Now Reading
ವಿಸ್ಮಯಕ್ಕಿಂತ ವಿಸ್ಮಯ: ನಿಸರ್ಗದಲ್ಲಿ ಪ್ರೇಮಿಯೊಂದು ದಾರಿ ಹಲವು

ವಿಸ್ಮಯಕ್ಕಿಂತ ವಿಸ್ಮಯ: ನಿಸರ್ಗದಲ್ಲಿ ಪ್ರೇಮಿಯೊಂದು ದಾರಿ ಹಲವು

ನವಿಲಿನ ಉದ್ದನೆಯ ಪುಕ್ಕದಂತೆ, ಗಂಡು ಪ್ರಾಣಿಗಳಲ್ಲಿ ಅತಿರೇಕವೆನ್ನಿಸುವಂತಹ ಲೈಂಗಿಕ ಗುಣಗಳು ಕಾಣುವುದನ್ನು ವಿವರಿಸಲು ಡಾರ್ವಿನ್‌ ಸೆಕ್ಸುವಲ್‌ ಸೆಲೆಕ್ಷನ್‌ ಅಥವಾ ಲೈಂಗಿಕ ಆಯ್ಕೆ ಎನ್ನುವ ತತ್ವವನ್ನು ಪ್ರತಿಪಾದಿಸಿದ. ಚಿತ್ರ: ಕೆಲ್ಲಿ ಸಿಕ್ಕೆಮಾ/ಅನ್ ಸ್ಪ್ಲಾಶ್.

ಸಂಪುಟ 4, ಸಂಚಿಕೆ 90 ಡಿಸೆಂಬರ್‌ 10, 2020

ಜಾಣಅರಿಮೆ-7

ವಿಸ್ಮಯಕ್ಕಿಂತ ವಿಸ್ಮಯ: 

ನಿಸರ್ಗದಲ್ಲಿ ಪ್ರೇಮಿಯೊಂದು ದಾರಿ ಹಲವು

Kannada translation by Kollegala Sharma.

ನಿಸರ್ಗ ಮಾಡುವ ಆಯ್ಕೆಯಿಂದಲೇ ವಿಕಾಸವಾಗುತ್ತದೆ, ಎಂದು ಡಾರ್ವಿನ್‌ ಪ್ರತಿಪಾದಿಸಿದ ವಿಕಾಸವಾದ, ಜೀವಿವಿಜ್ಞಾನಕ್ಕೆ ಎಷ್ಟು ಮುಖ್ಯವೋ, ಅಷ್ಟೇ ನಮ್ಮ ಬದುಕಿನ ವಿವಿಧ ಮಗ್ಗುಲುಗಳಿಗೂ ಮುಖ್ಯ ಎನ್ನುವುದನ್ನು ತಿಳಿಹೇಳಬೇಕಿಲ್ಲ. “ವಿಕಾಸವಾದದ ನೆರಳಿನಲ್ಲಿಯಷ್ಟೆ ಜೀವಿಜಗತ್ತಿನ          ಪ್ರತಿಯೊಂದು ಸಂಗತಿಯೂ ಅರ್ಥಪೂರ್ಣವೆನಿಸುತ್ತದೆ,” ಎಂದು ಯುಕ್ರೇನಿನಲ್ಲಿ ಹುಟ್ಟಿ ಅಮೆರಿಕವಾಸಿಯಾಗಿದ್ದ ತಳಿವಿಜ್ಞಾನಿ ಥಿಯೋಡೋಶಿಯಸ್‌ ಡಾಬ್ಸಾನ್ಸ್ಕಿ ಹೇಳಿದ್ದುಂಟು. ಬ್ರೆಜಿಲ್‌ ಜನ್ಯ ಬ್ರಿಟಿಷ್‌ ಜೀವಿವಿಜ್ಞಾನಿ ಪೀಟರ್‌ ಮೆಡಾವರ್‌, “ವಿಕಾಸದ ತತ್ವಗಳಿಗೆ ಪರ್ಯಾಯವಾಗಿ ಏನಾದರೂ ಇರಬಹುದು ಎಂದು ಚಿಂತಿಸುವುದಕ್ಕಿಂತಲೂ,  ಜೀವಿವಿಜ್ಞಾನಿಗಳು ಚಿಂತಿಸದೇ ಇರುವುದೇ ಮೇಲು.” ಎಂದಿದ್ದರು.

ಇತ್ತೀಚೆಗೆ ನಡೆದ ಒಂದು ಘಟನೆಯ ಹೊರತಾಗಿಯೂ ಭಾರತ ಸರಕಾರವು ಮೇ ೧೮, ೧೯೮೩ರಲ್ಲಿ ಚಾರ್ಲ್ಸ್‌ ಡಾರ್ವಿನ್ನನ ಮರಣ ಶತಮಾನೋತ್ಸವ ಸಂದರ್ಭದಲ್ಲಿ  ಒಂದು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತ್ತು ಎಂಬುದು ಹೆಮ್ಮೆಯ ವಿಷಯ. ಆದರೆ ಡಾರ್ವಿನ್ನನ ಬಗೆಗಿನ ಹೊಗಳಿಕೆಯೆಲ್ಲವೂ ಪ್ರಮುಖವಾಗಿ ಆತ ೧೮೫೯ರಲ್ಲಿ ಬರೆದಿದ್ದ ಆನ್‌ ದಿ ಆರಿಜಿನ್‌ ಆಫ್‌ ಸ್ಪೀಶೀಸ್‌ ಎಂಬ ಪ್ರಸಿದ್ಧ ಪುಸ್ತಕದಲ್ಲಿನ ಮಾಹಿತಿಯನ್ನು ಆಧರಿಸಿದವು.

