Now Reading
ವಿಸ್ಮಯಕ್ಕಿಂತ ವಿಸ್ಮಯ: ಹೇಳಿ ಮಾಡಿಸಿದ ಗಂಡು ಹೆಣ್ಣಿನ ಜಗಳ

ವಿಸ್ಮಯಕ್ಕಿಂತ ವಿಸ್ಮಯ: ಹೇಳಿ ಮಾಡಿಸಿದ ಗಂಡು ಹೆಣ್ಣಿನ ಜಗಳ

ಎನ್.ಜಿ.ಪ್ರಸಾದ್‌ ಹಾಗೂ ಬೋಧಿಸತ್ತ ನಂದಿ. ಮೇಲೆ-ಬಲಗಡೆ: ಪ್ರಯೋಗಶಾಲೆಯಲ್ಲಿ ನೊಣಗಳು (ಚಿತ್ರ: ಐಐಎಸ್‌ಇಆರ್‌ ಮೊಹಾಲಿ, ವಿಕಾಸಜೀವಿವಿಜ್ಞಾನ ವಿಭಾಗ); ಕೆಳಗಡೆ, ಬಲಕ್ಕೆ: ಹೆಣ್ಣು ಹಣ್ಣು ನೊಣ (ಚಿತ್ರ. ಆರ್.‌ ವಿಜಯಾನಂದ್‌, ಐಐಎಸ್‌ಇಆರ್‌ ಮೊಹಾಲಿ)

ಸಂಪುಟ 4 ಸಂಚಿಕೆ  118, ಜನವರಿ 7, 2021

ಜಾಣ ಅರಿಮೆ

ವಿಸ್ಮಯದಲ್ಲಿ ವಿಸ್ಮಯ 9

ವಿಸ್ಮಯಕ್ಕಿಂತ ವಿಸ್ಮಯ:  ಹೇಳಿ ಮಾಡಿಸಿದ ಗಂಡು ಹೆಣ್ಣಿನ ಜಗಳ 

Kannada translation by Kollegala Sharma

ಸುಮಾರು ನೂರು ಕೋಟಿ ವರ್ಷಗಳಿಗೂ ಹಿಂದೆ, ಜೀವಿಗಳು ಲಿಂಗ ಪ್ರಜನನಕ್ಕೆ ಎಳಸಿದಾಗ ಅವು ತಮಗೂ, ಇಂದು ವಿಕಾಸವಾದವನ್ನು ಅಧ್ಯಯನ ಮಾಡುತ್ತಿರುವ ವಿಜ್ಞಾನಿಗಳಿಗೂ, ಎರಡು ಸಮಸ್ಯೆಗಳನ್ನು ಎದುರಿಗಿಟ್ಟವು. ಮೊದಲನೆಯದು ಈ ಲಿಂಗ ಪ್ರಜನನ ಕ್ರಿಯೆಯ ವೆಚ್ಚದ ನಿರ್ಲಿಂಗ ಪ್ರಜನನ ಇರುವ ಜೀವಿಗಳಲ್ಲಿ ಪ್ರತಿಯೊಂದು ಜೀವಿಯೂ ಸಂತಾನಗಳನ್ನು ಹುಟ್ಟಿಸುತ್ತವೆ. ಅದೇ, ಲಿಂಗಪ್ರಜನನ ಇರುವ ಜೀವಿಗಳಲ್ಲಿ ಪ್ರತಿ ಸಂತಾನವನ್ನು ಹುಟ್ಟಿಸಲೂ ಎರಡು ಪೋಷಕರು ಬೇಕು. ಅಂದರೆ ಅರ್ಥ, ಆ ಜೀವಿಯ ಸಮುದಾಯವು ನಿರ್ಲಿಂಗ ಜೀವಿಯ ಸಮುದಾಯವು ಬೆಳೆಯುವುದರದ್ದಕ್ಕಿಂತ ಅರ್ಧದಷ್ಟು ವೇಗದಲ್ಲಿ ಮಾತ್ರ ಹೆಚ್ಚಬಲ್ಲುದು.  ಲಿಂಗ ಪ್ರಜನನ ಎನ್ನುವ ಈ ಕ್ರಿಯೆಯ ದುಪ್ಪಟ್ಟು ವೆಚ್ಚ, ವಿಕಾಸ ವಾದದ ದೃಷ್ಟಿಯಿಂದ ಹೇಗೆ ಲಾಭಕರ ಎನ್ನುವ ಬಗ್ಗೆ ಸಾಕಷ್ಟು ಅಧ್ಯಯನಗಳೂ, ಚರ್ಚೆಗಳೂ ಆಗಿವೆ.

ಎರಡನೆಯ ಸಮಸ್ಯೆ ಈ ಲೈಂಗಿಕ ಪ್ರಜನನದಿಂದ ಉಂಟಾಗುವ ಲಿಂಗಗಳ ನಡುವಣ ಘರ್ಷಣೆ. ಈ ಘರ್ಷಣೆಯಲ್ಲಿಯೂ ಎರಡು ಬಗೆಗಳಿವೆ.  ಮೊದಲನೆಯದು ಏಕೆಂದರೆ ನಮ್ಮನ್ನು ಹೆಣ್ಣುಗಳನ್ನಾಗಿ ಮಾಡುವ ತಳಿಗುಣಗಳ ಬಗೆಗಳೇ, ಗಂಡುಗಳನ್ನು ಮಾಡಲು ಬೇಕಾಗುವುದಿಲ್ಲ. ಹೀಗಾಗಿ ನಿಸರ್ಗ ಗಂಡು ಮತ್ತು ಹೆಣ್ಣುಗಳಲ್ಲಿ ಬೇರೆ, ಬೇರೆ ಬಗೆಯ ಜೀನ್‌ ಗಳನ್ನು ಆಯ್ಕೆ ಮಾಡುತ್ತದೆ.  ಮುಂದಿನ ಸಂತಾನದಲ್ಲಿ ಇವೆರಡೂ ಜೊತೆಯಾಗುವುದರಿಂದ, ಮೊದಲಿನ ಆಯ್ಕೆಯನ್ನು ತಿದ್ದಬೇಕಾಗುತ್ತದೆ.  ಹೀಗೆ ನಾವು ಯಾರೂ ಕೂಡ ನಿಸರ್ಗ ಆಯ್ಕೆ ಮಾಡಬಹುದಾದ ಅತ್ಯುತ್ತಮ ರಲ್ಲ. ಆದರೆ ಅತ್ತ ಉತ್ತಮ ಹೆಣ್ಣೂ ಅಲ್ಲದ, ಇತ್ತ ಉತ್ತಮ ಗಂಡಿನದೂ ಅಲ್ಲದ ಸಂಯೋಗಗಳ ನಡುವೆ ಇರುವ ಇದ್ದುದರಲ್ಲಿ ಉತ್ತಮವೆನ್ನಿಸುವ ಜೀನ್‌ ಗಳ ಫಲ ಎನ್ನಬಹುದು.

ಈ ಎರಡನೆಯ ಸಮಸ್ಯೆಗೆ ಕಾರಣ ಗಂಡು, ಹೆಣ್ಣು ಲಿಂಗಗಳ ನಡುವಣ ಸ್ಪರ್ಧೆ.  ಲಿಂಗಗಳ ನಡುವಣ ಈ ಸ್ಪರ್ಧೆ ಗಂಡು, ಹೆಣ್ಣುಗಳು ಪದೇ, ಪದೇ ಹಲವು ಸಂಗಾತಿಗಳ ಜೊತೆಗೆ ಕೂಡುವಂತಹ ಜೀವಿಗಳಲ್ಲು ಬಲು ಹೆಚ್ಚು.  ಅಂದರೆ ಹೆಣ್ಣಿನಲ್ಲೋ, ಗಂಡಿನಲ್ಲೋ ಇರುವ ಜೀನ್‌ ಗಳಲ್ಲಿ ಅನ್ಯ ಲಿಂಗದ ಜೀವಿಯನ್ನು ಪ್ರಭಾವಿಸುವಂತಹ ಜೀನ್‌ ಗಳ ಬಗ್ಗೆ ನಿಸರ್ಗ ಹೆಚ್ಚು ಒಲವು ತೋರಬೇಕು. ಅದೇ ಅನ್ಯಲಿಂಗದಲ್ಲಿರುವ ಜೀನ್‌ ಗಳಲ್ಲಿ ಈ ಪ್ರಭಾವಗಳನ್ನು ಸಮರ್ಥವಾಗಿ ಎದುರಿಸುವಂತಹ ಜೀನ್‌ ಗಳನ್ನು ನಿಸರ್ಗ ಆಯ್ಕೆ ಮಾಡಬೇಕು. ಇದು ಕೇವಲ ಊಹೆಯಲ್ಲ.  ಎರಡು ಲಿಂಗಗಳ ನಡುವಣ ಈ ಹಗ್ಗ ಜಗ್ಗಾಟದ ಫಲವಾಗಿ ವಿಕಾಸವಾದ  ಕೆಲವು ಭಯಂಕರ ವಿದ್ಯಮಾನಗಳನ್ನು ನಾವು ಕಂಡಿದ್ದೇವೆ.

