Now Reading
ನಮಗಷ್ಟೇ ಅಲ್ಲ, ನರ್ತಿಸುವ ಜೇನ್ನೊಣಗಳಿಗೂ ಬೇಕು ಒಳ್ಳೆಯನಿದ್ರೆ

ನಮಗಷ್ಟೇ ಅಲ್ಲ, ನರ್ತಿಸುವ ಜೇನ್ನೊಣಗಳಿಗೂ ಬೇಕು ಒಳ್ಳೆಯನಿದ್ರೆ

ಬಿಬಿಸಿಯ ಇನ್ವಿಸಿಬಲ್‌ ವರ್ಲ್ಡ್ಸ್‌ – ಅಗೋಚರ ಪ್ರಪಂಚಗಳು ಎನ್ನುವ ಡಾಕ್ಯುಮೆಂಟರಿ ಚಿತ್ರಕ್ಕಾಗಿ ದುಂಬಿಗಳ ಹಿಂಡಿನೊಂದಿಗೆ ಅಣಿಯಾಗಿರುವ ಬ್ಯಾರೆಟ್‌ ಕ್ಲೈನ್.‌ ಚಿತ್ರ: ಐಲೀನ್‌ ಇಂಕ್ಸನ್.‌ 

ಸಂಪುಟ 4 ಸಂಚಿಕೆ 256, ಜೂನ್ 12, 2021

ಜಾಣ ಅರಿಮೆ

ವಿಸ್ಮಯಕ್ಕಿಂತ ವಿಸ್ಮಯ 20

ನಮಗಷ್ಟೇ ಅಲ್ಲ, ನರ್ತಿಸುವ ಜೇನ್ನೊಣಗಳಿಗೂ  ಬೇಕು ಒಳ್ಳೆಯನಿದ್ರೆ

Kannada translation by Kollegala Sharma

§

ಏಪ್ರಿಲ್‌ ೨೦೧೦ರಲ್ಲಿ ನಾನು ಪ್ರೊಫೆಸರ್‌ ಉಲ್ರಿಚ್‌ ಜಿ ಮ್ಯುಲ್ಲರರ ಬಳಿ, ಬೂಸು ಕೃಷಿ ಮಾಡುವ ಇರುವೆಗಳ ಬಗ್ಗೆ ಡಾಕ್ಟರೇಟು ನಂತರದ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದ, ಹಿಂದೆ ನನ್ನ ವಿದ್ಯಾರ್ಥಿನಿಯಾಗಿದ್ದ ರುಚಿರಾ ಸೇನ್‌ ನೀಡಿದ ಆಹ್ವಾನದ ಮೇರೆಗೆ ಭಾರತೀಯ ಪೇಪರ್‌ ಕಣಜ ರೋಪಾಲೀಡಿಯಾ ಮಾರ್ಜಿನೇಟಾ ಬಗ್ಗೆ ಒಂದು ಭಾಷಣ್ನವನ್ನು ನೀಡಲೆಂದು ಅಮೆರಿಕೆಯ ಆಸ್ಟಿನ್ನಿನಲ್ಲಿರುವ ಟೆಕ್ಸಾಸ್‌ ವಿಶ್ವವಿದಾಯನಿಲಯಕ್ಕೆ ಭೇಟಿ ನೀಡಿದ್ದೆ. ಆಗ ಅಲ್ಲಿ ಡಾಕ್ಟರೇಟು ವಿದ್ಯಾರ್ಥಿಯಾಗಿದ್ದ ಬ್ಯಾರೆಟ್‌ ಆಂಥನಿ ಕ್ಲೈನ್‌ನ ಗೆಳೆತನ ದೊರೆತದ್ದು ಆ ಭೇಟಿಯ ಅವಿಸ್ಮರಣೀಯ ಅಂಶ.

ಭೇಟಿ ಒಮ್ಮೆಯೇ ಆಗಿದ್ದರೂ, ಬ್ಯಾರೆಟ್ಟನನ್ನು ಯಾರೂ ಮರೆಯಲಾರರು. ನಾನು ಅಂದಿನಿಂದ ಹಲವಾರು ಬಾರಿ ಅವನನ್ನು ಭೇಟಿ ಮಾಡಿದ್ದೆ. ಅಕ್ಟೋಬರ್‌ 2010ರಲ್ಲಿ ಬೆಂಗಳೂರಿನ ನಮ್ಮ ಪ್ರಯೋಗಾಲಯಕ್ಕೂ ಭೇಟಿ ನೀಡಲು ಆಹ್ವಾನಿಸಿದ್ದೆ. ಮೊದಲ ಭೇಟಿಯಲ್ಲಿಯೇ ಬ್ಯಾರೆಟ್ಟನಿಗೆ ಕೀಟಗಳನ್ನು ಕುರಿತಂತೆ ಎರಡು ವಿಚಿತ್ರ ಆಸಕ್ತಿಗಳು ಇದ್ದುದನ್ನು ಕಂಡೆ. ಇವು ಕೀಟಗಳಿಂದ ಪ್ರೇರಿತ ಕಲೆ ಹಾಗೂ ಕೀಟಗಳ ನಿದ್ರೆ. ಅವನ ಕೀಟಗಳ ಕಲೆಯ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ. ನಿದ್ರೆಯಲ್ಲಿರುವ ಕೀಟಗಳ ಜೊತೆಗೆ ಅವನ ಸಾಹಸಗಳ ಬಗ್ಗೆ ಇವತ್ತು ಸ್ವಲ್ಪ ಗಮನ ಹರಿಸೋಣ.

ನಿದ್ರೆಗೆಟ್ಟ ನರ್ತಕಿಯರು 

ಪ್ರೊಸೀಡಿಂಗ್ಸ್‌ ಆಫ್‌ ನ್ಯಾಶನಲ್‌ ಅಕಾಡೆಮಿ ಆಫ್‌ ಸೈನ್ಸಸ್‌ ಪತ್ರಿಕೆಯ ಡಿಸೆಂಬರ್‌ 28, 2010ರ ಸಂಚಿಕೆಯಲ್ಲಿ ಬ್ಯಾರೆಟ್‌, ತನ್ನ ಅವಳಿ ಸಹೋದರ ಆರ್ನೋ ಕ್ಲೈನ್‌ ಹಾಗೂ ಇನ್ನೂ ಹಲವರು “ಸ್ಲೀಪ್‌ ಡಿಪ್ರಿವೇಶನ್‌ ಇಂಪೇರ್ಸ್‌ ಪ್ರಿಸಿಶನ್‌ ಆಫ್‌ ವ್ಯಾಗಲ್‌ ಡ್ಯಾನ್ಸ್‌ ಸಿಗ್ನಲಿಂಗ್‌ ಇನ್‌ ಹನಿ ಬೀಸ್‌” ಅಥವಾ “ಜೇನ್ನೊಣಗಳ ನಿದ್ರೆಗೆಡಿಸಿದರೆ ಅವುಗಳ ನರ್ತನ ಬಾಷೆಯ ಸಂದೇಶಗಳ ನಿಖರತೆ ಹದಗೆಡುತ್ತದೆ” ಎಂಬ ಶೀರ್ಷಿಕೆಯ ಪ್ರಬಂಧವನ್ನು ಪ್ರಕಟಿಸಿದ್ದರು. ಜೇನ್ನೊಣಗಳಲ್ಲಿ ಒಂದು ವಿಶಿಷ್ಟ ನರ್ತನ ಭಾಷೆ ಇರುತ್ತದೆ ಎಂದೂ, ಸಂಕೇತಗಳನ್ನು ಬಳಸಿಕೊಂಡು ಮಾಹಿತಿಯನ್ನು ರವಾನಿಸುವ ಮಟ್ಟಿಗೆ ಇದು ಬೇರಾವುದೇ ಪ್ರಾಣಿಗಳ ಭಾಷೆಗಿಂತಲೂ ಹೆಚ್ಚು ಮನುಷ್ಯರ ಭಾಷೆಯನ್ನು ಹೋಲುತ್ತದೆ ಎನ್ನುವುದೂ ಗೊತ್ತಿರುವ ವಿಷಯ.  ಆಹಾರ ಹುಡುಕಿಕೊಂಡು ಹೋದ ಜೇನ್ನೊಣಗಳು ಗೂಡಿಗೆ ಮರಳಿದಾಗ ತಾವು ಪತ್ತೆ ಮಾಡಿದ ಹೊಸ ಆಹಾರವನ್ನು ಗೂಡಿಗೆ ಹೊತ್ತು ತರುವ ಕಾಯಕದಲ್ಲಿ ಬೇರೆ ಮುಗ್ಧ ನೊಣಗಳನ್ನೂ ತೊಡಗಿಸುತ್ತವೆ. ಹೂವಿನ ಪರಾಗವೋ, ಮಕರಂದವೋ ಇರುವ ದಿಕ್ಕು ಹಾಗೂ ಅವುಗಳ ಮೂಲ ಇರುವ ದೂರವನ್ನು ತಿಳಿಸುವ ಮೂಲಕ ಹೀಗೆ ಬೇರೆ ನೊಣಗಳನ್ನೂ ತೊಡಗಿಸುತ್ತವೆ.

ಹೀಗೆ ಆಹಾರ ಇರುವ ದೂರ ಮತ್ತು ದಿಕ್ಕನ್ನು ಸೂಚಿಸುವ ನೃತ್ಯ ರೂಪವನ್ನು ವ್ಯಾಗಲ್‌ ಡ್ಯಾನ್ಸ್‌, ಕುಲುಕು ನೃತ್ಯ (‘waggle dance’) ಎನ್ನುತ್ತಾರೆ. ಏಕೆಂದರೆ ಹೀಗೆ ನರ್ತಿಸುವಾಗ ಜೇನ್ನೊಣಗಳು ತಮ್ಮ ಹೊಟ್ಟೆಯ ಭಾಗವನ್ನು ತೀವ್ರಗತಿಯಿಂದ ಕುಲುಕಾಡಿಸುತ್ತವೆ. ಅಂದ ಹಾಗೆ ಜೇನ್ನೊಣಗಳ ನರ್ತನಗಳು ಇನ್ನೂ ಹಲವು ಇವೆ. ಹೊಟ್ಟೆಯ ಕುಲುಕಾಟದ ಅವಧಿ ಆಹಾರವಿರುವ ದೂರವನ್ನು ಸಂಕೇತಿಸುತ್ತದೆ. ಆಹಾರ ಇರುವ ದಿಕ್ಕನ್ನು ಜೇನ್ನೊಣಗಳು ಗೂಡಿಗೆ ಹೋಲಿಸಿದಂತೆ ಯಾವ ಕೋನದಲ್ಲಿ ನೃತ್ಯ ಮಾಡುತ್ತಿವೆ ಎನ್ನುವುದು ಸಂಕೇತಿಸುತ್ತದೆ. ಗೂಡಿನ ಹೊರಗಡೆ ನೆತ್ತಿಯ ಮೇಲೆ ಸೂರ್ಯ ಇರುವ ಕೋನಕ್ಕೂ ಇದು ತಾಳೆಯಾಗುತ್ತದೆ.  ಹೊಸದಾಗಿ ಆಹಾರ ಹುಡುಕಲು ಹೊರಟ ಜೇನ್ನೊಣಗಳು ಈ ನರ್ತನವನ್ನು ನೋಡಿ, ನೃತ್ಯವು ಸಂಕೇತಿಸುವ ಮಾಹಿತಿಯನ್ನು ಗಮನಿಸಿ ಗೂಡಿನಿಂದ ಹೊರಗೆ ಹೋಗುತ್ತವೆ. ಆಹಾರ ಮೂಲ ಎಲ್ಲಿದೆ ಎಂದು ಪತ್ತೆ ಮಾಡುತ್ತವೆ. ಅವುಗಳಿಗೆ ನರ್ತಿಸುತ್ತಿರುವ ಜೇನ್ನೊಣಗಳಿಂದಾಗಲಿ ಅಥವಾ ಬೇರೆ ಯಾರಿಂದಲೂ ಇದಕ್ಕಿಂತ ಹೆಚ್ಚಿನ ಮಾರ್ಗದರ್ಶನ ಸಿಗುವುದಿಲ್ಲ. ಬೇಕೂ ಇಲ್ಲ.

