ್‌ಡಿ ವಿದ್ಯಾರ್ಥಿನಿ ಶಾನ್‌ ಕುಚ್ತಾ ಹೀಗೆ ಬರೆದಿದ್ದಾರೆ.

“ವಿಕಾಸ ಪ್ರಕ್ರಿಯೆಯನ್ನು ವಿವರಿಸುವ ಎಲ್ಲ ಮಾದರಿಗಳಂತೆಯೇ, ವರ್ತುಲ ಪ್ರಭೇದದ ಪರಿಕಲ್ಪನೆಯೂ ಕೂಡ ಒಂದು ಸರಳೀಕರಣವೇ. ಆದರ್ಶವೆನ್ನಿಸುವ ವರ್ತುಲ ಪ್ರಭೇದವಿನ್ನೂ ಪತ್ತೆ ಆಗಿಲ್ಲ. … ವರ್ತುಲ ಪ್ರಭೇದದ ಪ್ರಮುಖ ಸ್ವರೂಪಗಳೆಂದರೆ, ಜೀವಿಗಳ ಭೌಗೋಳಿಕ ಚರಿತ್ರೆಯಿಂದಾಗಿ ವರ್ತುಲಾಕಾರದಲ್ಲಿ ವಿತರಣೆಯಾಗಿರುವ ಹಾಗೂ ಪ್ರಜನನದಲ್ಲಿ ಪ್ರತ್ಯೇಕವಾಗಿಬಿಟ್ಟ ಒಂದು ಪ್ರಭೇದ… ಇದನ್ನು ಒಂದೇ ಪ್ರಭೇದದ ಸಂಕೀರ್ಣವೆಂದೋ, ಹಲವು ಪ್ರಭೇದಗಳೆಂದೋ ಹೆಸರಿಸಿದ ಮಾತ್ರಕ್ಕೆ ಈ ವಿಕಾಸದ ಪ್ರಕ್ರಿಯೆ ಬದಲಾಗುವುದಿಲ್ಲ. ಹಾಗೆಯೇ ವರ್ತುಲ ಪ್ರಭೇದಗಳಲ್ಲಿ ಕಾಣುವ ದೈಹಿಕ ವ್ಯತ್ಯಾಸಗಳು ನೀಡುವ ಅರಿವು, ಹೊಸ ಹೆಸರಿನಿಂದ ವಿಂಗಡಿಸಿದ ಕೂಡಲೆ ಮರೆಯಾಗುವುದಿಲ್ಲ.”

ರಿಚರ್ಡ್‌ ಡಾಕಿನ್ಸ್‌ ಬರೆದ ದಿ ಆನ್ಸೆಸ್ಟರ್ಸ್‌ ಟೇಲ್:‌ ಪಿಲ್ಗ್ರಿಮೇಜ್‌ ಟು ದಿ ಡಾನ್‌ ಆಫ್‌ ಲೈಫ್‌ ಅಂದರೆ ಪೂರ್ವಜರ ಕಥೆ: ಜೀವದ ಉಗಮದ ವರೆಗಿನ ತೀರ್ಥಯಾತ್ರೆ ಎನ್ನುವ ಪುಸ್ತಕದಲ್ಲಿ ಇರುವ ದಿ ಸಲಮಾಂಡರ್ಸ್‌ ಟೇಲ್‌ ಎನ್ನುವ ಅಧ್ಯಾಯದಲ್ಲಿ ಈ ವರ್ತುಲ ಪ್ರಭೇದದ ಪರಿಕಲ್ಪನೆಯ ಬಗ್ಗೆ ಅದ್ಭುತವಾದೊಂದು ವಿಶ್ಲೇ಼ಷಣೆ ಇದೆ. ಎಂಟುನೂರು ಪುಟಗಳ ಈ ದೊಡ್ಡ ಹೊತ್ತಿಗೆ ಮೊದಲಿನಿಂದ ಕೊನೆಯವರೆಗೂ ಓದಬೇಕಾದಂಥದ್ದು. ಇದರಲ್ಲಿ ಡಾಕಿನ್ಸ್‌ ಬಲು ಜಾಣತನದಿಂದ ಈ ವರ್ತುಲ ಪ್ರಭೇದವೆನ್ನುವುದು ಎಲ್ಲ ಜೀವಿಗಳಲ್ಲಿಯೂ, ಎಲ್ಲ ಕಾಲಗಳಲ್ಲಿಯೂ ಸಂಭವಿಸುತ್ತದೆಯೆಂದು ಮೊದಲು ವಾದಿಸಿ, ಅನಂತರ ತನ್ನ ಈ ವಾದದ ಗಂಭೀರ ಪರಿಣಾಮವೇನೆಂದು ಚಿಂತಿಸುವಂತೆ ಪ್ರೇರೇಪಿಸಿದ್ದಾನೆ.