ಆದರೆ ಡಾರ್ವಿನ್‌ ಇನ್ನೂ ಹಲವು ಗ್ರಂಥಗಳನ್ನು ರಚಿಸಿದ್ದ. ಇವುಗಳಲ್ಲಿ ಮತ್ತೊಂದು ಪ್ರಸಿದ್ಧಿ ಪಡೆದ ಪುಸ್ತಕ ೧೮೭೧ರಲ್ಲಿ ಪ್ರಕಟವಾದ ದಿ ಡಿಸೆಂಟ್‌ ಆಫ್‌ ಮ್ಯಾನ್‌ ಅಂಡ್‌ ಸೆಲೆಕ್ಷನ್‌ ಇನ್‌ ರಿಲೇಶನ್‌ ಟು ಸೆಕ್ಸ್ .‌ ಅರ್ಥಾತ್‌, ಮಾನವನ ಹುಟ್ಟು ಹಾಗೂ ಲೈಂಗಿಕತೆಗೆ ಸಂಬಂಧಿಸಿದ ಆಯ್ಕೆ . ಈ ಗ್ರಂಥದಲ್ಲಿ ಡಾರ್ವಿನ್‌ ಮಾನವನ ಉಗಮವು ವಾನರಗಳ ಪೂರ್ವಜರಿಂದ ಆಗಿದ್ದು ಎಂದು ಪ್ರತಿಪಾದಿಸಿದನಲ್ಲದೆ ಮತ್ತೊಂದು ವಿಷಯವನ್ನೂ ಹೇಳಿದ್ದ. ನಿಸರ್ಗದಲ್ಲಿರುವ ಹಲವು ವಾಸ್ತವಾಂಶಗಳನ್ನು ತನ್ನ ನಿಸರ್ಗದ ಆಯ್ಕೆ ಎನ್ನುವ ತತ್ವವು ಪರಿಪೂರ್ಣವಾಗಿ ವಿವರಿಸುವುದಿಲ್ಲವೆಂದು ವಾದಿಸಿದ ಆತ ಗಂಡು ನವಿಲುಗಳ ಬಾಲದಂತಹ ಗುಣಗಳು ಗಂಡು ಜೀವಿಗಳಲ್ಲಿ ಕಾಣುವುದನ್ನು ವಿವರಿಸಲು ಥಿಯರಿ ಆಫ್‌ ಸೆಕ್ಸುವಲ್‌ ಸೆಲೆಕ್ಷನ್‌ ಅಥವಾ ಲೈಂಗಿಕ ಆಯ್ಕೆಯ ತತ್ವಗಳನ್ನು ಮಂಡಿಸಿದ್ದ.

ಚಿತ್ರ. ವಿ. ರಾಜರಾಜನ್‌, ಪೋಸ್ಟ್‌ ಮಾಸ್ಟರ್‌ ಜನರಲ್‌, ಕೇರಳ

ಅವನ ಇತರೇ ಪುಸ್ತಕಗಳಂತಯೇ ಇದರಲ್ಲಿಯೂ ಹಲವು ಸೂಕ್ಷ್ಮತಮ ವಿಚಾರಗಳು ಅಡಗಿದ್ದುವು. ಇವುಗಳನ್ನು  ಅರ್ಥ ಮಾಡಿಕೊಳ್ಳಲು ಹಾಗೂ ಅನ್ವೇಷಿಸಲು ನಾವು ಈಗಷ್ಟೆ ಆರಂಭಿಸಿದ್ದೇವೆ. ಇಂತಹ ಒಳಸೂಕ್ಷ್ಮಗಳಲ್ಲಿ ಒಂದು ಕೆಲವು ಪ್ರಾಣಿಗಳಲ್ಲಿ ಗಂಡುಗಳು ತಮ್ಮ ಸಂಗಾತಿಯನ್ನು ಆಯ್ದುಕೊಳ್ಳಲು ಹಲವು ವಿಧಾನಗಳನ್ನು ಅನುಸರಿಸುತ್ತವೆಯೇಕೆ ಎನ್ನುವುದೂ ಒಂದು. ಉದಾಹರಣೆಗೆ ಕೆಲವು ಪ್ರಭೇದಗಳಲ್ಲಿ ಗಂಡುಗಳು ಎರಡು ಗಾತ್ರದವಾಗಿರಬಹುದು. ಇವುಗಳಲ್ಲಿ ದೊಡ್ಡ ಗಾತ್ರದವುಗಳಿಗೆ ಕೆಲವೊಮ್ಮೆ ಹೋರಾಡಲು ಹೆಚ್ಚಿನ ಅಸ್ತ್ರಗಳೂ, ಸಾಧನಗಳೂ ಇದ್ದು, ಹೆಣ್ಣಿಗಾಗಿ ಇತರೆ ಗಂಡುಗಳ ಜೊತೆಗೆ ಸ್ಪರ್ಧಿಸುವಾಗ ತಮ್ಮ ಗಾತ್ರವಲ್ಲದೆ ಇವನ್ನೂ ಬಳಸುತ್ತವೆ. ಪಾಪ. ಸಣ್ಣ ಗಾತ್ರದ ಗಂಡುಗಳು ಈ ದೊಡ್ಡಣ್ಣಗಳ ಎದುರಿಗೆ ನಿಲ್ಲಲಾಗದ ಪರಿಸ್ಥಿತಿಯಲ್ಲಿ ಹೆಣ್ಣನ್ನು ಆಕರ್ಷಿಸಲು ಬೇರೆ ಉಪಾಯಗಳನ್ನು ಅನುಸರಿಸುತ್ತವೆ. ಅವು ಕಳ್ಳದಾರಿಯಿಂದ ಒಳ ನುಸುಳಬಹುದು, ಇಲ್ಲವೇ ತಾವು ಹೆಣ್ಣುಗಳೇ ಏನೋ ಎಂಬಂತೆ ನಟಿಸಿ ದೊಡ್ಡಣ್ಣಗಳನ್ನು ಮೂರ್ಖರನ್ನಾಗಿಸಬಹುದು.

ವಿಕಾಸವಾದದ ಹಿನ್ನೆಲೆಯಲ್ಲಿ ಇಂತಹ ಪರ್ಯಾಯ ಉಪಾಯಗಳು ಇರುವುದೇ ಒಂದು ವಿಚಿತ್ರ. ಏಕೆ ವಿಚಿತ್ರ ಎಂದು ನೋಡೋಣ.

ಯಾವುದೇ ಜೀವಿಯೊಳಗಿನ ತೋರುರೂಪ, ಜೀವಪ್ರಕ್ರಿಯೆ ಅಥವಾ ನಡವಳಿಕೆಯಲ್ಲಿನ ವೈವಿಧ್ಯ ಜೀವಿವಿಕಾಸವಾದಿಗಳಿಗೆ ಕುತೂಹಲಕರ ವಿಷಯ. ಈ ವೈವಿಧ್ಯವೇ ನಿಸರ್ಗವು ಆಯ್ಕೆ ಮಾಡಲು ಬೇಕಾದ ಕಚ್ಚಾ ಸಾಮಗ್ರಿ. ನಿರ್ದಿಷ್ಟ ಪರಿಸರದಲ್ಲಿರುವ ವಿವಿಧ ರೂಪಗಳ ಉಳಿವಿನ  ಹಾಗೂ ಸಂತಾನಾಭಿವೃದ್ಧಿಯ ಸಾಮರ್ಥ್ಯಗಳೂ ಬೇರೆ, ಬೇರೆಯಾಗಿರುತ್ತವೆ.  ಇವುಗಳಲ್ಲಿ ಕೆಲವನ್ನು ನಿಸರ್ಗ ಆಯ್ಕೆ ಮಾಡುವುದರಿಂದ ಅವು ಹೆಚ್ಚಾಗಿ ಉಳಿಯುತ್ತವೆ. ಆಯ್ಕೆಯಾಗದ ಉಳಿದವುಗಳು ಜೀವಿಯ ಸಮೂಹದಿಂದ ಮರೆಯಾಗುತ್ತವೆ. ಈ ರೀತಿಯ ವೈವಿಧ್ಯಗಳಿಲ್ಲದೆ ಇದ್ದರೆ ಜೀವಿವಿಕಾಸ ಅಸಾಧ್ಯ.

