Now Reading
ಬೆತ್ತಲೆ ಮಖಮಲ್‌ ಹೆಗ್ಗಣವೆಂಬ ಹೀರೋ

ಬೆತ್ತಲೆ ಮಖಮಲ್‌ ಹೆಗ್ಗಣವೆಂಬ ಹೀರೋ

ಬೆತ್ತಲೆ ಮಖಮಲ್‌ ಹೆಗ್ಗಣ. ಚಿತ್ರ: ಸ್ಮಿತ್ಸೋನಿಯನ್ ರಾಷ್ಟ್ರೀಯ ಮೃಗಾಲಯ, CC BY-NC-ND 2.0

ಸಂಪುಟ 4 ಸಂಚಿಕೆ 164, ಮಾರ್ಚ್‌ 4, 2021

ಜಾಣ ಅರಿಮೆ

ವಿಸ್ಮಯಕ್ಕಿಂತ ವಿಸ್ಮಯ: 13

Kannada translation by Kollegala Sharma

ಸಮಾಜಜೀವಿ ಕೀಟಗಳ ಬಗ್ಗೆ ಸಂಶೋಧನೆ ನಡೆಸುವಾಗ ಈ ಹೆಟೆರೋಸೆಫಾಲಸ್‌ ಗ್ಲೇಬರ್‌ ಎನ್ನುವ ಬೆತ್ತಲೆ ಮಖಮಲ್‌ ಹೆಗ್ಗಣದ ಬಗ್ಗೆ ಕುತೂಹಲ ಮೂಡಿತು. ಕುತೂಹಲ ಏಕೆಂದರೆ  ಹಲವು ವಿಷಯಗಳಲ್ಲಿ ಕಣಜ, ಜೇನ್ನೊಣ ಹಾಗೂ ಇರುವೆಗಳನ್ನು ಸರಿಗಟ್ಟಬಲ್ಲ ಅಪ್ಪಟ ಸಮಾಜಜೀವಿ ಸ್ತನಿ ಅದೊಂದೇ. ಆದ್ದರಿಂದ ಇಂಟರ್‌ನೆಟ್ಟನ್ನು ಜಾಲಾಡುವಾಗ ಸುಪ್ರಸಿದ್ಧ  ಮಕ್ಕಳ ಲೇಖಕ, ಅಮೆರಿಕದ ಮೋ ವಿಲಿಯೆಮ್ಸ್‌ ಬರೆದ ಬೆತ್ತಲೆ ಮಖಮಲ್‌ ಹೆಗ್ಗಣಕ್ಕೆ ದಿರಿಸು ತೊಡಿಸಿದ್ದು ಎನ್ನುವ ಪುಸ್ತಕ ಕಂಡಾಗ ಹೇಗಾಗಿರಬೇಕು ಊಹಿಸಿ. ಈ ಕಥೆಯಲ್ಲಿ ವಿಲ್ಬರ್‌ ಎನ್ನುವ ಒಂದು ಮಖಮಲ್‌ ಹೆಗ್ಗಣ ಉಳಿದವರಿಗಿಂತ ಭಿನ್ನವಾಗಿರಬೇಕು ಎಂದು ತೀರ್ಮಾನಿಸುತ್ತದೆ.  ಅದಕ್ಕಾಗಿ ಅದು ಬಟ್ಟೆ ಧರಿಸುತ್ತದೆ. ಈ ಮೂಲಕ ಲೇಖಕ ತಮಗಿಂತ ಭಿನ್ನರಾದವರ ಜೊತೆಗೆ ಬದುಕುವುದು ಹೇಗೆಂದು ಮಕ್ಕಳಿಗೆ ಕಲಿಸುತ್ತಾರೆ. ಅಷ್ಟೇ ಅಲ್ಲ.

ನಾನು ಇನ್ನೂ ಬೇಕಾದಷ್ಟು ಬೆತ್ತಲೆ ಮಖಮಲ್‌ ಹೆಗ್ಗಣ ಕುರಿತ ಮಕ್ಕಳ ಪುಸ್ತಕಗಳನ್ನು ಕಂಡೆ.  ಕರೇನ್‌ ರಿವರ್ಸ್‌ ಬರೆದ ಜಗವನ್ನುಳಿಸಿದ ಬೆತ್ತಲೆ ಮಖಮಲ್‌ ಹೆಗ್ಗಣ ಎನ್ನುವ ಪುಸ್ತಕದಲ್ಲಿ ಹನ್ನೆರಡು ವರ್ಷ ವಯಸ್ಸಿನ ಹುಡುಗಿಯೊಬ್ಬಳು ಪ್ರಪಂಚವನ್ನು ಉಳಿಸುವುದಕ್ಕಾಗಿ ಬೆತ್ತಲೆ ಮಖಮಲ್‌ ಹೆಗ್ಗಣವಾಗಿ ಬದಲಾಗುತ್ತಾಳೆ. ಹಾಗೆಯೇ ಮಾರ್ಕ್ ಮತ್ತು ಜೂಲಿಯಾ ವ್ಯಾಗ್ಮನ್‌  ಬೆತ್ತಲೆ ಮಖಮಲ್‌ ಹೆಗ್ಗಣದ ಸಾಹಸಗಳು  ಎಂಬ ಪುಸ್ತಕ ಬರೆದಿದ್ದಾರೆ.  ಮೇರಿ ಅಮಾಟೋ ಬರೆದ ಬೆತ್ತಲೆ ಮಖಮಲ್‌ ಹೆಗ್ಗಣದ ಪತ್ರಗಳು ಎನ್ನುವ ಪುಸ್ತಕದಲ್ಲಿ ಏಳನೆ ತರಗತಿಯ ಹುಡುಗಿಯೊಬ್ಬಳು, ಬೆತ್ತಲೆ ಮಖಮಲ್‌ ಹೆಗ್ಗಣಗಳನ್ನು ಸಾಕುವ ಮಹಿಳೆಯ ಜೊತೆಗೆ ತನ್ನ ತಂದೆಯ ವಿವಾಹೇತರ ಪ್ರಣಯದಾಟಗಳಿಗೆ ಅಡ್ಡಗಾಲು ಹಾಕಿ, ತನ್ನ ತಂದೆ ತಾಯಿಯರು ವಿಚ್ಛೇದನವಾಗದಂತೆ ಉಳಿಸುತ್ತಾಳೆ.

ಹಾಗೆಯೇ ಮೈಕ್‌ ಫೋಲೀ ಎಂಬಾತ ಬರೆದ ಪುರುಷರು-ಮಹಿಳೆಯರನ್ನು ಅಣಕವಾಡುವ ಕತ್ತಲ ಪ್ರಪಂಚದಲ್ಲಿ ಬೆತ್ತಲೆ ಮಖಮಲ್‌ ಹೆಗ್ಗಣಗಳು  ಎನ್ನುವ  ವಿಡಂಬನಾತ್ಮಕ​ ಪುಸ್ತಕವೂ ಇದೆ. ಇದು ಮಕ್ಕಳ ಪುಸ್ತಕವಲ್ಲ ಬಿಡಿ. ಇದಲ್ಲದೆ ಇನ್ನೂ ಹಲವು ಮಾಹಿತಿ ಪುಸ್ತಕಗಳಿವೆ. ಎಮಿಲಿ ಹಡ್‌ ಬರೆದ ‌ ಬೆತ್ತಲೆ ಮಖಮಲ್‌ ಹೆಗ್ಗಣದ ವಿಶೇಷ ಹೊಂದಾಣಿಕೆಗಳನ್ನು ಕುರಿತ ನೇಕೆಡ್‌ ಮೋಲ್‌ ರಾಟ್ಸ್‌ ಯುನೀಕ್‌ ಅನಿಮಲ್‌ ಅಡಾಪ್ಟೇಶನ್ಸ್ , ಕ್ರಿಸ್ಟಿನ್‌ ಪೆಟ್ರೀ ಬರೆದ ನೇಕೆಡ್‌ ಮೋಲ್‌ ರಾಟ್ಸ್‌ – ನಾಕ್ಟರ್ನಲ್‌ ಅನಿಮಲ್ಸ್‌ ಮೊದಲಾದವು ಕೂಡ ಸಿಗುತ್ತವೆ.