“ಮನುಷ್ಯರೂ, ಚಿಂಪಾಂಜಿಗಳೂ ಒಂದು ವರ್ತುಲ ಪ್ರಭೇದವೆಂದುಕೊಳ್ಳಿ. ಇದು ಅಸಂಭಾವ್ಯವೇನಲ್ಲ. ರಿಫ್ಟ್‌ ಕಣಿವೆಯ ಒಂದು ಬದಿಯಲ್ಲಿ ಹೀಗೆ, ಇನ್ನೊಂದು ಬದಿಯಲ್ಲಿ ಹಾಗೆ ವಿಕಾಸ ನಡೆದಿರಬಹುದು. ಕೊನೆಗೆ ಈ ವರ್ತುಲದ ದಕ್ಷಿಣದ ತುದಿಯಲ್ಲಿ ಸ್ಪಷ್ಟವಾಗಿ ಎರಡು ಪ್ರಭೇದಗಳು ಉಂಟಾಗಿರಬಹುದು. ಆದರೆ ಈ ಕಡೆಯಿಂದ ಆ ಕಡೆಗೆ, ಹಾಗೂ ಆ ಕಡೆಯಿಂದ ಈ ಕಡೆಗೆ ಎರಡೂ ಬದಿಯಲ್ಲಿಯೂ ಅಸ್ಪಷ್ಟ ವ್ಯತ್ಯಾಸವಿರುವ, ಮಧ್ಯಂತರ ಜೀವಿಗಳು ಇರಬಹುದು. ಹೀಗಾಗಿದ್ದಿದ್ದರೆ ಅದು  ಬೇರೆ ಜೀವಿಗಳಬಗ್ಗೆ  ನಮ್ಮ ಹಾವಭಾವಗಳ ಮೇಲೆ ಏನು ಪ್ರಭಾವ ಬೀರಬಹುದು?” ಎಂದು ಪ್ರಶ್ನಿಸಿದ್ದಾನೆ.

ಮರೆಯಾಗುತ್ತಿರುವ ಉಭಯಜೀವಿಗಳು

ಜಗತ್ತಿನಾದ್ಯಂತ ಉಭಯಜೀವಿಗಳಿಗೆ ಅಳಿವು-ಉಳಿವಿನ ಸಂಕಟ ಎದುರಾಗಿದೆ ಎನ್ನುವುದು ಜನಮನದಲ್ಲಿ ಹೊಕ್ಕಿದ್ದು 1994ನೇ ಇಸವಿಯಲ್ಲಿ. ಇದರ ಶ್ರೇಯದ ಬಹುಪಾಲು ಕ್ಯಾಥ್ರೀನ್‌ ಫಿಲಿಪ್ಸ್‌ ಎನ್ನುವ ಪತ್ರಕರ್ತೆಗೆ ಸೇರಬೇಕು. ಈಕೆ ಟ್ರಾಕಿಂಗ್‌ ದಿ ವ್ಯಾನಿಶಿಂಗ್‌ ಫ್ರಾಗ್ಸ್:‌ ಎನ್‌ ಇಕಾಲಾಜಿಕಲ್‌ ಮಿಸ್ಟರಿ ಅಂದರೆ ಮರೆಯಾಗುತ್ತಿರುವ ಕಪ್ಪೆಗಳ ಹಿಂದೆ: ಪರಿಸರದ ಒಂದು ನಿಗೂಢ ಎಂಬರ್ಥ ಬರುವ ಪುಸ್ತಕವನ್ನು ಬರೆದಿದ್ದಳು. ಇದನ್ನು ಒಂದು ಪತ್ತೇದಾರಿ ಕಾದಂಬರಿ ಎನ್ನಬಹುದು. ಆಕೆಯ ಗುರಿ, ಕಪ್ಪೆಗಳನ್ನು ಕೊಂದವರು ಯಾರು ಎಂದಾಗಿತ್ತು.

