Now Reading
ವಿಜ್ಞಾನಿಗಳು ಜನಸಾಮಾನ್ಯರಿಗಾಗೂ ಬರೆಯಬೇಕು 

ವಿಜ್ಞಾನಿಗಳು ಜನಸಾಮಾನ್ಯರಿಗಾಗೂ ಬರೆಯಬೇಕು 

ಚಾರ್ಲ್ಸ್‌ ಡಾರ್ವಿನ್ ಕೀಟವಿಜ್ಞಾನದ ‘ಹೋಮರ್’ ಎಂದು ಬಿರುದು ನೀಡಿದ್ದ ಫ್ರೆಂಚ್‌ ಕೀಟವಿಜ್ಞಾನಿ ಹಾಗೂ ಪ್ರಬಂಧಕಾರ ಜೀನ್-ಹೆನ್ರಿ ಫೇಬರ್‌ (1820-1910). ಚಿತ್ರ: ಸಾರ್ವಜನಿಕ ಆಸ್ತಿ

ಸಂಪುಟ 4 ಸಂಚಿಕೆ 268, ಜೂನ್ 26, 2021

ಜಾಣ ಅರಿಮೆ

ವಿಸ್ಮಯಕ್ಕಿಂತ ವಿಸ್ಮಯ 21

ವಿಜ್ಞಾನಿಗಳು ಜನಸಾಮಾನ್ಯರಿಗಾಗೂ ಬರೆಯಬೇಕು 

ಪ್ರೊ. ರಾಘವೇಂದ್ರ ಗದಗ್ಕರ್

Kannada translation by Kollegala Sharma

§

ಇಂಡಿಯನ್‌ ಇನ್ಟ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೇಶನ್‌ ಅಂಡ್‌ ರೀಸರ್ಚ್‌, ಕೋಲ್ಕತ್ತ ಸಂಸ್ಥೆಯಲ್ಲಿ ತಾನು ಹುಟ್ಟು ಹಾಕಿದ ಕೋಜಿಟೋ 137 ಎಂಬ ಹೆಸರಿನ ಬಹುಭಾಷಾ ವೆಬ್ ಆಧಾರಿತ ವಿಜ್ಞಾನ ಸಂವಹನ ವೇದಿಕೆಯೊಂದು ಇತ್ತೀಚೆಗೆ ಎಂಎಸ್ಸಿ ಮತ್ತು ಡಾಕ್ಟರೇಟು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿಜ್ಞಾನ ಸಂವಹನ ಕಾರ್ಯಾಗಾರವೊಂದರಲ್ಲಿ ಮಾತನಾಡಲೆಂದು ನನ್ನ ಹಳೆಯ ಶಿಷ್ಯೆ ಅನಿಂದಿತಾ ಭದ್ರಾ ನನಗೆ ಆಹ್ವಾನ ನೀಡಿದ್ದಳು. ಈ ಕಮ್ಮಟದಲ್ಲಿ ಹಲವು ಪರಿಣತರು ಭಾಷಣ ನೀಡಿದರು.  ವಿಜ್ಞಾನ ಸಂವಹನದ ಬಗ್ಗೆ ತಾತ್ವಿಕವಾಗಿಯಾಗಲಿ, ಪ್ರಾಯೋಗಿಕವಾಗಿಯಾಗಲಿ ನಾನು ಪರಿಣತನಲ್ಲದಿದ್ದರೂ, ನನ್ನದೊಂದು ವಿಚಾರವನ್ನು ಹೇಳಬೇಕೆನಿಸಿದ್ದರಿಂದ ಕಮ್ಮಟದಲ್ಲಿ ಭಾಷಣ ಮಾಡಲು ಒಪ್ಪಿಕೊಂಡಿದ್ದೆ.

ನಾವು ಇಂದು ಜ್ಞಾನವನ್ನು ಸೃಷ್ಟಿಸುತ್ತಿರುವ ವಿಜ್ಞಾನಿಗಳ ಕೆಲಸ ಹಾಗೂ ಆ ಜ್ಞಾನವನ್ನು ವಿಸ್ತೃತವಾಗಿ ತಿಳಿಸಿಕೊಡುವ ವಿಜ್ಞಾನ ಲೇಖಕರ ಕಾಯಕಗಳ ನಡುವೆ ಭೇದವನ್ನು ಕಾಣುತ್ತಿದ್ದೇವೆ. ವಿಜ್ಞಾನ ಎಷ್ಟೊಂದು ಜಟಿಲವಾಗಿಬಿಟ್ಟಿದೆ ಎಂದರೆ ಅದನ್ನು ಸಾಮಾನ್ಯ ಜನರಿಗೆ ತಿಳಿಸಿಕೊಡುವಷ್ಟು ಸಮಯ ಹಾಗೂ ಕೌಶಲ್ಯ ವಿಜ್ಞಾನಿಗಳಿಗೆ ಇಲ್ಲ ಎಂದು ಈ ಭೇದಕ್ಕೆ ಕಾರಣವನ್ನು ಕೊಡುತ್ತೇವೆ. ಇದೇ ಕಾರಣದಿಂದಲೇ ವಿಜ್ಞಾನ ಲೇಖಕರಿಗೆ ಸಂಶೋಧನೆ ಮಾಡುವ ಅವಕಾಶವಾಗಲಿ, ಜ್ಞಾನ ಸೃಷ್ಟಿಗೆ ಬೇಕಾದ ಕೌಶಲ್ಯವಾಗಲಿ ಇಲ್ಲ ಎಂದೂ ಹೇಳಿಬಿಡುತ್ತೇವೆ. ಸ್ವಲ್ಪ ಮಟ್ಟಿಗೆ ಈ ಸಮಜಾಯಿಷಿ ಸರಿ ಎನ್ನಿಸಿದರೂ, ವಿಜ್ಞಾನದ ಜಟಿಲತೆಯನ್ನೇ ಮುಂದಿಟ್ಟುಕೊಂಡು, ಈ ಕಾಯಕಭೇದವನ್ನು ಅವಶ್ಯಕತೆಗಿಂತಲೂ ದೊಡ್ಡದಾಗಿಸಿ ವಿಜ್ಞಾನಿಗಳು ತಮ್ಮ ಹೊಣಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬುದು ನನ್ನ ಆತಂಕ.

ಕಾಯಕ ಭೇದ ಬೇಕಿಲ್ಲ

ವಿಜ್ಞಾನಿಗಳು ಹಾಗೂ ವಿಜ್ಞಾನಲೇಖಕರ ನಡುವೆ ಇಂತಹ ಕಾಯಕಭೇದ ಇಲ್ಲದ ಲೋಕ ಒಂದು ಆದರ್ಶಲೋಕ. ಅಲ್ಲಿ ವಿಜ್ಞಾನಿಗಳು ವಿಜ್ಞಾನವನ್ನು ಜನತೆಗೆ ತಿಳಿಸಿಕೊಡಬೇಕಾದ ಕೆಲಸವನ್ನು ವಿಜ್ಞಾನಲೇಖಕರಿಗೆ ಬಿಟ್ಟು ಕೊಡಬಾರದು. ಹಾಗೆಯೇ ಜ್ಞಾನಸೃಷ್ಟಿ ಎನ್ನುವುದು ಕೇವಲ ವಿಜ್ಞಾನಿಗಳ ಕೆಲಸವಷ್ಟೆ ಎನ್ನಿಸಬಾರದು. ತಿಳಿಸಿಕೊಡುವ ಕೆಲಸದಲ್ಲಿರುವ ಖುಷಿಯೇ ಜ್ಞಾನವನ್ನು ಸೃಷ್ಟಿಸುವ ಶೋಧ ಕಾರ್ಯಕ್ಕೆ ಪ್ರೇರಣೆಯಾಗಿಯೂ, ಜ್ಞಾನವನ್ನು ಸೃಷ್ಟಿಸುವುದರಲ್ಲಿ ಇರುವ ಖುಷಿ ವಿಜ್ಞಾನ
ಬರಹಗಳಿಗೆ ಸ್ಪೂರ್ತಿಯಾಗಿಯೂ ಇರಬೇಕು. ಇಂತಹ ಕನಸು ನನಸಾಗಬೇಕಾದರೆ ವಿಜ್ಞಾನಿಗಳ ಸಂಸ್ಕೃತಿಯಲ್ಲಿಯೇ ಪಲ್ಲಟವಾಗಬೇಕು.

ಕೇವಲ ಹೊಸ ಅರಿವನ್ನು ಸೃಷ್ಟಿಸುವುದಕ್ಕಷ್ಟೆ ವಿಜ್ಞಾನಿಗಳು ತೃಪ್ತರಾಗಬೇಕಿಲ್ಲ. ತಮ್ಮ ಈ ಕಾಯಕದ ಪೂರ್ಣ ಲಾಭವನ್ನು ಪಡೆಯಲು ಅವರು ಪರಿಣಾಮಕಾರಿ ಸಂವಹನಕಾರರೂ ಆಗಬೇಕು. ವಿಜ್ಞಾನಿಗಳಲ್ಲಿ ಇಂತಹ ಬದಲಾವಣೆಯನ್ನು ತರುವುದಾದರೂ ಹೇಗೆ? ಮೊದಲಿಗೆ ವಿಜ್ಞಾನಿಗಳಿಗೆ  ಉತ್ಕೃಷ್ಟವಾಗಿ ಬರೆಯುವ ಇಚ್ಛೆ ಬರಬೇಕು. ಬರಹದ ಶೈಲಿ ಎನ್ನುವುದು ಪ್ರತಿಷ್ಠೆಯಾಗಬೇಕು.

ಹೀಗೆ ಇಲ್ಲದೇಇರುವುದು ವಿಜ್ಞಾನಿಗಳಲ್ಲದವರಿಗೆ  ವಿಚಿತ್ರವೆನ್ನಿಸಬಹುದು. “ವಿಜ್ಞಾನಿಗಳಿಗೆ ತಮ್ಮನ್ನು ಎಲ್ಲಿಯಾದರೂ ಅರ್ಥ ಮಾಢಿಕೊಂಡುಬಿಟ್ಟರೆ, ಜನತೆ ತಮ್ಮನ್ನು ಉನ್ನತ ಸ್ಥಾನದಲ್ಲಿಟ್ಟು ನೀಡುವ ಗೌರವ, ಮಾಯಾವಿಗಳೆನ್ನುವಂತೆ ಕಾಣುವ ಭಾವವನ್ನು ತಾವೆಲ್ಲಿ ಕಳೆದುಕೊಂಡು ಬಿಡುತ್ತೇವೋ” ಎನ್ನುವ ಭಯ ಇದೆ ಎಂದು ನನ್ನ ಗೆಳೆಯನೊಬ್ಬ ತಮಾಷೆ ಮಾಡುತ್ತಿದ್ದ.