ನರ್ತಕಿಯರು ಮಾಹಿತಿಯನ್ನು ಎಷ್ಟು ನಿಖರವಾಗಿ ನೃತ್ಯಗಳ ಮೂಲಕ ತಲುಪಿಸುತ್ತವೆ ಎನ್ನುವುದನ್ನು ಅಳೆಯಬಹುದು. ಒಂದೇ ಜೇನ್ನೊಣ ಪ್ರತೀ ಸಲ ಹೀಗೆ ನರ್ತಿಸುವಾಗ ಅದರ ಹೊಟ್ಟೆಯ ಕುಲುಕಾಟದ ಅವಧಿಯನ್ನೂ, ಕೋನವನ್ನೂ ಅಳೆದು, ಒಂದೇ ಆಹಾರ ಮೂಲವಿದ್ದಾಗ ಅವು ಒಂದೇ ರೀತಿ ಇರುತ್ತವೆಯೋ ಎಂದು ತಿಳಿಯಬಹುದು.  ಒಂದು ಜೇನ್ನೊಣ ಬೇರೆ, ಬೇರೆ ಸಮಯದಲ್ಲಿ ಆಡುವ ನರ್ತನಗಳ ಈ ಅವಧಿ ಹಾಗೂ ಕೋನಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸ ಇದ್ದೇ ಇರುತ್ತದೆ. ಈ ವ್ಯತ್ಯಾಸವನ್ನು ಸ್ಟಾಂಡರ್ಡ್‌ ಡೀವಿಯೇಶನ್‌ ಎನ್ನುತ್ತಾರೆ. ಬ್ಯಾರೆಟ್‌ ಮತ್ತು ಸಂಗಡಿಗರು ಈ ಕುಲುಕಾಟಗಳ ಅವಧಿ ಹಾಗೂ ಕೋನಗಳನ್ನು ಅಳೆದರು. ನಿದ್ರೆಗೆಡಿಸಿದ ಜೇನ್ನೊಣಗಳ ನೃತ್ಯಗಳಲ್ಲಿ ಕಾಣುವ ಕೋನಗಳಲ್ಲಿನ ವ್ಯತ್ಯಾಸದ ಸ್ಟಾಂಡರ್ಡ್ ಡೀವಿಯೇಶನ್‌ ಸಾಧಾರಣ ಜೇನ್ನೊಣಗಳ ನೃತ್ಯಗಳಲ್ಲಿ ಇರುವುದಕ್ಕಿಂತ ಹೆಚ್ಚು ಇತ್ತು. ಅಂದರೆ ನಿದ್ರೆಗೆಟ್ಟ ನರ್ತಕಿಯರು ಆಹಾರ ಇರುವ ದಿಕ್ಕನ್ನು ನಿಖರವಾಗಿ ತಿಳಿಸುತ್ತಿರಲಿಲ್ಲ.

A: Wagle dance of honey bees showing the variation in the angle of the waggle phase from dance to dance (compare 1 and 2). B: Image of a tagged sleeping bee. C: Bee sleeping inside a cell, identified by their dorsoventral discontinuous ventilatory motions, represented by arrows. Images: Barrett Klein

A: ಜೇನ್ನೊಣಗಳ ವ್ಯಾಗಲ್‌ ನರ್ತನ.  ನೃತ್ಯಗಳ ನಡುವೆ ಇರುವ ಕುಲುಕಾಟದ ಅವಧಿಯಲ್ಲಿನ ವ್ಯತ್ಯಾಸವನ್ನು ತೋರಿಸುವ ಚಿತ್ರ. (1 ರ ಜೊತೆಗೆ 2 ಹೋಲಿಸಿ). B: ಬಣ್ದದಿಂದ ಗುರುತಿಸಿದ, ನಿದ್ರಿಸುತ್ತಿರುವ ಜೇನೊಣ. C: ಗೂಡಿನ ಕೋಣೆಯೊಂದರಲ್ಲಿ ನಿದ್ರಿಸುತ್ತಿರುವ ಜೇನ್ನೊಣ. ಬಾಣದ ಗುರುತು ಗಾಳಿ ಬೀಸಿಕೊಳ್ಳುವುದಕ್ಕಾಗಿ ಜೇನ್ನೊಣವು ತನ್ನ ಹೊಟ್ಟೆಯನ್ನು ಆಡಿಸುವ ದಿಕ್ಕನ್ನು ಸೂಚಿಸುತ್ತದೆ. ಚಿತ್ರಗಳು: ಬ್ಯಾರೆಟ್‌ ಕ್ಲೈನ್

ಇದು ಬಹಳ ಕುತೂಹಲಕಾರಿ ಫಲಿತಾಂಶ. ಮನುಷ್ಯರ ಮೇಲೆ ನಡೆಸಿದ ಇಂತಹುದೇ ಪರೀಕ್ಷೆಗಳೂ ಸಮಾನವಾದ ಫಲಿತಾಂಶಗಳನ್ನು ನೀಡಿದ್ದುವು. ನೆನಪು ಅಥವಾ ಭಾಷೆ ಯಂತಹ ಗ್ರಹಣ ಸಾಮರ್ಥ್ಯ ರಾತ್ರಿಯೆಲ್ಲ ಚೆನ್ನಾಗಿ ನಿದ್ರಿಸಿದ್ದವರಲ್ಲಿರುವಷ್ಟು ನಿಖರವಾಗಿ ಮೂವತ್ತು ಗಂಟೆಗಳ ಕಾಲ ನಿದ್ರಿಸಲಾಗದ ವ್ಯಕ್ತಿಗಳಲ್ಲಿ ಇರಲಿಲ್ಲ.

ಬ್ಯಾರೆಟ್ಟರ ಅಧ್ಯಯನಗಳು ಇನ್ನೂ ಹಲವು ಕೌತುಕಮಯ ಪ್ರಶ್ನೆಗಳನ್ನು ಮುಂದಿಡುತ್ತವೆ. ಜೇನ್ನೊಣಗಳು ಎಲ್ಲಿ ಹಾಗೂ ಯಾವಾಗ ನಿದ್ರಿಸುತ್ತವೆ? ಜೇನ್ನೊಣಗಳಲ್ಲಿಯೂ ಗಾಢ ಹಾಗೂ ಲಘು ನಿದ್ರೆಯ ಸ್ಥಿತಿಗಳು ಇವೆಯೋ? ಜೇನ್ನೊಣಗಳ ನಿದ್ರೆ ಕೆಡಿಸುವುದು ಹೇಗೆ? ನಿದ್ರೆಗೆಟ್ಟ ಜೇನ್ನೊಣಗಳ ನಿಖರವಲ್ಲದ ಕುಣಿತ ಕಂಡ ಉಳಿದ ಜೇನ್ನೊಣಗಳು ಏನು ಮಾಡುತ್ತವೆ?

ಇನ್ನೂ ಮುಖ್ಯವಾದ ಪ್ರಶ್ನೆ ಎಂದರೆ ಕೀಟಗಳು ನಿದ್ರಿಸುತ್ತವೆಯೇ? ಹಾಗಿದ್ದರೆ ಕೀಟಗಳ ನಿದ್ರೆಯನ್ನು ನಾವು ಹೇಗೆ ಗುರುತಿಸಬಹುದು, ಪತ್ತೆ ಮಾಡಬಹುದು ಹಾಗೂ ಅಳೆಯಬಹುದು?

ಈ ಪ್ರಶ್ನೆಗಳಿಗೆ ಉತ್ತರ ದೊರಕಿವೆ. ಹಲವು ಬ್ಯಾರೆಟ್ಟರ ಪ್ರಯೋಗಗಳ ಫಲವಾಗಿ ಹಾಗೂ ಇನ್ನುಳಿದವು ಆತನ ಪ್ರಬಂಧ ಪ್ರಕಟವಾಗುವ ಮೊದಲು ಹಾಗೂ ಅನಂತರ ನಡೆದ ಬೇರೆಯವರ ಕೆಲಸಗಳಿಂದಾಗಿ. ಹೀಗೆ ಈ ಕ್ಷೇತ್ರದ ಅರಿವು ಸಮೃದ್ಧವಾಗಿದೆ.

ನಿದ್ರಿಸುವ ಜೇನ್ನೊಣಗಳನ್ನು ಪತ್ತೆ ಮಾಡುವುದು ಹೇಗೆ? 

ಬ್ಯಾರೆಟ್‌ ಅದೃಷ್ಟಶಾಲಿ. ಏಕೆಂದರೆ ಈ ಹಿಂದೆಯೇ ಜರ್ಮನಿಯ ವಾಲ್ಟರ್‌ ಕೈಸರ್‌ ಮತ್ತು ಸಂಗಡಿಗರು ಜೇನ್ನೊಣಗಳು ನಿದ್ರಿಸುತ್ತಿವೆ ಎನ್ನುವುದನ್ನು ಪತ್ತೆ ಮಾಡುವ ನಡವಳಿಕೆಯ ಕುರುಹುಗಳನ್ನು ಹಾಗೂ ನಿದ್ರೆಯನ್ನು ಸೂಚಿಸುವ ನರಮಂಡಲದ ಕುರುಹುಗಳೇನು ಎಂಬುದನ್ನು ನಿರ್ಧರಿಸಿದ್ದರು. ಜೇನ್ನೊಣಗಳು ನಿದ್ರಿಸುವಾಗ ಬಹುಪಾಲು ಚಲನೆ ಇರುವುದಿಲ್ಲ. ಅವುಗಳ ದೇಹವು ಭಾರದಿಂದಾಗಿ ಕೆಳಗೆ ಜೋತುಬಿದ್ದಿರುತ್ತದೆ. ಆದರೆ ಒಮ್ಮೊಮ್ಮೆ ಅವು ತಟಕ್ಕನೆ ತಮ್ಮ ಆಂಟೆನಾವನ್ನೋ, ಕಾಲನ್ನೋ ಅಥವಾ ಮೂತಿಯಲ್ಲಿರುವ ಮಧುಹೀರುವ ಪ್ರೊಬೋಸಿಸ್‌ ಎನ್ನುವ ಸೊಂಡಿಲಿನಂತಹ ಭಾಗವನ್ನೋ ಮಡಚಿ, ಚಾಚುತ್ತಿರುತ್ತವೆ. ಆಗಾಗ್ಗೆ ಅವುಗಳ ಹೊಟ್ಟೆ ಉಸಿರಾಟವಾಡುವಾಗ ಮಾಡುವಂತೆ ಉಬ್ಬಿ ಕುಗ್ಗುತ್ತಿರುತ್ತದೆ.