ತೀವ್ರ ಸ್ಪರ್ಧೆ

ಕೆಲವು ಕೀಟಗಳಲ್ಲಿ ಗಂಡುಗಳು ತಮ್ಮ ವೀರ್ಯದ ಜೊತೆಗೇ ಕೆಲವು ಹಾನಿಕರ ರಾಸಾಯನಿಕಗಳನ್ನೂ ಹೆಣ್ಣುಗಳ ದೇಹದೊಳಗೆ ಸೇರಿಸಿಬಿಡುತ್ತವೆ. ಈ “ಗಂಡುವಿಷ” ಗಳು ಹೆಣ್ಣು ಇಡೀ ಜೀವಮಾನದಲ್ಲಿ ಇಡಬಹುದಾದ ಮೊಟ್ಟೆಗಳೆಲ್ಲವನ್ನೂ ಆಗಲೇ ಇಟ್ಟು ಸಾಯುವಂತೆ ಮಾಡಬಹುದು. ಖಂಡಿತವಾಗಿಯೂ ಇದು ಹೆಣ್ಣಿಗೆ ಒಳ್ಳೆಯದಲ್ಲ. ಆದರೆ ಹೆಣ್ಣಿನ ಎಲ್ಲ ಸಂತಾನಗಳಿಗೊ ಗಂಡೇ ತಂದೆಯಾಗುತ್ತದೆ. ಇಂತಹ ಜೀವಿಗಳಲ್ಲಿ ಹೆಣ್ಣುಗಳು ಈ ಗಂಡುವಿಷಗಳನ್ನು ನಿಷ್ಕ್ರಿಯಗೊಳಿಸುವುದು ಪತ್ತೆಯಾಗಿದೆ. ಅಷ್ಟೇ ಅಲ್ಲ. ಇನ್ನೂ ಕೆಲವು ಹೆಣ್ಣುಗಳು ಇನ್ನೂ ಒಂದು ಹೆಜ್ಜೆ ಮುಂದುವರೆದು ತಮ್ಮ ಸಂಗಾತಿಗಳನ್ನೇ ಹಿಡಿದು ತಿಂದು ಬಿಡುವುದೂ ಉಂಟು.

ಈ ನಾಮೇಲು, ತಾಮೇಲು ಆಟಕ್ಕೆ ಗಂಡು ಹೆಣ್ಣುಗಳೆರಡೂ ವ್ಯಯಿಸುವ ಶಕ್ತಿ ಹಾಗೂ ಸಮಯ ಒಂದು ಹಂತದಲ್ಲಿ ಸಮವಾಗಿರುತ್ತದೆ.  ವಿಕಾಸದ ದೃಷ್ಟಿಯಿಂದ ಎರಡರ ಗುರಿಯೂ ಒಂದೇ ಅಲ್ಲವಾಗಿದ್ದರಿಂದ ಹೀಗಾಗುತ್ತದೆ. ಗಂಡುಹೆಣ್ಣುಗಳೆರಡೂ ಈ ಸಂತಾನ ಸೃಷ್ಟಿಯ ಹೊತ್ತಿಗೆ ಒಟ್ಟಿಗೇ ಇದ್ದರೂ ಅನಂತರ ಬೇರೆ ಸಂಗಾತಿಗಳನ್ನು ಆಯ್ದುಕೊಳ್ಳುವ ಅವಕಾಶ ಅವುಗಳಿಗೆ ಇದ್ದೇ ಇರುತ್ತದಷ್ಟೆ.

ಇದೇ ರೀತಿಯಲ್ಲಿ  ಎಷ್ಟು ಸಂಗಾತಿಗಳು ದೊರಕುತ್ತವೆ ಎನ್ನುವುದು ಸಂಗಾತಿಗಳಿಗಾಗಿ ನಡೆಯುವ ಸ್ಪರ್ಧೆಯ ತೀವ್ರತೆಯನ್ನು ನಿರ್ಧರಿಸಬೇಕು. ಆದರೆ ಈ ವಿಷಯದಲ್ಲಿ ಗಂಡು ಹೆಣ್ಣುಗಳ ನಡುವೆ  ಕುತೂಹಲಕರವಾದ ಅಸಮತೋಲವಿದೆ. ಸಾಮಾನ್ಯವಾಗಿ ಗಂಡುಗಳು ಸಂತಾನಾಭಿವೃದ್ಧಿಗೆ ವ್ಯಯಿಸುವ ಶಕ್ತಿ ಮತ್ತು ಸಮಯಗಳು ಹೆಣ್ಣುಗಳು ವ್ಯಯಿಸುವುದಕ್ಕಿಂತಲೂ ಕಡಿಮೆಯೇ. ಆ ಕಾರಣ ಗಂಡುಗಳು ಹೆಣ್ಣುಗಳಿಗೆ ಸಾಧ್ಯವಾಗುವುದಕ್ಕಿಂತಲೂ ಹೆಚ್ಚು ಸಂತಾನಗಳನ್ನು ಪಡೆಯಬಹುದು. ಹೀಗಾಗಿ ಗಂಡುಗಳೊಳಗೆ ತಮ್ಮ ಸಂಗಾತಿಗಳಿಗಾಗಿ ಬಲು ತೀವ್ರವಾಗಿ ಸ್ಪರ್ಧೆ ಇರುತ್ತದೆ. ಅಂದರೆ ಗಂಡುಗಳೇ ಹೆಚ್ಛು ಇರುವಂಥಹ ಸಮೂಹಗಳಲ್ಲಿ ಗಂಡುಗಳ ನಡುವಣ ಹೆಚ್ಚೆಚ್ಚು ಸ್ಪರ್ಧೆ ಉಂಟು ಮಾಡುವ ಗುಣಗಳಿಗೆ ನಿಸರ್ಗ ಒತ್ತು ಕೊಡುತ್ತದೆ.

ವ್ಯತಿರಿಕ್ತವಾಗಿ, ಹೆಣ್ಣುಗಳೇ ಹೆಚ್ಛಿರುವ ಸಮೂಹದಲ್ಲಿ ಗಂಡುಗಳ ನಡುವೆ ಸ್ಪರ್ಧೆ ಹಾಗೂ ಹೋರಾಟ ಕಡಿಮೆ ಇರುವಂತೆ ನಿಸರ್ಗ ಆಯ್ದುಕೊಳ್ಳುತ್ತದೆ. ಸಹಜವಾಗಿಯೇ ನಿಸರ್ಗದಲ್ಲಿ ಇರುವ ಗಂಡು-ಹೆಣ್ಣುಗಳ ಸಂಖ್ಯೆಯ ಪರಿಮಾಣವನ್ನು ಗಮನಿಸಿದರೆ ಈ ಊಹೆಗೆ ಪುರಾವೆ ಸಿಗುತ್ತದೆ. ಆದರೆ ತಕ್ಷಣದಲ್ಲಿಯೇ ಇಂತಹ ಘರ್ಷಣೆಗಳನ್ನು ಹೆಚ್ಚೂ ಕಡಿಮೆ ಮಾಡಿ, ಅದಕ್ಕೆ ಅನುಗುಣವಾಗಿ ಗಂಡು-ಹೆಣ್ಣುಗಳ ಪರಿಮಾಣವೂ ಬದಲಾಗುತ್ತದೆಯೋ ಎಂದು ಗಮನಿಸಬಹುದಾದರೆ ಅದೆಷ್ಟು ಅದ್ಭುತವಾಗಿದ್ದೀತು? ಹೀಗೊಂದು ಪುರಾವೆಯನ್ನು ನಾವು ನೋಡಲಾದೀತೇ?