ಸಿ. ಪಿ. ಸ್ನೋ ಬರೆದ ದಿ ಟು ಕಲ್ಚರ್ಸ್‌ ಅಂದರೆ ಎರಡು ಸಂಸ್ಕೃತಿಗಳು ಎನ್ನುವ ಪುಸ್ತಕದ ಮುನ್ನುಡಿಯಲ್ಲಿ ಕೇಂಬ್ರಿಜ್‌ ವಿಶ್ವವಿದ್ಯಾನಿಲಯದಲ್ಲಿ  ಬೌದ್ಧಿಕ ಚರಿತ್ರೆಯ ಹಾಗೂ ಇಂಗ್ಲೀಷ್‌ ಸಾಹಿತ್ಯದ ಪ್ರಾಧ್ಯಾಪಕರಾಗಿದ್ದ ಸ್ಟೀಫನ್ ಕೊಲಿನಿ, ವಿಜ್ಞಾನಿಗಳ ಈ ಸಂದಿಗ್ಧವನ್ನು ಹೀಗೆ ಸುಂದರವಾಗಿ ವಿವರಿಸಿದ್ದಾರೆ.

“ಹಲವು ಪ್ರಾಯೋಗಿಕ ವಿಜ್ಞಾನ ಕ್ಷೇತ್ರಗಳಲ್ಲಿ ಸೃಜನಶೀಲ ಬರೆವಣಿಗೆಗೆ ಯಾವುದೇ ಪಾತ್ರವೂ ಇಲ್ಲ. ಬರೆವಣಿಗೆ ಎನ್ನುವುದು ಶೋಧದ ಅಂಗವಲ್ಲ. ಅದೇನಿದ್ದರೂ ಶೋಧದ ನಂತರದ ವರದಿ ಮಾಡುವ ಕ್ರಿಯೆ. ಫಲಿತಾಂಶಗಳ ವರದಿ ಖಚಿತವಾಗಿರಬೇಕು, ಕ್ಲುಪ್ತವಾಗಿರಬೇಕು ಹಾಗೂ ಸ್ಪಷ್ಟವಾಗಿರಬೇಕು ಎನ್ನುವುದೇನೋ ನಿಜ. ಆದರೆ ಹೀಗೆ ತಮ್ಮ ಶೋಧ ವಿವರಗಳನ್ನು ತಿಳಿವಿಗೆ ಅನುಕೂಲವಾಗಿರುವಂತೆ ಬರೆಯುವುದನ್ನು ಕೆಲವು ವಿಜ್ಞಾನಿಗಳು ಹೊರೆಯೆಂದು ಭಾವಿಸುತ್ತಾರೆ. ಕೆಲವರು ಇದರಿಂದ ಖುಷಿ ಪಡೆದರೂ, ಸುಗಮ ಶೈಲಿಯಲ್ಲಿ ಬರೆಯುವುದನ್ನು ರೂಢಿಸಿಕೊಳ್ಳುವುದಕ್ಕಾಗಲೀ, ತಮ್ಮ ಶೈಲಿಯ ಬರಹಗಳಿಗಾಗಲಿ ವಿಜ್ಞಾನಿಗಳ ಜಗತ್ತಿನಲ್ಲಿ ಬೆಲೆ ಇಲ್ಲ. ಆದರೆ ಮಾನವಿಕ ವಿಜ್ಞಾನದ ಹಲವು ವಿಷಯಗಳಲ್ಲಿ ಸೃಜನಾತ್ಮಕ ಚಿಂತನೆಗಳು ಬರಹದಲ್ಲಿಯೇ ಮೂಡುತ್ತವೆಯಲ್ಲದೆ, ಒಂದು ಪುಸ್ತಕವನ್ನೋ, ಲೇಖನವನ್ನೋ ಬರೆಯುವ ಕ್ರಿಯೆಯೇ ಕರ್ತೃವಿನ ಅರಿವಿನ ಮಟ್ಟದ ಪ್ರಧಾನ ಪ್ರತಿನಿಧಿ “

ಇದನ್ನು ಒಪ್ಪಲೇ ಬೇಕು. ಉದಾಹರಣೆಗೆ, “ಓ! ನೇಚರ್‌ ಪತ್ರಿಕೆಯಲ್ಲಿ ನಿನ್ನೆ ಒಂದು ಪ್ರಬಂಧ ಓದಿದೆ. ಅದು ಎಷ್ಟು ಚೆನ್ನಾಗಿ ಬರೆದಿತ್ತು ಗೊತ್ತಾ?” ಅಂತ ಒಬ್ಬ ವಿಜ್ಞಾನಿ ಇನ್ನೊಬ್ಬನಿಗೆ ಹೇಳುವುದನ್ನು ಎಂದೂ ಕೇಳಿಲ್ಲ. ಇಂತಹದೊಂದು ಮಾತನ್ನು ನಾವು ನುಡಿದರೆ ಅದನ್ನೊಂದು ಹೀಗಳೀಕೆ ಎಂದೇ ಭಾವಿಸಲಾಗುತ್ತದೆ. ಆ ಪ್ರಬಂಧದಲ್ಲಿ ಬೇರೇನೂ ತಿರುಳಿಲ್ಲವೇನೋ ಎನ್ನುವಂತೆ.

ಕೊಲಿನಿ ಕೊಟ್ಟ ಈ ವಿವರಣೆಯನ್ನು ಅಲ್ಲಗಳೆಯುವಂತೆ ವಿಜ್ಞಾನಿಗಳು ಸುಧಾರಿಸಬೇಕಾಗಿದೆ.

ಆದರೆ ಹೇಗೆ?

ಇದಕ್ಕೆ ನನಗೆ ಪ್ರಿಯವಾದ ಕೆಲವು ಐಡಿಯಾಗಳು ಇವೆ. ಮೊದಲು ನಾವು ಸಿಕ್ಕಿದ್ದನ್ನೆಲ್ಲ ಓದುವ ಓದುಬಾಕರಾಗಬೇಕು. ಒಳ್ಳೆಯದು, ಕೆಟ್ಟದ್ದು, ದುಷ್ಟವೆನ್ನದೆ ಓದದಿದ್ದರೆ ನಾವು ಒಳ್ಳೆಯ ಓದುಗರಾಗಲಿ, ಲೇಖಕರಾಗಲಿ ಆಗಲಾರೆವು. ಸಾಕಷ್ಟು ಕಥೆ, ಸಾಹಿತ್ಯವನ್ನೂ ಓದಬೇಕು. ಕಥೆಗಳನ್ನು ಓದುವುದರಿಂದ ಹಲವು ಬಗೆಯ ಬರಹಶೈಲಿಗಳ ಪರಿಚಯ ಆಗುವುದರ ಜೊತೆಗೇ, ನಮ್ಮ ಕಲ್ಪನಾ ಸಾಮರ್ಥ್ಯವೂ ಬೆಳೆಯುತ್ತದೆ. ವಿಜ್ಞಾನಿಗಳಿಗೂ ಈ ಕಲ್ಪನೆಯ ಸಾಮರ್ಥ್ಯ ಬಲು ಮುಖ್ಯ. ಹೊಸ ಪರಿಕಲ್ಪನೆಗಳನ್ನು ಊಹಿಸಿಕೊಳ್ಳುವುದಕ್ಕೆ, ಮನಸ್ಸಿನಲ್ಲಿಯೇ ಪ್ರಯೋಗಗಳನ್ನು ರೂಪಿಸುವುದಕ್ಕೆ, ಹಾಗೂ ನಮ್ಮ ಸಿದ್ಧಾಂತಗಳ ಪ್ರಭಾವಗಳೇನಿರಬಹುದು ಎನ್ನುವುದನ್ನು ಊಹಿಸುವುದಕ್ಕೂ ಕಲ್ಪನಾಶಕ್ತಿ ಬೇಕು. ಮುಗ್ದ ಓದುಗರ ಮಾನಸಿಕ ಪ್ರಪಂಚದೊಳಗೆ ಹೊಕ್ಕು, ಅವರಿಗೆ ಜಟಿಲವಾದ ವೈಜ್ಞಾನಿಕ ಪರಿಕಲ್ಪನೆಗಳ ಅರಿವನ್ನು ಮೂಡಿಸುವುದಕ್ಕೆ ಬೇಕಾದ ಕೌಶಲ್ಯಗಳಲ್ಲಿಯೂ ಕಲ್ಪನಾಶಕ್ತಿ ಅತ್ಯವಶ್ಯಕವಾದದ್ದು.

ವಿಚಿತ್ರವೆಂದರೆ, ವಿಜ್ಞಾನಿಗಳು ಅದರಲ್ಲೂ ವಿಜ್ಞಾನದ ವಿದ್ಯಾರ್ಥಿಗಳು ಕಥೆ ಪುಸ್ತಕಗಳನ್ನು ಓದುವುದೆಂದರೆ ಅದೊಂದು ಹೀಗಳಿಕೆಯಂತೆ ಇಲ್ಲವೇ ಕೇವಲ ರಂಜನೆಯ ಕಾಯಕವೆಂದೂ, ಅದರಿಂದ ವಿಜ್ಞಾನ ಕಾಯಕಕ್ಕೆ ಯಾವ ನೆರವೂ ದೊರೆಯದೆಂದೂ ಭಾವಿಸುವುದು ಸಾಮಾನ್ಯ. ನಾನು ನನ್ನ ಸ್ನಾತಕ ವಿದ್ಯಾರ್ಥಿಗಳನ್ನು ಯಾವ ಪುಸ್ತಕಗಳನ್ನು ಓದಿದ್ದೀರಿ ಎಂದು ಕೇಳಿದಾಗ ಹಲವರು ಕೇವಲ ಕಥೆ ಪುಸ್ತಕಗಳನ್ನಷ್ಟೆ ಓದಿದ್ದೇವೆ ಎಂದು ಪಶ್ಚಾತ್ತಾಪ ಪಟ್ಟಿದ್ದೂ ಇದೆ.

ಕೇವಲ ಕೃತಿಯಲ್ಲಿನ ವಿಷಯಕ್ಕಾಗಿ ಮಾತ್ರ ಓದುವುದಲ್ಲ. ನಾವು ಬರಹದ ಶೈಲಿಯನ್ನೂ ಗಮನಿಸಬೇಕು. ಕೆಲವೊಮ್ಮೆ ವಿಷಯವನ್ನು ಮರೆತರೂ ಸರಿಯೇ ಬರಹದ ಶೈಲಿಯನ್ನು ಗಮನಿಸುವುದು ಒಳ್ಳೆಯದು. ಶೈಲಿಯ ಕುರಿತಂತೆ ಓದಿದ ಬರಹಗಳ ಮೌಲ್ಯ ಮಾಪನ ಮಾಡಬೇಕು. ಅಷ್ಟು ಅಂಕಗಳನ್ನೇಕೆ ಕೊಟ್ಟೆವೆಂಬುದಕ್ಕೆ ಕಾರಣಗಳನ್ನು ನೀಡಬೇಕು. ಆಗಷ್ಟೆ ನಾವು ನಮ್ಮದೇ ಆದ, ಬೇರೊಬ್ಬರ ಅಣಕವಲ್ಲದ, ಶೈಲಿಯನ್ನು ರೂಢಿಸಿಕೊಳ್ಳಲು ಸಾಧ್ಯ.