ಆಂಟೆನಾಗಳು ಅಲುಗುತ್ತವೆಯೇ ಇಲ್ಲವೋ ಎನ್ನುವುದನ್ನು ಗಮನಿಸಿ, ಗಾಢವಾದ ನಿದ್ರೆಯನ್ನೂ ಲಘು ನಿದ್ರೆಯನ್ನೂ ಕೂಡ ಗುರುತಿಸಬಹುದು. ವೀಡಿಯೋ ಚಿತ್ರಗಳಲ್ಲಿ ಹೀಗೆ ನಿದ್ರಿಸುತ್ತಿರುವ ಜೇನ್ನೊಣಗಳನ್ನು ಪತ್ತೆ ಮಾಡಬಹುದು. ಆದರೆ ಅವು ಗೂಡಿನೊಳಗಿನ ಆರುಬದಿಯ ಕೋಣೆಗಳೊಳಗೆ ಇದ್ದಾಗ ನಿದ್ರೆಸುತ್ತಿವೆಯೋ ಎಂದು ಪತ್ತೆ ಮಾಡುವುದು ಕಷ್ಟ. ಬ್ಯಾರೆಟ್‌ ಮತ್ತು ಸಂಗಡಿಗರು ಹೀಗೆ ಎದುರಿಗಿಲ್ಲದ ಜೇನ್ನೊಣಗಳನ್ನು ಗಮನಿಸಲಾಗದ ಸಮಸ್ಯೆಗೂ ಒಂದು ಚತುರ ಪರಿಹಾರವನ್ನು ಹುಡುಕಿದರು.

ಕೋಣೆಯೊಳಗೆ ಮಲಗಿರುವ ಜೇನ್ನೊಣಗಳ ಪೂರ್ತಿ ದೇಹ ಕಾಣದೇ ಹೋದರೂ, ಅವುಗಳ ಉದರದ ಹಿಂತುದಿಯ ಒಂದಿಷ್ಟು ಭಾಗವನ್ನು ಸಾಮಾನ್ಯವಾಗಿ ನೋಡಬಹುದು. ಜೇನ್ನೊಣಗಳ ಈ ಹೊಟ್ಟೆಯ ತುದಿಯನ್ನು ಗಮನಿಸಿಯೇ ಅವು ನಿದ್ರಿಸುತ್ತಿವೆಯೋ ಇಲ್ಲವೋ ಎನ್ನುವುದನ್ನು ತಿಳಿಯುವ ವಿಧಾನವೊಂದನ್ನು ಬ್ಯಾರೆಟ್‌ ಮತ್ತು ಸಂಗಡಿಗರು ರೂಪಿಸಿದರು. ಕೋಣೆಗಳೊಳಗೆ ಇರುವ ನೊಣಗಳ ಇಡೀ ದೇಹವು ಕಾಣುವಂತೆ ಗಾಜಿನ ತಟ್ಟೆಗಳನ್ನು ಉಪಯೋಗಿಸಿಕೊಂಡು ಗೂಡುಗಳನ್ನು ಕಟ್ಟಿದರು. ಹೀಗೆ ಕೋಣೆಯೊಳಗೆ ಮಲಗಿದ್ದ ಜೇನ್ನೊಣಗಳನ್ನೂ ಅವರು ಗಮನಿಸಬಹುದಾಗಿತ್ತು. ಈಗ, ಜೇನ್ನೊಣಗಳ ಹೊಟ್ಟೆಯ ತುದಿಯ ಅಲುಗಾಟವನ್ನಷ್ಟೆ ಗಮನಿಸಿ, ನಿದ್ರಿಸುತ್ತಿರುವ ಜೇನ್ನೊಣಗಳು ಯಾವುವು, ಎಚ್ಚರವಾಗಿರುವವು ಯಾವುವು ಎಂದು ಗುರುತಿಸಲು ಕಲಿತರು.

ನಿದ್ರೆಗೆಡುಕ 

ಬಹುಶಃ ಬ್ಯಾರೆಟ್‌ ಮಾಡಿದ ಚತುರ ಕೆಲಸಗಳಲ್ಲಿ ಸ್ವಾರಸ್ಯಕರವಾಗಿದ್ದು ಎಂದರೆ ಗೂಡಿನಲ್ಲಿರುವ ಕೆಲವು ಆಯ್ದ ಜೇನ್ನೊಣಗಳ ನಿದ್ರೆಯನ್ನಷ್ಟೆ ಕೆಡಿಸಿ, ಉಳಿದವುಗಳು ಸುಖನಿದ್ರೆ ಮಾಡುವಂತೆ ಮಾಡಿದ್ದು. ಇದಕ್ಕೆ ಒಂದೇ ಉಪಾಯ. ಆಯ್ದ ಜೇನ್ನೊಣಗಳನ್ನಷ್ಟೆ ಅಲ್ಲಾಡಿಸಿ, ಎಚ್ಚರಗೊಳಿಸುವುದು. ಉಳಿದವುಗಳಿಗೆ ತೊಂದರೆ ಕೊಡದೆ ಇರುವುದು. ಬ್ಯಾರೆಟ್‌ ಮತ್ತು ಟೆಕ್ಸಾಸ್‌ ವಿಶ್ವವಿದ್ಯಾನಿಲಯದಲ್ಲಿದ್ದ ಪ್ರತಿಭಾವಂತ ಇಂಜಿನಿಯರು ಟೆರ್ರಿ ವ್ಯಾಟ್ಸ್‌ ಇದಕ್ಕಾಗಿ ನಿದ್ರೆಗೆಡಿಸುವ ಯಾಂತ್ರಿಕ ಸಾಧನವೊಂದನ್ನು ರೂಪಿಸಿದರು. ಇದಕ್ಕೆ ‘ಇನ್ಸೋಮಿನೇಟರ್‌’ ಅಂದರೆ ನಿದ್ರೆಗೆಡುಕ ಎಂಬ ಆಕರ್ಷಕ ಹೆಸರನ್ನೂ ಕೊಟ್ಟರು.

ಈ ಸಾಧನ ಎಷ್ಟು ಚತುರವೋ, ಅಷ್ಟೇ ಸರಳವೂ. ಇದರಲ್ಲಿ ಹಲವಾರು ಅಯಸ್ಕಾಂತಗಳನ್ನು ಅಂಟಿಸಿದ ಎರಡು ಪ್ಲೆಕ್ಸಿಗ್ಲಾಸ್‌ ಹಾಳೆಗಳಿವೆ. ಇವನ್ನು ಗಮನಿಸುತ್ತಿರುವ ಗಾಜಿನ ಜೇನುಗೂಡಿನ ಆಚೀಚೆ ಇಡಲಾಗುವುದು. ಬ್ಯಾರೆಟ್‌ ಮತ್ತು ಟೆರ್ರಿ ಆಯ್ದ ಜೇನ್ನೊಣಗಳ ಬೆನ್ನಿಗೆ ಚುಂಬಕ ಉಕ್ಕಿನ ತುಣುಕುಗಳನ್ನು ಅಂಟಿಸಿದರು. ಇವನ್ನು ಪ್ರಾಯೋಗಿಕನೊಣಗಳು ಎಂದು ಕರೆದರು. ಇದೇ ರೀತಿಯಲ್ಲಿ ಇನ್ನೊಂದು ಜೇನ್ನೊಣಗಳ ಗುಂಪಿಗೆ ಅಯಸ್ಕಾಂತಗಳಿಗೆ ಸ್ಪಂದಿಸದ ತಾಮ್ರದ ತುಣುಕುಗಳನ್ನು ಅಂಟಿಸಿ ಅವನ್ನು ನಿಯಂತ್ರಕನೊಣ ಎಂದು ಕರೆದರು. ಅನಂತರ ಇಡೀ ರಾತ್ರಿ ನಿಮಿಷಕ್ಕೆ ಮೂರು ಬಾರಿಯಂತೆ ಅಯಸ್ಕಾಂತವಿರುವ ಗಾಜಿನ ಹಾಳೆಗಳನ್ನು ಗೂಡಿನ ಒಂದು ಬದಿಯಿಂದ ಇನ್ನೊಂದು ಬದಿಗೆ ಸರಿಸುತ್ತಿದ್ದರು. ಹೀಗೆ ಇಡೀ ರಾತ್ರಿ ಜೇನ್ನೊಣಗಳನ್ನು ತಟ್ಟಿ ಎಬ್ಬಿಸುತ್ತಿದ್ದುದರಿಂದ ಅವು ನಿದ್ರಿಸಲಾಗುತ್ತಿರಲಿಲ್ಲ. ಆದರೆ ನಿಯಂತ್ರಕ ನೊಣಗಳು ಯಾವುದೇ ತೊಂದರೆ ಇಲ್ಲದೆ ನಿದ್ರಿಸಬಹುದಿತ್ತು.

An observation bee hive fit with the magnetic insominator. Notice the plexiglass plates fitted with three columns of magnets on the left. These plates are moved from side to side to jostle test bees fitted with magnetic steel pieces but leave control bees fitted with non-magnetic copper pieces undisturbed. Photo: Barrett Klein

ನಿದ್ರೆಗೆಡುಕ ಸಾಧನ ಜೋಡಿಸಿದ ಜೇನಿನ ಗೂಡು. ಎಡಗಡೆಯಲ್ಲಿ ಮೂರು ಸಾಲು ಅಯಸ್ಕಾಂತಗಳನ್ನು ಜೋಡಿಸಿದ ಪ್ಲೆಕ್ಸಿ ಗ್ಲಾಸನ್ನು ಗಮನಿಸಿ. ಇವನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಸರಿಸುತ್ತಾ, ಚುಂಬಕ ಉಕ್ಕಿನ ತುಂಡನ್ನು ಅಂಟಿಸಿದ ಪ್ರಾಯೋಗಿಕ ನೊಣಗಳನ್ನು ಬಡಿದೆಬ್ಬಿಸಲಾಗುತ್ತದೆ. ಆದರೆ ತಾಮ್ರದ ತುಣುಕುಗಳನ್ನು ಅಂಟಿಸಿದ ನೊಣಗಳಗೆ ಯಾವ ತೊಂದರೆಯೂ ಆಗುವುದಿಲ್ಲ. ಚಿತ್ರ: ಬ್ಯಾರೆಟ್‌ ಕ್ಲೈನ್‌ 

ತೂಕಡಿಸುವ ನರ್ತಕಿಯರನ್ನು ನಂಬಬಹುದೇ? 

ನಿದ್ರೆಗೆಟ್ಟ ಜೇನ್ನೊಣ ಕುಣಿಯುವಾಗ ತಪ್ಪು ಮಾಹಿತಿಯನ್ನು ನೀಡಿದರೆ, ಉಳಿದ ಜೇನ್ನೊಣಗಳು ಏನು ಮಾಡಬಹುದು? ಅವು ಈ ದೋಷಗಳನ್ನು ಗುರುತಿಸುತ್ತವೆಯೇ? ಗುರುತಿಸಿ ಅಲಕ್ಷಿಸುತ್ತವೆಯೇ? ಅಥವಾ ಈ ತಪ್ಪು ಮಾಹಿತಿಯಿಂದ ಮೋಸ ಹೋಗಿ, ಮರೀಚಿಕೆಯ ಬೆನ್ನು ಹತ್ತುತ್ತವೆಯೋ?

