Now Reading
ಪ್ರಾಣಿ-ಪಕ್ಷಿಗಳಿಗೇಕೆ ಬಣ್ಣದ ದಿರಿಸು?

ಪ್ರಾಣಿ-ಪಕ್ಷಿಗಳಿಗೇಕೆ ಬಣ್ಣದ ದಿರಿಸು?

ರೋಜಾ ಎದೆಯ ರೋಲರ್‌ ಹಕ್ಕಿ (ಕೊರಾಶಿಯಸ್‌ ಕಾಡೇಟಸ್)‌ ಚಿತ್ರ: ಡೇವಿಡ್‌ ಕ್ಲೋಡ್‌.

ಸಂಪುಟ 4  ಸಂಚಿಕೆ 146 ಫೆಬ್ರವರಿ  4, 2021    

ಜಾಣ ಅರಿಮೆ

ವಿಸ್ಮಯಕ್ಕಿಂತ ವಿಸ್ಮಯ – 11

ಪ್ರಾಣಿ-ಪಕ್ಷಿಗಳಿಗೇಕೆ ಬಣ್ಣದ ದಿರಿಸು?

Kannada translation by Kollegala Sharma

ಪ್ರಕೃತಿ ಸುಂದರ. ಬಣ್ಣಗಳು ತುಂಬಿದ್ದಾಗಲಂತೂ ಅದು ಇನ್ನೂ ಸುಂದರ. ಹೊಳೆಯುವ ಕೆಂಪು, ರೋಜಾ, ಊದಾ, ನೀಲಿ, ಹಸಿರು, ಕಿತ್ತಳೆ ಬಣ್ಣಗಳ ಅಲ್ಲ ಇನ್ನೂ ಹೆಸರೇ ಇಲ್ಲದ ಹಲವು ಬಣ್ಣಗಳನ್ನು ತೋರುವ ಹೂವು, ಹಣ್ಣು, ಕೀಟಗಳು, ಜೇಡಗಳು, ಏಡಿಗಳು, ಮೀನು, ಕಪ್ಪೆ, ಹಾವು, ಹಕ್ಕಿ ಹಾಗೂ ಸ್ತನಿಗಳನ್ನು ಕಂಡು ಖುಷಿ ಪಡುತ್ತೇವೆ.

ಆದರೆ ವಿಕಾಸ ವಿಜ್ಞಾನಿಗಳು ಬರೇ ಖುಷಿಪಟ್ಟು ಸುಮ್ಮನಿರುವುದಿಲ್ಲ.  ಇದೇಕೆ ಎಂದೂ ಕೇಳುತ್ತಾರೆ. ಇಷ್ಟೊಂದು ವಿಧ, ವಿಧವಾದ ಹೊಳೆಯುವ ಬಣ್ಣಗಳು ಪ್ರಾಣಿಗಳಿಗೆ ಗಿಡಗಳಿಗೆ ಏಕೆ ಬೇಕು? ಕೆಲವು ಅಚ್ಚಗೆಂಪೇಕೆ? ಕೆಲವು ಹಸಿರೇಕೆ? ಕೆಲವು ಅಡಗಿಕೊಳ್ಳಲು ಬಣ್ಣಗಳನ್ನು ಬಳಸುತ್ತವೆ, ಇನ್ನು ಕೆಲವು ಪ್ರದರ್ಶನಕ್ಕೆ ಅವನ್ನು ಉಪಯೋಗಿಸುತ್ತವೆ. ಹೀಗೇಕೆ? ಬಣ್ಣ, ಬಣ್ಣದ ಕೆಲವು ಪ್ರಾಣಿಗಳು ಬೇರೆ ಕೆಲವು ಪ್ರಾಣಿಗಳ ಬಣ್ಣವನ್ನೇ ಅನುಕರಿಸುತ್ತವೇಕೆ? ಮತ್ತೆ ಕೆಲವು ಪ್ರಾಣಿಗಳ ಬಣ್ಣ ನಿಸ್ಸಾರವಾಗಿರುತ್ತದೆಯಲ್ಲ? ಅದೇಕೆ. ವಿಕಾಸ ಪರಿಸರವಾದಿ ರಾಬರ್ಟ್‌ ಮ್ಯಾಕ್‌ಆರ್ಥರ್‌ (1930-1972) ಒಮ್ಮೆ ಹೀಗೆ, ಹೇಳಿದ್ದ,
“ವಿಜ್ಞಾನವನ್ನು ಮಾಡುವುದು ಭಾವನೆಗೆ ಅಂತಹ ತಡೆಗೋಡೆ ಅಥವಾ ಅಂತಹ ಅಮಾನವೀಯ ಪ್ರಭಾವವಲ್ಲ. ಇದು ಸೌಂದರ್ಯವನ್ನು ಪ್ರಕೃತಿಯಿಂದ ತೆಗೆದುಕೊಳ್ಳುವುದಿಲ್ಲ.” ಮೇಲೆ ಹೇಳಿದಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಖಂಡಿತ ನಿಸರ್ಗದ ಸೌಂದರ್ಯದ ಬಗ್ಗೆ ನಮ್ಮ ಒಲವನ್ನು ಹೆಚ್ಚಿಸ​ದೇ ಇರದು.

ಜೀವಿವಿಜ್ಞಾನದ ತಾಯಿವಿಜ್ಞಾನ

ಇಂದು ನಡೆಯುತ್ತಿರುವ ತಂತ್ರಸಾಧನದಮೇಲೆ ಆಧಾರವಾದ ಜೀವಿವಿಜ್ಞಾನವೂ ಕೂಡ ಪ್ರಕೃತಿ ವಿಜ್ಞಾನದಿಂದಲೇ ಆರಂಭವಾಗುತ್ತದೆ. ಕುತೂಹಲದಿಂದ ಅಡ್ಡಾಡಿದ ಅಲೆಮಾರಿಗಳ ಸರಳ ಅವಲೋಕನಗಳು ಹಾಗೂ ಪ್ರಯೋಗದಿಂದಲೇ ಆರಂಭವಾಗುತ್ತವೆ. ಜೀವಿವಿಜ್ಞಾನದಲ್ಲಿ ಬಣ್ಣಗಳ ಅಧ್ಯಯನವೂ ಇದಕ್ಕೆ ಹೊರತಲ್ಲ. ಪ್ರಾಣಿಗಳ ಬಣ್ಣಗಳನ್ನು ಕುರಿತ ಅಧ್ಯಯನಗಳಿಗೆ ಅಡಿಗಲ್ಲನ್ನಿಟ್ಟ ನಾಲ್ವರು ಸುಪ್ರಸಿದ್ದ ಪ್ರಕೃತಿ ವಿಜ್ಞಾನಿಗಳನ್ನು ಇಲ್ಲಿ ಸ್ಮರಿಸಲೇಬೇಕು.

ಇವರಲ್ಲಿ ಮೊದಲನೆಯವರು ಚಾರ್ಲ್ಸ್‌ ಡಾರ್ವಿನ್‌ ಎನ್ನುವುದು ಅಚ್ಚರಿಯೇನಲ್ಲ ಬಿಡಿ (1809-1882). ಚಾರ್ಲ್ಸ್‌ ಡಾರ್ವಿನ್‌ ಪ್ರಾಣಿಗಳಲ್ಲಿ ಬಣ್ಣಗಳು ನಿಸರ್ಗದ ಆಯ್ಕೆಯಲ್ಲಿನ ಒಂದು ವಿಧಾನವೆಂದೂ, ಲಿಂಗಗಳ ಆಯ್ಕೆಯ ಒಂದು ಮಾಧ್ಯಮವೆಂದೂ ಭಾವಿಸಿದ ಕಾರಣ ಅದರಲ್ಲಿ ಆಸಕ್ತಿ ತೋರಿದ್ದ. ಬೀಗಲ್‌ ಹಡಗಿನ ನೌಕಾಯಾನದ ಸಂದರ್ಭದಲ್ಲಿ ನಿಸರ್ಗದಲ್ಲಿ ತಾನು ಕಂಡಂಥವು ಹಾಗೂ ತವರಿಗೆ ಬಂದ ಮೇಲೆ ನಡೆಸಿದ ಪ್ರಯೋಗಗಳ ವೇಳೆ ಕಂಡ ಬಣ್ಣಗಳನ್ನೆಲ್ಲ ಬಲು ಸೂಕ್ಷ್ಮವಾಗಿ ಗಮನಿಸುತ್ತಿದ್ದ.  ಬಣ್ಣಗಳನ್ನು ಸೂಕ್ಷ್ಮವಾಗಿ ಗಮನಿಸಿ, ನಿಖರವಾಗಿ ದಾಖಲಿಸಿ ಇಡುವುದು ಎಷ್ಟು ಮುಖ್ಯ ಎಂದು ಡಾರ್ವಿನ್‌ ಆಗಲೇ ಊಹಿಸಿದ್ದ ಎನಿಸುತ್ತದೆ. ಆತ ಅಂದಿನ ಕಾಲದಲ್ಲಿ ಇದ್ದಂತಹ ಅತ್ಯುತ್ತಮ ಬಣ್ಣಗಳ ನಿಘಂಟನ್ನು ಸದಾ ತನ್ನೊಟ್ಟಿಗೆ ಕೊಂಡೊಯ್ಯುತ್ತಿದ್ದನಂತೆ. ವರ್ನರ್ಸ್‌ ನಾಮೆಂಕ್ಲೇಚರ್‌ ಆಫ್‌ ಕಲರ್ಸ್‌
(1814), ಎನ್ನುವ ಈ ನಿಘಂಟಿನಲ್ಲಿ ನೀಲಿ ಬಣ್ಣದ ಹನ್ನೊಂದು ರಂಗುಗಳು, ಕೆಂಪು ಬಣ್ಣದ ಹತ್ತು ರಂಗುಗಳು ಹಾಗೂ ಹಾಂ, ಬಿಳೀಬಣ್ಣದ ಎಂಟು ರಂಗುಗಳ ವರ್ಣನೆ ಇತ್ತಂತೆ.