ಸಲಹೆಯನ್ನು ಪಡೆಯಬೇಕು. ಅದನ್ನು ಮೀರಲೂ ಬೇಕು. 

ಚೆನ್ನಾಗಿ ಬರೆಯಬೇಕೆಂದರೆ ನಾವು ಎಗ್ಗಿಲ್ಲದೆ ಕೆಲವು ಮಾರ್ಗದರ್ಶಿ ಎನ್ನಿಸುವಂತಹ ಕೃತಿಗಳಿಂದ ಸಲಹೆ ಪಡೆಯುವುದು ಒಳ್ಳೆಯದು. ಆದರೆ ನಮ್ಮ ಗುರಿ ಈ ಸಲಹೆಗಳನ್ನು ಪಾಲಿಸುವುದಕ್ಕಷ್ಟೆ ಸೀಮಿತವಾಗಿರದೆ, ಕೊಟ್ಟ ಸಲಹೆಯನ್ನು ಮೀರುವಂತೆ ಪ್ರಯೋಗಗಳನ್ನು ಮಾಡುತ್ತಾ, ಥೇಟ್‌ ವಿಜ್ಞಾನ ಪ್ರಯೋಗಗಳನ್ನು ಮಾಡುವಾಗ ನಿರೀಕ್ಷಿಸುವಂತೆಯೇ ಪರಿಣಾಮಗಳೇನಾಗಬಹುದೆಂದು ನಿರೀಕ್ಷಿಸಬೇಕು.

ಬರೆವಣಿಗೆಯನ್ನು ಕಲಿಸುವ ಹಲವಾರು ಮಾರ್ಗದರ್ಶಿ ಪುಸ್ತಕಗಳಿವೆ. ಆದರೆ  ಓದಿ, ಅರಿತುಕೊಂಡು, ನಿಯಮಗಳನ್ನು ಪಾಲಿಸಲು ಇಲ್ಲವೇ ಮುರಿಯುವುದು  ನಮ್ಮ ಉದ್ದೇಶವಾಗಿದ್ದರೆ ಯಾವ ಮಾರ್ಗದರ್ಶಿಯೂ ಆದೀತು. ಆದರೆ ನನ್ನನ್ನು ಕೇಳಿದರೆ ಇಂತಹ ಮಾರ್ಗದರ್ಶಿಗಳಿಗೇ ಮಾರ್ಗದರ್ಶಿ ಎನಿಸುವ ಪುಸ್ತಕದಿಂದ ಆರಂಭಿಸಿ ಎನ್ನುತ್ತೇನೆ. ಇದು ಸ್ಟ್ರಂಕ್‌ ಮತ್ತು ವೈಟ್‌ ಬರೆದ ದಿ ಎಲಿಮೆಂಟ್ಸ್‌ ಆಫ್‌ ಸ್ಟೈಲ್‌ ಅಂದರೆ ಶೈಲಿಯ ಮೂಲಗುಣ ಎನ್ನುವ ಕೃತಿ. ಇ. ಬಿ. ವೈಟ್‌ ಹೇಳಿದ ಸ್ಟ್ರಂಕ್‌ ಮತ್ತು ವೈಟರ ಈ ಕೃತಿಯ ಚರಿತ್ರೆಯೂ ಸ್ವಾರಸ್ಯಕರ.

“ಮೊದಲ ವಿಶ್ವಯುದ್ದ ಮುಗಿಯುತ್ತಿದ್ದ ಸಮಯ. ನಾನು ಕಾರ್ನೆಲ್‌ ವಿವಿಯಲ್ಲಿ ವಿದ್ಯಾರ್ಥಿಯಾಗಿದ್ದೆ. ಇಂಗ್ಲೀಷ್‌ 8 ಎನ್ನುವ ಕೋರ್ಸು ತೆಗೆದುಕೊಂಡಿದ್ದೆ. ನಮಗೆ ವಿಲಿಯಂ ಸ್ಕ್ರಂಕ್‌, ಜೂ. ಎನ್ನುವವರು ಪ್ರೊಫೆಸರಾಗಿದ್ದರು. ಈ ಕೋರ್ಸಿಗೆಂದು ನಾವು ದಿ ಎಲಿಮೆಂಟ್ಸ್‌ ಆಫ್‌ ಸ್ಟೈಲ್‌ ಎನ್ನುವ ಪುಟ್ಟ ಪುಸ್ತಕವನ್ನು ವ್ಯಾಸಂಗ ಮಾಡಬೇಕಿತ್ತು. ಅದರ ಲೇಖಕರು ಇನ್ಯಾರೂ ಅಲ್ಲ. ನಮ್ಮ ಪ್ರೊಫೆಸರೇ. ಅದು 1919. ಕ್ಯಾಂಪಸಿನಲ್ಲಿ ದಿ ಲಿಟಲ್‌ ಬುಕ್‌ ಎಂತಲೇ ಈ ಪುಸ್ತಕ ಪ್ರಸಿದ್ಧಿ ಪಡೆಸಿತ್ತು. ಪುಟ್ಟದು ಎಂದೇ ಪ್ರಸಿದ್ಧಿ ಎನ್ನಿ. ಅದನ್ನು ಲೇಖಕರು ಸ್ವಂತ ಖರ್ಚಿನಲ್ಲಿ ಮುದ್ರಿಸಿದ್ದರು. ನಾನು ಕೋರ್ಸಿನಲ್ಲಿ ತೇರ್ಗಡೆಯಾದೆ. ವಿವಿಯಿಂದ ಪದವಿಯನ್ನೂ ಪಡೆದೆ. ಪ್ರೊಫೆಸರು ನೆನಪಿನಲ್ಲಿದ್ದರೂ ಪುಸ್ತಕವನ್ನು ಮರೆತೇ ಬಿಟ್ಟಿದ್ದೆ. ಸುಮಾರು ಮೂವತ್ತೆಂಟು ವರ್ಷಗಳ ನಂತರ ಈ ಪುಸ್ತಕ ನನ್ನ ಬದುಕಿನಲ್ಲಿ ಮತ್ತೆ ಧುತ್ತೆಂದು ಎದುರಾಯಿತು. ಮ್ಯಾಕ್‌ ಮಿಲನ್‌ ಕಂಪೆನಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಕಟಿಸಿ ಮಾರಲೆಂದು ಈ ಪುಸ್ತಕವನ್ನು ಪರಿಷ್ಕರಿಸಲು ಹೊರಟಿತ್ತು. ಅದಕ್ಕಾಗಿ ನನ್ನನ್ನು ವಿನಂತಿಸಿತು.  ಆ ವೇಳೆಗಾಗಲೇ, ಪ್ರೊಫೆಸರ್‌ ಸ್ಟ್ರಂಕ್‌ ನಿಧನರಾಗಿದ್ದರು.”

ಮೇ 29, 2020. ಅಂದು ನಾನು ನ್ಯೂ ಯಾರ್ಕ್‌ ಟೈಂಸ್‌ ಬುಕ್‌ ರಿವ್ಯೂ ಎನ್ನುವ ಪಾಡ್‌ಕಾಸ್ಟಿನಲ್ಲಿ ಗಿಲ್ಬರ್ಟ್‌ ಕ್ರೂಜ್‌ ಎಂಬಾತನ ಮಾತನ್ನು ಕೇಳಿದೆ. ಸ್ಟೀಫನ್‌ ಕಿಂಗನ ಎಲ್ಲ ಎಪ್ಪತ್ತು ಕಾದಂಬರಿಗಳನ್ನೂ ಓದಿದ್ದ ಕ್ರೂಜ್‌, ನ್ಯೂ ಯಾರ್ಕ್‌ ಟೈಂಸ್‌ ಪತ್ರಿಕೆಗೆ ಹಾಗೂ ನಮಗೂ ಕ್ರೂಜ್‌ ಸ್ಟೀಫನ್‌ ಕಿಂಗ್‌ ಪುಸ್ತಕಗಳ ಆಸ್ಥಾನ ಪಂಡಿತ ಎನ್ನಬಹುದು.  ಸ್ಟೀಫನ್‌ ಕಿಂಗನ ಪುಸ್ತಕಗಳನ್ನು ಓದುವ ಆಸಕ್ತಿ ಇರುವವರು ಯಾವ ಪುಸ್ತಕದಿಂದ ಆರಂಭಿಸಬೇಕು ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕಲೆಂದು ಯೋಜಿಸಿದ್ದ ಆ ಕಾರ್ಯಕ್ರಮದಲ್ಲಿ ಕ್ರೂಜ್‌ ಮತ್ತು ಕಾರ್ಯಕ್ರಮದ ನಿರ್ವಾಹಕಿ ಪಮೇಲಾ ಪೌಲ್‌ ಇಬ್ಬರೂ ಒಮ್ಮತದಿಂದ ಕಿಂಗ್‌ ಬರೆದಿದ್ದ “ಆನ್‌ ರೈಟಿಂಗ್:‌ ಮೆಮೋಯಿರ್‌ ಆಫ್‌ ದಿ ಕ್ರಾಫ್ಟ್‌” ಅಥವಾ “ಬರೆವಣಿಗೆ: ಒಂದು ಕೌಶಲದ ಕಥೆ”, ಎಂಬರ್ಥ ಬರುವ, ತಮಾಷೆಯ ಹೆಸರಿನ ಪುಸ್ತಕದಿಂದ ಓದಲು ಆರಂಭಿಸಬೇಕು ಎಂದಿದ್ದು ಕೇಳಿ ನನಗೆ ಕಚಗುಳಿ ಇಟ್ಟಂತಾಯಿತು. ಇದು ಅವನು ಬರೆದ ಕಾದಂಬರಿಯಲ್ಲದ ಪುಸ್ತಕ. ಪುಸ್ತಕದ ಹೆಸರೇ ಹೇಳುವಂತೆ ಅದರಲ್ಲಿ ಮೂರು ವಿಷಯಗಳು ನಮಗೆ ದಕ್ಕುತ್ತವೆ. ಅವನ ವೈಯಕ್ತಿಕ ಬದುಕಿನ ವೃತ್ತಾಂತ, ಲೇಖಕನಾಗುವುದೆಂದರೇನು ಎಂಬ ಬಗ್ಗೆ ಹಾಗೂ ಬಲು ಬರರೆವಣಿಗೆಯ ಕೌಶಲ್ಯದ ಕುರಿತ ವಿವರವಾದ ಮತ್ತು ನಿರ್ದಿಷ್ಟವಾದ ಸಲಹೆಗಳು ಮೂರನ್ನೂ ಅದರಲ್ಲಿ ನಾವು ಆಸ್ವಾದಿಸಬಹುದು.  ನನಗೆ ಅದನ್ನು ಓದಿದ್ದಾಗ, ಒಳ್ಳೆಯ ಬರಹಗಾರನಾಗಿ ಸಾಧನೆ ಮಾಡಬೇಕಾದರೆ, ಕಿಂಗನ ಸಲಹೆಗಳನ್ನು ಮೀರಬೇಕು ಎಂದೆನ್ನಿಸಿತ್ತು.