ಈ ಪ್ರಯೋಗಗಳ ವೇಳೆಯಲ್ಲಿ ಅವು ಮೋಸ ಹೋಗುತ್ತವೆ ಎಂದು ನಾವು ನಿರೀಕ್ಷಿಸಬಹುದು. ಏಕೆಂದರೆ, ಜೇನುಗೂಡಿನಲ್ಲಿ ಸಹಜವಾಗಿಯೇ ನಿದ್ರೆಗೆಟ್ಟ ನೊಣಗಳು ಇರುವುದಿಲ್ಲ. ಈ ರೀತಿಯ ನಿರೀಕ್ಷೆಯನ್ನು ಇಟ್ಟುಕೊಳ್ಳುವುದಕ್ಕೆ ಸಮಜಾಯಿಷಿಯೂ ಇದೆ. ಇದಕ್ಕೂ ಹಿಂದಿನ ಪ್ರಯೋಗವೊಂದರಲ್ಲಿ ಬ್ಯಾರೆಟ್‌ ಮತ್ತು ಸಂಗಡಿಗರು ಪ್ರಾಯೋಗಿಕವಾಗಿ ನಿದ್ರೆಗೆಡಿಸಿದಾಗ ಜೇನ್ನೊಣಗಳು ಕಳೆದು ಹೋದ ನಿದ್ರೆಯನ್ನು ಸರಿಹೊಂದಿಸಿಕೊಂಡಿದ್ದುವು ಎಂದು ಗುರುತಿಸಿದ್ದರು. ನಿಜಕ್ಕೂ ವಿವೇಕಯುತವಾದ ನಡೆ ಅಲ್ಲವೇ?

ಬ್ಯಾರೆಟ್‌ ಬೇರೆ ಕೆಲವು ಸಹೋದ್ಯೋಗಿಗಳ ಜೊತೆಗೂಡಿ ಈ ಮೊದಲು ವಿವರಿಸಿದ ಪ್ರಯೋಗಗಳಲ್ಲಿ ನಡೆದ ನೃತ್ಯಗಳನ್ನು ಮರುಪರಿಶೀಲಿಸಿದ್ದಾರೆ. ಈ ಬಾರಿ ಇವರ ಗಮನ ನೃತ್ಯದ ಪ್ರೇಕ್ಷಕರ ಮೇಲಿತ್ತು. ಇವರು ಹದಿಮೂರು ನರ್ತಕಿ ನೊಣಗಳು ಮಾಡಿದ ಮೂವತ್ತೊಂಭತ್ತು ನೃತ್ಯಗಳನ್ನು ಜೇನ್ನೊಣಗಳು ಅನುಸರಿಸಿದ 615 ಘಟನೆಗಳನ್ನು ಗಮನಿಸಿದರು. ಜೇನ್ನೊಣಗಳು ಸಾಮಾನ್ಯವಾಗಿ ತಪ್ಪು ಕುಣಿತವನ್ನು ನಿರ್ಲಕ್ಷಿಸುತ್ತಿದ್ದುದನ್ನು ನೋಡಿದರು. ಒಂದೇ ಕೋನವನ್ನು ಸೂಚಿಸುವ ಹಲವಾರು ನೃತ್ಯಗಳನ್ನು ಗಮನಿಸಿದ ನಂತರವಷ್ಟೆ ಜೇನ್ನೊಣಗಳು ಆಹಾರದ ಮೂಲ ಹುಡುಕಿ ಹಾರುತ್ತಿದ್ದುವು. ನೃತ್ಯದಿಂದ ನೃತ್ಯಕ್ಕೆ ಕೋನದಲ್ಲಿ ಬದಲಾವಣೆ ಹೆಚ್ಚಿದ್ದಲ್ಲಿ, ಅವು ಆ ನೊಣದ ನೃತ್ಯವನ್ನು ಅಲಕ್ಷಿಸಿ, ಬೇರೆ, ನಿಖರವಾಗಿ ನರ್ತಿಸುತ್ತಿರುವ ನೊಣಗಳತ್ತ ಗಮನ ಹರಿಸುತ್ತಿದ್ದುವು.

ಹೀಗೆ ದೋಷಪೂರ್ಣ ನರ್ತನದ ಕಡೆಗೆ ಅವು ತೋರುವ ನಿರ್ಲಕ್ಷ್ಯವನ್ನೂ ಗಣಿಸಬಹುದು. ನೃತ್ಯದ ಸ್ಟಾಂಡರ್ಡ್‌ ಡೀವಿಯೇಶನ್ನು ಒಂದೊಂದು ಡಿಗ್ರೀ ಕೋನ ಹೆಚ್ಚಾದಾಗಲೂ, ವೀಕ್ಷಕರು ತಮ್ಮ ಶೇಕಡ ಆರರಷ್ಟು ಹೆಚ್ಚು ಕಾಲ ಬೇರೆ ನರ್ತಕಿಯರನ್ನು ಗಮನಿಸುತ್ತಿದ್ದುವು.

ಅಂದರೆ ಜೇನ್ನೊಣಗಳಲ್ಲಿ ಹೀಗೆ ಸುಳ್ಳು, ಅಥವಾ ವಿಶ್ವಾಸಾರ್ಹತೆಯನ್ನು ಪತ್ತೆ ಮಾಡುವ, ಸಹಜ ವಿದ್ಯಮಾನವೊಂದಿದೆ ಎನ್ನಬಹುದು. ವೀಕ್ಷಕರ ನಿದ್ರೆಯನ್ನೂ ಕೆಡಿಸಿದರೆ ಏನಾಗುತ್ತದೆ ಎನ್ನುವುದು ನಮಗೆ ಗೊತ್ತಿಲ್ಲ. ಬಹುಶಃ ನರ್ತಕಿಯರೂ, ವೀಕ್ಷಕರೂ ಒಟ್ಟೊಟ್ಟಾಗಿ ನಿದ್ರೆಗೆಡುವಂತಹ ಸಂದರ್ಭಗಳು ಬಹಳ ಕಡಿಮೆ ಇರಬಹುದು. ಅಂದ ಮಾತ್ರಕ್ಕೆ ತೂಕಡಿಸುವ ನರ್ತಕಿಯರನ್ನು ವೀಕ್ಷಕ ನೊಣಗಳು ಗಮನಿಸುವುದೇ ಇಲ್ಲ ಎಂದಲ್ಲ. ಇವುಗಳ ನೃತ್ಯದಲ್ಲಿಯೂ ಆಸಕ್ತಿ ತೋರಿಸುವ ಜೇನ್ನೊಣಗಳ ಸಂಖ್ಯೆ ಸಾಮಾನ್ಯ ನರ್ತಕಿಯರ ನೃತ್ಯದಲ್ಲಿ ಆಸಕ್ತಿ ತೋರುವ ಜೇನ್ನೊಣಗಳಷ್ಟೆ ಇರುತ್ತದೆ. ಆದರೆ ಪ್ರತಿಯೊಂದು ಜೇನ್ನೊಣವೂ ಈ ನಿದ್ರಾನರ್ತಕಿಯರತ್ತ ನೋಡುವ ಸಮಯ ಕಡಿಮೆ ಇರುತ್ತದೆ ಅಷ್ಟೆ.

ನರ್ತಕಿಯರು ತಪ್ಪು ಹೆಜ್ಜೆ ಇಟ್ಟವೋ ಇಲ್ಲವೋ, ಅವುಗಳು ನಿದ್ರೆಗೆಟ್ಟಿವೆ ಎನ್ನುವುದನ್ನು ವೀಕ್ಷಕರು ಅದು ಹೇಗೋ ಪತ್ತೆ ಮಾಡಿರಬಹುದಲ್ಲ ಎನ್ನುವ ಪ್ರಶ್ನೆಯೂ ಬರುತ್ತದೆ. ಈ ಸಾಮರ್ಥ್ಯ ಇದ್ದಾಗ, ತೂಕಡಿಸುತ್ತಾ ಕುಣಿಯುವ ನರ್ತಕಿಯರ ಮಾತನ್ನು ಈ ಕಿವಿಯಿಂದ ಕೇಳಿ ಆ ಕಿವಿಯಿಂದ ಬಿಡುವಂತೆ ಮಾಡುತ್ತಿರಬಹುದು.

ಬೇರೆ ಪ್ರಾಣಿಗಳ ಭಾಷೆ ಹಾಗೂ ಬುದ್ಧಿವಂತಿಕೆಯ ಜಟಿಲತೆಯನ್ನು ನಾವೂ ಈಗೀಗಷ್ಟೆ ಅರ್ಥ ಮಾಡಿಕೊಳ್ಳಲು ಆರಂಭಿಸಿದ್ದೇವೆ. ಈ ಹೊಸ, ಹೊಸ ಅರಿವು ನಮ್ಮನ್ನು ಚಕಿತಗೊಳಿಸುತ್ತಲೇ ಇವೆ. ವಿಕಾಸದ ವಂಶವೃಕ್ಷದಲ್ಲಿ ತಳಸ್ತರದಲ್ಲಿರುವ ಜೀವಿಗಳ ಬದುಕು ಬಹಳ ಸರಳ ಎಂದು ಬಹುತೇಕ ವಿಜ್ಞಾನಿಗಳು ಹಾಗೂ ಸಾಮಾನ್ಯರು ತಿಳಿದಕೊಂಡಿರುವಂತೆಯೇ ನಾವೂ ಮಾಡಿದರೆ, ಬಹಳಷ್ಟು ಅರಿವನ್ನು ಪಡೆಯುವ ಹಾಗೂ ಸಂಭ್ರಮಿಸುವ ಅವಕಾಶಗಳನ್ನು ಕಳೆದುಕೊಂಡಂತೆಯೇ ಸರಿ.

ಜೇನ್ನೊಣಗಳು ತೂಕಡಿಸುತ್ತವೆಯೇ?

ಪ್ರಯೋಗಗಳಲ್ಲಿ ನಿದ್ರೆಯನ್ನು ಕೆಡಿಸಿದ ಜೇನ್ನೊಣಗಳು ಅವಕಾಶ ಸಿಕ್ಕಾಗಲೆಲ್ಲ ಹೆಚ್ಚೆಚ್ಚು ಗಾಢವಾಗಿ ನಿದ್ರಿಸಿ ತಾವು ಕಳೆದುಕೊಂಡ ನಿದ್ರೆಯನ್ನು ಸರಿಹೊಂದಿಸಿಕೊಳ್ಳುತ್ತವೆ ಎಂಬುದನ್ನು ಗಮನಿಸಿದ್ದೇವೆ. ನೃತ್ಯವನ್ನು ವೀಕ್ಷಿಸುವ ಜೇನ್ನೊಣಗಳೂ ನಿದ್ರೆಗೆಟ್ಟ ನರ್ತಕಿಯರ ನೃತ್ಯಕ್ಕೆ ವಿಭಿನ್ನವಾದ ಸೂಕ್ಷ್ಮ ಪ್ರತಿಕ್ರಿಯೆಗಳನ್ನು ತೋರುತ್ತವೆ ಎನ್ನುವುದನ್ನೂ ನೋಡಿದ್ದೇವೆ. ಅಂದರೆ ಹೀಗೆ ಪ್ರಾಯೋಗಿಕವಾಗಿ ಜೇನ್ನೊಣಗಳ ನಿದ್ರೆಗೆಡಿಸುವುದು ಅಷ್ಟೇನೂ ಅಸಹಜ ವಿದ್ಯಮಾನವಲ್ಲ. ವಾಸ್ತವದಲ್ಲಿ ನಿದ್ರೆಯೂ, ನಿದ್ರೆಗೆಡುವುದೂ ಜೇನ್ನೊಣಗಳ ಬದುಕಿನಲ್ಲಿ ಹಾಸು ಹೊಕ್ಕಾಗಿದ್ದು, ಅವುಗಳ ಅಳಿವು-ಉಳಿವಿನ ಉಪಾಯಗಳ ಪಟ್ಟಿಗೆ ಸೇರುತ್ತವೆ. ಅದೇನೇ ಇರಲಿ, ಸಹಜವಾಗಿಯೇ ನಿದ್ರಿಸುವ ಜೇನ್ನೊಣಗಳ ಬಗ್ಗೆ ಹಾಗೂ ಹಾಗೆಯೇ ನಿದ್ರೆಗೆಟ್ಟವುಗಳ ಬಗ್ಗೆ ತಿಳಿಯುವುದು ಚೆನ್ನ.