Charles Darwin (1809-1882). Photo: Leonard Darwin, public domain

ಚಾರ್ಲ್ಸ್‌ ಡಾರ್ವಿನ್ (1809-1882). ಚಿತ್ರ: ಲಿಯೋನಾರ್ಡೊ ಡಾರ್ವಿನ್

ಬೇಟೆಗಾರರಿಂದ ತಪ್ಪಿಸಿಕೊಳ್ಳಲು ಪ್ರಾಣಿಗಳು ಎರಡು ಪರಸ್ಪರ ವಿರುದ್ಧವಾದ ತಂತ್ರಗಳಿಗೆ ಮೊರೆ ಹೋಗಬಹುದು: ಕಪಟಬಣ್ಣಗಳನ್ನು ಧರಿಸಿ ಮರೆಮಾಚಿಕೊಂಡು ಬಿಡಬಹುದು ಅಥವಾ ವಿಷ, ನಂಜು ಧರಿಸಬಹುದು. ವಿಷ ಅಥವಾ ನಂಜುಧಾರಿಗಳಲ್ಲಿಯೂ ಒಂದು ಸಮಸ್ಯೆ ಇದೆ. ಅದೇನೆಂದರೆ, ವಿಷ ಏನಿದ್ದರೂ ಬೇಟೆಗಾರ ಹಿಡಿದ ಮೇಲಷ್ಟೆ ಕೆಲಸಕ್ಕೆ ಬರುತ್ತದೆ. ಆದ್ದರಿಂದ ವಿಷ ಇಲ್ಲವೇ ನಂಜಿರುವ ಪ್ರಾಣಿಗಳು ಬೇಟೆಗೆ ಸಿಗುವುದಕ್ಕೂ ಮೊದಲೇ ತಾವು ವಿಷಧಾರಿಗಳು ಎಂದು ತೋರಿಸಿಕೊಂಡು ಬೇಟೆಗಾರರನ್ನು ಎಚ್ಚರಿಸಬೇಕು. ಎದ್ದು ತೋರುವಂತಹ ಬಣ್ಣಗಳನ್ನು ಧರಿಸುವುದು ಇದಕ್ಕೆ ಅತ್ಯುತ್ತಮ ವಿಧಾನ. ಈ ರೀತಿಯ ಬಣ್ಣಗಳನ್ನು ಅಪೋಸೆಮಾಟಿಸಂ ಎನ್ನುತ್ತಾರೆ. ಒಂದು ರೀತಿ ಭೀತಿಯಬಾವುಟ ತೋರುವುದು ಎನ್ನಬಹುದು.

Henry Walter Bates (1825-1892). Photo: Beetle_Guy, CC BY-NC-ND 2.0

ಹೆನ್ರಿ ವಾಲ್ಟರ್‌ ಬೇಟ್ಸ್‌  (1825-1892). ಚಿತ್ರ: ಬೀಟಲ್‌ ಗಯ್‌, CC BY-NC-ND 2.0

ವಿಷ, ನಂಜನ್ನು ಉತ್ಪಾದಿಸುವುದು ವೆಚ್ಚದ ಕೆಲಸ. ಬಣ್ಣ ಧರಿಸುವುದು ಸುಲಭ. ಹೀಗಾಗಿ ಇಲ್ಲಿ ಮೋಸ ಮಾಡಲೂ ಅವಕಾಶವಿದೆ. ಕೆಲವು ಪ್ರಭೇದಗಳು ವಿಷ, ನಂಜು ಇರುವ ಪ್ರಾಣಿಗಳನ್ನೇ ಹೋಲುವಂತೆ ಬಣ್ಣ, ಬಣ್ಣವಾಗಿರಬಹುದು. ಹೀಗೆ ವಿಷ, ನಂಜನ್ನು ತಯಾರಿಸುವ ಗೋಜಿಗೆ ಹೋಗದೆಯೇ ಅವುಗಳಿಗೆ ಸಿಗುವಂತಹ ರಕ್ಷಣೆಯನ್ನೂ ಇವು ಪಡೆಯಬಹುದು.

ನಿರಪಾಯಕಾರಿಯಾದ ಅಥವಾ ಸ್ವಾದಿಷ್ಟವಾದ ಪ್ರಭೇದವೊಂದು ವಿಷ ಅಥವಾ ನಂಜುಧಾರಿಯನ್ನು ಅಣಕಿಸಿದಾಗ ಅದನ್ನು ಬೇಟ್ಸಿಯನ್‌ ಅಣಕ ಎನ್ನುತ್ತಾರೆ. ಅಮೆಜಾನಿನ ಮಳೆಕಾಡುಗಳ ಚಿಟ್ಟೆಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿ ಈ ವಿದ್ಯಮಾನವನ್ನು ಗುರುತಿಸಿ, ವಿವರಿಸಿದ ಇಂಗ್ಲೆಂಡಿನ ಪ್ರಕೃತಿ ವಿಜ್ಞಾನಿ ಹೆನ್ರಿ ವಾಲ್ಟರ್‌ ಬೇಟ್ಸ್‌ (1825-1892) ನೆನಪಿನಲ್ಲಿ ಈ ಹೆಸರು.

ಜರ್ಮನಿಯ ಪ್ರಾಣಿವಿಜ್ಞಾನಿ ಹಾಗೂ ಪ್ರಕೃತಿ ವಿಜ್ಞಾನಿ ಜೋಹನ್‌ ಥಿಯೋಡೋರ್‌ ಮ್ಯುಲ್ಲರ್‌ (1821-1897) ಇದೇ ಅಣಕದ ಇನ್ನೊಂದು ಬಗೆಯನ್ನು ಗುರುತಿಸಿದ್ದ. ಇದರಲ್ಲಿ ಮೋಸದ ಬದಲಿಗೆ ಸಹಕಾರ ಕಂಡಿತು. ಅಂದರೆ ಈ ರೀತಿಯಲ್ಲಿ ವಿಷ ಧರಿಸುವ ಅನೇಕ​  ಪ್ರಭೇದಗಳು ಒಂದಿನ್ನೊಂದರ ಅಣಕವಾಡಿ, ಬೇಟೆಗಾರರಿಗೆ ಭೀತಿಯನ್ನು ಹೆಚ್ಚಿಸುತ್ತಿದ್ದುವು. ಇದಕ್ಕೆ ಮ್ಯುಲ್ಲೇರಿಯನ್‌ ಅಣಕ ಎಂದು ನಾಮಕರಣವಾಗಿದೆ.

Johann Friedrich Theodor Müller (1821-1897). Photo: Public domain

ಜೋಹಾನ್ ಫ್ರೆಡ್ರಿಕ್ ಥಿಯೋಡರ್ ಮುಲ್ಲರ್ (1821-1897). ಚಿತ್ರ: ಸಾರ್ವಜನಿಕ ಡೊಮೇನ್

ಚಿಟ್ಟೆಗಳು, ಪತಂಗಗಳು, ಸಾವಿರಕಾಲಿನ ಹುಳುಗಳು, ಇರುವೆ, ಕಣಜ, ಸೂರ್ಯನಕುದುರೆ, ಕೊಡತಿ ಹುಳುಗಳು, ಕಟಲ್‌ ಮೀನು, ಅಷ್ಟಪಾದಿಗಳು, ಏಡಿಗಳು, ಜೇಡಗಳು, ಮೀನು, ಕಪ್ಪೆ, ಹಲ್ಲಿ, ಹಾವು, ಪಕ್ಷಿಗಳು ಹಾಗೂ ಸ್ತನಿಗಳು ಮತ್ತು ಆರ್ಕಿಡ್‌ ಹಾಗೂ ಇತರೆ ಹೂವಿನ ಗಿಡಗಳಲ್ಲಿಯೂ ಈ ರೀತಿಯ ಬೇಟ್ಸಿಯನ್‌ ಹಾಗೂ ಮ್ಯುಲೇರಿಯನ್‌ ಅಣಕಗಳಿಗೆ ಬೇಕಾದಷ್ಟು ಉದಾಹರಣೆಗಳು ಇವೆ. ಮ್ಯುಲೇರಿಯನ್‌ ಹಾಗೂ ಬೇಟ್ಸಿಯನ್‌ ಅಣಕ ಪ್ರಕಾರಗಳು ಎರಡೂ ಒಟ್ಟಿಗೇ ಇರಬಹುದು. ಹೀಗಾದಾಗ ಅಣಕವಾಡುವ ಹಾಗೂ ಅಣಕಕ್ಕೆ ಮಾದರಿಯಾದ ಎರಡೂ ಪ್ರಭೇದಗಳ ಜನಸಂಖ್ಯೆಯ ಗಣನೆ ಬಲು ಜಟಿಲವಾಗಿರುತ್ತದೆ. ಇಂತಹ ಜಟಿಲ ಸಂಬಂಧಗಳ ಅಧ್ಯಯನಕ್ಕೆ ಗಣಿತೀಯ ಮಾದರಿಗಳನ್ನು ಬಳಸುವುದು ಉತ್ತಮ.