ಎರಡು ವಾರಗಳ ನಂತರ ಜೂನ್‌ 12, 2020ರಂದು ನಾನು ಕೇಳಿದ ನ್ಯೂಯಾರ್ಕ್‌ ಟೈಂಸ್‌ ಬುಕ್‌ ರಿವ್ಯೂ ಪಾಡ್‌ಕಾಸ್ಟಿನ ಸಂಚಿಕೆ ನನ್ನ ಅನಿಸಿಕೆ ಸರಿ ಎಂದು ತಿಳಿಸಿದೆ. ಈ ಬಗ್ಗೆ ಈ ಸರಣಿಯ ಮೊದಲ ಲೇಖನದಲ್ಲಿಯೇ ನಾನು ಹೇಳೀದ ಹಾಗೆ ಪಾಡ್‌ಕಾಸ್ಟಿನಲ್ಲಿ ಸ್ಟೀಫನ್‌ ಫ್ರೈ, ಕಿಂಗ್‌ ಕೊಟ್ಟಿದ್ದ ಈ ಸಲಹೆಗಳನ್ನು ಹೊಗಳಿದ ನಂತರ, “ನಾನೂ ಬರೆಯುವಾಗ ಆ ಸಲಹೆಗಳನ್ನು ಪಾಲಿಸಲು ಪ್ರಯತ್ನಿಸಿದೆ. ಅಯ್ಯೋ. ಅದು ಸರಿ ಅನಿಸಲಿಲ್ಲ. ನನ್ನನ್ನು, ಈ ಲೇಖಕ ಸ್ವಲ್ಪ ಜಾಸ್ತಿಯೇ ಬರೆದಿದ್ದಾನೆ, ಭಾಷೆ ಬಹಳ ಅಲಂಕಾರಿಕವಾಗಿದೆ ಎಂದು ಜನ ಅಂದುಕೊಂಡರೂ ಪರವಾಗಿಲ್ಲ. ಅವರು ನನ್ನ ಪುಸ್ತಕ ಕೆಳಗಿಟ್ಟು, ಬೇರೆಯದನ್ನೇ ಓದಿಕೊಳ್ಳಲಿ.” ಎಂದು ಹೇಳಿದ್ದ.

ನಾನು ಓದಲು ಸೂಚಿಸುವ ಇನ್ನೊಂದು ಪುಸ್ತವೆಂದರೆ ಸ್ಟೀವನ್‌ ಪಿಂಕರ್‌ ಬರೆದ “ದಿ ಸೆನ್ಸ್‌ ಆಫ್‌ ಸ್ಟೈಲ್:‌ ದಿ ಥಿಂಕಿಂಗ್‌ ಪರ್ಸನ್ಸ್‌ ಗೈಡ್‌ ಟು ರೈಟಿಂಗ್‌ ಇನ್‌ ದಿ ಟ್ವೆಂಟಿ ಫಸ್ಟ್‌ ಸೆಂಚುರಿ (2014)”. ಅಂದರೆ ಶೈಲಿ ಎಂದರೇನು: ಇಪ್ಪತ್ತೊಂದನೆಯ ಶತಮಾನದ ಚಿಂತಕ ಲೇಖಕನಿಗೆ ಒಂದು ಮಾರ್ಗದರ್ಶಿ ಎನ್ನುವ ಪುಸ್ತಕ. ಮನಶ್ಶಾಸ್ತ್ರಜ್ಞನೂ, ಭಾಷಾತಜ್ಞನೂ, ಒಳ್ಳೆಯ ಬರಹಗಾರನೂ ಆದ ಪಿಂಕರ್‌ ಬರೆಯುವುದು ಹೇಗೆ ಎನ್ನುವುದರ ಬಗ್ಗೆ ಹೀಗೆ ಸಲಹೆ ನೀಡುವುದಕ್ಕೆ ತಕ್ಕವ. ತಾನೇಕೆ ಈ ಸಲಹೆಗಳನ್ನು ನೀಡುತ್ತಿದ್ದೇನೆ ಎಂದು ತರ್ಕಗಳನ್ನೂ ಒಡ್ಡುವ ಈತ ಸಲಹೆಗಳನ್ನು ಮೀರುವುದಕ್ಕೆ ಸಕಾರಣಗಳನ್ನು ಒದಗಿಸುತ್ತಾನೆ. ಪಿಂಕರನ ಈ ಪುಸ್ತಕವನ್ನು ಆಸ್ವಾದಿಸಬೇಕೆಂದರೆ, ಒಮ್ಮೆ ಇಡಿಯಾಗಿ ಓದಿ ನಂತರ ನಡು, ನಡುವೆ ನಿಘಂಟಿನ ನೆರವು ಪಡೆಯುವಂತೆ ಮರಳಿ ಹೋಗಬೇಕು.   ಎಲ್ಲಕ್ಕಿಂತಲೂ ಮುಖ್ಯವಾಗಿ ಬರವಣಿಗೆಯ ಬಗ್ಗೆ ಪಿಂಕರ್‌ ಹೇಳುವ ಈ ತತ್ವವನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು:

“ಶೈಲಿ ಎನ್ನುವುದು ಈ ಜಗತ್ತನ್ನು ಸುಂದರವಾಗಿಸುತ್ತದೆ. ಚುಟುಕಾದ ವಾಕ್ಯ, ಮನಸೆಳೆಯುವ ರೂಪಕ, ಚುರುಕಾದೊಂದು ಮಾತು, ನುಡಿಗಟ್ಟಿನಲ್ಲೊಂದು ರೋಚಕ ಬದಲಾವಣೆಗಳು ಅಕ್ಷರಸ್ತ ಓದುಗನಿಗೆ ಅತ್ಯಂತ ಖುಷಿಯನ್ನು ನೀಡುವ ಸಂಗತಿಗಳು. ಒಳ್ಳೆಯ ಬರವಣಿಗೆಯ ಈ ಅಪ್ರಯೋಜಕ ಗುಣಗಳ ಮೇಲೆ ಒಡೆತನ ಸಾಧಿಸುವುದೇ ಒಳ್ಳೆಯ ಬರವಣಿಗೆಯನ್ನು ಕಲಿಯುವ ಮೊದಲ ಹೆಜ್ಜೆ.”

ಇಟಲಿಯ ಬಹುಭಾಷಾವಿಧ ಉಂಬರ್ಟೊ ಇಕೋ ಕೂಡ ಹೌ ಟು ರೈಟ್‌ ಎ ಥೀಸೀಸ್‌ (1997/2012), ಥೀಸೀಸ್‌ ಬರೆಯುವುದು ಹೇಗೆ ಎನ್ನುವ ಪುಸ್ತಕವನ್ನು ಬರೆದಿದ್ದಾನೆ ಎಂದು ನನ್ನ ಗೆಳೆಯನೊಬ್ಬ ಹೇಳೀದ ಮಾತನ್ನು ನನಗೆ ನಂಬಲಾಗಲೇ ಇಲ್ಲ. ಇಕೋ, ದಿ ನೇಮ್‌ ಆಫ್‌ ದಿ ರೋಸ್‌ (1994), ಎನ್ನುವ, ಮರೆಯಲಾಗದಂತಹ ತತ್ವಶಾಸ್ತ್ರೀಯವಾದ ಕಾದಂಬರಿಗೆ ಪ್ರಸಿದ್ಧ. ನಾನು ಓದಿದ ಮಾರ್ಗದರ್ಶಿಗಳಲ್ಲಿ ಅತ್ಯುತ್ತಮವಾದ ಅಂಕಗಳನ್ನು ಇದಕ್ಕೇ ನೀಡಬೇಕೆಂದು ಈಗ ನನಗನ್ನಿಸುತ್ತದೆ. ಮೊದಲ ನೋಟಕ್ಕೆ ಇಕೋ,ಇನ್ನೂ ಹಳೆಯ ಕಾಲದ ಕಾರ್ಡುಗಳಲ್ಲಿ ಉಲ್ಲೇಖಗಳನ್ನು ಪಟ್ಟಿಮಾಡಿಕೊಳ್ಳುವ, ಕೈಬರಹಗಳು ಹಾಗೂ ಗ್ರಂಥಾಲಯದಿಂದ ಪುಸ್ತಕಗಳನ್ನು ಹೊತ್ತೊಯ್ಯುವ ಹಳೆಯ ಕಾಲದ ಮಾನವಿಕ ವಿಜ್ಞಾನದ ವಿದ್ಯಾರ್ಥಿಗಳಿಗೆಂದು ಬರೆದ ಸಲಹೆಗಳು ಇವು ಎಂದು ಮೊದಲನೋಟಕ್ಕೆ ಅನ್ನಿಸಬಹುದು. ಆದರೆ ಇಂಟರ್ನೆಟ್ಟು, ವೆಬ್‌ ಆಫ್‌ ಸೈನ್ಸ್‌ ಮತ್ತು ಗೂಗಲ್‌ ಸ್ಕಾಲರ್‌ ಗಳಂತಹ ಮಾಹಿತಿ ಹೆಕ್ಕುವ ಸಾಧನಗಳನ್ನು ಬಳಸುವ ಇಂದಿನ ಯುಗದ ಪ್ರಕೃತಿ ವಿಜ್ಞಾನಿಗಳೂ ಇದನ್ನು ಓದಬೇಕೆನ್ನುವುದು ನನ್ನ ಸಲಹೆ. ಥೀಸೀಸ್‌ ಬರೆಯುವುದು ಹೇಗೆ ಎನ್ನುವುದಕ್ಕೆ ಮಾರ್ಗದರ್ಶನ ಮಾಡುವ ಸೋಗಿನಲ್ಲಿ ಉಂಬರ್ಟೊ ಇಕೋ ಸಂಶೋಧನೆಯನ್ನು ನಡೆಸುವುದು ಹೇಗೆ ಎಂದೂ ಸಲಹೆ ನೀಡುತ್ತಾನೆ. ನನಗೆ ಇಷ್ಟವಾಗಿದ್ದು ಈ ಸೋಗು. ಉಂಬರ್ಟೊ ಇಕೋವಿಗೆ ಹಾಗೂ ಬಹುತೇಕ ಮಾನವಿಕ ಶಾಸ್ತ್ರದ ವಿದ್ಯಾರ್ಥಿಗಳಿಗೆ, ಥೀಸೀಸ್‌ ಬರೆಯುವುದು ಎಂದರೆ ಸಂಶೋಧನೆ ಮಾಡುವುದು ಎಂದೇ ಅರ್ಥ ಎಂದು ನನಗೆ ಅನಂತರ ಅರ್ಥವಾಯಿತು.

ಮಾನವಿಕ ಶಾಸ್ತ್ರದ ಈ ಮಾಟಗಾರಿಕೆಯನ್ನು ನಾವು ಪ್ರಕೃತಿ ವಿಜ್ಞಾನಕ್ಕೂ ತರಬಹುದೇ?