ಸಾಮಾನ್ಯವಾಗಿ ವಿಕಾಸದ ಪ್ರಕ್ರಿಯೆ ಬಲು ನಿಧಾನ ಎಂಬ ನಂಬಿಕೆ ಇರುವುದರಿಂದ ಇಂತಹ ಯಾವುದೇ ಊಹೆಯನ್ನೂ ಪ್ರಯೋಗಗಳ ಮೂಲಕ ಪರೀಕ್ಷಿಸುವುದು ಅಸಾಧ್ಯ. ಈ ಬಗ್ಗೆ ಡಾರ್ವಿನ್‌ ಹೀಗೆ ಹೇಳಿದ್ದ:

ನಿಸರ್ಗ ಹಗಲೂ, ರಾತ್ರಿಯೂ, ಪ್ರತಿ ಗಂಟೆಯೂ, ಪ್ರಪಂಚದಲ್ಲಿ ಎಲ್ಲೆಡೆಯೂ, ಅವಕಾಶ ಸಿಕ್ಕಾಗಲೆಲ್ಲ, ಸದ್ದಿಲ್ಲದೆಯೇ, ಯಾರಿಗೂ ಗೊತ್ತಾಗದ ಹಾಗೆ ಸಣ್ಣ ಪುಟ್ಟ ವ್ಯತ್ಯಾಸಗಳನ್ನೂ ಗಮನಿಸಿ, ಅವುಗಳಲ್ಲಿ ಕೆಟ್ಟವನ್ನು ಬಿಸಾಡಿ, ಒಳ್ಳೆಯದನ್ನೆಲ್ಲ ಕೂಡಿಸುತ್ತಾ, ಕಾಪಾಡುತ್ತಾ ಇರುತ್ತದೆ ಎಂದು ಹೇಳಬಹುದು ಎಂದಿದ್ದ.

ಇಷ್ಟು ಕಾವ್ಯಮಯವಾಗಿ ನಿಸರ್ಗದ ಆಯ್ಕೆಯನ್ನು ವಿವರಿಸಿದ ಮೇಲೆ ಆತನದೊಂದು ದೂರೂ ಇತ್ತು. “ಕಾಲನ ನಡೆ ಯುಗಗಳನ್ನು ಕಳೆಯುವವರೆಗೂ ನಮಗೆ ಈ ಬದಲಾವಣೆಗಳು ಆಗುತ್ತಿರುವುದು ಕಾಣುವುದೇ ಇಲ್ಲ.  ಭೂಮಿಯ ಚರಿತ್ರೆಯ ಭೂತಕಾಲವನ್ನು ನೋಡುವ ನಮ್ಮ ದೃಷ್ಟಿ ಎಷ್ಟು ಅಪಕ್ವವಾಗಿದೆ ಎಂದರೆ ನಾವು ಕೇವಲ ಇಂದಿರುವ ಜೀವಿಗಳ ಸ್ವರೂಪ ಹಿಂದೆ ಇದ್ದುದಕ್ಕಿಂತ ಬೇರೆ ಎಂಬುದನ್ನಷ್ಟೆ ನಾವು ಕಾಣಬಲ್ಲೆವು.” ಎಂದಿದ್ದ.

The black-peppered moth. Top: peppered form; bottom: melanic form. Photo: Chiswick Chap/Wikimedia Commons, CC BY-SA 2.0

(ಪತಂಗಗಳೂ, ಗುಬ್ಬಿಗಳೂ ಕರಿ ಚುಕ್ಕೆಯ ಪತಂಗ. ಮೇಲೆ: ಚುಕ್ಕೆಗಳಿರುವ ಪತಂಗ, ಕೆಳಗೆ: ಕಪ್ಪು ಬಣ್ಣದ ಪತಂಗ (ಚಿತ್ರ: ಚಿಸ್ವಿಕ್‌ ಚಾಪ್/‌ ವೈಕಿಮೀಡಿಯಾ ಕಾಮನ್ಸ್)‌ CC BY-SA 2.0)

ಸುದೈವದಿಂದ ಇದಕ್ಕೆ ಕೆಲವು  ಸುಪ್ರಸಿದ್ಧ ಅಪವಾದಗಳೂ ಇವೆ. ಉದಾಹರಣೆಗೆ, ಬಿಸ್ಟನ್‌ ಬೆಟ್ಯುಲೇರಿಯಾ ಎನ್ನುವ ಚುಕ್ಕೆ ಚುಕ್ಕೆ ಪತಂಗ. ಹೆಸರೇ ಹೇಳುವ ಹಾಗೆ ಇದರ ರೆಕ್ಕೆಯ ಮೇಲೆಲ್ಲ ಬಿಳಿ ಹಾಗೂ ಕಪ್ಪು ಬಣ್ಣದ ಚುಕ್ಕೆಗಳಿವೆ.  ಕಲ್ಲುಹೂವುಗಳಿರುವ ಮರಗಳ ತೊಗಟೆಯ ಮೇಲೆ ಕುಳಿತಾಗ ಈ ಬಣ್ಣದಿಂದಾಗಿ ಅವು ಗೋಚರವಾಗುವುದಿಲ್ಲ. ಆದರೆ ಕೆಲವೊಮ್ಮೆ ಸಂಪೂರ್ಣ ಕಪ್ಪಾಗಿರುವಂತಹ ಕರಿಬಣ್ಣದ, ಮೆಲಾನಿಕ್‌ ಎನ್ನುವ ರೂಪವೂ ತಾಳಬಹುದು. ಅವನ್ನು ಹಕ್ಕಿಗಳು ತಕ್ಷಣವೇ ಪತ್ತೆ ಮಾಡಿ, ಹಿಡಿದು ನುಂಗಿಬಿಡುತ್ತವೆ.

ಇಂಗ್ಲೆಂಡು ಮತ್ತು ಅಮೆರಿಕೆಯ ಪ್ರಕೃತಿ ವಿಜ್ಞಾನಿಗಳು ನಿಸರ್ಗದ ಆಯ್ಕೆಗೆ ಒಳಗಾದ ಈ ಚುಕ್ಕೆ ಪತಂಗ ಹಾಗೂ ಕಪ್ಪು ಪತಂಗಗಳ ವಿಧಿಯನ್ನು ಗಮನಿಸಿದ್ದಾರೆ. ಕೈಗಾರಿಕೀಕರಣ ಆಗುತ್ತಿದ್ದಂತೆ, ಹೆಚ್ಚೆಚ್ಚು ಕಾರ್ಖಾನೆಗಳು ಹೊಗೆ ಉಗುಳಲು ಆರಂಭಿಸಿದವು. ಈ ಹೊಗೆ ಮರದ ತೊಗಟೆಯ ಮೇಲಿದ್ದ ಕಲ್ಲುಹೂಗಳನ್ನು ಕೊಂದು, ತೊಗಟೆಯನ್ನು ಕಪ್ಪಾಗಿಸಿಬಿಟ್ಟಿತ್ತು. ಹೀಗೆ ತನ್ನ ರಕ್ಷಣೆಯನ್ನು ಕಳೆದುಕೊಂಡ ಚುಕ್ಕೆ ಪತಂಗದ ಸಂಖ್ಯೆ ಇಳಿಯಿತು. ಅದೇ ವೇಳೆ ಕಪ್ಪು ಪತಂಗಗಳು ಮರೆಮಾಚಿಕೊಳ್ಳಬಹುದಾದ್ದರಿಂದ ಸಂಖ್ಯೆಯಲ್ಲಿ ಹೆಚ್ಚಿದುವು.

ತದನಂತರ, ಮಾಲಿನ್ಯ ನಿಯಂತ್ರಣ ಕಾಯಿದೆಗಳು ಜಾರಿಯಾಗಿ, ಕಲ್ಲುಹೂಗಳು ಮತ್ತೆ ಬೆಳೆಯಲಾರಂಭಿಸಿದಾಗ ಈ ಚುಕ್ಕೆ ಪತಂಗಗಳು ಮರಳಿದ್ದನ್ನು ಪ್ರಕೃತಿ ವಿಜ್ಞಾನಿಗಳು ದಾಖಲಿಸಿದ್ದಾರೆ. ಇದನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ದಾಖಲಿಸಿದ ಇಂಗ್ಲೆಂಡಿನ ವೈದ್ಯ, ಪ್ರಕೃತಿ ವಿಜ್ಞಾನಿ ಬರ್ನಾರ್ಡ್‌ ಕೆಟಲ್‌ ವೆಲ್‌, “ನಿಸರ್ಗದಲ್ಲಿ ವಿಕಾಸದಿಂದಾಗಿ ಆದ ಬದಲಾವಣೆಯನ್ನು ಮಾನವನಿಗೆ ತೋರಿಸುವ ಹೊಣೆ ಬೇರಾವ ಜೀವಿಗಳಿಗಿಂತಲೂ ಚಿಟ್ಟೆ, ಪತಂಗಗಳಿರುವ ಕೀಟಗಳ ಗುಂಪು ಲೆಪಿಡಾಪ್ಟೆರಾದ ಹೆಗಲೇರಿದೆ.”