ಇಂತಹ ಅಣಕದ ವಿದ್ಯಮಾನಗಳ ಅಧ್ಯಯನಕ್ಕೆ‌ ಬೇಕಾದ  ಮೊತ್ತ ಮೊದಲ ಗಣಿತೀಯ ಮಾದರಿಯನ್ನು ಹತ್ತೊಂಭತ್ತನೆಯ ಶತಮಾನದಲ್ಲಿಯೇ  ಪ್ರಕೃತಿ ವಿಜ್ಞಾನಿ ಮ್ಯುಲ್ಲರ್ ಸ್ವತಃ ಒದಗಿಸಿದ್ದ ಎನ್ನುವುದು ನನ್ನನ್ನು ಚಕಿತಗೊಳಿಸಿದೆ. ಜೀವಿವಿಜ್ಞಾನದಲ್ಲಿ ಗಣಿತೀಯ ಮಾದರಿಗಳ ಬಳಕೆಯ ಮೊತ್ತ ಮೊದಲ ಉದಾಹರಣೆಯೂ ಇದುವೇ ಇರಬೇಕು. ಮ್ಯುಲ್ಲೇರಿಯನ್‌ ಅಣಕವಲ್ಲದೆ ಇನ್ನೂ ಹೆಚ್ಚು ಕೊಡುಗೆಗಳನ್ನು ಮ್ಯುಲರ್‌ ಕೊಟ್ಟಿದ್ದಾನೆಂದು ಇತ್ತೀಚೆಗೆ ನಾನು ಅರಿತೆ.

ನಮ್ಮ ಗೌರವಾನ್ವಿತರ ಪಟ್ಟಿಯಲ್ಲಿ ನಾಲ್ಕನೆಯವರು ಆಲ್ಫ್ರೆಡ್‌ ರಸೆಲ್‌ ವ್ಯಾಲೇಸ್‌ (1823-1913). ನಿಸರ್ಗದ ಆಯ್ಕೆ ಎನ್ನುವ ನಿಯಮವನ್ನು ಪತ್ತೆ ಮಾಡಿದ ಡಾರ್ವಿನ್ನನ ಸಹಾನ್ವೇಷಕ. ತಾನು ಕಂಡದ್ದರ ಬಣ್ಣಗಳ ಬಗ್ಗೆ ವ್ಯಾಲೇಸ್‌ಗೆ ಕೂಡ ಬಹಳ ಹುಚ್ಚು. ಡಾರ್ವಿನ್‌ ಬಹುತೇಕ ಹೇಳಿದ್ದೆಲ್ಲವೂ ಸತ್ಯವೇ ಆಗಿರುತ್ತದೆ. ಅದು ಹೇಗೋ ಗೊತ್ತಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಅವನೂ ತಪ್ಪಿದ್ದ ಎನ್ನುವುದು  ಮೋಜಿನ ವಿಷಯ .

A bronze statue of Alfred Russel Wallace (1823-1913) by Anthony Smith. Photo: George Beccaloni, CC BY-SA 3.0

ಆಂಥೋನಿ ಸ್ಮಿತ್‌ ಕೆತ್ತಿದ ಆಲ್ಫ್ರೆಡ್‌ ರಸೆಲ್‌ ವ್ಯಾಲೇಸನ ಪ್ರತಿಮೆ.  (1823-1913) ಚಿತ್ರ: ಜಾರ್ಜ್‌ ಬೆಕಲೋನಿ, CC BY-SA 3.0

ಇಂತಹ ಒಂದು ಅಪರೂಪದ ತಪ್ಪು ಬಣ್ಣಗಳಿಗೆ ಸಂಬಂಧಿಸಿದ್ದು. ಹಲವು ಜೀವಿಗಳಲ್ಲಿ ಗಂಡು ಹಾಗೂ ಹೆಣ್ಣಿನ ಬಣ್ಣಗಳು ಬೇರೆ, ಬೇರೆಯಾಗಿರುತ್ತವೆ. ಲಿಂಗಿಗಳ ಬಣ್ಣದಲ್ಲಿ ಈ ದ್ವಂದ್ವ ವಿಕಾಸವಾದದ್ದೇಕೋ? ನಿಸರ್ಗದ ಆಯ್ಕೆಗೆ ಲಿಂಗಗಳ ಆಯ್ಕೆಯೂ ಪೂರಕ ಎಂದು ನಂಬಿದ್ದ ಡಾರ್ವಿನ್‌, ಹೆಣ್ಣುಗಳ ಸಂಗಾತಿಗಳನ್ನು ಆಯ್ದುಕೊಳ್ಳಲು ನೆರವಾಗಲೆಂದು ಗಂಡುಗಳ ಬಣ್ಣಗಳು ಅವುಗಳ ಪೂರ್ವಜರಿಂದ ಬೇರೆಯಾಗಿ, ಹೆಣ್ಣಿನಿಂದ ಭಿನ್ನವಾಗಿ ವಿಕಾಸವಾಗಿದೆ ಎಂದು ನಂಬಿದ್ದ.

ಆದರೆ ವ್ಯಾಲೇಸನ ತರ್ಕವೇ ಬೇರೆ ಇತ್ತು. ಈತ ಲಿಂಗಗಳ ಆಯ್ಕೆ ಬೇಕೇ ಇಲ್ಲ. ನಿಸರ್ಗದಲ್ಲಿ ಇರುವ ಎಲ್ಲ ವೈವಿಧ್ಯವನ್ನೂ ನಿಸರ್ಗದ ಆಯ್ಕೆಯ ತತ್ವವೊಂದೇ ವಿವರಿಸಬಲ್ಲುದು ಎಂದು ಹೇಳಿದ್ದ.  ಅವನ ಪ್ರಕಾರ ಪೂರ್ವಜರ ಬಣ್ಣಗಳ ವಿನ್ಯಾಸ ಹೆಣ್ಣುಗಳಲ್ಲಿ ಬದಲಾಗಿದೆ ಎಂದಾಗಿತ್ತು. ಇದೇಕೆಂದರೆ,  ಹೆಣ್ಣುಗಳು ಹೀಗೆ ಒಂದೋ ಮರೆಮಾಚಿಕೊಳ್ಳುವುದು ಅಥವಾ ಬೇಟ್ಸಿಯನ್‌ ಅಣಕವನ್ನೋ ಅನುಸರಿಸಿ, ತನ್ಮೂಲಕ ಬೇಟೆಗಾರರಿಂದ ತಪ್ಪಿಸಿಕೊಳ್ಳುತ್ತವೆಯಾದ್ದರಿಂದ ಅವನ್ನು ನಿಸರ್ಗ ಆಯ್ಕೆ ಮಾಡಿರುತ್ತದೆ.