ವಿಷಯ ಮತ್ತು ಶೈಲಿಯಲ್ಲಿ ಚೌಕಾಸಿ ಬೇಕಿಲ್ಲ. 

ಬರವಣಿಗೆಯ ಅಡಕ ಹಾಗೂ ಅದರ ಶೈಲಿಯಲ್ಲಿ ಚೌಕಾಸಿ ಬೇಕಿಲ್ಲ ಎನ್ನುವುದನ್ನು ವಿಜ್ಞಾನಿಗಳು ಅರ್ಥ ಮಾಡಿಕೊಳ್ಳಬೇಕು. ಬುಕ್ಸ್‌ ಡೂ ಫರ್ನಿಶ್‌ ಎ ಲೈಫ್‌ (೨೦೨೧) ಎನ್ನುವ ಪುಸ್ತಕದಲ್ಲಿ ರಿಚರ್ಡ್‌ ಡಾಕಿನ್ಸ್‌ ಈ ಮಾತನ್ನು ಸ್ಪಷ್ಟವಾಗಿಸಿದ್ದಾನೆ. ಡಾಕಿನ್ಸ ಈ ಹಿಂದೆ ಬರೆದಿದ್ದ ಹಲವು ಲೇಖನಗಳ ಸಂಗ್ರಹವಾದ ಈ ಪುಸ್ತಕ ಸೊಗಸಾದ ಓದು. ಇದರಲ್ಲಿ ಆತ ಬೇರೆಯವರ ಪುಸ್ತಕಗಳಿಗೆಂದು ಬರೆದ ಹಲವಾರು ಮುನ್ನುಡಿಗಳು, ಬೆನ್ನುಡಿಗಳು ಹಾಗೂ ಪುಸ್ತಕ ವಿಮರ್ಶೆಗಳು ಇವೆ. ಈತನ ಪ್ರಬಂಧಗಳ ಮೂಲವಾದ ಪುಸ್ತಕಗಳಲ್ಲಿ ವಿಷಯಾಧಾರಿತ ಪುಸ್ತಕಗಳು, ಜನಪ್ರಿಯ ವಿಜ್ಞಾನ ಪುಸ್ತಕಗಳು, ವೈಜ್ಞಾನಿಕ ಕಾದಂಬರಿಗಳು ಹಾಗೂ ಧರ್ಮ ಮತ್ತು ದೇವರ ಕುರಿತ ಪುಸ್ತಕಗಳೆಲ್ಲವೂ ಇವೆ. ನನಗೆ ಈ ಬಗೆಯ ಲೇಖನಗಳು ಬಲು ಇಷ್ಟ. ಏಕೆಂದರೆ ಇವು ತಾಂತ್ರಿಕವಾದ, ವೈಜ್ಞಾನಿಕ ಲೇಖನಗಳ ಮೇಲೆ ಹೇರಿದಂತಹ ಶಿಸ್ತಿನ ಚೌಕಟ್ಟನ್ನು ಮೀರಿದಂಥವು. ಗದ್ಯದ ಗುಣಮಟ್ಟವನ್ನು ಕುಗ್ಗಿಸುವ ನಿಯಮಗಳನ್ನು ಮೀರಿದಂಥವು. ವಿಜ್ಞಾನಿಗಳ ಬರವಣಿಗೆಯಲ್ಲಿ ನಾವು ಹೆಚ್ಚಾಗಿ ಕಾಣದ ಪ್ರಬಂಧ ಸ್ವರೂಪದ ಈ ಶೈಲಿ ನಮ್ಮ ಬರವಣಿಗೆಯನ್ನು ಉತ್ತಮಗೊಳಿಸಲು ಒಳ್ಳೆಯ ಸಾಧನ.

ವಿಜ್ಞಾನ ಲೋಕದಲ್ಲಿ ಅಧಿಕಾರದಲ್ಲಿರುವವರು ಇಂತಹ ಶೈಲಿಯ ಪ್ರಬಂಧಗಳನ್ನು ಅಷ್ಟೊಂದು ವಿರೋಧಿಸುವುದನ್ನು ಕಂಡರೆ ಅಚ್ಚರಿ ಎನಿಸುತ್ತದೆ. ಈ ಶೈಲಿ ಹೊಸ ಜ್ಞಾನವನ್ನು ಬಿಂಬಿಸುವುದಿಲ್ಲ ಎನ್ನುವುದು ಅವರ ತಪ್ಪು ನಂಬಿಕೆ. ನಾನೂ ಕೂಡ ಹಲವಾರು ಆಯ್ಕೆಯ ಹಾಗೂ ಮೌಲ್ಯಮಾಪನದ ಸಮಿತಿಗಳ ಸದಸ್ಯನಾಗಿದ್ದೆ. ಮೌಲ್ಯಮಾಪನಕ್ಕೊಳಗಾಗುವ ವ್ಯಕ್ತಿಗಳ ಪ್ರಕಟಣೆಯ ಪಟ್ಟಿಯಲ್ಲಿರುವ ಇಂತಹ ಬರಹಗಳನ್ನು ಕಿತ್ತೊಗೆಯುವುದನ್ನು ಕಂಡು ವಿಷಾದಿಸಿದ್ದೇನೆ. ಕೆಲವೊಮ್ಮೆ ಸಮಿತಿಯು ಪಟ್ಟಿಯನ್ನು ನೋಡುವ ಮೊದಲೇ ಅಧಿಕಾರಿಗಳು ಈ “ಸೇವೆಯನ್ನು” ಮಾಡಿ ಮುಗಿಸಿರುತ್ತಾರೆ. ಹಾಗೆಯೇ ನಾವೀಗ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆಗಳಲ್ಲಿ ಪ್ರಬಂಧ ರೂಪದ ಉತ್ತರಗಳಿಗೆ ಬದಲಾಗಿ ಬಹುಆಯ್ಕೆಯ ಪ್ರಶ್ನೆಗಳಿಗೆ ಮೊರೆ ಹೋಗಿದ್ದೇವೆ. ಇದರ ಫಲವಾಗಿ, ವಿಷಯವೊಂದರ ಬಗ್ಗೆ ಬೇಕಾದ ಎಲ್ಲ ಮಾಹಿತಿಗಳನ್ನು ಸ್ವಯಂ ತಿಳಿದುಕೊಂಡು ಪ್ರಬಂಧವೊಂದನ್ನು ರಚಿಸುವ ಆನಂದದಿಂದ ಇಂದಿನ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ ಎನ್ನಬೇಕು. ಇಲ್ಲಿ ಮತ್ತೊಮ್ಮೆ ಡಾಕಿನ್ಸನ ಈ ಮಾತುಗಳು ನೆನಪಾಗುತ್ತವೆ.

“ನನಗೆ ನಕ್ಷತ್ರಮೀನು ನೀರಿನಲ್ಲಿ ಹೇಗೆ ಚಲಿಸುತ್ತದೆ ಎನ್ನುವದರ ಸ್ಥೂಲ ವಿವರಗಳಷ್ಟೆ ನೆನಪಿದೆ.  ಆ ವಿವರಗಳೇನು ಎನ್ನುವುದಲ್ಲ ಪ್ರಶ್ನೆ. ಅದಕ್ಕಿಂತಲೂ ಆ ವಿವರಗಳನ್ನು ನಾವು ಹೇಗೆ ಗಳಿಸಿದೆವು ಎನ್ನುವುದು ಮುಖ್ಯವಾಗುತ್ತದೆ. ಅದನ್ನು ಪಠ್ಯಪುಸ್ತಕವೊಂದನ್ನು ಉರು ಹೊಡೆದು ನಾವು ತಿಳಿಯಲಿಲ್ಲ. ನಾವು ಗ್ರಂಥಾಲಯಕ್ಕೆ ಹೋಗಿ, ಹಳೆಯ ಹಾಗೂ ಹೊಸ ಪುಸ್ತಕಗಳನ್ನು ಜಾಲಾಡಿದ್ದೆವು. ಒಂದೇ ವಾರದಲ್ಲಿ ಆ ವಿಷಯದಲ್ಲಿ ಎಷ್ಟು ಪರಿಣತಿ ಪಡೆಯಬಹುದೋ ಅಷ್ಟರ ಮಟ್ಟಿಗೆ ಮೂಲ ಶೋಧ ಪ್ರಕಟಣೆಗಳನ್ನು ಓದಿಕೊಂಡಿದ್ದೆವು. ವಾರಕ್ಕೊಮ್ಮೆ ಇದಕ್ಕಾಗಿ ನೀಡುತ್ತಿದ್ದ ಪಾಠಗಳೂ ಕೂಡ, ನಕ್ಷತ್ರಮೀನಿನ ಹೈಡ್ರಾಲಿಕ್ಸೇ ಇರಲಿ, ಬೇರೆಯ ವಿಷಯವೇ ಆಗಲಿ, ಅದನ್ನೂ ಮೀರಿ ಕಲಿಯಲು ಪ್ರೋತ್ಸಾಹಿಸುತ್ತಿದ್ದುವು. ನನಗೆ ನೆನಪಿದೆ. ಆ ಒಂದು ವಾರ ನಾನು ಎಚ್ಚರದಲ್ಲಿಯೂ, ನಿದ್ರೆಯಲ್ಲಿಯೂ ನಕ್ಷತ್ರಮೀನುಗಳು ನೀರಿನಲ್ಲಿ ನಡೆಯುವುದನ್ನೇ ಕಾಣುತ್ತಿದ್ದೆ. ಅವುಗಳ ಕೊಳವೆಪಾದಗಳು ನಿದ್ರಿಸಿದ ಕಣ್ಣೆವೆಗಳ ಹಿಂದೆ ಕುಣಿದಾಡುತ್ತಿದ್ದುವು. ಅವುಗಳ ಪೆಡಿಸೆಲ್ಲೇಗಳು ಕಿವುಚಿಕೊಂಡು, ಸಮುದ್ರದ ನೀರು ಕನಸುಗಾಣುತ್ತಿದ್ದ ಮಿದುಳಿನೊಳಗೆ ಚಿಲುಮೆಯಾಗುತ್ತಿತ್ತು. ಆ ಬಗ್ಗೆ ಒಂದು ಪ್ರಬಂಧವನ್ನು ಬರೆಯುವುದೆನ್ನುವ ನಾಟಕಕ್ಕೆ ವಾರಪೂರ್ತಿ ನಡೆದ ಈ ಪಾಠಗಳು ಮುನ್ನುಡಿಯಾಗಿದ್ದುವು.”

ನನ್ನ ಸಂಶೋಧನೆಗಳಿಗೆ ಬಿಡುಗೈಯಿಂದ ಧನಸಹಾಯವನ್ನು ಮಾಡುವ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನನ್ನ ವೈಜ್ಞಾನಿಕ ಕೊಡುಗೆಗಳಲ್ಲಿ ಈ ಸ್ವರೂಪದ ಬರಹಗಳನ್ನು ಪರಿಗಣಿಸುವುದೇ ಇಲ್ಲ. ಇಂತಹ ಹಲವಾರು ಲೇಖನಗಳನ್ನು ನಾನು ಬರೆದಿದ್ದೇನೆ. ಆದರೆ ಅದರ ಜಾಲತಾಣದಲ್ಲಿ ಇವು ಯಾವುವೂ ಗೋಚರಿಸುವುದೇ ಇಲ್ಲ.