ಆದರೆ ಅನಿರ್ದಿಷ್ಟವಾದ ವಿಕೃತಿಗಳಿಂದ ಹುಟ್ಟಿದ ಈ ವೈವಿಧ್ಯ ನಿಸರ್ಗದ ಆಯ್ಕೆ ಪ್ರಕ್ರಿಯೆ ಮುಂದುವರೆದಂತೆ ಮರೆಯಾಗಿಬಿಡಬೇಕು. ಹೀಗೆ ಮರೆಯಾಗದೆ ಉಳಿದ ವೈವಿಧ್ಯಕ್ಕೆ ಏನಾದರೂ ವಿಶೇಷ ಇರಬೇಕು. ನಿಸರ್ಗ ಹೀಗೆ ಹಲವು ಬಗೆಯ ಆಯ್ಕೆಯ ತಂತ್ರಗಳನ್ನು ಉಳಿದುಕೊಳ್ಳಲು ಬಿಟ್ಟಿದ್ದೇಕೆ? ಎರಡು ಪರ್ಯಾಯಗಳಲ್ಲಿ ವ್ಯತ್ಯಾಸ ಎಷ್ಟೇ ಕಡಿಮೆ ಇದ್ದರೂ, ಕೀಳಾದ ತಂತ್ರವು ದೀರ್ಘಾವಧಿಯಲ್ಲಿ ನಿಸರ್ಗದ ಆಯ್ಕೆಯಿಂದಾಗಿ ಮರೆಯಾಗಿಬಿಡಬೇಕಲ್ಲವೇ? ಅದಕ್ಕೇ ಡಾರ್ವಿನ್‌, ತಂತ್ರಗಳು ಭಿನ್ನವಾದರೇನಂತೆ ಈ ವೈವಿಧ್ಯಮಯ ಜೀವಿಗಳು ಉಳಿಯಲು ಕಾರಣ ಇವುಗಳ ತಂತ್ರಗಳ ಸಫಲತೆ ಸಮಾನವಾಗಿರಬೇಕು ಎಂದು ಊಹಿಸಿದ್ದ. ಇದು ಸುಮಾರು ನೂರಾ ಒಂದು ವರ್ಷಗಳವರೆಗೂ ಕೇವಲ ಊಹೆಯಾಗಿಯೇ ಉಳಿದಿತ್ತು!

ಡಾರ್ವಿನ್ನನ ಈ ತರ್ಕಕ್ಕೆ ಪುರಾವೆ ಮೊದಲು ದೊರಕಿದ್ದು ೧೯೭೨ರಲ್ಲಿ. ಆಗ ಪುಣೆಯಲ್ಲಿದ್ದ  ಮಹಾರಾಷ್ಟ್ರದ ಅಸೋಸಿಯೇಶನ್‌ ಫಾರ್‌ ಕಲ್ಟಿವೇಶನ್‌ ಆಫ್‌ ಸೈನ್ಸ್‌ ನಲ್ಲಿದ್ದ ಮೂವತ್ತರ ಹರೆಯದ ವಿಜ್ಞಾನಿಯೊಬ್ಬರು “ಮೇಲ್‌ ಡೈಮಾರ್ಫಿಸಮ್‌ ಆಸ್‌ ಎ ಕಂಸಿಕ್ವೆನ್ಸ್‌ ಆಫ್‌ ಸೆಕ್ಸುವಲ್‌ ಸೆಲೆಕ್ಷನ್”‌ ಎಂಬ ಪ್ರಬಂಧವನ್ನು ಸುಪ್ರಸಿದ್ಧ ಅಮೆರಿಕನ್‌ ನ್ಯಾಚುರಾಲಿಸ್ಟ್‌ ಪತ್ರಿಕೆಯಲ್ಲಿ ಪ್ರಕಟಿಸಿದರು. ಇದರ ಅರ್ಥ ಇಷ್ಟೆ. ಲೈಂಗಿಕ ಆಯ್ಕೆಯ ಫಲವಾಗಿ ಗಂಡುಗಳಲ್ಲಿ ಕಾಣಿಸಿಕೊಂಡ ಎರಡು ತೋರುರೂಪಗಳು ಎನ್ನಬಹುದು.  ಈ ಯುವ ವಿಜ್ಞಾನಿ ಬೇರೆ ಯಾರೂ ಅಲ್ಲ.  ಇವರೇ ಭಾರತದ ಸುಪ್ರಸಿದ್ಧ ಪರಿಸರತಜ್ಞ ಹಾಗೂ ಜೀವಿವೈವಿಧ್ಯದ ಸಂರಕ್ಷಣಾ ವಿಜ್ಞಾನಿ ಮಾಧವ ಗಾಡ್ಗೀಳ್.

ಪುಣೆಯ ಮಹಾರಾಷ್ಟ್ರ ಅಸೋಸಿಯೇಶನ್‌ ಫಾರ್‌ ಕಲ್ಟಿವೇಶನ್‌ ಆಫ್‌ ಸೈನ್ಸ್‌ ಸಂಸ್ಥೇಯಲ್ಲಿ ಮಾಧವ ಗಾಡ್ಗೀಳರು (ಬಲ) ಹಾಗೂ ಸುಪ್ರಸಿದ್ಧ ಪಕ್ಷಿವಿಜ್ಞಾನಿ ಸಲೀಂ ಆಲಿ (ಎಡ) ಚಿತ್ರ ಸೌಜನ್ಯ: ಮಾಧವ ಗಾಡ್ಗೀಳ್: ‌.

ಸರಳವಾದ ಆಯವ್ಯಯದ ಮಾದರಿಯನ್ನು ಬಳಸಿಕೊಂಡ ಮಾಧವ ಗಾಡ್ಗೀಳರು ಸ್ಪರ್ಧೆಯಲ್ಲಿ ಉತ್ತಮವೆನ್ನಿಸುವ ತಂತ್ರಗಳನ್ನು ಬೆಳೆಸಿಕೊಳ್ಳಲು ಹೆಚ್ಚು ಶಕ್ತಿಯನ್ನು ವ್ಯಯ ಮಾಡಿದ ಗಂಡುಗಳು, ಅಷ್ಟೇ ಶಕ್ತಿಯನ್ನು ತಾವು ಬದುಕುಳಿಯಲು ಬಳಸಿಕೊಂಡ ಗಂಡುಗಳಿಗಿಂತ ಹೆಚ್ಚು ಸಂತಾನಗಳನ್ನೇನೂ ಹುಟ್ಟಿಸುವುದಿಲ್ಲವೆಂದು ನಿರೂಪಿಸಿದರು.  ಇದು ಈಗ ಚರಿತ್ರೆ.