An Indian common mormon (Papilio polytes) mating pair showing sexual colour dimorphism. Photo: Jeevan Jose, Kerala (© 2014 Jee & Rani Nature Photography, CC BY-SA 4.0)

ಕಾಮನ್‌ ಮಾರ್ಮಾನ್‌ ಎನ್ನುವ ಚಿಟ್ಟೆ (ಪೆಪೀಲಿಯೋ ಪೋಲೈಟಿಸ್‌ ದಂಪತಿಗಳು ಬಣ್ಣದಲ್ಲಿ ಲಿಂಗ ದ್ವಂದ್ವವನ್ನು ತೋರುತ್ತಿರುವುದು. ಚಿತ್ರ: ಜೀವನ್‌ ಜೋಸ್‌, ಕೇರಳ (© 2014 Jee & Rani Nature Photography, CC BY-SA 4.0)

ಹಿಂದೆ ಅಮೆರಿಕೆಯ ಆಸ್ಟಿನ್ನಿನ ಟೆಕ್ಸಾಸ್‌ ವಿಶ್ವವಿದ್ಯಾನಿಲಯದಲ್ಲಿದ್ದು, ಈಗ ಬೆಂಗಳೂರಿನ ನ್ಯಾಶನಲ್‌ ಸೆಂಟರ್‌ ಫಾರ್‌ ಬಯಾಲಾಜಿಕಲ್‌ ಸೈನ್ಸಸ್‌ ನಲ್ಲಿರುವ ಚಿಟ್ಟೆಗಳ ಅಮರ ಪ್ರೇಮಿ ಕೃಷ್ಣಮೇಘ ಕುಂಟೆ ಡಾರ್ವಿನ್‌ ಹಾಗೂ ವ್ಯಾಲೇಸರ ಈ ವಿಭಿನ್ನ ತರ್ಕಗಳನ್ನು ಪರೀಕ್ಷೆಗೆ ಒಡ್ಡಿದ್ದಾರೆ. ಈಗಾಗಲೇ ಪ್ರಕಟವಾಗಿರುವ ಪೆಪಿಲಿಯೋ ಚಿಟ್ಟೆಗಳ ಅಣುಸ್ತರದ ವಂಶವೃಕ್ಷವನ್ನು ಗಮನವಿಟ್ಟು ಪರಿಶೀಲಿಸಿದರು. ಈ ವಿಷಯದಲ್ಲಿಯಂತೂ ವ್ಯಾಲೇಸ್‌ ಹೇಳಿದ್ದು ಸರಿ ಎನ್ನಿಸಿತು. ಸ್ವಾರಸ್ಯಕರ ವಿಷಯವೆಂದರೆ ಇದೇ ಪೆಪಿಲಿಯೋ ಚಿಟ್ಟೆಗಳೇ ಡಾರ್ವಿನ್‌ ಮತ್ತು ವ್ಯಾಲೇಸರ ನಡುವಿನ ನಿಸರ್ಗದ ಆಯ್ಕೆ ಹಾಗೂ ಲಿಂಗಗಳ ಆಯ್ಕೆಯ ಬಗೆಗಿನ ಚರ್ಚೆಗೂ ಕೇಂದ್ರವಾಗಿತ್ತು. ಈ ಚಿಟ್ಟೆಗಳಲ್ಲಿ ಗಂಡುಗಳು ತಮ್ಮ ಪೂರ್ವಜರ ಬಣ್ಣಗಳನ್ನೇ ಉಳಿಸಿಕೊಂಡಿದ್ದವೆಂದೂ, ಹೆಣ್ಣುಗಳು ಪೂರ್ವಜರ ಬಣ್ಣಗಳಿಂದ ಭಿನ್ನವಾಗಿ, ತಿನ್ನಲು ಬಾರದು ಎಂದು ತೋರುವ ಬೇಟ್ಸಿಯನ್‌ ಅಣಕವನ್ನು ಬೆಳೆಸಿಕೊಂಡಿವೆ ಎಂದು ಇವರು ತೋರಿಸಿದ್ದಾರೆ.

2008ನೇ ಇಸವಿಯಲ್ಲಿ ಪ್ರಕಟವಾದ ಕುಂಟೆಯವರ ಈ ಶೋಧವನ್ನು ಓದಿ ನಾನು ಮರುಳಾದೆ. ಏಕೆಂದರೆ ಅದು ಡಾರ್ವಿನ್ನನ ಬದಲಿಗೆ ವ್ಯಾಲೇಸನಿಗೇ ಜೈ ಎಂದಿತ್ತು. ಹೀಗೆ ಜನಪ್ರಿಯವಲ್ಲದವರ ಬಗ್ಗೆ ನನಗೆ ಬಲು ಒಲವಿದೆ. ಜೊತೆಗೆ ಅದು ಬಹಳ ಜಾಣತನದಿಂದ ಈಗಾಗಲೇ ಇರುವ ವಂಶವೃಕ್ಷವನ್ನೇ ಬಳಸಿಕೊಂಡಿತ್ತು. ಈ ವಂಶವೃಕ್ಷವನ್ನು ರಚಿಸುವುದು ದುಬಾರಿ ಕೆಲಸ. ಅದನ್ನು ಬಳಸಿ ಇನ್ಯಾರೂ ನೋಡದಿದ್ದ, ಕಾಣದಿದ್ದ ವಿಷಯಗಳನ್ನು ಇವರು ಕಂಡಿದ್ದರು. ಇದಕ್ಕೆ ಕಾಸು ಬೇಕಿಲ್ಲ ಜಾಣತನ ಸಾಕು.

ಬಣ್ಣಗಳ ಅರಿವು ಮತ್ತು ಬಣ್ಣಗಳ ಜೀವಿವಿಜ್ಞಾನ

ಇಂದು ಬಣ್ಣದ ವಿಜ್ಞಾನ ಹಾಗೂ ಜೀವಿವಿಜ್ಞಾನದ ಬಗ್ಗೆ ನಮಗೆ ಬಲು ಸುಸಂಬದ್ಧವಾದ ಅರಿವಿದೆ. ಈ ಲೇಖನಕ್ಕಾಗಿ ವಿಷಯ ಸಂಗ್ರಹಿಸುವಾಗ, ನಾನು ಅಮೆರಿಕನ್‌ ಮ್ಯೂಸಿಯಂ ಆಫ್‌ ನ್ಯಾಚುರಲ್‌ ಹಿಸ್ಟರಿಯ ರಾಬ್‌ ಡೆಸ್ಯಾಲಿ ಹಾಗೂ ಆಸ್ಟ್ರೇಲಿಯನ್‌ ನ್ಯಾಶನಲ್‌ ಯೂನಿವರ್ಸಿಟಿಯ ಹ್ಯಾನ್ಸ್‌ ಬ್ಯಾಕರ್‌ ಬರೆದ  ದಿ ನ್ಯಾಚುರಲ್‌ ಹಿಸ್ಟರಿ ಆಫ್‌ ಕಲರ್‌: ದಿ ಸೈನ್ಸ್‌ ಬಿಹೈಂಡ್‌ ವಾಟ್‌ ವಿ ಸೀ ಅಂಡ್‌ ಹೌ ವಿ ಸೀ ಇಟ್” ಎನ್ನುವ ಸ್ವಾರಸ್ಯಕರವಾದ, ಬಹುವಿಷಯಕ ಪುಸ್ತಕವೊಂದನ್ನು ಓದಿದೆ. ಬಣ್ಣದ ವಿಜ್ಞಾನ: ನಾವು ಬಣ್ಣವನ್ನು ನೋಡುವುದು ಹೇಗೆ, ಕಾಣುವುದು ಹೇಗೆ?  ಈ ಪುಸ್ತಕದಲ್ಲಿ ಡೆಸ್ಯಾಲಿ ಹಾಗೂ ಬ್ಯಾಕರ್‌ ಬಣ್ಣದ ಸುದೀರ್ಘವಾದ ಚರಿತ್ರೆಯ ಪಯಣಕ್ಕೆ ನಮ್ಮನ್ನು ಕೊಂಡೊಯ್ಯತ್ತಾರೆ. ವಿಶ್ವದ ಉಗಮದಿಂದ ಆರಂಭಿಸಿ, ಇಂದಿನ ಜನಾಂಗೀಯ ವರ್ಣ ದ್ವೇಷದ ವರೆಗೂ ಬಣ್ಣಗಳ ಕಥೆ ಇದರಲ್ಲಿ ಇದೆ.

ಗಿಡಗಳು ಮತ್ತು ಪ್ರಾಣಿಗಳಲ್ಲಿನ ಬಣ್ಣಗಳ ಬಗ್ಗೆ ನಮಗೆ ಇಂದು ಇರುವ ಅರಿವೆಲ್ಲವೂ ವಿಕಾಸವಿಜ್ಞಾನಿಗಳು, ಜೀವಿವಿಜ್ಞಾನಿಗಳು, ಪರಿಸರ ನಡವಳಿಕಾ ತಜ್ಞರು, ಮನೋವಿಜ್ಞಾನಿಗಳು, ತಳಿವಿಜ್ಞಾನಿಗಳು ಹಾಗು ಮಾನವಶಾಸ್ತ್ರಜ್ಞರು, ಅಷ್ಟೇ ಅಲ್ಲ. ಭೌತವಿಜ್ಞಾನಿಗಳು ಹಾಗೂ ಮೃದುವಸ್ತುವಿಜ್ಞಾನಿಗಳು ಒಟ್ಟಾಗಿ ನಡೆಸಿದ ಪ್ರಯತ್ನಗಳ ಫಲ ಎನ್ನಬಹುದು. ಈ ಸಂಶೋಧನೆಯಿಂದಾಗಿ ದೊರೆತ ಜೀವಿಪ್ರೇರಿತ ಹಾಗೂ ಜೈವಿಕ ವಸ್ತುಗಳನ್ನು ಅಣಕಿಸುವಂತಹ ಹೊಸ ವಸ್ತುಗಳು ಮತ್ತು ತಂತ್ರಜ್ಞಾನಗಳನ್ನು ಕ್ರೀಡೆ, ಫ್ಯಾಶನ್‌, ಮಿಲಿಟರಿ ಮತ್ತು ಕಲಾಕೃತಿಗಳ ಸಂರಕ್ಷಣೆಯಲ್ಲಿ ಉಪಯೋಗಿಸಲಾಗುತ್ತಿದೆ ಎಂದು ಕೇಳಿ ನನಗೆ ಒಂದೆಡೆ ಬೆರಗೂ, ಹಾಗೆಯೇ ಖುಷಿಯೂ ಆಗಿದೆ. ಬಣ್ಣಗಳ ಸಂಶೋಧನೆಯನ್ನು ಈಗಿನ ನವೀನತಮ ಸಂಶೋಧನೆಗಳಿಗೆ ಮಾದರಿ ಎನ್ನಬಹುದು. ಇದರಲ್ಲಿ ಕುತೂಹಲವಿದೆ. ತಂತ್ರಜ್ಞಾನದ ಬಳಕೆಯೂ ಇದೆ . ಹಲವು ಸ್ತರಗಳಲ್ಲಿ ಅಧ್ಯಯನಗಳು ನಡೆದಿವೆ, ಹಲವು ವಿಷಯಗಳ ಜೊತೆಗೆ ತಳುಕಿಕೊಂಡಿದೆ ಹಾಗೂ ಸಮಗ್ರ ಸ್ವರೂಪವೂ ಇದೆ.