Naked mole rats cross over into public imagination. Left: Naked mole rat statue, Singapore Zoo. Photo: Jackerbie, CC BY-NC 2.0. Right: Naked mole rat on the merry go round. Photo: ttrygve, CC BY-SA 2.0

ನೇಕೆಡ್‌ ಮೋಲ್‌ ರಾಟ್‌ ಎಂದು ಕರೆಯಲ್ಪಡುವ ಈ ಬೆತ್ತಲೆ ಮಖಮಲ್‌ ಹೆಗ್ಗಣಗಳು ಜನಮನದಲ್ಲಿ. ಕಲ್ಪನೆಯ ರೂಪದಲ್ಲಿ ನೆಲೆಸಿವೆ. ಎಡಕ್ಕೆ: ಸಿಂಗಾಪೂರ್‌ ಪ್ರಾಣಿಸಂಗ್ರಹಾಲಯದಲ್ಲಿರುವ ಬೆತ್ತಲೆ ಮಖಮಲ್‌ ಹೆಗ್ಗಣದ ಪ್ರತಿಮೆ. ಚಿತ್ರ: ಜಾಕರ್ಬಿ, CC BY-NC 2.0 , ಬಲಕ್ಕೆ: ಮೆರ್ರಿ ಗೋ ರೌಂಡ್‌ ಆಡುತ್ತಿರುವ ಬೆತ್ತಲೆ ಮಖಮಲ್‌ ಹೆಗ್ಗಣ.ಚಿತ್ರ: ttrygve, CC BY-SA 2.0

ಈ ಬೆತ್ತಲೆ ಮಖಮಲ್‌ ಹೆಗ್ಗಣ ಎಂದರೇನು? ಆಫ್ರಿಕಾದಲ್ಲಿ ನೆಲದಡಿಯ ಬಿಲಗಳಲ್ಲಿ ವಾಸಿಸುವ, ಕೆಲವರು ಅತ್ಯಂತ ಕುರೂಪಿ ಎಂದು ಅಸಹ್ಯ ಪಡುವ ಈ ಜೀವಿ ಹೀಗೆ ಹೀರೋವಿನಂತೆ ಜನಮಾನಸದಲ್ಲಿ ನೆಲೆಯಾಗಿದ್ದು ಹೇಗೆ? ಈ ಪ್ರಾಣಿ ಹೀಗೆ ಹೀರೋವಾಗಿದ್ದು ಹೇಗೆನ್ನುವುದನ್ನು ತಿಳಿಯಬೇಕೆಂದರೆ ನಾವು ಕಥೆಯನ್ನು ಮೊದಲಿಂದ ಆರಂಭಿಸಬೇಕು. ಸುಸಾನ್‌ ಬಾತ್ರಾಳಿಂದ.

ಸುಸಾನ್‌ ಬಾತ್ರಾ 

ಸುಸಾನ್‌ ವೆಲಿಂಗ್ಟನ್‌ ಟಬ್ಬಿ ಬಾತ್ರ ೧೯೩೭ನೇ ಇಸವಿಯಲ್ಲಿ ನ್ಯೂಯಾರ್ಕಿನಲ್ಲಿ  ಜನಿಸಿದಳು. ಈಕೆ ಅಂದಿನ ಅಮೆರಿಕೆಯ ಅಧ್ಯಕ್ಷರಾಗಿದ್ದ ಹ್ಯಾರಿ ಟ್ರೂಮನ್ನರ ಮಾಧ್ಯಮ ಕಾರ್ಯದರ್ಶಿಯಾಗಿದ್ದ ರೋಜರ್‌ ಡಬ್ಲ್ಯೂ ಟಬ್ಬಿಯವರ ಮಗಳು. ಈಕೆ ತನ್ನ ಕುಟುಂಬದ ಸಂಪ್ರದಾಯವನ್ನು ಮುರಿದು  ಮೀನುಗಾರಿಕೆ, ಬೇಟೆಯಾಡುವುದು ಹಾಗೂ ಕೀಟಗಳನ್ನು ಹಿಡಿಯುವುದರಲ್ಲಿ ಆಸಕ್ತಿ ತೋರಿಸಿ  ಪ್ರಕೃತಿ ವಿಜ್ಞಾನಿಯಾದಳು. ಜೇನ್ನೊಣಗಳ ವಿಷಯದಲ್ಲಿ  ಪ್ರಪಂಚದಲ್ಲಿಯೇ ಅಪ್ರತಿಮ ವಿದ್ವಾಂಸ ಎನ್ನಿಸಿದ್ದ ಚಾರ್ಲಸ್‌ ಮಿಶೆನರ್‌ನ ಬಳಿಯಲ್ಲಿ ಸ್ವೆಟ್‌ ಬೀಸ್‌ ಎನ್ನುವ ಜೇನ್ನೊಣಗಳ ಸಮಾಜಜೀವನವನ್ನು ಡಾಕ್ಟರೇಟಿಗಾಗಿ ಅಧ್ಯಯನ ಮಾಡಿದಳು. ಅನಂತರ ಭಾರತೀಯ ಮೂಲದ ಸಸ್ಯವಿಜ್ಞಾನಿ ಲೇಖ್‌ ಆರ್‌ ಬಾತ್ರರನ್ನು ಮದುವೆಯಾದಳು. ಹೀಗೆ ಹೇಲಿಕ್ಟೈನ್‌ ಜೇನ್ನೊಣಗಳನ್ನು ಅಧ್ಯಯನ ಮಾಡಲು ಅವಳು ಭಾರತಕ್ಕೆ ಬಂದಳು.

ತನ್ನ ಸುದೀರ್ಘವಾದ ವಿದ್ವತ್‌ ಜೀವನದಲ್ಲಿ ಈಕೆ ಪ್ರಕಟಿಸಿದ ಹಲವಾರು ಪ್ರಬಂಧಗಳಲ್ಲಿ, “ಭಾರತದಲ್ಲಿರುವ ಹೈಮೆನಾಪ್ಟೆರಾಗೆ ಸೇರಿದ ಹೇಲೆಕ್ಟೀಡೇ ಕುಟುಂಬದ ಹೇಲಿಕ್ಟೈನ್‌ ಜೇನ್ನೊಣಗಳ ಗೂಡುಗಳು ಹಾಗೂ ನಡತೆ ಕುರಿತು ಇಂಡಿಯನ್ ಜರ್ನಲ್‌ ಆಫ್‌ ಎಂಟಮಾಲಜಿ ಪತ್ರಿಕೆಯಲ್ಲಿ ೧೯೬೬ರಲ್ಲಿ ಈಕೆ ಬರೆದ ಪ್ರಬಂಧ ಅತ್ಯಂತ ಪ್ರಸಿದ್ಧವಾಗಿದೆ. ಪ್ರಕೃತಿ ವಿಜ್ಞಾನದಲ್ಲಿ ಇದು ಒಂದು ಅನುಪಮ ಅಧ್ಯಯನದ ಮಾದರಿಯಾಗಿದೆಯಲ್ಲದೆ, ಯೂಸೋಶಿಯಲ್‌ ಅರ್ಥಾತ್‌ ಅಪ್ಪಟ ಸಮಾಜಜೀವಿ ಎನ್ನುವ ಹೊಸ ಪದವನ್ನೂ ಈಕೆ ಸೃಷ್ಟಿಸಿದ್ದಾಳೆ. ಮಿಶೆನರ್‌ ತಾನು ಬರೆದ ದಿ ಸೋಶಿಯಲ್‌ ಬಿಹೇವಿಯರ್‌ ಆಫ್‌ ದಿ ಬೀಸ್‌ : ಅ ಕಂಪೇರಿಟಿವ್‌ ಸ್ಟಡಿ(೧೯೬೪) ಎನ್ನುವ ಪುಸ್ತಕದಲ್ಲಿ ಈ ಪದವನ್ನು ಜನಪ್ರಿಯಗೊಳಿಸಿದ. ‌೧೯೭೧ರಲ್ಲಿ ಪ್ರಕಟವಾದ ದಿ ಇನ್ಸೆಕ್ಟ್‌ ಸೊಸೈಟೀಸ್.

ಎನ್ನುವ ಪುಸ್ತಕದಲ್ಲಿ ಇದು ಅತ್ಯಂತ ಉತ್ಕೃಷ್ಟವಾದ ಸಾಮಾಜಿಕ ಜೀವನದ ಸ್ವರೂಪ ಎಂದು ಹೇಳಿ ಇ. ಓ. ವಿಲ್ಸನ್‌ ಈ ಪದವನ್ನು ಅಮರಗೊಳಿಸಿದ್ದಾನೆ. ಇ. ಓ. ವಿಲ್ಸನ್‌ ಹೇಳುವ ಹಾಗೆ ಈ ಕೆಳಗಿನ ಮೂರು ಗುಣಗಳನ್ನು ಪ್ರದರ್ಶಿಸುವ ಯಾವುದೇ ಜೀವಿಯನ್ನೂ ಯೂಸೋಶಿಯಲ್‌ ಜೀವಿ ಅಥವಾ ಅಪ್ಪಟ ಸಮಾಜಜೀವಿ ಎನ್ನಬಹುದು.

೧.  ಆ ಸಂತಾನ ಯಾರದ್ದೇ ಆಗಿರಲಿ, ಗುಂಪಿನ ಸದಸ್ಯರೆಲ್ಲರೂ ಒಟ್ಟಾಗಿ ಮರಿಗಳ ಆರೈಕೆ ಮಾಡುತ್ತಿರಬೇಕು.

೨.  ಸಮಾಜದ ಸದಸ್ಯರಲ್ಲಿ ಸಂತಾನೋತ್ಪತ್ತಿ ಮಾಡುವ ರಾಣಿ ಅಥವಾ ರಾಜವರ್ಗವೆಂದೂ, ಬಂಜೆಯಾದ ಕಾರ್ಮಿಕರೆನ್ನುವ ವರ್ಗಗಳು ಇರಬೇಕು.