ಇಂತಹ ಪರ್ಯಾಯ ಸಂತಾನಾಭಿವೃದ್ಧಿಯ ತಂತ್ರಗಳು ಈಗ ಬಲು ಗಾಢ ಅಧ್ಯಯನ ಹಾಗೂ ಹಲವಾರು ಸಂಶೋಧನಾ ಪ್ರಬಂಧಗಳು, ಪುಸ್ತಕಗಳು ಹಾಗೂ ಗ್ರಂಥಗಳ ವಿಷಯಗಳಾಗಿವೆ.  ಈ ಅಧ್ಯಯನಗಳಲ್ಲಿ ಹೆಚ್ಚಿನವು ಗಾಡ್ಗೀಳರ ಆ ಒಳನೋಟದ ಪ್ರಬಂಧಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಲೇ  ಆರಂಭವಾಗುತ್ತವೆ ಎನ್ನುವುದು ಹೆಮ್ಮೆಯ ವಿಷಯ.

ಹೀಗೆ ಧೈರ್ಯ ಮಾಡಿ ವಿಶೇಷ ಒಳನೋಟಗಳಿರುವಂತಹ ಪ್ರಬಂಧಗಳನ್ನು ಬರೆದದ್ದೇ ಅಲ್ಲದೆ ಮಾಧವ ಗಾಡ್ಗೀಳರು, ಮುಂದಿನ ಯುವ ಜನಾಂಗ ಇಂತಹುದೇ ಸಂಶೋಧನೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಟ್ಟ  ಪರಿಸರ ವಿಜ್ಞಾನ ಅಧ್ಯಯನ ಕೇಂದ್ರವನ್ನು  ಬೆಂಗಳೂರಿನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್ ಸಂಸ್ಥೆಯಲ್ಲಿ ಸ್ಥಾಪಿಸುವ ಕನಸನ್ನೂ ಕಂಡಿದ್ದರೆನ್ನುವುದು ಚರಿತ್ರೆಯ ಪುಟಗಳಲ್ಲಿ ಸೇರಿದೆ.  ನಾನೀಗ ಈ ಕೇಂದ್ರದಲ್ಲಿ ಪ್ರೊಫೆಸರ್‌ ರೋಹಿಣಿ ಬಾಲಕೃಷ್ಣನ್‌ ಹಾಗೂ ಆಕೆಯ ವಿದ್ಯಾರ್ಥಿಗಳು ಪರಿಸರ ವಿಜ್ಞಾನದಲ್ಲಿ ನಡೆಸುತ್ತಿರುವ ಅದ್ಭುತವೆನ್ನಿಸುವ ಕ್ಷೇತ್ರಾಧ್ಯಯನಗಳ ಬಗ್ಗೆ ಹೇಳಲಿದ್ದೇನೆ.

ವಿಷಯದ ಅರಿವಿನಿಂದ ಹುಟ್ಟಿದ ಬಲು ಗಾಢವಾದ ಪ್ರಶ್ನೆಗಳನ್ನೂ,  ಚಾತುರ್ಯದಿಂದ, ಸರಳವಾದ ಹಾಗೂ ವಿನೂತನವಾದ ಪ್ರಯೋಗಗಳಿಂದ ಉತ್ತರಿಸುತ್ತಿರುವುದರಿಂದಲೇ ಇವರ ಸಂಶೋಧನೆಗಳು ನನಗೆ ಇಷ್ಟ. ಈ ಪ್ರಯೋಗಗಳು ಕೆಲವೊಮ್ಮೆ ಸಂಸ್ಥೆಯ ಆವರಣದಲ್ಲಿಯೋ ಅಥವಾ ಹತ್ತಿರದ ಹಳ್ಳಿಗಳಲ್ಲಿಯೋ ನಡೆದಂಥವು.  ಈ ಸಂಶೋಧನೆಗೆ ಬೇಕಾಗಿದ್ದು ತೀವ್ರ ಆಸಕ್ತಿ, ಮೂಳೆ ಮುರಿಯುವಂತಹ ಪರಿಶ್ರಮದ ಕ್ಷೇತ್ರಾಧ್ಯಯನ, ನಿದ್ರೆಯಿಲ್ಲದ ರಾತ್ರಿಗಳೇ ಹೊರತು ಯಾವುದೋ ಚಮತ್ಕಾರಿಕ ತಂತ್ರಜ್ಞಾನವಲ್ಲ.  ಅದೃಷ್ಟವೆಂದರೆ ಇವರ ಅಧ್ಯಯನಗಳು ನಮ್ಮ ಇಂದಿನ ಚರ್ಚೆಯ ವಿಷಯವಾದ ಪರ್ಯಾಯ ಪ್ರಜನನ ತಂತ್ರಗಳನ್ನೂ ಒಳಗೊಂಡಿವೆ.

ರೋಹಿಣಿ ಬಾಲಕೃಷ್ಣನ್‌ ಚಿಮ್ಮಂಡೆಗಳ ಅಧ್ಯಯನಕ್ಕೆ ಪ್ರಸಿದ್ಧಿ ಪಡೆದವರು. ಚಿಮ್ಮಂಡೆಗಳೋ ಅವುಗಳ ಪ್ರೇಮಗೀತೆಯಿಂದ ಪ್ರಸಿದ್ಧಿ ಪಡೆದಂಥವು. ಇವುಗಳ ಗಂಡುಗಳು ಬಾಯೆತ್ತಿ ಹಾಡುವುದಿಲ್ಲವೆನ್ನಿ. ಆದರೆ ಅವು ತಮ್ಮ‌ ಮುಂದಿನ ರೆಕ್ಕೆಗಳನ್ನು ಉಜ್ಜಿ, ನಮಗೆಲ್ಲ ಪರಿಚಿತವಾದ ಕೀರಲು ಹಾಡನ್ನು ಹಾಡುತ್ತವೆ. ಈ ರೆಕ್ಕೆಗಳನ್ನು ಉಜ್ಜುವುದಕ್ಕೆ ಸ್ಟ್ರೈಡುಲೇಶನ್‌ ಎನ್ನುತ್ತೇವೆ. ಹೆಣ್ಣುಗಳನ್ನು ಆಕರ್ಷಿಸುವುದಕ್ಕಾಗಿಯೇ ಗಂಡುಗಳು ಹೀಗೆ ಹಾಡುತ್ತವೆ.   ತಮಗೆ ಯೋಗ್ಯವಾದಂತಹ ಗಂಡುಗಳನ್ನು ಹುಡುಕಿ, ಸಂಗಾತಿಗಳಾಗಲು ಹೆಣ್ಣು ಚಿಮ್ಮಂಡೆಗಳಿಗೆ  ಈ ಪ್ರೇಮಗೀತೆಗಳು ನೆರವಾಗುತ್ತವೆ.