ಇಂತದ್ದೇ ಇನ್ನೊಂದು ಸುಪ್ರಸಿದ್ಧ ಉದಾಹರಣೆ ಎಂದರೆ ಪ್ರಿನ್ಸ್ಟನ್‌ ವಿಶ್ವವಿದ್ಯಾನಿಲಯದ ಪೀಟರ್‌ ಮತ್ತು ರೋಸ್‌ಮೇರಿ ಗ್ರಾಂಟ್‌ ದಂಪತಿ, ಗಲಪಾಗೋಸ್‌ ದ್ವೀಪಗಳಲ್ಲಿ ಇರುವ ಡಾರ್ವಿನ್ನನ ಫಿಂಚ್‌ ಎನ್ನುವ ಹಕ್ಕಿಗಳ ಮೇಲೆ ನಲವತ್ತು ವರ್ಷಗಳ ಕಾಲ ನಡೆಸಿದ ಅಧ್ಯಯನ. ಈ ದ್ವೀಪಗಳಿಗೆ ವಲಸೆ ಹೋದ ಒಂದೇ ಒಂದು ಪೂರ್ವಜನಿಂದ ಹದಿಮೂರು ಪ್ರಬೇಧಗಳ ಹಕ್ಕಿಗಳು ವಿಕಾಸವಾಗಿವೆ ಎಂದು ಅವರು ತೋರಿಸಿದ್ದಾರೆ. ಆದರೆ ಇಂದಿನ ನಮ್ಮ ಚರ್ಚೆಗೆ ಮುಖ್ಯವಾಗಿದ್ದು ಡಾಫ್ನೆ ಮೇಜರ್‌ ಎನ್ನುವ ದ್ವೀಪದಲ್ಲಿ ಇರುವ ಜಿಯೋಸ್ಪೈಜಾ ಫಾರ್ಟಿಸ್‌ ಎನ್ನುವ ಮಧ್ಯಮ ಗಾತ್ರದ ನೆಲಹಕ್ಕಿಯ ಬಗ್ಗೆ ಅವರು ನಡೆಸಿದ ಅಧ್ಯಯನದ ವಿವರ. ಚುಕ್ಕೆ ಪತಂಗದ ಕಥೆಯಂತೆಯೇ ಇರುವ ಈ ಫಿಂಚ್‌ ಹಕ್ಕಿಗಳ ಸಮೂಹದ ಮೇಲೆ ನಿಸರ್ಗದ ಆಯ್ಕೆಯ ಪ್ರಭಾವ ಇನ್ನೂ ಕಡಿಮೆ ಕಾಲದಲ್ಲಿ ನಡೆದಿದೆ ಎಂದು ಗ್ರಾಂಟ್‌ ದಾಖಲಿಸಿದ್ದಾರೆ.  ಕಣ್ಣ ಮುಂದೆಯೇ ಸಣ್ಣ ಕೊಕ್ಕಿನ ಫಿಂಚ್‌ ಹಕ್ಕಿಗಳ ಸಮೂಹವು ದಪ್ಪ ಕೊಕ್ಕಿನ ಹಕ್ಕಿಗಳಾಗಿ ಅನಂತರ ಮರಳಿ ಸಣ್ಣಕೊಕ್ಕಿನವುಗಳಾಗಿದ್ದನ್ನು ಇವರು ದಾಖಲಿಸಿದ್ದಾರೆ. ಇಲ್ಲಿ ತಿನ್ನಲು ಯೋಗ್ಯವಾದ ಬೀಜ ಸಿಗದೇ ಹೋದದ್ದೇ ನಿಸರ್ಗದ ಆಯ್ಕೆಯ ಸಾಧನವಾಗಿತ್ತು.  ದ್ವೀಪಕ್ಕೆ ಬಡಿದ ಕ್ಷಾಮವೊಂದು ಸಣ್ಣ ಬೀಜಗಳು ದೊರೆಯದಂತೆ ಮಾಡಿ, ಸಣ್ಣ ಕೊಕ್ಕಿನ ಹಕ್ಕಿಗಳೆಲ್ಲವೂ ನಾಶವಾಗುವಂತೆ ಮಾಡಿತ್ತು. ಉಳಿದ ಕೆಲವೇ ದೊಡ್ಡಕೊಕ್ಕಿನ ಹಕ್ಕಿಗಳು ಮರಿ ಮಾಡಿ ವಂಶ ಬೆಳೆಸಿದುವು. ಕೆಲವು ವರ್ಷಗಳ ನಂತರ ಬಂದ ಧಾರಾಕಾರ ಮಳೆ ದೊಡ್ಡ ಬೀಜಗಳನ್ನು ನಾಶಗೊಳಿಸಿ, ದೊಡ್ಡ ಕೊಕ್ಕಿನ ಹಕ್ಕಿಗಳನ್ನು ಕೊಂದಿತು. ಸಣ್ಣ ಕೊಕ್ಕಿನ ಹಕ್ಕಿಗಳಷ್ಟೆ ವಂಶ ಮುಂದುವರೆಸಲು ಉಳಿದವು.

ಈ ಅಮೋಘ ಸಂಶೋಧನೆಯ ಬಗ್ಗೆ ತಿಳಿಯಬೇಕೆನ್ನುವವರು ನೇರವಾಗಿ ಗ್ರಾಂಟ್‌ ರವರಿಂದಲೋ, ಅದರ ಬಗ್ಗೆ ಬರೆದ ಪುಲಿಟ್ಜರ್‌ ಪ್ರಶಸ್ತಿ ವಿಜೇತ ಪತ್ರಿಕಾ ವರದಿಯಿದಲೋ, ಅಥವಾ ಸುಪ್ರಸಿದ್ಧ ಸಂಶೋಧಕ ಹಾಗೂ ಲೇಖಕ ಸೀನ್‌ ಬಿ ಕ್ಯಾರಲ್‌ ಅವರ ನಿರ್ದೇಶನದಲ್ಲಿ ಸಿದ್ಧವಾದ ಡಾಕ್ಯುಮೆಂಟರಿ ಚಿತ್ರವನ್ನೋ ನೋಡಿ ಖುಷಿ ಪಡಬಹುದು.

ಹೇಳಿದಂತೆ ಆಗುವ ವಿಕಾಸ

N.G. Prasad and his fly research group. Photo: Evolutionary Biology Lab/IISER Mohali

ನೊಣ ಸಂಶೋದಕ ಎನ್‌ ಜಿ ಪ್ರಸಾದ್‌ ಮತ್ತು ಅವರ ತಂಡ. (ಚಿತ್ರ. ವಿಕಾಸವಿಜ್ಞಾನ ವಿಭಾಗ, ಐಐಎಸ್‌ಇಆರ್‌, ಮೊಹಾಲಿ)

ಇವು ಎಷ್ಟೇ ಸುಸ್ಪಷ್ಟ ಎನಿಸಿದರೂ ಶೀಘ್ರಗತಿಯ ವಿಕಾಸವನ್ನು ಗಮನಿಸಲು ಅನುವು ಮಾಡಿಕೊಡುವಂತಹ ಇಂತಹ ಉದಾಹರಣೆಗಳು ಬಲು ಕಡಿಮೆ ಹಾಗೂ ಅಪರೂಪ. ಜೊತೆಗೆ ಸಂಶೋಧಕರಿಗೆ ಈ ವಿಕಾಸದ ತೀವ್ರತೆಯನ್ನಾಗಲಿ, ಗುರಿಯನ್ನಾಗಲಿ ನಿಯಂತ್ರಿಸುವ ಅವಕಾಶಗಳು ಕಡಿಮೆ. ಅಂದರೆ ನಿಸರ್ಗದಲ್ಲಿರುವ  ವಿಕಾಸವು ನಮ್ಮಿಚ್ಚೆಗನುಗುಣವಾಗಿ ಇರುವುದಿಲ್ಲ. ಆದರೆ ನಾವೀಗ ಚರ್ಚಿಸುತ್ತಿರುವ ವಿಕಾಸ ವಿಜ್ಞಾನದ ವಿಚಾರಗಳನ್ನು ಪರೀಕ್ಷಿಸಬೇಕೆಂದರೆ ಈ ನಿಯಂತ್ರಣ ಬೇಕೇ ಬೇಕು.