೩. ಇಡೀ ಸಮಾಜದಲ್ಲಿ ವಿವಿಧ ಸಂತತಿಗಳು ಒಟ್ಟಾಗಿರಬೇಕು. ಈ ಸಂತತಿಗಳು ತಮ್ಮ ತಂದೆ-ತಾಯಂದಿರ ಮಕ್ಕಳನ್ನು ಆರೈಕೆ ಮಾಡುವುದೇ ಮುಂತಾದ ಗೂಡಿನ ಚಟುವಟಿಕೆಗಳಲ್ಲಿ ಪಾಲ್ಗೊಂಡು ನೆರವು ನೀಡುತ್ತಿರಬೇಕು.

ಸುಸಾನ್‌ ಬಾತ್ರ. ಮೂಲ: YouTube

ಇಂತಹ ಯೂಸೋಶಿಯಲ್‌ ಜೀವಿಗಳಲ್ಲಿ ಬಂಜೆ ಕಾರ್ಮಿಕರು ಇವೆ ಎಂದರೆ ಅವು ತಮ್ಮ ಗೂಡಿನ ಒಟ್ಟಾರೆ ಕಲ್ಯಾಣಕ್ಕಾಗಿ ತಮ್ಮ ವೈಯಕ್ತಿಕ ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ತ್ಯಾಗಮಾಡಿವೆ ಎಂದರ್ಥ. ಮೇಲ್ನೋಟಕ್ಕೆ ಇದು ಡಾರ್ವಿನ್ನನ ನಿಸರ್ಗದ ಆಯ್ಕೆ ಎನ್ನುವ ತತ್ವಕ್ಕೆ ವಿರೋಧವೆನ್ನಿಸಬಹುದು. ಈ ವಿರೋಧಾಭಾಸವನ್ನು ಬಂಧುಗಳ ಆಯ್ಕೆ ಎನ್ನುವ ತತ್ವದಿಂದ ವಿವರಿಸಲಾಗಿದೆ. ಇದರ ಪ್ರಕಾರ ತನ್ನದೇ ಸಂತಾನವನ್ನು ಹುಟ್ಟಿಸಿ ಸಮುದಾಯದ ಒಟ್ಟಾರೆ ಉಳಿವಿನ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಇಲ್ಲವೇ, ಸೂಕ್ತ ಸಂಖ್ಯೆಯ ನಿಕಟ ವಂಶಸ್ತರ ಉಳಿವಿಗೆ ನೆರವಾಗಿಯೂ ಸಮುದಾಯದ ಒಟ್ಟಾರೆ ಸಾಮರ್ಥ್ಯ ಹೆಚ್ಚಿಸಬಹುದು. ಇಂತಹ ಯೂಸೋಶಿಯಲ್‌ ಜೀವಿಗಳ ಸಮುದಾಯವು ತ್ಯಾಗ ಎನ್ನುವ ನಡವಳಿಕೆಯನ್ನು ವಿವರಿಸಲು ಹಾಗೂ ಬಂಧುಗಳ ಆಯ್ಕೆ ಎನ್ನುವ ತತ್ವದ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಒಳ್ಳೆಯ ಮಾದರಿಗಳು ಎಂದು ಹಲವು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ತ್ಯಾಗ ಎನ್ನುವುದು ವಿಕಾಸವಾದ ಬಗೆಯನ್ನು ಯೂಸೋಶಿಯಲ್‌ ಸಮಾಜ ವಿಕಾಸವಾದ ರೀತಿಯನ್ನು ಅಧ್ಯಯನ ಮಾಡುವ ಮೂಲಕ  ತಿಳಿಯಬಹುದು.

ಅಂದಿನ ಕಾಲದಲ್ಲಿ ಈ ಯೂಸೋಶಿಯಲ್‌ ಸಮಾಜವೆನ್ನುವುದು ಕೇವಲ ಇರುವೆ, ಜೇನ್ನೊಣ, ಕಣಜ ಹಾಗೂ ಗೆದ್ದಲುಗಳಲ್ಲಿ ಮಾತ್ರ ಇವೆ ಎಂದು ತಿಳಿದಿತ್ತು. ವರ್ಷಗಳು ಕಳೆದ ಹಾಗೆಲ್ಲ, ಈ ಯೂಸೋಶಿಯಲ್‌ ಸಮಾಜವನ್ನು ಗಿಡಹೇನು, ಗಿಡತಿಗಣೆ, ದುಂಬಿಗಳು, ಸೀಗಡಿಗಳ ಹಲವು ಪ್ರಭೇದಗಳಲ್ಲಿ ಗುರುತಿಸಲಾಗಿದೆ. ಆದರೆ ಬೆನ್ನುಮೂಳೆ ಇರುವ ಪ್ರಾಣಿಗಳಲ್ಲಿ ಇಂತಹ ಅಪ್ಪಟ ಸಾಮಾಜಿಕ ಬದುಕು ಕಾಣಿಸಿರಲಿಲ್ಲ. ಸಾಮಾಜಿಕ ಬದುಕಿನ ಈ ಉತ್ಕೃಷ್ಟ ಮಾದರಿ ಕೀಟಗಳಲ್ಲಿ ಯಥೇಚ್ಛವಾಗಿ ಕಂಡು ಬಂದಿದ್ದರೂ, ಮೀನು, ಕಪ್ಪೆ, ಹಕ್ಕಿಗಳು ಹಾಗೂ ಸ್ತನಿಗಳಲ್ಲಿ ಇದ್ದಂತೆ ಕಾಣಲೇ ಇಲ್ಲ. ಇದೊಂದು ವಿಪರ್ಯಾಸ. ನಮ್ಮಂತೆ ಯೂಸೋಶಿಯಲ್‌ ಸಮಾಜದ ವಿಕಾಸವನ್ನು ಅಧ್ಯಯನ ಮಾಡುತ್ತಿದ್ದವರೆಲ್ಲರಿಗೂ ಇದೇಕೆ ಈ ವಿಪರ್ಯಾಸ ಎನ್ನುವ ಪ್ರಶ್ನೆಯನ್ನು ಉತ್ತರಿಸಬೇಕಾಗುತ್ತಿತ್ತು.

ರಿಚರ್ಡ್‌ ಅಲೆಕ್ಸಾಂಡರ್

ಪ್ರಾಣಿವಿಜ್ಞಾನಿ ಹಾಗೂ ಅಮೆರಿಕೆಯ ಮಿಶಿಗನ್‌ ವಿಶ್ವವಿದ್ಯಾನಿಲಯದ ಪ್ರಾಣಿವಿಜ್ಞಾನ ವಸ್ತುಸಂಗ್ರಹಾಲಯದ ನಿರ್ದೇಶಕರಾದ ರಿಚರ್ಡ್ ಅಲೆಕ್ಸಾಂಡರ್‌ ಪ್ರಮುಖ ವಿಕಾಸವಿಜ್ಞಾನಿಗಳಲ್ಲೊಬ್ಬರು. ಮಿಡತೆಗಳ ಜಗತ್ಪ್ರಸಿದ್ಧ ಪರಿಣತ.  ಡಾರ್ವಿನಿಸಂ ಹಾಗೂ ಮಾನವ ವಿಕಾಸ  ಕುರಿತು ಕಾಳಜಿ ಇರುವ ವಿಜ್ಞಾನಿ. ರಿಚರ್ಡ್‌ ಅಲೆಕ್ಸಾಂಡರ್‌ ಬಂಧುಗಳ ಆಯ್ಕೆಯ ತತ್ವದ ಬಗ್ಗೆ ಸಂದೇಹಗಳಿದ್ದ ವಿಜ್ಞಾನಿಗಳ ಪುಟ್ಟ ಗುಂಪೊಂದರ ಪ್ರಮುಖ ಸದಸ್ಯರು. ಅದರಲ್ಲೂ ಈ ತತ್ವವು ಅನುವಂಶೀಯತೆ ಹಾಗೂ ಸ್ವಜನ ಪಕ್ಷಪಾತದಂತಹ ವಿಷಯಗಳ ಬಗ್ಗೆ ಒತ್ತು ಕೊಡುವುದರ ಬಗ್ಗೆ ಬಹಳಷ್ಟು ಅಸಮಾಧಾನ ಇರುವ ವ್ಯಕ್ತಿ. ೧೯೭೪ರಲ್ಲಿ ತಾನು ಬರೆದ ಪ್ರಮುಖ ಪ್ರಬಂಧವೊಂದರಲ್ಲಿ ಅಲೆಕ್ಸಾಂಡರ್‌ ತ್ಯಾಗ ಹಾಗೂ ಯುಸೋಶಿಯಲ್‌ ಸಮಾಜದ ವಿಕಾಸವನ್ನು ಆಯಾ ಜೀವಿಪ್ರಭೇದಗಳು ವಾಸಿಸುವ ಪರಿಸರದ ಸ್ಥಿತಿಗತಿಗಳು ಪ್ರಭಾವಿಸುತ್ತವೆಂದು ವಾದಿಸಿದ್ದರು. ಅದರಲ್ಲಿಯೂ ಸುರಕ್ಷಿತವಾದ ಗೂಡಿನಲ್ಲಿ, ಅತಿ ಒತ್ತೊತ್ತಾಗಿ ದಟ್ಟಣೆಯಲ್ಲಿ ಮಕ್ಕಳು ಬದುಕಿದ್ದರೆ, ಅವರನ್ನು ಬಂಜೆ ಕಾರ್ಮಿಕರುಗಳಾಗುವಂತೆ ಮಾಡುವ ಅವಕಾಶ ತಂದೆ ತಾಯಂದಿರಿಗೆ ಹೆಚ್ಚು ಎಂದು ವಾದಿಸಿದ್ದರು.