ಹೌದು. ನೀವು ನಿರೀಕ್ಷಿಸಿದಂತೆ ನಿಸರ್ಗ ಒಂದು ಜಟಿಲ ಜಾಲ. ಇದರಲ್ಲಿ ಈ ಪ್ರೇಮಗೀತೆಗಳು ಸಂಗಾತಿಯನ್ನು ದೊರಕಿಸುವುದಷ್ಟೆ ಅಲ್ಲ, ಪರಜೀವಿಗಳನ್ನೂ, ಬೇಟೆಗಾರರನ್ನೂ ಯೋಗ್ಯ ಬೇಟೆ, ನೆಲೆ ಇಲ್ಲಿದೆ ಎಂದು ಕೂಗಿ ಕರೆಯುತ್ತವೆ.  ಹೀಗೆ ಈ ಪ್ರೇಮಗೀತೆಗಳು ಹಾಡಲು ಶಕ್ತಿಯನ್ನು ವ್ಯಯ ಮಾಡುವುದರ ಜೊತೆಗೇ, ಬೇಟೆಗಾರರಿಗೋ, ಪರಜೀವಿಗಳಿಗೋ ಆಹ್ವಾನವಿತ್ತು ನಷ್ಟವನ್ನುಂಟು ಮಾಡುತ್ತವೆ. ಆದ್ದರಿಂದ ಕೆಲವು ಗಂಡುಗಳು ಹಾಡುವ ಮೂಲಕ ಈ ರೀತಿಯ ವೆಚ್ಚಕ್ಕೆ ಎಳಸದೆಯೇ ಸಂಗಾತಿಗಳನ್ನು ಅರಸುತ್ತವೆ. ಇವು ಬೇರೆ ಗಂಡುಗಳ ಪ್ರೇಮಗೀತೆಗಳನ್ನು ಆಲಿಸಿ ಅವುಗಳತ್ತ ಸಾಗುತ್ತವೆ.  ಹಾಡುತ್ತಿರುವ ಗಂಡುಗಳತ್ತ ಬರುತ್ತಿರುವ ಹೆಣ್ಣುಗಳನ್ನು ಅಡ್ಡಗಟ್ಟುತ್ತವೆ.  ಗಾಯಕರಲ್ಲದ ಇಂತಹ ಗಂಡುಗಳನ್ನು ಹಾಡದ ಅಥವಾ ಉಪಗ್ರಹ ಗಂಡುಗಳೆಂದು ಹೇಳುತ್ತಾರೆ. ಇದು ಪರ್ಯಾಯ ಪ್ರಜನನ ತಂತ್ರಕ್ಕೆ ಒಂದು ಉದಾಹರಣೆ.

ಪರಿಸರ ವಿಜ್ಞಾನ ಅಧ್ಯಯನ ಕೇಂದ್ರ, ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌, ಬೆಂಗಳೂರು ಹಾಗೂ ಅಲ್ಲಿರುವ ಪಶ್ಚಿಮ ಘಟ್ಟದ ನಿವಾಸಿ ಎಂಟಾಡಾ ಪುರ್ಸೀತಾ ಅಥವಾ ಗಣಪೆಕಾಯಿ  ಗಿಡ. ಚಿತ್ರ: ನೂತನ್‌ ಕಾರ್ಣಿಕ್

ಚಿಮ್ಮಂಡೆಗಳಲ್ಲಿ ಇಂತಹ ಪರ್ಯಾಯ ತಂತ್ರಕ್ಕೆ ಉತ್ತಮ ಉದಾಹರಣೆ ಎಂದರೆ ಗ್ರಿಲ್ಲಸ್‌ ಇಂಟಿಜರ್‌ ಎನ್ನುವ ಬಯಲು ಚಿಮ್ಮಂಡೆ. ಇದನ್ನು ಮೊದಲು ಆಸ್ಟಿನ್ನಿನಲ್ಲಿರುವ ಯೂನಿವರ್ಸಿಟಿ ಆಫ್‌ ಟೆಕ್ಸಾಸಿನ ವಿಜ್ಞಾನಿ ಮೈಖೇಲ್‌ ಕೇಡ್‌ ಅಧ್ಯಯನ ಮಾಡಿದ್ದರು.  ಬಯಲಿನಲ್ಲಿ ಇಂತಹ ಉಪಗ್ರಹ ಗಂಡುಗಳಿಗೊಂದು ಅನುಕೂಲವಿದೆ. ಯೂಫಾಸಿಯೋಪ್ಟೆರಿಕ್ಸ್‌ ಓಕ್ರೇಶಿಯಾ ಎನ್ನುವ ಒಂದು ಪರಜೀವಿ ನೊಣ ತಮ್ಮ ಪ್ರೇಮ ನಿವೇದನೆಯನ್ನು ಹಾಡುತ್ತಾ ಜಗಜ್ಜಾಹೀರುಗೊಳಿಸುವ ಚಿಮ್ಮಂಡೆಗಳನ್ನು ಹುಡುಕಿ ಅವುಗಳ ಮೇಲೆ ಲಾರ್ವಗಳನ್ನು  ಇಡುತ್ತದೆ. ಈ ಲಾರ್ವಾಗಳು ಚಿಮ್ಮಂಡೆ ಗಂಡಿನ ದೇಹವನ್ನು ಕೊರೆದು ಒಳಹೊಕ್ಕು ಅಂಗಗಳನ್ನು ಕಬಳಿಸುತ್ತವೆ.

ಹಾಡು ಹಾಡದ ಉಪಗ್ರಹ ಗಂಡುಗಳಿಗೆ ಈ ಅಪಾಯವಿಲ್ಲ. ಹಾಡುವುದಕ್ಕೂ ಅವು ಶಕ್ತಿ ವ್ಯಯ ಮಾಡಬೇಕಿಲ್ಲ. ಯಾವ ಚಿಮ್ಮಂಡೆಗಳು ಹಾಡುವ ಗಂಡಾಗಿ, ಯಾವುವು ಉಪಗ್ರಹಗಳಾಗಿ ಹುಟ್ಟುತ್ತವೆ ಎನ್ನುವುದು ತಳಿಗುಣಗಳನ್ನು ಅವಲಂಬಿಸಿದೆ. ಅಂದರೆ ಕೆಲವು ಚಿಮ್ಮಂಡೆಗಳು ಹಾಡುವ ಪ್ರೇಮಿಗಳಾಗುವ ಸಾಧ್ಯತೆ ಹೆಚ್ಚು. ಇನ್ನು ಕೆಲವು ಹೀಗೆ ಹಾಡುವ ಸಾಧ್ಯತೆ ಬಲು ಕಡಿಮೆ. ಗಾಡ್ಗೀಳರು ನಿರೂಪಿಸಿದ ಹಾಗೆ, ಈ ಹಾಡುವ ಹಾಗೂ ಹಾಡದ ಗಂಡುಗಳೆರಡೂ ಸಮುದಾಯದಲ್ಲಿ ಇರುವ ಪ್ರಮಾಣ ಹೇಗಿರುತ್ತದೆಂದರೆ ಸಂಗಾತಿಯನ್ನು ಹುಡುಕುವ ಎರಡೂ ತಂತ್ರಗಳೂ ಕೂಡ ಸಮಾನ ಲಾಭವನ್ನು, ಅರ್ಥಾತ್‌, ಸಮಾನ ಪ್ರಜನನ ಸಾಮರ್ಥ್ಯವನ್ನು ಒದಗಿಸುತ್ತವೆ.