ಹೀಗೆ ವಿಕಾಸವನ್ನು ನಮ್ಮ ಇಚ್ಛಾನುವರ್ತಿಯಾಗಿಸಿ, ನಿಸರ್ಗದ ಆಯ್ಕೆ ಹೇಗಿರುತ್ತದೆ ಎನ್ನುವುದನ್ನು ನೋಡಲು ಒಂದು ಮಾರ್ಗವಿದೆ. ಸಂಶೋಧಕನ ಜೀವಿತಕಾಲದೊಳಗೆ ಯಾಕೆ, ಒಬ್ಬ ಪಿಎಚ್‌ಡಿ ಮಾಡುವ ಅವಧಿಯೊಳಗೇ ನಿಸರ್ಗದ ಆಯ್ಕೆಯನ್ನು ನಾವು ನೋಡಬಹುದು. ಇದಕ್ಕೆ ಬೇಕಾಗಿದ್ದು, ಸ್ವಲ್ಪ ಚೌಕಟ್ಟನ್ನು ಮೀರಿದ ಯೋಚನೆ.

ನಾವು ಇಂದು ಕಾಣುವ ಹಿಂದೆ ನಡೆದ ವಿಕಾಸದ ಹಾದಿಯಲ್ಲಿ ನಿಸರ್ಗದ ಆಯ್ಕೆಯ ಪರಿಣಾಮಗಳನ್ನು ವಿವರಿಸಲು ಡಾರ್ವಿನ್‌ ಕೃತಕ ಆಯ್ಕೆಯಿಂದ ಸ್ಪೂರ್ತಿ ಪಡೆದಿದ್ದ. ೧೮೫೯ ರಲ್ಲಿ ಈ ಬಗ್ಗೆ ತಾನು ಬರೆದ ‘ಆರಿಜಿನ್‌ ಆಫ್‌ ಸ್ಪೀಸೀಸ್‌’ ಪುಸ್ತಕದಲ್ಲಿ ಪಶುಸಂಗೋಪಕರು ಹಾಗೂ ತೋಟಗಾರಿಕೆಯವರು ಮೂಲ ಸಮೂಹದಿಂದ ನಿರ್ದಿಷ್ಟ ಗುಣಗಳಿರುವ ತಳಿಗಳನ್ನಷ್ಟೆ ಆಯ್ದು, ಬೆಳೆಸುವ ಮೂಲಕ ಬೇಕಾದ ಗುಣವಿರುವವುಗಳನ್ನು ಹೇಗೆ ಪಡೆಯುತ್ತಾರೆ ಎನ್ನುವುದರ ಬಗ್ಗೆ ಒಂದು ಅಧ್ಯಾಯವನ್ನೇ ಮೀಸಲಾಗಿಟ್ಟಿದ್ದ. ಪ್ರತಿ ಸಂತತಿಯಲ್ಲಿಯೂ ಸಂತಾನಾಭಿವೃದ್ಧಿಗೆ ನಿಶ್ಚಿತ ಗುಣವಿರುವ ತಂದೆತಾಯಿಗಳನ್ನೇ ಆಯ್ದುಕೊಂಡು, ಉಳಿದವನ್ನು ಬಿಟ್ಟುಬಿಡುವುದೇ ಈ ಉಪಾಯವಾಗಿತ್ತು.

ತಮ್ಮದೇ ನಿಯಂತ್ರಣದಲ್ಲಿ, ಪ್ರಯೋಗಾಲಯದೊಳಗೆ, ಪಶುಸಂಗೋಪಕರು ಹಾಗೂ ತೋಟಗಾರಿಕೆಯವರಂತೆ, ನಿರ್ದಿಷ್ಟ ಬಗೆಯ ಆಯ್ಕೆಯ ಒತ್ತಡವನ್ನು ಹೇರಲು ವಿಜ್ಞಾನಿಗಳು ಕಲಿತದ್ದು ಡಾರ್ವಿನ್ನನ ಈ ಪುಸ್ತಕ ಪ್ರಕಟವಾಗಿ ನೂರು ವರ್ಷಗಳು ಕಳೆದ ಮೇಲೆ ಅಷ್ಟೆ. ಆದರೆ ಒಮ್ಮೆ ಈ ಉಪಾಯ ಕೈಗೆಟುಕಿದ ಮೇಲೆ ಉಳಿದದ್ದು ಕೇವಲ ಮುನ್ನಡೆಯಷ್ಟೆ. ಪ್ರಯೋಗಾಲಯದಲ್ಲಿ ಪ್ರಾಯೋಗಿಕವಾಗಿ ವಿಕಾಸಕ್ರಿಯೆಯ ಅಧ್ಯಯನ ಈಗ ವಿಕಾಸದ ಅಧ್ಯಯನಕ್ಕೆ ಒಂದು ಪ್ರಬಲ ಸಾಧನವಾಗಿದೆ. ಇದು ನಾವು ತರ್ಕಿಸಿದ ವಿಕಾಸದ ನಡೆಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆಯಷ್ಟೆ ಅಲ್ಲ, ಹಲವು ವಿಸ್ಮಯಗಳನ್ನೂ ಮುಂದಿಡುತ್ತದೆ. ನಾವು ನಿರೀಕ್ಷಿಸಿದ್ದಕ್ಕಿಂತಲೂ ಅಧಿಕವಾದ ಗುಣಗಳು ವಿಕಾಸವಾಗುತ್ತವೆ. ಇವನ್ನು ಪೂರಕ ಪ್ರತಿಫಲ ಅಥವಾ ಕೊರ್ರಿಲೇಟೆಡ್‌ ರೆಸ್ಪಾನ್ಸ್‌ ಎಂದು ವಿಕಾಸವಿಜ್ಞಾನಿಗಳು ಹೆಸರಿಸಿದ್ದಾರೆ. ಪ್ರಯೋಗಾಲಯದಲ್ಲಿ ನಡೆಸುವ ಇಂತಹ ಪರೀಕ್ಷೆಗಳು ವಿಕಾಸ ಹೇಗೆ ಸಾಗುತ್ತದೆಂದು ನಾವು ಮಾಡಿದ ಊಹೆಗಳು ಸಂಪೂರ್ಣ ತಪ್ಪೂ ಇರಬಹುದು ಎನ್ನುವ ಅರಿವನ್ನೂ ತರಬಹುದು.

ಮಿಶಿಗನ್‌ ಸ್ಟೇಟ್‌ ವಿಶ್ವವಿದ್ಯಾನಿಲಯದ ರಿಚರ್ಡ್‌ ಲೆನ್ಸ್ಕಿ ಈ ರೀತಿಯಲ್ಲಿ  ಬ್ಯಾಕ್ಟೀರಿಯಾಗಳ ಸಾವಿರಾರು ಸಂತತಿಗಳನ್ನು ವಿಕಾಸದ ಒತ್ತಡಕ್ಕೆ ಒಳಪಡಿಸುವುದರಲ್ಲಿ ಸುಪ್ರಸಿದ್ಧ. ದುರದೃಷ್ಟವಶಾತ್‌, ಬ್ಯಾಕ್ಟೀರಿಯಾದ ಜಟಿಲ ಸ್ವರೂಪ ಹಾಗೂ ನಡವಳಿಕೆಯಿಂದಾಗಿ ಹಲವು ಸ್ವಾರಸ್ಯಕರ ಪ್ರಶ್ನೆಗಳಿಗೆ ಈ ಪರೀಕ್ಷೆಗಳು ಉತ್ತರ ನೀಡದಾಗಿವೆ. ಹೀಗಾಗಿ ಈಗ “ಮಾನವ ಕಂಡಂತಹ ಸುಸ್ಪಷ್ಟವಾದ ವಿಕಾಸದ ಬದಲಾವಣೆಗಳಿಗೆ” ಪುರಾವೆ ಒದಗಿಸುವ ಹೊಣೆ ಡ್ರೊಸೊಫಿಲಾ ಮೆಲನೋಗ್ಯಾಸ್ಟರ್‌ ಎನ್ನುವ ಹಣ್ಣು ನೊಣದ ಹೆಗಲೇರಿದೆ (ಹಾಗೂ ಮಾನವಿ ಎನ್ನೋಣ. ವಿಷಾದವೆಂದರೆ ಇಂತಹ ಮಾನವಿಗಳ ಸಂಖ್ಯೆ ಕಡಿಮೆ).