ಇತ್ತೀಚೆಗೆ ನಾನು “ದಿ ಎನ್‌ಸೈಕ್ಲೋಪೀಡಿಯಾ ಆಫ್‌ ಸೋಶಿಯಲ್‌ ಇನ್ಸೆಕ್ಟ್ಸ್‌” ಎನ್ನುವ ಪ್ರಕಟಣೆಗೆ ಮುನ್ನುಡಿಯನ್ನು ಬರೆದೆ. ಅದರ ಸಂಪಾದಕರ ಕೋರಿಕೆಯ ಮೇರೆಗೆ ಬರೆದ ಈ ಪ್ರಬಂಧವನ್ನು ಪ್ರಕಾಶಕ ಸ್ಪ್ರಿಂಗರ್‌ ಸಂಸ್ಥೆಯು ತನ್ನ ಜಾಲತಾಣದಲ್ಲಿರುವ ಪುಸ್ತಕದ ಪರಿವಿಡಿಯಲ್ಲಿ ಪಟ್ಟಿ ಮಾಡಲು ನಿರಾಕರಿಸಿತು. ನನ್ನ ಈ ಪ್ರಬಂಧ ಹೀಗೆ ಸಮಾಧಿಯಾಯಿತು!

ಹಾಗಿದ್ದರೆ ವೈಜ್ಞಾನಿಕ ಸಾಹಿತ್ಯ ಎಂದರೇನು? ಅದು ಹೇಗಿರಬೇಕು?

 ಡಾಕಿನ್ಸ್‌ ತನ್ನ ಪ್ರಬಂಧಗಳ ಸಂಕಲನದಲ್ಲಿ ಲಿಟರೇಚರ್‌ ಅಥವಾ ಸಾಹಿತ್ಯ ಎನ್ನುವ ಪದದ ಬಗ್ಗೆ ಆಕ್ಸ್‌ಫರ್ಡ್‌ ಇಂಗ್ಲೀಷ್ ನಿಘಂಟು ನೀಡುವ ಎರಡು ಅರ್ಥಗಳನ್ನು ಪರಿಚಯಿಸಿದ್ದಾನೆ.

ಮೊದಲನೆಯದು. ಅದರ ಶೈಲಿ ಅಥವಾ ಭಾವಗಳ ಮೇಲಿನ ಪ್ರಭಾವದಿಂದಾಗಿ ಮೌಲ್ಯಯುತವೆನ್ನಿಸಿದ ಬರಹ ಪ್ರಕಾರ.

ಎರಡನೆಯದು, ನಿರ್ದಿಷ್ಟ ವಿಷಯದ ಕುರಿತು ಬರೆದ ಬರಹಗಳು ಹಾಗೂ ಪುಸ್ತಕಗಳ ನಿಧಿ

ಮುಂದುವರೆದ ಡಾಕಿನ್ಸ್‌ ಹೀಗೂ ಹೇಳಿದ್ದಾನೆ. “ವಿಜ್ಞಾನಿಯ ಮಟ್ಟಿಗೆ ಸಾಹಿತ್ಯ ಎನ್ನುವುದು ಬಹುತೇಕ ಅಸ್ಪಷ್ಟವಾಗಿ ಹಾಗೂ ಬಲು ಗಾಢವಾದ ಭಾಷೆಯಲ್ಲಿ ನಿರ್ದಿಷ್ಟ ಸಂಶೋಧನಾ ವಿಷಯ ಕುರಿತು ಬರೆದ ಆ ಎಲ್ಲ ಶೋಧ ಪ್ರಬಂಧಗಳು ಅಷ್ಟೆ. ಆದರೆ ಈ ಸಂಕಲನದಲ್ಲಿ ನಾನು ವಿಜ್ಞಾನ ಸಾಹಿತ್ಯ ಎನ್ನುವುದೆಲ್ಲವೂ ನಿಘಂಟಿನ ಮೊದಲನೆಯ ಅರ್ಥಕ್ಕೆ ಸಮೀಪವಾದ ಬರಹಗಳು. ನಾನು ಆಯ್ಕೆ ಮಾಡಿದ್ದು ಸಾಹಿತ್ಯವೆನ್ನಿಸುವ ವಿಜ್ಞಾನ ಲೇಖನಗಳ ಬಗೆ ಅಥವಾ ವಿಜ್ಞಾನದ ವಿಷಯಗಳ ಬಗ್ಗೆ ಇರುವ ಒಳ್ಳೆಯ ಬರಹಗಳ ಬಗೆ  ಅಷ್ಟೆ. ಅಂದರೆ ಇವು ಶೋಧಪತ್ರಿಕೆಗಳಲ್ಲ, ಕೇವಲ ಪುಸ್ತಕಗಳು. ಇದು ಖೇದದ ವಿಷಯ. ವೈಜ್ಞಾನಿಕ ಶೋಧಪತ್ರಿಕೆಗಳಲ್ಲಿ ಪ್ರಕಟವಾದ ಪ್ರಬಂಧವೊಂದು ರೋಚಕವಾಗಿಯೂ, ಮನಸೆಳೆಯುವಂತೆಯೂ ಇರಬಾರದೇಕೆ? ವಿಜ್ಞಾನಿಗಳು ತಮ್ಮ ಕಾಯಕಕ್ಕಾಗಿ ಓದಲೇ ಬೇಕಾದ ಪಾಠಗಳು ಅವರಿಗೆ ಖುಷಿ ತರುವಂತೆಯೂ ಇರಬಾರದೇಕೆ…?

“ತಮ್ಮ ಶೋಧಗಳ ಬಗ್ಗೆ ಬೇರೆಯವರಿಗೆ ಅರ್ಥವೇ ಆಗದಂತಹ ಕಬ್ಬಿಣದ ಕಡಲೆಯಂತಹ ಕಠಿಣವಾದ ಭಾಷೆಯಲ್ಲಿ ಬರೆಯದೆ, ಬೆನ್ನ ಹಿಂದಿನಿಂದ ಗೊತ್ತಿಲ್ಲದೆಯೇ ಇಣುಕಿ ಓದುವ ಯಾರಿಗೂ ಮುಟ್ಟುವಂತಹ ಜನಸಾಮಾನ್ಯರ ಭಾಷೆಯಲ್ಲಿ ಬರೆಯಿರಿ ಎಂದು ಒತ್ತಾಯಿಸುವುದು ನನ್ನ ಕರ್ತವ್ಯ ಎಂದು ಬಾವಿಸುತ್ತೇನೆ. ಹಾಗೆ ಮಾಡಿದರೆ ಅವರ ಶೋಧ ಕಾರ್ಯವೂ ಚೆನ್ನಾಗಿರುತ್ತದೆ, ಬೇರೆ ವಿಜ್ಞಾನಿಗಳ ಜೊತೆಗೆ ಅವರ ಸಂವಹನವೂ ಚೆನ್ನಾಗಿರುತ್ತದೆ ಎಂಬುದು ನನ್ನ ನಂಬಿಕೆ. ತಾವೇ ಮಾಡುತ್ತಿರುವ ಶೋಧದ ಬಗ್ಗೆಯೂ ಅವರಿಗೆ ಇನ್ನಷ್ಟು ಚೆನ್ನಾಗಿ ಅರ್ಥವಾಗಿರುತ್ತದೆ ಎಂದೂ ನಾನು ಅಂದುಕೊಂಡಿದ್ದೇನೆ.”

ಮಾದರಿ ವ್ಯಕ್ತಿಗಳನ್ನು  ಹುಡುಕಿ 

ಬರವಣಿಗೆ ಕಲಿಯಲೂ ವಿಜ್ಞಾನಿಗಳಿಗೆ ಗುರುಗಳು ಅಥವಾ ಮಾದರಿಗಳು ಬೇಕು. ವಿಜ್ಞಾನಿಗಳ ಬರವಣಿಗೆ ಕೆಟ್ಟದಾಗಿರುತ್ತದೆ ಎಂದೂ, ಬರೆಯಬೇಕಾದಷ್ಟು ಅವರು ಬರೆಯುತ್ತಿಲ್ಲ ಎಂದು ನಾನು ದೂರಿದರೂ, ಸಾಕಷ್ಟು ಮಾದರಿ ಉದಾಹರಣೆಗಳನ್ನು ಕಾಣಬಹುದು. ರಿಚರ್ಡ್‌ ಡಾಕಿನ್ಸ್‌ ಸಂಪಾದಿಸಿರುವ ದಿ ಆಕ್ಸ್‌ಫರ್ಡ್‌ ಬುಕ್‌ ಆಫ್‌ ಮಾಡರ್ನ್‌ ಸೈನ್ಸ್‌ ರೈಟಿಂಗ್‌ (2008) ಎನ್ನುವ ನವೀನ ವಿಜ್ಞಾನ ಲೇಖನಗಳ ಸಂಗ್ರಹದಲ್ಲಿ ಮಾರ್ಟಿನ್‌ ರೀಸ್‌, ಫ್ರಾನ್ಸಿಸ್‌ ಕ್ರಿಕ್‌, ಫ್ರೆಡ್‌ ಹಾಯಲ್‌, ಜಾರೆದ್‌ ಡಯಮಂಡ್‌, ರೇಚಲ್‌ ಕಾರ್ಸನ್‌, ಎಡ್ವರ್ಡ್‌ ಓ ವಿಲ್ಸನ್‌, ಫ್ರೀಮನ್‌ ಡೈಸನ್‌, ಜೆ.ಬಿ.ಎಸ್.‌ ಹಾಲ್ಡೇನ್‌, ಜಾಕಬ್‌ ಬ್ರೌನೋವ್ಸ್ಕಿ, ಆಲಿವರ್‌ ಸ್ಯಾಕ್ಸ್‌, ಲೂಯಿಸ್ ವೋಲ್ಪರ್ಟ್‌, ಕಾರ್ಲ್‌ ಸಗಾನ್‌, ಜಾನ್‌ ಟೈಲರ್‌  ಬಾನರ್‌, ಸಿಡ್ನಿ ಬ್ರೆನ್ನರ್‌, ಜಾನ್‌ ಮೇನಾರ್ಡ್‌ ಸ್ಮಿತ್‌, ಡಾರ್ಸಿ ಥಾಂಪ್ಸನ್‌, ನೀಕೋ ಟಿಂಬರ್ಜನ್‌, ಆರ್ಥರ್‌ ಎಡಿಂಗ್ಟನ್‌, ಪೀಟರ್‌ ಮೆಡಾವರ್‌ ಮತ್ತು ಇನ್ನೂ ಅರವತ್ತು ಪ್ರತಿಭಾಶಾಲಿ ವಿಜ್ಞಾನಿಗಳ ಚೇತೋಹಾರಿ ಬರೆಹಗಳು ಇದರಲ್ಲಿದೆ.