ಜೀವವಿಜ್ಞಾನದ ಒಂದು ಶಾಖೆ ಈ ಮಟ್ಟವನ್ನು ಮುಟ್ಟಿದೆ ಎನ್ನುವುದೇ ವಿಶೇಷ. ಆದರೆ ಇಲ್ಲೂ ಒಂದು ತೊಂದರೆ ಇದೆ. ಇಂತಹ ಸಂಶೋಧನೆಗಳು ಬಹುತೇಕರನ್ನು ಬೆರಗಿನಿಂದ ನೋಡುವ ಪ್ರೇಕ್ಷಕರನ್ನಾಗಿಸಿಬಿಡುತ್ತದೆ. ಕೇವಲ ಅರಿವನ್ನು ಬಳಸುವವರನ್ನಾಗಿಸುತ್ತದೆಯೋ ಹೊರತು ಅರಿವಿನ ಜನಕರನ್ನಾಗಿಸುವುದಿಲ್ಲ. ಇದು ನನ್ನ ಸ್ವಾನುಭವ ಎನ್ನಿ. ನಾನು ಹೈಸ್ಕೂಲು ಮತ್ತು ಪದವಿ ಓದುತ್ತಿದ್ದಾಗ, ಈ ಅನುಭವವಾಗಿತ್ತು. ಈ ಹಿಂದಿನ ಸಂಶೋಧನೆಗಳ ಫಲವಾದ ಅರಿವನ್ನು ಪಡೆಯುವ ಸಾಮರ್ಥ್ಯವಿದ್ದೂ, ಸಂಶೋಧನೆಗೆ ಸುಸಜ್ಜಿತವಾದ ಸವಲತ್ತುಗಳು ಇಲ್ಲದಿದ್ದಾಗ ಆಗುವ ಸಂಕಟವನ್ನು ನಾನು ಅನುಭವಿಸಿದ್ದೇನೆ.

ಡಿಎನ್‌ಎಯ ರಚನೆಯನ್ನು ಅನ್ವೇಷಿಸಿದ ಫ್ರಾನ್ಸಿಸ್‌ ಕ್ರಿಕ್‌ ಚಿಕ್ಕವನಾಗಿದ್ದಾಗ ತಾನು ದೊಡ್ಡವನಾಗುವುದರೊಳಗೆ ಪ್ರಪಂಚದಲ್ಲಿ ತಿಳಿಯಬೇಕಾದದ್ದನ್ನೆಲ್ಲ ಪತ್ತೆ ಮಾಡಿಯಾಗಿರುತ್ತದೆ ಎಂದು ಚಿಂತೆಗೀಡಾಗಿದ್ದನಂತೆ. ಇತ್ತೀಚೆಗೆ ಇದನ್ನು ಓದಿದಾಗ  ಒಂದು ರೀತಿ ನಿರಾಳವೆನ್ನಿಸಿತು. ನಾವೀಗ ಅಷ್ಟು ಹತಾಶರಾಗಬೇಕಿಲ್ಲ ಎಂಬುದು ತಿಳಿದಿದೆ. ಈ ನಿಸರ್ಗದಲ್ಲಿ ಅನ್ವೇಷಣೆಯಾಗದಿರುವುದು ಬಹಳಷ್ಟು ಇವೆ. ಸರಳವಾದ, ವೆಚ್ಚವಿಲ್ಲದ, ಕಲ್ಪನೆಯೇ ಮೂಲವಾದ ಸಂಶೋಧನೆಗಳನ್ನು ಮಾಡಲು ಅದರಲ್ಲಿ ಸಾಕಷ್ಟು ಅವಕಾಶಗಳಿವೆ. ಅದಕ್ಕಾಗಿ ತಂತ್ರಜ್ಞಾನವೇ ಬೇಕಿಲ್ಲ. ಇತ್ತೀಚೆಗೆ ತಿರುವನಂತಪುರಂನಲ್ಲಿರುವ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಎಡುಕೇಶನ್‌ ಅಂಡ್‌ ರಿಸರ್ಚ್‌ ಸಂಸ್ಥೆಯ ಉಲ್ಲಾಸ ಕೋದಂಡರಾಮಯ್ಯ ಮತ್ತು ಅವರ ಶಿಷ್ಯ ವಿವೇಕ್‌ ಫಿಲಿಪ್‌ ಸಿರಿಯಾಕ್‌  ಹಾವುಗಳ ಮೇಲೆ ನಡೆಸಿದ ಸಂಶೋಧನೆ ಇದಕ್ಕೆ ಒಂದು ಇತ್ತೀಚಿನ​ ಪುರಾವೆ.

ಹಾವಿನ ಮೋಡಿ

ದಿ ಸರ್ಪೆಂಟ್‌ ಎನ್ನುವ ಸುಂದರ ಪ್ರಬಂಧದಲ್ಲಿ ಪ್ರಖ್ಯಾತ ಜೀವಿವಿಜ್ಞಾನಿ ಎಡ್ವರ್ಡ್‌ ಓ ವಿಲ್ಸನ್‌ ಹೀಗೆ ಹೇಳಿದ್ದಾರೆ.

“ಮನುಷ್ಯರಿಗೆ ಹಾವುಗಳ ಬಗ್ಗೆ ಸಹಜವಾದ ಭಯವಿದೆ. ಇಂತಹ ಭಯವನ್ನು ಸುಲಭವಾಗಿ ಬೇಗನೆ ಕಲಿಯಬಹುದು. ಇದರಿಂದಾಗಿ ಉಂಟಾಗುವ ಮನೋಸ್ಥಿತಿಗಳು ಕೂಡ ಬಲು ಪ್ರಬಲ ಹಾಗೂ ಚಂಚಲ. ಕೆಲವೊಮ್ಮೆ ಇವು ಭೀತಿಯಿಂದ ಓಡಿಹೋಗುವಂತೆ ಮಾಡುತ್ತವೆ. ಕೆಲವೊಮ್ಮೆ ಗಂಡಸ್ತನವನ್ನು, ಶಕ್ತಿಪ್ರದರ್ಶನವನ್ನೂ ತೋರುವಂತೆಯೂ ಮಾಡುತ್ತವೆ. ಹಾವುಗಳ ಬಗ್ಗೆ ಆಸ್ತೆ ವಹಿಸುವುದರಿಂದ ಹಾಗೂ ಅವುಗಳ ಬಗ್ಗೆ ಭಾವುಕವಾಗುವುದರಿಂದ, ಈ ಸಹಜ ಭಯವನ್ನೂ, ಎಚ್ಚರಿಕೆಯನ್ನೂ ಮೀರುವುದು ಸಾಧ್ಯ. ಹಾವುಗಳ ಜೊತೆಗೆ ಯಾವುದೇ ಭಯವಿಲ್ಲದೆ ಆಡುವ ಹಾಗೂ ಅವನ್ನು ಪ್ರೀತಿಸುವಂತೆ ಮನಸ್ಸನ್ನು ವಿಮುಖಗೊಳಿಸಲೂಬಹುದು.”