ಈ ಹಣ್ಣು ನೊಣಗಳನ್ನು ಪ್ರಯೋಗಗಳಿಗೆ ಬಳಸಿದ ಮೊದಲಿಗನಲ್ಲದಿದ್ದರೂ ಅವನ್ನು ಪ್ರಯೋಗಗಳಿಗೆ ಮಾದರಿಪಶುವನ್ನಾಗಿ ಫಲಪ್ರದವಾಗಿ ಬಳಸಿಕೊಂಡವರಲ್ಲಿ ಅಮೆರಿಕೆಯ ಜೀವಿವಿಜ್ಞಾನಿ ಥಾಮಸ್‌ ಹಂಟ್‌ ಮೋರ್ಗನ್‌ ಮೊದಲಿಗನೇ (೧೮೮೬-೧೯೪೫). ಈತ ಮತ್ತು ಈತನ ವಿದ್ಯಾರ್ಥಿಗಳು ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಹಣ್ಣು ನೊಣಗಳದ್ದೇ ಕೋಣೆಯನ್ನು ಸೃಷ್ಟಿಸಿದ್ದರು.  ಇವರ ಜೀವನಚರಿತ್ರೆ ಬರೆದ ಗರೇತ್‌ ವಿಲಿಯಂಸ್‌  ಹೇಳುವ ಹಾಗೆ “ಮೂರು ಮಿಮೀ ಉದ್ದ, ಹಾಗೂ ಕಿಲೋಗ್ರಾಮಿನ ದಶಲಕ್ಷದಲ್ಲೊಂದು ಅಂಶದಷ್ಟು ಹಗುರವಾದ ಈ ನೊಣಗಳನ್ನು ಸಾಕುವುದು ಸುಲಭ. ಅದರಲ್ಲೂ ಇದನ್ನು ಬೆಳೆಸುವ ಹಾಲಿನ-ಬಾಟಲಿಗಳನ್ನು ಮನಹಟ್ಟನ್‌ ನಲ್ಲಿ ಬೆಳ್ಳಂಬೆಳಗ್ಗೆ ಎಲ್ಲರ ಮನೆಯ ಮುಂದಿನಿಂದ ಕದ್ದೂ ತರಬಹುದಾದ್ದರಿಂದ ಇದರ ಕೃಷಿ ಅಗ್ಗವೂ ಕೂಡ. ಡ್ರೊಸೊಫಿಲಾ ಬೆಳೆಯಲು ಅಮೃತವೇನೂ ಬೇಕಿಲ್ಲ. ಕೊಳೆತ ಬಾಳೆಹಣ್ಣು ಸಾಕು. ಜೊತೆಗೆ ಇವುಗಳ ಸಂತಾನ ಕ್ರಿಯೆ ಅತ್ಯದ್ಭುತ. ಹೆಣ್ಣುಗಳಿರುವ ಬಾಟಲಿಯೊಳಗೆ ಬಿಟ್ಟ ಒಂದು ಗಂಡು ನೊಣ ಏನಿಲ್ಲವೆಂದರೂ ಸಾವಿರದ ನಾಲ್ಕುನೂರು ಸಂತಾನಗಳಿಗೆ ಅಪ್ಪನಾಗುತ್ತದೆ.”

ಒಂದಿಷ್ಟು ಗಾಜಿನ ಕೊಳವೆಗಳು, ಮೆಕ್ಕೆಜೋಳದ ಹಿಟ್ಟು ಹಾಗೂ ಬಲು ಚತುರ, ಬುದ್ಧಿವಂತ, ಹಾಗೂ ವಿಜ್ಞಾನ ಬದ್ಧ ವಿದ್ಯಾರ್ಥಿಗಳ ನೆರವಿನಿಂದ ಮೊಹಾಲಿಯ ಇಂಡಿಯನ್‌ ಇನ್ಸ್‌ ಟಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೇಶನ್‌ ಅಂಡ್‌ ರೀಸರ್ಚ್‌ ಸಂಸ್ಥೆಯ ಎನ್‌. ಜಿ. ಪ್ರಸಾದ್‌ ಲಿಂಗಗಳ ನಡುವಣ ಘರ್ಷಣೆಯನ್ನು ನೈಸರ್ಗಿಕ ಆಯ್ಕೆಯಿಂದ ಬೇಕಿದ್ದಾಗ ಇರುವಂತೆ, ಬೇಡವಾದಾಗ ಕಾಣೆಯಾಗುವಂತೆ ಮಾಡಬಹುದು ಎಂದು ತೋರಿಸಿದ್ದಾರೆ.

ಪ್ರಸಾದ್‌ ತಮ್ಮ ವಿದ್ಯಾರ್ಥಿಗಳೊಂದಿಗೆ, ಬೋಧಿಸತ್ತ ನಂದಿಯ ನೇತೃತ್ವದಲ್ಲಿ ಕೈಗೊಂಡ ಒಂದು ಪ್ರಯೋಗದಲ್ಲಿ, ಸುಮಾರು ನಲವತ್ತೈದು ಸಂತತಿಗಳವರೆಗೆ ಲಿಂಗ ಪರಿಮಾಣ ಗಂಡುನೊಣಗಳತ್ತಲೇ ವಾಲಿರುವಂತೆ ಮಾಡಿ, ಹಣ್ಣುನೊಣಗಳು ವಿಕಾಸವಾಗುವುದನ್ನು ಅಧ್ಯಯನ ಮಾಡಿದರು. ಪ್ರತಿ ಸಂತತಿಯಲ್ಲಿಯೂ, ಪ್ರತಿ ಬಾಟಲಿಯಲ್ಲಿಯೂ ಹೆಣ್ಣುಗಳ ಸಂಖ್ಯೆಗಿಂತಲೂ ಮೂರು ಪಟ್ಟು ಗಂಡುಗಳೇ ಇರುವಂತೆ ಕಾಯ್ದುಕೊಂಡರು. ನೊಣಗಳು ಸಮಾನ ಸಂಖ್ಯೆಯಲ್ಲಿ ಗಂಡು, ಹೆಣ್ಣುಗಳೆರಡನ್ನೂ ಹುಟ್ಟಿಸಿದರೂ, ಇವರು ಮುಂದಿನ ಸಂತತಿಯನ್ನು ಕೃಷಿ ಮಾಡಲು, ಹೆಣ್ಣುಗಳ ಸಂಖ್ಯೆಗಿಂತಲೂ ಮೂರು ಪಟ್ಟು ಗಂಡುಗಳನ್ನಿಡುತ್ತಿದ್ದರು. ಇದೇ ರೀತಿಯಲ್ಲಿ ಬೇರೆ ಪ್ರಯೋಗಗಳಲ್ಲಿ ಗಂಡುಗಳಿಗಿಂತಲೂ ಮೂರು ಪಟ್ಟು ಹೆಣ್ಣುಗಳೇ ಇರುವಂತೆ ಮಾಡಿದರು. ಹೋಲಿಕೆಗೆ ಇರಲಿ ಎಂದು ಸಮಾನ ಸಂಖ್ಯೆಯ ಹೆಣ್ಣು ಮತ್ತು ಗಂಡುಗಳಿರುವ ಸಮೂಹವನ್ನೂ ಕೃಷಿ ಮಾಡಿದ್ದರು.

ನಲವತ್ತೈದಕ್ಕೂ ಹೆಚ್ಚು ಸಂತತಿಗಳಾದ ಮೇಲೆ ಈ ಮೂರು ವಿಭಿನ್ನ ಲಿಂಗ ಪರಿಮಾಣಗಳ ಸಮೂಹಗಳನ್ನು ಪರೀಕ್ಷಿಸಿದರು. ನಿಸರ್ಗ ಇಲ್ಲಿ ಏನು ಆಯ್ದಿದೆ ಎಂದು ನೋಡಿದರು. ಫಲಿತಾಂಶಗಳು ಬೆರಗು ಮೂಡಿಸುವಂತಿದ್ದುವು. ನಾನು ಅವರು ಕೊಟ್ಟ ಹೆಸರುಗಳನ್ನೇ ಇಲ್ಲಿ ಹೇಳಲಿದ್ದೇನೆ. ಗಂಡುಗಳಿಗೇ ಆದ್ಯತೆ ಇದ್ದ ತಂಡದ ನೊಣಗಳನ್ನು ಎಂ-ಹೆಣ್ಣು, ಎಂ-ಗಂಡು ಎಂದು ಕರೆದರು. ಹೆಣ್ಣಿಗೇ ಆದ್ಯತೆ ಇದ್ದ ತಂಡದ ನೊಣಗಳನ್ನು ಎಫ್‌-ಹೆಣ್ಣು, ಎಫ್‌-ಗಂಡು ಎಂದು ಕರೆದರು. ಮೂರನೆಯ, ಹೋಲಿಕೆಗೆಂದು ಇದ್ದ ಸಮೂಹದ ನೊಣಗಳನ್ನು ಸಿ-ಹೆಣ್ಣು, ಸಿ-ಗಂಡು ಎಂದು ಹೆಸರಿಸಿದ್ದರು. ಹೆಣ್ಣುಗಳಿಗಾಗಿ ಗಂಡುಗಳಲ್ಲಿಯೇ ಸ್ಪರ್ಧೆ ಹೆಚ್ಚಿರುವುದರಿಂದ ಹಾಗೂ ಗಂಡುಗಳಿಗಾಗಿ ಹೆಣ್ಣುಗಳ ನಡುವೆ ಸ್ಪರ್ಧೆ ಕಡಿಮೆ ಇರುವುದರಿಂದ, ಗಂಡುಗಳು ಹೆಚ್ಚಿರುವ ಸಮೂಹಗಳು ಅತಿ ಸ್ಪರ್ಧೆ ಇರುವ ಸಂದರ್ಭಗಳೆನಿಸಿಕೊಳ್ಳುತ್ತವೆ. ಹಾಗೆಯೇ ಹೆಣ್ಣುಗಳೇ ಹೆಚ್ಚಿರುವ ಸಮೂಹಗಳು ಅತಿ ಕಡಿಮೆ ಸ್ಪರ್ಧೆಯ ಸಂದರ್ಭಗಳಾಗುತ್ತವೆ. ಸಿ ಸಮೂಹದಲ್ಲಿ ಇವೆರಡರ ನಡುವಿನ ಪ್ರಮಾಣದ ಸ್ಪರ್ಧೆ ಇರುತ್ತದೆ.