ಇಷ್ಟೇ ಸಾಲದೇನೋ ಎನ್ನುವ ಹಾಗೆ ಡಾಕಿನ್ಸ್‌ ಸಂಗ್ರಹದ ಮುನ್ನುಡಿಯಲ್ಲಿ ಒಂದು ಸಮಝಾಯಿಷಿಯನ್ನೂ ಕೊಟ್ಟಿದ್ದಾನೆ. “ಇದು ಪರಿಣತ ವಿಜ್ಞಾನಿಗಳ ಒಳ್ಳೆಯ ಲೇಖನಗಳ ಸಂಗ್ರಹವೇ ಹೊರತು ಪರಿಣತ ಲೇಖಕರ ವೈಜ್ಞಾನಿಕ ಪಯಣವಲ್ಲ.” ಎಂದಿದ್ದಾನೆ. ಜೊತೆಗೆ ಒಂದು ಕೊರಗೂ ಇದೆ ಎಂದಿದ್ದಾನೆ. “ಸ್ಥಳಾವಕಾಶದ ಕೊರತೆಯಿಂದಾಗಿ ನಾನು ಹಲವು ಅಮೋಘ ವಿಜ್ಞಾನಿಗಳ ಬರಹಗಳನ್ನು ಹೊರಗಿಡಬೇಕಾಯಿತು ಎನ್ನುವುದು ದುಃಖದ ಸಂಗತಿ. ಅವರ ಬರಹಗಳನ್ನು ಬಿಟ್ಟಿರುವುದಕ್ಕೆ ಅವರಿಗಿಂತಲೂ ನನಗೆ ಆಗಿರುವ ನೋವು ಹೆಚ್ಚಾಗಿಲ್ಲದಿದ್ದರೆ ಅವರೆಲ್ಲರ ಕ್ಷಮೆ ಕೋರುತ್ತಿದ್ದೆ. ಕೆಲವೇ ಕೆಲವು ಲೇಖನಗಳ ಹೊರತಾಗಿ ಈ ಸಂಗ್ರಹ ಕೇವಲ ಇಂಗ್ಲೀಷು ಭಾಷೆಗಷ್ಟೆ ಸೀಮಿತ. ಬೇರೆ ಭಾಷೆಗಳಿಂದ ಅನುವಾದಗೊಂಡವುಗಳನ್ನು ನಾನು ಇಲ್ಲಿ ಸೇರಿಸಿಲ್ಲ.”

ನನಗೆ ಮಾದರಿಯಾದ ಇನ್ನೊಬ್ಬ ಲೇಖಕ ಜೀನ್‌ ಹೆನ್ರಿ ಫೇಬರ್‌ (1823-1915). ಈತನ ಬಗ್ಗೆ ಈ ಸರಣಯ ಹಿಂದೊಂದು ಸಂಚಿಕೆಯಲ್ಲಿ ಹೇಳಿದ್ದೇನೆ, ಮುಂದೆಯೂ ಹೇಳಬೇಕೆಂದಿದ್ದೇನೆ. ಈ ಫ್ರೆಂಚ್‌ ಕೀಟವಿಜ್ಞಾನಿ, ಪ್ರಕೃತಿವಿಜ್ಞಾನಿ, ಲೇಖಕನನ್ನು ಅದ್ಭುತ ಬೆಲೆಟ್ರಿಸ್ಟ್‌ ಎಂದು ಪರಿಗಣಿಸಲಾಗಿದೆ. ಬೆಲೆಟ್ರಿಸ್ಟ್‌ ಎಂದರೆ ಸುಂದರವಾಗಿ ಓದಿಸಿಕೊಳ್ಳುವ ಸಾಹಿತ್ಯ ಹಾಗೂ ಕಲಾವಿಮರ್ಶೆಯ ಕುರಿತ ಪ್ರಬಂಧಗಳನ್ನು ಬರೆಯುವವ ಎಂದರ್ಥ. ಕೀಟವಿಜ್ಞಾನದ ಕಥೆಗಾರ ಫೇಬರನನ್ನು ಗ್ರೀಕ್ ಪುರಾಣದ ಶ್ರೇಷ್ಠ ಕವಿ ಹೋಮರ್ ಗೆ ಹೋಲಿಸಲಾಗಿದೆ ಫೇಬರ್‌ನ, “ಬುಕ್‌ ಆಫ್‌ ಇನ್ಸೆಕ್ಟ್ಸ್” ಓದುವಾಗ ಪಿಂಕರ್‌ ಹೇಳುವ “ಚುಟುಕಾದ ವಾಕ್ಯ, ಮನಸೆಳೆಯುವ ರೂಪಕ, ಚುರುಕಾದೊಂದು ಮಾತು, ನುಡಿಗಟ್ಟಿನಲ್ಲೊಂದು ರೋಚಕ ಬದಲಾವಣೆಗಳು ಬದುಕಿನ ಅತ್ಯುತ್ತಮ ಖುಷಿಯನು ನೀಡುವ ಸಂಗತಿಗಳು” ಎನ್ನುವ ಮಾತುಗಳು ಕಿವಿಯಲ್ಲಿ ರಿಂಗಣಿಸುತ್ತವೆ. ಇನ್ನಷ್ಟು ಬರೆಯಲು ಪ್ರೇರೇಪಿಸುತ್ತವೆ.

ಆದರ್ಶ ಪ್ರಪಂಚ

ಕೆಲವು ವರ್ಷಗಳ ಹಿಂದೆ ಹೀಗೊಂದು ಆದರ್ಶ ಜಗತ್ತಿನ ಕನಸು ಕಂಡಿದ್ದೆ. ಖಾಸಗಿಯಾಗಿ ಆಗಾಗ್ಗೆ ಇದನ್ನು ಇನ್ನೂ ಕಾಣುತ್ತೇನಾದರೂ, ಇದೇ ಮೊದಲ ಬಾರಿಗೆ ಮುಕ್ತವಾಗಿ ಹಂಚಿಕೊಂಡಿದ್ದೇನೆ. ಇನ್ನು ಈ ಆದರ್ಶ ಜಗತ್ತಿನಲ್ಲಿ, ವಿಜ್ಞಾನಿಗಳಿಗಿಂತ ಭಿನ್ನರಾದ ವಿಜ್ಞಾನ ಸಂವಹನಕಾರರ ಅವಶ್ಯಕತೆಯೇ ಇಲ್ಲ. ಅರಿವನ್ನು ಹುಟ್ಟಿಸುವವರೇ ತಮ್ಮ ಶೋಧಗಳನ್ನು ಪ್ರಪಂಚದ ಉಳಿದೆಲ್ಲರಿಗೂ ಸಮರ್ಪಕವಾಗಿ ತಿಳಿಸಿ ಹೇಳಬಲ್ಲರು. ಉಳಿದವರಿಗಿಂತಲೂ ಚೆನ್ನಾಗಿಯೇ ಬರೆಯಬಲ್ಲರು. ಅಲ್ಲದೆ, ಸಹಯೋಗಿಗಳು ಪರಾಮರ್ಶಿಸಿದ ತಾಂತ್ರಿಕ ಪತ್ರಿಕೆಗಳಲ್ಲಿ ಪ್ರಕಟವಾಗುವ ಪ್ರಬಂಧಗಳು ಹಾಗೂ ಇನ್ನೊಂದೆಡೆ ದಿನಪತ್ರಿಕೆಗಳಲ್ಲಿ ಪ್ರಕಟಿಸುವ ಲೇಖನಗಳಿಗೂ ವ್ಯತ್ಯಾಸವೇ ಇರುವುದಿಲ್ಲ.

ಇಂತಹುದೊಂದು ಆದರ್ಶ ಜಗತ್ತನ್ನು ನಾವು ಸೃಷ್ಟಿಸಬೇಕಾಗಿದೆ. ಅಷ್ಟರವರೆಗೂ ವಿಜ್ಞಾನಿಗಳು ತಮ್ಮ ಶೋಧದ ಬಗ್ಗೆ ಮೂರು ಬಾರಿ ಪ್ರಕಟಿಸುತ್ತಿರಲಿ, ಮೊದಲು ತಾಂತ್ರಿಕ ಪತ್ರಿಕೆಗಳಲ್ಲಿ, ತಾಂತ್ರಿಕ ಓದುಗರಿಗೆ, ಅನಂತರ ಆ ಬಗೆಯ ತಾಂತ್ರಿಕ ಜ್ಞಾನ ಇಲ್ಲದ ವಿಜ್ಞಾನಿಗಳಿಗಾಗಿ ಮತ್ತೊಂದು, ಹಾಗೂ ಕೊನೆಯದಾಗಿ ವಿಜ್ಞಾನದ ಅರಿವೇ ಇಲ್ಲದವರಿಗಾಗಿ ಇನ್ನೊಂದು. “ಅಷ್ಟಕ್ಕೆಲ್ಲ ಸಮಯ ಎಲ್ಲಿದೆ? ಜನಸಾಮಾನ್ಯರಿಗಾಗಿ ಬರೆದರೆ ಗಮನಿಸುವವರು ಯಾರು?” ಎನ್ನುವ ಮಾತುಗಳು ಕೇಳಿಸುತ್ತಿವೆ.

ನಿಜ. ಆದರೆ, ವಿಜ್ಞಾನಿಗಳ ಸಂಸ್ಕೃತಿ ಬದಲಾಗಬೇಕು. ಉನ್ನತ ಮಟ್ಟದ ಸಂಶೋಧನೆಯನ್ನು ಸ್ವಲ್ಪ ಮಾಡಿ, ಒಳ್ಳೆಯ ಸಂವಹನದಿಂದ ದೊರೆಯುವ ಖುಷಿಯನ್ನು ಪಡೆಯಲು ಅವಕಾಶ ಮಾಡಿಕೊಡಬೇಕು. ವಿಜ್ಞಾನಿಗಳು ತಾಂತ್ರಿಕ ಪ್ರಬಂಧಗಳನ್ನು ಬರೆಯುವ ಮುನ್ನವೇ ತಾಂತ್ರಿಕ ಜ್ಞಾನವಿಲ್ಲದ ಜನರಿಗಾಗಿ ಬರೆಯುವುದು ಆರಂಭ ಮಾಡಿ, ತಾಂತ್ರಿಕ ಪ್ರಬಂಧಗಳನ್ನು ಬರೆಯುವ ಸಮಯದಲ್ಲಿ ಮುಂದುವರಿಸಿ, ತಾಂತ್ರಿಕ ಪ್ರಬಂಧಗಳನ್ನು ಬರೆಯುವುದನ್ನು ನಿಲ್ಲಿಸಿದ ಮೇಲೂ ಬರೆಯುತ್ತಿರಬೇಕು. ನಿಸರ್ಗ ವಿಜ್ಞಾನದ್ಲಲಿಯೂ ಕೂಡ “ಬರವಣಿಗೆಯ ಮೂಲಕ ಬಲು ಸೃಜನಾತ್ಮಕ ಚಿಂತನೆಗಳನ್ನು ಕೈಗೊಳ್ಳುವುದು” ಸಾಧ್ಯ. ಇದು ನನ್ನ ಅನುಭವ ಕೂಡ.