ವಿಲ್ಸನ್ನರ ಈ ಭವಿಷ್ಯವಾಣಿಗೆ ವಿವೇಕ್‌ ಮತ್ತು ಉಲ್ಲಾಸ ಪುರಾವೆ ಒದಗಿಸಿದ್ದಾರೆ ಎನಿಸುತ್ತಿದೆ. ವಿವೇಕ್‌ ನನಗೆ ಹೇಳಿದ್ದು, ಸ್ನಾತಕೋತ್ತರ ಪದವಿಗಾಗಿ ಕೇರಳ ಹಾಗೂ ಪಶ್ಚಿಮಘಟ್ಟದ ಇತರೆ ಪ್ರದೇಶಗಳಲ್ಲಿ ಉರಗಗಳ ಸರ್ವೆ ನಡೆಸುತ್ತಿದ್ದಾಗ ಹಾವುಗಳ ಬಗ್ಗೆ ಕುತೂಹಲ ಮೂಡಿತಂತೆ. ಇದುವೇ ಪಿಎಚ್‌ಡಿಗೆ ಹಾವುಗಳನ್ನೇ ಅಧ್ಯಯನ ಮಾಡಲು ಪ್ರೇರಣೆಯಾಯಿತು. ಉಲ್ಲಾಸನಿಗೂ ಉರಗಗಳ ಬಗ್ಗೆಯೇ ಆಸಕ್ತಿ. ಹೀಗಾಗಿ ತನ್ನ ಬಳಿಗೆ ವಿವೇಕ್‌ ಬಂದು ಹಾವುಗಳ ವಿಕಾಸವನ್ನು ಅಧ್ಯಯನ ಮಾಡುತ್ತೇನೆ ಎಂದಾಗ ಅವರಿಗೂ ತಕ್ಷಣವೇ ಕುತೂಹಲ ಮೂಡಿತು. ” ಪ್ರಾಣಿಗಳು ಬೇಟೆಗಾರರಿಂದ ತಪ್ಪಿಸಿಕೊಳ್ಳಲು ತಮ್ಮ ಬಣ್ಣಗಳ ರಚನೆಯನ್ನು ಹೇಗೆ ವಿಕಾಸವಾಗಿಸಿಕೊಂಡಿವೆ ಎನ್ನುವ ಬಗ್ಗೆ ನನಗೆ ಬಲು ದೀರ್ಘಕಾಲದಿಂದಲೇ ಆಸಕ್ತಿ ಇತ್ತು. ಇದುವೇ ಬಾಲದ ಮೇಲೆ ಹುರುಪೆಗಳಿರುವ ಶೀಲ್ಡ್‌ ಟೇಲ್ಡ್‌ ಎಂದು ಕರೆಯುವ ಹಾವುಗಳ ಬಣ್ಣಗಳ ಅಧ್ಯಯನಕ್ಕೆ ಪ್ರೇರಣೆ ” ಎನ್ನುತ್ತಾರೆ ಉಲ್ಲಾಸ.‌ ಹೀಗೆ ವಿವೇಕ್‌ ಮತ್ತು ಉಲ್ಲಾಸ ಯುರೋಪೆಲ್ಟಿಡ್‌ ಹಾವುಗಳ ಈ ಗಾಢ ಬಣ್ಣದ ಗುಟ್ಟನ್ನು ರಟ್ಟು ಮಾಡಲು ಹೊರಟರು.

ಯುರೋಪೆಲ್ಟಿಡ್‌ ಎನ್ನುವುದು ಬಲು ಪುರಾತನವಾದ ಹಾಗೂ ಭಾರತ ಮತ್ತು ಶ್ರೀಲಂಕಾಗಳಿಗೆ ಸೀಮಿತವಾದ ವಿಷರಹಿತ, ಬಿಲಗಳಲ್ಲಿ ವಾಸಿಸುವ ಹಾವುಗಳ ವರ್ಗ. ಇವುಗಳ ಬೆನ್ನು, ನೀರಸ ಕಂದು ಬಣ್ಣದವಾಗಿದ್ದರೂ, ತಳಭಾಗದಲ್ಲಿ ಗಾಢವಾದ ಹೊಳೆಯುವ ಹಳದಿ ಇಲ್ಲವೇ ಕೆಂಬಣ್ಣವಿರುತ್ತದೆ. ಬೇಟೆಗಾರರಿಗೆ ಸಿಕ್ಕಿಕೊಂಡಾಗ ಇವುಗಳು ಬೆನ್ನು ಅಡಿಗೆ ಹಾಕಿಕೊಂಡು, ದೇಹವನ್ನು ಬಳುಕಿಸುತ್ತಾ ತಮ್ಮ ಬಣ್ಣವನ್ನು ಪ್ರದರ್ಶಿಸುತ್ತವೆ. ಉತ್ತರ ಅಮೆರಿಕದಲ್ಲಿರುವ ಹಲವು ವಿಷವಿಲ್ಲದ ಹಾವುಗಳು ಈ ರೀತಿಯಲ್ಲಿ  ಗಾಢ ಬಣ್ಣವಿರುವ ವಿಷದ ಕೋರಲ್‌ ಹಾವುಗಳಂತೆಯೇ ಬಣ್ಣವನ್ನು ಪ್ರದರ್ಶಿಸುತ್ತವೆ ಎನ್ನುವುದು ಚೆನ್ನಾಗಿ ಗೊತ್ತು. ಬೇಟ್ಸಿಯನ್‌ ಅಣಕಕ್ಕೆ ಇದು ಸಾಕಷ್ಟು ಅಧ್ಯಯನ ಮಾಡಿದ ಉದಾಹರಣೆಯೂ ಹೌದು. ಆದ್ದರಿಂದ ಇಲ್ಲಿಯ ನಮ್ಮ ಯೂರೋಪೆಲ್ಟಿಡ್‌ ಹಾವುಗಳೂ ಕೂಡ ನಮ್ಮಲ್ಲಿನ ವಿಷದ ಕೋರಲ್‌ ಹಾವುಗಳೋ ಅಥವಾ ಇನ್ಯಾವುದೋ ಸ್ಥಳೀಯ ಲಕ್ಷ್ಮಿಚೇಳುಗಳಂತಹ ವಿಷಜಂತುಗಳನ್ನು ಅನುಕರಿಸುತ್ತಿರಬಹದೆನ್ನುವ ಅಂದಾಜಿತ್ತು.

Top: Ullasa Kodandaramaiah’s students in the field. Bottom-left: Coloured clay models before being placed in the transects. Photo: Ullasa Kodandaramaiah. Bottom-right: Ullasa. Photo: Subhash Rajpurohit.

ಮೇಲೆ: ಉಲ್ಲಾ ಕೋದಂಡರಾಮಯ್ಯನವರ ಶಿಷ್ಯಂದಿರು. ಬುಡದಲ್ಲಿ ಎಡಕ್ಕೆ: ಹಾದಿಯಲ್ಲಿ ಇಡಲು ಸಿದ್ಧವಾದ ಬಣ್ಣದ ಮಣ್ಣಿನ ಮಾದರಿಗಳು ಬುಡದಲ್ಲಿ ಬಲಕ್ಕೆ: ಉಲ್ಲಾಸ ಕೋದಂಡರಾಮಯ್ಯ. ಚಿತ್ರ: ಸುಭಾಷ್‌ ರಾಜಪುರೋಹಿತ್

‌ವಿವೇಕ್‌ ಮತ್ತು ಉಲ್ಲಾಸರು ಬೇರೆಯದೇ ಸಾಧ್ಯತೆಯನ್ನು ತರ್ಕಿಸಿದ್ದರು. ಯುರೋಪೆಲ್ಟಿಡ್‌ ಹಾವುಗಳು ವಿಷದ ಹಾವುಗಳನ್ನೋ, ವಿಷದ ಜರಿಹುಳುವನ್ನೋ ಅನುಕರಿಸುವುದಿಲ್ಲ. ಬದಲಿಗೆ ಅವು ತಾವು ತಿನ್ನಲು ಯೋಗ್ಯವಲ್ಲ ಎಂದು ಸತ್ಯವನ್ನೇ ಸಂಕೇತಿಸುತ್ತಿವೆ ಎಂದು ಇವರು ಊಹಿಸಿದರು. ಆದರೆ ಇವು ಬೇಟೆಗಾರರಿಗೆ ಏಕೆ ಬೇಡವಾಗುತ್ತವೆ? ಯೂರೋಪೆಲ್ಟಿಡ್ಡುಗಳ ದೇಹರಚನೆ ವಿಶಿಷ್ಟವಾಗಿರುತ್ತವೆ. ಬಹುಶಃ ಬಿಲಗಳೊಳಗೆ ವಾಸಿಸುವ ಅವುಗಳ ಅಭ್ಯಾಸಕ್ಕೆ ಅನುಗುಣವಾಗಿ ಇವು ಇದ್ದಿರಬಹುದು. ಪುಟ್ಟದೊಂದು ತಲೆ, ಹಾಗೂ ಪುಟ್ಟದಾದ ಗಟ್ಟಿಯಾದ ಹುರುಪೆಗಳಿಂದ ಮುಚ್ಚಿಕೊಂಡು, ಎರಡು ಕಪಟಕಣ್ಣುಗಳ ಚುಕ್ಕೆಗಳಿರುವ ತಲೆಯಂತೆಯೇ ಕಾಣುವ ಪುಟ್ಟ ಬಾಲ ಇರುವ ವಿಶಿಷ್ಟ ದೇಹವಿದೆ. ಅದರಿಂದಲೇ ಇವಕ್ಕೆ ಶೀಲ್ಡ್‌ ಟೇಲ್ಡ್‌ ಅಥವಾ ಹುರುಪೆಬಾಲದ ಹಾವುಗಳು ಎಂದು ಹೆಸರು. ಇವುಗಳು ಕಪಟಶಿರದ ಹಾವುಗಳು ಎಂದೂ ಹೇಳುವುದುಂಟು.