ನಲವತ್ತೈದು ಸಂತತಿಗಳ ನಂತರ ಎಂ-ಗಂಡುಗಳು ಹಗುರವಾಗಿಯೂ, ಹೆಚ್ಚು ಚಟುವಟಿಕೆಯನ್ನೂ ತೋರಿದುವು. ಹೆಣ್ಣುಗಳನ್ನು ಆಕರ್ಷಿಸುವ ಪ್ರಣಯದಾಟಗಳನ್ನೂ ಹೆಚ್ಚು ಆಡಿದುವು. ಹೆಚ್ಚು ಹೆಣ್ಣುಗಳಿಗೆ ತೊಂದರೆ ಕೊಟ್ಟುವು. ಹಾಗೂ ಬಲು ಬೇಗನೆ ಮರಣ ಹೊಂದಿದುವು. ಇಂತಹ ಗಂಡುಗಳ ಜೊತೆಗೆ ಕೂಡಿದಾಗ, ಮೂಲ ಸಮೂಹದ ಹೆಣ್ಣುಗಳು ಕೂಡ ಬಲು ಬೇಗನೆ ಸತ್ತವಲ್ಲದೆ, ಕಡಿಮೆ ಸಂತಾನಗಳನ್ನು ಹುಟ್ಟಿಸಿದುವು. ಎಂ-ಗಂಡುಗಳು ಸೀಮಿತ ಸಂಖ್ಯೆಯ ಹೆಣ್ಣುಗಳಿಗಾಗಿ ಘೋರವಾಗಿ ಸ್ಪರ್ಧಿಸುತ್ತಾ ತರಾತುರಿಯ ಬದುಕನ್ನು ಬದುಕಿದ್ದುವು. ಇದಕ್ಕೆ ವ್ಯತಿರಿಕ್ತವಾಗಿ, ಎಫ್‌ ಗಂಡುಗಳು ಹೆಚ್ಚು ಭಾರವಾಗಿದ್ದು, ಕಡಿಮೆ ಚುರುಕಾಗಿದ್ದುವು, ಹಾಗೂ ಪ್ರಣಯದಾಟಗಳಲ್ಲಿಯೂ ಹೆಚ್ಚು ತೊಡಗಿಕೊಳ್ಳುತ್ತಿರಲಿಲ್ಲ. ಹೆಣ್ಣುಗಳಿಗೆ ಇವುಗಳಿಂದ ತೊಂದರೆಯೂ ಕಡಿಮೆ ಇತ್ತು ಹಾಗೂ ಇವು ದೀರ್ಘಾಯುಷಿಗಳಾಗಿದ್ದುವು. ಇಂತಹ ಎಫ್‌-ಗಂಡುಗಳ ಜೊತೆಗೆ ಕೂಡಿದ ಮೂಲಸಮೂಹದ ಹೆಣ್ಣುಗಳು ಹೆಚ್ಚು ಕಾಲ ಬದುಕಿದ್ದಲ್ಲದೆ, ಹೆಚ್ಚು ಸಂತಾನೋತ್ಪತ್ತಿಯನ್ನೂ ಮಾಡಿದುವು. ಹೆಣ್ಣುಗಳಿಗಾಗಿ ಹೆಚ್ಚು ಸ್ಪರ್ಧಿಸಬೇಕಿಲ್ಲದ ಈ ಎಫ್‌-ಗಂಡುಗಳು ಸಾವಕಾಶದ ಬದುಕನ್ನು ಜೀವಿಸಿದ್ದುವು.

Four of Darwin’s finches (clockwise from top left): Geospiza magnirostris, Geospiza fortis, Certhidea olivacea and Camarhynchus parvulus. Photos: Daderot, Putneymark and RajShekhar; collage by Kiwi Rex/Wikimedia Commons, CC BY-SA 4.0

ನಾಲ್ಕು ಡಾರ್ವಿನ್ನನ ಫಿಂಚುಗಳು (ಮೇಲೆ ಎಡದಿಂದ ಅನುಕ್ರಮವಾಗಿ) ಜಿಯೋಸ್ಪೈಜಾ ಮ್ಯಾಗ್ನಿರೋಸ್ಟ್ರಿಸ್‌, ಜಿಯೋಸ್ಪೈಜಾ ಫಾರ್ಟಿಸ್‌, ಸರ್ಥಿಡಾ ಓಲಿವೇಶಿಯಾ ಹಾಗೂ ಕ್ಯಾಮಾರಿಂಕಸ್‌ ಪಾರ್ವ್ಯುಲಸ್: ಚಿತ್ರಗಳು: Daderot, Putneymark and RajShekhar; collage by Kiwi Rex/Wikimedia Commons, CC BY-SA 4.0)

ವಿಭಿನ್ನ ಗುರಿ, ವಿಭಿನ್ನ ಹಾದಿಗಳು 

ಗಂಡು-ಗಂಡುಗಳ ನಡುವಿನ ಸ್ಪರ್ಧೆಯೆಲ್ಲವೂ ಯಾವಾಗಲೂ ಹೆಣ್ಣುಗಳ ಜೊತೆಗಿನ ಸಂಭೋಗವಾದ ಮಾತ್ರಕ್ಕೆ ಕೊನೆಯಾಗುತ್ತದೆ ಎಂದಲ್ಲ. ಎರಡು ಗಂಡುಗಳು ಒಂದೇ ಹೆಣ್ಣಿಗೆ ವೀರ್ಯ ಕೂಡಿಸಿದುವು ಎಂದರೆ, ಹೆಣ್ಣಿನ ದೇಹದೊಳಗೂ, ಆ ವೀರ್ಯಗಳ ನಡುವೆಯೂ ಈ ಸ್ಪರ್ಧೆ ಮುಂದುವರೆಯುತ್ತದೆ. ಮೊದಲು ಸಂಭೋಗಿಸಿದ ಗಂಡಿನ ವೀರ್ಯವು ಅನಂತರ ಬಂದ ಎರಡನೆಯ ಗಂಡಿನ ವೀರ್ಯದ ಆಕ್ರಮಣವನ್ನು ಎದುರಿಸುತ್ತದೆ. ಎರಡನೆಯ ಗಂಡಿನ ವೀರ್ಯವೂ ಕೂಡ ಮೊದಲದ್ದರ ವೀರ್ಯದ ವಿರುದ್ಧ ದಮನಕಾರಿ ತಂತ್ರಗಳನ್ನು ಹೂಡಿ ತಾನು ಬದುಕಿ ಉಳಿಯಲು ಹಾಗೂ ಮೊದಲ ಗಂಡಿನ ವೀರ್ಯದ ಫಲ ಕಡಿಮೆಯಾಗುವಂತೆ ನೋಡಿಕೊಳ್ಳುತ್ತದೆ. ಈ ಬಗೆಯಲ್ಲಿ ಅತಿಯಾದ ಸ್ಪರ್ಧೆಯ ಪರಿಸರದಲ್ಲಿ ನಲವತ್ತೈದು ಸಂತತಿಗಳ ಅವಧಿಯಲ್ಲಿ ವಿಕಾಸವಾಗಿದ್ದ ಎಮ್‌ ಗಂಡುಗಳು, ಎಫ್‌ ಗಂಡುಗಳಿಗಿಂತಲೂ ಉನ್ನತ ಮಟ್ಟದ ಆಕ್ರಮಣಕಾರಿ ಹಾಗೂ ರಕ್ಷಣಾ ತಂತ್ರಗಳನ್ನು ಬೆಳೆಸಿಕೊಂಡಿದ್ದುವು.