ಬಾಲಕೃಷ್ಣನ್‌ರವರ ತಂಡ ಮರಗಳಲ್ಲಿರುವ ಈಕಾಂತಸ್‌ ಹೆನ್ರಿಯೈ ಎನ್ನುವ ಚಿಮ್ಮಂಡೆಗಳನ್ನು ಅಧ್ಯಯನ ಮಾಡುತ್ತದೆ.  ಇವುಗಳಲ್ಲಿ ಹಾಡುತ್ತಿರುವ ಗಂಡುಗಳನ್ನು ಪರಜೀವಿ ನೊಣ ಕಾಡುವುದಿಲ್ಲ. ಬದಲಿಗೆ, ಇವನ್ನು ಪ್ಯುಸೇಶಿಯಾ ವಿರಿಡೆನ್ಸ್‌ ಎನ್ನುವ ಹಸಿರು ಲಿಂಕ್ಸ್‌ ಜೇಡ  ಹುಡುಕಿ ಬೇಟೆಯಾಡುತ್ತದೆ. ಇಲ್ಲಿಯೂ ಅಷ್ಟೆ ಕೆಲವು ಗಂಡುಗಳಷ್ಟೆ ಪ್ರೇಮಗೀತೆಗಳನ್ನ ಹಾಡುತ್ತಾ ಹೆಣ್ಣನ್ನು ಕೂಗಿ ಕರೆಯುತ್ತವೆ. ಕೆಲವು ಸದ್ದಿಲ್ಲದೆಯೇ ಹೆಣ್ಣನ್ನು ಹುಡುಕುತ್ತವೆ.  ಸದ್ದಿಲ್ಲದೆ ಹೆಣ್ಣನ್ನು ಹುಡುಕುವ ಈ ಚಿಮ್ಮಂಡೆ ಗಂಡುಗಳ ಕೆಲಸ ಕಂಡೆರೆ ನನಗೆ ಅಚ್ಚರಿ. ಏಕೆಂದರೆ  ತಳಿಗುಣಗಳು ಈ ನಡವಳಿಕೆಯನ್ನು ನಿರ್ಧರಿಸುವುದಿಲ್ಲ.

ಪ್ರತಿ ಗಂಡೂ ಕೂಡ ಯಾವ ತಂತ್ರವನ್ನು ತಾನು ಬಳಸಬೇಕೆಂದು ತೀರ್ಮಾನಿಸಬೇಕು. ಹಾಗೂ ಸೂಕ್ತವಾದುದಕ್ಕೆ ಬದಲಾಯಿಸಿಕೊಳ್ಳಬೇಕಾಗುತ್ತದೆ. ಹೀಗೆ ತಂತ್ರಗಳನ್ನು ಬದಲಾಯಿಸಿಕೊಳ್ಳುವುದು ಈ ಚಿಮ್ಮಂಡೆಗಳಿಗೆ ಸುಲಭವಲ್ಲ. ಇದಕ್ಕಾಗಿ ಇವು ಅವಿರತವಾಗಿ ತಮ್ಮ ಪರಿಸರದ ಹಲವು ಅಂಶಗಳನ್ನು ಗ್ರಹಿಸಬೇಕಾಗುತ್ತದೆ.  ತಾವು ಬೇಟೆಗೆ ಬಲಿಯಾಗಬಹುದಾದ ಸಾಧ್ಯತೆಗಳು ಹಾಗೂ ಸಂಗಾತಿ ದೊರಕಬಹುದಾದ ಸಾಧ್ಯತೆಗಳ ಮೌಲ್ಯಮಾಪನ ಮಾಡಬೇಕಾಗುತ್ತದೆ. ಅದಕ್ಕೆ ತಕ್ಕಂತೆ ತಮ್ಮ ತಂತ್ರಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ.  ಅದಿರಲಿ. ಇಂತಹ ಪ್ರಭೇದಗಳು ಸಂವೇದನೆ, ಗ್ರಹಿಕೆ ಹಾಗೂ ತೀರ್ಮಾನ ಕೈಗೊಳ್ಳುವ ನಡವಳಿಕೆಗಳನ್ನು ಅಧ್ಯಯನ ಮಾಡಲು ನಮಗೆ ಒಳ್ಳೆಯ ಸಂದರ್ಭಗಳನ್ನು ಒದಗಿಸುತ್ತವೆ.

ವಿರಾಜ್.‌ ಆರ್.‌ ತೋರ್ಸೇಕರ್‌ ಹಾಗೂ ರೋಹಿಣಿ ಬಾಲಕೃಷ್ಣನ್‌ ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಈ ರೀತಿಯ ಪರ್ಯಾಯ ಪ್ರಜನನ ತಂತ್ರಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿದ್ದಾರೆ. ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಉಳ್ಳೋಡು ಗ್ರಾಮದಲ್ಲಿ,  ಈ ಮರದ ಚಿಮ್ಮಂಡೆಗಳು ಹಾಗೂ ಅವುಗಳ ವೈರಿ ಜೇಡಗಳು ಇರುವ ನೈಸರ್ಗಿಕ ನೆಲೆಯಲ್ಲಿಯೇ ಅಧ್ಯಯನಗಳನ್ನು ನಡೆಸಿದರು.  ಈ ಚಿಮ್ಮಂಡೆಗಳ ನಡವಳಿಕೆ, ಹಾಗೂ ಜೇಡಗಳ ಜೊತೆಗೆ ಅವುಗಳ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಆರಡಿ ಉದ್ದ, ಆರಡಿ ಅಗಲ ಹಾಗೂ ಎರಡೂವರೆ ಅಡಿ ಎತ್ತರದ ಪಂಜರಗಳನ್ನು ನಿರ್ಮಿಸಿದರು. ಮರದ ಚೌಕಟ್ಟಿದ್ದ ಇವುಗಳ ಗೋಡೆಗಳಿಗೆ ಉಕ್ಕಿನ ಜಾಲರಿಯನ್ನು ಹಾಕಲಾಗಿತ್ತು. ಇವನ್ನು ಚಿಮ್ಮಂಡೆಗಳ ಸಹಜವಾದ ನೆಲೆಯಲ್ಲಿ ಹೈಪ್ಟಿಸ್‌ ಸುಯಾವಿಯೋಲೆನ್ಸ್‌ ಎನ್ನುವ ಕಾಡುತುಳಸಿ ಗಿಡಗಳ ಬಳಿ ಇಟ್ಟರು. ಅನಂತರ ಅಲ್ಲಿದ್ದ ಚಿಮ್ಮಂಡೆಗಳನ್ನೂ, ಜೇಡಗಳನ್ನೂ ಸಂಗ್ರಹಿಸಿ, ನಿರ್ದಿಷ್ಟ ಸಂಖ್ಯೆಯಲ್ಲಿ ಅವುಗಳನ್ನು ಪ್ರತಿ ಪಂಜರದೊಳಗೂ ಇರಿಸಿದರು.