ಇಂತಹ ಒಂದು ಪ್ರಯೋಗದಲ್ಲಿ ಬ್ಯಾರೆಟ್‌ ಕ್ಲೈನ್‌ ಮತ್ತು ಥಾಮಸ್‌ ಸೀಲಿ ಜೇನ್ನೊಣಗಳನ್ನು ಮುಂಜಾನೆಯ ಹೊತ್ತು ಇಲ್ಲವೇ ಮುಸ್ಸಂಜೆಯ ವೇಳೆ ಕೆಲಸ ಮಾಡಲು ಹಚ್ಚಿದರು. ಉಳಿದ ಸಮಯದಲ್ಲಿ ಅವು ತೂಕಡಿಸಿ ಕಳೆದುಕೊಂಡ ನಿದ್ರೆಯನ್ನು ಸರಿಹೊಂದಿಸಿಕೊಂಡವೇ ಎಂದು ಪರೀಕ್ಷಿಸಿದರು.

The Cranberry Lake Biological Station in the Adirondack Biological State Park, New York where Barrett conducted many of his experiments. This happens to be a favourite spot for Barret’s mentor and collaborator, Thomas Seeley, because it contains very few flowers that bees can use; experimental bees are therefore easy to train to come to artificial feeding stations set up by the researchers. Inset: A typical inverted glass bottle from which bees are trained to take sugar solution, return to the hive, dance to advertise its location and recruit more bees to visit. Photos: Barrett Klein

ಬ್ಯಾರೆಟ್‌ ಪ್ರಯೋಗಗಳನ್ನು ನಡೆಸಿದ ನ್ಯೂಯಾರ್ಕಿನ ಅಡಿರಾನ್‌ ಡಾಕ್‌ ಜೈವಿಕ ಉದ್ಯಾನದಲ್ಲಿ ಇರುವ ದಿ ಕ್ರಾನ್ಬರಿ ಲೇಕ್‌ ಜೈವಿಕ ಕೇಂದ್ರದ ಒಂದು ನೋಟ. ಇದು ಬ್ಯಾರೆಟ್ಟರ ಮಾರ್ಗದರ್ಶಕ ಮತ್ತು ಸಹೋದ್ಯೋಗಿ ಥಾಮಸ್‌ ಸೀಲೀಯ ಮೆಚ್ಚಿನ ತಾಣ. ಏಕೆಂದರೆ ಇಲ್ಲಿ ಜೇನ್ನೊಣಗಳಿಗೆ ಪ್ರಿಯವಾದ ಹೂಗಳ ಸಂಖ್ಯೆ ಕಡಿಮೆ. ಹೀಗಾಗಿ ಸಂಶೋಧಕರೇ ಕೃತಕವಾಗಿ ನಿರ್ಮಿಸಿದ ಕೆಲವು ಆಹಾರದಾಣಗಳನ್ನು ಹುಡುಕಿ ಹೋಗುವಂತೆ ಜೇನ್ನೊಣಗಳಿಗೆ ತರಬೇತಿ ನೀಡುವುದು ಸುಲಭ. ಒಳಚಿತ್ರ: ತಲೆಕೆಳಗಾಗಿಟ್ಟ ಗಾಜಿನ ಬಾಟಲಿ. ಇದರೊಳಗಿರುವ ಸಕ್ಕರೆಯ ಪಾಕವನ್ನು ಹೀರಿ, ಗೂಡಿಗೆ ಮರಳುವಂತೆ ಜೇನ್ನೊಣಗಳಿಗೆ ತರಬೇತಿ ನೀಡಿರುತ್ತಾರೆ. ಅವು ಗೂಡಿಗೆ ಮರಳಿ ನಾಟ್ಯವಾಡಿ, ಹೆಚ್ಚೆಚ್ಚು ದುಂಬಿಗಳು ಇಲ್ಲಿಗೆ ಮರಳುವಂತೆ ಮಾಡುತ್ತವೆ. ಚಿತ್ರಗಳು: ಬ್ಯಾರೆಟ್‌ ಕ್ಲೈನ್

ಕೆಲವು ದುಂಬಿಗಳಿಗೆ ಬೆಳಗ್ಗೆ ಆರು ಗಂಟೆಯಿಂದ ಒಂಭತ್ತು ಗಂಟೆಯವರೆಗೆ ಮಾತ್ರ ಆಹಾರ ಹುಡುಕುವಂತೆಯೂ, ಇನ್ನು ಕೆಲವಕ್ಕೆ ಸಂಜೆ ನಾಲ್ಕು ಗಂಟೆಯಿಂದ ಏಳು ಗಂಟೆಯವರೆಗಷ್ಟೆ ಆಹಾರ ಹುಡಕುವುದಕ್ಕೂ ತರಬೇತಿ ನೀಡಿದರು. ಈ ಎರಡೂ ಗುಂಪಿನ ದುಂಬಿಗಳ ಒಟ್ಟಾರೆ ನಿದ್ರೆಯ ಸಮಯದಲ್ಲಿ ವ್ಯತ್ಯಾಸವೇನೂ ಆಗಲಿಲ್ಲವಾದರೂ, ಬೆಳಗ್ಗೆ ಕೆಲಸ ಮಾಡುವ ದುಂಬಿಗಳು ಹಾಗೂ ಸಂಜೆ ಕೆಲಸ ಮಾಡಿದ ದುಂಬಿಗಳು ನಿದ್ರಿಸುತ್ತಿದ್ದ ವೇಳೆಗಳು ಭಿನ್ನವಾಗಿದ್ದುವು.

ಬೆಳಗ್ಗೆ ಕೆಲಸ ಮಾಡಿದ ದುಂಬಿಗಳು ಮಧ್ಯಾಹ್ನ ನಿದ್ರಿಸಿದುವು. ಅದೇ ಸಂಜೆ ಕೆಲಸ ಮಾಡಿದ ದುಂಬಿಗಳು ಬೆಳಗ್ಗಿನ ಹೊತ್ತು ಹೆಚ್ಚು ನಿದ್ರಿಸಿದುವು. ಕಳೆದುಕೊಂಡ ನಿದ್ರೆಯನ್ನು ಸರಿಹೊಂದಿಸಿಕೊಳ್ಳಲು ಅವಕಾಶ ಸಿಕ್ಕಾಗಲೆಲ್ಲ ನಿದ್ರಿಸುವುದು ನಮಗೆ ಹೇಗೆಯೋ, ಹಾಗೆಯೇ ದುಂಬಿಗಳ ಒಳಿತಿಗೂ ಅವಶ್ಯಕವೇ.

ಬ್ಯಾರೆಟ್‌ ಹೀಗೆ ಕಳೆದ ಎರಡು ದಶಕಗಳಿಂದಲೂ ನಿದ್ರಿಸುವ ಜೇನ್ನೊಣಗಳ ಬೆನ್ನು ಹತ್ತಿದ್ದಾನೆ. ಬೇರೆ, ಬೇರೆ ಖಂಡಗಳಲ್ಲಿ ಇರುವ ಸಹೋದ್ಯೋಗಿಗಳು, ಮಿತ್ರರು ಹಾಗೂ ಕುಟುಂಬದವರ ಜೊತೆಗೂಡಿ ಅಧ್ಯಯನ ಮಾಡಿದ್ದಾನೆ. ಜೇನ್ನೊಣಗಳಲ್ಲಿರುವ ದಾಯಿ, ಕೋಣೆಯನ್ನು ಶುಚಿಗೊಳಿಸುವ ದುಂಬಿಗಳು, ಆಹಾರ ಸಂಗ್ರಾಹಕರು, ಆಹಾರಾನ್ವೇಷಕರು ಮುಂತಾಗಿ ಎಲ್ಲ ವರ್ಗಗಳ ದುಂಬಿಗಳೂ ನಿದ್ರಿಸುತ್ತವೆ ಎಂದು ತೋರಿಸಿದ್ದಾರೆ. ಮರಿದುಂಬಿಗಳು ಹೆಚ್ಚು ಕಾಲ ನಿದ್ರಿಸುತ್ತವೆ, ತಮ್ಮ ಕೋಣೆಗಳ ಒಳಗೆ. ಮುದಿ ದುಂಬಿಗಳು ಕಡಿಮೆ ನಿದ್ರಿಸುತ್ತವೆ, ಅದುವೂ ಗೂಡಿನ ಹೊರಭಾಗದಲ್ಲಿ, ಇನ್ನೇನು ಕೆಳಗೆ ಬೀಳುವ ಹಾಗೆ ನಿದ್ರಿಸುತ್ತವೆ.

ಜೇನ್ನೊಣಗಳಲ್ಲಿ ನಿದ್ರೆಯ ಮಹತ್ವದ ಬಗ್ಗೆ ಬ್ಯಾರೆಟ್‌ ಇನ್ನಷ್ಟು, ಮತ್ತಷ್ಟು ಪುರಾವೆಗಳನ್ನು ಒದಗಿಸಿದ್ದಾನೆ. ಜೊತೆಗೆ ಡಾಕ್ಟರೇಟನ್ನು ಮಾಡಿದ್ದಾನೆ. ಈತ ತನ್ನ ಸ್ನಾತಕೋತ್ತರ ಪದವಿಯ ಅಧ್ಯಯನಕ್ಕಾಗಿ ನನ್ನ ಮೆಚ್ಚಿನ ಜೀವಿ ಪೇಪರ್‌ ಕಣಜದ ನಿದ್ರೆಯ ಬಗ್ಗೆಯೂ ಅಧ್ಯಯನ ಮಾಡಿದ್ದ ಎನ್ನುವುದನ್ನು ನಾನು ಇಲ್ಲಿ ಹೇಳಲೇಬೇಕು. ಜರ್ಮನಿಯ ವುರ್ಜ್ಬರ್ಗ್‌ ವಿಶ್ವವಿದ್ಯಾನಿಲಯದ ಯೆರ್ಗೆನ್‌ ಟೌಟ್ಸ್‌ ಜೊತೆಗೆ ಕೈ ಜೋಡಿಸಿ, ಜೇನ್ನೊಣಗಳಿಗೆ ಒಂದಿಷ್ಟೂ ತೊಂದರೆ ಆಗದಂತೆ ಅವುಗಳ ನಿದ್ರೆಯನ್ನು ಅಧ್ಯಯನ ಮಾಡಲು ಅವಕೆಂಪುಕಿರಣದ ಫೋಟೋಗ್ರಫಿ ತಂತ್ರ ವನ್ನೂ ರಚಿಸಿದ್ದಾರೆ.