ಪ್ರಸಾದ್‌ ಮತ್ತು ಅವರ ವಿದ್ಯಾರ್ಥಿಗಳು ಹೀಗೆ ಗಂಡುಗಳಲ್ಲಿ ಸ್ಪರ್ಧಾತ್ಮಕ ಹಾಗೂ ಹೆಣ್ಣುಗಳಿಗೆ ತೊಂದರೆ ನೀಡುವ ಸಾಮರ್ಥ್ಯವನ್ನು ಬೆಳೆಸಿದ್ದಷ್ಟಕ್ಕೇ ಸುಮ್ಮನಾಗಲಿಲ್ಲ. ಈ ಸಂದರ್ಭದಲ್ಲಿ ಹೆಣ್ಣುಗಳು ಕೈಕಟ್ಟಿ ಕುಳಿತುಕೊಳ್ಳುತ್ತವೆ ಎಂದು ಕೊಳ್ಳುವುದು ತಪ್ಪು. ನಿಸರ್ಗದ ಆಯ್ಕೆ ಎಂದರೆ “ಹಗಲೂ, ರಾತ್ರಿಯೂ, ಪ್ರತಿ ಕ್ಷಣವೂ, ಪ್ರತಿಯೊಂದು ಸಣ್ಣ ಪುಟ್ಟ ವ್ಯತ್ಯಾಸಗಳನ್ನೂ ಗಮನಿಸಿ, ಕೆಟ್ಟದ್ದನ್ನು ಬಿಸಾಡುತ್ತಾ ಒಳ್ಳೆಯದನ್ನು ಆಯ್ದು, ಕಾಪಾಡಿಕೊಳ್ಳುವುದೇ” ಅಲ್ಲವೇ? ಇದು ಗಂಡಿನಲ್ಲಿ ಆಗುವಷ್ಟೇ ಹೆಣ್ಣಿನಲ್ಲಿಯೂ ಆಗಬೇಕು.. ಹಾಗಿದ್ದರೆ ಪ್ರಸಾದ್‌ ಅವರ ಪ್ರಯೋಗಗಳಲ್ಲಿ ಸಿಲುಕಿದ ಹೆಣ್ಣುಗಳಿಗೇನಾಗಿತ್ತು?

ಎಪ್‌-ಹೆಣ್ಣುಗಳು ಎಂ-ಹೆಣ್ಣುಗಳಿಗಿಂತಲೂ ತೂಕವಾಗಿದ್ದುವು, ಮೂಲಸಮೂಹದ ಗಂಡುಗಳ ಜೊತೆಗೆ ಕೂಡಿದಾಗ ಎಂ-ಹೆಣ್ಣುಗಳಿಗಿಂತಲೂ ಹೆಚ್ಚೆಚ್ಚು ಸಂತಾನಗಳನ್ನು ಹುಟ್ಟಿಸಿದುವು. ಆದರೆ ಗಂಡುಗಳ ತರುವ ತೊಂದರೆಯನ್ನು ಎದುರಿಸುವ ಸಾಮರ್ಥ್ಯ ಎಫ್‌-ಹೆಣ್ಣುಗಳಲ್ಲಿ, ಎಂ-ಹೆಣ್ಣುಗಳಲ್ಲಿ ಬೆಳೆದಷ್ಟು ಬೆಳೆದಿರಲಿಲ್ಲ. ಎಂ-ಹೆಣ್ಣುಗಳು ಗಂಡುಗಳುಂಟು ಮಾಡುವ ಅಪಾಯವನ್ನು ಎದುರಿಸಲು ಹೆಚ್ಚು ಶಕ್ತಿಯನ್ನು ಮಾಡುವ ನಿಟ್ಟಿನಲ್ಲಿ ಕಡಿಮೆ ಸಂತಾನೋತ್ಪತ್ತಿ ಹಾಗೂ ಕಡಿಮೆ ತೂಕದ ಹೊರೆಯನ್ನು ಹೊರಬೇಕಾಗಿತ್ತು. ಹೀಗಾಗಿ ಎಂ-ಗಂಡು ಹಾಗೂ ಎಂ-ಹೆಣ್ಣುಗಳೆರಡೂ ತಮ್ಮ ಪರಿಸರದಲ್ಲಿದ್ದ ಅತೀವ ಸ್ಪರ್ಧೆಯಿಂದ ಹಾನಿಗೊಳಗಾಗಿದ್ದುವು. ಇದು ಅಂತಹ ಅಚ್ಚರಿಯ ವಿಷಯವೇನಲ್ಲ ಬಿಡಿ.

ಆದರೆ ನಿಸರ್ಗದಲ್ಲಿ ಆಯ್ಕೆ ಎನ್ನುವುದು ಈ ಮೊದಲು ಊಹಿಸಿದಂತೆಯೇ ಹೀಗೆ ವಿಭಿನ್ನ ದಿಕ್ಕುಗಳಲ್ಲಿ ನಡೆಯಬಲ್ಲುದು ಎಂಬುದನ್ನು ನಾವು ನೇರವಾಗಿ ಕಾಣಬಹುದಾಯ್ತು ಎನ್ನುವುದು ಅಚ್ಚರಿ ಹಾಗೂ ಸಂತಸದ ವಿಷಯ. ಯಾರು ಬೇಕಾದರೂ ಮಾಡಬಹುದಾದಷ್ಟು ಸರಳವಾದ, ಚತುರ ಹಾಗೂ ಅಗ್ಗದ ಪ್ರಯೋಗಗಳ ಮೂಲಕ ಪ್ರಸಾದ್‌ ಮತ್ತು ಅವರ ವಿದ್ಯಾರ್ಥಿಗಳು ತಮಗಿಷ್ಟ ಬಂದಂತೆ ಗಂಡು-ಹೆಣ್ಣುಗಳ ಸಮರವನ್ನು ಹೆಚ್ಚು, ಕಡಿಮೆ ಮಾಡಿದ್ದಾರಲ್ಲ?!

ಹೀಗೆ ಪ್ರಸಾದ್‌ ಮತ್ತು ಅವರ ವಿದ್ಯಾರ್ಥಿಗಳು ರೂಪಿಸಿದ ಅತೀವ ಸ್ಪರ್ಧೆ ಹಾಗೂ ಕಡಿಮೆ ಸ್ಪರ್ಧೆ ಇರುವ ಪರಿಸರದಲ್ಲಿ ವಿಕಾಸವಾದ ನೊಣಗಳ ನಡುವಣ ವ್ಯತ್ಯಾಸ ಎಷ್ಟೆಂದರೆ, ನೂರು ಸಂತತಿಗಳ ನಂತರ ಎಂ ಮತ್ತು ಎಫ್‌ ನೊಣಗಳು ತಂತಮ್ಮೊಳಗೇ ಸಂತಾನೋತ್ಪತ್ತಿ ಮಾಡಲು ಅಶಕ್ತವಾಗಿಬಿಡುತ್ತವೆ. ಇದು ಹೊಸದೊಂದು ಪ್ರಬೇಧ ಹುಟ್ಟುವುದರ ಮುನ್ಸೂಚನೆ. ಪ್ರಯೋಗಾಲಯದಲ್ಲಿ ನಡೆಸುವ ಪ್ರಾಯೋಗಿಕ ವಿಕಾಸಕ್ರಿಯೆಗಳೂ ಕೂಡ ಇಚ್ಛಾನುವರ್ತಿ ಹೊಸ ಪ್ರಬೇಧವೊಂದನ್ನು ಹುಟ್ಟಿಸಬಲ್ಲವು. ನಿಸರ್ಗದ ಆಯ್ಕೆಯಿಂದ ಹೊಸ ಪ್ರಬೇಧಗಳು ಉದಿಸುತ್ತವೆ ಎನ್ನುವ ಡಾರ್ವಿನ್ನನ ವಿಕಾಸ ವಾದಕ್ಕೆ ಇಷ್ಟು ಪುರಾವೆ ಸಾಲದೇ?

ಇದು ಇಂದಿನ ಜಾಣ ಅರಿಮೆ. ಆಂಗ್ಲ ಮೂಲ: ಪ್ರೊಫೆಸರ್‌ ರಾಘವೇಂದ್ರ ಗದಗಕರ್‌, ಕನ್ನಡಾನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್.‌ ಮಂಜುನಾಥ; ಲೇಖನದ ಆಂಗ್ಲ ಮೂಲ ದಿ ವೈರ್‌ ಸೈನ್ಸ್‌ ಪತ್ರಿಕೆಯಲ್ಲಿ ಮೊದಲು ಪ್ರಕಟವಾಗಿತ್ತು.

Scroll To Top