Richard Alexander, inventor of a hypothetical eusocial mammal, that later surfaced to be naked mole rat, (Hetercephalus glaber). Photo: Joan Strassmann

ರಿಚರ್ಡ್‌ ಅಲೆಕ್ಸಾಂಡರ್.‌ ಕಾಲ್ಪನಿಕ ಯೂಸೋಶಿಯಲ್‌ ಸ್ತನಿಯನ್ನು ಸೃಷ್ಟಿಸಿದ.  ಬೆತ್ತಲೆ ಮಖಮಲ್‌ ಹೆಗ್ಗಣ, ಹೆಟರ್ಸೆಫಾಲಸ್ ಗ್ಲಾಬರ್ ಇದೇ ರೀತಿ ಇದೆ ಎಂದು ತಿಳಿದದ್ದು ಅನಂತರ. ಚಿತ್ರ: ಜೋನ್‌ ಸ್ಟ್ರಾಸ್ಮನ್

ಅಲೆಕ್ಸಾಂಡರ್‌ ಕಲ್ಪಿಸಿಕೊಂಡಂತಹ ಪರಿಸರದಲ್ಲಿಯೇ ಹಲವು ಸ್ತನಿಗಳು ಬದುಕಿರುತ್ತವಾದರೂ, ಇಂತಹ ಯೂಸೋಶಿಯಲ್‌ ಸಮಾಜಗಳೂ ಕಶೇರುಕಗಳಲ್ಲಿ ಕಾಣದೇ ಇದ್ದದ್ದು ಅಲೆಕ್ಸಾಂಡರರನ್ನು ಚಿಂತೆಗೀಡು ಮಾಡಿತ್ತು. ಈ ಸಮಸ್ಯೆಗೆ ಪರಿಹಾರವಾಗಿ, ಅಲೆಕ್ಸಾಂಡರ್‌ ಒಂದು ಕಾಲ್ಪನಿಕ ಯೂಸೋಶಿಯಲ್‌ ಸ್ತನಿಯನ್ನು  ಸೃಷ್ಟಿಸಿದರು. ಅದು ಯೂಸೋಶಿಯಲ್‌ ಆಗಿ ವಿಕಾಸವಾಗಲು ಕಾರಣವಾದ ಹನ್ನೆರಡು ಅಂಶಗಳನ್ನೂ ಪಟ್ಟಿ ಮಾಡಿದರು. ಚುಟುಕಾಗಿ ಹೇಳುವುದಾದರೆ,  ಅಲೆಕ್ಸಾಂಡರ್‌ ಕಲ್ಪಿಸಿದ ಈ ಯೂಸೋಶಿಯಲ್‌ ಜೀವಿ, “ನೆಲದಡಿಯಲ್ಲಿಯೇ ಜೀವಿಸುವ, ಗೆಡ್ಡೆಗೆಣಸುಗಳನ್ನೇ ತಿಂದು ಬದುಕುವ, ಹಾಗೂ ಬಹುತೇಕ ಬೇಟೆಗಾರ ಪ್ರಾಣಿಗಳ ಕೈಗೆ ನಿಲುಕದಂತಹ, ಬರಡು ಭೂಮಿಯಲ್ಲಿ, ಜೇಡಿ ಮಣ್ಣಿನಲ್ಲಿ ಬದುಕುವ ದಂಶಕದಂತಹ ಸ್ತನಿ”.

ಬೆತ್ತಲೆ ಮಖಮಲ್‌ ಹೆಗ್ಗಣ 

ಅಲೆಕ್ಸಾಂಡರರ ಈ ಸೃಷ್ಟಿಯಿಂದ ಹಾಗೂ ಇದನ್ನು ಜನಪ್ರಿಯಗೊಳಿಸಲು ಆತ ನೀಡಿದ ಭಾಷಣಗಳಿಂದ ಪ್ರೇರಣೆ ಪಡೆದ ಜೆನ್ನಿಫರ್‌ ಜಾರ್ವಿಸ್‌ ಎನ್ನುವ ದಕ್ಷಿಣ ಆಫ್ರಿಕಾದ ಕೇಪ್‌ ಟೌನ್‌ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ಮಾಡುತ್ತಿದ್ದ ಯುವ ಸಂಶೋಧಕಿಯೊಬ್ಬಳು ಇಂತಹ ಯೂಸೋಶೀಯಲ್‌ ಜೀವಿಯ ಜೀವಂತ ಉದಾಹರಣೆಯನ್ನು ನೀಡಿದಳು. ಅದುವೇ ಹೆಟೆರೋಸೆಫಾಲಸ್‌ ಗ್ಲೇಬರ್‌, ಅಥವಾ ಬೆತ್ತಲೆ ಮಖಮಲ್‌ ಹೆಗ್ಗಣ.

ಇದು ಸ್ವಲ್ಪ ದಿನ ಸಂಭ್ರಮಕ್ಕೆಡೆ ಮಾಡಿಕೊಟ್ಟಿತ್ತು. ರಿಚರ್ಡ್‌ ಅಲೆಕ್ಸಾಂಡರನನ್ನೂ ಸೇರಿ ಯುರೋಪ್‌ ಮತ್ತು ಅಮೆರಿಕೆಯ ಹಲವು ಪ್ರಮುಖ ಸಂಶೋಧಕರು ಈ ಹೆಗ್ಗಣವನ್ನು ಗಮನಿಸಲು ಮತ್ತು ಅವನ್ನು ಸೆರೆ ಹಿಡಿಯಲೆಂದು ಕೇಪ್‌ ಟೌನ್‌ ಪಟ್ಟಣಕ್ಕೆ ಧಾಳಿ ಇಟ್ಟರು. ಪ್ಲೆಕ್ಸಿ ಗ್ಲಾಸ್‌ ಪ್ಲಾಸ್ಟಿಕ್ಕಿನಿಂದ ಸುರಂಗಗಳನ್ನು ನಿರ್ಮಿಸಿ, ಪ್ರಯೋಗಾಲಯಗಳಲ್ಲಿ ಇವುಗಳನ್ನು ಸಾಕಲಾಯಿತು. ವ್ಯಾಪಕವಾಗಿ ಅಧ್ಯಯನಗಳು ಆರಂಭವಾದುವು.

ಬೆತ್ತಲೆ ಮಖಮಲ್‌ ಹೆಗ್ಗಣಗಳ ಬಗ್ಗೆ ೧೮೪೨ರಲ್ಲಿ ಮೊತ್ತ ಮೊದಲು ವಿವರಗಳನ್ನು ದಾಖಲಿಸಿದವರು ಜರ್ಮನಿಯ ಜೀವಿವಿಜ್ಞಾನಿ ಎಡ್ವರ್ಡ್‌ ರೂಪೆಲ್.‌ ಇವುಗಳನ್ನು ಬೆತ್ತಲೆ ಎಂದು ಕರೆಯುವುದೇಕೆಂದರೆ ಅವುಗಳ ದೇಹದ ಮೇಲೆ ರೋಮಗಳು ವಿರಳ. ಇವು ಹೆಗ್ಗಣಗಳೂ ಅಲ್ಲ ಇಲಿಗಳೂ ಅಲ್ಲ. ವಾಸ್ತವವಾಗಿ ಬೇಥಿಯೆರ್ಗಿಡೇ ಎನ್ನುವ ಜಾತಿಗೆ ಸೇರಿದ ಜೀವಿಗಳು. ಇದು ಸಹಾರಾದ ಆಚೆಗೆ ಇರುವ ಆಫ್ರಿಕಾದ ನಿವಾಸಿ. ಸಾಮಾನ್ಯವಾಗಿ ಈ ಕುಟುಂಬದ ಜೀವಿಗಳನ್ನು ಆಫ್ರಿಕಾದ ಮಖಮಲ್‌ ಹೆಗ್ಗಣ ಅಥವಾ ಆಫ್ರಿಕನ್‌ ಮೋಲ್‌ ರಾಟ್‌ ಎನ್ನುತ್ತಾರೆ.