ಅದಿರಲಿ. ಈಗ ಇನ್ನೂ ಮೂಲಭೂತವಾದ ಕೆಲವು ಪ್ರಶ್ನೆಗಳನ್ನು ಗಮನಿಸೋಣ.

ಪ್ರಾಣಿಗಳದ್ದೂ, ಜೇನ್ನೊಣಗಳದ್ದು ನಿಜವಾದ ನಿದ್ರೆಯೇ?

ನಿದ್ರೆಯ ಬಗ್ಗೆ ಅವರ ವಿವರಣೆ ಹಾಗೂ ಅಧ್ಯಯನ ಎಷ್ಟು ಗಟ್ಟಿ ಎನ್ನುವುದನ್ನು ಮರೆತು ಜ್ಯೂರಿಕ್‌ ವಿಶ್ವವಿದ್ಯಾನಿಲಯದ ಸ್ಕಾಟ್‌ ಕ್ಯಾಂಪ್‌ಬೆಲ್‌ ಮತ್ತು ಐರೀನ್‌ ಟಾಬ್ಲರ್‌ 1984ರಲ್ಲಿ ಕೈಗೊಂಡಿದ್ದ ನಿದ್ರೆಯ ಕುರಿತಾದ ಸಾಹಿತ್ಯ ವಿಶ್ಲೇಷಣೆಯನ್ನು ಗಮನಿಸೋಣ. ಇವು ನಿದ್ರೆ ಎನ್ನುವ ವಿದ್ಯಮಾನವನ್ನು ಸುಮಾರು ನೂರೈವತ್ತು ಜೀವಿಪ್ರಭೇದಗಳು ತೋರುತ್ತವೆಂದು ಗುರುತಿಸಿದ್ದರು. ಇವುಗಳಲ್ಲಿ ಹಲವು ಅಕಶೇರುಕಗಳೂ, ಮೀನು, ಕಪ್ಪೆಗಳು, ಉರಗಗಳು, ಪಕ್ಷಿಗಳು ಮತ್ತು ಸ್ತನಿಗಳನ್ನೊಳಗೊಂಡಂತೆ ಎಲ್ಲ ಕಶೇರುಕ ವರ್ಗಗಳೂ ಒಂದಲ್ಲ ಒಂದು ರೀತಿಯ ನಿದ್ರೆಯನ್ನು ತೋರುತ್ತವೆ ಎಂದಿದ್ದರು.

ವಿಪರ್ಯಾಸವೆಂದುಕೊಂಡರೂ ಕೂಡ ಸಾಹಿತ್ಯಾಧ್ಯಯನಗಳ ಬಗ್ಗೆ ಇಂತಹ ಉದಾರ ಮನೋಭಾವ ಇನ್ನೂ ಹೊಸದಾಗಿರುವ ಕ್ಷೇತ್ರಗಳಲ್ಲಿ ಸಂಶೋಧನೆಗೆ ಅನುಕೂಲವೇ ಆಗುತ್ತದೆ. ಇದು ಅಪಕ್ವ ತೀರ್ಮಾನಗಳು ಹಾಗೂ ತೋರಿಕೆಯ ಸತ್ಯಾಂಶಗಳಿಂದ ನಮ್ಮನ್ನು ರಕ್ಷಿಸುತ್ತದೆ. ಹೀಗೆ ಇವರು ಆಯ್ದ ನೂರ ಐವತ್ತು ಪ್ರಭೇದಗಳು ನಿದ್ರೆಯ ಸಂಶೋಧನೆಯನ್ನು ಮುಂದುವರೆಸಲು ಬೇಕಾದ ಪ್ರಯೋಗಪಶುಗಳ ನಿಧಿಯೇ ಸರಿ. ಇತ್ತೀಚೆಗೆ ಇನ್ನೂ ಕೆಲವರು ಹೊಸದಾದ ಹಾಗೂ ಕೆಲವು ಖಚಿತವಾಗಿ ನಿದ್ರೆ ಮಾಡುವ ಪ್ರಭೇದಗಳನ್ನೂ ಈ ಪಟ್ಟಿಗೆ ಸೇರಿಸಿದ್ದಾರೆ.

ಉದಾಹರಣೆಗೆ, ಕ್ಯಾಂಪ್‌ ಬೆಲ್-ಟಾಬ್ಲರರ ಸರ್ವೆಯಲ್ಲಿ ಕೇವಲ ಜಿರಲೆ ಹಾಗೂ ಜೇನ್ನೊಣಗಳಷ್ಟೆ ನಿದ್ರಿಸುವ ಕೀಟಗಳೆಂದು ಸೇರ್ಪಡೆಯಾಗಿದ್ದುವು. ಅನಂತರ ಕಣಜಗಳು, ಹಣ್ಣುನೊಣಗಳನ್ನೂ ನಿದ್ರಿಸುವ ಕೀಟಗಳ ಪಟ್ಟಿಗೆ ಸೇರಿಸಲಾಗಿದೆ.

ನರಮಂಡಲದಲ್ಲಿ ನಿದ್ರೆಯ ಸೂಚಕಗಳಾಗಿ ತೋರುವ ಬದಲಾವಣೆಗಳನ್ನು ಹಾಗೂ ನಿದ್ರೆಯ ವೇಳೆ ನಮ್ಮ ಮಿದುಳಿನಲ್ಲೇನಾಗುತ್ತದೆ ಎನ್ನುವುದರ ಮೂಲಕ ನಿದ್ರೆಯನ್ನು ವಿವರಿಸುವುದಕ್ಕೆ ನಾವು ಮನುಷ್ಯರು ಹೊಂದಿಕೊಂಡು ಬಿಟ್ಟಿದ್ದೇವೆ. ಎಷ್ಟೆಂದರೆ, ನರಮಂಡದಲ್ಲಿ ಆಗುವ ವ್ಯತ್ಯಾಸಗಳನ್ನು ಬಳಸಿಕೊಂಡು ಗಾಢ ನಿದ್ರೆ, ಹಗುರ ಅಥವಾ ಲಘು ನಿದ್ರೆ, ಆರ್‌ಇಎಂ ನಿದ್ರೆ ಇತ್ಯಾದಿ ವಿವಿಧ ನಿದ್ರಾಸ್ಥಿತಿಗಳನ್ನು ವಿವರಿಸುವ ಆತುರದಲ್ಲಿ ನಿದ್ರೆ ಎನ್ನುವುದು ಒಂದು ನಡವಳಿಕೆ ಎನ್ನುವುದನ್ನು ಮರೆತುಬಿಡುತ್ತೇವೆ. ಹೀಗಾಗಿ ನಿದ್ರೆಯ ಅಧ್ಯಯನವೂ ನಡವಳಿಕೆವಿಜ್ಞಾನವೇ. ನರಮಂಡಲದಲ್ಲಿ ಆಗುವ ಬದಲಾವಣೆಗಳನ್ನು ತಿಳಿಯುವುದಕ್ಕೂ ಹಿಂದೆಯೂ ಜನ ನಿದ್ರೆ ಮಾಡುತ್ತಿದ್ದರು, ನಿದ್ರಿಸಿದವರನ್ನು ಗುರುತಿಸುತ್ತಿದ್ದರು ಹಾಗೂ ಇವೆರಡರ ಅವಧಿಯನ್ನೂ ಲೆಕ್ಕ ಹಾಕುತ್ತಿದ್ದರು. ನಾವೀಗ ಬಳಸುವ ಸುಸಜ್ಜಿತ ನರಮಂಡಲದ ಸೂಚ್ಯಂಕಗಳನ್ನೂ ಆರಂಭದಲ್ಲಿ ನಿದ್ರೆಯ ನಡವಳಿಕೆಗಳಿಗೆ ಅನುಗುಣವಾಗಿಯೇ ಅಳೆಯಲಾಗುತ್ತಿತ್ತು. ಈಗಷ್ಟೆ ಅವು ಪ್ರತ್ಯೇಕ ಸೂಚ್ಯಂಕಗಳೆನ್ನಿಸಿವೆ.

ಆದ್ದರಿಂದ, ಪ್ರಾಣಿಗಳಲ್ಲಿ ನಿದ್ರೆ ಎಂದರೇನೆಂಬುದನ್ನು ನಡವಳಿಕೆಯ ಅಧಾರದ ಮೇಲೆ ವಿವರಿಸುವುದು ಯುಕ್ತ ಎನ್ನಿಸುತ್ತದೆ. ನಿದ್ರೆಯನ್ನು ದೇಹದ ಕೆಲವು ಭಂಗಿಗಳ ಮೂಲಕ ಖಚಿತವಾಗಿ ಗುರುತಿಸಬಹುದು. ಸಾಮಾನ್ಯಕ್ಕಿಂತ ಕಡಿಮೆ ಚಲನೆ ಹಾಗೂ ಹೊರಗಿನ ಪ್ರಚೋದನೆಗಳಿಗೆ ಪ್ರತಿಕ್ರಯಿಸುವ ಮಿತಿ ಹೆಚ್ಚಿರುವುದು ಇಂಥವು. ಇಂತಹ ಸ್ಥಿತಿಯಲ್ಲಿ ಇರುವುದರಿಂದಲೂ ಏನಾದರೂ ಲಾಭವಿದೆಯೆಂದಾದರೆ, ಜೀವಿಗಳು ಈ ಸ್ಥಿತಿಗೆ ಆಗಾಗ್ಗೆ ಮರಳುತ್ತವೆಂದು ತರ್ಕಿಸಬಹುದು. ಈ ಸ್ಥಿತಿಯಿಂದ ಅವನ್ನು ಕದಲಿಸಿದರೂ, ಅವು ಅದೇ ಸ್ಥಿತಿಗೆ ಮರಳಿ, ಅಗತ್ಯವಾದಷ್ಟು ಹೊತ್ತು ಇರುತ್ತವೆಂದು ನಿರೀಕ್ಷಿಸಬಹುದು. ನಿದ್ರಾಹೀನತೆಯನ್ನು ಸರಿಹೊಂದಿಸಿಕೊಳ್ಳುವ ಸಾಮರ್ಥ್ಯ ಅಥವಾ “ಮರಳಿದ ನಿದ್ರೆ” ಎನ್ನುವ ಅಂಶಗಳನ್ನೂ ಕೂಡಿಸಿದರೆ, ನಿದ್ರೆ ಎನ್ನುವುದರ ನಿಖರವಾದ ವರ್ಣನೆ, ಅದನ್ನು ಪತ್ತೆ ಮಾಡುವ ಹಾಗೂ ಅದರ ಅವಧಿಯನ್ನು ಅಳೆಯುವ ಉಪಾಯಗಳು ಸಿಗುತ್ತವೆ.