ಅಲ್ಲ. ಒಬ್ಬ ಪತ್ರಕರ್ತೆಯಿಂದ ಇದು ಸಾಧ್ಯವೇ? ಆಕೆ ತನಗೆ ಸಿಕ್ಕಿದ್ದನ್ನೆಲ್ಲ ಓದಿಕೊಂಡದ್ದಷ್ಟೆ ಅಲ್ಲ, ಕಪ್ಪೆಗಳ ಸಂಶೋಧಕರು ಕ್ಷೇತ್ರಾಧ್ಯಯನಕ್ಕೆ ಹೋದಾಗ ತಾನೂ ಜೊತೆಗೆ ಹೋದಳು. ಅವರ ಶೋಧದ ಕಾರ್ಯವನ್ನು ಸದ್ದಿಲ್ಲದೆಯೇ ಗಮನಿಸಿದಳು. ವಿಜ್ಞಾನಿಗಳ ವ್ಯಕ್ತಿತ್ವದ ಬಗ್ಗೆ ಚಿಂತಿಸಿದಳು ಹಾಗೂ ಅವರಿಗೇಕೆ ಕಪ್ಪೆಗಳ ಬಗ್ಗೆ ಇಷ್ಟೊಂದು ಪ್ರೀತಿ ಎಂಬುದನ್ನೂ ಅರ್ಥ ಮಾಡಿಕೊಂಡಳು. ವಿಜ್ಞಾನ ಲೇಖಕರು ಕೂಡ ಅರಿವನ್ನು ಸೃಷ್ಟಿಸಬಲ್ಲರು ಎನ್ನುವುರ ಉದಾಹರಣೆಯೋ ಎನ್ನುವಂತೆ,  ಈ ಎಲ್ಲ ಅಂಶಗಳನ್ನೂ ಸ್ವಾರಸ್ಯಕರವಾಗಿ ಹೊಂದಿಸಿ, ಆಗಿನ ವಿಜ್ಞಾನಿಗಳು ಸ್ವತಃ ಮಾಡುವುದಕ್ಕಿಂತಲೂ ಉತ್ತಮವಾಗಿ ಹೊಸ ಅರಿವನ್ನು ಕಟ್ಟಿದಳು.

ಆಕೆ ಪುಸ್ತಕದ ಬೆನ್ನುಡಿಯೊಂದು ಹೀಗೆ ಹೇಳುತ್ತದೆ: “1990ನೇ ಇಸವಿಯಲ್ಲಿ ಪ್ರಪಂಚದ ಎಲ್ಲೆಡೆ ಎದ್ದ ಅಪಾಯದ ಕೂಗೊಂದನ್ನು ಕೇಳಿದರು. ಕ್ಯಾಲಿಫೋರ್ನಿಯಾ, ಕೊಲೊರಡೊ, ವ್ಯೋಮಿಂಗ್‌ ನಿಂದ ಬ್ರೆಜಿಲ್‌, ಸ್ವಿಟ್ಜರ್ಲೆಂಡ್‌, ಮತ್ತು ಜಪಾನಿನವರೆಗೆ ಎಲ್ಲೆಡೆ ಕಪ್ಪೆಗಳು ಗಾಭರಿಗೊಳಿಸುವಂತಹ ಸಂಖ್ಯೆಯಲ್ಲಿ ಮರೆಯಾಗುತ್ತಿದ್ದುವು.”