೧೯೮೨ರಲ್ಲಿ ಕೊಲೊರಡದ ಬೌಲ್ಡರ್‌ ಪಟ್ಟಣದಲ್ಲಿ ನಡೆದ ಸಮಾಜಜೀವಿ ಕೀಟಗಳ ಅಧ್ಯಯನಗಳ ಅಂತಾರ್ರಾಷ್ಟ್ರೀಯ ಸಂಘಟನೆಯ ಕಾಂಗ್ರೆಸಿನಲ್ಲಿ, ಒಂದು ಸಂಜೆ ರಾತ್ರಿ ಭೋಜನಕ್ಕೆ ಮುನ್ನ ರಿಚರ್ಡ್‌ ಅಲೆಕ್ಸಾಂಡರ್‌ ಈ ಬೆತ್ತಲೆ ಮಖಮಲ್‌ ಹೆಗ್ಗಣಗಳ ಬಗ್ಗೆ  ವಿಶೇಷ ಭಾಷಣವೊಂದನ್ನು ಅದ್ಭುತವಾಗಿ ಮಾಡಿದ್ದನ್ನು ನಾನು ಕೇಳಿದ್ದೇನೆ.  ಇದರಿಂದ ಬೆರಗಾದ ನಾನು ಸ್ವಲ್ಪವೇ ಸಮಯದ ನಂತರ ಆತನನ್ನು ಮಿಶಿಗನ್ನಿನಲ್ಲಿ ಭೇಟಿ ಆಗಲು ಹೋಗಿದ್ದೆ. ಅಲ್ಲಿ ಪ್ರಾಣಿವಿಜ್ಞಾನ ವಿಭಾಗದ ನೆಲಮಾಳಿಗೆಯಲ್ಲಿ ಬೆಳೆಸಿದ್ದ ಈ ಬೆತ್ತಲೆ ಮಖಮಲ್‌ ಹೆಗ್ಗಣಗಳ ಕಾಲೊನಿಗಳನ್ನು ಈತ ನನಗೆ ತೋರಿಸಿದ್ದರು. ಅದೇ ಕಟ್ಟಡದಲ್ಲಿದ್ದ, ಹಾಗೂ ಬಂಧುಗಳ ಆಯ್ಕೆ ತತ್ವವನ್ನು ಪ್ರತಿಪಾದಿಸಿದ್ದ ಡಬ್ಲ್ಯೂ. ಡಿ. ಹ್ಯಾಮಿಲ್ಟನ್‌ ಇವನ್ನು ಕಂಡಾಗ ತನಗೇನನ್ನಿಸಿತು ಎನ್ನುವುದನ್ನು ನಾನು ವಿವರಿಸಬಹುದಾದಕ್ಕಿಂತಲೂ ವರ್ಣಮಯವಾಗಿ, ಹೀಗೆ ವರ್ಣಿಸಿದ್ದಾರೆ.

“ಆ ಬೆಚ್ಚಗಿನ, ತೇವಭರಿತ ಕೊಠಡಿಯ ಹೊಸ್ತಿಲು ದಾಟಿ ಒಳಗೆ ಕಾಲಿಟ್ಟು, ಅಲ್ಲಿದ್ದ ಕೊಳವೆಗಳಲ್ಲಿ ಓಡಾಡುತ್ತಿದ್ದ ಜೀವಿಗಳನ್ನು ಬೆದರಿಸದಿರಲು ತುದಿಗಾಲಲ್ಲಿಯೇ ನಡೆಯುತ್ತಿದ್ದಾಗ, ಪಾತಾಳಕ್ಕೇ ಹೋಗಿಬಿಟ್ಟೆನೇನೋ ಅನಿಸಿಬಿಟ್ಟಿತ್ತು.” ಎಂದು ವಿವರಿಸಿದ್ದಾನೆ.

ಅಮೆರಿಕೆಯ ಸಿಯಾಟಲ್‌ ನ ಪೆಸಿಫಿಕ್‌ ಸೆಂಟರ್‌ ನಲ್ಲಿ ರಚಿಸಿದ ನೆಲದಡಿಯಲ್ಲಿ ಇರುವ ಅವುಗಳ ಸಹಜ ಬಿಲಗಳಂತೆಯೇ ರಚಿಸಿದ ಪ್ಲಾಸ್ಟಿಕ್‌ ಸುರಂಗಗಳಲ್ಲಿ ಇರುವ ಬೆತ್ತಲೆ ಮಖಮಲ್‌ ಹೆಗ್ಗಣ. ಚಿತ್ರ: ರಯಾನ್‌ ಸೋಮ, CC BY 2.0

ಸಾಮಾಜಿಕ ಕೀಟದಂತೆಯೇ ಜೀವಿಸುವ ಸ್ತನಿಯನ್ನು ಊಹಿಸಿಕೊಳ್ಳಿ! ಎಲ್ಲರಿಗೂ ಹುರುಪು ತುಂಬಿತ್ತು. ಮಿಶಿಗನ್‌ ವಿವಿಯಲ್ಲಿ ರಿಚರ್ಡ್‌ ಅಲೆಕ್ಸಾಂಡರ್‌  ಮತ್ತು ಐಲೀನ್‌ ಲೇಸಿ, ದಕ್ಷಿಣ ಆಫ್ರಿಕಾದ ಕೇಪ್‌ ಟೌನಿನಲ್ಲಿ ಜೆನ್ನಿಫರ್‌ ಜಾರ್ವಿಸ್‌, ನ್ಯೂಯಾರ್ಕಿನ ಇಥಾಕಾದಲ್ಲಿರುವ ಕಾರ್ನೆಲ್‌ ವಿವಿಯ ಪಾಲ್‌ ಶೆರ್ಮನ್‌, ಸೈಂಟ್‌ ಲೂಯಿಯ ಯಲ್ಲಿರುವ ಮಿಸೌರಿ ವಿವಿಯ ಸ್ಟಾಂಟನ್‌ ಬ್ರಾಡ್ , ಪ್ರೆಟೋರಿಯಾ ವಿವಿಯ ನೈಗೆಲ್‌ ಬೆನ್ನೆಟ್‌ ಮುಂತಾದವರು ಕೈಗೊಂಡ ಸಂಶೋಧನೆಗಳು ಈ ಬೆತ್ತಲೆ ಮಖಮಲ್‌ ಹೆಗ್ಗಣಗಳ ಸಮಾಜಜೀವನದ ಬಗೆಗಿನ ತಿಳುವಳಿಕೆಯನ್ನು ಹೆಚ್ಚಿಸಿವೆ.

ಈ ಬೆತ್ತಲೆ ಮಖಮಲ್‌ ಹೆಗ್ಗಣದ ಸಮಾಜಜೀವನ ಹೆಚ್ಚೂ ಕಡಿಮೆ ಕೀಟಗಳ ಸಮಾಜಜೀವನವನ್ನೇ ಹೋಲುತ್ತದೆ. ಬೆತ್ತಲೆ ಮಖಮಲ್‌ ಹೆಗ್ಗಣಗಳು ಹತ್ತರಿಂದ ನೂರು ಸದಸ್ಯರಿರುವ ಕಾಲೊನಿಗಳನ್ನು ಕಟ್ಟುತ್ತವೆ. ಕೀನ್ಯಾ, ಸೊಮಾಲಿಯಾ ಹಾಗೂ ಇಥಿಯೋಪಿಯಾದಲ್ಲಿ ಕಾಣುವ ಇವುಗಳಲ್ಲಿ, ಗಂಡು ಹೆಣ್ಣುಗಳೆರಡೂ ನೆಲದಡಿಯಲ್ಲಿ ಸುರಂಗಗಳನ್ನು ತೋಡಿ, ಅಲ್ಲಿರುವ ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತವೆ. ಇವು ಯೂಸೋಶಿಯಲ್‌ ಸಮಾಜದ ಎಲ್ಲ ಲಕ್ಷಣಗಳನ್ನು ತೋರುತ್ತವೆ. ಸಂತತಿಗಳ ಮಿಶ್ರಣ, ಸಂತತಿಗಳ ಆರೈಕೆಯಲ್ಲಿ ಸಹಕಾರ, ಹಾಗೂ ಸಂತಾನೋತ್ಪತ್ತಿಯ ಹೊಣೆಯ ವಿಭಜನೆ ಎನ್ನುವ ಎಲ್ಲ ಲಕ್ಷಣಗಳನ್ನೂ ಇವುಗಳಲ್ಲಿ ನೋಡಬಹುದು. ಇವುಗಳಲ್ಲಿ ಒಂದೋ ಅಥವಾ ಒಂದೆರಡೋ ಗಂಡು, ಹೆಣ್ಣುಗಳಷ್ಟೆ ಸಂತಾನೋತ್ಪತ್ತಿ ಮಾಡುತ್ತವೆ. ಉಳಿದ ಬಂಜೆ ಗಂಡು, ಹೆಣ್ಣುಗಳು ತಮ್ಮ ಕಾಲೊನಿಯನ್ನು ನಿರ್ವಹಿಸುವ ಎಲ್ಲ ಕೆಲಸಗಳನ್ನೂ ಹಂಚಿಕೊಳ್ಳುತ್ತವೆ.