ಪ್ರತಿಯೊಂದು ಚಿಮ್ಮಂಡೆಯನ್ನೂ ತಕ್ಷಣವೇ ಒಣಗುವಂತಹ, ವಿಷಕಾರಿಯಲ್ಲದ ಬಣ್ಣದಿಂದ ಗುರುತಿಸಿದರು. ಹಾಗೂ ಈ ಪಂಜರದೊಳಗೆ ಇದ್ದ ಪ್ರತಿಯೊಂದು ಪೊದೆಯನ್ನೂ ನಿರ್ದಿಷ್ಟ ಸಂಖ್ಯೆಗಳಿಂದ ಹೆಸರಿಸಿದರು.  ಈ ಪೊದೆಗಳಲ್ಲಿ ಮೊದಲೇ ಇದ್ದಿರಬಹುದಾದ ಚಿಮ್ಮಂಡೆಗಳನ್ನೂ, ಜೇಡಗಳನ್ನೂ ಅಲ್ಲಿಂದ ತೆಗೆದು ಹಾಕುವ ಎಚ್ಚರಿಕೆಯನ್ನು ವಹಿಸಿದ್ದರು.

ಈ ಚಿಮ್ಮಂಡೆಗಳು ಸಂಜೆ ಸುಮಾರು ಏಳು ಗಂಟೆಯಿಂದ ರಾತ್ರಿ ಒಂಭತ್ತೂವರೆಯವರೆಗೂ ಚಟುವಟಿಕೆಯಿಂದಿದ್ದು, ಹಾಡುತ್ತಾ, ಸಂಗಾತಿಯನ್ನು ಕೂಡುತ್ತವೆ.  ತೊರ್ಸೇಕರ್‌ ಕೂಡ ಅದೇ ಹೊತ್ತಿಗೆ ಚುರುಕಾದರು. ಆಗ ಅಲ್ಲಿದ್ದ ಪ್ರತಿಯೊಂದು ಚಿಮ್ಮಂಡೆಯ ಸ್ಥಾನ, ಅದು ಹಾಡುತ್ತಿದೆಯೋ ಇಲ್ಲವೋ, ಅದೇ ಗಿಡದ ಮೇಲೆ ಜೇಡ ಇದೆಯೋ, ಇಲ್ಲವೋ ಎಂಬುದನ್ನೆಲ್ಲ ತೊರ್ಸೇಕರ್‌ ಗುರುತಿಸಿಕೊಂಡರು. ಇದನ್ನು ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಮಾಡಿದರು.

ಪಂಜರದೊಳಗೆ ಬಿಟ್ಟ ಚಿಮ್ಮಂಡೆಗಳು ಹಾಗೂ ಜೇಡಗಳ ಸಂಖ್ಯೆಯನ್ನು ಹೆಚ್ಚು ಕಡಿಮೆ ಮಾಡಿ, ವೈಯಕ್ತಿಕವಾಗಿ ಗುರುತಿಸಿದ ಪ್ರತಿಯೊಂದು ಚಿಮ್ಮಂಡೆಯ ನಡವಳಿಕೆಯನ್ನೂ ಬಾಲಕೃಷ್ಣನ್‌ ಮತ್ತು ತೊರ್ಸೇಕರ್‌ ದಾಖಲಿಸಿದರು. ಪರ್ಯಾಯ ಪ್ರಜನನ ತಂತ್ರಗಳ ಅಧ್ಯಯನ ಮತ್ತೊಂದು ಮಜಲನ್ನು ಮುಟ್ಟುವಂತೆ ಮಾಡಿದರು. ಇವರು ಮೂರು ಬಗೆಯ ಪರೀಕ್ಷೆಗಳನ್ನು ಏರ್ಪಡಿಸಿದರು. ಮೊದಲನೆಯದರಲ್ಲಿ ಜೇಡಗಳೇ ಇಲ್ಲದ್ದರಿಂದ ಅವು ಬೇಟೆರಹಿತವಾಗಿದ್ದವು. ಎರಡನೆಯದರಲ್ಲಿ ಹದಿನೈದು ಜೇಡಗಳಿದ್ದದ್ದರಿಂದ ಅವು ಕಡಿಮೆ ಬೇಟೆಯ ನೆಲೆಗಳಾಗಿದ್ದುವು. ಇನ್ನೊಂದರಲ್ಲಿ ನೂರ ಇಪ್ಪತ್ತು ಜೇಡಗಳನ್ನು ಬಿಟ್ಟು ಅತಿಬೇಟೆಯ ನೆಲೆ ಎಂದು ಗುರುತಿಸಿದರು. ಪ್ರತಿ ಪಂಜರದಲ್ಲಿಯೂ ಅವರು ಹದಿನೈದು ಗಂಡು ಹಾಗೂ ಹದಿನೈದು ಹೆಣ್ಣು ಚಿಮ್ಮಂಡೆಗಳನ್ನು ಇರಿಸಿದರು.  ಪಂಜರದೊಳಗೆ ಹೆಚ್ಚೆಚ್ಚು ಜೇಡಗಳು ಇದ್ದಂತೆ, ಪ್ರತಿ ಚಿಮ್ಮಂಡೆಯೂ ಜೇಡಕ್ಕೆ ಎದುರಾಗುವ ಸಾಧ್ಯತೆಗಳು ಹೆಚ್ಚು ಎಂಬುದನ್ನು ಖಾತ್ರಿ ಪಡಿಸಿಕೊಂಡರು.

1. ಉಳ್ಳೋಡಿನಲ್ಲಿ ಸ್ಥಾಪಿಸಿದ ಚಿಮ್ಮಂಡೆ, ಜೇಡಗಳಿರುವ ಪರೀಕ್ಷಾ ಪಂಜರ 2 & 3. ಚಿಮ್ಮಂಡೆಗಳನ್ನು ಗಮನಿಸುತ್ತಿರುವ ರೋಹಿಣಿ ಬಾಲಕೃಷ್ಣನ್‌ ಹಾಗೂ ವಿರಾಜ್‌ ತೋರ್ಸೇಕರ್‌ ; 4. ಮರ ಚಿಮ್ಮಂಡೆ; 5. ಹಸಿರು ಲಿಂಕ್ಸ್‌ ಜೇಡ; 6. ಚಿಮ್ಮಂಡೆಯನ್ನು ಬೇಟೆಯಾಡುತ್ತಿರುವ ಜೇಡ ಚಿತ್ರಗಳು: ವಿರಾಜ್‌ ತೋರ್ಸೇಕರ್‌ ಹಾಗೂ ರೋಹಿಣಿ ಬಾಲಕೃಷ್ಣನ್‌