ವಿಜ್ಞಾನಿಗಳಲ್ಲಿ ಈ ಅಪಾಯದ ಬಗ್ಗೆ ತಿಳಿಸಿ, ಜಾಗೃತಿಯನ್ನು ಮೊದಲು ಮೂಡಿಸಿದವರಲ್ಲಿ ಡೇವಿಡ್‌ ವೇಕ್‌ ಒಬ್ಬರು. ಈತ 1970ರ ದಶಕದಲ್ಲಿಯೇ ಕಪ್ಪೆಗಳು ಹಾಗೂ ಸಲಮ್ಯಾಂಡರುಗಳು ಕಾಣೆಯಾಗುತ್ತಿದ್ದುದನ್ನು ಗಮನಿಸಿದ್ದರು. ಬಲು ಶೀಘ್ರವೇ ಡೇವ್‌ ಕಾಣೆಯಾಗುತ್ತಿರುವ ಕಪ್ಪೆಗಳ ಪರವಾದಿಯಾದರು. ಕ್ಯಾಥ್ರೀನ್‌ ಫಿಲಿಪ್ಸ್‌ ಮಾತಿನಲ್ಲಿ ಹೇಳುವುದಾದರೆ ಉಭಯಜೀವಿಗಳ ಅಳಿವಿನ ಸ್ಥಿತಿಗತಿಗಳನ್ನು ಗಮನಿಸಿ, ಅದರ ಬಗ್ಗೆ ಏನಾದರೂ ಮಾಡಬೇಕೆಂದು ಚರ್ಚಿಸಲು ವಿಜ್ಞಾನಿಗಳ ಸಭೆ, ಸಮಾವೇಶಗಳನ್ನು ಆಯೋಜಿಸತೊಡಗಿದ್ದರು.

ಆಂಫಿಬಿಯಾವೆಬ್‌ ಎನ್ನುವ ಡೇಟಾಬೇಸ್‌ ಅಥವಾ ದತ್ತನಿಧಿಯನ್ನು ರೂಪಿಸುವುದರಲ್ಲಿ ಡೇವ್‌ ಪ್ರಮುಖ ಪಾತ್ರ ವಹಿಸಿದರು. ವಿಜ್ಞಾನಿಗಳಿಗೆ ಅರಿವನ್ನು ಮೂಡಿಸಿ, ಉಭಯಜೀವಿಗಳನ್ನು ಸಂರಕ್ಷಿಸಲು ನೆರವಾಗುವ ಸಂಶೋಧನೆಗಳನ್ನು ಕೈಗೊಳ್ಳಲು ಬೇಕಾದ ಸುದ್ದಿ, ಶೋಧಗಳನ್ನು ಈ ಡೇಟಬೇಸ್‌ ಸಂಗ್ರಹಿಸುತ್ತದೆ. ನೀವು ಉಭಯಜೀವಿ ಪ್ರಿಯರೋ ಅಲ್ಲವೋ, ತಜ್ಞರೋ ಅಲ್ಲವೋ, ಆದರೂ ಇಂಟರ್‌ ನೆಟ್‌ ನಲ್ಲಿ ಆಗಾಗ್ಗೆ ನೋಡಲೇ ಬೇಕಾದ ಜಾಲತಾಣ ಇದು.