ವಿಜ್ಞಾನ ಲೇಖಕರ ಪಾತ್ರ

ಹಾಗಿದ್ದರೆ ಪರಿಣತ ವಿಜ್ಞಾನ ಲೇಖಕರಿಗೇನು ಕೆಲಸ? ವಿಜ್ಞಾನಿಗಳೇ ಚೆನ್ನಾಗಿ ಬರೆಯಲು ಆರಂಭಿಸಿದರೆ, ಅದರಲ್ಲೂ ಜನಸಾಮಾನ್ಯರಿಗಾಗಿ ಬರೆಯಲು ತೊಡಗಿದಾಗ, ವಿಜ್ಞಾನ ಲೇಖಕರನ್ನು ಮೂಲೆಗುಂಪು ಮಾಡಿಬಿಟ್ಟರೆ ಎನ್ನುವ ಭಯ ಬೇಕಿಲ್ಲ. ವಿಜ್ಞಾನ ಲೇಖಕರ ಪಾತ್ರವೂ ಬಹಳ ಮುಖ್ಯವೇ. ಆದರೆ ಅವರೂ ಕೂಡ ವಿಜ್ಞಾನಿಗಳಂತೆಯೇ ಅರಿವನ್ನು ಸೃಷ್ಟಿಸುವುದನ್ನು ನಾನು ಕಾಣಬಯಸುತ್ತೇನೆ. ವಿಜ್ಞಾನ ಲೇಖಕರು ಕೇವಲ ವರದಿಗಾರರಾಗಿ, ವಿಜ್ಞಾನಿಗಳು ಬರೆಯುವ ಅರ್ಥವಾಗದ ಲೇಖನಗಳನ್ನು ಇಂಗ್ಲೀಷಿಗೋ, ಇನ್ನೊಂದು ಭಾಷೆಗೋ ಅರ್ಥವಾಗುವಂತೆ ತರ್ಜುಮೆ ಮಾಡಿದರೆ ಸಾಲದು. ಅದಕ್ಕಿಂತಲೂ ಅವರು ಹೆಚ್ಚು ಮಾಡಬೇಕು.

ತಮ್ಮ ಶೋಧಗಳನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವ ಕೆಲಸವನ್ನು ವಿಜ್ಞಾನಿಗಳು ಚೆನ್ನಾಗಿಯೇ ಮಾಡಬಲ್ಲರಾದರೆ, ವಿಜ್ಞಾನ ಲೇಖಕರೂ ತಾವೂ ಹೊಸ ಜ್ಞಾನವನ್ನು ಸೃಷ್ಟಿಸುವುದರತ್ತ ಗಮನ ಹರಿಸಬಹುದು. ವೈಜ್ಞಾನಿಕ ಶೋಧಗಳನ್ನು ಒಂದರೊಡನಿನ್ನೊಂದನ್ನು ಹೋಲಿಸಿ ನೋಡುವ ಅವಕಾಶ ವಿಜ್ಞಾನ ಲೇಖಕರಿಗೆ ಇದೆ. ವಿಜ್ಞಾನದ ಕ್ರಮಗಳನ್ನು ಅವರು ಅರ್ಥ ಮಾಡಿಕೊಳ್ಳಬಲ್ಲರು. ಹಾಗೆಯೇ ಅಲ್ಲಿರಬಹುದಾದ ಪೂರ್ವಾಗ್ರಹಗಳನ್ನೂ, ಸ್ವಾರ್ಥಪರತೆಯನ್ನೂ ಗುರುತಿಸಬಲ್ಲರು. ವಿಜ್ಞಾನ ಲೋಕದಲ್ಲಿಯೇ ಮುಳುಗಿರುವ ವಿಜ್ಞಾನಿಗಳಿಗೆ ಇದು ಅಷ್ಟು ಸಾಧ್ಯವಿಲ್ಲ. ಅಂದರೆ ಅವರು ಕೇವಲ ವಿಜ್ಞಾನಿಗಳ  ಗದ್ಯವನ್ನು ಸುಧಾರಿಸುವ ಬದಲು, ವಿಜ್ಞಾನ ಲೇಖಕರನ್ನೇ ಅರಿವಿನ ಸೃಷ್ಟಿಕರ್ತರನ್ನಾಗಿ ಬೆಳೆಸಬೇಕು.

ವಿಜ್ಞಾನ ಲೇಖಕರೂ ತಮ್ಮ ಬರಹಗಳಲ್ಲಿ ತುಸು ಚರಿತ್ರೆ, ತತ್ವವಿಜ್ಞಾನ, ಸಮಾಜಶಾಸ್ತ್ರ ಹಾಗೂ ರಾಜಕೀಯಗಳ ಪರಿಮಳವನ್ನೊಳಗೊಂಡಂತೆ ಬರೆಯಬೇಕು. ಅಷ್ಟೇ ಅಲ್ಲ. ವಿಜ್ಞಾನಿಗಳು ವಿಜ್ಞಾನ ಲೇಖಕರನ್ನೂ ಅರಿವಿನ ಸೃಷ್ಟಿಕರ್ತರೆಂದು ಗೌರವಿಸಬೇಕು. ತಮಗಿಂತಲೂ ಅವರು ಮುಖ್ಯರೆಂದು ಪರಿಗಣಿಸಿದರೂ ಸರಿಯೇ. ವಿಜ್ಞಾನಿಗಳೂ, ವಿಜ್ಞಾನ ಲೇಖಕರೂ ಜ್ಞಾನವನ್ನು ಸೃಷ್ಟಿಸಬೇಕು. ವಿಭಿನ್ನವಾದ ಜ್ಞಾನವನ್ನು ಸೃಷ್ಟಿಸಬೇಕು. ಇಂತಹ ಬದಲಾವಣೆಗಳು ವಿಜ್ಞಾನ ಎನ್ನುವ ಕಾಯಕವನ್ನು ಇನ್ನಷ್ಟು ಸಾರ್ವಜನಿಕವಾಗಿಯೂ, ಪ್ರಜಾಸತ್ತಾತ್ಮಕವಾಗಿಯೂ ಮಾಡುವುದಲ್ಲದೆ, ವಿಜ್ಞಾನ ಎನ್ನುವ ವಿಷಯದ ಸೀಮೆಯನ್ನೂ ವಿಸ್ತರಿಸಬಲ್ಲುದು.

ಹೀಗೆ ಆಗಬೇಕಾದ ಬದಲಾವಣೆಗಳಲ್ಲಿ ಒಂದು ವಿಜ್ಞಾನ ಅಥವಾ ಸಂಶೋಧನೆ ಎನ್ನುವುದು ಕೆಲವೇ ಕೆಲವರು ಸುಸಜ್ಜಿತ ಹಾಗೂ ದುಬಾರಿ ಸಾಧನಗಳ ಜೊತೆಗೆ ಮಾಡುವ ಶೋಧವೆನ್ನುವುದು ಬದಲಾಗಬೇಕು. ವಿಜ್ಞಾನಿಯೇ, ವಿಜ್ಞಾನ ಲೇಖಖನೂ ಆಗಬೇಕು. ಒಮ್ಮೆ ತನಗಾಗಿ ಇದನ್ನು ಮಾಡುತ್ತಾ, ಇನ್ನೊಮ್ಮೆ ಪರರಿಗಾಗಿ ಅದನ್ನು ಮಾಡುವವರಾಗಬೇಕು.

ಬದಲಾವಣೆಗೆ ಅವಕಾಶಗಳಿವೆ. 

ಇಂತಹ ಸಾಂಸ್ಕೃತಿಕ ಬದಲಾವಣೆಗಳು ಆಗುವ ಸಾಧ್ಯತೆಗಳೆಷ್ಟು? ಇಂದು ಇರುವ ವೈಜ್ಞಾನಿಕ ವ್ಯವಸ್ಥೆಯೇ ಈ ಬದಲಾವಣೆಗೆ ದೊಡ್ಡ ಅಡ್ಡಿ ಎಂಬುದನ್ನು ನಾನೂ ಒಪ್ಪುತ್ತೇನೆ. ಆದರೆ ಇಂದಿನ ಯುವ ವಿಜ್ಞಾನಿಗಳು ನನ್ನ ಪೀಳಿಗೆಯವರಿಗಿಂತಲೂ ಧೃಢಮನಸ್ಕರೂ ದಂಗೆಯೇಳುವ ಮನಸ್ಸಿನವರೂ ಆಗಿದ್ದಾರೆನ್ನುವುದನ್ನು ಕಂಡು ಖುಷಿಯಾಗುತ್ತದೆ. ಇಂದಿನ ಸುಧಾರಣೆಗೆ ಮನಸ್ಸಿಲ್ಲದ ವ್ಯವಸ್ಥೆಯ ಜೊತೆಗೆ ಹೊಂದಾಣಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳಲು ಬಯಸದ ಹಲವು ಯುವವಿಜ್ಞಾನಿಗಳನ್ನು ಕಂಡಿದ್ದೇನೆ. ಅವರೋ ತಾವು ಹೊಂದಿಕೊಳ್ಳುವ ಬದಲಿಗೆ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಬೇಕಾಗುವಂತೆ ಪ್ರಪಂಚವನ್ನೇ ಬದಲಿಸಲೂ ಸಿದ್ಧ.  ಎಂಥಹುದೇ ಸವಾಲುಗಳನ್ನು ಎದುರಿಸಲು ಸಿದ್ಧರಾದ ಸಾಕಷ್ಟು ಬದ್ಧತೆಯುಳ್ಳ, ಪ್ರತಿಭಾವಂತ  ವಿಜ್ಞಾನ ಲೇಖಕರನ್ನೂ ಗುರುತಿಸಿದ್ದೇನೆ. ಆಶಾದೀಪ ಸಾಕಷ್ಟು ಪ್ರಕಾಶಮಾನವಾಗಿಯೇ ಇದೆ.

ಇದು ನಿಮಗೆ ಒಂದು ಘೋಷಣಾ ಪತ್ರವೆಂದೆನಿಸಿದರೆ ಪರವಾಗಿಲ್ಲ, ಹಾಗೆಯೇ ಅಂದುಕೊಳ್ಳಿ!

ಇದು ಇಂದಿನ ಜಾಣ ಅರಿಮೆ. ಮೂಲ: ಪ್ರೊಫೆಸರ್‌ ರಾಘವೇಂದ್ರ ಗದಗ್‌ಕರ್;‌ ಕನ್ನಡಾನುವಾದ: ಕೊಳ್ಳೇಗಾಲ ಶರ್ಮ; ಜಾಣಧ್ವನಿ: ಡಾ. ಜೆ. ಆರ್.‌ ಮಂಜುನಾಥ. ಇದರ ಮೂಲ ಆಂಗ್ಲ ಲೇಖನ ದಿ ವೈರ್‌ ಸೈನ್ಸ್‌ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

Scroll To Top