ಕೀಟಗಳಲ್ಲಿ ನಿದ್ರೆಯ ಅಧ್ಯಯನಗಳು ಸ್ಲೀಪ್‌ ಆಫ್‌ ಇನ್ಸೆಕ್ಟ್ಸ್‌: ಎನ್‌ ಇಕಾಲಾಜಿಕಲ್‌ ಸ್ಟಡಿ ಅಂದರೆ ಕೀಟಗಳಲ್ಲಿ ನಿದ್ರೆ: ಪಾರಿಸಾರಿಕ ಅಧ್ಯಯನ ಎನ್ನುವ ಒಂದು ಪ್ರಬಂಧದಿಂದ ತೊಡಗಿತೆನ್ನಬೇಕು. ಮಿಸೌರಿಯ ಬಳಿ ಇರುವ ಸೈಂಟ್‌ ಲೂಯಿ ಪಟ್ಟಣದಲ್ಲಿ, ದಿನಸಿ ಅಂಗಡಿಯನ್ನೂ, ರಿಯಲ್‌ ಎಸ್ಟೇಟ್‌ ಉದ್ಯಮವನ್ನೂ ಮಾಡಿಕೊಂಡು ಇದ್ದ, ಹವ್ಯಾಸಿ ಅಮೆರಿಕನ್‌ ಪ್ರಕೃತಿವಿಜ್ಞಾನಿ ದಂಪತಿಗಳಾದ ಫಿಲ್‌ ಮತ್ತು ನೆಲ್ಲೀ ರಾವ್‌ ಇದನ್ನು ಬರೆದಿದ್ದರು. ತಮ್ಮ ಸಂಶೋಧನೆಗಳಿಗೆ ತಾವೇ ವೆಚ್ಚ ಮಾಡುತ್ತಿದ್ದರಲ್ಲದೆ, 1928ರಲ್ಲಿ ಕಣಜಗಳ ಕ್ಷೇತ್ರ ಅಧ್ಯಯನ, ಮತ್ತು 1933ರಲ್ಲಿ ಬ್ಯಾರೋ ಕೊಲೊರಡೋ ದ್ವೀಪದ ಕಾಡುಜೇನು ಹಾಗೂ ಕಾಡುಕಣಜಗಳು ಎನ್ನುವ ಪುಸ್ತಕಗಳನ್ನೂ ಬರೆದಿದ್ದರು.

Phil and Nellie Rau, 1929 photo by St. Louis Globe-Democrat, scanned from an original from Nellie Rau. Reproduced with permission, courtesy Mary Jane West-Eberhard

ಫಿಲ್‌ ಮತ್ತು ನೆಲ್ಲೀ ರಾವ್, 1929  ಚಿತ್ರ :‌ ಸೈಂಟ್‌ ಲೂಯಿ ಗ್ಲೋಬ್‌ ಡೆಮೋಕ್ರಾಟ್‌ ಪತ್ರಿಕೆಯಿಂದ ನೆಲ್ಲೀ ರಾವ್‌ ನಕಲಿಸಿದ್ದು. ಮೇರೀ ಜೇನ್‌ ವೆಸ್ಟ್‌-ಎಬರ್ಹಾರ್ಡ್‌ ರವರ ಅನುಮತಿ ಪಡೆದು ಪುನರ್ಮುದ್ರಿಸಲಾಗಿದೆ

ಈ ಸ್ವಾರಸ್ಯಕರ ವಾಕ್ಯದಿಂದ ರಾವ್‌ ದಂಪತಿಗಳ ಪುಸ್ತಕ ಆರಂಭವಾಗುತ್ತದೆ.:

“ಚಲಿಸುವ ಯಾವುದೇ ವಸ್ತುವೂ ಸಣ್ಣ, ಹಿರಿಯ ಮಕ್ಕಳನ್ನು ಆಕರ್ಷಿಸುತ್ತದೆ. ಹೂವಿನಿಂದ ಹೂವಿಗೆ ಹಾರುವ ಚಿಟ್ಟೆ, ಧೂಳು ಮುಸುಕಿದ ರಸ್ತೆಯಲ್ಲಿ ನೆಗೆಯುವ ಮಿಡತೆ, ಹೂವಿನೊಳಗೆ ತಡಕಾಡುತ್ತಿರುವ ದುಂಬಿ ಎಲ್ಲವೂ ಆಸಕ್ತಿಯನ್ನುಂಟು ಮಾಡುವಂಥವೇ. ಆದರೆ ಪ್ರಕೃತಿ ವಿಜ್ಞಾನಿಗಳು, ಕೀಟಗಳು ಓಡಾಡುವುದನ್ನು ನಿಲ್ಲಿಸಿದರೆ ಥೇಟ್‌ ಮಕ್ಕಳಂತೆಯೇ ಸುಮ್ಮನಾಗಿಬಿಡುತ್ತಾರೆ. ಹೀಗಾಗಿ ಕೀಟಗಳು ಎಲ್ಲಿ, ಹೇಗೆ, ಯಾವಾಗ ನಿದ್ರಿಸುತ್ತವೆ ಎನ್ನುವ ಕುತೂಹಲಕರವಾದ ಪ್ರಶ್ನೆಯನ್ನು ಹೆಚ್ಚೂ, ಕಡಿಮೆ ನಿರ್ಲಕ್ಷಿಸಲಾಗಿದೆ.”

ಅವರ ಪ್ರಬಂಧದ ಉಳಿದ ಭಾಗವೆಲ್ಲವೂ ದುಂಬಿಗಳು, ನಿದ್ರಿಸುತ್ತಿರುವ ಪತಂಗಗಳು ಹಾಗೂ ಇತರೆ ಕೀಟಗಳ ದಿನಚರಿ. ಪ್ರಕೃತಿ ವಿಜ್ಞಾನಿಗಳಿಗೆ ಪ್ರೇರಣೆ ನೀಡುವಂತಹ ಆತ್ಮ ಕಥನದ ರೂಪದಲ್ಲಿ ಬರೆದಿದೆ. ಈಗ ನಾವು ಮರೆತಿರುವ ಈ ಶೈಲಿಯ ಬರೆಹಗಳು ವಿಜ್ಞಾನದ ಕ್ರಿಯೆಯನ್ನು ಅದರ ಫಲದಿಂದ ಬೇರ್ಪಡಿಸಿ ವಿವರಿಸುವುದಿಲ್ಲ.

ಈಗ 2021ಕ್ಕೆ ಬರೋಣ. ಡ್ರೊಸೊಫೀಲಾ ಮೆಲನೋಗ್ಯಾಸ್ಟರ್‌ ಎನ್ನುವ ಹಣ್ಣುನೊಣದ ನಿದ್ರೆಯ ಸಂಶೋಧನೆ ಗುಡ್ಡದೆತ್ತರವಾಗಿರುವುದನ್ನು ಕಾಣುತ್ತೇವೆ. ನಿದ್ರೆ ಎನ್ನುವ ವಿದ್ಯಮಾನದ ನರಮಂಡಲದ ಚಟುವಟಿಕೆಗಳು, ತಳಿಗುಣ ಹಾಗೂ ಅಣುಸ್ತರದಲ್ಲಿ ನಿದ್ರೆಯ ನಿಯಂತ್ರಣವೇ ಮೊದಲಾದವುಗಳನ್ನು ಪತ್ತೆ ಮಾಡಲಾಗಿದೆ. ಹಾಗಿದ್ದೂ 1916ನೇ ಇಸವಿಯಲ್ಲಿ ಫಿಲ್‌ ಮತ್ತು ನೆಲ್ಲೀ ರಾವ್‌ ನೀಡಿದಷ್ಟು ಗಮನದ ಅಲ್ಪ ಭಾಗವನ್ನು ಅವರು ಅಧ್ಯಯನ ಮಾಡಿದ ಕೀಟಗಳ ಸಂಖ್ಯೆಯ ಭಾಗಾಂಶದಷ್ಟು ಕೀಟಗಳಿಗೂ ನಾವು ನೀಡಿಲ್ಲವೆನ್ನಬೇಕು.

ದುಬಾರಿ ವೆಚ್ಚದ, ಸುಸಜ್ಜಿತ ಸಲಕರಣೆಗಳನ್ನು ಬಳಸಿ, ತಂತ್ರಜ್ಞಾನವೇ ಆಧಾರವಾಗಿರುವಂತಹ ಅಧ್ಯಯನಗಳನ್ನು ಹೆಚ್ಚೆಚ್ಚು ಸಂಭ್ರಮದಿಂದ ನಡೆಸುತ್ತಿರುವ ಸಂದರ್ಭದಲ್ಲಿಯೇ, ಸರಳವಾದ, ಅಗ್ಗದ, ನಿಸರ್ಗ ವೀಕ್ಷಣೆಯಿಂದ ಮಾಡಬಹುದಾದ ಸಂಶೋಧನೆಗಳು ಬಲು ವಿರಳ ಹಾಗೂ ಆಗೊಮ್ಮೆ, ಈಗೊಮ್ಮೆ ಎನ್ನುವಂತಿರುವುದು ನವೀನ ಜೀವಿವಿಜ್ಞಾನದಲ್ಲಿನ ವಿಪರ್ಯಾಸ ಎನ್ನಬೇಕಷ್ಟೆ. ಹಾಗಿದ್ದೂ ನಾವು ಸಂಶೋಧನೆಗೆ ಹಣವಿಲ್ಲವೆಂದೂ, ಸುಸಜ್ಜಿತ ಸವಲತ್ತುಗಳು ಇಲ್ಲದಿರುವುದರಿಂದ ಹಲವು ಸಂಸ್ಥೆಗಳು ಹಾಗೂ ವ್ಯಕ್ತಿಗಳು ಅರಿವಿನ ಕೃಷಿ ಮಾಡಲಾಗುತ್ತಿಲ್ಲ ಎಂದೂ ದೂರುತ್ತೇವೆ.

ಫಿಲ್‌ ಮತ್ತು ನೆಲ್ಲೀ ರಾವ್‌ ರವರು ಮಾಡಿದಂತೆ ನಮ್ಮೂರಿನ ಸಾವಿರಾರು ಕೀಟಗಳ ನಿದ್ರೆಯ ಬಗ್ಗೆಯೂ ಅಧ್ಯಯನ ಸಾಧ್ಯವಿದೆ. ಇದಕ್ಕೆ ನಮ್ಮ ವಿವಿಗಳಲ್ಲಿ ಹಾಗೂ ಕಾಲೇಜುಗಳಲ್ಲಿನ ಪ್ರಾಣಿವಿಜ್ಞಾನದ ಪ್ರೊಫೆಸರ್ ಅಷ್ಟೇ ಅಲ್ಲ, ಶಾಲಾ ಮಕ್ಕಳೂ ತಮ್ಮ ಮನೆ ಹಿತ್ತಲಿನಲ್ಲಿಯೇ ಈ ಮ್ಯಾಜಿಕ್‌ ಮಾಡಬಹುದು. ನಿದ್ರೆ ಮಾಡುವ ಕೀಟಗಳ ಸಂಖ್ಯೆಯನ್ನು ಸಹಸ್ರ ಪಟ್ಟು ಹೆಚ್ಚಿಸಬಹುದು.