David Wake, who mentored at least 47 PhD students and 37 postdocs and inspired innumerable other scientists around the world. Photo: Museum of Vertebrate Zoology, UC Berkeley, obtained through the kindness of his student Nancy Staub

ಡೇವಿಡ್‌ ವೇಕ್.‌ ನಲವತ್ತೇಳು ಡಾಕ್ಟರೇಟುಗಳು ಮೂವತ್ತೇಳು ಡಾಕ್ಟರೇಟು ನಂತರದ ಸಂಶೋಧಕರಿಗೂ ಗುರುವಾಗಿದ್ದ, ಪ್ರಪಂಚದ ಎಲ್ಲೆಡೆ ಹಲವಾರು ವಿಜ್ಞಾನಿಗಳಿಗೆ ಪ್ರೇರಣೆ ಎನಿಸಿದ್ದವರು. ಚಿತ್ರ: ಮ್ಯೂಸಿಯಂ ಆಫ್‌ ವರ್ಟಿಬ್ರೇಟ್‌ ಜೂವಾಲಜಿ. ಕೃಪೆ: ನ್ಯಾನ್ಸಿ ಸ್ಟಾಬ್‌

ಮೊನ್ನೆ ಜೂನ್‌ 17, 2021 ರಂದು ನಾನು ಈ ಆಂಫಿಬಿಯಾವೆಬ್‌ ಜಾಲತಾಣಕ್ಕೆ ಹೋಗಿದ್ದೆ. ಅದರ ಮೊದಲ ಪುಟದಲ್ಲಿಯೇ ವಾರದ ಪ್ರಭೇದ ಎನ್ನುವ ಶೀರ್ಷಿಕೆಯೊಂದಿಗೆ ರಾನಿಟೋಮೇಯಾ ವೆಂಟ್ರಿಮ್ಯಾಕ್ಯುಲೇಟ, ಅಮೆಜಾನಿನ ವಿಷಗಪ್ಪೆ ಎನ್ನುವ ಕಪ್ಪೆಯ ಸುಂದರ ಚಿತ್ರವಿತ್ತು. ಹೆಚ್ಚಿನ ವಿವರಗಳಿಗೆ ಕೊಂಡಿಯೂ ಇದ್ದುವು. ಆ ಪುಟ “ಇಂದಿನ ಉಭಯಜೀವಿ ಪ್ರಭೇದಗಳ ಸಂಖ್ಯೆ 8,350, ಹದಿನಾರು ಜೂನ್, 2021) ಎಂದೂ ದಾಖಲಿಸಿತ್ತು. ಡೇವ್‌ ಈ ಯೋಜನೆಯ ನಿರ್ದೇಶಕರಾಗಿ ತಮ್ಮ ನಿಧನವಾಗುವ ಕ್ಷಣದವರೆಗೂ ಮೇಲುಸ್ತುವಾರಿ ಮಾಡಿದ್ದರು. ಆಂಫೀಬಿಯಾವೆಬ್‌ ತಾವು ಜಗತ್ತಿಗೆ ಉಳಿಸಿಹೋಗುವ ಆಸ್ತಿ ಎಂದು ಡೇವ್‌ ಪರಿಗಣಿಸಿದ್ದರು.

ಇವುಗಳ ಪ್ರಭಾವವನ್ನು ಅಳೆಯುವುದು ಸುಲಭ. ಈ ಜಾಲತಾಣವನ್ನು ರೂಪಿಸಿದ ನಂತರದ ಇಪ್ಪತ್ತು ವರ್ಷಗಳಲ್ಲಿ ನಮ್ಮ ಅರಿವಿಗೆ ಬಂದಿರುವ ಉಭಯಜೀವಿಗಳ ಸಂಖ್ಯೆ ದುಪ್ಪಟ್ಟಾಗಿದೆ.