ಬೇಟೆಗಾರರು ದಾಳಿ ಮಾಡಿದಾಗ ಇವು ತಮ್ಮ ದೇಹದ ಅಡಿಭಾಗವನ್ನೂ, ಬಾಲವನ್ನೂ ಪ್ರದರ್ಶಿಸುತ್ತವೆ. ಇದರಿಂದಾಗಿ ಬೇಟೆಗಾರರಿಗೆ ಇವನ್ನು ಹಿಡಿದು ತಿನ್ನಲು ಹೆಚ್ಚು ಸಮಯ ಬೇಕಾಗುತ್ತದೆ. ಇಷ್ಟೇ ಗಾತ್ರದ ಬೇರೆ ಹಾವುಗಳನ್ನು ಬೇಟೆಯಾಡಿ ಕಬಳಿಸಲು ಎರಡರಿಂದ ನಾಲ್ಕು ನಿಮಿಷ ಸಾಕು. ಆದರೆ ಇವನ್ನು ಬೇಟೆಯಾಡಿ ತಿನ್ನಬೇಕೆಂದರೆ ಇಪ್ಪತ್ತರಿಂದ ನಲವತ್ತು ನಿಮಿಷಗಳು ಬೇಕಾಗುತ್ತದೆ. ಯೂರೋಪೆಲ್ಟಿಡ್ಡುಗಳನ್ನು ನೆಲವಾಸಿ ಹಕ್ಕಿಗಳಾದ ಕಾಡಕೋಳಿಗಳು, ನವಿಲು, ಸಾಕುಕೋಳಿಗಳು, ಬಾತು ಹಾಗೂ ಟರ್ಕಿಯಂತಹ ಪಕ್ಷಿಗಳು ತಿನ್ನುತ್ತವೆ. ಇವು ಧಾನ್ಯಗಳನ್ನೂ, ಕೀಟಗಳು, ಕಪ್ಪೆಗಳು, ಹಲ್ಲಿಗಳನ್ನೂ ತಿಂದು ಬದುಕಬಲ್ಲವು.  ತಮ್ಮನ್ನು ಬೇಟೆಯಾಡಲು ಹೆಚ್ಚು ಸಮಯ ಬೇಕು ಎನ್ನುವ ವಿಷಯವನ್ನು ಈ ಹಾವುಗಳು ಬಣ್ಣ ಬಣ್ಣವಾಗಿ ತೋರಿಸುತ್ತಿವೆ ಎನ್ನುವುದು ವಿವೇಕ್‌ ಮತ್ತು ಉಲ್ಲಾಸರ ತರ್ಕ.

ಅನಂತರ ತಮ್ಮ ತರ್ಕ ಸರಿಯೋ, ತಪ್ಪೋ ಎಂದು ತಿಳಿಸುವ ಪುರಾವೆಗಳನ್ನು ಹುಡುಕಲು ಹೊರಟರು. ಮೊದಲಿಗೆ ಈ ಯೂರೋಪೆಲ್ಟಿಡ್ಡುಗಳ ಗಾಢ ಬಣ್ಣಗಳು ಅವನ್ನು ಬೇಟೆಗಾರರಿಂದ ರಕ್ಷಿಸುತ್ತಿವೆಯೇ ಎಂದು ಕೇಳಿಕೊಂಡರು. ಇದನ್ನು ಪತ್ತೆ ಮಾಡಲು ಅವರು ಒಂದು ಸಾವಿರ ಹಾವಿನ ಬೊಂಬೆಗಳನ್ನು, ವಿಷವಿಲ್ಲದ ಕಂದು ಬಣ್ಣದ ಮಣ್ಣಿನಿಂದ ತಯಾರಿಸಿ, ಅವುಗಳಿಗೆ ಯೂರೋಪೆಲ್ಟಿಡ್‌ ಹಾವುಗಳ ಬಣ್ಣಗಳನ್ನು ಬಳಿದರು. ಈ ಬೊಂಬೆಗಳನ್ನು ಈ ಹಾವುಗಳು ಸಾಮಾನ್ಯವಾಗಿ ಕಾಣಬರುವ ನೆಲೆಗಳಲ್ಲಿ ಇರಿಸಿದರು. ಎಂಭತ್ತಾರು ಗಂಟೆಗಳಾದ ಮೇಲೆ ಎಷ್ಟು ಬೊಂಬೆಗಳು ಸಿಗುತ್ತವೆಯೋ ಅಷ್ಟನ್ನೂ ಸಂಗ್ರಹಿಸಿ, ಅವುಗಳ ಮೇಲೆ ಕಾಡುಕೋಳಿಯಂತಹ ಪಕ್ಷಿಗಳು ಬೇಟೆಯಾಡಿದ ಕುರುಹುಗಳು ಏನಾದರೂ ಇವೆಯೋ ಎಂದು ಗಮನಿಸಿದರು. ನಿಜವಾದ ಹಾವುಗಳಂತೆಯೇ ತೋರಲಿ ಎಂದು ಗಾಢವಾಗಿ ಹೊಳೆಯುವ ಬಣ್ಣಗಳನ್ನು ಬಳಿದಿದ್ದ ಬೊಂಬೆಗಳ ಮೇಲೆ ಬೇಟೆ ಬಿದ್ದ ಕುರುಹುಗಳು, ಇಂತಹ ಗಾಢ ಬಣ್ಣಗಳಿಲ್ಲದ ಗೊಂಬೆಗಳ ಮೇಲೆ ಇದ್ದುದ್ದಕ್ಕಿಂತಲೂ ಕಡಿಮೆ ಇತ್ತು. ಅಂದರೆ ಈ ಗಾಢ ಹೊಳೆಯುವ ಬಣ್ಣಗಳು ಅವನ್ನು ರಕ್ಷಿಸುತ್ತವೆ.

ತಮ್ಮ ಊಹೆಯನ್ನು ಪರೀಕ್ಷಿಸಲು ಅವರು ಅಂತಿಮ ಪ್ರಯೋಗವೊಂದನ್ನೂ ನಡೆಸಿದರು. ಇದು ಹಾವುಗಳ ಗಾಢ ಬಣ್ಣ ಹೆಚ್ಚಿದ್ದರೆ ಅವುಗಳನ್ನು ಹಿಡಿಯಲು ಹೆಚ್ಚು ಸಮಯ ಬೇಕಾಗುತ್ತದೆ ಎನ್ನುವ ತರ್ಕ. ಬೇಟೆಯನ್ನು ಹಿಡಿಯಲು ಹೆಚ್ಚು ಸಮಯ ಬೇಕಾದಷ್ಟೂ ಬೇಟೆಗಾರರು ಅವುಗಳ ಬದಲಿಗೆ ಕಡಿಮೆ ಸಮಯ ತೆಗೆದುಕೊಳ್ಳುವ ಬೇಟೆಗಳನ್ನು ಹೆಚ್ಚೆಚ್ಚು ಹಿಡಿಯಬೇಕು. ಬೇಟೆಗಾರರು  ಈ ಬಣ್ಣಗಳಿಗೂ ಬೇಟೆಯಾಡುವ ಸಮಯ ಹೆಚ್ಚಿರುವುದಕ್ಕೂ ಸಂಬಂಧ ಕಲ್ಪಿಸುತ್ತವೆಯೇ ಎಂಬುದನ್ನು ಪರೀಕ್ಷಿಸಲು ವಿವೇಕ್‌ ಮತ್ತು ಉಲ್ಲಾಸ ಬೇಟೆಗೆ ಹೆಚ್ಚು ಸಮಯ ಬೇಕಾಗುವ ಹಾಗೂ ಬೇಗನೆ ಬೇಟೆಗೆ ಸಿಲುಕುವ ಬಗೆಯ ಹಾವುಗಳ ಮಾದರಿಗಳನ್ನು ವಿವಿಧ ಬಣ್ಣಗಳಲ್ಲಿ ತಯಾರಿಸಿದರು. ಈ ಸಂಶೋಧನೆಯ ಹಿಂದಿನ ಸ್ವಾರಸ್ಯಕರ ಕಥೆಯನ್ನು ವಿವೇಕ್‌ ನನಗೆ ಈ ಮೇಲ್‌ ಮಾಡಿ ಹೀಗೆ ಹೇಳಿದರು.