ಹೀಗೆ ಸುರಂಗದೊಳಗೆ ಒಟ್ಟಾದ ಕಸವನ್ನು ಬಿಸಾಡುವುದು, ಆಹಾರವನ್ನು ಸಾಗಿಸುವುದು, ಹೊಸ ಸುರಂಗಗಳನ್ನು ನಿರ್ಮಿಸುವುದು, ಹಾಗೂ ಇರುವೆ ಮತ್ತು ಹಾವುಗಳಿಂದ ತಮ್ಮ ಕಾಲೊನಿಯನ್ನು ರಕ್ಷಿಸುವುದೇ ಮೊದಲಾದ ಕೆಲಸಗಳನ್ನು ಮಾಡುತ್ತವೆ. ಇದಲ್ಲದೆ ತಮ್ಮ ಸಹವಾಸಿಗಳನ್ನು ಆಹಾರಾನ್ವೇಷಣೆಗೆಂದು ಸಹಕಾರ ನೀಡಲು ಆಹ್ವಾನಿಸುತ್ತವೆ. ಸಹವಾಸಿಗಳನ್ನು ಗುರುತಿಸುತ್ತವೆ. ಸ್ವಜನಪಕ್ಷಪಾತ ತೋರುತ್ತವೆ. ಒಳಸಂಬಂಧವೂ ಹೆಚ್ಚು. ರಾಣಿ ಉಳಿದವರನ್ನು ಕಾರ್ಮಿಕರಾಗುವಂತೆ ಪ್ರೇರೇಪಿಸುತ್ತದೆ ಹಾಗೂ ಬಂಧುಗಳನ್ನು ಗುರುತಿಸುವ ಸಾಮರ್ಥ್ಯ, ಹೊರಸಂಬಂಧವನ್ನು ಅರ್ಥಾತ್‌ ಬೇರೆ ಗೂಡಿನಿಂದ ಸಂಗಾತಿಗಳನ್ನು ಆಯ್ದುಕೊಳ್ಳಲು ಬಳಸುತ್ತವೆ ಎಂದು ತೋರುತ್ತದೆ. ಹಲವು ಯೂಸೋಶಿಯಲ್‌ ಕೀಟಗಳ ಹೆಣ್ಣುಗಳಂತೆಯೇ ಈ ಬೆತ್ತಲೆ ಮಖಮಲ್‌ ಹೆಗ್ಗಣಗಳ ಹೆಣ್ಣುಗಳೆಲ್ಲವೂ ರಾಣಿಗಳಾಗುವ ಸಾಮರ್ಥ್ಯವಿದ್ದರೂ, ಹಾಗೆ ಆಗುವ ಅವಕಾಶಗಳು ಅವಕ್ಕೆ ಸಿಕ್ಕುವುದೇ ಕಡಿಮೆ.

ಹೀಗೆ  ಬೇಥಿಯೆರ್ಗಿಡೇ ಎನ್ನುವ ಆಫ್ರಿಕಾದ ಮಖಮಲ್‌ ಹೆಗ್ಗಣಗಳೊಳಗೆ ಒಬ್ಬಂಟಿಯಾಗಿ ಬದುಕುವವುಗಳಿಂದ ಹಿಡಿದು, ಉತ್ಕೃಷ್ಟವಾದ ಯೂಸೋಶಿಯಲ್‌ ವ್ಯವಸ್ಥೆ ಇರುವ ವಿವಿಧ ಬಗೆಯ ಸಮಾಜಗಳನ್ನು ಕಂಡು ಸಂಶೋಧಕರು ಹುಚ್ಚೆದ್ದಿದ್ದಾರೆ ಎನ್ನಬಹುದು. ಇದು ಸ್ತನಿಗಳಲ್ಲಿ ಸಾಮಾಜಿಕ ನಡವಳಿಕೆಯ ವಿಕಾಸವನ್ನು ರೂಪಿಸುವ ಬಲಗಳು ಯಾವುವೆಂಬುದನ್ನು ಅರ್ಥ ಮಾಡಿಕೊಳ್ಳಲು ನೆರವಾಗಿದೆ. ಹಾಗೆಯೇ ಕೆಲವು ಆದಿಮ ರೂಪದ ಯೂಸೋಶಿಯಲ್‌ ವ್ಯವಸ್ಥೆ ಇರುವ ಕೀಟಗಳಲ್ಲಿ ಈಗೀಗ ತೋರ್ಪಡುತ್ತಿರುವಂತೆ, ಅನುವಂಶೀಯ ಸಂಬಂಧಕ್ಕಿಂತಲೂ ಪರಿಸರದ ಪ್ರಭಾವವೇ ಈ ಬೆತ್ತಲೆ ಮಖಮಲ್‌ ಹೆಗ್ಗಣಗಳಲ್ಲಿ ತ್ಯಾಗವೆನ್ನುವ ನಡವಳಿಕೆ ರೂಪುಗೊಳ್ಳಲು ಕಾರಣವೆಂದು ತೋರುತ್ತಿದೆ. ಸಮಾಜಜೀವಿವಿಜ್ಞಾನದಲ್ಲಿ ಹೀಗೆ ಈ ಬೆತ್ತಲೆ ಮಖಮಲ್‌ ಹೆಗ್ಗಣಕ್ಕೆ ಹೀರೋ ಸ್ಥಾನ ಸಿಕ್ಕಿದೆ.

ಜೈವಿಕ-ವೈದ್ಯ ಸಂಶೋಧನೆಯ ಸೇತು. 

ಈ ಬೆತ್ತಲೆ ಮಖಮಲ್‌ ಹೆಗ್ಗಣದ ದೇಹ ಪ್ರಕೃತಿಯಲ್ಲಿ ಹಲವು ಅತಿ ಎನ್ನಿಸುವಂತಹ ಗುಣಗಳಿದ್ದು, ಜೈವಿಕ ಹಾಗೂ ವೈದ್ಯಕೀಯ ಸಂಶೋಧಕರಿಗೆ ಅಚ್ಚರಿ ತಂದಿರುವುದಷ್ಟೆ ಅಲ್ಲ. ಅವರ ಆಸಕ್ತಿಯನ್ನೂ ಕೆರಳಿಸಿವೆ.

ಎಲ್ಲ ಸ್ತನಿಗಳೂ ಕೂಡ ಬಿಸಿರಕ್ತದ ಪ್ರಾಣಿಗಳು. ಇವುಗಳ ದೇಹದ ತಾಪ ಸ್ಥಿರವಾಗಿರತ್ತದೆ. ಅಂದರೆ , ವಾತಾವರಣದಲ್ಲಿನ ಉಷ್ಣತೆಯಲ್ಲಿ ಏನೇ ಏರುಪೇರಾಗಲಿ, ಇವು ತಮ್ಮ ದೇಹದಲ್ಲಿನ ಚಯಾಪಚಯ ಕ್ರಿಯೆಗಳ ಮೂಲಕ ದೇಹದ ಉಷ್ಣತೆಯನ್ನು ಸದಾ ಒಂದೇ ಇರುವಂತೆ ನಿಯಂತ್ರಿಸಬಲ್ಲವು. ಇದಕ್ಕೆ ವ್ಯತಿರಿಕ್ತವಾಗಿ ಶೀತಲ ರಕ್ತದ ಜೀವಿಗಳಾದ ಉರಗಗಳು, ಉಭಯಜೀವಿಗಳು, ಮೀನು ಮತ್ತು ಅಕಶೇರುಕಗಳು ಹೀಗೆ ತಮ್ಮ ದೇಹದ ಉಷ್ಣತೆ ಒಂದೇ ತೆರನಾಗಿರುವಂತೆ ನಿಯಂತ್ರಿಸಲಾರವು.  ಆದರೆ ಸ್ತನಿಯಾದರೂ ಈ ಬೆತ್ತಲೆ ಮಖಮಲ್‌ ಹೆಗ್ಗಣಗಳು ಕೇವಲ ಆಂಶಿಕವಾಗಿ ಬಿಸಿರಕ್ತದ ಪ್ರಾಣಿಗಳು. ಹೀಗಾಗಿ ಇವು, ಶೀತರಕ್ತದ ಜೀವಿಗಳು ಮಾಡುವಂತೆ,  ತಮ್ಮ ದೇಹಕ್ಕೆ ಒಗ್ಗುವಂತಹ ಉಷ್ಣತೆ ಇರುವಂತಹ ಜಾಗಗಳಿಗೆ ತೆರಳುವುದು, ಹಗಲು ಅಥವಾ ರಾತ್ರಿಯ ನಿರ್ದಿಷ್ಟ ಸಮಯಗಳಲ್ಲಿ ಚಟುವಟಿಕೆಗಳನ್ನು ಕಡಿಮೆ ಮಾಡಿಕೊಳ್ಳುವುದೇ ಮೊದಲಾದ  ಉಪಾಯಗಳಿಂದ  ತಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುತ್ತವೆ. ಇವುಗಳ ಚಯಾಪಚಯ ಕ್ರಿಯೆಯ ಗತಿಯೂ ಕೂಡ ವಿರಾಮದ ಸ್ಥಿತಿಯಲ್ಲಿ ಬಹಳ ಕಡಿಮೆ. ಇದಕ್ಕೆ ಇದರ ವಿಶಿಷ್ಟ ಥೈರಾಯಿಡ್‌ ಚಟುವಟಿಕೆಯೇ ಕಾರಣವೆಂದು ತೋರುತ್ತದೆ. ಇವುಗಳ ನೋವು ಸಂವೇದನೆ ಕೂಡ ವಿಶಿಷ್ಟವೇ. ಅತಿ ವಿಷಾಕ್ತವಾದ , ಎಲ್ಲ ಕಶೇರುಕಗಳಲ್ಲಿಯೂ ಉರಿ ಮತ್ತು ನೋವುಂಟು ಮಾಡುವ ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸಿಸಿನ್ನಿನಂತಹ ಆಮ್ಲಗಳನ್ನು ಕೊಟ್ಟಾಗಲೂ ಇವಕ್ಕೆ ನೋವಾಗುವುದಿಲ್ಲ.