ಹೀಗೆ ಪಂಜರದಲ್ಲಿರುವ ಎಲ್ಲ ಚಿಮ್ಮಂಡೆಗಳು ಎದುರಿಸುವ ಅಪಾಯದ  ಸರಾಸರಿ ಅಂದಾಜಿನ ಬದಲಿಗೆ, ಅವರು ಪ್ರತಿಯೊಂದು ಚಿಮ್ಮಂಡೆಯೂ ಎದುರಿಸಿದ ಬೇಟೆಯ ಅಪಾಯದ ಸಾಧ್ಯತೆಗಳನ್ನು ಗುರುತಿಸಬಹುದಿತ್ತು. ಅನಂತರ, ವಿಭಿನ್ನ ಬೇಟೆಯ ಅಪಾಯದ ಸಂದರ್ಭದಲ್ಲಿ ಪ್ರತಿಯೊಂದು ಚಿಮ್ಮಂಡೆಯೂ ನಡವಳಿಕೆಯಲ್ಲಿ ತೋರುವ ಬದಲಾವಣೆಗಳನ್ನು ಗಮನಿಸಿದರು.

ನಾವು ನಿರೀಕ್ಷಿಸಿದಂತೆಯೇ, ಕಡಿಮೆ ಅಪಾಯದ ಸಂದರ್ಭದಲ್ಲಿ ಹಾಡುತ್ತಿದ್ದುದಕ್ಕಿಂತ ಅಪಾಯದ ಸಾಧ್ಯತೆಗಳು ಹೆಚ್ಚಿದ್ದಾಗ ಗಂಡುಗಳು ಹಾಡುವುದೂ ಕಡಿಮೆಯಾಗಿತ್ತು. ಇವರ ಈ ಸಂಶೋಧನೆಯು ಗಂಡು ಚಿಮ್ಮಂಡೆಗಳು ತಮಗೆ ಎದುರಾದ ಅಪಾಯದ ಸಾಧ್ಯತೆಗಳಿಗೆ ತಕ್ಕಂತೆ ನಡೆದುಕೊಳ್ಳುತ್ತವೆ ಎನ್ನುವುದು ಸಾಬೀತು ಪಡಿಸಿದೆ.  ಬೇಟೆಯ ಅಪಾಯ ಹೆಚ್ಚಿದಂತೆಲ್ಲ, ಗಂಡು ಚಿಮ್ಮಂಡೆಗಳ ಹಾಡುವ ನಡವಳಿಕೆ ಕಡಿಮೆಯಾಯಿತು. ಹೀಗೆ ಹಾಡನ್ನು ಕಡಿಮೆ ಮಾಡಿದರೆ, ಹೆಣ್ಣುಗಳು ಹಾಡುವ ಗಂಡುಗಳ ಬಳಿ ಹೋಗುವುದರಿಂದ, ಈ  ಗಂಡುಗಳಿಗೆ ಹೆಣ್ಣು ಸಂಗಾತಿಯು ದೊರೆಯುವ ಸಾಧ್ಯತೆಗಳು ಕಡಿಮೆಯಾಗುತ್ತದೆಯಷ್ಟೆ.

ಆದರೆ ಹೀಗೆ ಅತಿ ಬೇಟೆಯ ಅಪಾಯವನ್ನು ಎದುರಿಸುತ್ತಿದ್ದ ಗಂಡುಗಳ ಚಲನವಲನಗಳು ಹೆಚ್ಚಿದ್ದವು. ಇದು ಈ ಅತಿ ಬೇಟೆಯ ಅಪಾಯವನ್ನು ಎದುರಿಸುತ್ತಿದ್ದ ಗಂಡುಗಳು ಇತರೆ ಹಾಡುವ ಗಂಡುಗಳ ಬಳಿಗೆ ಚಲಿಸುತ್ತವೆ ಎಂದು ಸೂಚಿಸುತ್ತದೆ. ಹಾಡುತ್ತಿರುವ ಗಂಡುಗಳು ತಮ್ಮ ಗೂಡಿನಲ್ಲಿ ಜೇಡವಿರುವುದನ್ನು ಗಮನಿಸದೇ ಇರುವುದರಿಂದ, ಇದು ಅವುಗಳಿಗೆ ಎದುರಾಗುವ ಅಪಾಯವನ್ನು ತುಸು ಕಡಿಮೆ ಮಾಡುತ್ತದೆ. ಜೊತೆಗೆ ಈ ಹಾಡುತ್ತಿರುವ ಗಂಡಿನ ಬಳಿ ಸೇರಲು ಬರುವ ಹೆಣ್ಣುಗಳನ್ನು ಅಡ್ಡಗಟ್ಟುವ ಸಾಧ್ಯತೆಗಳನ್ನೂ ಹೆಚ್ಚಿಸುತ್ತದೆ.

ಬೇಟೆಗಾರ ಜೇಡಗಳ ಇರವು ಗಂಡು ಚಿಮ್ಮಂಡೆಗಳು ತಮ್ಮ ಮೂಲ ನಡತೆಯನ್ನು ಬದಲಿಸಿಕೊಳ್ಳುವಂತೆ ಮಾಡುತ್ತದೆ. ಬಾಲಕೃಷ್ಣನ್‌ ಹಾಗೂ ತೋರ್ಸೇಕರ್‌ ಅವರು ಹೆಣ್ಣು ಚಿಮ್ಮಂಡೆಗಳ ನಡವಳಿಕೆಯ ಬಗ್ಗೆಯೂ ಹಲವು ಕುತೂಹಲಕಾರಿ ಸಂಗತಿಗಳನ್ನು ಪತ್ತೆ ಮಾಡಿದ್ದಾರೆ. ಅದು ಬೇರೆಯದೇ ಕಥೆ ಬಿಡಿ. ಈ ಪ್ರಯೋಗ, ಪರೀಕ್ಷೆಗಳು ಚಿಮ್ಮಂಡೆಗಳು ಏನು ಮಾಡಬಲ್ಲವು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅವುಗಳ ನಡವಳಿಕೆಯನ್ನು ನೈಸರ್ಗಿಕ ಆಯ್ಕೆ ಹೇಗೆ ಬದಲಿಸಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಹಾಗೂ ಡಾರ್ವಿನ್‌ ಮತ್ತು ಗಾಡ್ಗೀಳರ ಊಹೆಗಳು ನಿಜವೋ, ಸುಳ್ಳೋ ಎಂದೂ ನಿರೂಪಿಸಬಹುದು.

ಆಂಗ್ಲಮೂಲ: ಪ್ರೊ. ರಾಘವೇಂದ್ರ ಗದಗಕರ್‌, ಕನ್ನಡಾನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್.‌ ಮಂಜುನಾಥ. ಮೂಲ ಲೇಖನ ದಿ ವೈರ್‌ ಸೈನ್ಸ್‌ ಜಾಲಪತ್ರಿಕೆಯಲ್ಲಿ ಪ್ರಕಟವಾಗಿತ್ತು.  

Scroll To Top