“ಕೋಳಿಗಳು ಬೇಟೆಯ ಸಮಯವನ್ನು ತಿಳಿಯುತ್ತವೆಯೋ ಎಂಬುದನ್ನು ಪರೀಕ್ಷಿಸುವ ಈ ಐಡಿಯಾ ಬಂದಿದ್ದು ಆಕಸ್ಮಿಕ. ನಾವು ಕ್ಷೇತ್ರಾಧ್ಯಯನಕ್ಕೆ ಹೋದಾಗ, ಸಿ. ಎಸ್.‌ ಜಯಸೂರ್ಯ ಎಂಬ ವಿದ್ಯಾರ್ಥಿ ರಾತ್ರಿಯಡುಗೆಗೆ ಚಪಾತಿ ಮಾಡುತ್ತಿದ್ದ. ಚಪಾತಿಗಳು ಎಷ್ಟು ಗಟ್ಟಿಯಾಗಿದ್ದುವು ಎಂದರೆ ಊಟ ಮುಗಿಸಲು ಬಹಳ ಹೊತ್ತು ಬೇಕಾಗುತ್ತಿತ್ತು. ಆಗ ನನಗೊಂದು ಅಲೋಚನೆ ಬಂದಿತು. ಯುರೋಪೆಲ್ಟಿಡ್‌ ಹಾವುಗಳಲ್ಲಿ ಕಾಣುವ ಕಪಟಶಿರದ ಅಣಕ ಅವುಗಳನ್ನು ಬೇಟೆಯಾಡಲು ಬೇಕಾದ ಸಮಯವನ್ನು ಹೆಚ್ಚಿಸುತ್ತಿರಬೇಕು. ಇದನ್ನು ಅವುಗಳ ಗಾಢವಾದ ಬಣ್ಣ ಪ್ರದರ್ಶಿಸುತ್ತಿರಬೇಕು.  ಇದಾದ ನಂತರ ನಾವು ಹಸಿ ಹಿಟ್ಟು ಹಾಗೂ ಬೇಯಿಸಿದ ಹಿಟ್ಟಿನ ಜೊತೆಗೆ ಪ್ರಯೋಗ ಮಾಡಿದೆವು. ಕೋಳಿಗಳು ತಮ್ಮ ಬೇಟೆಯ ಬಣ್ಣಕ್ಕೂ ಅವುಗಳನ್ನು ಬೇಟೆಯಾಡುವ ಸಮಯಕ್ಕೂ ಸಂಬಂಧ ಕಲ್ಪಿಸಬಲ್ಲುವೇ ಎನ್ನುವ ಪ್ರಯೋಗಕ್ಕೆ ಅಣಿಯಾದೆವು.”

ವಿವೇಕ್‌ ಮತ್ತು ಉಲ್ಲಾಸರು ಬಂಧನದಲ್ಲಿಟ್ಟಿದ್ದ ಕೋಳಿಗಳಿಗೆ ತರಬೇತಿ ನೀಡಿದರು. ಕೋಳಿಗಳ ಒಂದು ಗುಂಪಿಗೆ ಸುಟ್ಟ ಹಿಟ್ಟು ಹಾಗೂ ಸುಡದ ಹಿಟ್ಟಿನಿಂದ ಮಾಡಿದ ಹಾವಿನ ಬೊಂಬೆಗಳನ್ನು ನೀಡಿದರು. ಆದರೆ ಇವೆರಡನ್ನೂ ಕಂದು ಬಣ್ಣದ ಕಾಗದದ ಮೇಲೆ ಇಟ್ಟಿದ್ದರು. ಹೀಗಾಗಿ ಇವು ಎಂಥವು ಎಂದು ಮುಂದಾಗಿಯೇ ತಿಳಿಯುವುದು ಅಸಾಧ್ಯವಾಗಿತ್ತು. ಕೋಳಿಗಳು ಸುಟ್ಟ ಹಿಟ್ಟಿನಿಂದ ಮಾಡಿದ ಬೊಂಬೆಗಳನ್ನು ಹಿಡಿಯಲು ಸುಡದೇ ಇದ್ದ ಹಸಿ ಹಿಟ್ಟಿನ ಬೊಂಬೆಗಳನ್ನು ಹಿಡಿಯಲು ತೆಗೆದುಕೊಂಡದ್ದಕ್ಕಿಂತ ಸಾಕಷ್ಟು ಹೆಚ್ಚು ಸಮಯ ತೆಗೆದುಕೊಂಡದ್ದನ್ನು ಖಚಿತ ಪಡಿಸಿಕೊಂಡರು. ಹಿಡಿಯಲು ಬೇಕಾದ ಸಮಯ ಎಂದರೆ ಬೊಂಬೆಯನ್ನು ಮೊದಲು ಮುಟ್ಟಿದಾಗಿನಿಂದ, ಅದನ್ನು ಸಂಪೂರ್ಣವಾಗಿ ನುಂಗುವುದಕ್ಕೆ ತೆಗೆದುಕೊಂಡ ಸಮಯ. ಅನಂತರ ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಲು ನೀಡಿದಾಗ, ಕೋಳಿಗಳು ಯಾವುದೇ ಒಂದಕ್ಕೆ ಆದ್ಯತೆ ನೀಡಲಿಲ್ಲ. ಅಂದರೆ ಅವು ಇವೆರಡನ್ನೂ ಬೇರೆ, ಬೇರೆ ಎಂದು ಗುರುತಿಸದಾಗಿದ್ದವು.

ಅನಂತರ ಅವರು ಸುಟ್ಟ ಹಿಟ್ಟಿನ ಬೊಂಬೆಗಳನ್ನು ಹಳದಿ ಬಣ್ಣದ ಕಾಗದದ ಮೇಲೆ ಇಟ್ಟು, ಹಾಗೂ ಸುಡದ ಹಿಟ್ಟನಿಂದ ಮಾಡಿದ ಬೊಂಬೆಗಳನ್ನು ಕಂದು ಬಣ್ಣದ ಕಾಗದದ ಮೇಲೆ ಇಟ್ಟು ಕೋಳಿಗೆಳಿಗೆ ನೀಡಿದರು. ಪರೀಕ್ಷೆಗೆ ಒಡ್ಡಿದಾಗ ಈ ಕೋಳಿಗಳು ಸುಡದ ಹಸಿ ಹಿಟ್ಟಿನ ಬೊಂಬೆಗಳ ಮೇಲೆ ಹೆಚ್ಚು ದಾಳಿ ಮಾಡಿದವು ಹಾಗೂ ಸುಟ್ಟ ಹಿಟ್ಟಿನ ಬೊಂಬೆಗಳಿಂದ ದೂರವಿದ್ದುವು. ಇದರ ಅರ್ಥ ಅವು ಹಳದಿ ಕಾಗದದಲ್ಲಿದ್ದ ಆಹಾರವನ್ನು ತಿನ್ನುವುದು ಕಷ್ಟ ಎಂದು ಕಲಿತಿದ್ದವು. ಈ ಶೋಧ ಪ್ರಬಂಧದ 

ಹೆಸರೂ ಇದನ್ನು ಸ್ಪಷ್ಟಪಡಿಸುತ್ತದೆ: ಡೋಂಟ್‌ ವೇಸ್ಟ್‌ ಯುವರ್‌ ಟೈಂ: ಪ್ರಿಡೇಟರ್ಸ್‌ ಅವಾಯ್ಡ್‌ ಪ್ರೇ ವಿತ್‌ ಕಾಂಸ್ಪಿಕ್ಯುವಸ್‌ ಕಲರ್ಸ್‌ ದಟ್‌ ಸಿಗ್ನಲ್‌ ಲಾಂಗ್‌ ಹ್ಯಾಂಡ್ಲಿಂಗ್‌ ಟೈಂ ಸ್.” ಸಮಯ ವ್ಯರ್ಥ ಮಾಡ ಬೇಡಿ: ಬೇಟೆಗಾರರು ಹಿಡಿಯಲು ಹೆಚ್ಚು ಸಮಯ ಬೇಕಾದ ಗಾಢ ಬಣ್ಣದ ಬೇಟೆಗಳಿಂದ ದೂರವಿರುತ್ತವೆ.

ತಂತ್ರಸಾಧನಗಳನ್ನು ಬಳಸಿಕೊಂಡು ನಡೆಸುವ ಹೊಸ ಜೀವಿವಿಜ್ಞಾನವೂ ನನಗೆ ಬೆರಗಿನ ವಿಷಯವೇ. ಆದರೆ ಕೇವಲ ನಿಸರ್ಗದ ಬಗೆಗಿನ ಪ್ರೀತಿ, ಕುತೂಹಲ, ಒಂದಿಷ್ಟು ಅದ್ಭುತ ಕಲ್ಪನೆಗಳು ಹಾಗೂ ಸ್ವಲ್ಪ ಗೋದಿ ಹಿಟ್ಟಿನಿಂದಲೇ ನಾವು ಇನ್ನೂ ಎಷ್ಟನ್ನೋ ಸಾಧಿಸಬಹುದು ಎನ್ನುವುದು ನನಗೆ ಬಹಳ ಖುಷಿ ತರುತ್ತಿದೆ.

ಇದು ಇಂದಿನ ಜಾಣ ಅರಿಮೆ. ಆಂಗ್ಲ ಮೂಲ. ಪ್ರೊಫೆಸರ್‌ ರಾಘವೇಂದ್ರ ಗದಗಕರ್‌ , ಕನ್ನಡಾನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್‌. ಮಂಜುನಾಥ. ಆಂಗ್ಲಮೂಲವನ್ನು ದಿ ವೈರ್ ಸೈನ್ಸ್ ಜಾಲತಾಣ ಮೊದಲು ಪ್ರಕಟಿಸಿತ್ತು. 

Scroll To Top