ಹಾಗಿದ್ದರೆ ಇದು ಯಾಕೆ ಸಾಧ್ಯವಾಗಿಲ್ಲ? ನಾವು ಪ್ರಕೃತಿ ವಿಜ್ಞಾನವನ್ನು ಅದರಲ್ಲಿಯೂ ಸರಳವಾದ, ಅಗ್ಗದ, ಮೋಜಿನ, ಸಾಹಸವೆನ್ನಿಸುವ ಸಂಶೋಧನೆಯನ್ನು ಮಾಡುವುದು “ನಿಜ”ವಾದ ವಿಜ್ಞಾನಿಗಳ ಪ್ರತಿಷ್ಟೆಗಿಂತಲೂ ಕೀಳು ಎಂದು ಭಾವಿಸಿರುವುದೇ ಇದಕ್ಕೆ ಕಾರಣ ಎನ್ನುವುದು ನನ್ನ ಅನಿಸಿಕೆ.

ಇರಲಿ. ಶುಭಂ ಎನ್ನುವಾಗ ಎಲ್ಲರಿಗೂ ಖುಷಿಯ ವಿಷಯವಿದ್ದರೆ ಒಳ್ಳೆಯದು. ನಾವೀಗ ಮತ್ತೆ ಬ್ಯಾರೆಟ್‌ ಕ್ಲೈನ್‌ ಕಡೆ ತಿರುಗೋಣ. ಅಲ್ಲಲ್ಲ. ಕ್ಲೈನ್‌ ಸೋದರರ ಕಡೆ ಎಂದರೆ ಸರಿಯಾಗುತ್ತದೆ. ಬ್ಯಾರೆಟ್‌ ಅದ್ಭುತ ಭಾಷಣಕಾರ. ಒಮ್ಮೆ ನಾನು ಜೀವನ, ಕೆಲಸಗಳ ಬಗ್ಗೆ ಅವನ ಚಿಂತನೆಗಳೇನೆಂದು ಪ್ರಶ್ನಿಸಿದ್ದೆ. ಇದರ ಬಗ್ಗೆ ಆತ ಹೇಳಿದ ಎರಡು ವಿಷಯಗಳು ಇಲ್ಲಿವೆ. ಉಳಿದವು ನನ್ನ ನೆನಪಿನಲ್ಲಿ ಭದ್ರವಾಗಿವೆ.

“ನಾನು ಐದು ವರ್ಷದವನಾಗಿದ್ದಾಗಲೇ, ನನ್ನ ಬದುಕು ಹಾಗೂ ಚಿಂತನೆಗಳನ್ನು ಕೀಟಗಳು ಆವರಿಸಿರಬೇಕು ಎಂದು ಹಂಬಲಿಸಿ, ಖುಷಿ ಪಟ್ಟಿದ್ದೆ.

ನಿದ್ರೆ ಹಾಗೂ ಕನಸುಗಳ ವಿಚಿತ್ರದ ಬಗ್ಗೆ ಯಾರಿಗೆ ತಾನೇ ಆಸಕ್ತಿ ಇಲ್ಲ? ವಾಲ್ಟರ್‌ ಕೈಸರ್‌ ಜೇನ್ನೊಣಗಳೂ ನಿದ್ರಿಸುತ್ತವೆ ಎಂದು ಸೂಚಿಸಿ ಬರೆದ ಪ್ರಬಂಧವನ್ನು ಓದಿದಾಗ, ನಿದ್ರೆ ಮತ್ತು ಕನಸುಗಳ ಬಗ್ಗೆ ಓದುತ್ತಿದ್ದ ನನ್ನ ಮನಸ್ಸಿಗೆ ನಿದ್ರೆಯ ಅಧ್ಯಯನಗಳನ್ನೂ, ನನ್ನ ಕೀಟಪ್ರೇಮವನ್ನೂ ಒಗ್ಗೂಡಿಸಿದರೆ ಹೇಗೆ ಎನ್ನಿಸಿಬಿಟ್ಟಿತ್ತು.”

ಹಲವು ಸುಪ್ರಸಿದ್ಧ ವಿಜ್ಞಾನಿ ದಂಪತಿಗಳು, ಅಪ್ಪ-ಮಕ್ಕಳು ಒಟ್ಟೊಟ್ಟಾಗಿ ಸಂಶೋಧನೆಯಲ್ಲಿ ಕೈ ಜೋಡಿಸಿದ್ದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಆದರೆ ಇಂತಹ ಸಂಶೋಧಕ ಅವಳಿಗಳು ಅಪರೂಪವೇ. ಬ್ಯಾರೆಟ್‌ ತನ್ನ ಅವಳಿ ಸಹೋದರ ಆರ್ನೋ ಕ್ಲೈನ್‌ ಜೊತೆಗೆ ಆಗಾಗ್ಗೆ ಸಂಶೋಧನೆಯಲ್ಲಿ ಜೊತೆಗೂಡುವುದುಂಟು. ಆರ್ನೋ ನ್ಯೂಯಾರ್ಕಿನಲ್ಲಿರುವ ಚೈಲ್ಡ್‌ ಮೈಂಡ್‌ ಸಂಶೋದನಾಲಯ, ಅಂದರೆ ಮಕ್ಕಳ ಮನೋವಿದ್ಯಮಾನಗಳ ಸಂಶೋಧನಾಲಯದ ವಿನೂತನ ತಂತ್ರಜ್ಞಾನ ಕೇಂದ್ರದ ನಿರ್ದೇಶಕ.  ಆತ, ಮಾನಸಿಕ ಅಸ್ವಸ್ಥರು ಧರಿಸಬಲ್ಲಂತಹ ಸೆನ್ಸಾರುಗಳು ಹಾಗೂ ಇತರೆ ಸಾಧನಗಳನ್ನು ವಿನ್ಯಾಸ ಮಾಡುವುದರಲ್ಲಿ ನಿರತ. ನಾನಿನ್ನೂ ಆತನನ್ನು ಭೇಟಿಯಾಗಿಲ್ಲವೆನ್ನಿ. ಆಗಬೇಕೆಂದು ಇಚ್ಛೆಯಂತೂ ಇದೆ.

Arno and Barrett Klein. Photo courtesy: Barrett Klein

ಆರ್ನೋ ಹಾಗೂ ಬ್ಯಾರೆಟ್‌ ಕ್ಲೈನ್‌. ಚಿತ್ರ: ಬ್ಯಾರೆಟ್‌ ಕ್ಲೈನ್

ತನ್ನ ಅವಳಿ ಸೋದರನ ಜೊತೆಗೆ ಸಂಶೋಧನೆ ಮಾಡುವುದೆಂದರೆ ಹೇಗಿರುತ್ತದೆ ಎಂದು ಬ್ಯಾರೆಟ್ಟನನ್ನು ಕೇಳಿದೆ. ಅದಕ್ಕೆ ಆತ ಹೇಳಿದ್ದು:

“ಜೊತೆಯಾಗಿರುವುದೆಂದರೆ ನಮ್ಮಿಬ್ಬರಿಗೂ ಇಷ್ಟ. ಹೀಗಾಗಿ ನಾವು ಒಟ್ಟಿಗೇ ಕೆಲಸ ಮಾಡಲು ಬಯಸುತ್ತೇವೆ. ಜೊತೆಗೆ ನಮ್ಮ ಆಸಕ್ತಿಗಳೂ ಹಲವು ರೀತಿಯಲ್ಲಿ ಹೊಂದಿಕೊಳ್ಳುತ್ತವೆ. ನಮ್ಮಿಬ್ಬರಿಗೂ ನಿಸರ್ಗ ಎಂದರೆ ಪ್ರೀತಿ. ಅದರಲ್ಲೂ ಅಸ್ಪಷ್ಟವಾದ ಜೈವಿಕ ವಿದ್ಯಮಾಗಳ ಬಗ್ಗೆ ಆಸಕ್ತಿ ಹೆಚ್ಚು. ಇಬ್ಬರೂ ಜೀವಿವಿಜ್ಞಾನ ವ್ಯಾಸಂಗ ಮಾಡಿದ್ದರೂ, ಕಲೆ ಮತ್ತು ವಿಜ್ಞಾನದ ಪರಿಕಲ್ಪನೆಗಳನ್ನು ಕಣ್ಗಾಣಿಸುವಂತೆ ಮಾಡುವುದರಲ್ಲಿ ಆಸಕ್ತಿ ಇದೆ. ನನಗೆ ಇಲ್ಲದ ಹಲವು ಪ್ರತಿಭಗಳು ಮತ್ತು ಪರಿಣತಿ ಆರ್ನೋಗೆ ಇದೆ. ಹೀಗಾಗಿ ಅವನ ಜೊತೆಗೆ ಕೆಲಸ ಮಾಡುವುದು ಹೆಮ್ಮೆಯೂ ಹೌದು, ಆರಾಮವೂ ಹೌದು! ನಿದ್ರೆಯ ಬಗೆಗಿನ ನನ್ನ ಸಂಶೋಧನೆಗಳಲ್ಲಿ, ಕೀಟಗಳನ್ನು ಕುರಿತ ಸಾಮುದಾಯಿಕ ಅಧ್ಯಯನಗಳ ಮಾಹಿತಿಯ ಡೇಟಾಬೇಸ್‌ ರೂಪಿಸುವುದಕ್ಕೆ ಹಾಗೂ ನನ್ನ ಜಾಲತಾಣವನ್ನು ರೂಪಿಸುವುದಕ್ಕೆ ಆರ್ನೋ ನೆರವು ಪಡೆದಿದ್ದೇನೆ. ಆರ್ನೋ ವಿಶಿಷ್ಟ, ಹಾಸ್ಯಪ್ರಜ್ಞೆಯ ವ್ಯಕ್ತಿ. ನಾನು ಅವನ ಅವಳಿ ಅಷ್ಟೆ. ನನ್ನ ಪ್ರಕಾರ ಪ್ರತಿಯೊಬ್ಬರಿಗೂ ಹೀಗೊಂದು ಅವಳಿ ಇರಬೇಕು. ಏಕೆಂದರೆ ಆರ್ನೋ ನನ್ನ ಅತ್ಯಂತ ನಿಕಟವಾದ ಸಂಬಂಧವುಳ್ಳ ಸಹೋದ್ಯೋಗಿ. ಮುಂದೆ ನಮ್ಮಿಬ್ಬರ ಅವಳಿ ಬಲವನ್ನು ಉಪಯೋಗಿಸಿ ಇನ್ನೂ ಒಳ್ಳೆಯ ಸಂಶೋಧನೆ ಮಾಡಬೇಕು ಎನ್ನುವ ಆಸೆ ಇದೆ.”

ಈ ಅವಳಿಗಳಿಗೆ ಹಾಗೂ ಇದೇ ರೀತಿಯಲ್ಲಿ ಜೊತೆಯಾಗಿ ಕೆಲಸ ಮಾಡುವ ವಿಜ್ಞಾನಿ ಜೋಡಿಗಳಿಗೆಲ್ಲರಿಗೂ ಬಲ ಬರಲಿ. ಇಂತಹವರು ಇನ್ನೂ ಬರಲಿ!

ಇದು ಇಂದಿನ ಜಾಣ ಅರಿಮೆ.ಆಂಗ್ಲ ಮೂಲ: ಪ್ರೊಫೆಸರ್‌ ರಾಘವೇಂದ್ರ ಗದಗ್‌ಕರ್, ಕನ್ನಡಾನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್‌. ಮಂಜುನಾಥ. ಮೂಲ ಆಂಗ್ಲ ಪಾಠ ದಿ ವೈರ್‌ ಸೈನ್ಸ್‌ ಜಾಲಪತ್ರಿಕೆಯಲ್ಲಿ ಪ್ರಕಟವಾಗಿತ್ತು.

 

Scroll To Top