ಇವುಗಳ ಮಿದುಳಿನ ಬೆಳೆವಣಿಗೆಯೂ ಅಷ್ಟೆ. ಜೀವನದ ಬಹುಪಾಲು ಅದು ಬೆಳೆಯುತ್ತಲೇ ಇರುತ್ತದೆ. ಹೀಗಾಗಿ ಇವಕ್ಕೆ ನರಕ್ಷಯದಿಂದಾಗುವ ಖಾಯಿಲೆಗಳು ಉಂಟಾಗುವುದೇ ಇಲ್ಲ. ಇವುಗಳ ನರಕೋಶಗಳೂ ಕೂಡ ಆಕ್ಸಿಜನ್‌ ಕೊರತೆ ಅಥವಾ ಆಕ್ಸಿಡೇಶನ್‌ ಕ್ರಿಯೆಗಳನ್ನು ತಾಳಿಕೊಳ್ಳಬಲ್ಲವು. ಅದರಲ್ಲಿಯೂ ಮುಪ್ಪಿನಿಂದುಂಟಾಗುವ ಕ್ಯಾನ್ಸರ್‌, ಡಯಾಬಿಟೀಸ್‌, ಹೃದಯ-ರಕ್ತಪರಿಚಲನೆಯ ಖಾಯಿಲೆಗಳೇ ಅಲ್ಲದೆ, ಹಲವು ಬಗೆಯ ಸೋಂಕುಗಳಿಗೂ ಇವು ರೋಧ ತೋರುತ್ತವೆ ಎನ್ನುವುದು ವಿಶೇ಼ಷ. ಡಿಎನ್‌ಎ, ಆರ್‌ಎನ್‌ಎ, ಹಾಗೂ ಪ್ರೊಟೀನುಗಳಿಗೆ ಘಾಸಿ ಮಾಡಿ ಮುಪ್ಪಿಗೂ, ಸಾವಿಗೂ ಕಾರಣವಾಗುವ ಫ್ರೀ ರೇಡಿಕಲ್‌ ಎನ್ನುವ ಅತಿ ಕ್ರಿಯಾಶೀಲ ಆಕ್ಸಿಜನ್‌ ಅಣುಗಳನ್ನೂ ಇವು ತಾಳಿಕೊಳ್ಳುತ್ತವೆ. ಅಷ್ಟೇ ಅಲ್ಲ. ಇಲಿಗಳಲ್ಲಿ ಆಗುವ ಪ್ರೊಟೀನು ತಯಾರಿಕೆಗಿಂತಲೂ ಹೆಚ್ಚು ಈ ಬೆತ್ತಲೆ ಮಖಮಲ್‌ ಹೆಗ್ಗಣಗಳಲ್ಲಿ ಆಗುತ್ತದೆ. ಇವುಗಳ ಪ್ರೊಟೀನು ತಯಾರಿಕೆ ವ್ಯವಸ್ಥೆಯೇ ಭಿನ್ನವಾಗಿದೆ. ಇದರಲ್ಲಿ ಇರುವ ರೈಬೋಸೋಮು ಎನ್ನುವ ಕೋಶಾಂಗಗಳ ರಚನೆಯೂ ವಿಭಿನ್ನವಾಗಿದೆ. ಈ ಎಲ್ಲ ವಿಶಿಷ್ಟ ಅಂಶಗಳಿಂದಾಗಿ ಪ್ರತಿ ಬೆತ್ತಲೆ ಮಖಮಲ್‌ ಹೆಗ್ಗಣವೂ ಮೂವತ್ತು ವರ್ಷಗಳವರೆಗೂ ಬದುಕಿರಬಲ್ಲುದು. ಅಷ್ಟೇ ಸಣ್ಣ ಗಾತ್ರದ ಇಲಿಗಳು ಕೇವಲ ಮೂರು ವರ್ಷಗಳಷ್ಟೆ ಜೀವಿಸಿರುತ್ತವೆ. ಹೀಗಾಗಿ ವೃದ್ಧಾಪ್ಯದ ಜೀವಿವಿಜ್ಞಾನದ ಅಧ್ಯಯನಕ್ಕೆ ಈ ಪ್ರಾಣಿ ಬಲು ಉಪಯುಕ್ತ ಮಾದರಿಯಾಗಿದೆ.

ಈ ವರ್ಷದ ಜನವರಿಯಲ್ಲಿ ಈ ಬೆತ್ತಲೆ ಮಖಮಲ್‌ ಹೆಗ್ಗಣಗಳು ಮತ್ತೆ ಸುದ್ದಿ ಮಾಡಿದ್ದುವು. ಆಗ ಇವುಗಳ ಪ್ರತಿಯೊಂದು ಕಾಲೊನಿಗೂ ಅದರದ್ದೇ ಆದ ವಿಶಿಷ್ಟ “ಕಾಲೊನಿಗೀತೆ” ಇದೆ ಎಂದು ತಿಳಿಯಿತು. ಈ ಮಖಮಲ್‌ ಹೆಗ್ಗಣಗಳು ಹದಿನೇಳು ವಿಭಿನ್ನ ರೀತಿಯ ಶಬ್ದಗಳಿಂದ ಒಂದಿನ್ನೊಂದರ ಜೊತೆಗೆ ಸಂವಹನ ಮಾಡುತ್ತವೆ. ಇವುಗಳಲ್ಲಿ ಬಲು ಸಾಮಾನ್ಯವಾದದ್ದು ʼಕೀಚ್ʼ ಎನ್ನುವ ಒಂದು ಸದ್ದು. ಇದು ಒಂದು ರೀತಿಯ ಸಂಬೋಧನೆ ಇರಬಹುದು. ಇತ್ತೀಚೆಗೆ ಜರ್ಮನಿಯ ಬರ್ಲಿನ್ನಿನಲ್ಲಿರುವ ಮ್ಯಾಕ್ಸ್‌ ಡೆಲ್ಬ್ರಕ್‌  ಕಣಜೀವಿವಿಜ್ಞಾನ ಕೇಂದ್ರದ ವಿಜ್ಞಾನಿಗಳು ದಕ್ಷಿಣ ಅಮೆರಿಕದ ಪ್ರೆಟೋರಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಜೊತೆಗೂಡಿ, ಎರಡು ವರ್ಷಗಳ ಅವಧಿಯಲ್ಲಿ ನೂರ ಅರವತ್ತಾರು ಬೆತ್ತಲೆ ಮಖಮಲ್‌ ಹೆಗ್ಗಣಗಳು ಮಾಡಿದ ಸುಮಾರು ಮೂವತ್ತಾರು ಸಾವಿರದ ನೂರ ತೊಂಬತ್ತು ಕೀಚ್‌ ಸದ್ದುಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದರು. ಈ ಕೀಚ್‌ ಶಬ್ದಗಳ ತರಂಗ ಸ್ವರೂಪವನ್ನು ಗಮನಿಸಿದಾಗ ಹಾಗೂ, ವಿವಿಧ ಕಾಲೋನಿಗಳ ಸದಸ್ಯರನ್ನು ಬೇರೆ ಕಾಲೊನಿಗಳಲ್ಲಿಟ್ಟು ಬೆಳೆಸುವ ಮೂಲಕ ನಡೆಸಿದ ವಿಶ್ಲೇಷಣೆ, ಪ್ರತಿಯೊಂದು ಕಾಲೋನಿಯಲ್ಲಿಯೂ ಅದಕ್ಕೇ ವಿಶಿಷ್ಟವಾದೊಂದು ಶಬ್ದ ಇರುತ್ತದೆ ಎಂದು ತೋರಿಸಿದೆ. ಈ ನಿರ್ದಿಷ್ಟ ಹಾಡನ್ನು ಕಾಲೊನಿಯ ರಾಣಿ ನಿಯಂತ್ರಿಸುತ್ತದೆ.

ಜನಮಾನಸದಲ್ಲಿ ನೆಲೆ 

ನನಗಂತೂ, ಜನಮಾನಸದಲ್ಲಿ ಇದು ಬಂದಿರುವುದು ಇನ್ನೂ ಅಚ್ಚರಿಯ ವಿಷಯ. ಇದು ಮಕ್ಕಳ ಸಾಹಸ, ರೋಚಕ ಕಥೆಗಳಿಗಷ್ಟೆ ವಸ್ತುವಾಗಷ್ಟೆ ಉಳಿದಿಲ್ಲ. ಹಲವು ಪ್ರಾಣಿಸಂಗ್ರಹಾಲಯಗಳಲ್ಲಿ ಜನಪ್ರಿಯವಾಗಿವೆ. ಮಕ್ಕಳನ್ನು ಉದ್ದೇಶಿಸಿ ನಡೆಯುವ ಕಲೆ ಮತ್ತು ವಿಜ್ಞಾನದ ಕಾರ್ಯಾಗಾರಗಳಲ್ಲಿ ಇವಕ್ಕೆ ಪ್ರಮುಖ ಪಾತ್ರವಿದೆ. ಜೊತೆಗೆ ವಿಸ್ತರಣಾ ಕಾರ್ಯಕ್ರಮಗಳಲ್ಲಿ ಇವು ವಿಜ್ಞಾನ ಹಾಗೂ ಪರಿಸರ ದ ಪ್ರತಿನಿಧಿಗಳಾಗಿವೆ. ಪಾಲ್‌  ಶೆರ್ಮನ್‌ ಮತ್ತು ಸ್ಟಾಂಟನ್‌ ಬ್ರಾಡ್‌ ನಂತಹ ವಿಜ್ಞಾನಿಗಳು ಹಾಗೊ ಡಿಸ್ನಿ ವರ್ಲ್ಡ್‌ ನಿರ್ಮಿಸಿದ ಕಿಮ್‌ ಪಾಸಿಬಲ್‌ ನಂತಹ ಕಾರ್ಟೂನು ಚಿತ್ರಗಳಲ್ಲಿ ಇವುಗಳಿಗೆ ಪಾತ್ರ ನೀಡಿ, ಜನಮಾನಸವನ್ನು ತಲುಪುವಂತೆ ಮಾಡಿವೆ. ಇದಕ್ಕೆ ನಾವು ಕೃತಜ್ಞರಾಗಿರಬೇಕು.