ಇಲ್ಲಿ ನಮ್ಮದೇ ನಾಡಿಗೆ ಸಂಬಂಧಿಸಿದ ಸರ್ವೆಯೊಂದರ ಕುರಿತು ವಿಷಯಾಂತರ ಮಾಡಲೇ ಬೇಕಿದೆ. ಭಾರತದಲ್ಲಿರುವ ಪಶ್ಚಿಮಘಟ್ಟಗಳು ಉಭಯಜೀವಿಗಳ ವೈವಿಧ್ಯತೆಯ ಆಗರವೆಂದು ಹೇಳಲಾಗುತ್ತದೆ. ಇಲ್ಲಿ ಹಲವು ಪ್ರಭೇದಗಳು ಪತ್ತೆಯಾಗಲೆಂದೇ ಕಾಯುತ್ತಿರಬಹುದು. ಕೆಲವು ಪುನಃ ಪತ್ತೆಯಾಗಬೇಕಿದೆ. ಹೀಗಾಗಿ ಈ ಜೈವಿಕ ನಿಧಿಯ ಪುನಃಶೋಧ, ಪುನಃಪತ್ತೆ ಹಾಗು ಪುನಃಪರೀಕ್ಷೆಯಂತಹ ಕಾರ್ಯಗಳು ಸಫಲವಾಗಬೇಕಾದರೆ ಜನತೆ ಹಾಗೂ ಆಸಕ್ತ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕ ಹಾಗೂ ಒಂದು ಸವಾಲು.

ಭಾರತದಲ್ಲಿನ ಹಲವು ಯುವ ವಿಜ್ಞಾನಿಗಳು ಈ ಸವಾಲನ್ನು ಎದುರಿಸಲು ಹೊರಟಿದ್ದಾರೆ ಎನ್ನುವುದು ಖುಷಿಯ ವಿಷಯ. ಇವರು 2001 ರಿಂದ 2021ರ ಅವಧಿಯಲ್ಲಿ ವರ್ಷಕ್ಕೆ ಹದಿನೊಂದು ಎನ್ನುವಂತೆ ಒಟ್ಟು ಇನ್ನೂರ ಇಪ್ಪತ್ತಮೂರು ಹೊಸ ಉಭಯಜೀವಿಗಳ ಪ್ರಭೇದಗಳನ್ನು ಪತ್ತೆ ಮಾಡಿದ್ದಾರೆ. ಇದು ಭಾರತದಲ್ಲಿ ನಮಗೆ ಗೊತ್ತಿರುವ ಒಟ್ಟಾರೆ ಉಭಯಜೀವಿಗಳ ಸಂಖ್ಯೆಯ ಶೇಕಡ ನಲವತ್ತೆಂಟರಷ್ಟು. ಕಪ್ಪೆಗಳ ಶೋಧವಷ್ಟೆ ಅಲ್ಲ, ಎಲ್ಲ ಹೊಸ ಪ್ರಭೇದಗಳ ಶೋಧವನ್ನೂ ಭಾರತೀಯ ಸುದ್ದಿ ಮಾಧ್ಯಮಗಳು ಸಾಕಷ್ಟು ಆಸಕ್ತಿ ಹಾಗೂ ಸಂಭ್ರಮದಿಂದ ವರದಿ ಮಾಡುತ್ತವೆ ಎನ್ನುವುದು ಸಮಾಧಾನ ತರುವ ಸಂಗತಿ. ಹೊಸ ಪ್ರಭೇದಗಳ ಪತ್ತೆ ಎನ್ನುವುದನ್ನು ಅಂಚೆಚೀಟಿಯ ಸಂಗ್ರಹದಂತೆ ಎಂದು ಪರಿಗಣಿಸುತ್ತಿದ್ದ ದಿನಗಳು ಇದಲ್ಲ. ಜನತೆಯ ಮನಸ್ಸಿನಲ್ಲಿ ಇಂತಹ ಬದಲಾವಣೆಯನ್ನು ತಂದ ಶ್ರೇಯವೆಲ್ಲವೂ ಮಿಂಚುವ ಪ್ರತಿಭೆಯ ಯುವ ಬರೆಹಗಾರರು ಅನೇಕರಿಗೆ ಸಲ್ಲಬೇಕು. ಇಂತಹವರ ಬಗ್ಗೆ ನಾನು  ಹಿಂದಿನ ಲೇಖನದಲ್ಲಿ ಬರೆದಿದ್ದೆ.