Naked mole rat workshop by Translating Nature, CC BY NC 2.0

ಬೆತ್ತಲೆ ಮಖಮಲ್‌ ಹೆಗ್ಗಣ ಕುರಿತ ಟ್ರಾನ್ಸ್‌ಲೇಟಿಂಗ್‌ ನೇಚರ್‌ ಎನ್ನುವ ಕಾರ್ಯಾಗಾರ. ಚಿತ್ರ: ಜೂಲೀ ಫ್ರೀಮನ್ CC BY NC 2.0

ರಿಚರ್ಡ್‌ ಅಲೆಕ್ಸಾಂಡರ್‌ ಇದರ ಇರವನ್ನು ಊಹಿಸಿದ ನಂತರ , ಹಾಗೂ ಜೆನ್ನಿಫರ್‌ ಜಾರ್ವಿಸ್‌ ಈ ಕಾಲ್ಪನಿಕ ಪ್ರಾಣಿಯನ್ನು ಬೆಳಕಿಗೆ ತಂದ ನಂತರದ ಕಳೆದ ನಲವತ್ತು ವರ್ಷಗಳ ಅಲ್ಪಾವಧಿಯಲ್ಲಿ, ಒಂದಾನೊಂದು ಕಾಲದಲ್ಲಿ ಕುರೂಪಿ, ಅಸಹ್ಯ ಜೀವಿ ಎಂದು ಹೆಸರಾಗಿದ್ದ ಈ ಬೆತ್ತಲೆ ಮಖಮಲ್‌ ಹೆಗ್ಗಣ, ಸಮಾಜಜೀವಿವಿಜ್ಞಾನಿಗಳು, ದೇಹಕ್ರಿಯಾವಿಜ್ಞಾನಿಗಳು, ಕಣಜೀವಿವಿಜ್ಞಾನಿಗಳಿಗೆ, ನರಜೀವಿವಿಜ್ಞಾನಿಗಳಿಗೆ, ವೃದ್ಧಾಪ್ಯತಜ್ಞರಿಗೆ, ಕ್ಯಾನ್ಸರ್‌ ಸಂಶೋಧಕರಿಗೆ, ದೈಹಿಕ ಕ್ರಿಯಾ ದೋಷಗಳನ್ನು ಅಧ್ಯಯನ ಮಾಡುವವರಿಗೆ, ಮಕ್ಕಳ ಲೇಖಕರಿಗೆ ಹಾಗೂ ವಿಜ್ಞಾನ ಸಂವಹಕಾರರಿಗೆ ಹೀರೋ ಎನ್ನಿಸಿಬಿಟ್ಟಿದೆ. ಅದ್ಭುತವಲ್ಲವೇ? 

ಹೀರೋವಿನ ಸಂಕಟ 

ವಿವಿಧ ವಿಷಯಗಳ ವಿಜ್ಞಾನಿಗಳು, ಕಲಾವಿದರು ನೀಡಿರುವ ಈ ಜನಪ್ರಿಯತೆಯಿಂದಾಗಿ ಎಷ್ಟೋ ಪುರಾವೆ ಇಲ್ಲದ ತಪ್ಪು ಕಲ್ಪನೆಗಳೂ ನಮ್ಮ  ಹೀರೋ, ಬೆತ್ತಲೆ ಮಖಮಲ್‌ ಹೆಗ್ಗಣದ ಬಗ್ಗೆ ಇದ್ದರೆ ಅಚ್ಚರಿಯೇನಿಲ್ಲ. ನಾನು ಪದವಿ ಓದುತ್ತಿದ್ದಾಗ ನಮ್ಮ ಪ್ರೊಫೆಸರ್‌ ಒಬ್ಬರು ಪತ್ರಕರ್ತರ ಜೊತೆಗೆ ಮಾತನಾಡುವುದಿಲ್ಲವೆಂದು ಶಪಥ ಮಾಡಿದ್ದರು. ಏಕೆಂದರೆ ತಾವು ಹೇಳಿದ್ದನ್ನೆಲ್ಲ ಪತ್ರಕರ್ತರು ತಪ್ಪಾಗಿ ವರದಿ ಮಾಡುತ್ತಾರೆ ಎಂಬುದು ಅವರ ಅಭಿಪ್ರಾಯ. ಆಗೆಲ್ಲ ನಾನು, ನೀವು ಅವರೊಟ್ಟಿಗೆ ಹೆಚ್ಚೆಚ್ಚು ಮಾತನಾಡಿದರೆ ಅವರು ತಪ್ಪು ವರದಿಮಾಡಲಾರರು ಎಂದು ಹೇಳುತ್ತಿದ್ದೆ.

ನಿಜ. ಅನುವಾದಿಸುವಾಗ ಕೆಲವೊಮ್ಮೆ ಕೆಲವು ಮಾಹಿತಿಗಳು ಕಾಣೆಯಾಗಬಹುದು. ಅಥವಾ ತಿರುಚಿಕೊಳ್ಳಬಹುದು. ಹಾಗೆಂದ ಮಾತ್ರಕ್ಕೆ ನಮ್ಮ ಸಂಶೋಧನೆಗಳೆಲ್ಲವನ್ನೂ ಕಪಾಟಿನಲ್ಲಿ ಭದ್ರವಾಗಿಡುವುದೇ? ಆಗಾಗ್ಗೆ ಈ ಬಗ್ಗೆ ಚರ್ಚಿಸಿ ಇಂತಹ ತಪ್ಪು ಕಲ್ಪನೆಗಳನ್ನೂ, ವರದಿಗಳನ್ನು ಸ್ಪಷ್ಟ ಪಡಿಸುವುದು ವಿಜ್ಞಾನಿಗಳ  ಹೊಣೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಪ್ರಕಟವಾದ ಇಪ್ಪತ್ತೊಂದು ವಿಜ್ಞಾನಿಗಳು ಜೊತೆಗೂಡಿ ಬರೆದ  ಬೆತ್ತಲೆ ಮಖಮಲ್‌ ಹೆಗ್ಗಣದ ಜೀವನ ಕುರಿತ ಆತುರದ ತೀರ್ಮಾನಗಳ ದೀರ್ಘಾಯುಸ್ಸು ಎನ್ನುವ ಪ್ರಬಂಧ ಈ ಜೀವಿಯ ಬಗ್ಗೆ ಇರುವ ಇಪ್ಪತ್ತೆಂಟು ತಪ್ಪು ಕಲ್ಪನೆಗಳನ್ನು ನಿವಾರಿಸುತ್ತದೆ.  ಈ ಲೇಖನ ಬಹುಶಃ ಒಂದು ಅನುಕರಣೀಯ ಮಾದರಿ.

ಕೊನೆಯದಾಗಿ, ಈ ಭೂಮಿಯಲ್ಲಿರುವ ಕೋಟ್ಯಂತರ ಜೀವಿಗಳಲ್ಲಿ ನಾವು ಇನ್ನೂ ಕಾಣದಿರುವ ಇಂತಹ ಎಷ್ಟೋ ಹೀರೋಗಳು ಇರಬಹುದು ಎಂದು ಯೋಚಿಸಬೇಕು . ನಾವು ಅವುಗಳು ಹೀರೋ ಆಗುವುದಿರಲಿ, ಬದುಕುವುದಕ್ಕಾದರೂ ಬಿಡುತ್ತಿದ್ದೇವೆಯೆ?

ಇದು ಇಂದಿನ ಜಾಣ ಅರಿಮೆ. ಆಂಗ್ಲ ಮೂಲ: ಪ್ರೊಫೆಸರ್‌. ರಾಘವೇಂದ್ರ ಗದಗ್‌ಕರ್.‌ ಕನ್ನಡಾನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ; ಡಾ. ಜೆ. ಆರ್.‌ ಮಂಜುನಾಥ. ಲೇಖನದ ಆಂಗ್ಲ ಮೂಲ ದಿ ವೈರ್‌ ಸೈನ್ಸ್‌ ಜಾಲಪತ್ರಿಕೆಯಲ್ಲಿ ಪ್ರಕಟವಾಗಿತ್ತು.

Scroll To Top