ಹೀಗೆ ಕಪ್ಪೆಗಳು ಮತ್ತು ಉಭಯಜೀವಿಗಳ ಮೋಹ ಹತ್ತಿದ ಒಬ್ಬ ಯುವ ಭಾರತೀಯ ವಿಜ್ಞಾನಿಯ ಉದಾಹರಣೆಯನ್ನು ಇಲ್ಲಿ ಕೊಡುವೆ. ಕೆ. ವಿ ಗುರುರಾಜ ತನ್ನನ್ನು ಉಭಯಜೀವಿ ತಜ್ಞ, ಇಂಗ್ಲೀಷಿನಲ್ಲಿ ಬಟ್ರಾಕಾಲಜಿಸ್ಟ್‌ ಎಂದುಕೊಳ್ಳುವ ಈತ ಬೆಂಗಳೂರಿನ ಸೃಷ್ಟಿ ಕಲೆ, ವಿನ್ಯಾಸ ಹಾಗೂ ತಂತ್ರಜ್ಞಾನ ಸಂಸ್ಥೆಯಲ್ಲಿ  ಸ್ನಾತಕೋತ್ತರ ಮತ್ತು ಡಾಕ್ಟರೇಟು ವಿದ್ಯಾರ್ಥಿಗಳಿಗೆ ಕಪ್ಪೆ, ನೆಲಗಪ್ಪೆ ಹಾಗೂ ಸಲಮಾಂಡರ್‌ ಗಳ ಬಗ್ಗೆ ಪಾಠ ಮಾಡುತ್ತಾರೆ. ಬಿಡುವಿನ ವೇಳೆಯಲ್ಲಿ ಗುರು ಪಶ್ಚಿಮಘಟ್ಟದಲ್ಲಿರುವ  ರಾತ್ರಿಕಪ್ಪೆಗಳನ್ನೂ, ಕುಣಿಯುವ ಕಪ್ಪೆಗಳನ್ನೂ ಅಧ್ಯಯನ ಮಾಡುತ್ತಾರೆ.

ಪಿಕ್ಟೋರಿಯಲ್‌ ಗೈಡ್‌ ಟು ಫ್ರಾಗ್ಸ್‌ ಅಂಡ್‌ ಟೋಡ್ಸ್‌ ಆಫ್‌ ವೆಸ್ಟರ್ನ್‌ ಘಾಟ್ಸ್‌ ಅಥವಾ ಪಶ್ಚಿಮ ಘಟ್ಟದ ಕಪ್ಪೆಗಳು ಹಾಗೂ ನೆಲಗಪ್ಪೆಗಳ ಸಚಿತ್ರ ಕೈಪಿಡಿ ಎನ್ನುವ ಗುರುವಿನ ಮುಕ್ತ ಪುಸ್ತಕ ಈ ಉಭಯಜೀವಿಗಳ ಪ್ರಪಂಚಕ್ಕೆ ಆಹ್ವಾನ ನೀಡುವ ಪುಸ್ತಕ. ನಮ್ಮ ಬಲು ನಿಧಾನ ಗತಿಯ ಶಿಕ್ಷಣ ವ್ಯವಸ್ಥೆಗೆ ಇವರು ನಡೆಸುವ ಜನಜಾಗೃತಿಕಾರ್ಯಕ್ರಮಗಳೂ, ತರಬೇತಿ ಶಿಬಿರಗಳೂ ಒಂದು ಔಷಧಿ ಎನ್ನಬಹುದು.

Gururaja K.V. (left) and his book of 2012 (right). Pictorial guide to frogs and toads of the Western Ghats. Gubbi Labs Publication. ISBN 978-81-924461-0-3. Photos: K.V. Gururaja

ಗುರುರಾಜ. ಕೆ. ವಿ ಹಾಗೂ 2012ರಲ್ಲಿ ಆತ ಪ್ರಕಟಿಸಿದ ಪುಸ್ತಕ (ಬಲ) ಚಿತ್ರ: ಕೆ.ವಿ.ಗುರುರಾಜ

ವಿಷಯಾಂತರದಿಂದ ಹೊರಳೋಣ. ಡೇವಿಡ್‌ ವೇಕ್‌ ನಂತಹ ವಿಕಾಸವಿಜ್ಞಾನಿಗಳ ಬದುಕು ಹಾಗೂ ಕಾರ್ಯಗಳನ್ನು ಚರಿತ್ರೆಕಾರರು ಹಾಗೂ ತತ್ವವಿಜ್ಞಾನಿಗಳೂ ಪರಿಶೀಲಿಸಲು ಆರಂಭಿಸಿದ್ದಾರೆನ್ನುವುದು ಸ್ವಾಗತಿಸಬೇಕಾದ ಸಂಗತಿ. ಇಪ್ಪತ್ತನೆಯ ಶತಮಾನದಲ್ಲಿ ನಾವು ಬಹಳಷ್ಟು ಕಣಜೀವಿವಿಜ್ಞಾನದಲ್ಲಿ ಹಾಗೂ ಸ್ವಲ್ಪ ಮಟ್ಟಿಗೆ ಕೋಶವಿಜ್ಞಾನದಲ್ಲಿ ಅಮೋಘವಾದ ತಾರ್ಕಿಕ ಹಾಗೂ ತಂತ್ರಜ್ಞಾನದ ತಿರುಳಿರುವ ಸಾಹಿತ್ಯವನ್ನು ಸೃಷ್ಟಿಸಿದ್ದೆವು.

ಜೀವಿವಿಜ್ಞಾನದ ಮತ್ತೊಂದು ಅರ್ಧ, ಬೃಹತ್ತಾದ ಕಣ್ಣಿಗೆ ಕಾಣುವ ಜೀವಿಜಗತ್ತಿಗೆ ಸಂಬಂಧಿಸಿದ್ದು. ಇಡೀ ಜೀವಿಗಳು, ಜೀವಿಸಮೂಹ ಹಾಗೂ ಜೀವಿಸಮುದಾಯಗಳತ್ತ ಕಣ್ಣು ಹಾಯಿಸುವ ಈ ಇನ್ನೊಂದು ಅರ್ಧದಲ್ಲಿ ಅನ್ವೇಷಿಸಬೇಕಾದದ್ದು ಬಹಳಷ್ಟಿದೆ. ಡೇವ್‌ ಮತ್ತು ಅವರ ಸಂಶೋಧನಾ ತಂತ್ರಗಳು ಡೇವೀಸ್‌ ನಲ್ಲಿ ಇರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ತತ್ವಜ್ಞಾನ ವಿಭಾಗದ ಜೇಮ್ಸ್‌ ಗ್ರೀಸೆಮರ್‌ ನಂತವರ ಗಮನವನ್ನು ಸೆಳೆದಿದೆ. ಡೇವಿಡ್‌ ವೇಕ್ ರವರ ಕೊಡುಗೆಯನ್ನು ಅಮರವಾಗಿಸುವ ಇದು, ಆರ್ಗಾನಿಸ್ಮಲ್‌ ಬಯಾಲಜಿ ಎನ್ನುವ ಜೈವಿಕಸಂಘಟನೆಯ ವಿಜ್ಞಾನಕ್ಕೂ ಒಳಿತು ತರುವ ವಿಷಯ.

ಇದು ಜಾಣ ಅರಿಮೆ. ಆಂಗ್ಲ ಮೂಲ: ಪ್ರೊ. ರಾಘವೇಂದ್ರ ಗದಗ್‌ಕರ್, ಕನ್ನಡಾನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್‌. ಮಂಜುನಾಥ. ಇದರ ಆಂಗ್ಲ ಮೂಲವನ್ನು ದಿ ವೈರ್‌ ಸೈನ್ಸ್‌ ಪತ್ರಿಕೆ ಪ್ರಕಟಿಸಿತ್ತು.

Scroll To Top